1996ರಲ್ಲಿ ನಾನು ವಿಧಾನಸಭೆಯ ಅಧ್ಯಕ್ಷನಾಗಿದ್ದೆ. ಎಚ್.ಡಿ. ದೇವೇಗೌಡರು ಆಗ ಮುಖ್ಯಮಂತ್ರಿಯಾಗಿದ್ದರು. 1989ರಿಂದ 1994ರವರೆಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಆಗಿದ್ದ ಅವ್ಯವಸ್ಥೆಯ ವಿರುದ್ಧ ನಾವು ಐದು ವರ್ಷಗಳ ಕಾಲ ಹೋರಾಟ ಮಾಡಿ ಪುನಃ ಜನತಾ ದಳದ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿದ್ದೆವು.
ಉತ್ತಮವಾದ ಆಡಳಿತವನ್ನು ದೇವೇಗೌಡರು ನೀಡುತ್ತಿದ್ದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಆಡಳಿತದ ಘನತೆ ಮತ್ತು ಗೌರವ ಕಳೆದುಹೋಗಿತ್ತು. ಅದನ್ನು ಮರಳಿ ತರುವುದು ಪ್ರಯಾಸದ ಕೆಲಸವಾಗಿತ್ತು. ಅಂತಹ ಸ್ಥಿತಿಯಲ್ಲಿ ಒಳ್ಳೆಯ ಸರ್ಕಾರ ಎಂಬ ಕೀರ್ತಿಗೆ ಪಾತ್ರವಾಗುವ ದಿಕ್ಕಿನತ್ತ ಆಗಿನ ಜನತಾ ದಳ ಸರ್ಕಾರ ಸಾಗುತ್ತಿತ್ತು. ಅಷ್ಟರಲ್ಲಿ 1996ರಲ್ಲಿ ಲೋಕಸಭಾ ಚುನಾವಣೆ ನಡೆಯಿತು. ಆಗ, ಜನತಾ ದಳ 16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಮೊದಲ ಬಾರಿಗೆ ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೊರತುಪಡಿಸಿ ಬೇರೆ ಪಕ್ಷದವರು ಅಷ್ಟು ದೊಡ್ಡ ಸಂಖ್ಯೆಯಲ್ಲಿ ಗೆಲುವು ಸಾಧಿಸುವುದಕ್ಕೆ ಅವಕಾಶವಾಯಿತು.
ಆಗ ಒಂದು ರೀತಿಯ ವಿಚಿತ್ರ ಸನ್ನಿವೇಶ ಸೃಷ್ಟಿಯಾಯಿತು. ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹ ರಾವ್ ಅವರಿಗೆ ಬಹುಮತ ಬರಲಿಲ್ಲ. ಕಾಂಗ್ರೆಸ್ಸೇತರ ವಿರೋಧ ಪಕ್ಷಗಳು ಬಿಜೆಪಿಯನ್ನು ಹೊರಗಿಟ್ಟು ಸರ್ಕಾರ ರಚಿಸುವ ಪ್ರಯತ್ನಕ್ಕೆ ಕೈ ಹಾಕಿದವು. ವಿ.ಪಿ. ಸಿಂಗ್ ಪ್ರಧಾನಿಯಾಗಲು ನಿರಾಕರಿಸಿದರು. ಹಲವು ಸುತ್ತಿನ ಸಭೆಗಳು ನಡೆದ ಬಳಿಕ ಎಚ್.ಡಿ. ದೇವೇಗೌಡರ ಹೆಸರನ್ನು ಪ್ರಧಾನಿ ಹುದ್ದೆಗೆ ಅಂತಿಮಗೊಳಿಸಲಾಯಿತು. ನಿಜವಾಗಿಯೂ ಯಾವ ಕಾರಣಕ್ಕಾಗಿ ಇಂತಹ ಅಚ್ಚರಿಯ ಆಯ್ಕೆ ನಡೆಯಿತು ಎಂಬುದು ಇಂದಿಗೂ ತಿಳಿದಿಲ್ಲ.
ನಮ್ಮ ದೇಶದ ಇತಿಹಾಸ ಮತ್ತು ಭೂಗೋಳವನ್ನು ಅಧ್ಯಯನ ಮಾಡಿದಾಗ ಕರ್ನಾಟಕದವರು ಪ್ರಧಾನಿ ಹುದ್ದೆಯವರೆಗೆ ಹೋಗಲು ಸಾಧ್ಯವೇ ಇಲ್ಲ. 1996ರಲ್ಲಿ ಸಂಯುಕ್ತ ರಂಗದಲ್ಲಿದ್ದ ಪ್ರಬಲ ಪಕ್ಷಗಳ ನಾಯಕರು ಎಲ್ಲರಿಗೂ ಒಪ್ಪಿಗೆಯಾಗದೇ ಇದ್ದುದಕ್ಕೆ ಮತ್ತು ಅವರಲ್ಲಿನ ಆಂತರಿಕ ಸಮಸ್ಯೆಗಳ ಕಾರಣದಿಂದಾಗಿ ದೇವೇಗೌಡರಿಗೆ ಅವಕಾಶ ದೊರಕಿತು. ಡಿಎಂಕೆಯಲ್ಲಿ ಕರುಣಾನಿಧಿ ಸರ್ವೋಚ್ಚ ನಾಯಕ. ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲು ಸಾಧ್ಯವಿರಲಿಲ್ಲ. ಪಕ್ಷದ ಬೇರೆಯವರನ್ನು ಅವರು ಒಪ್ಪುತ್ತಿರಲಿಲ್ಲ. ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು ವಿಚಾರದಲ್ಲೂ ಇಂತಹ ಸಮಸ್ಯೆಗಳಿದ್ದವು. ವಿ.ಪಿ. ಸಿಂಗ್ ಸುತರಾಂ ಒಪ್ಪಲಿಲ್ಲ. ಹಾಗಾಗಿ ಗೌಡರಿಗೆ ಅವಕಾಶ ದೊರಕಿತು.
ಆ ಬೆಳವಣಿಗೆಯಿಂದ ನಮ್ಮೆಲ್ಲರಿಗೂ ಒಂದು ರೀತಿಯ ಸಂತೋಷ ಜತೆಗೆ ಆಘಾತವೂ ಆಗಿತ್ತು. ಒಂದು ಕಡೆಗೆ ಹಾಸನದ ಒಂದು ಸಣ್ಣ ಹಳ್ಳಿಯಲ್ಲಿ ರೈತ ಕುಟುಂಬದಲ್ಲಿ ಹುಟ್ಟಿ ತಾಲ್ಲೂಕು ಅಭಿವೃದ್ಧಿ ಮಂಡಳಿಯಿಂದ ರಾಜಕಾರಣ ಆರಂಭಿಸಿದ ನಮ್ಮ ನಾಯಕ ಪ್ರಧಾನಿ ಹುದ್ದೆಗೇರುತ್ತಿದ್ದಾರಲ್ಲಾ ಎಂಬ ಸಂತೋಷ ಇತ್ತು. ರಾಜ್ಯ ರಾಜಕಾರಣದಲ್ಲಿ ಏನಾಗುವುದೋ ಎಂಬ ಭಯವೂ ನಮ್ಮೆಲ್ಲರನ್ನೂ ಆವರಿಸಿತ್ತು. ಆದರೂ, ವಿರಳವಾಗಿ ಸಿಗುವ ಇಂತಹ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ನಾವೆಲ್ಲರೂ ದೇವೇಗೌಡರ ಜತೆಗೆ ನಿಂತೆವು.
ಗೌಡರು ಪ್ರಧಾನಿ ಹುದ್ದೆಗೇರಿದ ಬಳಿಕ ರಾಜ್ಯದಲ್ಲಿ ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾದರು. ಮೂರು ವರ್ಷಗಳ ಕಾಲ ರಾಜ್ಯದ ಆಡಳಿತವನ್ನು ಗೌರವಯುತವಾಗಿಯೇ ಮುನ್ನಡೆಸಿದರು. ರಾಜ್ಯ ಸರ್ಕಾರಕ್ಕೆ ದೇವೇಗೌಡರ ಮಾರ್ಗದರ್ಶನವೂ ಇತ್ತು. ಆದರೆ, ಪ್ರಧಾನಿಯಾಗಿ ದೊಡ್ಡ ಜವಾಬ್ದಾರಿಗಳನ್ನು ನಿರ್ವಹಿಸಬೇಕಾದ ಕಾರಣದಿಂದ ಇತ್ತ ಹೆಚ್ಚು ಗಮನ ಹರಿಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.
ಈಗ ನಾವು– ಅವರು ಬೇರೆ ಬೇರೆ ಪಕ್ಷಗಳಲ್ಲಿದ್ದೇವೆ. ಸಂಬಂಧಗಳೂ ಅಷ್ಟೇನೂ ಚೆನ್ನಾಗಿಲ್ಲ. ಆದರೂ, ಸತ್ಯಕ್ಕೆ ಅಪಚಾರ ಮಾಡಬಾರದು. ದೇವೇಗೌಡರನ್ನು ಅನಿರೀಕ್ಷಿತವಾಗಿ, ಅವರು ಅಪೇಕ್ಷೆಪಡದೇ ಇರುವ ಸ್ಥಾನಕ್ಕೆ ಸಕಾರಣಗಳಿಲ್ಲದೆ ಬಲವಂತ ಮಾಡಿ ತಳ್ಳಲಾಗುತ್ತದೆ. ಅದೇ ರೀತಿ ನಿರ್ದಿಷ್ಟವಾದ ಕಾರಣಗಳು, ಆಪಾದನೆಗಳು ಇಲ್ಲದೆ ಅವರ ಸರ್ಕಾರವನ್ನು ಅಸ್ಥಿರಗೊಳಿಸಲಾಗುತ್ತದೆ. ಇದು ಅತ್ಯಂತ ಬೇಸರದ ಸಂಗತಿ. ದೇವೇಗೌಡರು ಪ್ರಧಾನಿ ಹುದ್ದೆಯಿಂದ ಕೆಳಕ್ಕಿಳಿದ ದಿನ ನಾವೆಲ್ಲರೂ ಬಹಳ ನೊಂದುಕೊಂಡಿದ್ದೆವು. ‘ಎಲ್ಲೋ ಒಂದು ಕಡೆಯಲ್ಲಿ ನಾವು ಬಲಿ ಆದೆವೇನೊ’ ಎಂಬ ನೋವು ಎಲ್ಲರನ್ನೂ ಕಾಡಿತ್ತು.
ಆಗ ಒಟ್ಟಿಗಿದ್ದ ನಾವು ಈಗ ಬೇರೆ ಬೇರೆ ಆಗಿದ್ದೇವೆ. ಆ ಪ್ರಶ್ನೆ ಬೇರೆ. ಪ್ರಧಾನಿಯಾಗಿದ್ದ ಅವಧಿಯಲ್ಲಿ ದೇವೇಗೌಡರು ತಮ್ಮ ಸಹೋದ್ಯೋಗಿಗಳ ಜತೆ ತುಂಬಾ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದರು. ಯಾರೊಬ್ಬರೂ ಅವರ ಬಗ್ಗೆ ದೂರಿದ ಉದಾಹರಣೆಗಳಿಲ್ಲ. ಅವರು ಯಾವುದೇ ತಪ್ಪು ಮಾಡಿಲ್ಲ, ತಲೆ ತಗ್ಗಿಸುವಂತಹ ಕೆಲಸ ಮಾಡಿ ಪ್ರಧಾನಿ ಹುದ್ದೆಯಿಂದ ಕೆಳಕ್ಕೆ ಇಳಿಯಲಿಲ್ಲ. ದೆಹಲಿಯ ಸಂಚುಗಳ ಸ್ವರೂಪವೇ ಹಾಗಿರುತ್ತದೆ. ಕಣ್ಣಿಗೆ ಕಾಣುವುದಿಲ್ಲ.
ಒಬ್ಬ ಕನ್ನಡಿಗನಿಗೆ ಪ್ರಧಾನಿ ಹುದ್ದೆಗೇರುವ ಅವಕಾಶ ಸಿಗಬಹುದು ಎಂಬ ಕಲ್ಪನೆ ಕೂಡ ನಮಗೆ ಆಗ ಇರಲಿಲ್ಲ. ಅದೊಂದು ಹೆಮ್ಮೆಯಗಳಿಗೆ. 25 ವರ್ಷ ಎಷ್ಟು ಬೇಗ ಕಳೆದುಹೋಗಿದೆ. ಅತ್ಯಂತ ಹೆಮ್ಮೆಯಿಂದ ಆ ಗಳಿಗೆಗಳನ್ನು ನಾವು ಪುನಃ ನೆನಪಿಸಿಕೊಳ್ಳಬೇಕಿದೆ.
ಕೆಲವೇ ತಿಂಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದರೂ ದೇವೇಗೌಡರಿಗೆ ಕೀಳರಿಮೆ ಇರಲಿಲ್ಲ. ಹಿಂದಿ ಚೆನ್ನಾಗಿ ಬರುತ್ತಿರಲಿಲ್ಲ ಎಂಬುದೊಂದೆ ಅವರಲ್ಲಿ ಆಗ ಇದ್ದ ಕೊರತೆ. ಈಶಾನ್ಯ ಭಾರತದತ್ತ ಯಾವ ಪ್ರಧಾನಿಯೂ ಹೆಚ್ಚು ಗಮನಹರಿಸಿರಲಿಲ್ಲ. ಆದರೆ, ಗೌಡರು ಈಶಾನ್ಯ ರಾಜ್ಯಗಳಲ್ಲಿ ಹೆಚ್ಚು ಪ್ರವಾಸ ಮಾಡಿ ಆ ಪ್ರದೇಶದ ಜನರಲ್ಲಿ ಹೊಸ ಉತ್ಸಾಹ ತುಂಬಿದರು. ಕಾಶ್ಮೀರ ಆಗ ತುಂಬಾ ಪ್ರಕ್ಷುಬ್ಧಗೊಂಡಿದ್ದ ಪ್ರದೇಶವಾಗಿತ್ತು. ಅಲ್ಲಿಗೂ ಭೇಟಿನೀಡಿದ ಅವರು, ಅಲ್ಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದರು.
ರೈಲ್ವೆ, ರಾಷ್ಟ್ರೀಯ ಹೆದ್ದಾರಿ, ನೀರಾವರಿ ಯೋಜನೆಗಳು ಮತ್ತು ನಬಾರ್ಡ್ ಅನುದಾನದ ವಿಚಾರದಲ್ಲಿ ದೇವೇಗೌಡರಿಂದ ರಾಜ್ಯಕ್ಕೆ ಹೆಚ್ಚು ಅನುಕೂಲವಾಗಿದೆ. ಆದರೆ, ಸಂಯುಕ್ತ ರಂಗ ಸರ್ಕಾರದಲ್ಲಿ ಜನತಾ ದಳದ ಸಂಖ್ಯಾ ಬಲ ಕಡಿಮೆ ಇತ್ತು. ತೆಲುಗು ದೇಶಂ, ಡಿಎಂಕೆ ಸೇರಿದಂತೆ ಹಲವು ಮಿತ್ರ ಪಕ್ಷಗಳ ಸಂಖ್ಯಾಬಲ ಜಾಸ್ತಿ ಇತ್ತು. ಅವೆಲ್ಲವೂ ವ್ಯವಸ್ಥಿತ ಪಕ್ಷಗಳಾಗಿದ್ದವು. ಆ ಪಕ್ಷಗಳ ಸದೃಢ ನಾಯಕರು ಸ್ಥಳೀಯವಾಗಿ ಉಳಿದುಕೊಂಡು ದೇವೇಗೌಡರ ಕೊರಳಿಗೆ ಪ್ರಧಾನಿ ಹುದ್ದೆಯ ಜವಾಬ್ದಾರಿ ಹಾಕಿದ್ದರು. ದೇಶದ ಆಡಳಿತ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಗೌಡರ ಮೇಲಿತ್ತು. ಅದರ ನಡುವೆಯೂ ರಾಜ್ಯಕ್ಕಾಗಿ ಸಮಯ ನೀಡಲು ಪ್ರಯತ್ನಿಸುತ್ತಿದ್ದರು. ಚಾಣಾಕ್ಷರಾಗಿದ್ದ ಚಂದ್ರಬಾಬು ನಾಯ್ಡು ದೆಹಲಿ ರಾಜಕಾರಣದಲ್ಲಿ ಬೇರೂರಿಕೊಂಡಿದ್ದರು. ದೇವೇಗೌಡರು ಪ್ರಧಾನಿಯಾದರೂ ಆಗ ಆಂಧ್ರಪ್ರದೇಶ ಪಡೆದಷ್ಟು ಅನುಕೂಲಗಳನ್ನು ಕರ್ನಾಟಕ ಪಡೆಯಲು ಸಾಧ್ಯವಾಗಲಿಲ್ಲ. ಸರ್ಕಾರ ಪತನವಾಗುವ ಹೊತ್ತಿಗೆ ನಾಯ್ಡು ಅಂತಹವರು ಕೂಡ ಗೌಡರನ್ನು ಕೈಬಿಟ್ಟರು. ನಿಜವಾಗಿಯೂ ಅದೊಂದು ದುರಂತ.
ಹೆಗಡೆಯವರ ಪ್ರಶಂಸೆ ಸಿಕ್ಕಿದ್ದರೆ...
ಸಂಯುಕ್ತ ರಂಗ ಸರ್ಕಾರದ ಸ್ಥಾಪನೆಗೆ ಪ್ರಯತ್ನಗಳು ಆರಂಭವಾದಾಗ ರಾಮಕೃಷ್ಣ ಹೆಗಡೆಯವರು ಪ್ರಧಾನಿ ಹುದ್ದೆಗೆ ಆಯ್ಕೆಯಾಗಬಹುದು ಎಂದು ಎಲ್ಲರೂ ಊಹಿಸಿದ್ದರು. ಹೆಗಡೆಯವರು ಪ್ರಧಾನಿಯಾಗುವುದಕ್ಕೆ ದೇವೆಗೌಡರಿಗೂ ಆಕ್ಷೇಪಣೆ ಇರಲಿಲ್ಲ. ಆದರೆ, ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ದಿನ ಮಾಧ್ಯಮದವರು ರಾಮಕೃಷ್ಣ ಹೆಗಡೆಯವರ ಪ್ರತಿಕ್ರಿಯೆ ಕೇಳಿದ್ದರು. ಕರ್ನಾಟಕದಲ್ಲಿ ಜನತಾ ದಳ ಹೆಚ್ಚು ಸ್ಥಾನ ಗಳಿಸಿರುವುದರ ಕೀರ್ತಿಯನ್ನು ಆಗ ಮುಖ್ಯಮಂತ್ರಿಯಾಗಿದ್ದ ದೇವೇಗೌಡರಿಗೆ ನೀಡಲು ಹೆಗಡೆ ನಿರಾಕರಿಸಿದರು. ಅಲ್ಲಿಂದ ಕಂದಕ ಮತ್ತಷ್ಟು ವಿಸ್ತಾರವಾಯಿತು. ‘ದೇವೇಗೌಡರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಬಹಳ ಕಷ್ಟಪಟ್ಟಿದ್ದಾರೆ’ ಎಂದು ಹೆಗಡೆಯವರು ಮುಕ್ತ ಮನಸ್ಸಿನಿಂದ ಪ್ರಶಂಸಿಸಿದ್ದರೆ ಬಹುಶಃ ಇತಿಹಾಸ ಬೇರೆ ದಿಕ್ಕಿಗೆ ತಿರುಗುತ್ತಿತ್ತೊ ಏನೊ?
ಹೆಗಡೆಯವರು ಪ್ರಧಾನಿಯಾಗಿದ್ದರೆ ಏನೋ ಆಗಿಬಿಡುತ್ತಿತ್ತು ಎಂದು ಭಾವಿಸಲಾಗುವುದು. ತಂದೆಯನ್ನೇ ಕೊಂದು ಮಗ ಸಿಂಹಾಸನಕ್ಕೇರಿದ ಇತಿಹಾಸ ದೆಹಲಿಯದ್ದು. ದೇವೇಗೌಡರು ಪ್ರಧಾನಿಯಾಗಿದ್ದ ಹತ್ತು ತಿಂಗಳು ಒಂದು ಅಧ್ಯಾಯ. ಅವರು ರಾಜ್ಯ ಸರ್ಕಾರದ ನಾಯಕತ್ವವನ್ನು ಬಿಟ್ಟು ಹೋಗಿದ್ದರಿಂದ ರಾಜ್ಯಕ್ಕೆ ನಷ್ಟವಾಯಿತು. ಆದರೆ, ಆ ಸಂದರ್ಭದಲ್ಲಿ ಅದನ್ನು ಯೋಚನೆ ಮಾಡುವಷ್ಟು ವ್ಯವಧಾನ ನಮ್ಮಲ್ಲಿ ಇರಲಿಲ್ಲ. ಸಿಗುತ್ತಿರುವ ಅವಕಾಶವನ್ನು ಕಳೆದುಕೊಳ್ಳುವುದೇಕೆ ಎಂದು ಯೋಚಿಸಿದೆವೆಯೇ ಹೊರತು ರಾಜ್ಯದ ದೃಷ್ಟಿಯಿಂದ ಸ್ವಾರ್ಥಿಗಳಾಗಿ ಯೋಚನೆ ಮಾಡಲಿಲ್ಲ. ದೇವೇಗೌಡರು ಮುಖ್ಯಮಂತ್ರಿ ಹುದ್ದೆ ತೊರೆದು ಪ್ರಧಾನಿ ಹುದ್ದೆಗೇರದೇ ಹೋಗಿದ್ದರೆ ಇಡೀ ರಾಜಕಾರಣದ ದಿಕ್ಕೇ ಬದಲಾಗುತ್ತಿತ್ತು ಅನಿಸುತ್ತದೆ.
ಲೇಖಕ: ಕಾಂಗ್ರೆಸ್‌ನ ಶಾಸಕ
(ನಿರೂಪಣೆ–ವಿ.ಎಸ್. ಸುಬ್ರಹ್ಮಣ್ಯ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.