ಬೆಳಿಗ್ಗೆ ವಾಕ್‍ಗೆ ಹೊರಬಿದ್ದಾಗ, ಪೂರ್ಣಚಂದ್ರ ಮುಖ ಅಗಲಿಸಿಕೊಂಡು ನಗುತ್ತಿದ್ದ. ರಾತ್ರಿಯೆಲ್ಲಾ ಬೆಳಗಿದವನು ಹಗಲನ್ನು ಸೂರ್ಯನಿಗೆ ನಿಸೂರಾಗಿ ಬಿಟ್ಟು ಮಸುಕಾಗ ತೊಡಗಿದಾಗ ತನ್ನ ಸಾಮ್ರಾಜ್ಯ ಕಳೆದುಕೊಳ್ಳುವ ಭೀತಿ ಲವಲೇಶವೂ ಇದ್ದಿರಲಿಲ್ಲ. ಈ ಜಗತ್ತನ್ನು ಆಳುತ್ತಿರುವವರಲ್ಲಿ ಈಗ ಹೆಚ್ಚೂ ಕಡಿಮೆ ಐವತ್ತು ದೇಶಗಳಲ್ಲಿ ಪೂರ್ಣ, ಅರ್ಧ, ಮರೆಮಾಚಿದ ರೂಪಗಳಲ್ಲಿ ಸರ್ವಾಧಿಕಾರಿಗಳೇ ಇದ್ದಾರಂತೆ. ಸದಾ ಇನ್ನೊಬ್ಬರನ್ನು ಪೀಡಿಸುವ, ಕಣ್ಣೀರು ತರಿಸಿ ನೋಡಿ ಖುಷಿಪಡುವ, ಕೊಲ್ಲುವ, ಕೊಲ್ಲಿಸುವ, ತಾನು ಹೇಳಿದ್ದೇ ಅಂತಿಮವಾಗಬೇಕು ಎಂದು ನಿದ್ದೆ, ಎಚ್ಚರಗಳಲ್ಲಿ ಕಾಯುವ, ಇಷ್ಟೆಲ್ಲ ಮಾಡಿಯೂ ಇವತ್ತಲ್ಲಾ ನಾಳೆ ಉದುರಿಹೋಗಲಿರುವ ಅವರನ್ನು ನೋಡಿ ಚಂದ್ರ ಅಲ್ಲೂ ನಗುತ್ತಿರಬೇಕಲ್ಲವೇ ಅನ್ನಿಸಿತು.
2019ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಎನ್‍ಡಿಟಿವಿಯ ಪ್ರಣಯ್ ರಾಯ್ ಅವರು ಉತ್ತರಪ್ರದೇಶದ, ಆದರೆ ಉದ್ಯೋಗಕ್ಕಾಗಿ ಮುಂಬೈನಲ್ಲಿರುವ ಯುವಕರನ್ನು ಕೇಳಿದಾಗ, ಅವರೆಲ್ಲ ತಾವು ವೋಟು ಹಾಕುವ ಕಾರಣಕ್ಕಾಗಿಯೇ ಹಳ್ಳಿಗೆ ಬಂದಿರುವುದಾಗಿಯೂ, ಈ ಬಾರಿ ತಾವು ಸೂಕ್ತ ವ್ಯಕ್ತಿಯನ್ನು ಆರಿಸಿ ಕಳಿಸುವುದಾಗಿಯೂ ಹಾಗೂ ಈ ಬಾರಿ ಚುನಾವಣೆ ನಡೆದ ನಂತರದಲ್ಲಿ, ಇನ್ನು ಐವತ್ತು ವರ್ಷಗಳ ಕಾಲ ಚುನಾವಣೆಯ ಅವಶ್ಯಕತೆಯೇ ಇಲ್ಲವೆಂದೂ ಹುಮ್ಮಸ್ಸಿನಲ್ಲಿ ಮಾತನಾಡುತ್ತಿ
ದ್ದರು. ಕೆಲವು ಅಧ್ಯಯನಗಳ ಪ್ರಕಾರ ‘ಮಿಲೆನಿಯಲ್’ ಮಕ್ಕಳು (1980ರ ನಂತರ ಹುಟ್ಟಿದವರು) ಜಗತ್ತಿನಾದ್ಯಂತ ಹೀಗೇ ಆಲೋಚನೆ ಮಾಡುತ್ತಾರಂತೆ.
1930ರ ಆಸುಪಾಸಿನಲ್ಲಿ ಹುಟ್ಟಿದ ಅಮೆರಿಕನ್ನರಲ್ಲಿ ಶೇ 72ರಷ್ಟು ಜನ, ಪ್ರಜಾಪ್ರಭುತ್ವವೇ ಅತ್ಯುತ್ತಮ ಆಡಳಿತ ವಿಧಾನ ಎಂದು ಹೇಳಿದರೆ, ಮಿಲೆನಿಯಲ್ ಮಕ್ಕಳಲ್ಲಿ ಶೇ 30ರಷ್ಟು ಮಂದಿ ಮಾತ್ರ ಪ್ರಜಾಪ್ರಭುತ್ವದ ಪರ ಒಲವು ತೋರುತ್ತಾರೆ (ಆದರೆ ಈಗ ಜಗತ್ತಿನಾದ್ಯಂತ ಯುವಜನ ದಿಟ್ಟ, ನೇರ ಮತ್ತು ಖಚಿತವಾಗಿ ಆಳುವವರನ್ನು ಪ್ರಶ್ನಿಸುವ ಆಶಾವಾದಿ ಬೆಳವಣಿಗೆ ಮತ್ತೆ ಕಂಡುಬರುತ್ತಿದೆ). ಅವರಿಗೆ ಪ್ರಜಾಪ್ರಭುತ್ವ, ಚುನಾವಣೆಗಿಂತಲೂ ಕಾಯ್ದೆ, ಕಾನೂನುಗಳನ್ನು ಮೀರಿ ಪ್ರಬಲವಾಗಿ ವರ್ತಿಸುವ ‘ನಾಯಕ’ನ ಬಗೆಗೆ ವಿಶೇಷ ಒಲವು ಇದೆಯಂತೆ.
ಸದಾ ರೋಚಕತೆಯ ಬೆನ್ನು ಹತ್ತುವ ಅವರಿಗೆ ಯುದ್ಧವೂ ರೋಚಕತೆಯ ಭಾಗವಾಗಿ ಕಾಣುವುದರಿಂದ ಬಲಿಷ್ಠ ನಾಯಕತ್ವದ ತುರ್ತು ಇರುತ್ತದೆ. ಹೀಗಾಗಿ, ಭವಿಷ್ಯದ ಅಪಾಯಗಳ ಕುರಿತು ಮಾತನಾಡುವ ಬಲ್ಲಿದರು ‘ಕೇವಲ ಬುದ್ಧಿಜೀವಿ’ಗಳಾಗಿ ಕಂಡು ಅವರ ಮಾತುಗಳಿಗೆ ಕಿವುಡಾಗುತ್ತಾರೆ. ಅವರನ್ನು ವಾಸ್ತವದ ಝಳವೊಂದೇ ಎಚ್ಚರಿಸಲು ಸಾಧ್ಯ. ಜಗತ್ತಿನಾದ್ಯಂತ ಇರುವ ಸರ್ವಾಧಿಕಾರಿಗಳಲ್ಲಿ ಹೆಚ್ಚಿನವರು ದೇಶದಲ್ಲಿ ಬದಲಾವಣೆ ತರುತ್ತೇವೆ ಎಂಬ ಭರವಸೆ ನೀಡಿಯೇ ಅಧಿಕಾರಕ್ಕೆ ಏರಿದವರು. ಆದರೆ ಅವರು ಅವರ ಹಿಂದಿನವರಿಗಿಂತ ಕಳಪೆ ಆಡಳಿತ ನೀಡಿರುತ್ತಾರೆ ಮಾತ್ರವಲ್ಲ, ಜನರನ್ನು ಬಡತನಕ್ಕೆ ನೂಕಿ ತಾವು ಸಿರಿವಂತಿಕೆಯ ಸುಪ್ಪತ್ತಿಗೆಯಲ್ಲಿ ತೇಲುತ್ತಿರುತ್ತಾರೆ.
ದೇಶದಲ್ಲಿನ ನಿರುದ್ಯೋಗ, ಅಶಾಂತಿ, ಅಸಮಾಧಾನಗಳು ಬಲಿಷ್ಠ ನಾಯಕನನ್ನು ಬಯಸುವುದಕ್ಕೆ ಪೂರಕ ವಾತಾವರಣ ಸೃಷ್ಟಿಸುತ್ತವೆ. ಆ ಬಲಿಷ್ಠ ನಾಯಕನಿಗೆ ವಿಶೇಷ ಗುಂಪುಗಳು ಬೆನ್ನೆಲುಬಂತೆ ಕೆಲಸ ಮಾಡುತ್ತಿರುತ್ತವೆ. ಹೀಗೆ ಬಲವಾಗಿ ಬೆಳೆಯುವ ಇವರು, ಜನರ ಆಸೆ ಪೂರೈಸುತ್ತಾರೆಂದು ಹೇಳಲಾಗುವುದಿಲ್ಲ.
ಗಯಾನಾ ದೇಶದ ಅಧ್ಯಕ್ಷ ನೆಗುಮಾ ಮೆಬಸಾಗೋ 1979ರಿಂದಲೂ ಆಳುತ್ತಿದ್ದು, ತೈಲ ರಫ್ತಿನಿಂದ ಕೋಟ್ಯಂತರ ರೂಪಾಯಿ ಸಂಪಾದಿಸಿಯೂ ಆ ದೇಶದ ಶೇ 76.8ರಷ್ಟು ಜನ ತೀವ್ರ ಬಡತನದಿಂದ ನರಳುತ್ತಿದ್ದಾರೆ. ಟರ್ಕಿಯ ಪ್ರಧಾನಿ ತಯ್ಯಿಪ್ ಎರ್ಡೊಗನ್, ವಿಶ್ವವಿದ್ಯಾಲಯಗಳನ್ನು ಮುಚ್ಚಿಸಿ, ವಿರೋಧ ಪಕ್ಷಗಳನ್ನು ದಮನಿಸಿ ಆಳುತ್ತಿರುವ ವ್ಯಕ್ತಿ. ಪ್ರಜೆಗಳಿಗೆ ಹೆಚ್ಚು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ ಎಂದು ಕರೆ ನೀಡುವ ಈತ, ಆ ಜನರ ಆರೋಗ್ಯ, ಪೌಷ್ಟಿಕತೆ ಇತ್ಯಾದಿಗಳ ಕಡೆ ಗಮನವನ್ನೇ ಹರಿಸುವುದಿಲ್ಲ. ಅಲ್ಲಿನ ಶೇ 21ರಷ್ಟು ಜನ ಬಡತನದಲ್ಲಿ ನರಳುತ್ತಿದ್ದಾರೆ.
ವೆನಿಜುವೆಲಾದ ಅಧ್ಯಕ್ಷ ನಿಕೊಲಸ್ ಮಡುರೊ 2013ರಿಂದಲೂ ಆಳುತ್ತಿದ್ದಾರೆ. ಅಲ್ಲಿನ ಆರ್ಥಿಕತೆ ಪೂರ್ತಿ ಕುಸಿದಿದ್ದು ಬಡತನದ ಪ್ರಮಾಣ ಶೇ 82ಕ್ಕೆ ಹೆಚ್ಚಿದೆ. ಸಿರಿಯಾದ ಬಷರ್ ಅಲ್ ಅಸದ್ ತಮ್ಮ ತಂದೆಯ ಸಾವಿನ ನಂತರ 2000ನೇ ಇಸವಿಯಿಂದಲೂ ಆಳುತ್ತಿದ್ದಾರೆ. ಜನ ಈತ ಬದಲಾವಣೆ ತರುತ್ತಾರೆಂಬ ಆಶಾವಾದದಲ್ಲಿದ್ದರು. ಆದರೆ ಅಲ್ಲೀಗ ಶೇ 82ರಷ್ಟು ಜನ ಬಡತನ ರೇಖೆಯ ಕೆಳಗಿದ್ದಾರೆ.
ಇದ್ರಿಸ್‍ಡೆಬಿ, ಚಾಡ್ ದೇಶವನ್ನು 1990ರಿಂದಲೂ ಆಳುತ್ತಿದ್ದು, ಅಪಾರ ಪ್ರಮಾಣದ ತೈಲ, ಯುರೇನಿಯಮ್, ಚಿನ್ನದ ಆದಾಯವಿದ್ದೂ ಶೇ 46ರಷ್ಟು ಜನ ಬಡತನದಲ್ಲಿದ್ದಾರೆ. ಇವರೆಲ್ಲರೂ ಅಲ್ಲಿನ ವಿರೋಧ ಪಕ್ಷ, ಮಾಧ್ಯಮಗಳು ಮತ್ತು ವಿಶ್ವವಿದ್ಯಾಲಯಗಳನ್ನು ಸಂಪೂರ್ಣ ಮೌನವಾಗಿಸಿ, ಹೊಗಳುಭಟರನ್ನು ಸೃಷ್ಟಿಸಿಕೊಂಡಿದ್ದಾರೆ. ಈ ಪಟ್ಟಿ ಮುಂದುವರಿಯುತ್ತಲೇ ಹೋಗುತ್ತದೆ.
ಈ ಉದಾಹರಣೆಗಳಿಗಿಂತ ಭಿನ್ನವಾದ ಕೆಲವು ನಿದರ್ಶನಗಳೂ ಇವೆ. ಭೂತಾನ್‍ನ ರಾಜ, ಜನ ಕೇಳದೇ ಇದ್ದಾಗಲೂ ದೇಶವನ್ನು ಪ್ರಜಾಪ್ರಭುತ್ವಕ್ಕೆ ಒಳಪಡಿಸಿದ. ಮಾತ್ರವಲ್ಲ, ರಾಜನ ಮೇಲೆ ದೋಷಾರೋಪ ಹೊರಿಸುವ ಅಧಿಕಾರವನ್ನೂ ಅರವತ್ತೈದು ವರ್ಷಕ್ಕೆ ರಾಜ ನಿವೃತ್ತಿ ಹೊಂದಬೇಕು ಎಂಬ ನಿಯಮವನ್ನೂ ಅಲ್ಲಿನ ಸಂವಿಧಾನದಲ್ಲಿ ರಾಜನೇ ಅಳವಡಿಸಿದ ಅಪರೂಪದ ನಡೆ ಅಲ್ಲಿಯದು. ಆಧುನಿಕತೆ ಬೇಕು, ಪಾಶ್ಚಾತ್ಯ ಅನುಕರಣೆ ಬೇಡ ಎಂಬ ನಿಲುವು ಅವರದು. ಭೂತಾನ್ ಶೇ 72ರಷ್ಟು ಕಾಡನ್ನು ಹೊಂದಿದ್ದು, ಜಗತ್ತಿನ ಏಕೈಕ ಕಾರ್ಬನ್‍ನ್ಯೂಟ್ರಲ್, ಕಾರ್ಬನ್ ನೆಗೆಟಿವ್ ದೇಶವೆನಿಸಿದೆ.
ಇಲ್ಲಿ ಜಿಡಿಪಿ ಬದಲಿಗೆ ಜಿಎನ್‌ಎಚ್ (ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್) ಮಾನದಂಡ ಇದೆ. ಇಲ್ಲಿನ ಶೇ 93ರಷ್ಟು ಜನ ಕೃಷಿಕರಾಗಿದ್ದೂ ಸುಖವಾಗಿದ್ದಾರೆ. ದೇಶದಾದ್ಯಂತ ಎಲ್ಲರಿಗೂ ಪ್ರಾಥಮಿಕ ಶಿಕ್ಷಣ ಉಚಿತ. ಆರೋಗ್ಯ ಸೇವೆ ಸಂಪೂರ್ಣ ಉಚಿತ. ಮಾಲಿನ್ಯರಹಿತ ನೀರು, ಗಾಳಿಯಿಂದಾಗಿ ಅತ್ಯುತ್ತಮ ಆರೋಗ್ಯವೂ ಇದೆ. ದೇಶದ ಜನರನ್ನು ಸುಖವಾಗಿಡಬೇಕು ಎಂಬ ಅವರ ಕಾಳಜಿಗೆ ಸಾಟಿ ಇಲ್ಲ. ಇನ್ನೊಂದೆಡೆ, ಅತಿ ಹಳೆಯ ಮಾಡೆಲ್ ವಾಹನಗಳು ಓಡಾಡುವ ಕ್ಯೂಬಾ ದೇಶವನ್ನು ನೋಡಿ, ಇವರು ಬಹಳ ಕಷ್ಟದಲ್ಲಿದ್ದಾರೆ ಎಂದು ತಿಳಿದ ಕವಿ ಎಚ್.ಎಸ್.ಶಿವಪ್ರಕಾಶ್ ಅಲ್ಲಿನ ಯುವಜನರನ್ನು ಕೇಳಿದಾಗ ಅವರು, ‘ಖಂಡಿತಾ ಇಲ್ಲ. ಇಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರದವರೆಗಿನ ಶಿಕ್ಷಣ ನಿಶ್ಶುಲ್ಕ. ಆರೋಗ್ಯ ಚಿಕಿತ್ಸೆ ಎಲ್ಲರಿಗೂ ಉಚಿತ. ದವಸಧಾನ್ಯ, ಸಾರ್ವಜನಿಕ ಸಂಚಾರ, ಟೆಲಿಫೋನ್ ಎಲ್ಲವೂ ಸಸ್ತಾ. ನಮಗೆ ಯಾವುದೂ ಕಡಿಮೆಯಿದೆ ಅನಿಸುವುದೇ ಇಲ್ಲ’ ಎಂದು ಉತ್ತರಿಸಿದರಂತೆ.
ಭಾರತ ಮತ್ತು ಚೀನಾದ ಒತ್ತಿನಲ್ಲಿರುವ ಭೂತಾನ್‍ನಲ್ಲಿ ರಾಜ ಮತ್ತು ಅವರು ಅನುಸರಿಸುವ ಬೌದ್ಧಧರ್ಮ ತಮ್ಮ ಪಂಜಗಳನ್ನು ಜನರ ಕತ್ತಿನ ಬಳಿ ಹಿಡಿಯದೇ ಜನರನ್ನು ತಮ್ಮ ಬೊಗಸೆಯಲ್ಲಿ ಕಾಪಿಟ್ಟುಕೊಂಡಿರುವುದರಿಂದ, ಅವರ ಮುಖಗಳಲ್ಲಿ ನಗು ಅರಳಿದೆ. ಸಮಾಜವಾದಿ ಸಿದ್ಧಾಂತದ ಸಮಾನತೆಯ ನಂಬಿಕೆ ಅಮೆರಿಕದಿಂದ ಕೇವಲ 124 ಕಿ.ಮೀ. ದೂರದಲ್ಲಿರುವ ಕ್ಯೂಬನ್ನರಲ್ಲಿ ದುರಾಸೆ ಮೂಡದಂತೆ, ಆರ್ಥಿಕ ದಿಗ್ಬಂಧನಕ್ಕೆ ಕೊರಗದಂತೆ ಕಾಪಿಟ್ಟಿದೆ. ನಮ್ಮ ದೇಶದಲ್ಲಿ ಬರೀ 64 ಜನರಿಗೆ ಕೇಂದ್ರ ಸರ್ಕಾರದ ಬಜೆಟ್ ಮೊತ್ತಕ್ಕಿಂತಲೂ ಹೆಚ್ಚಿನ ಆದಾಯ ಇದೆ. ನಮ್ಮಲ್ಲಿ ಸಂಪತ್ತಿಗೇನೂ ಕೊರತೆ ಇಲ್ಲ. ಹಾಗಿದ್ದರೂ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಎಲ್ಲರಿಗೂ ಎಟಕುವ ರೀತಿಯಲ್ಲಿ ಪರಿಣಾಮಕಾರಿಯಾಗಿ ಒದಗಿಸಲು ನಮಗೆ ಇನ್ನೂ ಸಾಧ್ಯವಾಗಿಲ್ಲ.
***
ದಿನವಿಡೀ ಅಧಿಕಾರ ಮೆರೆದು ಉರಿದ ಸೂರ್ಯ, ಆಯಾಸ ಕಳೆದುಕೊಳ್ಳಲು ಪಡುವಣದ ಕಡಲಿಗೆ ಧಾವಿಸುವುದನ್ನು ಕಂಡು ಚಂದ್ರ ಈಗಲೂ ನಗುತ್ತಿರಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.