‘ದೇವರೇ! ಮನುಷ್ಯನನ್ನು ಏಕಿಷ್ಟು ಕ್ಲಿಷ್ಟ ವಸ್ತುವನ್ನಾಗಿ ಸೃಷ್ಟಿಸಿದೆ? ಅವನ ಸೆರೆಮನೆಗಳೇ ಅವನಿಗೆ ಗೊತ್ತಿಲ್ಲ’. ಇದು, ಪಿ.ಲಂಕೇಶ್ ಅವರು ಬರೆದ ‘ಗುಣಮುಖ’ ನಾಟಕದಲ್ಲಿ ಬರುವ ಒಂದು ಸಾಲು. ಮುನ್ನೂರು ವರ್ಷಗಳ ಹಿಂದಿನ ಕತೆಯನ್ನು ಮರುರೂಪಿಸುವಾಗ ಹೇಳುವ ಈ ಮಾತುಗಳು ವರ್ತಮಾನದಲ್ಲೂ ಪುನರಾವರ್ತನೆಯಾಗುತ್ತವೆಂದು ಕಾಣುತ್ತದೆ.
ಮನುಷ್ಯನು ಬಂದಿಯಾಗಿರುವ ಅಹಂಕಾರದ ಕಾರಾಗೃಹದ ಬಗೆಗೆ ಈ ನಾಟಕದ ಅಲಾವಿಖಾನ್ ಹೇಳುತ್ತಾನೆ. ಇಂದು, ಪ್ರಪಂಚವನ್ನೇ ಗೆಲ್ಲುವ, ಕಟ್ಟುವ, ಪ್ರಜೆಗಳಿಗೆಲ್ಲಾ ಮಹಾನ್ ಭವಿಷ್ಯವನ್ನು ರೂಪಿಸುತ್ತಿದ್ದೇವೆ ಎಂದು ಜಂಬ ಕೊಚ್ಚಿಕೊಳ್ಳುವ ಈ ವ್ಯವಸ್ಥೆಯಲ್ಲಿ ಹಸಿದ ಮಕ್ಕಳ ಅಹವಾಲು ಕೇಳುವುದಕ್ಕೂ ವ್ಯವಧಾನವಿಲ್ಲದೆ, ಪೊಲೀಸರನ್ನು ಕರೆಸಿ ಪುಟ್ಟ ಮಕ್ಕಳನ್ನು ಕಂಗಾಲಾಗಿಸಿ, ಅಲ್ಲಿಂದ ಅವರನ್ನು ತೆರವುಗೊಳಿಸುವ ಅಸಂಗತಗಳೂ ನಡೆದುಬಿಡುತ್ತವೆ!
ಇಷ್ಟಾಗಿ ಈಗ ನಾವಿರುವುದು ಆಗಿನ ನಿರಂಕುಶ ಚಕ್ರವರ್ತಿಗಳ ಸಾಮ್ರಾಜ್ಯದಲ್ಲಲ್ಲ, ಪ್ರಜಾಪ್ರಭುತ್ವದಲ್ಲಿ. ಇಲ್ಲಿ ಶಾಂತ ರೀತಿಯಲ್ಲಿ ಪ್ರಜೆಗಳು ತಮ್ಮ ಬೇಡಿಕೆಗಳನ್ನು ಮಂಡಿಸುವುದು, ಪ್ರತಿಭಟಿಸುವುದು, ತಮ್ಮ ಸಮಸ್ಯೆಗಳನ್ನು ಆಳುವವರ ಗಮನಕ್ಕೆ ತರುವುದು ಸಂವಿಧಾನ ದತ್ತವಾದ ಸಹಜ ಕ್ರಿಯೆ. ವ್ಯವಸ್ಥೆಯು ಸುಗಮವಾಗಿ ನಡೆಯುವುದನ್ನು ಗಮನಿಸುತ್ತಾ, ದೋಷ, ದಮನಗಳಾದಾಗ ಅವನ್ನು ಬೆಳಕಿಗೆ ತರುವುದು, ಸರಿಪಡಿಸುವುದು ಸಾರ್ವಜನಿಕ ಸಂಸ್ಥೆಗಳ ಜವಾಬ್ದಾರಿ. ಇದನ್ನೇ ನಾವು ನಮ್ಮ ಪಠ್ಯಗಳಿಂದ ಹಿಡಿದು ನಮ್ಮ ಹಲವು ಅಭಿವ್ಯಕ್ತಿ ಮಾಧ್ಯಮಗಳಲ್ಲಿ ಹೇಳುತ್ತಲೇ ಇರುತ್ತೇವೆ. ನಮ್ಮ ಮಕ್ಕಳಲ್ಲಿ ಈ ಆದರ್ಶಗಳನ್ನು ಕಲಿಸುತ್ತೇವೆ (ತಮಾಷೆಯೆಂದರೆ, ವರ್ಷಕ್ಕೊಮ್ಮೆ ಶಿಕ್ಷಣ ಸಂಸ್ಥೆಗಳಲ್ಲಿ ‘ನಾನು ಲಂಚ ಕೊಡುವುದಿಲ್ಲ, ಸ್ವೀಕರಿಸುವು ದಿಲ್ಲ’ ಎಂಬ ಪ್ರತಿಜ್ಞಾವಿಧಿ ನಡೆಯುತ್ತದೆ!). ಆ ಮುಗ್ಧ ಮನಸ್ಸುಗಳು ಅದನ್ನು ವಾಸ್ತವ ಎಂದೇ ಭಾವಿಸುತ್ತವೆ.
ನಮ್ಮ ಆಡಳಿತದ ಅನುಕೂಲಕ್ಕೆಂದು ಮಾಡಿ ಕೊಂಡಿರುವ ಜಿಲ್ಲೆಯ ಅಧಿಕಾರಿಯು ನಮಗೆ ಮೊದಲು ಲಭ್ಯವಿರಬೇಕಾದ ಸರ್ಕಾರದ ಪ್ರತಿನಿಧಿ. ನಮ್ಮ ಕೊಂಡಿ ಯಾಗಿ ಸರ್ಕಾರದ ಜೊತೆಗೆ ಈ ಅಧಿಕಾರಿ ಇರುವುದೇ ವಿನಾ ಸರ್ಕಾರದ ಹೇರಿಕೆಯಾಗಿ ಅಲ್ಲ. ಆದರೆ ಜನರ ಅನುಭವದಲ್ಲಿ ಇವರು ದೂರದ ಬೆಟ್ಟಗಳು. ಎಲ್ಲೋ ಅಪರೂಪಕ್ಕೆ ಕೆಲವು ಅಧಿಕಾರಿಗಳ ವ್ಯಕ್ತಿಗತ ನಡೆಯಿಂದ ಜನರ ಮುಖವಾಗಿ ಕಾಣಿಸಿಕೊಳ್ಳುವುದಿದೆ. ನಮ್ಮ ಹಲವು ಸಿನಿಮಾಗಳಲ್ಲಿ ಇಂತಹ ಅಧಿಕಾರಿಗಳನ್ನು ವೈಭವೀಕೃತ ನೆಲೆಯಲ್ಲಿ ಕಾಣಿಸಲಾಗಿದೆ. ನಮ್ಮ ಮಕ್ಕಳಿಗೆ ದೊರಕುವುದು ಇಂತಹ ಕೆಲವು ಮಾದರಿಗಳು. ಜೊತೆಗೆ ಈಚೆಗೆ ಮಾತೆತ್ತಿದರೆ ಐಎಎಸ್ ಮಾಡು ಎಂಬ ಪ್ರವಚನವೂ ನಮ್ಮ ಮಕ್ಕಳ ಕಿವಿಯ ಮೇಲೆ ಅಪ್ಪಳಿಸುತ್ತಲೇ ಇರುತ್ತದೆ. ಇವೆಲ್ಲದರ ಪ್ರಭಾವವೂ ಇರಬಹುದು. ಈಚೆಗೆ ಚಿಕ್ಕ ಮಕ್ಕಳೂ ತಮ್ಮ ಕಷ್ಟವನ್ನು ಜಿಲ್ಲಾಧಿಕಾರಿಗೆ ತಿಳಿಸಿದಲ್ಲಿ ಅದು ಪರಿಹಾರ ಆಗಬಹುದು ಎಂದು ಭಾವಿಸಿದಂತಿದೆ.
ಕೆಲವು ದಿನಗಳ ಹಿಂದೆ, ತಮ್ಮ ಹಾಸ್ಟೆಲ್‍ನಲ್ಲಿ ಆಗುತ್ತಿರುವ ಜಾತಿ ಆಧಾರಿತ ಹಿಂಸೆಯನ್ನು ಅರುಹಲು ಜಾರ್ಖಂಡ್‍ನ ಹೆಣ್ಣುಮಕ್ಕಳು ರಾತ್ರಿಯಿಡೀ ನಿರ್ಮಾನುಷ ದಾರಿಯಲ್ಲಿ ನಡೆದುಕೊಂಡು ಹೋಗಿ ಜಿಲ್ಲಾಧಿಕಾರಿಯನ್ನು ಭೇಟಿಯಾದ ಸುದ್ದಿ ಬಂದಿತ್ತು. ಆ ಮಕ್ಕಳ ಮನವಿಯನ್ನು ಸ್ವೀಕರಿಸಿದ್ದೂ ತಿಳಿಯಿತು. ಮುಂದೇನಾಯಿತೋ ಗೊತ್ತಿಲ್ಲ. ಆದರೆ ನಮ್ಮ ಕರ್ನಾಟಕ ದಲ್ಲಿ ಮಕ್ಕಳನ್ನೇ ಅಪರಾಧಿಗಳನ್ನಾಗಿಸಲಾಯಿತು. ನಾವು ಹೀಗೆ ವರ್ತಿಸಬಹುದೇ? ಮಕ್ಕಳ ಬಗೆಗೆ ನಮಗಿರುವ ಕಾಳಜಿಗಳೇನು? ಮಕ್ಕಳ ಪ್ರಶ್ನೆಗಳನ್ನು ಮಕ್ಕಳೇ ಕೇಳುವುದರ ಕುರಿತು ನಮಗೆ ಸಹನೆ ಇದೆಯೇ?
ನಾವು ಮಾತೆತ್ತಿದರೆ ಮಕ್ಕಳ ಭವಿಷ್ಯದ ಬಗೆಗೆ ಮಾತಾಡುತ್ತಿರುತ್ತೇವೆ. ಆದರೆ ಆ ಮಾತುಗಳೆಲ್ಲವನ್ನೂ ನಾವೇ, ಅಂದರೆ ದೊಡ್ಡವರೇ ಮಾತಾಡುತ್ತಿರುತ್ತೇವೆ. ವಿಧೇಯತೆಯ ಹೆಸರಿನಲ್ಲಿ ಸದಾ ಮಕ್ಕಳ ಬಾಯಿ ಮುಚ್ಚಿಸುವುದು ಅಭ್ಯಾಸವಾಗಿರುವ ನಮಗೆ ಅವರು ಎತ್ತುವ ನ್ಯಾಯವಾದ ಪ್ರಶ್ನೆಯಲ್ಲಿಯೂ ಆಸಕ್ತಿಯಾಗಲಿ, ನಂಬಿಕೆಯಾಗಲಿ ಇಲ್ಲ. ಮೇಲಿನ ಸಂಗತಿಗಳು ನಮ್ಮನ್ನು ಎಚ್ಚರಿಸುವ ನಡೆಯಾಗಬೇಕಾಗಿದೆ. ಆದರೆ ಎಂದಿನಂತೆ ಇವುಗಳು ಅತ್ಯಂತ ನಿರ್ಲಕ್ಷಿತ ವಿಷಯಗಳಾಗುವ ಎಲ್ಲ ಲಕ್ಷಣಗಳೂ ಇವೆ. ಪ್ರತಿಯೊಂದರಲ್ಲೂ ರಾಜಕಾರಣ ಬೆರೆಸುವುದು ನಮ್ಮ ಆದ್ಯತೆಯಾಗಿರುವಾಗ ಈ ಬೇರು ಮಟ್ಟದ ವಿಚಾರಗಳು ಅಧಿಕಪ್ರಸಂಗಗಳಂತೆ ಕಾಣುತ್ತವೆ.
ಮೇಲಿನ ಪ್ರಸಂಗಗಳು ಭ್ರಷ್ಟಾಚಾರದ ರಾಕ್ಷಸೀ ಬಾಹುಗಳ ಆಕ್ರಮಣದ ನೇರ ನಿದರ್ಶನಗಳಾಗಿವೆ. ಭ್ರಷ್ಟಾಚಾರವನ್ನೇ ಹಾಸುಂಡು ಮಲಗುವವರ ಪಡೆಯು ಬಲ ಪಡೆದುಕೊಳ್ಳುತ್ತಿದೆ. ಈ ಸ್ಥಿತಿಯಲ್ಲಿ ಮಕ್ಕಳೇ ಪ್ರತಿಭಟನೆಗೆ ತೊಡಗುವುದನ್ನು ಸಹಿಸಲಾಗಿಲ್ಲ. ಮಕ್ಕಳ ಬಾಯಿ ಮುಚ್ಚಿಸುವ ಕೆಲಸ ಮಾಡುವುದೆಂದರೆ, ಮುಂದೆಂದೂ ಯಾರೂ ಸೊಲ್ಲೆತ್ತದಂತೆ ಮಾಡುವುದರ ಸೂಚನೆಯೂ ಹೌದು. ಇದು ಬರೀ ಹಣದ ಭ್ರಷ್ಟತೆಯಷ್ಟೇ ಅಲ್ಲ, ಚಿಂತನೆಯ ಭ್ರಷ್ಟತೆಯೂ ಆಗಿದೆ. ಪರಿಶಿಷ್ಟ ಪಂಗಡಗಳ ಮಕ್ಕಳ ಹಾಸ್ಟೆಲ್ ಎಂಬುದೂ ಸಾಮಾಜಿಕ ನಿರ್ಲಕ್ಷ್ಯಕ್ಕೆ ಒಂದು ಕಾರಣವಾಗಿರುತ್ತದೆ. ಹಾಗೆಯೇ ಮುರುಘಾಮಠದ ಹೆಣ್ಣುಮಕ್ಕಳು ಬಡವರಾಗಿ ರುವುದೂ ಆ ಗಹನ ವಿಷಯ ಮರೆಗೆ ಸರಿಯಲು ಕಾರಣವಾಗಿರುತ್ತದೆ.
ಬಡವರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಉಚಿತವಾಗಿ ನೀಡುವ ಅಕ್ಕಿ ಎಂಬುದು ಮಧ್ಯಮ ವರ್ಗದವರಿಗೆ ಇಂದಿಗೂ ಅಸಹನೆಯ ವಿಷಯವಾಗಿದೆ. ಅದೇ ಲಕ್ಷ ಕೋಟಿ ಸಂಪತ್ತಿರುವ ಕಾರ್ಪೊರೇಟ್ ಕಂಪನಿ ಗಳಿಗೆ ನೀಡುವ ತೆರಿಗೆ ರಿಯಾಯಿತಿಯ ಹಿಂದು ಮುಂದು ಅರಿಯುವ ವಿವೇಚನೆಯೂ ಕಾಣುವುದಿಲ್ಲ. ರೈತರ ಹತ್ತಾರು ಕೋಟಿ ‘ಸಾಲಮನ್ನಾ’ ಬಗೆಗೆ ಉರಿದು ಬೀಳುವ ಕೆಲವು ಶ್ರೀಮಂತ ಸಲಹೆಗಾರರು, ಬ್ಯಾಂಕ್‍ನಿಂದ ಮರಳಿ ಬಾರದ ಅತಿ ಶ್ರೀಮಂತರ ಲಕ್ಷಾಂತರ ಕೋಟಿ ರೂಪಾಯಿಯ ಸಾಲಗಳನ್ನು ‘ರೈಟ್ ಆಫ್’
ಮಾಡುವುದರ ಬಗೆಗೆ ಚಕಾರ ಎತ್ತುವುದಿಲ್ಲ.
ನೌಕರರ ಸಂಬಳ, ಪಿಂಚಣಿಗಳೂ ಹೊರಲಾರದ ಹೊರೆ ಎಂಬಂತೆ ಬಿಂಬಿಸುವುದನ್ನು ನಂಬಿರುವ ಜನತೆಗೆ ಎಲೆಕ್ಷನ್‍ಗೆ ನಿಲ್ಲುವಾಗಲೇ ತಮ್ಮ ಕೋಟಿ ಮೀರಿದ ಆಸ್ತಿ ಯನ್ನು ಘೋಷಿಸಿಕೊಂಡಿರುವವರು, ಒಮ್ಮೆ ಗೆದ್ದರೆ ಜೀವನವಿಡೀ ಹಳೆಯ ಮಾದರಿಯ ಪಿಂಚಣಿಯನ್ನು ಪಡೆಯುವುದರ ಬಗೆಗೆ ಕನಿಷ್ಠ ಮಾಹಿತಿಯೂ ಇರುವುದಿಲ್ಲ. ಬರೇ ಧರಿಸುವ ಬಟ್ಟೆಯಿಂದಲೇ ಮರುಳು ಮಾಡಿ ‘ಧಾರ್ಮಿಕತೆ’ಯ ಸೋಗು ಹಾಕುವವರು ಸರ್ಕಾರದಿಂದಲೂ ಜನರಿಂದಲೂ ದೋಚುವ ಹಣದ ಬಗೆಗೆ ಅಸಹನೆ ಕಾಣುವುದೇ ಇಲ್ಲ. ಹೀಗೆ ವಯಸ್ಕರನ್ನೆಲ್ಲಾ ಮೂರ್ಖರನ್ನಾಗಿಸುವುದು ಸುಲಭವಾಗಿರುವ ಈ ಹೊತ್ತಿನಲ್ಲಿ, ಮಕ್ಕಳು ಅನ್ಯಾಯದ ವಿರುದ್ಧ ಎದ್ದು ನಿಲ್ಲು ವುದು ನಿದ್ದೆಗೆಡಿಸುವ ಸಂಗತಿಯಾಗದೇ ಇರುತ್ತದೆಯೇ?
ಬಳ್ಳಾರಿಯ ಸಮಸ್ತ ಆಡಳಿತವು, ಪ್ರತಿಭಟಿಸಿದ ಮಕ್ಕಳ ಬಗೆಗೆ ತಳೆದ ನಿಲುವಿನ ಹಿಂದೆ ಈ ನಿದ್ದೆ ಗೆಡುವಿಕೆಯೇ ಎದ್ದು ಕಾಣುತ್ತಿದೆ. ಮಕ್ಕಳ ಪ್ರತಿಭಟನೆಯ ಹಿಂದೆ ಯಾರದೋ ಕೈವಾಡವಿದೆ ಎಂಬ ಶಂಕೆ ಇದ್ದರೆ ಅದರ ಬಗ್ಗೆ ಪ್ರಾಮಾಣಿಕವಾಗಿ ತನಿಖೆಯಾಗಲಿ. ಆದರೆ ಯಾವುದೇ ತನಿಖೆ ಇಲ್ಲದೆ ಮಕ್ಕಳಿಗೆ ಶಿಕ್ಷೆಯಾಗಿದ್ದು ಹೇಗೆ? ಅವರನ್ನು ಇದ್ದಕ್ಕಿದ್ದಂತೆ ಹಾಸ್ಟೆಲ್‍ನಿಂದ ತೆರವುಗೊಳಿಸಿದ್ದು ಹೇಗೆ? ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಕೊಲೆ ಮಾಡಿದವರ್‍ಯಾರೂ ಸಹಾಯ ಕೇಳಿದ್ದಲ್ಲ, ಮಕ್ಕಳನ್ನು ತೆರವುಗೊಳಿಸದಂತೆ ಸಹಾಯ ಕೇಳಿದಾಗ ಅವರ್‍ಯಾಕೆ ಅಷ್ಟು ಅಸಹಾಯಕತೆ ತೋರಿದರು? ವಿಚಿತ್ರವೆನಿಸುತ್ತದೆ.
ಇಲ್ಲಿ ಯಾರೂ ಕಾನೂನನ್ನು ಉಲ್ಲಂಘಿಸಿಲ್ಲ. ಸಾಂಬಾರಿನ ಗುಣಮಟ್ಟವನ್ನು ಖುದ್ದು ಪರಿಶೀಲಿಸಲಷ್ಟೇ ಆ ಮಕ್ಕಳು ಕೇಳಿದ್ದು. ಇದು ‘ಸೊಕ್ಕಿನ ನಡೆ’ಯಾಗಿ ಕಾಣಿಸಿದ್ದು ಯಾಕೆ? ಆ ಮಕ್ಕಳ ಬಡ ಪೋಷಕರೂ ಕೊಟ್ಟ ತೆರಿಗೆಯ ಒಂದು ಭಾಗದಿಂದಲೇ ಸಂಬಳ ಪಡೆಯು ತ್ತಿರುವ ಅಧಿಕಾರಿಗಳಿಗೆ, ಹಾಸ್ಟೆಲ್‍ನಲ್ಲಿರುವ ಮಕ್ಕಳು ಮಾತ್ರ ಬಿಟ್ಟಿ ಊಟ ತಿನ್ನುತ್ತಿದ್ದಾರೆ ಎಂಬ ಅಜ್ಞಾನವೇ? ಮಕ್ಕಳು ತಾವಾಗಿಯೇ ಪ್ರತಿಭಟಿಸಬೇಕಾದ ಸ್ಥಿತಿಗೆ ಅವರನ್ನು ತಲುಪಿಸಿರುವ ನಮ್ಮ ಬಗ್ಗೆಯೇ ನಾವೀಗ ತನಿಖೆ ಮಾಡಿಕೊಳ್ಳಬೇಕಾಗಿದೆ ಎಂಬ ಎಚ್ಚರ ಮೊದಲು ಮೂಡಬೇಕಿದೆ.
‘ಎಲ್ಲರನ್ನೂ ಆಳುವ, ಹತ್ತಿಕ್ಕುವ, ಕೊಲ್ಲುವ ಧಿಮಾಕು. ದೇವರೇ, ಮನುಷ್ಯನೆಂಬ ಈ ಅಪ್ರಾಮಾಣಿಕ, ಅಸಹಾಯಕ ಜಂತುವಿನ ಮೇಲೆ ನಿನಗೆ ಕರುಣೆಯೇ ಇಲ್ಲವೇ?’ ಎಂಬ ಅಲಾವಿಖಾನ್‍ನ ಪ್ರಶ್ನೆಯನ್ನು ಮಕ್ಕಳ ಪರವಾಗಿ ‘ದೊಡ್ಡವರು’ ಕೇಳಿಕೊಳ್ಳಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.