ಹೌದು, ನಮ್ಮ ಸ್ವತಂತ್ರ ಭಾರತಕ್ಕೆ ಈಗ ಭರ್ತಿ 75 ವರ್ಷ! ಅಮೃತ ಮಹೋತ್ಸವದ ತಿಟ್ಹತ್ತಿ ತಿರುಗಿ ನೋಡಿದರೆ ಸಂಭ್ರಮ, ವಿಷಾದ ಒಟ್ಟೊಟ್ಟಿಗೇ ಆಗುತ್ತವೆ. ಏಳೂವರೆ ದಶಕಗಳ ಪಯಣದ ಹಿನ್ನೋಟದ ಜತೆಗೆ ದೇಶದ ಭವಿಷ್ಯದ ಚಿಂತನೆಗಳು ಪುರವಣಿಯ ಈ ವಾರದ ವಿಶೇಷ...
ಸ್ವಾತಂತ್ರ್ಯದ ಆಂದೋಲನದಲ್ಲಿ ದಲಿತರು, ಆದಿವಾಸಿಗಳು, ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು, ಧಾರ್ಮಿಕ ಅಲ್ಪಸಂಖ್ಯಾತರ ಹೋರಾಟ ಅಸಾಧಾರಣವಾದರೂ ಚರಿತ್ರೆಯಲ್ಲಿ ಅದು ಅದೃಶ್ಯವೇ ಆಗಿದೆ. ಜನರಿಲ್ಲದೆ ಧರಣಿ, ಮೆರವಣಿಗೆ, ಚಳವಳಿ, ಹೋರಾಟಗಳಿಗೆ ಅರ್ಥವೇ ಇಲ್ಲ. ಮುಖಂಡರ ಕರೆಗಳಿಗೆ ಜನರು ಓಗೊಡದೆ, ಅವರ ವಿಚಾರಕ್ಕೆ ತಕ್ಕಂತೆ ನಡೆದುಕೊಳ್ಳದೆ ಇದ್ದಿದ್ದರೆ ಸ್ವಾತಂತ್ರ್ಯ ಸಾಧ್ಯವಾಗಿರುತ್ತಿತ್ತೇ? ದುಡಿದು ಕಟ್ಟದಿದ್ದರೆ ನಾಡು ಹುಟ್ಟುವುದು ಸಾಧ್ಯವಿತ್ತೇ? ಹಾಗಾದರೆ ಈ ಜನ, ಅದರಲ್ಲೂ ಮಹಿಳೆಯರು, ಹೇಗೆ ಕಾಣೆಯಾಗುತ್ತಾರೆ ಇತಿಹಾಸದ ಪುಟಗಳಿಂದ?
ರಸ್ತೆ, ಕಟ್ಟಡ, ಫ್ಲೈಓವರ್, ಮೆಟ್ರೊ ಕಟ್ಟಿದವರು ಲಾಕ್‍ಡೌನ್ ಸಂದರ್ಭದಲ್ಲಿ ಕಾಲನ್ನೇ ನಂಬಿ ತಮ್ಮ ನೆಲೆಯತ್ತ ಸಾಗಿದ ನಡಿಗೆಯಲ್ಲಿ, ಚಳಿಯಲ್ಲಿಯೂ ನಡುಗದೆ ಕೂತ ಅಮ್ಮಿಯರ ಬಿಸುಪಿನಲ್ಲಿ, ಇಡೀ ವರ್ಷ ಧರಣಿ ಕೂತ ರೈತರ ಹಸಿವೆಗೆ ಅವ್ವಂದಿರು ಬಡಿದ ರೊಟ್ಟಿ ಘಮಲಿನಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಅಸಂಖ್ಯ ಹೋರಾಟಗಾರ್ತಿಯರ ಪರಂಪರೆಯೇ ಕಾಣುತ್ತದೆ. ಗಾಂಧೀಜಿಯವರು ಕರೆ ನೀಡಿದ್ದ ಕರ ನಿರಾಕರಣ ಚಳವಳಿ, ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳವಳಿ, ಪಾನ ನಿಷೇಧ ಚಳವಳಿ ಮುಂತಾದವುಗಳಲ್ಲಿ ಭಾಗವಹಿಸಿದ ಮಹಿಳೆಯರ ಹೋರಾಟ, ಅನನ್ಯ ಇತಿಹಾಸವಾಗಿದೆ.
ಸ್ವಾತಂತ್ರ್ಯ ಹೋರಾಟಕ್ಕಾಗಿ ಎರಡು ವರ್ಷ ಜೈಲು ಶಿಕ್ಷೆಗೂ ಒಳಗಾಗಿದ್ದ ದೇವದಾಸಿ ಬಳ್ಳಾರಿಯ ಬಸಕ್ಕ ಕರನಿರಾಕರಣೆ ಚಳವಳಿಯನ್ನು ಪ್ರಚಾರ ಮಾಡಲು ‘ನೂತನ ಕತೆಯೊಂದ ಹೇಳ್ತೀವಿ ಕೇಳಿರಣ್ಣಾ ಗೀ ಗೀ ಗೀ...’ ಎಂಬ ‘ಗೀಗೀ’ ಪದ ಕಟ್ಟಿ ಹಾಡಿ ಜನ ಜಾಗೃತಿ ಮೂಡಿಸಿದ್ದರು. ಹಂಪಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಬಸಕ್ಕನ ಪ್ರಾರ್ಥನೆಯಿಂದಲೇ ಸಭೆ ಪ್ರಾರಂಭವಾಗಿತ್ತು. ಆ ದಿನದಿಂದಲೇ ಆಕೆ ವಂದೇ ಮಾತರಂ ಬಸಕ್ಕನೆಂದು ಖ್ಯಾತರಾಗಿದ್ದರು. ಬಳ್ಳಾರಿಯ ಕೆಂಪಿ ಎಂಬ ಹರಿಜನ ಹುಡುಗಿ ಹರಪನಹಳ್ಳಿಯ ಕುಂಚೀ ಕೆರೆಯಲ್ಲಿ ಈಚಲು ಮರವನ್ನು ಕಡಿದು ಹಾಕಿ ಜೈಲು ಸೇರಿದ್ದಳು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಸಲರ ದೇವಿಯ ಪ್ರಾಮಾಣಿಕತೆ ಮರೆಯಲಾಗದ್ದು. ಸ್ವಾತಂತ್ರ್ಯ ಹೋರಾಟಗಾರರಾದ ನಾಗೇಶ ಹೆಗಡೆ ಮತ್ತು ಸುಬ್ರಾಯ ಸೋದರರು ತಮ್ಮ ಬಂಧನವಾಗಬಹುದೆಂದು ಅಡಿಕೆ ತೋಟದಲ್ಲಿ ಹುಗಿದಿಟ್ಟಿದ್ದ ಒಡವೆ, ಹಣದ ತಪ್ಪಲೆಯ ವಿಷಯ ತಿಳಿದ ಗೂಢಚಾರರು ತೋಟವನ್ನೆಲ್ಲ ಜಾಲಾಡಿದರೂ ನಿಧಿ ಸಿಗಲಿಲ್ಲ. ತೋಟದ ಹತ್ತಿರವೇ ಇದ್ದ ದೇವಿಯ ಗಂಡ ಶಿವಪ್ಪನೇ ಅದನ್ನು ಕದ್ದಿದ್ದಾನೆಂದು ಆತನಿಗೆ ಚಿತ್ರಹಿಂಸೆ ಕೊಟ್ಟರೂ ಗುಟ್ಟು ಹೊರಬರಲಿಲ್ಲ. ಶಿಕ್ಷೆ ಮುಗಿಸಿ ಬಂದ ನಾಗೇಶರ ಮುಂದೆ ತಪ್ಪಲೆಯನ್ನಿಟ್ಟ ದೇವಿ ‘ತಂದೆ, ಇದನ್ನು ಕಾದು ಸಾಕಾಗಿದೆ. ನಿನಗೆ ಒಪ್ಪಿಸಿ ನೆಮ್ಮದಿಯಾಗಿ ನಿದ್ದೆ ಮಾಡುವೆ’ ಎಂದರಂತೆ.
ವಿಪರೀತ ಮಳೆಯಾಗಿದ್ದ ಒಂದುದಿನ ಸೊಪ್ಪು ತರಲು ತೋಟಕ್ಕೆ ಹೋಗಿದ್ದಾಗ ಸಿಕ್ಕ ತಪ್ಪಲೆಯನ್ನು, ಕುಡುಕ ಗಂಡ ಮತ್ತು ಪೊಲೀಸರ ಕಣ್ಣು ತಪ್ಪಿಸಿ ಅಡುಗೆ ಮನೆಯ ಮುಂದೆ ಗುಂಡಿ ತೋಡಿ ಮುಚ್ಚಿ, ಮೇಲೆ ಹಾಸುಗಲ್ಲನ್ನಿಟ್ಟು ಕಾಪಾಡಿದ್ದಳು ಆಕೆ. ಮುಂದೆ ದೇವಿಯನ್ನು ಸನ್ಮಾನಿಸಿದ ಗಾಂಧೀಜಿಯವರು ‘ದೇವಿಯಂಥ ಪುಣ್ಯಾತ್ಮರು ಭೂತಲದಲ್ಲಿ ಇನ್ನೂ ಇರುವರೆಂದೇ ಜಗತ್ತು ನಡೆದಿದೆ’ ಎಂದು ಭಾವುಕರಾದರಂತೆ.
ವಿಜಯಪುರದ ರಬಿನಾಳ ಗ್ರಾಮದ ನಿಂಗಮ್ಮ, ಮಾಸನ್ ಎಂಬ ಬ್ರಿಟಿಷ್ ಅಧಿಕಾರಿಯ ಕ್ರೂರ ದೃಷ್ಟಿಗೆ ಬಿದ್ದು ನಾಲ್ಕು ವರ್ಷಗಳ ಗೃಹಬಂಧನದಲ್ಲಿದ್ದು ನಿರಂತರ ಅತ್ಯಾಚಾರಕ್ಕೆ ಒಳಗಾಗಿದ್ದಳು. ಅಲ್ಲಿ ಆಕೆಗೆ ಜನಿಸಿದ ಎರಡು ಮಕ್ಕಳೊಂದಿಗೆ ಹೇಗೋ ತಪ್ಪಿಸಿಕೊಂಡು ಕರಿಬಂಟನಾಳದ ಗಂಗಾಧರ ಸ್ವಾಮೀಜಿಯವರ ಬಳಿ ಬಂದು ತಾನು ಎದುರಿಸಿದ ದೌರ್ಜನ್ಯದ ಕತೆಯನ್ನು ಹೇಳಿದ್ದಳು. ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡಿದ್ದಳು. ಕೊನೆಗೆ ತನಗೂ ತನ್ನ ಮಕ್ಕಳಿಗೂ ಅಪಾಯ ತಪ್ಪಿದ್ದಲ್ಲವೆಂದು ಮಕ್ಕಳನ್ನು ಕೊಂದು, ತಾನೂ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಅವಳ ಗೌರವಾರ್ಥ ಸ್ವಾಮೀಜಿ ತಮ್ಮ ಮಠದ ಬಳಿಯಲ್ಲೇ ಸಮಾಧಿ ಮಾಡಿ ಕಟ್ಟಿರುವ ಗುಡಿಯಲ್ಲಿ ಈಗಲೂ ಪೂಜೆ ಸಲ್ಲಿಕೆಯಾಗುತ್ತಿದೆ. ಲಾವಣಿಯಾಗಿ ಅಲ್ಲಿನ ಜನರ ಮನದಲ್ಲಿ ನಿಂಗಮ್ಮನ ನೆನಪಿನ್ನೂ ಹಸಿರಾಗಿದೆ.
ಅಕ್ಕಂಜಿ ಗ್ರಾಮದ ಕರನಿರಾಕರಣೆ ಹೋರಾಟದಲ್ಲಿ ಗೌರಮ್ಮನವರು ಪೊಲೀಸರ ಹಿಂಸೆಗೊಳಗಾಗಿ ಬಂಧನಕ್ಕೆ ಒಳಗಾಗಿದ್ದರು. ಜೈಲಿನಲ್ಲಿದ್ದ ಮೇಟ್ರನ್ ಬೀಗದ ಕೀಗಳ ಗೊಂಚಲಿನಿಂದ ಮತ್ತೊಬ್ಬ ಸತ್ಯಾಗ್ರಹಿ ವಿಧವೆ ಭವಾನಮ್ಮನವರ ನೆತ್ತಿಗೆ ಹೊಡೆದಾಗ ಗೌರಮ್ಮನವರು ಜೈಲಿನಲ್ಲಿದ್ದ ಇತರರನ್ನು ಸಂಘಟಿಸಿ ಮೂರು ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದರಿಂದ ಮೇಟ್ರನ್ ಕ್ಷಮೆ ಕೇಳುವಂತಾಯಿತು. ಸಿದ್ದಾಪುರದ ಚಂದ್ರಘಟ್ಟಿಯ ಸೀತಾಬಾಯಿಯವರು ಒಬ್ಬರೇ ರಾತ್ರಿ ಕಾಡಿನಲ್ಲಿ 24 ಮೈಲು ನಡೆದು ತಮ್ಮ ತಂಡದವರು ಬಿಟ್ಟು ಬಂದಿದ್ದ ಸ್ಫೋಟಕಗಳು ತುಂಬಿದ ಚೀಲವನ್ನು ತಂದಿದ್ದರು.
ತಮಿಳುನಾಡಿನ ಕುಂಡಚವಾಡಿಯ ಅರುಂಧತಿ ಎಂಬ ತಳಜಾತಿಗೆ ಸೇರಿದ ಕುಯಿಲಿ ‘ಬೆಂಕಿ ಚೆಂಡು’ ಎಂದೇ ಪ್ರಸಿದ್ಧ. ಕುಯಿಲಿಯ ತಾಯಿ ರಾಕು ತೀರಿಕೊಂಡಾಗ ತಂದೆ ಪರಿವುಮುತ್ತನ್, ಶಿವಗಂಗೈನ ರಾಜ ಮನೆತನಕ್ಕೆ ಮದುವೆಯಾಗಿ ಹೋಗಿದ್ದ ವೇಲುನಾಚಿಯಾರ್ ಬಳಿಯಲ್ಲಿ ಮಗಳನ್ನು ಬಿಟ್ಟಿದ್ದರು. ಅರ್ಕಾಟ್ ನವಾಬ ಮತ್ತು ಬ್ರಿಟಿಷರು ದಾಳಿಮಾಡಿ ಪತಿ ಹಾಗೂ ಮಗಳನ್ನು ಕೊಂದು ಹಾಕಿದಾಗ ವೇಲುನಾಚಿಯಾರ್ ತನ್ನ ಬೆಂಬಲಿಗರೊಂದಿಗೆ ಐದು ಸಾವಿರ ಕುದುರೆಗಳ ಸೇನೆ ಕಟ್ಟಿ ಭಾರತದ ಪ್ರಥಮ ಭೂಗತ ಸೇನೆ ಕಟ್ಟಿದ ನಾಯಕಿಯಾಗಿದ್ದಳು. ಆಕೆಯಿಂದ ಪ್ರೇರಿತಳಾಗುವ ಕುಯಿಲಿ, ಯುದ್ಧ ವಿದ್ಯೆ ಕಲಿತು ಅವರ ಮಹಿಳಾ ಸೇನೆಗೆ ಅಧಿಪತಿಯಾಗಿದ್ದಳು.
ಶಿವಗಂಗೈ ಕೋಟೆಯಲ್ಲಿದ್ದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಅಡಗಿಸಿದ್ದ ಶಸ್ತ್ರಾಸ್ತ್ರಗಳ ನಾಶಮಾಡದೆ ಬ್ರಿಟಿಷರನ್ನು ಮಟ್ಟಹಾಕಲು ಸಾಧ್ಯವಿಲ್ಲವೆಂದು ತಿಳಿದು ಉಪಾಯ ಹುಡುಕುವ ಕುಯಿಲಿ, ವಿಜಯದಶಮಿಯಂದು ದೇವಿಯ ಪೂಜೆಗಾಗಿ ದೇವಸ್ಥಾನದೊಳಗೆ ಹೋಗಲು ಮಹಿಳೆಯರಿಗೆ ಇದ್ದ ಅವಕಾಶವನ್ನು ಬಳಸಿಕೊಂಡಿದ್ದಳು. ಪೂಜೆಯ ಹೆಸರಿನಲ್ಲಿ ದೇವಸ್ಥಾನದೊಳಗೆ ಹೋಗಿ, ದೇವಿಯ ಅಭಿಷೇಕಕ್ಕೆಂದು ತಂದಿದ್ದ ತುಪ್ಪವನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿ ಶಸ್ತ್ರಾಸ್ತ್ರಗಳ ಗೋದಾಮಿಗೆ ಹಾರಿ ಅದನ್ನು ಆಸ್ಫೋಟಿಸಿದ್ದಳು.
ಕಾನ್ಪುರದ ನಾನಾಸಾಹೇಬರ ಸ್ವತಂತ್ರ ಸಂಗ್ರಾಮದ ಕಾವಿನಿಂದ ಪ್ರೇರಿತಳಾದ ತವಾಯಿಫ್ ಸಮುದಾಯದ ಪ್ರಸಿದ್ಧ ನರ್ತಕಿ ಅಜೀಜ್ ಉನ್ನಿಸಾ ತನ್ನ ಮಹಲನ್ನೇ ಹೋರಾಟಗಾರರ ಅಡ್ಡವಾಗಿಯೂ, ಮದ್ದುಗುಂಡುಗಳ ತಯಾರಿಕೆಯ ಕೇಂದ್ರವಾಗಿಯೂ ಮಾಡಿದ್ದಳು. ಹೋರಾಟ ತೀವ್ರವಾಗಿ ಅಜೀಜ್‍ಳನ್ನು ಬಂಧಿಸಿ ಜೊತೆಗಾರರ ಹೆಸರು ಹೇಳಿದರೆ ಜೀವದಾನ ನೀಡುತ್ತೇವೆಂದು ಒತ್ತಾಯಿಸಿದಾಗ ಜಗ್ಗದ ಅವಳನ್ನು ಸಾರ್ವಜನಿಕವಾಗಿ ನೇಣುಹಾಕಲಾಗಿತ್ತು. ಬ್ರಿಟಿಷರ ವಿರುದ್ಧ ಹೋರಾಡಿದ್ದಕ್ಕೆ ಉತ್ತರಪ್ರದೇಶದ ಅಗ್ಸರಿಬಾಯಿಯನ್ನು ಜೀವಂತವಾಗಿ ಬ್ರಿಟಿಷರು ದಹನ ಮಾಡಿದಾಗ ಅವಳಿಗೆ 25 ವರ್ಷ.
ತಾನು ಆಯೋಜಿಸಿದ್ದ ಬೃಹತ್ ಮೆರವಣಿಗೆಯ ಮೇಲೆ ಪೊಲೀಸರು ಗುಂಡು ಹಾರಿಸಲು ಬಂದಾಗ ‘ನಾನೇ ನಾಯಕಿ, ಮೊದಲು ನನಗೆ ಗುಂಡು ಹಾರಿಸಿ, ನಂತರ ಜನರ ಮೇಲೆ ಹಾರಿಸಿ’ ಎಂದು ಧೈರ್ಯದಿಂದ ಮುಂದೆ ಬಂದು ನರಮೇಧ ತಡೆದ ಕೇರಳದ ಅಕ್ಕಮ್ಮ ಚೆರಿಯನ್ ‘ತಿರುವಾಂಕೂರಿನ ಝಾನ್ಸಿರಾಣಿ’ ಎಂದೇ ಪ್ರಸಿದ್ಧರು.
ಬಂಗಾಲದ ಮಿಡ್ನಾಪುರದಲ್ಲಿನ ಪೊಲೀಸ್ ಠಾಣೆಯನ್ನು ಆಕ್ರಮಿಸಿಕೊಳ್ಳಲು 6000 ಜನರ ಮೆರವಣಿಗೆಯನ್ನು ಮುನ್ನಡೆಸಿದ್ದು 73 ವರ್ಷದ ಮಾತಂಗಿನಿ ಹಾಜ್ರಾ. ಆಕೆ ಪೊಲೀಸ್ ಫೈರಿಂಗ್ ಆದೇಶ ಲೆಕ್ಕಿಸದೆ ‘ಈ ಬೆಂಕಿಯ ಮಳೆ ಸಾಕು, ನಿಮ್ಮ ದಾಸ್ಯದ ದುಡಿಮೆ ಬಿಟ್ಟು ಸ್ವತಂತ್ರ್ಯ ಯುದ್ಧದಲ್ಲಿ ಸೈನಿಕರಾಗಿರಿ’ ಎನ್ನುತ್ತಾ ಧ್ವಜ ಹಿಡಿದು ಮುನ್ನಡೆವಾಗ ಗುಂಡು ಬಿದ್ದು ಜೀವ ಹೋದರೂ ಧ್ವಜವನ್ನು ಬೀಳಿಸಲಿಲ್ಲ.
ಪಿಸ್ತೂಲುಗಳನ್ನು ಕ್ರಾಂತಿಕಾರಿಗಳಿಗೆ ತಲುಪಿಸುತ್ತಿದ್ದ ಬಂಗಾಲದ ಬ್ರಾಹ್ಮಣ ವಿಧವೆ ನಾನಿಬಾಲದೇವಿ ಸಿಕ್ಕಿಬಿದ್ದು ಕಠಿಣ ಶಿಕ್ಷೆಯನ್ನು ಅನುಭವಿಸುವಂತಾದರೂ ಕ್ರಾಂತಿಕಾರಿಗಳ ಸುಳಿವು ಬಿಟ್ಟುಕೊಡಲಿಲ್ಲ. ಪೊಲೀಸರ ಕಣ್ಣುತಪ್ಪಿಸಲು ಅವರು ಬಂಧಿಯೊಬ್ಬರ ಹೆಂಡತಿಯಂತೆ ಮಾರುವೇಷವನ್ನು ಸಹ ಧರಿಸಿದ್ದರು.
ಬ್ರಿಟಿಷರ ವಿರುದ್ಧ ಒಡಿಶಾದ ಆದಿವಾಸಿಗಳು ನಡೆಸಿದ ಹತ್ತು ವರ್ಷಗಳ ಉಗ್ರ ಹೋರಾಟವನ್ನು ಮುನ್ನಡೆಸಿ ಎದುರಾಳಿಗಳನ್ನು ಅಕ್ಷರಶಃ ಸುಸ್ತು ಹೊಡೆಸಿದ್ದವಳು ಹೀರಾಮಣಿ ಬಿಶೋಮಿ. ಬ್ರಿಟಿಷರಿಗೆ ತಲೆಬೇನೆಯಾಗಿದ್ದ ಮಣಿಪುರದ ರಾಣಿ ಗಿಡಾವೋಳನ್ನು ಹಿಡಿದುಕೊಟ್ಟವರಿಗೆ ಬಹುಮಾನ ಘೋಷಿಸಲಾಗಿತ್ತು. 1932ರ ಅಕ್ಟೋಬರ್ 13ರಂದು ಎರಡು ಸೇನಾ ತುಕಡಿಗಳೊಂದಿಗೆ ಆಕೆಯನ್ನು ಬಂಧಿಸಿ ಜೀವಾವಧಿ ಶಿಕ್ಷೆ ನೀಡಲಾಗಿತ್ತು.
ಅಸ್ಸಾಮಿನಲ್ಲಿ ಠಾಣೆಯನ್ನು ವಶಪಡಿಸಿಕೊಳ್ಳಲು ಹೊರಟ 500 ಜನರ ಮೆರವಣಿಗೆಯ ಮುಂಚೂಣಿಯಲ್ಲಿದ್ದ 15 ವರ್ಷ ವಯಸ್ಸಿನ ಕನಕಲತಾ ಬಾರು ‘ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಜನತೆಯ ದಾಸರೆಂದು ತಿಳಿದು ವರ್ತಿಸಬೇಕು, ಇಲ್ಲವಾದರೆ ಹೊರಗೆ ಹೋಗಬೇಕು’ ಎಂದು ಮುನ್ನುಗ್ಗಿದಾಗ ಹಾರಿದ ಗುಂಡು ಆಕೆಯ ಎದೆ ಸೀಳಿತ್ತು.
ಯಾವ ಹೋರಾಟ, ಚಳವಳಿಯೇ ಆಗಲಿ ಹಲವಾರು ರೀತಿಯಲ್ಲಿ ಮಹಿಳೆಯರೂ ದುಡಿದಿದ್ದಾರೆ. ಹೋರಾಟ, ಚಳವಳಿಯ ಫಲವಾಗಿ ಬರುವ ಅಧಿಕಾರ, ಸ್ಥಾನಮಾನಗಳ ಸಂದರ್ಭದಲ್ಲಿ ಮಾತ್ರ ಅವರನ್ನು ಹಿಂದಿಡಲಾಗಿದೆ, ಬದಿಗೆ ಸರಿಸಲಾಗಿದೆ. ಅವರ ನಡಿಗೆ ಮಾತ್ರ ಮುಂದುವರಿದೇ ಇದೆ. ಅವರು ನಡೆದ ದಾರಿ ಇನ್ನೂ ಸಾಗಬೇಕಾದ ನಮ್ಮ ಬಿಡುಗಡೆಯ ನಡೆಗೆ ದೊಂದಿಯಾಗಲೆಂದು ಪಣತೊಡುವುದು ಸ್ವಾತಂತ್ರ್ಯ-75ರ ಸಂದರ್ಭದಲ್ಲಿ ಅವರಿಗೆ ಹೇಳುವ ನಿಜ ಸಲಾಮು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.