ADVERTISEMENT

ವಿಶ್ಲೇಷಣೆ | ಜಾತಿ ವಿನಾಶದ ಬದಲು ದಲಿತ ಪದವಿನಾಶ!?

ಪ್ರಭುತ್ವವು ಮಾಡುವ ‘ನುಡಿಚೋರ’ತನದ ಹಿಂದೆ ಸಾಂಸ್ಕೃತಿಕ ರಾಜಕೀಯ ಇರುತ್ತದೆ

ಡಾ.ರಾಜೇಂದ್ರ ಚೆನ್ನಿ
Published 12 ಜೂನ್ 2020, 1:38 IST
Last Updated 12 ಜೂನ್ 2020, 1:38 IST
.
.   

ಬಾಬಾ ಸಾಹೇಬ್‌ ಅಂಬೇಡ್ಕರ್ ಅವರು 1928ರ ಮೇ ತಿಂಗಳಿನಲ್ಲಿ ತಮ್ಮ ‘ಬಹಿಷ್ಕೃತ ಭಾರತ’ ಪತ್ರಿಕೆಯಲ್ಲಿ ‘ದಲಿತ’ ಎನ್ನುವ ಪದವನ್ನು ಬಳಸಿದರು. ಸಂಸ್ಕೃತ ಹಾಗೂ ಮರಾಠಿ ಭಾಷೆಗಳಲ್ಲಿ ಈ ಪದದ ಅರ್ಥವು ‘ತುಳಿಯಲ್ಪಟ್ಟ’, ‘ಮುರಿಯಲ್ಪಟ್ಟ’ ಎನ್ನುವ ಅರ್ಥವನ್ನೆಲ್ಲಹೊಂದಿದೆ. ತಮ್ಮ ಇಂಗ್ಲಿಷ್ ಬರಹದಲ್ಲಿ ಅವರು ‘depressed classes’ ಎನ್ನುವ ಪದವನ್ನು ಬಳಸಿದರು. 1970ರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ಆರಂಭಗೊಂಡ ದಲಿತ ಪ್ಯಾಂಥರ್ಸ್ ಚಳವಳಿ, ನಂತರದ ದಶಕದಲ್ಲಿ ಕರ್ನಾಟಕದಲ್ಲಿ ಆರಂಭವಾದ ದಲಿತ ಚಳವಳಿ ಹಾಗೂ ದಲಿತ ಸಂಘರ್ಷ ಸಮಿತಿಯ ಸ್ಥಾಪನೆಯೊಂದಿಗೆ ‘ದಲಿತ’ ಪದವು ಬಹುಮುಖ್ಯ ಪರಿಕಲ್ಪನೆಯಾಗಿ ಬೆಳೆದುಬಂದಿದೆ.

ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಫರ್ಮಾನಿನ ಪ್ರಕಾರ ಕಳೆದ ವಾರ ಸುತ್ತೋಲೆಯೊಂದನ್ನು ಹೊರಡಿಸಿ, ಇನ್ನು ಮೇಲೆ ‘ದಲಿತ’ ಪದವನ್ನು ಬಳಸಬಾರದೆಂದು, ಬದಲಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (ಎಸ್‌ಸಿ–ಎಸ್‌ಟಿ) ಪದಗಳನ್ನು ಬಳಸಬೇಕೆಂದು ಆದೇಶ ನೀಡಿದೆ. ಜಾತಿ ವಿನಾಶದ ಕ್ರಾಂತಿಕಾರಿ ಪದದೊಂದಿಗೆ ಬಾಬಾ ಅವರಿಂದ ಆರಂಭಗೊಂಡ ಸಾಮಾಜಿಕ– ರಾಜಕೀಯ ಕ್ರಾಂತಿಯೊಂದು ಈಗ ದಲಿತ ಪದವಿನಾಶದ ಅಂಚಿಗೆ ಬಂದು ನಿಂತಿದೆ.

ಈ ಫರ್ಮಾನುಗಳ ಹಿಂದಿನ ಚಿಂತನೆಯೆಂದರೆ, ಇಂದಿನ ಆಧುನಿಕ, ಪ್ರಬಲ ಹಾಗೂ ಪ್ರಗತಿಪರವಾದ ಪ್ರಜಾಪ್ರಭುತ್ವದಲ್ಲಿ ಯಾರೂ ದಲಿತರಿಲ್ಲ, ಜಾತಿ ಮತ್ತು ಅಸ್ಪೃಶ್ಯತೆ ಈಗಾಗಲೇ ನಿರ್ನಾಮವಾಗಿವೆ. ಕೆಲವು ವಿದ್ವಾಂಸರ ಪ್ರಕಾರ, ಇವು ಬ್ರಿಟಿಷ್ ವಸಾಹತುಶಾಹಿಯ ಸೃಷ್ಟಿಗಳೇ ಹೊರತು ಭಾರತದಲ್ಲಿ ಜಾತಿ ವ್ಯವಸ್ಥೆಯು ಇರಲೇ ಇಲ್ಲ. ಇಂತಹ ಸಂಶೋಧನೆಗಳ ಬೆಂಬಲದಿಂದ, ದಲಿತ ಪದವನ್ನು ಬಳಸುವ ಅವಶ್ಯಕತೆ ಈಗಿಲ್ಲವೆಂದು ಸರ್ಕಾರಗಳು ಹೇಳಿವೆ. ಇದರ ಹಿಂದಿರುವ ಮುಖ್ಯ ಪರಿಕಲ್ಪನೆ ಎಂದರೆ, ವರ್ಣಾಶ್ರಮ, ಜಾತಿಪದ್ಧತಿ ಇವು ವೈಚಾರಿಕವಾಗಿ ಸಮಂಜಸವಾದ ಶ್ರಮವಿಭಜನೆಯ ಪದ್ಧತಿಗಳಾಗಿದ್ದವು, ಶೋಷಣೆಯ ಸಾಧನಗಳಾಗಿರಲಿಲ್ಲ.

ADVERTISEMENT

ದಲಿತ ಪದವನ್ನು ಪ್ರತಿಬಂಧಿಸುವುದರ ಹಿಂದೆ, ಈ ಪದದಿಂದ ದಲಿತ ಸಮುದಾಯಗಳಿಗೆ ಏನಾದರೂ ಅವಮಾನ ಆಗುತ್ತಿದೆ ಎನ್ನುವ ಕಾರಣವಿದೆಯೇ? ಇಲ್ಲ. ಏಕೆಂದರೆ ಈ ಪದದ ಮೂಲ ಅರ್ಥವೇ ಮುರಿಯಲ್ಪಟ್ಟ, ತುಳಿಯಲ್ಪಟ್ಟ ಅಥವಾ ಒಡೆಯಲ್ಪಟ್ಟ, ದಮನಿತ ಎಂದಾಗಿರುವುದರಿಂದ ಈ ಪದವು ದಲಿತ ಸಮುದಾಯವನ್ನು ಕೀಳಾಗಿರಿಸಿರುವ ವ್ಯವಸ್ಥೆಯ ಬಗ್ಗೆ ಗಮನ ಸೆಳೆಯುತ್ತದೆ ಮತ್ತು ದಲಿತರ ಸ್ಥಿತಿಗೆ ದಲಿತರು ಕಾರಣವೇ ಅಲ್ಲ ಎಂದು ಖಚಿತವಾಗಿ ತಿಳಿಸುತ್ತದೆ. ಅವರ ಈ ಸ್ಥಿತಿಗೆ ಯಾರು ಕಾರಣರು ಎಂದು ಹುಡುಕಲು ಹೊರಟರೆ ಬ್ರಾಹ್ಮಣ್ಯ, ಪುರೋಹಿತರು, ಇಲ್ಲಿಯ ಶಾಸ್ತ್ರ– ಪುರಾಣಗಳು ಎನ್ನುವ ಅನೇಕ ಉತ್ತರಗಳು ಹೊರಡುತ್ತವೆ. ಇವೆಲ್ಲವೂ ಇಂದು ಅಧಿಕಾರದಲ್ಲಿರುವ ಮೇಲ್ಜಾತಿ ಒಕ್ಕೂಟವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತವೆ. ಅಲ್ಲದೆ ಭಾರತೀಯ ಸಮಾಜ ವ್ಯವಸ್ಥೆಯು ಅಮಾನುಷವಾದ ಶ್ರೇಣೀಕೃತ ಸಾಮಾಜಿಕ ರಚನೆಗಳನ್ನು ಅವಲಂಬಿಸಿತ್ತು ಎನ್ನುವ ಅಪ್ರಿಯ ಸತ್ಯವನ್ನು ಎತ್ತಿ ತೋರಿಸುತ್ತದೆ.

ಸರ್ಕಾರದ ಸುತ್ತೋಲೆಯಲ್ಲಿ ವರ್ಣ ಹಾಗೂ ಜಾತಿಗಳನ್ನು ನಮ್ಮ ಸಂವಿಧಾನದ ಪ್ರಕಾರ ತಿರಸ್ಕರಿಸುವುದಕ್ಕಾಗಿ ‘ದಲಿತ’ ಪದವನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗಿಲ್ಲ.

ಬಾಬಾ ಸಾಹೇಬರು 1928ರ ಹೊತ್ತಿಗೆ ಬಳಸಿದ್ದ ‘ದಲಿತ’ ಎಂಬ ಪದವು ದಲಿತ ಚಳವಳಿಗಳು ಪ್ರಬಲವಾದಾಗ ಮುನ್ನೆಲೆಗೆ ಬಂದಿತು. ಏಕೆಂದರೆ ನೂರಾರು ದಲಿತ ಜಾತಿಗಳು ಭಾರತದ ಉದ್ದಕ್ಕೂ ಹರಿದು ಹಂಚಿಹೋಗಿ ಅವುಗಳನ್ನು ಒಗ್ಗೂಡಿಸುವುದು ಅಸಾಧ್ಯವಾಗಿತ್ತು. ಅವರ ಅದ್ಭುತ ವಾದವೆಂದರೆ, ಜಾತಿ ವ್ಯವಸ್ಥೆಯಲ್ಲಿ ತಾರತಮ್ಯವಿರುವ ಅಸಮಾನತೆ (Graded inequality) ಇರುತ್ತದೆ. ಅಂದರೆ ಪ್ರತಿಯೊಂದು ಜಾತಿ ಹಾಗೂ ಉಪಜಾತಿಯೂ ತನ್ನನ್ನು ಇತರ ಜಾತಿಗಳಿಗಿಂತ ಉತ್ತಮವೆಂದು ಭಾವಿಸುತ್ತದೆ. ಹೀಗಾಗಿ ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಮಾನಸಿಕವಾಗಿ ಹಂಚಿಹೋಗಿದ್ದ ಈ ದಲಿತ ಜಾತಿಗಳನ್ನು ಒಟ್ಟುಗೂಡಿಸುವ ಒಂದೇ ಉಪಾಯವೆಂದರೆ ಅವರೆಲ್ಲರೂ ಅವರ್ಣೀಯರು, ಪಂಚಮರು ಮತ್ತು ಜಾತಿ ವ್ಯವಸ್ಥೆಯಲ್ಲಿ ಶೋಷಿತರು ಎನ್ನುವ ಪರಿಕಲ್ಪನೆಯನ್ನುಬೆಳೆಸುವುದು. ಆದ್ದರಿಂದಲೇ ಬಾಬಾಸಾಹೇಬ್ ಅವರು ಮಹಾರ್ ಜಾತಿಯ ನಾಯಕರಾಗಲಿಲ್ಲ; ದಲಿತ ಸಮುದಾಯಗಳ ನಾಯಕರಾದರು.

ದಲಿತ ಅಧ್ಯಯನಗಳ ಪ್ರಮುಖ ವಿದ್ವಾಂಸರಾದ ಅನುಪಮಾ ರಾವ್ ಹೇಳುವಂತೆ ‘ದಲಿತ’ ಎನ್ನುವ ಪದವು ಜಾತಿ, ಉಪಜಾತಿಗಳನ್ನು ಮೀರಿದ ಸಾಮಾಜಿಕ ದುಃಖ, ನೋವು, ಅವಮಾನ ಈ ಪರಿಕಲ್ಪನೆಗಳ ಮೂಲಕ ಎಲ್ಲಾ ದಲಿತ ಜಾತಿ, ಜನಾಂಗಗಳನ್ನು ಒಗ್ಗೂಡಿಸಿ ಒಂದು ವಿಶಿಷ್ಟ ಗುರುತನ್ನು ತಂದುಕೊಡುತ್ತದೆ. ಅಂದರೆ ಸಮಾಜದಲ್ಲಿ ಕಳಂಕಿತರೆಂದು ಕರೆಯಲ್ಪಡುತ್ತಿದ್ದ ಸಮುದಾಯಗಳು ಒಂದಾಗಿ, ತಾವು ಆಧುನಿಕ ರಾಜಕೀಯ ವ್ಯವಸ್ಥೆಯೊಂದರ ಪ್ರಜೆಗಳು ಎನ್ನುವ ಎಚ್ಚರವನ್ನು ಈ ಪದವು ಸೃಷ್ಟಿಸಿತು. ಕಳಂಕಿತ ಹಾಗೂ ಶೋಷಿತ ಸಮುದಾಯಗಳು ಪ್ರತಿಭಟನೆ ಹಾಗೂ ಸಮಾನತೆಯ ಹಕ್ಕುಗಳನ್ನು ಈ ಪದದಿಂದ ಮಂಡಿಸಿದವು. ಈ ಪದವಿಲ್ಲದಿದ್ದರೆ ದಲಿತ ಜಾತಿ, ಉಪಜಾತಿಗಳನ್ನು ಒಡೆದು ಅವುಗಳ ಪ್ರತಿಭಟನೆಯನ್ನು ದಮನಿಸುವುದು ಸುಲಭವಾಗುತ್ತದೆ. ಹೀಗಾಗಿ ‘ದಲಿತ’ ಪದವೆನ್ನುವುದು ರಾಜಕೀಯವಾಗಿ ಅತ್ಯಂತ ಪ್ರಬಲವಾದ ಪರಿಕಲ್ಪನೆ. ಇದನ್ನು ಬಲ್ಲ ಇಂದಿನ ರಾಜಕೀಯ ವ್ಯವಸ್ಥೆಯು ‘ದಲಿತ’ ಪದವಿನಾಶವನ್ನು ಸುತ್ತೋಲೆಯ ಮೂಲಕ ಅನುಷ್ಠಾನಕ್ಕೆ ತಂದಿದೆ.

ಕರ್ನಾಟಕದ ರಾಜಕೀಯದಲ್ಲಿ ಜಾತಿವಿನಾಶದ ಪರಿಕಲ್ಪನೆಯು ದಲಿತ ಸಂಘಟನೆಗಳಿಗೂ ಬೇಡವಾಗುತ್ತ ಬಂದಿದ್ದರಿಂದ ಈ ಕೆಲಸವು ಸಾಧ್ಯವಾಗಿದೆ. ಇದು ಆಗುತ್ತಿರುವುದು ನವ ಅಸ್ಪೃಶ್ಯತೆಯು ಪ್ರಬಲವಾಗುತ್ತಿರುವ ಇಂದಿನ ಕರ್ನಾಟಕದಲ್ಲಿ, ಈ ಅಸ್ಪೃಶ್ಯತೆಯು ಅಮೆರಿಕದ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಂದ ಹಿಡಿದು ನಮ್ಮ ಹಳ್ಳಿಗಳ ಹೋಟೆಲ್‍ಗಳತನಕ ವ್ಯಾಪಕವಾಗಿದೆ.

ದಲಿತ ಪದವಿನಾಶದ ರಾಜಕೀಯದ ಹಿಂದೆ ಇರುವ ಶಕ್ತಿಗಳು ಯಾವುವು? ಅವು ಹೀಗಿವೆ–
ಅ) ಹಿಂದುತ್ವವಾದಿ ರಾಜಕೀಯವು ತನ್ನ ಸಮರ್ಥನೆಗಾಗಿ ಒಂದು ಸಾಂಸ್ಕೃತಿಕ ಸೆಲ್ಫಿ ತೆಗೆದುಕೊಂಡಿದೆ. ಇದರಲ್ಲಿ ಜಾತಿ, ಅಸ್ಪೃಶ್ಯತೆ ಇಲ್ಲದ ಒಂದು ರಾಷ್ಟ್ರವಿದೆ. ಇದು ಮಾನವ ಇತಿಹಾಸದಲ್ಲಿಯೇ ಶ್ರೇಷ್ಠವಾದುದು. ಹೀಗಾಗಿ ಈ ಪ್ರತಿನಿಧೀಕರಣದಲ್ಲಿ ‘ದಲಿತ’ ಅಂದರೆ ಜಾತಿವ್ಯವಸ್ಥೆಯಿಂದ ಶೋಷಿತ ಎನ್ನುವ ಪರಿಕಲ್ಪನೆಗೆ ಅವಕಾಶವಿಲ್ಲ.

ಆ) ಮಾಹಿತಿ ತಂತ್ರಜ್ಞಾನದ ಕೌಶಲಗಳಿಂದಾಗಿ ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಮೊನ್ನೆಯವರೆಗೆ ಪ್ರಬಲರಾಗಿದ್ದ ಅನಿವಾಸಿ ಭಾರತೀಯರಿಗೆ ‘ದಲಿತ’ ಎನ್ನುವ ಪದವು ಭಾರತೀಯ ಸಂಸ್ಕೃತಿಗೆ ಅವಮಾನಕರ. ಇವರು ಅನೇಕ ವರ್ಷಗಳ ಹೋರಾಟದ ನಂತರ ಕ್ಯಾಲಿಫೋರ್ನಿಯಾ ಮತ್ತು ಇತರ ರಾಜ್ಯಗಳ ಪಠ್ಯಪುಸ್ತಕಗಳಲ್ಲಿ ಜಾತಿವ್ಯವಸ್ಥೆ, ಅಸ್ಪೃಶ್ಯತೆ ಇವುಗಳ ಬಗೆಗಿನ ಪ್ರಸ್ತಾಪಗಳನ್ನು ತೆಗೆದುಹಾಕಿಸಿದ್ದಾರೆ. ಇಂಗ್ಲೆಂಡ್‍ನಲ್ಲಿ ಅನಿವಾಸಿಗಳಲ್ಲಿ ಜಾತಿ ಆಧಾರಿತ ತಾರತಮ್ಯವೇ ಇಲ್ಲವೆಂದು ಯಶಸ್ವಿಯಾಗಿ ವಾದಿಸಿದ್ದಾರೆ. ಈ ಅನಿವಾಸಿ ಭಾರತೀಯ ಸಮುದಾಯವು ಭಾರತದ ಚರಿತ್ರೆಯನ್ನು ಜಾತಿಗಳನ್ನು ಹೊರಗಿಟ್ಟು ಪುನರ್‌ರಚಿಸಬೇಕೆಂದು ಪ್ರಯತ್ನಿಸುತ್ತಿದೆ.

ಇ) ಶಿಕ್ಷಿತ, ಬ್ರಾಹ್ಮಣೀಕರಣಗೊಂಡ ದಲಿತರು ಹಾಗೂ ದಲಿತ ರಾಜಕಾರಣಿಗಳು, ವಿಶೇಷವಾಗಿ ರಾಜಕಾರಣಿಗಳು ಪಕ್ಷಾತೀತವಾಗಿ ದಲಿತ ಪದವಿನಾಶದ ಮಹಾಕಾರ್ಯಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಅಲ್ಲದೆ ದಲಿತ ಪದದ ನಿವಾರಣೆಯೆಂದರೆ ದಲಿತರ ಅಂತಿಮ ಬಿಡುಗಡೆಯೆಂದು ಜಾಹೀರು ಮಾಡುತ್ತಿದ್ದಾರೆ.

20ನೇ ಶತಮಾನದ ಅತಿ ಶ್ರೇಷ್ಠ ವಿದ್ವಾಂಸರಾದ ಬಾಬಾಸಾಹೇಬರು ಜಾತಿ ವಿನಾಶಕ್ಕಾಗಿ ತಮ್ಮ ಆಯಸ್ಸು, ಆರೋಗ್ಯ, ಸಂಪತ್ತು ಎಲ್ಲವನ್ನೂ ಕಳೆದುಕೊಳ್ಳುವ ಬದಲು ಇಂಥ ಸುತ್ತೋಲೆಯನ್ನು ಹೊರಡಿಸಿದ್ದರೆ ಸಾಕಿತ್ತಲ್ಲವೇ?

‘ದಲಿತ’ ಪದವು ಅವಮಾನಕರ ಪದವಲ್ಲ. ದಲಿತ ಆತ್ಮಾಭಿಮಾನದ, ಪ್ರಜಾಸತ್ಮಾತ್ಮಕ ಹಕ್ಕೊತ್ತಾಯದ, ಒಗ್ಗೂಡುವ ಹೋರಾಟದ ಪದವಾಗಿದೆ. ಪ್ರಭುತ್ವವು ಆಗಾಗ್ಗೆ ಮಾಡುವ ‘ನುಡಿಚೋರ’ತನದ ಹಿಂದೆ ಯಾವಾಗಲೂ ಒಂದು ಸಾಂಸ್ಕೃತಿಕ ರಾಜಕೀಯವಿರುತ್ತದೆ. ಪದಗಳನ್ನು ಕಳೆದುಕೊಂಡ ಸಮುದಾಯಗಳು ಭವಿಷ್ಯದಲ್ಲಿ ತಮ್ಮ ಸಾಂಸ್ಕೃತಿಕ, ರಾಜಕೀಯ ಅಧಿಕಾರವನ್ನು ಕಳೆದುಕೊಳ್ಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.