ಹದಿನೇಳನೇ ಲೋಕಸಭಾ ಚುನಾವಣೆಯ ಪ್ರಚಾರ ರಂಗೇರಿದೆ. ಯಾವುದೇ ರಾಜಕೀಯ ಪಕ್ಷ ಅಧಿಕಾರದ ಗದ್ದುಗೆ ಏರಲು ಪ್ರಚಾರ ತಂತ್ರವನ್ನು ಬಳಸದೆ ಅನ್ಯ ಮಾರ್ಗ ಇಲ್ಲವಾಗಿದೆ. ಸಾಮ್ರಾಟ ಅಶೋಕ ತನ್ನ ರಾಜನೀತಿ, ಧರ್ಮನೀತಿ ಹಾಗೂ ಪ್ರಜಾನೀತಿಯನ್ನು ಶಾಸನಗಳ ಮೂಲಕ ಎಲ್ಲೆಡೆ ಸಾರಿಕೊಂಡಿದ್ದ.
ಸಾಮ್ರಾಜ್ಯಶಾಹಿ ಜಗತ್ತು ಯಾವತ್ತೂ ಪ್ರಚಾರವನ್ನೇ ದೊಡ್ಡ ಅಸ್ತ್ರವಾಗಿ ಬಳಸಿಕೊಂಡಿದೆ. ಈಗಿನ ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯುವ ಸಲುವಾಗಿ ತಮಗೆ ಬೇಕಾದ ತತ್ವ, ಪ್ರಣಾಳಿಕೆಜಾರಿಗೆ ತಂದು, ಗೆದ್ದು ಆಳುವ ತಂತ್ರಗಳನ್ನು ಸಾಧಿಸಿಕೊಳ್ಳುತ್ತವೆ. ಅವುಗಳ ಈ ನಡೆಗೆ ಬೇಕಾದದ್ದೇ ಪ್ರಚಾರ ತಂತ್ರ. ಹೀಗಾಗಿ, ಪ್ರಚಾರ ಎನ್ನುವುದು ಒಂದು ವ್ಯವಸ್ಥಿತ ಯೋಜನೆ.
ರಾಜಕೀಯ ಎನ್ನುವುದನ್ನು ಎರಡು ಬಗೆಯಲ್ಲಿ ಗ್ರಹಿಸಬಹುದು. ಒಂದು, ರಾಜಕೀಯ ಪಕ್ಷಗಳು ತಮ್ಮ ತತ್ವ ಪ್ರತಿಪಾದನೆಗಾಗಿ ಹಲವು ಬಗೆಯ ಆಮಿಷಗಳನ್ನು ಒಳಗೊಂಡ ಪ್ರಚಾರತಂತ್ರಗಳನ್ನು ಹೆಣೆಯುವುದು. ಮತ್ತೊಂದು, ಎದುರಾಳಿಗಳ ವಿರುದ್ಧ ಅಪಪ್ರಚಾರದ ಅಸ್ತ್ರವನ್ನು ಚಲಾಯಿಸುವುದು. ಈ ಎರಡೂ ನೆಲೆಗಳು ಚುನಾವಣೆಗಳ ಸಂದರ್ಭದಲ್ಲಿ ಸೋಲು– ಗೆಲುವಿನ ಮೇಲೆ ನಿರ್ಣಾಯಕ ಪ್ರಭಾವ ಬೀರುತ್ತವೆ.
ಸರ್ವಾಧಿಕಾರಿಗಳು ತಮ್ಮದೇ ನೆಲೆಯ ಪ್ರಚಾರಗಳ ಮೂಲಕ ಯಜಮಾನಿಕೆ ಸ್ಥಾಪಿಸಿದ್ದರು. ಮಾರ್ಕ್ಸ್ ತತ್ವದಡಿ ಸ್ಟಾಲಿನ್ ಸರ್ವಾಧಿಕಾರಿಯಂತೆ ಪ್ರಚಾರಾಂದೋಲನ ನಡೆಸಿದ. ಅದೇ ವೇಳೆ, ಹಿಟ್ಲರ್ ಬಲಪಂಥೀಯ ತತ್ವದ ಜನಾಂಗವಾದದ ಅಡಿ ಸರ್ವಾಧಿಕಾರ ಸ್ಥಾಪಿಸಿ, ಭೀಕರ ಅಪಪ್ರಚಾರಗಳನ್ನು ನಡೆಸಿದ. ಮಧ್ಯಕಾಲೀನ ಯುಗದಲ್ಲಿ ಧರ್ಮ ಪ್ರಚಾರಕರು ತಮ್ಮ ಧರ್ಮ ಪ್ರಚಾರದ ಜೊತೆಯಲ್ಲಿ ಧರ್ಮಯುದ್ಧಗಳ ಜಾಡನ್ನೂ ಹಿಡಿದು ಆ ದಾರಿಯನ್ನು ಇಂದಿಗೂ ಉಳಿಸಿಹೋಗಿದ್ದಾರೆ.
ಎರಡನೇ ಮಹಾಯುದ್ಧವು ಪ್ರಭುತ್ವಗಳು ನಡೆಸಿದ ಅಪಪ್ರಚಾರಗಳ ಸುವರ್ಣಯುಗ. ಎಂತಹ ವಿಪರ್ಯಾಸ; ಜಗತ್ತು ಸುಳ್ಳುಗಳನ್ನು ಹರಾಜು ಮಾಡಿ ಸುಳ್ಳಿನ ಸ್ವರ್ಗ ಕಟ್ಟಲು ಅಧಿಕಾರವನ್ನೇ ದುರ್ಬಳಕೆ ಮಾಡಿಕೊಂಡಿತು. ಈಗ ವಿದ್ಯುನ್ಮಾನ ಮಾಧ್ಯಮಗಳು ಹಾಗೂ ಮಾಹಿತಿ ತಂತ್ರಜ್ಞಾನದ ಶರವೇಗದ ‘ಪ್ರಚಾರ ನಾಗರಿಕತೆ’ಯ ಕಾಲ. ಇಡೀ ದೇಶ ಡಿಜಿಟಲೈಜ್ ಆಗುತ್ತಿದೆ. ಡಿಜಿಟಲ್ ಪ್ರಜಾಪ್ರಭುತ್ವದಲ್ಲಿ ಅವರವರ ಕಿಸೆಯ ಸ್ಮಾರ್ಟ್ ಫೋನ್‍ಗಳಲ್ಲಿ ಲೆಕ್ಕವಿಲ್ಲದಷ್ಟು ಪ್ರಚಾರಗಳು ಬಿಟ್ಟಿಯಾಗಿ ಬಂದು ಬೀಳುತ್ತಾ, ಬೆರಳ ತುದಿಗಾಗಿ ಕಾಯುತ್ತಿರುತ್ತವೆ. ವಿದ್ಯುನ್ಮಾನ ಮಾಧ್ಯಮಗಳೀಗ ಪ್ರಚಾರ-ಅಪಪ್ರಚಾರಗಳ ಕಾರ್ಖಾನೆಗಳಾಗಿ ಸುದ್ದಿ ಮಾಲಿನ್ಯದಿಂದ ಮನೆ ಮನೆಗಳ ಮನಸ್ಸನ್ನೆಲ್ಲ ಕಲುಷಿತಗೊಳಿಸುತ್ತಿವೆ. ಇಡೀ ದೇಶದ ಪ್ರಜಾಪ್ರಭುತ್ವವೇ ಪ್ರಚಾರ, ಅಪಪ್ರಚಾರಗಳ ಹುಚ್ಚು ಹೊಳೆಯಲ್ಲಿ ತೇಲುತ್ತಿದೆ.
ವಿದ್ಯುನ್ಮಾನ ಮಾಧ್ಯಮ ಕೆಟ್ಟದ್ದಲ್ಲ. ಆದರೆ, ಆ ಮಾಧ್ಯಮವು ರಾಜಕೀಯ ಪಕ್ಷಗಳ ದಲ್ಲಾಳಿಯಂತೆ, ವಕ್ತಾರನಂತೆ ವರ್ತಿಸುತ್ತಾ ‘ಪ್ರಚಾರ ಸರ್ವಾಧಿಕಾರಿ’ ಆಗುವುದು ಅಪಾಯಕಾರಿ. ಸುದ್ದಿಜಾಲಗಳ ಯಜಮಾನರು ಯಾರು, ಅವರು ಪ್ರಚುರಪಡಿಸುತ್ತಿರುವ ವಿಚಾರಗಳು ಯಾವ ನೆಲೆಯವು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ, ದೇಶದ ಬಹುತೇಕ ಪ್ರಚಾರ ಮಾಧ್ಯಮಗಳ ಧಣಿಗಳೆಲ್ಲರೂ ರಾಜಕಾರಣಿಗಳು, ಬೃಹತ್ ಬಂಡವಾಳಿಗರು ಮತ್ತು ಮೇಲ್ವರ್ಗದವರು ಎಂಬುದು ತಿಳಿಯುತ್ತದೆ. ಹಿಂದುತ್ವ ಪರ ರಾಜಕೀಯವೂ ದೇಶಭಕ್ತಿಯನ್ನು ಬಂಡವಾಳವಾಗಿಯುಳ್ಳ ಪ್ರಚಾರತಂತ್ರವೇ ಆಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನದ ಅತ್ಯುತ್ತಮ ಆವಿಷ್ಕಾರಗಳಿಂದ ವಿದ್ಯುನ್ಮಾನ ಮಾಧ್ಯಮ ಈಗ ಸನ್ನದ್ಧವಾಗಿದೆ. ಆದರೆ ಅದೀಗ ಪ್ರಜಾಪ್ರಭುತ್ವವನ್ನು ಕೇವಲ ಅಪಪ್ರಚಾರಗಳ ಜಾತ್ರೆಯಾಗಿ ಪರಿವರ್ತಿಸುತ್ತಿದೆ. ರಾಜಕೀಯ ನಾಯಕರ ಭಾಷಣಗಳನ್ನು ಆಲಿಸಿದರೆ, ಪ್ರಚಾರವೇ ಪ್ರಜಾಪ್ರಭುತ್ವದ ಮೂಲ ಬಂಡವಾಳ ಆಗಿರುವುದು ತಿಳಿಯುತ್ತದೆ. ಇಂತಲ್ಲಿ ಯಾವುದೇ ಪಕ್ಷ ಗೆದ್ದುಬಂದು ಸರ್ಕಾರ ನಡೆಸಿ
ದರೂ ಅದಕ್ಕೆ ಸಂವಿಧಾನ ಮುಖ್ಯವಲ್ಲ, ದೇಶ ಪ್ರಧಾನ ಅಲ್ಲ, ಸಾಮಾನ್ಯ ಜನರೇ ಆತ್ಯಂತಿಕ ಅಲ್ಲ. ಸಾಮಾನ್ಯನಿಂದ ಹಿಡಿದು ಪ್ರಧಾನಿ ತನಕ ಎಲ್ಲರೂ ಪ್ರಚಾರದಲ್ಲಿರಲು ಬಯಸುವ ಅಪ್ಪಟ ಪ್ರಚಾರ ಯುಗವಿದು. ಸ್ಮಾರ್ಟ್ ಫೋನ್ ಉಳ್ಳವರೆಲ್ಲ ‘ಸ್ಮಾರ್ಟ್ ಸಿಟಿಜನ್ಸ್’ ಎನ್ನು
ವಂತಾಗಿದೆ. ಫೇಸ್‍ಬುಕ್ ಹೇಗೆ ಒಂದು ಸ್ವಪ್ರಚಾರ ಮಾಧ್ಯಮವೋ ಹಾಗೆಯೇ ಜಗತ್ತಿನ ಎಲ್ಲ ದೇಶಗಳ ರಾಜಕಾರಣವೂ ಸ್ವಪ್ರಚಾರದ ಅಮಲಿನಲ್ಲಿ ಮುಳುಗಿದೆ. ಚುನಾವಣೆಗಳ ಸಂದರ್ಭವು ಮಾಧ್ಯಮಗಳು ನಡೆಸುವ ಪ್ರಚಾರಕ್ಕೆ ಸುಗ್ಗಿಯ ಕಾಲ.
ಇದೇ ರೀತಿಯ ಪ್ರಚಾರವನ್ನೇ ಅವಲಂಬಿಸಿ ಆಡಳಿತ ನಡೆಸಬಹುದು ಎಂದು ನಾಗರಿಕ ಜಗತ್ತು ಭಾವಿಸಿದರೆ, ಮನುಕುಲದ ಮೇಲೆ ಅದು ಬೀರಬಹುದಾದ ಪರಿಣಾಮಗಳು ಏನಿರಬಹುದು? ವಿವರಿಸಲಾಗದು. ವಾಸ್ತವದಲ್ಲಿ, ಪ್ರಚಾರವನ್ನು ನಂಬಿ ಜೀವಜಾಲ ಬದುಕಿಲ್ಲ. ಪ್ರತಿ
ಯೊಂದು ರಾಷ್ಟ್ರೀಯ ರಾಜಕೀಯ ಪಕ್ಷವೂ ತನ್ನ ಸಲುವಾಗಿ ಮಾಡಿಕೊಳ್ಳುವ ಪ್ರಚಾರದ ಒಟ್ಟು ಮೊತ್ತವು ವರ್ಷವೊಂದರಲ್ಲೇ ಸಾವಿರಾರು ಕೋಟಿ ರೂಪಾಯಿ ಮೀರುತ್ತದೆ. ಇನ್ನು ರಾಜಕಾರಣಿಗಳುತಮ್ಮ ಅಸ್ತಿತ್ವಕ್ಕಾಗಿ ವೈಯಕ್ತಿಕವಾಗಿ ಮಾಡಿಕೊಳ್ಳುವ ಪ್ರಚಾರದ ಒಟ್ಟು ಬಜೆಟ್ ಅಂತೂ ದೇಶದ ಬಜೆಟ್‍ನಷ್ಟೇ ಆಗಬಲ್ಲದು. ಇದಲ್ಲದೆ ಪ್ರಚಾರ ಸಂಸ್ಥೆಗಳು ಹಾಗೂ ಇಲಾಖೆಗಳ ಮೂಲಕ ಸರ್ಕಾರಗಳು ಜಾಹೀರಾತಿಗಾಗಿ ಕೋಟಿಗಟ್ಟಲೆ ಹಣವನ್ನು ವ್ಯಯಿಸುತ್ತವೆ. ಈ ಹಣವೆಲ್ಲವೂ ಸಾಮಾನ್ಯ ಮತದಾರರದೇ ಆಗಿರುತ್ತದೆ.
ಪ್ರಜಾಪ್ರಭುತ್ವವನ್ನು ಅಪಪ್ರಚಾರದ ಹಾದಿಗೆಳೆದು ಗೆದ್ದು ಬರುವುದೇ ರಾಜಕೀಯ ಬಲಾಬಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಲವಾರು ಮಾಧ್ಯಮಗಳಲ್ಲಿ ಪ್ರಚಾರ ಭಾಷಣ ಮಾಡುತ್ತಾರೆ. ಅವರೊಬ್ಬ ಅತ್ಯುತ್ತಮ ಏಕಪಾತ್ರಾಭಿನಯ ಚತುರ. ಈ ಚತುರತೆ ಪ್ರಚಾರದಲ್ಲಿ ಮಾತ್ರ. ಎಲ್ಲ ರಾಜಕೀಯ ಪಕ್ಷಗಳೂ ಪ್ರಜಾಪ್ರಭುತ್ವವನ್ನು ಬಲಹೀನಗೊಳಿಸಿರುವುದು ತಮ್ಮ ಕೆಟ್ಟ ಪ್ರಚಾರಗಳಿಂದಲೇ. ಆರ್ಥಿಕ ರಾಜಕಾರಣದ ಜಾಗತೀಕರಣವು ಸರ್ವಾಧಿಕಾರವನ್ನು ಮುಕ್ತವಾಗಿ, ಎಲ್ಲರಿಗೂ ಹಿತವಾಗುವಂತೆ ಸದ್ದಿಲ್ಲದೆ ರೂಪಿಸುತ್ತದೆ. ಪ್ರಜಾಪ್ರಭುತ್ವವೇ ಪ್ರಚಾರ ಕಂಪನಿಗಳ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸಬೇಕಾದ ಬಿಕ್ಕಟ್ಟು ಎದುರಾಗಿದೆ. ಹಾಗಾಗಿಯೇ ‘ಮಾಧ್ಯಮ ಪ್ರಜಾಪ್ರಭುತ್ವ’ ಈಗ ದೇಶದ ಸಾರ್ವಭೌಮತ್ವವನ್ನೇ ಪ್ರಚಾರದ ಸರಕಾಗಿಸಿಕೊಳ್ಳುತ್ತಿರುವಂತೆ ಕಾಣುತ್ತಿದೆ.
ಸಮಾಜದ ಸಮುದಾಯಗಳ ಒಳಗಿನ ಮಾನವ ಪೂರ್ವಗ್ರಹಗಳಿಗೆ ಪ್ರಭುತ್ವಗಳು ನಡೆಸುವ ಪ್ರಚಾರ ಮತ್ತು ಅಪಪ್ರಚಾರಗಳು ಸದಾ ನೀರುಣಿಸುತ್ತಿರುತ್ತವೆ. ಎಲ್ಲ ಪ್ರಭುತ್ವಗಳೂ ಅಪಪ್ರಚಾರಗಳ ಗಾಳಿಪಟಗಳನ್ನು ಹಾರಿಬಿಡುತ್ತವೆ. ಯುದ್ಧ ವಿಮಾನಗಳನ್ನೂ ತೇಲಿಸುತ್ತವೆ. ಮುಖ್ಯವಾಗಿ, ಮುಗ್ಧ ಪ್ರಜಾಪ್ರಭುತ್ವವನ್ನು ಈ ಬಗೆಯ ಪ್ರಚಾರಗಳು ಭೀತಿಯಲ್ಲಿಡುತ್ತವೆ. ಹಾಗೆಯೇ ಅಂತಹ ಪ್ರಚಾರಗಳಿಗೆ ಬೆಂಬಲವಾಗಿ ನಡೆದುಕೊಳ್ಳುವಂತೆ ಮಾಡುತ್ತವೆ. ಜಾಗತಿಕ ರಾಜಕಾರಣದ ವಿರುದ್ಧ ಒಂದು ಉಪಾಯದ ಪ್ರಚಾರವಾಗಿಯೂ ಹಿಂದೂ ರಾಷ್ಟ್ರಕಲ್ಪನೆಯನ್ನು ಢಾಳಾಗಿ ಮಾಡಲಾಗುತ್ತಿದೆ.
ಇಂತಹ ಪ್ರಚಾರಗಳು ಅಪಾಯಕಾರಿ. ಅದರಲ್ಲಿ ಧರ್ಮಗಳು ಪ್ರಚಾರದ ಆಯುಧಗಳು ಸಹ ಆಗಿರುತ್ತವೆ. ಅಪಪ್ರಚಾರಗಳಿಂದ ಸಾಮಾಜಿಕ ಗತಿಶೀಲತೆ ದಾರಿ ತಪ್ಪುತ್ತದೆ. ಅಭಿವೃದ್ಧಿ ರಾಜಕಾರಣವು ಪ್ರಚಾರದಿಂದಲೇ ಪರಿಸರವನ್ನೂ ಕೆಡಿಸುತ್ತದೆ. ಜಗತ್ತಿನ ಭಾಷೆಗಳೆಲ್ಲವೂ ಈಗ ಹಿಂಸಾರೂಪದ ಪ್ರಚಾರ ಭಾಷೆಗಳಾಗಿ ಬಳಕೆಯಾಗುತ್ತಿವೆ. ಸಂಸ್ಕೃತಿಗಳು ಪ್ರಚಾರದ ಸರಕಾಗುತ್ತಿವೆ. ಪ್ರಚಾರ ಪ್ರಜ್ಞೆಯು ಅತಿರೇಕಕ್ಕೆ ಹೋಗುತ್ತಿದೆ. ಹೊಸ ಜಗತ್ತಿನಪ್ರಭುತ್ವಗಳಿಗೆ ಇದರಿಂದ ಒಂದು ಬಗೆಯ ಭಸ್ಮಾಸುರನಂತಹ ಸಾಮರ್ಥ್ಯ ಪ್ರಾಪ್ತವಾಗುತ್ತಿದೆ. ಸಮಾಜಗಳು ಈ ಬಗ್ಗೆ ವಿವೇಚಿಸಬೇಕಾಗಿದೆ.
ಲೇಖಕ: ಪ್ರಾಧ್ಯಾಪಕ, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.