ಕೊರೊನಾ ಬಿಕ್ಕಟ್ಟು ದೀರ್ಘವಾಗುತ್ತಿರುವಂತೆ, ಜಗತ್ತಿನ ಬೇರೆ ಬೇರೆ ದೇಶಗಳು ಇದನ್ನು ಎದುರಿಸಲು ಕೈಗೊಂಡ ಕ್ರಮಗಳು ನಮಗೆ ಮಾಧ್ಯಮಗಳ ಮೂಲಕ ತಿಳಿಯುತ್ತಿವೆ. ಆದರೆ, ಉಳಿದ ಕ್ಷೇತ್ರಗಳಂತೆಯೇ ಹಾನಿ ಅನುಭವಿಸುತ್ತಿರುವ ಕಲೆ- ಸಾಹಿತ್ಯ- ಸಂಸ್ಕೃತಿಗಳನ್ನು ಕಾಪಾಡಿಕೊಳ್ಳಲಿಕ್ಕೆ ನಡೆಯುತ್ತಿರುವ ಕೆಲಸಗಳ ಬಗ್ಗೆ ನಮಗೆ ಮಾಹಿತಿ ಸಿಕ್ಕುತ್ತಿರುವುದುಕಡಿಮೆ. ಇಂಥ ಮಾಹಿತಿಯನ್ನು ‘ಗಾರ್ಡಿಯನ್’ ಪತ್ರಿಕೆಯು ಜೂನ್ 18ರಂದು ಪ್ರಕಟಿಸಿದ್ದು, ಅದು ನಮ್ಮ ಕಣ್ಣು ತೆರೆಸುವಂತಿದೆ.
ಕೊರೊನಾದಿಂದ ತುಂಬ ಪೆಟ್ಟು ತಿಂದಿರುವ ಇಟಲಿಯು ಮನರಂಜನಾ ವಲಯದ ರಕ್ಷಣೆ ಮತ್ತು ಪುನಃಶ್ಚೇತನಕ್ಕೆ 24.5 ಕೋಟಿ ಯೂರೊಗಳ (ಅಂದಾಜು ₹2,093 ಕೋಟಿ) ನಿಧಿಯೊಂದನ್ನು ತೆರೆದಿದೆ. ಜರ್ಮನಿಯು ತನ್ನ ರಂಗಮಂದಿರಗಳು,ಸಂಗ್ರಹಾಲಯಗಳು ಮತ್ತು ಸಂಸ್ಥೆಗಳನ್ನು ಪೋಷಿಸಲಿಕ್ಕೆ ತನ್ನ ವಾರ್ಷಿಕ ಸಂಸ್ಕೃತಿ ಬಜೆಟ್ಟಿನ ಅರ್ಧದಷ್ಟನ್ನು (100 ಕೋಟಿ ಯೂರೊ– ₹8,544 ಕೋಟಿ) ಇರಿಸಿದ್ದಾಗಿ ಘೋಷಿಸಿದೆ. ಆದರೆ, 17 ಲಕ್ಷ ಕಲಾಕರ್ಮಿಗಳಿದ್ದು ವಾರ್ಷಿಕ 17,000 ಕೋಟಿ ಯೂರೊಗಳ (₹14.52 ಲಕ್ಷ ಕೋಟಿ) ವಹಿವಾಟು ನಡೆಸುವ ಈ ವಲಯಕ್ಕೆ ಈ ಹಣ ಸಾಲದೆಂದೂ ದೇಶದ ವಿಮಾನಯಾನ ಸಂಸ್ಥೆಯಾದ ‘ಲುಫ್ತಾನ್ಸಾ’ದ ಲುಕ್ಸಾನು ಭರಿಸಲಿಕ್ಕೇ ದೇಶವು ಅದರ ಒಂಬತ್ತು ಪಟ್ಟು ಹಣವನ್ನು ವ್ಯಯಿಸುತ್ತಿದೆಯೆಂದೂಅಲ್ಲಿಯ ಕಲಾವಿದರು ತಕರಾರು ತೆಗೆದಿದ್ದಾರೆ. ಫ್ರಾನ್ಸ್‌ನಲ್ಲಿ ರದ್ದಾದ ಪ್ರದರ್ಶನಗಳಿಂದ ಉಂಟಾದ ನಷ್ಟವನ್ನು ತುಂಬಿಕೊಡಲು ಸರ್ಕಾರವು 700 ಕೋಟಿ ಯೂರೊಗಳನ್ನು (₹59,808 ಕೋಟಿ) ನಿಗದಿಗೊಳಿಸಿದ್ದು, ಈ ಕ್ಷೇತ್ರದ ಕಿರುಸಂಸ್ಥೆಗಳ ಪುನಃಶ್ಚೇತನಕ್ಕೆ 5 ಕೋಟಿ ಯೂರೊಗಳನ್ನು (₹427.2 ಕೋಟಿ) ತೆಗೆದಿರಿಸಿದೆ.
ಸ್ಪೇನ್ ತನ್ನ ದೇಶದ ಸಾಂಸ್ಕೃತಿಕ ಕ್ಷೇತ್ರವನ್ನು ರಕ್ಷಿಸಲು 6.7 ಕೋಟಿ ಯೂರೊಗಳ (₹572 ಕೋಟಿ) ನಿಧಿಯನ್ನೂ ಮತ್ತು ಕಷ್ಟಕ್ಕೆ ಸಿಲುಕಿದ ವಲಯಗಳಿಗೆ ಸಾಲದ ರೂಪವಾಗಿ ಕೊಡಲು 78 ಕೋಟಿ ಯೂರೊಗಳನ್ನೂ (₹6,664 ಕೋಟಿ) ಮೀಸಲಾಗಿಟ್ಟಿದೆ. ಕೆನಡಾದಲ್ಲಿ ಸಂಸ್ಕೃತಿ ಮತ್ತು ಕ್ರೀಡೆಗಳ ವಲಯದಲ್ಲಿ ಉಂಟಾದ ನಷ್ಟಕ್ಕೆ ಪರಿಹಾರವಾಗಿ 30 ಕೋಟಿ ಪೌಂಡ್ (₹2,824.8 ಕೋಟಿ) ಖರ್ಚು ಮಾಡುವ ನಿರ್ಧಾರ ಮಾಡಲಾಗಿದೆ. ನ್ಯೂಜಿಲೆಂಡ್‌ನಲ್ಲಿ ಈ ಕೆಲಸಕ್ಕಾಗಿ 9 ಕೋಟಿ ಪೌಂಡ್‍ಗಳ (₹847.44 ಕೋಟಿ) ಕಾರ್ಯಯೋಜನೆಯೊಂದನ್ನು ಜಾರಿಗೊಳಿಸಿದ್ದರೆ, ಐರ್ಲೆಂಡಿನಲ್ಲಿ 2 ಕೋಟಿ ಯೂರೊಗಳ (₹170.88 ಕೋಟಿ) ದೃಢೀಕರಣ ನಿಧಿಯೊಂದನ್ನು ಆ ಸರ್ಕಾರ ಪ್ರಕಟಿಸಿದ್ದು, ಅದು ತುಂಬ ಕಡಿಮೆಯೆಂದು ಅಲ್ಲಿನ ಕಲಾವಿದರು ದೂರಿದ್ದಾರೆ. ಆಫ್ರಿಕಾದ ತಕ್ಕಮಟ್ಟಿನ ಅನುಕೂಲಸ್ಥ ದೇಶವಾದ ದಕ್ಷಿಣ ಆಫ್ರಿಕಾ ಕೂಡ 70 ಲಕ್ಷ ಪೌಂಡ್ (₹65.91 ಕೋಟಿ) ವೆಚ್ಚದ ಸಂಸ್ಕೃತಿ ಪುನಃಶ್ಚೇತನ ಯೋಜನೆಯೊಂದನ್ನು ರೂಪಿಸಿಕೊಂಡಿದೆ.
ಇದರ ಜತೆಗೆ, ಆಯಾ ದೇಶಗಳ ಉದ್ಯಮಸಂಸ್ಥಾನಗಳೂ ಕಲಾಪೋಷಕ ಪ್ರತಿಷ್ಠಾನಗಳೂ ಸಾಕಷ್ಟು ಹಣವನ್ನು ಮೀಸಲಿರಿಸಿಕೊಂಡು, ಬೇರೆಬೇರೆ ಬಗೆಯ ಸಹಾಯಗಳನ್ನು ನೀಡಲಾರಂಭಿಸಿವೆ. ‘ಮ್ಯಾಕ್ಸ್ ಮುಲ್ಲರ್ ಭವನ’ದ ಬೆಂಗಳೂರು ಕಚೇರಿಯ ಈಚಿನ ಪ್ರಕಟಣೆಯೊಂದು ಭಾರತದ ಕಲಾವಿದರಿಗೂ ಸಣ್ಣ ಪ್ರಮಾಣದ ನೆರವು ನೀಡುವ ಪ್ರಸ್ತಾವಕ್ಕೆ ಅರ್ಜಿ ಆಹ್ವಾನಿಸಿದೆ. ಕಲಾವಿದ ಟಿ.ಎಂ. ಕೃಷ್ಣ ಅವರು ಬೇರೆಬೇರೆ ಸಂಸ್ಥೆಗಳ ಸಹಯೋಗದಲ್ಲಿ ಇಂಥ ಸಹಾಯಗಳನ್ನು ರೂಪಿಸುವ ಕೆಲಸದಲ್ಲಿ ತೊಡಗಿದ್ದಾರೆಂಬ ಸುದ್ದಿ ಇದೆ. ಇನ್ನೂ ಅನೇಕ ಸಣ್ಣಪುಟ್ಟ ಸಂಘಟನೆಗಳೂ ಹಣ ಅಥವಾ ಬೇರೆ ರೀತಿಯ ಸಹಾಯದ ಕಾರ್ಯಕ್ರಮಗಳನ್ನು ಹಾಕಿಕೊಂಡು ಮುನ್ನಡೆಯುತ್ತಿರುವ ಸಮಾಚಾರ ಕೂಡ ಅಷ್ಟಿಷ್ಟು ಸಿಗುತ್ತಿದೆ.
ಈ ಎಲ್ಲ ಹಿನ್ನೆಲೆಯಲ್ಲಿ, ಈ ಕ್ಷೇತ್ರಕ್ಕೆ ಸಂಬಂಧಿಸಿ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿರುವ ಕೆಲಸವು ತುಂಬ ಕಡಿಮೆಯೆಂದು ಹೇಳದೆ ವಿಧಿಯಿಲ್ಲ. ನಿಜ, ನಮ್ಮಂಥ ಜನಸಂಖ್ಯೆಯ ಮತ್ತು ವೈವಿಧ್ಯಮಯ ದೇಶಕ್ಕೆ ತನ್ನ ಸೀಮಿತ ಆಯವ್ಯಯದಲ್ಲಿ ಈ ಬಿಕ್ಕಟ್ಟಿನ ಎಲ್ಲ ಮುಖಗಳನ್ನೂ ತಕ್ಷಣಕ್ಕೆ ಎದುರಿಸುವುದು ಕಷ್ಟ. ಆದರೆ, ಕನಿಷ್ಠ ಈ ಕುರಿತ ಭವಿಷ್ಯದ ಯೋಜನೆಗಳಾದರೂ ತಕ್ಷಣ ಆರಂಭವಾಗದಿದ್ದರೆ, ಈ ವಲಯದ ಉಳಿವೇ ಅಸಾಧ್ಯವಾಗುವ ಸ್ಥಿತಿ ಬಂದೀತು. ಕೆಲವು ಸಾವಿರ ಕಲಾವಿದರಿಗೆ ₹ 2,000 ಸಹಾಯ ನೀಡುವುದು ಮತ್ತು ಅನುದಾನಿತ ಸಂಸ್ಥೆಗಳ ಒಂದು ತಿಂಗಳ ವೇತನವೆಚ್ಚವನ್ನು ಬಿಡುಗಡೆ ಮಾಡಿರುವುದು ಬಿಟ್ಟರೆ ಬೇರಾವ ಕೆಲಸವನ್ನೂ ನಮ್ಮ ಸರ್ಕಾರ ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಹತ್ತು ವರ್ಷಕ್ಕೂ ಹಿಂದೆ ‘ಇಂಡಿಯಾ ಥೇಟರ್ ಫೋರಮ್’ ಎಂಬ ಸಂಸ್ಥೆಯ ಸಹಯೋಗದಲ್ಲಿ ನಾನು ಕಲಾವಿದರಿಗೆ ಯಶಸ್ವಿನಿ ಮಾದರಿಯ ಆರೋಗ್ಯ ವಿಮೆಯ ಯೋಜನೆಯೊಂದನ್ನು ಮಾಡಬಹುದೆಂಬ ಪ್ರಸ್ತಾವವನ್ನು ವಿವರಗಳ ಸಮೇತ ತಜ್ಞರ ಸಹಾಯದಿಂದ ರೂಪಿಸಿ, ಕೇಂದ್ರ ಸರ್ಕಾರಕ್ಕೂ ಕೆಲವು ರಾಜ್ಯ ಸರ್ಕಾರಗಳಿಗೂ ಸಲ್ಲಿಸಿದ್ದೆ. ಅದಕ್ಕೆ ಒಂದು ಸಾಲಿನ ಪ್ರತಿಕ್ರಿಯೆ ಕೂಡ ಯಾರಿಂದಲೂ ಬರಲಿಲ್ಲ. ಈಗ ಬೆಂಕಿ ಬಿದ್ದರೂ ಬಾವಿ ತೋಡುವ ತಾಕತ್ತು ಇಲ್ಲವಾದಂತೆ ಕಾಣುತ್ತಿದೆ.
ಮಾತ್ರವಲ್ಲ, ಭವಿಷ್ಯಯೋಜನೆಯ ದಿಶೆಯಲ್ಲೂ ನಾವು ತುಂಬ ಹಿಂದುಳಿದಿದ್ದೇವೆ. ಕೊರೊನಾ ಬಿಕ್ಕಟ್ಟು ಸದ್ಯಕ್ಕೆ ನಿವಾರಣೆಯಾಗುವುದಿಲ್ಲ ಎಂಬುದು ಗೊತ್ತಿದ್ದರೂ ನಮ್ಮ ಕಲಾಶಾಲೆಗಳನ್ನೂ ರಂಗಮಂದಿರಗಳನ್ನೂ ಅಕಾಡೆಮಿಯೇ ಮೊದಲಾದ ಸಂಘಟನೆಗಳನ್ನೂ ಕಲಾಶಿಕ್ಷಣ ಸಂಸ್ಥೆಗಳನ್ನೂ ಮುಂದಿನ ತಿಂಗಳು- ವರ್ಷಗಳಲ್ಲಿ ಹೇಗೆ ನಡೆಸಬೇಕೆಂಬ ಕುರಿತು ಯಾವ ಜಿಜ್ಞಾಸೆಯೂ ನಡೆದಿಲ್ಲ. ಬದಲು, ‘ಅಂತರ್ಜಾಲ ಮುಖೇನ ಶಿಕ್ಷಣ’ ಎಂಬ ನಿಷ್ಪ್ರಯೋಜಕ ಪರಿಕಲ್ಪನೆ
ಯನ್ನು ಯಥೇಚ್ಛವಾಗಿ ಹರಿಬಿಡಲಾಗುತ್ತಿದೆ. ಅಂತರ್ಜಾಲವು ನಮ್ಮ ಲಭ್ಯ ಸಂಪನ್ಮೂಲಗಳಲ್ಲಿ ಒಂದು ಮಾತ್ರವೇ ಹೊರತು ಅದು ಈ ಕೊರೊನಾ ಬಿಕ್ಕಟ್ಟಿಗೆ ಯಾವ ವಿಶೇಷ ಸಹಾಯವನ್ನೂ ನೀಡಲಾರದು. ಅಷ್ಟೇ ಅಲ್ಲ, ರಂಗ ಮತ್ತು ನೃತ್ಯಶಿಕ್ಷಣದಂಥ ಪ್ರಾಯೋಗಿಕ ಕಲಿಕೆಯ ವಲಯಗಳಿಗೆ ಅದರಿಂದ ಅನುಕೂಲಕ್ಕಿಂತ ಹಾನಿಯೇ ಹೆಚ್ಚು.
ಕೆಲವು ಕಡೆಗಳಲ್ಲಾದರೂ ಈ ಕುರಿತು ಒಂದಿಷ್ಟು ಚಿಂತನೆ ನಡೆದಿದೆ. ಮಿತ್ರರೊಬ್ಬರಿಂದ ಸಿಕ್ಕ ಮಾಹಿತಿಯ ಪ್ರಕಾರ, ಅಮೆರಿಕದ ಪ್ರಸಿದ್ಧ ರಂಗಶಾಲೆ ‘ಯೇಲ್ ಡ್ರಾಮಾ ಸ್ಕೂಲ್’ ಇನ್ನು ಕೆಲವು ತಿಂಗಳುಗಳಲ್ಲಿ ಹೊಸ ತರಬೇತಿ ಆರಂಭಿಸಲು ತೀರ್ಮಾನಿಸಿದ್ದು, ರಂಗಪ್ರಯೋಗ ಮತ್ತು ಪ್ರದರ್ಶನಗಳನ್ನು ಮಾಡದೆಯೇ ಬೇರೆಬೇರೆ ಕಿರು ಅಭ್ಯಾಸಗಳ ಮುಖಾಂತರ ರಂಗಶಿಕ್ಷಣ ನಡೆಸುವ ವಾರ್ಷಿಕ ಯೋಜನೆಯೊಂದನ್ನು ವಿವರಗಳ ಸಮೇತ ಸಿದ್ಧಪಡಿಸಿಕೊಂಡಿದೆ. ಯುರೋಪ್, ಅಮೆರಿಕದ ರಂಗಮಂದಿರಗಳು ಮತ್ತು ಗ್ಯಾಲರಿಗಳನ್ನು ಹಂತಹಂತವಾಗಿ ತೆರೆಯುವ ಕಾರ್ಯಕ್ರಮ ಯೋಜನೆಯೂ ಆಯಾ ದೇಶಗಳಲ್ಲಿ ಸಿದ್ಧವಾಗಿದೆಯಂತೆ. ಅದಕ್ಕೆ ತದ್ವಿರುದ್ಧವಾಗಿ, ಆನೆಗಾತ್ರದ ಬಜೆಟ್ಟಿನ ನಮ್ಮ ರಾಷ್ಟ್ರೀಯ ನಾಟಕಶಾಲೆಯು ತನ್ನ ಅಧ್ಯಾಪಕರಿಂದ ಯುಟ್ಯೂಬ್ ಸಂಕಿರಣಗಳನ್ನು ಮಾಡಿಸುವ ನಿರುಪಯುಕ್ತ ಪ್ರಯೋಗವೊಂದಕ್ಕೆ ಕೈಹಾಕಿದೆ; ಭಾರತದ ಅಮೂಲ್ಯ ಕಲಾದಾಖಲೆಗಳನ್ನು ಹಲವು ದಶಕಗಳಿಂದ ಸಂಗ್ರಹಿಸಿಟ್ಟುಕೊಂಡ ಸಂಗೀತ ನಾಟಕ ಅಕಾಡೆಮಿಯು ಇದ್ದಕ್ಕಿದ್ದಂತೆ ಈಗ ಎದ್ದುಕೂತು ತನ್ನ ಹಳೆ ಕಡತಗಳನ್ನು ಅಂತರ್ಜಾಲಕ್ಕೆ ಹರಿಸಲು ಯೋಚನೆ ಆರಂಭಿಸಿದೆ. ಅಂತರ್ಜಾಲದ ಇಂಥ ಭ್ರಾಂತಿಗಳನ್ನು ತತ್ಕಾಲಕ್ಕಾದರೂ ಬದಿಗಿಟ್ಟು ವಾಸ್ತವದ ನೆಲದ ಮೇಲೆ ಕಣ್ಣಾಡಿಸದೇ ಉಳಿದರೆ, ಭವಿಷ್ಯ ನಮ್ಮನ್ನು ಕ್ಷಮಿಸದು.
ವಾಸ್ತವದ ಸ್ಥಿತಿ ಗಂಭೀರವಾಗಿದೆ- ಕರ್ನಾಟಕದಲ್ಲಿ ಹಲವು ಕಲಾವಿದರು ಪರ್ಯಾಯ ಜೀವನೋಪಾಯದ ದಾರಿಗಳನ್ನು ಹುಡುಕುತ್ತಿರುವ ಕಥೆಗಳು ಕೇಳಿಬರುತ್ತಿವೆ; ನಮ್ಮ ರಂಗಶಿಕ್ಷಣ ಕೇಂದ್ರದಲ್ಲೇ (ನೀನಾಸಂ) ಓದಿದ ನೂರಾರು ಕಲಾವಿದರು ಉದ್ಯೋಗವಿಲ್ಲದೆ ಹತಾಶರಾಗಿರುವ ಘಟನೆಗಳೂ ಪ್ರತಿದಿನ ಕೇಳಸಿಗುತ್ತಿವೆ. ನಿಜವಾಗಿ, ಇದು ಕಲೆಗಳ ಬಿಕ್ಕಟ್ಟಲ್ಲ; ಭವಿಷ್ಯವನ್ನು ಕಲ್ಪಿಸಿಕೊಳ್ಳುವ ಶಕ್ತಿಯ ಕೊರತೆ ಎಂಬುದೀಗ ನಮಗೆ ಅರ್ಥವಾಗಬೇಕಾಗಿದೆ. ಆದ್ದರಿಂದ ಕಲಾವಿದರು ಮಾತ್ರವಲ್ಲ, ಸಂಸ್ಕೃತಿಯ ಬೆಳವಣಿಗೆಯು ಈ ನಾಡಿಗೆ ಅಗತ್ಯವೆಂದು ಭಾವಿಸಿರುವ ಎಲ್ಲರೂ ಎದ್ದು ಕೂತು ಯೋಚನೆ ಮಾಡಬೇಕಾದ ತುರ್ತೀಗ ಒದಗಿದೆ. ಭವಿಷ್ಯದ ದಾರಿ ಸುಲಭವಿಲ್ಲ ನಿಜ; ಆದರೆ ಕನಸುಗಳನ್ನು ಕಟ್ಟುವ ಶಕ್ತಿಯಿರುವ ಕಲಾವಲಯಕ್ಕೆ ಅಂಥ ಹೊಸ ಮುಂದಾಲೋಚನೆ ಗಳನ್ನಾದರೂ ಹುಟ್ಟಿಸುವುದು ಅಸಾಧ್ಯವೇನೂ ಅಲ್ಲ.
ಲೇಖಕರು-ಅಕ್ಷರ ಕೆ.ವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.