ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನಮ್ಮ ಬಹುಪಕ್ಷೀಯ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯ ನೋಡಿದರೆ, ಆ ಪಕ್ಷದ ಚಿಂತನೆಯ ಧಾಟಿ ಯಾರಿಗಾದರೂ ಸುಲಭವಾಗಿ ಅರ್ಥವಾಗುತ್ತದೆ. 2014 ಮತ್ತು 2019ರ ಲೋಕಸಭಾ ಚುನಾವಣೆಗಳು ವ್ಯಕ್ತಿಕೇಂದ್ರಿತ ಹಾಗೂ ಭಾವನಾತ್ಮಕ ವಿಷಯಗಳ ವಿಜೃಂಭಣೆಯಿಂದಾಗಿ, ಸಂಸದೀಯ ಪ್ರಜಾಪ್ರಭುತ್ವದ ಚುನಾವಣೆಗಿಂತ ಅಧ್ಯಕ್ಷೀಯ ಮಾದರಿ ಚುನಾವಣೆಯ ರೀತಿಯಂತಿದ್ದವು. ‘ಮೋದಿ, ಮೋದಿ’ ಎಂಬ ಕೂಗಿಗೆ ಪ್ರತಿಯಾಗಿ ಇನ್ನೊಬ್ಬ ವ್ಯಕ್ತಿ ಮತ್ತು ಪಕ್ಷ ಸಾಟಿಯಾಗಿ ನಿಲ್ಲುವಂತಾಗಲಿಲ್ಲ.
ಹಾಗೆ ನೋಡಿದರೆ, ಪ್ರಾದೇಶಿಕ ಪಕ್ಷಗಳೇ ಗಟ್ಟಿಯಾಗಿ ಮತ್ತು ಧೈರ್ಯವಾಗಿ ಚುನಾವಣೆ ಎದುರಿಸಿದವು ಎನ್ನಬೇಕು. ಆದರೆ ಹೀಗೆ ಸಿಕ್ಕ ‘ಅಳಕ್ ಮೇಲೆ ಪುಳಕ್’ ಎಂಬ ವಿಜಯೋನ್ಮಾದದಲ್ಲಿ, ನಮ್ಮ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಬಿಜೆಪಿ ನಾಯಕ ಅಪಸ್ವರ ಎತ್ತಿರುವುದು ವಿಷಾದಕರ. ನಮ್ಮ ಸಂವಿಧಾನವನ್ನು ರಚಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡ ಮಹಾನುಭಾವರ ವ್ಯಾಪಕ ಅಧ್ಯಯನಶೀಲತೆ, ಅಪಾರ ಅನುಭವ, ಪ್ರೌಢಿಮೆ, ಬದ್ಧತೆ, ಸೈದ್ಧಾಂತಿಕ ಸ್ಪಷ್ಟತೆ, ಜನರ ಬಗೆಗಿನ ಕಾಳಜಿ, ನಡೆಸಿದ ಬೌದ್ಧಿಕ ಸಂವಾದ, ಹಾಕಿದ ಪರಿಶ್ರಮ ಇವುಗಳನ್ನು, ಬರೀ ಎರಡು ಚುನಾವಣೆಗಳನ್ನು ಗೆದ್ದ ಅಹಂನಲ್ಲಿ ಶಾ ಲಘುವಾಗಿ ಕಾಣುತ್ತಾರೆಂದರೆ, ಅದು ಅವರ ಕುಬ್ಜತನವೆಂದೇ ಹೇಳಬೇಕು. ಹಾಗೆಂದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯು ಮರುವಿಮರ್ಶೆಗೆ ಒಳಪಡಲೇಬಾರದು ಎಂಬುದು ನನ್ನ ಅಭಿಪ್ರಾಯವಲ್ಲ. ಆದರೆ ಜನರು ಬಯಸುವ ಅಥವಾ ಬಯಸಬಹುದಾದ ರೀತಿಗೂ, ಬಿಜೆಪಿಯ ರೀತಿಗೂ ವ್ಯತ್ಯಾಸವಿದೆ ಎಂಬುದು ನನ್ನ ಅನುಮಾನ.
ಸಂವಿಧಾನ ರಚನಾ ಕಾರ್ಯ ಆರಂಭವಾದಾಗ ಪ್ರಜಾಪ್ರಭುತ್ವ ಮಾದರಿಯನ್ನು ನಾವು ಒಪ್ಪಿಕೊಂಡೆವು. ಸಂಸದೀಯ ಪ್ರಜಾಪ್ರಭುತ್ವ ಬೇಕೋ ಅಥವಾ ಅಧ್ಯಕ್ಷೀಯ ಮಾದರಿ ಪ್ರಜಾಪ್ರಭುತ್ವ ಬೇಕೋ ಎಂಬ ಬಗ್ಗೆ ಚರ್ಚೆಯಾದಾಗ, ನಮ್ಮ ದೇಶದ ಸ್ವರೂಪಕ್ಕೆ, ಬಹುತ್ವದ ರೀತಿಗೆ ಸಂಸದೀಯ ಪ್ರಜಾಪ್ರಭುತ್ವವೇ ಹೆಚ್ಚು ಸಮಂಜಸ ಮತ್ತು ಒಪ್ಪಿತ ಎಂಬ ನಿರ್ಧಾರಕ್ಕೆ ಬಂದೆವು. ಆ ಸಂದರ್ಭದಲ್ಲಿ ನೆಹರೂ ಹೇಳಿದ ಮಾತನ್ನು ನಾವು ಜ್ಞಾಪಿಸಿಕೊಳ್ಳಬಹುದಾಗಿದೆ:
‘ನಾವು ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಂಡೆವು. ಈ ಹಿಂದೆ ಈ ನೆಲೆಯಲ್ಲಿ ಆಲೋಚಿಸಿದ್ದೆವು ಎಂಬುದಕ್ಕಷ್ಟೇ ಅಲ್ಲ, ಇದು ನಮ್ಮ ಪರಂಪರೆಗೆ ಪೂರಕ ಎಂಬ ಕಾರಣಕ್ಕಾಗಿಯೂ ಆಯ್ಕೆ ಮಾಡಿಕೊಂಡೆವು. ಹಳೆಯ ಪರಂಪರೆಯನ್ನು ಯಥಾವತ್ತಾಗಿ ಮುಂದುವರಿಸಲಿಲ್ಲ. ಅದನ್ನು ಹೊಸ ಸಂದರ್ಭಕ್ಕೆ ಹೊಂದಿಸಿದೆವು. ಈ ವ್ಯವಸ್ಥೆ ಬೇರೆ ದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಬ್ರಿಟನ್ನಿನಲ್ಲಿ ಕ್ರಿಯಾರೂಪದಲ್ಲಿ ಇರುವ ಬಗೆ ನಮಗೆ ತೃಪ್ತಿ ನೀಡಿತ್ತು’.
ಈ ಮಾತುಗಳನ್ನು ಗಮನಿಸಿದಾಗ, ನಮ್ಮ ಸಂವಿಧಾನ ರಚನಾಕಾರರು ಸಾಕಷ್ಟು ಚರ್ಚೆ, ಸಂವಾದ, ಅಧ್ಯಯನ ನಡೆಸಿ, ದೇಶದ ಪರಂಪರಾಗತ ಸಂಸ್ಕೃತಿ, ಸಂಸ್ಕಾರಗಳನ್ನೂ, ವೈವಿಧ್ಯಮಯ ಸ್ವರೂಪವನ್ನೂ ಗಮನಿಸಿ, ಅಳೆದೂ ಸುರಿದೂ ‘ಸಂಸದೀಯ ಪ್ರಜಾಪ್ರಭುತ್ವ’ವನ್ನು ಅಳವಡಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ಈ ವ್ಯವಸ್ಥೆ ಜಾರಿಗೆ ಬಂದ 70 ವರ್ಷಗಳ ಬಳಿಕ ಇದರ ಬಗ್ಗೆ ಮರುಚಿಂತನೆಯ ಎಳೆಯೊಂದು ಬಂದರೆ ಅದು ತಪ್ಪಲ್ಲ. ಆದರೆ ಇಂತಹ ಮರುಚಿಂತನೆಗೆ ವ್ಯವಸ್ಥೆ ದೋಷಪೂರಿತವೋ ಅಥವಾ ವ್ಯವಸ್ಥೆಯನ್ನು ನಿಭಾಯಿ ಸುತ್ತಿರುವ ನಾವು ದೋಷಪೂರಿತರೋ ಎಂದು ಯೋಚಿಸಬೇಕಾಗುತ್ತದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾವು 1950ರಲ್ಲಿ ಒಪ್ಪಿಕೊಂಡ ಮೇಲೆ ಈವರೆಗೆ 17 ಲೋಕಸಭಾ ಚುನಾವಣೆಗಳು ರಕ್ತರಹಿತವಾಗಿ ನಡೆದಿವೆ. ವಿವಿಧ ಸೈದ್ಧಾಂತಿಕ ಹಿನ್ನೆಲೆಯ ಪಕ್ಷಗಳು ಅಥವಾ ಪಕ್ಷಗಳ ಗುಂಪಿನ ಸರ್ಕಾರಗಳು ಅಧಿಕಾರ ನಡೆಸಿವೆ.
ಪ್ರತೀ ಚುನಾವಣೆ ನಡೆದ ಮೇಲೆ ಯಾವುದೇ ಸಂಘರ್ಷವಿಲ್ಲದೆ ಅಧಿಕಾರ ಹಸ್ತಾಂತರವಾಗಿದೆ. ಇದನ್ನು ಗಮನಿಸಿದಾಗ, ಅಷ್ಟರಮಟ್ಟಿಗೆ ಸಂಸದೀಯ ಪ್ರಜಾ ಪ್ರಭುತ್ವ ವ್ಯವಸ್ಥೆ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚೆನ್ನಾಗಿಯೇ ಯಶಸ್ವಿಯಾಗಿದೆ ಎಂದು ಹೆಮ್ಮೆಯಿಂದ ಬೀಗಲಡ್ಡಿಯಿಲ್ಲ. ಆದರೆ, ಹೀಗಿದ್ದೂ ಈ ವ್ಯವಸ್ಥೆಯ ಬಗ್ಗೆ ‘ಒಡಕು’ ಮಾತುಗಳು ಏಕೆ ಕೇಳಿಬರುತ್ತವೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಇದಕ್ಕೆ ಉತ್ತರವೆಂಬಂತೆ, ಸುಪ್ರೀಂ ಕೋರ್ಟ್ ತೀರ್ಪೊಂದು ಜ್ಞಾಪಕಕ್ಕೆ ಬರುತ್ತದೆ.
‘ಸಂಸದೀಯ ಪ್ರಜಾಪ್ರಭುತ್ವ’ ವ್ಯವಸ್ಥೆಯನ್ನು ವ್ಯಾಖ್ಯಾನಿಸುತ್ತಾ, ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠ ಹೀಗೆ ಹೇಳಿದೆ: ‘ಸಂಸದೀಯ ಪ್ರಜಾಪ್ರಭುತ್ವವು ಮೂರು ವಿಷಯಗಳನ್ನು ಹೇಳುತ್ತದೆ. 1. ಜನರ ಪ್ರಾತಿನಿಧ್ಯ 2. ಜವಾಬ್ದಾರಿಯುತ ಸರ್ಕಾರ 3. ಮಂತ್ರಿಮಂಡಲವು ಶಾಸಕಾಂಗಕ್ಕೆ ಉತ್ತರದಾಯಿ ಆಗಿರುವುದು. ಇದರ ಉದ್ದೇಶ, ಶಾಸಕಾಂಗದ ಮೂಲಕ ಕಾರ್ಯಾಂಗದ ಮೇಲೆ ಜನರಿಗೆ ನೇರ ಅಧಿಕಾರ ಇರಬೇಕು ಎಂಬುದು. ಸಂಸದೀಯ ಪ್ರಜಾತಂತ್ರದ ಗುಣ ಅಂತಿಮವಾಗಿ ತೀರ್ಮಾನ ಆಗುವುದು ಜನರ ಪ್ರತಿನಿಧಿಗಳಾಗಿ ಶಾಸನಸಭೆಗೆ ಬರುವವರ ಗುಣಮಟ್ಟ ಆಧರಿಸಿ. ಚುನಾವಣೆಗಳು ಪ್ರಜಾತಂತ್ರದ ಮಾಪಕಗಳು, ಅಭ್ಯರ್ಥಿಗಳು ಸಂಸದೀಯ ವ್ಯವಸ್ಥೆಯ ಜೀವನಾಡಿಗಳು ಎಂಬ ಮಾತಿದೆ...’ (ಎಸ್.ಆರ್. ಚೌಧರಿ ಮತ್ತು ಪಂಜಾಬ್ ಸರ್ಕಾರದ ನಡುವಿನ ಪ್ರಕರಣ).
ಅಂದರೆ ನಮ್ಮ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳ ಇರುವುದು ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಮತ್ತು ಆಯ್ಕೆಯಾಗುವ ಜನಪ್ರತಿನಿಧಿಗಳ ಗುಣಮಟ್ಟದಲ್ಲಿ ಎಂಬುದು ನಾವು ಒಪ್ಪಬೇಕಾದ ಸಂಗತಿ. ಹಾಗಾಗಿ ನಮ್ಮ ಚುನಾವಣಾ ಪದ್ಧತಿ ಮತ್ತು ಪ್ರಕ್ರಿಯೆಗಳು ಹೀಗೆ ಗುಣಮಟ್ಟದ ಅಭ್ಯರ್ಥಿಗಳು ಸ್ಪರ್ಧಿಸಿ ಆಯ್ಕೆಯಾಗುವಂತಹ ಪೂರಕ, ಕಾರಕ, ಪ್ರೇರಕ ವಾತಾವರಣವನ್ನು ಸೃಷ್ಟಿಸುವುದೊಂದೇ ಈಗ ಇರುವ ದಾರಿ.
ಅದನ್ನು ಬಿಟ್ಟು ಶಾ ಅವರು ಸಂಸದೀಯ ಪ್ರಜಾಪ್ರಭುತ್ವವೇ ಬೇಡವೆನ್ನುವ ಧಾಟಿಯಲ್ಲೋ ಅಥವಾ ಎರಡೇ ಎರಡು ಪಕ್ಷಗಳು ಸಾಕು ಎಂಬಂತೆಯೋ ಮಾತನಾಡುತ್ತಿರುವುದನ್ನು ನೋಡಿದರೆ, 2014ರಿಂದ ನಮ್ಮನ್ನು ಕಾಡುತ್ತಿದ್ದ ಆತಂಕ ನಿಜವಾಗುವ ಲಕ್ಷಣಗಳು ಕಾಡತೊಡಗಿವೆ. ‘ಏಕವ್ಯಕ್ತಿ, ಏಕಪಕ್ಷ’,‘ಏಕದೇಶ, ಏಕ ಕಾನೂನು’, ‘ಏಕದೇಶ, ಏಕತೆರಿಗೆ’ ‘ಏಕದೇಶ, ಏಕಭಾಷೆ’ ಎಂಬ ಏಕ, ಏಕ, ಏಕ ಎಂಬ ಮಾತುಗಳೇ ನಮ್ಮ ಬಹುತ್ವ ಸಂಸ್ಕೃತಿಯನ್ನು ಕೊಲ್ಲುವ ಸಂಚೇನೋ ಅನ್ನಿಸತೊಡಗಿದೆ.
ಜನತಂತ್ರದ ಪೋಷಾಕಿನಲ್ಲಿ ನಿರಂಕುಶತೆಯ ಕೊಳಕು ಕಾಣತೊಡಗಿದೆ. ಅದರಲ್ಲೂ ನಮ್ಮ ದೇಶದ ಫೆಡರಲ್ ಸಂಸ್ಕೃತಿಯಲ್ಲಿ ದ್ವಿಪಕ್ಷೀಯ ವ್ಯವಸ್ಥೆಯನ್ನು ಒಪ್ಪಲು ಸಾಧ್ಯವೇ ಇಲ್ಲ.ನಿಜ, ದೇಶದಲ್ಲಿ ಅನಪೇಕ್ಷಿತ ಪಕ್ಷಗಳು, ಪ್ರಾದೇಶಿಕ ಪಕ್ಷಗಳು, ಕುಟುಂಬ ಆಧಾರಿತ ಪಕ್ಷಗಳು– ಹೀಗೆ ಅಸಂಖ್ಯಾತ ಪಕ್ಷಗಳು ಇರಬಹುದು. ಹಾಗೆಂದು ಅವುಗಳೆಲ್ಲವನ್ನೂ ತೊಡೆದುಹಾಕಿ ಎರಡೇ ಪಕ್ಷಗಳ ವ್ಯವಸ್ಥೆ ತರುತ್ತೇವೆ ಎಂಬುದನ್ನು ಜಯಪ್ರಕಾಶ್ ನಾರಾಯಣ್ ಅವರು ನೆಹರೂ ಅವರ ಕಾಲದಲ್ಲಿಯೇ ವಿರೋಧಿಸಿದ್ದರು. ನೆಹರೂರಂತಹ ನಾಯಕರೇ 1957ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ವಿರೋಧ ಪಕ್ಷಗಳನ್ನು ದಮನಿಸಲು ಮುಂದಾದಾಗ ಜೆ.ಪಿ.ಯವರು ಅವರಿಗೆ ಪತ್ರವೊಂದನ್ನು ಬರೆದು ಹೀಗೆ ಎಚ್ಚರಿಸಿದ್ದರು:
‘...ಸಂಸದೀಯ ಪ್ರಜಾಪ್ರಭುತ್ವದ ಸಿದ್ಧಾಂತದ ಪ್ರಕಾರ ವಿರೋಧ ಪಕ್ಷಗಳು ಆಡಳಿತ ಪಕ್ಷಕ್ಕಿಂತ ಉತ್ತಮವಾಗಿ ಇರಬೇಕಾಗಿಲ್ಲ. ಕೆಟ್ಟ ವಿರೋಧ ಪಕ್ಷಗಳು ಒಂದರ ವಿರುದ್ಧ ಮತ್ತೊಂದು ಪ್ರತಿಬಂಧಕವಿದ್ದಂತೆ. ಹೀಗಿದ್ದುಕೊಂಡೇ ಅವು ಪ್ರಜಾಸತ್ತಾತ್ಮಕ ಯಂತ್ರ ಹಳಿ ತಪ್ಪದಂತೆ ನೋಡಿಕೊಳ್ಳುತ್ತವೆ. ...ನಿರಂಕುಶ ಅಧಿಕಾರ ಮತ್ತು ಅನಪೇಕ್ಷಿತ ಪಕ್ಷಗಳು ಸ್ವಲ್ಪಮಟ್ಟಿಗೆ ಬಲಶಾಲಿಯಾಗುವುದು– ಈ ಎರಡು ಅಪಾಯಗಳಲ್ಲಿ ನಿರಂಕುಶ ಪ್ರಭುತ್ವವೇ ಹೆಚ್ಚು ವಿನಾಶಕಾರಿ. ಎರಡನೆಯದಾಗಿ, ಚುನಾವಣೆಯ ನಂತರ ಆರೋಗ್ಯಪೂರ್ಣವಾದ ವಿರೋಧ ಪಕ್ಷ ಕಟ್ಟಲು ಐದು ವರ್ಷಗಳ ಕಾಲಾವಧಿ ಇರುತ್ತದೆ’ (ರಾಮಚಂದ್ರ ಗುಹಾ ಅವರ ‘ಪ್ರಜಾಪ್ರಭುತ್ವವಾದಿಗಳು ಮತ್ತು ಭಿನ್ನಮತೀಯರು’ ಕೃತಿಯಿಂದ). ಆದುದರಿಂದ ವಿರೋಧ ಪಕ್ಷಗಳೇ ಇಲ್ಲದ ದೇಶ ಕಟ್ಟುವ ಹುಮ್ಮಸ್ಸಿ ನಿಂದಲೋ ಹುಂಬತನದಿಂದಲೋ ಹೊರಟಿರುವ ಜನರಿಗೆ ಜೆ.ಪಿ.ಯವರ ಮಾತು ಅರ್ಥವಾಗುತ್ತದೆಂದು ಭಾವಿಸುತ್ತೇನೆ. ನಮಗೆ ಅಪಾಯಕಾರಿ ಆಗಿರುವುದು ಹತ್ತೆಂಟು ರಾಜಕೀಯ ಪಕ್ಷಗಳಲ್ಲ; ನಿರಂಕುಶ ಪ್ರಭುತ್ವ.
ಲೇಖಕ: ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.