ಚಾಮರಾಜನಗರದ ಬಳಿ ಇರುವ ಬಿಳಿಗಿರಿರಂಗನ ಬೆಟ್ಟವು (ಬಿ.ಆರ್. ಹಿಲ್ಸ್) ಶತ ಶತಮಾನಗಳಿಂದ ಸೋಲಿಗರೆಂಬ ವಿಶಿಷ್ಟ ಆದಿವಾಸಿ ಸಮುದಾಯಕ್ಕೆ ನೆಲೆಯಾಗಿದೆ. ಚಿರತೆ, ಹುಲಿ ಸೇರಿದಂತೆ ಅಸಂಖ್ಯ ಪ್ರಾಣಿಗಳು ಹಾಗೂ ಸುಮಾರು 200ರಷ್ಟು ಪ್ರಭೇದಗಳ ಪಕ್ಷಿಗಳಿಗೆ ಆವಾಸ ಸ್ಥಾನವಾಗಿರುವ ಬಿಳಿಗಿರಿರಂಗನ ಬೆಟ್ಟ, ದಟ್ಟ ಕಾಡುಗಳಿಂದ ಸುತ್ತುವರಿದಿದೆ. ಹಿಂದೆಲ್ಲಾ ಈ ಕಾಡುಗಳಿಂದಲೇ ಬೇಟೆ, ಆಹಾರ ಸಂಗ್ರಹ ಹಾಗೂ ಸ್ಥಳಾಂತರಿತ ಕೃಷಿ ಮೂಲಕ ತಮ್ಮ ಆಹಾರವನ್ನು ಸೋಲಿಗರು ಪಡೆದುಕೊಳ್ಳುತ್ತಿದ್ದರು. ಗೆಡ್ಡೆ ಗೆಣಸು, ಜೇನುತುಪ್ಪ, ವಿವಿಧ ಬಗೆಯ ಹಸಿರುಸೊಪ್ಪು, ತರಕಾರಿಗಳು, ಸೀಬೆ, ಪರಂಗಿ, ಹಲಸು, ನೆಲ್ಲಿಯಂಥ ಹಣ್ಣುಗಳು, ಜೊತೆಗೆ ಆಗಾಗ್ಗೆ ಬೇಟೆಯಾಡಿದ ಕಾಡುಹಂದಿ, ಜಿಂಕೆ ಅಥವಾ ಮೊಲದ ಮಾಂಸ ಅವರ ಆಹಾರ ಪದ್ಧತಿಯ ಅವಿಭಾಜ್ಯ ಭಾಗವಾಗಿದ್ದವು.
ಹುಲ್ಲು ಮತ್ತಿತರ ಸಸ್ಯಗಳು ಉತ್ತಮವಾಗಿ ಮರು ಚಿಗುರೊಡೆಯಲು ಅನುಕೂಲವಾಗುವಂತೆ ಬೆಂಕಿಯ ಸೂಕ್ತ ಬಳಕೆಯಿಂದ ಅರಣ್ಯ ಪ್ರದೇಶಗಳನ್ನು ತೆರವುಗೊಳಿಸಲಾಗುತ್ತಿತ್ತು. ಕಾಲಕ್ರಮೇಣ ಪರಿಸ್ಥಿತಿ ಬಹಳಷ್ಟು ಬದಲಾಗಿದೆ. 1960ರ ದಶಕದಿಂದ ಆರಂಭಿಸಿ, ಸೋಲಿಗರ ಗುಂಪುಗಳನ್ನು ಅವರ ಪೋಡು ಅಥವಾ ಅರಣ್ಯ ಹಾಡಿಗಳಿಂದ ಒಕ್ಕಲೆಬ್ಬಿಸಿ ಅರಣ್ಯದ ಅಂಚಿನಲ್ಲಿ ಸರ್ಕಾರ ಕಟ್ಟಿಸಿರುವ ವಸತಿ ಸಂಕೀರ್ಣಗಳಿಗೆ ಸ್ಥಳಾಂತರಿಸ
ಲಾಗಿದೆ. 1974ರಲ್ಲಿ ಬಿ.ಆರ್. ಹಿಲ್ಸ್ ಅನ್ನು ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಲಾಯಿತು. ನಂತರ, ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಯಿತು.
ತಮ್ಮ ಪಾರಂಪರಿಕ ಆಹಾರ ಮೂಲಗಳಿಗೆ ಹೆಚ್ಚಿನ ಸಂಪರ್ಕವಿಲ್ಲದಂತಾಗಿ ಅರಣ್ಯದ ಹೊರಗೆ ವಾಸಿಸುತ್ತಾ ಸೋಲಿಗರ ಆಹಾರ ವ್ಯವಸ್ಥೆಯು ಸಂಪೂರ್ಣವಾಗಿ ಬದಲಾಗಿಹೋಯಿತು. ಈ ಬದಲಾವಣೆಯ ಚಾಲಕಶಕ್ತಿಗಳಾವುವು ಹಾಗೂ ಅದರ ಪರಿಣಾಮ ಏನು? ಸುಮಾರು ಎರಡು ವರ್ಷಗಳ ಹಿಂದೆ, ಈ ವಿಚಾರದ ಕುರಿತು ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಅಧ್ಯಯನವನ್ನು ಆರಂಭಿಸಿತು.
ಆಹಾರ ವ್ಯವಸ್ಥೆಗಳು ಯಾವುವು? ಸರಳವಾಗಿ ಹೇಳುವುದಾದರೆ, ಆಹಾರವನ್ನು ಹೇಗೆ ಉತ್ಪಾದಿಸ
ಲಾಗುತ್ತದೆ ಹಾಗೂ ಬಳಸಲಾಗುತ್ತದೆ, ಆರೋಗ್ಯ ಹಾಗೂ ಪೌಷ್ಟಿಕತೆ ಮೇಲೆ ಅದರ ಪರಿಣಾಮವೇನು ಎಂಬುದರ ಜೊತೆಗೆ, ಅದರ ಸಾಮಾಜಿಕ, ಆರ್ಥಿಕ ಹಾಗೂ ಪರಿಸರಾತ್ಮಕ ಪರಿಣಾಮಗಳನ್ನು ಇವು ಒಳ
ಗೊಳ್ಳುತ್ತವೆ. ಯಾವ ಆಹಾರ ಉತ್ಪಾದಿಸಲಾಗುತ್ತದೆ, ಹೇಗೆ ಅದನ್ನು ಉತ್ಪಾದಿಸಲಾಗುತ್ತದೆ ಅಥವಾ ಸಂಗ್ರಹಿಸ
ಲಾಗುತ್ತದೆ ಎಂಬುದರಲ್ಲಾಗುವ ಬದಲಾವಣೆಯು ಬಳಸುವ ರೀತಿಯ ಮೇಲಷ್ಟೇ ಅಲ್ಲ ಆರೋಗ್ಯ ಹಾಗೂ ಪೌಷ್ಟಿಕತೆ ವಿಚಾರಗಳ ಮೇಲೂ ಪರಿಣಾಮ ಬೀರಬಲ್ಲದು.
ಸೋಲಿಗರು ತಮ್ಮ ಆಹಾರವನ್ನು ಉತ್ಪಾದಿಸುವ ಅಥವಾ ಸಂಗ್ರಹಿಸುವ ವಿಧಾನದಲ್ಲಿ ಈಗ ಮೂರು ರೀತಿಯ ಬದಲಾವಣೆಗಳಾಗಿವೆ: ಮೊದಲನೆಯದು, ಅರಣ್ಯ ಉತ್ಪನ್ನ ಸಂಗ್ರಹಿಸುವುದನ್ನು ತೀವ್ರವಾಗಿ ಕಡಿತ
ಗೊಳಿಸಲಾಗಿದೆ ಹಾಗೂ ಬೇಟೆಯಾಡುವುದನ್ನು ಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಅಗತ್ಯ ಸಸ್ಯಗಳು ಉತ್ತಮವಾಗಿ ಮರು ಚಿಗುರೊಡೆಯಲು ಅನುವಾಗುವಂತೆ ಅರಣ್ಯ ಪ್ರದೇಶಗಳನ್ನು ತೆರವುಗೊಳಿಸಲು ಬೆಂಕಿ ಬಳಸುವುದರ ಮೇಲೆ ನಿಷೇಧ ವಿಧಿಸಿದ್ದರ ಭಾಗಶಃ ಪರಿಣಾಮವಾಗಿ ಹಾಗೂ ಲಂಟಾನದಂತಹ ಆಕ್ರಮಣಕಾರಿ ಸಸ್ಯ ಪ್ರಭೇದಗಳು ಅನಿಯಂತ್ರಿತವಾಗಿ ಬೆಳೆದಿದ್ದರಿಂದಾಗಿ ತಿನ್ನಲು ಯೋಗ್ಯವಾದ ಹಲವು ಸಸ್ಯ, ಗೆಡ್ಡೆಗಳ ಬೆಳವಣಿಗೆಗೆ ಗಣನೀಯ ಪ್ರಮಾಣದಲ್ಲಿ ತೊಡಕುಂಟಾಗಿದೆ.
ಎರಡನೆಯದು, ಸ್ಥಿರವಾಗಿ ನೆಲೆ ನಿಂತು ಕೃಷಿ ಮಾಡುವುದು ಕಷ್ಟ ಎಂಬುದು ಸಾಬೀತಾಗಿದೆ. ಕಾಡುಪ್ರಾಣಿಗಳಿಂದ ಬೆಳೆಗಳ ನಿರಂತರ ನಾಶದಿಂದಾಗಿ ಹಲವು ಸೋಲಿಗರು ಕಾಫಿಯಂತಹ, ಹೆಚ್ಚು ತೊಂದರೆಗೆ ಸಿಲುಕದ ಬೆಳೆಗಳನ್ನು ಬೆಳೆಯಲು ಮುಂದಾಗುವಂತೆ ಮಾಡಿದೆ. ಈ ಸ್ಥಿತ್ಯಂತರವು ಪೌಷ್ಟಿಕ ಹಾಗೂ ಸಾಂಪ್ರದಾಯಿಕ ಆಹಾರದ ಅಂತರ್ಗತ ಭಾಗವಾದ ರಾಗಿಯಂತಹ ದಿನನಿತ್ಯದ ಮುಖ್ಯ ಆಹಾರಗಳ ಲಭ್ಯತೆ ಈಗ ಕಡಿಮೆಯಾಗುವುದಕ್ಕೆ ಕಾರಣವಾಗಿದೆ. ಹಾಗೆಯೇ, ಸುಗ್ಗಿಯ ಬೆಳೆಗಳ ಸಾಮುದಾಯಿಕ ಹಂಚಿಕೆಯ ಸಾಂಸ್ಕೃತಿಕ ಪದ್ಧತಿಗಳು ಅಪ್ರಸ್ತುತವಾಗಿವೆ.
ಅಂತಿಮವಾಗಿ, ಸರ್ಕಾರದ ಸಾರ್ವಜನಿಕ ವಿತರಣಾ ವ್ಯವಸ್ಥೆಯು (ಪಿಡಿಎಸ್) ಸೋಲಿಗ ಸಮುದಾಯಕ್ಕೆ ಆಹಾರ ಸಬ್ಸಿಡಿಯನ್ನು ಯಶಸ್ವಿಯಾಗಿ ವಿಸ್ತರಿಸಿದೆ. ಒಂದಿಷ್ಟು ರಾಗಿಯೊಂದಿಗೆ ಹೆಚ್ಚಾಗಿ ಅಕ್ಕಿಯನ್ನು ಅವರೀಗ ಪಡೆದುಕೊಳ್ಳುತ್ತಾರೆ. ಮಳೆಗಾಲದ ಆರು ತಿಂಗಳುಗಳಲ್ಲಿ ಮೊಟ್ಟೆ, ಸಕ್ಕರೆ, ಬೇಳೆಕಾಳುಗಳು ಹಾಗೂ ತುಪ್ಪದ ಪೂರಕ ಪಡಿತರಗಳನ್ನೂ ಅವರು ಪಡೆದುಕೊಳ್ಳುತ್ತಾರೆ. ಇದು ಮುಖ್ಯವಾದ ಪೌಷ್ಟಿಕತೆಯನ್ನು ಒದಗಿಸುತ್ತದೆಯಾದರೂ ಈ ಹಿಂದೆ ಈ ಸಮುದಾಯವು ಒಗ್ಗಿಕೊಂಡಿದ್ದ ವೈವಿಧ್ಯಮಯ ಆಹಾರ ಪದ್ಧತಿಗೆ ಬದಲಿಯಾಗಲಾರದು. ಜೊತೆಗೆ ಇದು ಕಾರ್ಬೊಹೈಡ್ರೇಟ್ ಹೆಚ್ಚಿರುವ ಆಹಾರ ಪದ್ಧತಿಗೆ ದಾರಿ ಮಾಡಿಕೊಡಲಿದೆ.
ಈಗ ಸೋಲಿಗ ಸಮುದಾಯದವರು ತಿನ್ನುವಂಥ ಆಹಾರ ಪದಾರ್ಥಗಳನ್ನು ವಿಶ್ಲೇಷಿಸಿದಲ್ಲಿ ಅದು ಬೆಂಗಳೂರಿಗರು ತಿನ್ನುವ- ಚಿತ್ರಾನ್ನ, ಪುಳಿಯೋಗರೆ, ಇಡ್ಲಿ, ದೋಸೆಗಳಿಗಿಂತ ಭಿನ್ನವಾಗಿರುವುದಿಲ್ಲ ಎಂಬುದನ್ನು ತೋರಿಸುತ್ತದೆ. ಸುಂಡೆಕಾಯಿ, ಅರಗೆಸೊಪ್ಪು, ಬಿದಿರು, ಅರೆಹಣ್ಣು, ಗೆಣಸಿನಿಂದ ಮಾಡಿದ ಯಾವುದೇ ಸಾಂಪ್ರದಾಯಿಕ ಆಹಾರ ಪದಾರ್ಥಗಳ ಪ್ರಸ್ತಾಪವೇ ಇಲ್ಲಿಲ್ಲ. ಇವು ವಿಶೇಷ ಸಂದರ್ಭಗಳಿಗೆ ಮಾತ್ರ ಮೀಸಲು. ಇದಕ್ಕೆ ಮುಖ್ಯ ಕಾರಣ, ಕಾಡಿನ ಹೊರಗೆ ಈ ಉತ್ಪನ್ನಗಳನ್ನು ಸಂಗ್ರಹಿಸುವಲ್ಲಿನ ಕಷ್ಟ. ಮತ್ತೊಂದು ಕಾರಣವೆಂದರೆ, ಪಡಿತರ ವ್ಯವಸ್ಥೆ ಮೂಲಕ ಅಕ್ಕಿಯ ಲಭ್ಯತೆಯು ಅದನ್ನೇ ಮುಖ್ಯ ಆಹಾರವನ್ನಾಗಿಸಿದೆ. ಕಿರುಧಾನ್ಯಗಳು ದುಬಾರಿ, ಜೊತೆಗೆ ಬೇಯಿಸಲು ಹೆಚ್ಚು ಕಷ್ಟಪಡಬೇಕು. ಮೂರನೆಯ ಕಾರಣ, ಮಾಧ್ಯಮ (ಮುಖ್ಯವಾಗಿ ಟೀವಿ) ಅಥವಾ ಪ್ರವಾಸಿಗರು ಹಾಗೂ ಸಂದರ್ಶಕರ ಮೂಲಕ ಹೊಸ ಆಹಾರ ಉತ್ಪನ್ನಗಳಿಗೆ ತೆರೆದುಕೊಳ್ಳುವುದು. ‘ಪೋಡು’ಗಳ ಬಳಿ ಪೊದೆಗಳಲ್ಲಿ ಬಿಸಾಕಿರುವ ಖಾಲಿಯಾದ ಚಿಪ್ಸ್, ನೂಡಲ್ಸ್‌ನಂತಹ ಪ್ಯಾಕೆಟ್‌ಗಳು ಕಾಣಸಿಗುವುದು ಮಾಮೂಲು.
ಸಾಮಾನ್ಯ ಜನರಿಗೆ ಸಂಬಂಧಿಸಿದಂತೆ ಆಹಾರ ಭದ್ರತೆ ಹಾಗೂ ಪೌಷ್ಟಿಕತೆ ಪರಿಣಾಮಗಳ ಬಗ್ಗೆ ಅಂಕಿಅಂಶಗಳು ಲಭ್ಯವಿದ್ದರೂ ಆದಿವಾಸಿ ಸಮುದಾಯಗಳ ಬಗ್ಗೆ ಅಂತಹ ಮಾಹಿತಿಯು ವಿರಳ ಹಾಗೂ ಕಂಡುಕೊಳ್ಳುವುದೂ ಕಷ್ಟದಾಯಕ. ಹೀಗಾಗಿ, ಸಾಮಾನ್ಯವಾದ ಪೌಷ್ಟಿಕತೆ ಅಳತೆಗೋಲುಗಳ ಮೇಲೆ- ವಯಸ್ಸಿಗೆ ತಕ್ಕಷ್ಟಿಲ್ಲದ ಎತ್ತರ ಹಾಗೂ ವಯಸ್ಸಿಗೆ ತಕ್ಕ ತೂಕ ಇಲ್ಲದಿರುವುದರ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಅಳೆಯುವುದು ಕಷ್ಟ; ಹಾಗೆಯೇ ಹೃದಯ ಕಾಯಿಲೆ ಹಾಗೂ ಕ್ಯಾನ್ಸರ್‌ನಂತಹ ತೀವ್ರ ಕಾಯಿಲೆಗಳ ಹರಡುವಿಕೆಯೂ ಕಾಲಕ್ರಮೇಣ ಬದಲಾಗಿದೆಯೇ ಎಂಬುದನ್ನೂ ಅಳೆಯುವುದು ಕಷ್ಟ. ಆದರೆ, ಅಂತಹ ಆಹಾರ ಪದ್ಧತಿಗಳ ಬದಲಾವಣೆ
ಗಳಿಂದ ಆಗುವ ಪರಿಣಾಮಗಳ ಬಗ್ಗೆ ನಮಗೆ ಗೊತ್ತಿರುವ ಅಂಶಗಳಿಂದ ಊಹಿಸುವುದಾದಲ್ಲಿ ಇದು ಹೆಚ್ಚಿನ ಮಟ್ಟಿಗೆ ನಕಾರಾತ್ಮಕವಾಗಿರುತ್ತದೆ ಎನ್ನಬಹುದು. ಸೋಲಿಗರ ಈ ವಿದ್ಯಮಾನವು ರಾಷ್ಟ್ರದಾದ್ಯಂತ ಎಲ್ಲಾ ಆದಿವಾಸಿ ಸಮುದಾಯಗಳಲ್ಲಿ ಅನುರಣಿಸಿದೆ.
ಕಡೆಯದಾಗಿ, ನಾವು ಕಂಡುಕೊಂಡಿರುವುದೇನೆಂದರೆ, ಸರ್ಕಾರದ ನೀತಿಗಳು ಹಾಗೂ ಕಾರ್ಯ
ಕ್ರಮಗಳು ದೂರಗಾಮಿ ಪರಿಣಾಮಗಳನ್ನು ಹೊಂದಿವೆ. ಉದಾಹರಣೆಗೆ, ಬೆಟ್ಟಗಳ ನೈಸರ್ಗಿಕ ಪರಿಸರ ಉಳಿಸಿ ಸಂರಕ್ಷಿಸಿ ಹುಲಿಗೆ ಸುರಕ್ಷಿತ ತಾಣ ಒದಗಿಸ ಬಯಸುವ ನೀತಿಗಳು ಸೋಲಿಗ ಆಹಾರ ಪದ್ಧತಿಯ ವೈವಿಧ್ಯ ಹಾಗೂ ಲಭ್ಯತೆಯ ಮೇಲೆ ಆಳವಾದ ಪರಿಣಾಮಗಳನ್ನು ಬೀರಿವೆ. ಹೀಗಾಗಿ ವಿಸ್ತೃತವಾದ, ಹೆಚ್ಚು ಒಳಗೊಳ್ಳುವ ದೃಷ್ಟಿ ಅಗತ್ಯ. ಸಮುದಾಯ ಹಾಗೂ ಸಮುದಾಯದ ಪ್ರತಿನಿಧಿಗಳಿಗೆ ದನಿ ನೀಡುವುದಲ್ಲದೆ ಬಹುವಲಯಗಳ ಭಾಗೀದಾರರನ್ನು ಒಂದೆಡೆ ತರುವುದರಿಂದ ಸರ್ಕಾರದ ಕ್ರಮಗಳು ಅಪೇಕ್ಷಿತ ಫಲಿತಾಂಶ ನೀಡಬಲ್ಲವು.
ಲೇಖಕಿಯರು: ಶ್ರೀಲತಾ ರಾವ್ ಶೇಷಾದ್ರಿ– ಪ್ರಾಧ್ಯಾಪಕಿ, ರಾಮಲಿಂಗಸ್ವಾಮಿ ಸೆಂಟರ್ ಫಾರ್ ಈಕ್ವಿಟಿ ಆ್ಯಂಡ್ ಸೋಷಿಯಲ್ ಡಿಟರ್ಮಿನೆಂಟ್ಸ್ ಆಫ್ ಹೆಲ್ತ್, ಬೆಂಗಳೂರು.ಶೀತಲ್ ಪಾಟೀಲ್– ಹಿರಿಯ ಸಂಶೋಧಕಿ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.