ADVERTISEMENT

ವಿಶ್ಲೇಷಣೆ: ಬಲಗೊಳ್ಳಲಿ ಪ್ರಜೆಗಳ ‘ಪ್ರಭುತ್ವ’

ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಜನರ ಭಾಗವಹಿಸುವಿಕೆ ಹೆಚ್ಚಾಗಬೇಕು

ಕಿರಣ್‌.ಎಂ.ಗಾಜನೂರು ಶಿವಮೊಗ್ಗ
Published 13 ಸೆಪ್ಟೆಂಬರ್ 2024, 19:30 IST
Last Updated 13 ಸೆಪ್ಟೆಂಬರ್ 2024, 19:30 IST
   

‘ಭಾರತದಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಮೇಲ್ವರ್ಗದ ಬಡವರು ಸೇರಿದಂತೆ ಶೇಕಡ 90ರಷ್ಟು ಜನ ತಮ್ಮ ಬದುಕಿನ ಎಲ್ಲಾ ಹಂತಗಳನ್ನು ಪ್ರಭಾವಿಸುವ ‘ರಾಜಕೀಯ ತೀರ್ಮಾನ’ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಅವಕಾಶವನ್ನೇ ಹೊಂದಿಲ್ಲ’.

ಇದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಇತ್ತೀಚೆಗೆ ನೀಡಿರುವ ಹೇಳಿಕೆ. ಹೀಗೆ ಹೇಳುವ ಮೂಲಕ ಅವರು, ಈ ಹಿಂದಿನ 75 ವರ್ಷಗಳಲ್ಲಿ ದೇಶದ ರಾಜಕೀಯ ಪ್ರಯೋಗವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೇಗೆ ವ್ಯವಸ್ಥಿತವಾಗಿ ಚುನಾವಣೆಯಲ್ಲಿನ ಮತದಾನಕ್ಕೆ ಮಾತ್ರ ಸೀಮಿತಗೊಳಿಸಿದೆ, ಆ ಮೂಲಕ ಅದರ ಮೂಲ ಆಶಯವಾದ ‘ತೀರ್ಮಾನ ತೆಗೆದುಕೊಳ್ಳುವ’ ಪ್ರಕ್ರಿಯೆಯಿಂದ ಅಂಚಿನ ಸಮುದಾಯಗಳನ್ನು ಹೇಗೆ ಆಚೆಗೆ ಇಟ್ಟಿದೆ ಎನ್ನುವ, ವ್ಯವಸ್ಥೆಯೇ ಸೃಷ್ಟಿಸಿದ ಅಸಮಾನತೆಯ ಕಡೆ ನಮ್ಮ ಗಮನ ಸೆಳೆದಿದ್ದಾರೆ.

ದಲಿತ, ಹಿಂದುಳಿದ, ಬುಡಕಟ್ಟು ಸಮುದಾಯಗಳ ವಿವರವಾದ ಸಮೀಕ್ಷೆಯನ್ನೇ ನಡೆಸದೆ, ಅವರ ಆರ್ಥಿಕ– ಸಾಮಾಜಿಕ ಸ್ಥಿತಿ, ಸಂಪನ್ಮೂಲಗಳ ಮೇಲೆ ಅವರು ಹೊಂದಿರುವ ಅಧಿಕಾರದ ಪ್ರಮಾಣ ಎಷ್ಟು ಎಂಬ ಬಗ್ಗೆ ಅಧ್ಯಯನಗಳನ್ನೇ ನಡೆಸದೆ, ಅವರ ಈ ಸ್ಥಿತಿಗೆ ಕಾರಣ ಯಾರು ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ, ಬಹುಶಃ ಮೊದಲ ಆರೋಪಿ ಸ್ಥಾನದಲ್ಲಿ ಕಾಂಗ್ರೆಸ್‌ ಪಕ್ಷದ ರಾಜಕಾರಣವೇ ನಿಲ್ಲುತ್ತದೆ. ತಮ್ಮ ಸಂವಾದದಲ್ಲಿ ‘ಹೌದು, ಕಾಂಗ್ರೆಸ್‌ ತನ್ನ ಚರಿತ್ರೆಯಲ್ಲಿ ಹಲವು ತಪ್ಪುಗಳನ್ನು, ಅವೈಜ್ಞಾನಿಕ ನಿರ್ಣಯಗಳನ್ನು ಮಾಡಿದೆ. ಈಗ ಅವುಗಳನ್ನು ತಿದ್ದಿಕೊಳ್ಳುವ ಸಮಯ’ ಎನ್ನುವ ಮೂಲಕ, ಈ ಸ್ಥಿತಿಗೆ ಕಾಂಗ್ರೆಸ್‌ ಸಹ ಕಾರಣ ಎನ್ನುವ ಸ್ವವಿಮರ್ಶೆಯ ಮಾತುಗಳನ್ನೂ ರಾಹುಲ್‌ ಆಡಿದ್ದಾರೆ.

ADVERTISEMENT

ವಿರೋಧ ಪಕ್ಷದ ನಾಯಕನ ಈ ಹೇಳಿಕೆಯನ್ನು ಆಡಳಿತ ಪಕ್ಷದ ವಿರುದ್ಧದ ಮಾತು ಎಂದಷ್ಟೇ ನೋಡಿದರೆ ಅದೊಂದು ಸಂಕುಚಿತ ನೋಟಕ್ರಮವಾಗುತ್ತದೆ (ಈಗ ಮಾಧ್ಯಮಗಳಲ್ಲಿ ಅದೇ ನಡೆಯುತ್ತಿದೆ). ವಾಸ್ತವದಲ್ಲಿ ರಾಹುಲ್‌ ಅವರ ಈ ಹೇಳಿಕೆ ದೇಶದ ಪ್ರಜಾಪ್ರಭುತ್ವದ ಭವಿಷ್ಯದ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ನಾವು ಚರಿತ್ರೆಯನ್ನೇ ಗಮನಿಸುವುದಾದರೆ, 1950ರಲ್ಲಿ ನಮ್ಮ ಸಂವಿಧಾನವನ್ನು ಜಾರಿಗೊಳಿಸುವಾಗಲೇ ಅಂಬೇಡ್ಕರ್‌ ‘ನಾವು ಇಂದು ರಾಜಕೀಯವಾಗಿ ಒಂದು ಮತ, ಒಂದು ಮೌಲ್ಯ ಎನ್ನುವ ತತ್ವವನ್ನು ಆಧರಿಸಿದ ರಾಜಕೀಯ ಸಮಾನತೆಯನ್ನು ಒಪ್ಪುವ ಮತ್ತು ಸಾಮಾಜಿಕವಾಗಿ ವಿಪರೀತ ಅಸಮಾನತೆಯನ್ನು ಹೊಂದಿರುವ ವೈರುಧ್ಯಮಯ ಸನ್ನಿವೇಶಕ್ಕೆ ಕಾಲಿಡುತ್ತಿದ್ದೇವೆ.‌ ನಮಗೆ ಸಿಕ್ಕಿರುವ ರಾಜಕೀಯ ಪ್ರಜಾಪ್ರಭುತ್ವ ಆದಷ್ಟು ಬೇಗ ಸಾಮಾಜಿಕ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ಬದ್ಧತೆಯನ್ನು ತೋರಬೇಕು’ ಎಂದಿದ್ದರು. ಈ ಮೂಲಕ, ಇಂದು ರಾಹುಲ್‌ ಎತ್ತಿರುವ ಪ್ರಶ್ನೆಯನ್ನೇ ಆಳುವ ನೇತಾರರ ಮುಂದೆ ಇಟ್ಟಿದ್ದರು.

ಆ ನಂತರ ದೇಶದ ರಾಜಕೀಯದಲ್ಲಿ ಬಹಳಷ್ಟು ನೀರು ಹರಿದಿದೆ. ಬಹುತೇಕ ಎಲ್ಲ ಪಕ್ಷಗಳ ನೇತೃತ್ವದ ಸರ್ಕಾರಗಳು, ಬಹಳ ಮುಖ್ಯವಾಗಿ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವವನ್ನು ‘ರಾಜಕೀಯ ಅಧಿಕಾರ’ ಪಡೆಯುವ ಸಾಧನವನ್ನಾಗಿ ನೋಡಿದವೇ ವಿನಾ ಅದು ಜನರನ್ನು ರಾಜಕೀಯವಾಗಿ, ಆರ್ಥಿಕವಾಗಿ ಸಬಲೀಕರಿಸುವ ಸಾಧನ ಎಂಬ ವಿಶಾಲ ಅರ್ಥದಲ್ಲಿ ನೋಡಲೇ ಇಲ್ಲ ಅನ್ನಿಸುತ್ತದೆ!

ಸಂವಿಧಾನಕ್ಕೆ ತಿದ್ದುಪಡಿ ತರುವುದರ ಮೂಲಕ ನಗರ ಸ್ಥಳೀಯ ಸರ್ಕಾರ ಮತ್ತು ಪಂಚಾಯತ್‌ ರಾಜ್‌ ವ್ಯವಸ್ಥೆಗೆ ದಕ್ಕಿದ ಸಾಂವಿಧಾನಿಕ ಮಾನ್ಯತೆ ಈ ಪ್ರಕ್ರಿಯೆಗೆ ಒಂದು ಅಪವಾದದಂತೆ ನಮ್ಮ ನಡುವೆ ಇದೆ. ಅದನ್ನೂ ಸ್ಥಳೀಯ ಮಟ್ಟದಲ್ಲಿ ರಾಜಕೀಯ ಅಧಿಕಾರ ಪಡೆಯುವ ಸಾಧನವನ್ನಾಗಿಯೇ ನಾವು ನೋಡುತ್ತಿದ್ದೇವೆ ವಿನಾ ಪ್ರಜಾಪ್ರಭುತ್ವದ ಸಾಮಾಜೀಕರಣದ ಭಾಗವಾಗಿ ಅಲ್ಲ. ಹಾಗಾಗಿಯೇ ಎಲ್ಲಾ ಮತದಾರರು ಸದಸ್ಯರಾಗಿರುವ ಜಗತ್ತಿನ ‘ನೇರ ಪ್ರಜಾಪ್ರಭುತ್ವದ ಮಾದರಿ’ ಎಂದು ಕರೆಸಿಕೊಳ್ಳುವ ‘ಗ್ರಾಮಸಭೆ’ ಇಂದು ವ್ಯವಸ್ಥಿತವಾಗಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ.

ಇಂದು ಈ ಎಲ್ಲಾ ಚರ್ಚೆಗಳು ಏಕೆ ಮುಖ್ಯವಾಗುತ್ತವೆ ಎಂದರೆ, ಜಗತ್ತಿನಲ್ಲಿನ ಎಲ್ಲಾ ಸರ್ವಾಧಿಕಾರಿಗಳ ಉಗಮಕ್ಕೆ ಮುಖ್ಯ ಕಾರಣ ‘ರಾಜಕೀಯ ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ತಡೆದಿರುವುದು’ ಎಂಬ ಅಂಶವನ್ನು ರಾಜಕೀಯ ಚಿಂತಕರು ತಮ್ಮ ಶೋಧನೆಗಳ ಮೂಲಕ ಖಚಿತಪಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಹಿತಾಸಕ್ತಿಯ ಗುಂಪು– ಉದಾಹರಣೆಗೆ ರಾಜಕಾರಣಿಗಳು ಹಾಗೂ ಅಧಿಕಾರಿಶಾಹಿಯು– ಭ್ರಷ್ಟತೆ, ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗದ ಮೂಲಕ ವೈಯಕ್ತಿಕ ಲಾಭ ಮಾಡಿಕೊಳ್ಳಲು ಮುಂದಾಗುತ್ತದೆ. ಇದರ ಸಲುವಾಗಿ, ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಿಂದ ಜನರನ್ನು ವ್ಯವಸ್ಥಿತವಾಗಿ ಆಚೆ ಇಡುತ್ತದೆ.

ವ್ಯವಸ್ಥೆಯ ಮೇಲೆ ತಾವು ಯಾವುದೇ ಪರಿಣಾಮ ಬೀರಲು ಸಾಧ್ಯವಾಗುವುದಿಲ್ಲ ಎಂದು ಜನರಿಗೆ ಯಾವಾಗ ಮನದಟ್ಟಾಗುತ್ತಾ ಹೋಗುತ್ತದೋ ಆಗ ವ್ಯವಸ್ಥೆಯ ವಿರುದ್ಧ ನಿಧಾನವಾಗಿ ಸಿನಿಕತೆಯೊಂದನ್ನು ಅವರು ಬೆಳೆಸಿಕೊಳ್ಳುತ್ತಾರೆ. ಸಿನಿಕತೆಯಲ್ಲಿ ಇರುವ ಜನರ ಎದುರು ಅಬ್ಬರಿಸಿ ಮಾತನಾಡುವ ಸರ್ವಾಧಿಕಾರಿ ಗುಣವುಳ್ಳ ನಾಯಕ, ಎಲ್ಲಾ ಸಮಸ್ಯೆಗಳನ್ನು ತನ್ನಿಂದ ಮಾತ್ರ ಪರಿಹರಿಸಲು ಸಾಧ್ಯ ಎಂಬ ಭಾಷಣವನ್ನು ಮಂಡಿಸುತ್ತಾನೆ. ಈ ಮಾತುಗಳು ಸಿನಿಕರನ್ನು ಪ್ರಭಾವಿಸಿಬಿಡುತ್ತವೆ. ತಮ್ಮೆಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ‘ಸೂಪರ್‌ ಹೀರೊ’ನನ್ನು ಆ ಮಾದರಿಯ ಒಬ್ಬ ‘ರಾಜಕೀಯ ನಾಯಕ’ನಲ್ಲಿ ಹುಡುಕಲು ಆರಂಭಿಸುತ್ತಾರೆ. ಈ ಅಂಶವು ಸರ್ವಾಧಿಕಾರಿ ಧೋರಣೆಯ ನಾಯಕನ ಉಗಮಕ್ಕೆ ಕಾರಣವಾಗುತ್ತದೆ.

ಜಗತ್ತಿನ ಎಲ್ಲಾ ಸರ್ವಾಧಿಕಾರಿಗಳು ಹುಟ್ಟಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಕಾರ್ಯಾಚರಣೆಯಲ್ಲಿ ಜನರನ್ನು ಒಳಗೊಳ್ಳಲು ಸೋತ ಕಾರಣದಿಂದಲೇ. ಉದಾಹರಣೆಗೆ, ಲಿಬಿಯಾದ ಮೊಹಮ್ಮದ್ ಅಬು ಮಿನ್ಯಾರ್ ಗಡಾಫಿ ಆರಂಭದಲ್ಲಿ ಒಬ್ಬ ಕ್ರಾಂತಿಕಾರಿ ನಾಯಕನಾಗಿದ್ದ. ಅಲ್ಲಿನ ಪ್ರಜಾಪ್ರಭುತ್ವದ ಮಿತಿಗಳ ಕುರಿತು ತನ್ನ ಭಾಷಣಗಳ ಮೂಲಕ ವಿಮರ್ಶಿಸುತ್ತಲೇ ಅಧಿಕಾರ ಹಿಡಿದು ನಂತರ ಸರ್ವಾಧಿಕಾರಿಯಾಗಿ ಬದಲಾದ ಕಥನ ನಮ್ಮ ಕಣ್ಣೆದುರಿಗೇ ಇದೆ. ಚಿಲಿಯ ಆಗಸ್ಟೋ ಪಿನೋಚೆಟ್ ಉಗಾರ್ಟೆ, ಕಾಂಗೊದ ಮೊಬುಟು ಸೆಸೆ ಸೆಕೊ, ಜರ್ಮನಿಯ ಹಿಟ್ಲರ್‌ ಎಲ್ಲರೂ ಈ ಪಟ್ಟಿಯಲ್ಲಿ ಸೇರುತ್ತಾರೆ.

ಸರ್ವಾಧಿಕಾರಿ ವ್ಯವಸ್ಥೆಯನ್ನು ತಡೆಯಲು ಇರುವ ಸಾಧನವೆಂದರೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು. ಅಂದರೆ ‘ತೀರ್ಮಾನ ಕೈಗೊಳ್ಳುವ’ ಪ್ರಕ್ರಿಯೆಯಲ್ಲಿ ಜನರ ಭಾಗವಹಿಸುವಿಕೆಯನ್ನು ಹೆಚ್ಚು ಹೆಚ್ಚು ಖಾತರಿಪಡಿಸುವುದು, ಅದಕ್ಕೆ ಪೂರಕವಾದ ವೇದಿಕೆಗಳನ್ನು ರೂಪಿಸುವುದು. ಈ ವಾದವನ್ನೇ ವಿಸ್ತರಿಸಿದ ಅಮರ್ತ್ಯ ಸೇನ್, ‘ಬಡತನ ಎಂದರೆ ಆಹಾರ ಇಲ್ಲದ ಸ್ಥಿತಿ ಮಾತ್ರವಲ್ಲ ಬದಲಾಗಿ ವ್ಯಕ್ತಿಯು ನೈತಿಕ ಹಾದಿಯ ಮೂಲಕ ತಾನು ಬಯಸುವ ಬದುಕನ್ನು ಜೀವಿಸುವ ಸಾಮರ್ಥ್ಯ ಇಲ್ಲದ ಸ್ಥಿತಿ. ಅಭಿವೃದ್ಧಿ ಎಂದರೆ ರಾಜಕೀಯ ತೀರ್ಮಾನಗಳಲ್ಲಿ ವ್ಯಕ್ತಿಯು ಪರಿಣಾಮಕಾರಿಯಾಗಿ ಭಾಗವಹಿಸುವ ಮೂಲಕ ಈ ಎಲ್ಲಾ ಸಾಮರ್ಥ್ಯವನ್ನು ಗಳಿಸಲು ನಾವು ಕೊಡುವ ಅವಕಾಶ’ ಎಂಬ ಅರ್ಥದಲ್ಲಿ ವ್ಯಾಖ್ಯಾನಿಸಿದ್ದರು.

ಈಗ ಚರ್ಚೆಯಲ್ಲಿರುವ ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಮಾತನಾಡುತ್ತಿರುವ ‘ಗ್ಯಾರಂಟಿ ಯೋಜನೆಗಳು’, ಮುಖ್ಯವಾಗಿ ನೇರವಾಗಿ ಫಲಾನುಭವಿ ಖಾತೆಗೆ ಹಣ ನೀಡುವ ಯೋಜನೆಗಳು ಬರೀ ಕಲ್ಯಾಣ ರಾಜ್ಯದ ಬಡತನ ನಿರ್ಮೂಲನ ಕಾರ್ಯಕ್ರಮಗಳಷ್ಟೇ ಅಲ್ಲ. ಬದಲಾಗಿ, ತಮ್ಮ ಬದುಕಿಗೆ ಅಗತ್ಯವಾದ ಸರಕು-ಸೇವೆಗಳು ಯಾವುವು ಎಂಬುದನ್ನು ತೀರ್ಮಾನಿಸುವ ಅಧಿಕಾರವನ್ನು ಜನರಿಗೇ ನೀಡುವ ‘ಆರ್ಥಿಕ ಪ್ರಜಾಪ್ರಭುತ್ವ’ದ ಸಾಧನಗಳನ್ನಾಗಿಯೂ ನಾವು ವಿಶ್ಲೇಷಿಸಬೇಕಿದೆ.

ನಾಳೆ (ಸೆ. 15) ವಿಶ್ವ ಪ್ರಜಾಪ್ರಭುತ್ವ ದಿನವನ್ನು ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ, ಪ್ರಜಾಪ್ರಭುತ್ವವನ್ನು ಅಧಿಕಾರ ಪಡೆಯುವ ಸಾಧನವನ್ನಾಗಿ ಮಾತ್ರ ನೋಡದೆ, ಜನರನ್ನು ಪ್ರಜಾತಾಂತ್ರಿಕವಾಗಿ ಸಬಲೀಕರಿಸುವ ಅವಕಾಶವಾಗಿ ನೋಡುವ ಕಣ್ಣೋಟವೊಂದನ್ನು ನಮ್ಮ ರಾಜಕೀಯ ನಾಯಕತ್ವ ಹೊಂದಬೇಕಿದೆ. ಅದರ ಮೊದಲ ಹೆಜ್ಜೆಯು ಸಮುದಾಯಗಳ ಸಮಾಜೋ- ಆರ್ಥಿಕ ಸ್ಥಿತಿಗತಿಗಳ ಅಧ್ಯಯನದಿಂದ ಆರಂಭವಾಗಬೇಕು. ಲೋಕಸಭೆಯ ವಿರೋಧ ಪಕ್ಷದ ನಾಯಕ ಮಾತನಾಡಿ ರುವುದು, 21ನೇ ಶತಮಾನದ ಭಾರತದ ಪ್ರಜಾಪ್ರಭುತ್ವ ತನ್ನ ಭವಿಷ್ಯದ ದೃಷ್ಟಿಯಿಂದ ಎಲ್ಲಾ ಸಮುದಾಯಗಳನ್ನು ಒಳಗೊಳ್ಳಲೇಬೇಕಾದ ಅನಿವಾರ್ಯದ ಕುರಿತು.

ಲೇಖಕ: ಸಹಾಯಕ ಪ್ರಾಧ್ಯಾಪಕ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.