ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂಡಕ್ಕೆ ಪರೋಕ್ಷವಾಗಿ ಹೇಳಿರುವ ‘ಬುದ್ಧಿವಾದ’ ದೇಶದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಂಚಲನ ಉಂಟುಮಾಡಿದೆ. ಈ ಹೇಳಿಕೆ ಯಿಂದ ಬಿಜೆಪಿ ನಾಯಕರಿಗೆ ಆಗಿರುವ ಆಘಾತದ ತೀವ್ರತೆಗಿಂತ ಸಂಘ ಪರಿವಾರದ ಸೈದ್ಧಾಂತಿಕ ವಿರೋಧಿಗಳಿಗೆ ಆಗಿರುವ ಸಂತೋಷ, ಸಮಾಧಾನದ ತೀವ್ರತೆಯೇ ಹೆಚ್ಚಾಗಿ ಇರುವಂತಿದೆ. ‘ಮೋದಿ ಅವರಿಗೆ ಆರ್‌ಎಸ್‌ಎಸ್ ಸರಿಯಾದ ಪಾಠ ಕಲಿಸಿದೆ, ಇನ್ನು ಮೋದಿಯವರ ಯುಗ ಮುಗಿಯಿತು’ ಎಂದು ನಮ್ಮ ಪ್ರಗತಿಪರರು, ಬುದ್ಧಿಜೀವಿಗಳು ಪಿಸುಗುಟ್ಟತೊಡಗಿದ್ದಾರೆ.
ಭಾಗವತ್ ಅವರ ಭಾಗವತಿಕೆಯಲ್ಲಿ ತೇಲಿ ಹೋದವರು ಒಮ್ಮೆ ಕಣ್ಣುಬಿಟ್ಟು ನೋಡಿದರೆ ವಾಸ್ತವದ ಅರಿವಾಗಬಹುದು. ‘ನರೇಂದ್ರ ಮೋದಿಯವರಿಗೆ ಪಾಠ ಕಲಿಸಿರುವುದು ಆರ್‌ಎಸ್ಎಸ್ ಅಲ್ಲ, ಅದು ಈ ದೇಶದ ಪ್ರಜ್ಞಾವಂತ ಮತದಾರ, ನರೇಂದ್ರ ಮೋದಿ ಯುಗ ಮುಗಿದಿದೆ, ಮುನ್ನೂರರ ಬಲದ ಬಿಜೆಪಿ ಕೂಡಸದ್ಯೋಭವಿಷ್ಯದಲ್ಲಿ ಮರಳಿ ಬಾರದು’ ಎನ್ನುವ ಗೋಡೆಯ ಮೇಲಿನ ಬರಹ ಸ್ಪಷ್ಟವಾಗಿದೆ.
ಗ್ಯಾರಂಟಿಯಾಗಿ ಹೇಳಬಹುದಾದರೆ, ಬಿಜೆಪಿ ಕನಿಷ್ಠ ಇನ್ನು ಐದು ವರ್ಷ ಅಧಿಕಾರದಲ್ಲಿದ್ದರೂ ಸಂವಿಧಾನ ಬದಲಾವಣೆಯ ಸೊಲ್ಲೆತ್ತುವುದಿಲ್ಲ, ಮಥುರಾ-ಕಾಶಿಯಲ್ಲಿ ಹಿಂದೂಗಳ ಹಕ್ಕು ಸ್ಥಾಪನೆಯ ಬೇಡಿಕೆ ಮಂಡಿಸುವುದಿಲ್ಲ. ಸಮಾನ ನಾಗರಿಕ ಸಂಹಿತೆ ಜಾರಿಯಾಗುವುದಿಲ್ಲ, ಮುಸ್ಲಿಮರ ಮೀಸಲಾತಿ ರದ್ದಾ
ಗುವುದಿಲ್ಲ, ಏಕರೂಪದ ಚುನಾವಣೆಯ ಬಗ್ಗೆಯೂ ಸರ್ಕಾರ ಮಾತನಾಡುವುದಿಲ್ಲ. ಇಷ್ಟಕ್ಕೆ ನಿರಾಳವಾಗಿ ಇರಬಹುದೇ? ಇದು, ಇನ್ನೇನು ಅಪ್ಪಳಿಸಲಿದೆ ಎಂದು ಭೀತಿ ಹುಟ್ಟಿಸಿದ್ದ ಸುನಾಮಿ-ಚಂಡಮಾರುತ ಸರಿದುಹೋದಾಗ ಹುಟ್ಟಿಕೊಂಡ ತಕ್ಷಣದ ನಿರಾಳ ಭಾವ.
ಪ್ರಕೃತಿಯ ವೈಚಿತ್ರ್ಯಗಳು ಮರುಕಳಿಸುವಂತೆ ಇತಿಹಾಸವೂ ಮರುಕಳಿಸುತ್ತದೆ. ಮೈತ್ರಿಧರ್ಮ ಪಾಲನೆಯ ಬಂಧನ ಇರುವುದು ಬಿಜೆಪಿಗೆ, ಸಂಘ ಪರಿವಾರಕ್ಕೆ ಅಲ್ಲವಲ್ಲ, ಅದು ತನ್ನ ಕೆಲಸ ಶುರುಮಾಡಿದೆ. ನೇಪಥ್ಯದಲ್ಲಿದ್ದು ತಾಲೀಮು ನಡೆಸುತ್ತಿದ್ದ ಪ್ರಧಾನ ಗಣವೇಷಧಾರಿ ಮೋಹನ್ ಭಾಗವತ್ ಅವರು ರಂಗಪ್ರವೇಶ ಮಾಡಿ ಗುಡುಗಿದ್ದಾರೆ. ‘ಸೇವಕನಿಗೆ ಅಹಂಕಾರ ಇರಬಾರದು, ನಡವಳಿಕೆಯಲ್ಲಿ ಸಭ್ಯತೆ, ಘನತೆ ಇರಬೇಕು ಎಂದೆಲ್ಲ ಬುದ್ಧಿ ಹೇಳಿದ್ದಾರೆ. ಮೋದಿಯವರು ಸೋನಿಯಾ ಗಾಂಧಿ ಅವರನ್ನು ಜರ್ಸಿ ದನ ಎಂದು ಹೀಗಳೆದಾಗ, ಮುಸ್ಲಿಮರೆಂದರೆ ಕಾರಿಗೆ ಅಡ್ಡ ಬಂದ ನಾಯಿಮರಿಗಳು ಎಂಬರ್ಥದಲ್ಲಿ ಮಾತನಾಡಿದಾಗ ಯಾಕೆ ಆಕ್ಷೇಪಿಸಲಿಲ್ಲ ಎಂದು ಕೇಳಿದರೆ, ಕಳೆದುಹೋದ ಇತಿಹಾಸವನ್ನು ಯಾಕೆ ನೆನಪಿಸುತ್ತೀರಿ ಎಂದು ಭಾಗವತ್ ಅವರು ಹೇಳಬಹುದು.
ಹಾಗಿದ್ದರೆ ಮೊನ್ನೆ ಮೊನ್ನೆ ಚುನಾವಣಾ ಪ್ರಚಾರ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷ ಮಂಗಳಸೂತ್ರ ಕಿತ್ತುಕೊಳ್ಳುತ್ತದೆ, ಹಿಂದೂಗಳ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತದೆ, ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಕೊಡುತ್ತದೆ, ಅವರು ಹಿಂದೂಗಳ ಎಮ್ಮೆ ಹೊಡ್ಕೊಂಡು ಹೋಗುತ್ತಾರೆ ಎಂದೆಲ್ಲ ‘ಅಹಂಕಾರ’ಭರಿತರಾಗಿ ಪ್ರಚೋದನಕಾರಿ ಹಸಿ ಸುಳ್ಳುಗಳನ್ನು ಉದುರಿಸುತ್ತಿದ್ದಾಗ ಮೋಹನ್ ಭಾಗವತ್ ಎಲ್ಲಿದ್ದರು? ವಾನಪ್ರಸ್ಥಾಶ್ರಮ ಸೇರಿದ್ದರೆ? ಆಗಲೇ ಬುದ್ಧಿ ಹೇಳಿ ಮೋದಿ ಅವರ ತಲೆಗೆ ಮೊಟಕಿದ್ದರೆ ಅವರು ಕೇಳುತ್ತಿದ್ದರೋ ಇಲ್ಲವೋ ಎನ್ನುವುದು ನಂತರದ ಚರ್ಚೆ, ಕನಿಷ್ಠ ಈಗ ತಪ್ಪನ್ನು ಪ್ರಶ್ನಿಸುವ ನೈತಿಕತೆಯಾದರೂ ಇರುತ್ತಿತ್ತು.
ನರೇಂದ್ರ ಮೋದಿ ಅವರನ್ನು ಹಿಂದೂ ಹೃದಯ ಸಾಮ್ರಾಟ ಎಂದು ಮೆರವಣಿಗೆ ಮಾಡಿದ್ದ ಆರ್‌ಎಸ್ಎಸ್‌ಗೆ ಈಗ ಒಮ್ಮಿಂದೊಮ್ಮೆಲೇ ಅವರಲ್ಲಿ ಅಹಂಕಾರ, ಉದ್ಧಟತನ, ಸ್ವಾರ್ಥದಂತಹ ಅವಗುಣಗಳೆಲ್ಲ ಕಾಣಿಸಿಕೊಂಡದ್ದು ಹೇಗೆ? ಒಂದೊಮ್ಮೆ ಮೋದಿ ನೇತೃತ್ವದ ಬಿಜೆಪಿ ಚಾರ್ ಸೌ ಪಾರ್ ಆಗಿದ್ದರೆ ಅಥವಾ ಕನಿಷ್ಠ 300 ಸ್ಥಾನಗಳನ್ನು ಗೆದ್ದಿದ್ದರೆ ಆಗಲೂ ಭಾಗವತ್ ಅವರು ಈಗಿನ ಬುದ್ಧಿಮಾತುಗಳನ್ನೇ ಹೇಳುತ್ತಿದ್ದರೇ? ಖಂಡಿತ ಇಲ್ಲ.
ಸೇವಕನಿಗೆ ಅಹಂಕಾರ ಇರಬಾರದು ಎಂದು ಬುದ್ಧಿ ಹೇಳುತ್ತಿರುವ ಭಾಗವತರು ಮೊದಲು ಈ ಅಹಂಕಾರವನ್ನು ಮೋದಿಯವರಲ್ಲಿ ತುಂಬಿದವರು ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ. ತಾನು ಜೈವಿಕವಾಗಿ ಹುಟ್ಟಿದವನೇ ಅಲ್ಲ, ದೇವರೇ ತನ್ನನ್ನು ಕಳುಹಿಸಿದ್ದಾನೆ ಎನ್ನುವಷ್ಟು ದುರಹಂಕಾರ ತೋರುತ್ತಿರುವ ಮೋದಿ ಅವರು ಇದೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ಪನ್ನ, ಹೆಮ್ಮೆಯ ಪುತ್ರ. ಮೋದಿ ಅವರು ಹೀಗಾಗಿರುವುದು ಹಿಂದಿನ ಮೂರು ತಿಂಗಳಲ್ಲಿ ಅಲ್ಲ, ಗಿಡವಾಗಿ ಅವರು ಬೆಳೆದದ್ದೇ ಹಾಗೆ, ಈಗ ಮರ ಬಗ್ಗಿಸಲು ಹೊರಟರೆ ಅದು ಬಗ್ಗೀತೆ?
ಗುಜರಾತ್ ಹತ್ಯಾಕಾಂಡದ ಸಮಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಮೋದಿಯವರ ತಲೆದಂಡ ಬಯಸಿದಾಗ, ಲಾಲ್ ಕೃಷ್ಣ ಅಡ್ವಾಣಿ ಅವರ ಮೂಲಕ ಅವರ ತಲೆ ಉಳಿಸಿದ್ದು ಇದೇ ಆರ್‌ಎಸ್‌ಎಸ್ ಅಲ್ಲವೇ? ಸರ್ವಾಧಿಕಾರಿಯಾದವನು ವಿರೋಧಿಗಳ ತಲೆ ಕಡಿಯುತ್ತಾನೆ, ಶರಣಾದವರನ್ನು ಅಡಿಯಾಳುಗಳನ್ನಾಗಿಸುತ್ತಾನೆ. ಮೋದಿ ಅವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾದ ನಂತರದ ಇಲ್ಲಿಯವರೆಗಿನ 24 ವರ್ಷಗಳಲ್ಲಿ ಉರುಳಿಸಿದ ತಲೆಗಳ ಲೆಕ್ಕ ಹಾಕಿದರೆ ಅವರೊಳಗೆ ಬೆಳೆಯುತ್ತಿದ್ದ ಸರ್ವಾಧಿಕಾರಿಯ ಸರಿಯಾದ ಪರಿಚಯ ಆಗಬಹುದು.
ರಾಮಜನ್ಮಭೂಮಿ ಚಳವಳಿಯ ಮೂಲಕ ದೆಹಲಿ ಗದ್ದುಗೆವರೆಗೆ ಬಿಜೆಪಿಯನ್ನು ತಂದು ಕೂರಿಸಿದ್ದ ಮತ್ತು ತನಗೆ ರಾಜಕೀಯ ಜೀವದಾನ ಮಾಡಿದ್ದ ಲಾಲ್ ಕೃಷ್ಣ ಅಡ್ವಾಣಿಯವರನ್ನೇ ಅವರು ಬಿಡಲಿಲ್ಲ. ಮುರಳಿ ಮನೋಹರ ಜೋಷಿ, ಯಶವಂತ ಸಿನ್ಹಾ, ಅರುಣ್ ಶೌರಿ, ಸಂಜಯ ಜೋಷಿ, ಕೇಶುಭಾಯಿ ಪಟೇಲ್, ಹರೇನ್ ಪಾಂಡ್ಯ, ಸುರೇಶ್ ಮೆಹ್ತಾ, ವೆಂಕಯ್ಯ ನಾಯ್ಡು, ನಿತಿನ್ ಗಡ್ಕರಿ, ವಸುಂಧರಾ ರಾಜೆ, ಉಮಾಭಾರತಿ… ಪಟ್ಟಿ ಇನ್ನೂ ಉದ್ದ ಇದೆ. ಇದರಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಯೋಗಿ ಅದಿತ್ಯನಾಥ ಅವರನ್ನೂ ಸೇರಿಸಬಹುದು. ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಮತ್ತು ಅನಂತಕುಮಾರ್ ಬದುಕಿದ್ದರೆ ಅವರೂ ಮೂಲೆಗುಂಪಾಗುತ್ತಿದ್ದರು. ಕಷ್ಟಕಾಲದಲ್ಲಿ ಪಕ್ಷದಲ್ಲಿದ್ದು ಅದನ್ನು ಕಟ್ಟಿ ಬೆಳೆಸಿದ ಈ ಸಂಘ ನಿಷ್ಠರಾದ ವಾಜಪೇಯಿ-ಅಡ್ವಾಣಿ ಶಿಷ್ಯರೆಲ್ಲರ ನಾಯಕತ್ವಕ್ಕೆ ಮೋದಿಯವರು ಅಂತ್ಯ ಹಾಡುತ್ತಿದ್ದಾಗ ಆರ್‌ಎಸ್‌ಎಸ್ ಯಾಕೆ ದನಿ ಎತ್ತಲಿಲ್ಲ?
ಈಗಿನ ಕಾರಣ ಬಹಳ ಸರಳವಾದುದು. ಮೋದಿ ಯುಗ ಮುಗಿದಿದೆ ಎನ್ನುವ ಚುನಾವಣಾ ಫಲಿತಾಂಶದ ಸಂದೇಶವನ್ನು, ನಾಯಕರನ್ನು ಬಳಸಿ ಬಿಸಾಕುವ ಚಾಳಿಯ ಆರ್‌ಎಸ್ಎಸ್ ಎಲ್ಲರಿಗಿಂತ ಚೆನ್ನಾಗಿ ಅರ್ಥಮಾಡಿಕೊಂಡಿದೆ. ಮೋದಿಯವರ ರಾಜಕೀಯ ಆಯುಷ್ಯ ಇರುವುದು ಹೆಚ್ಚೆಂದರೆ ಇನ್ನು ಐದು ವರ್ಷ. ಅದರ ನಂತರ ಅವರು ಬಿಜೆಪಿ ಬಗ್ಗೆ ತಲೆಕೆಡಿಸಿಕೊಳ್ಳಲಾರರು. ಆದರೆ ಆರ್‌ಎಸ್‌ಎಸ್‌ಗೆ ಈ ಬಗ್ಗೆ ತಲೆಕೆಡಿಸಿಕೊಳ್ಳದೇ ಇರಲು ಆಗದು.
ಬಿಜೆಪಿ ಮತ್ತು ಸಂಘ ಪರಿವಾರದ ನಡುವೆ ಒಂದು ಪರಸ್ಪರ ಸಹಮತದ ಒಪ್ಪಂದ ಇದೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ಅದರ ಲಾಭವನ್ನು ಬಳಸಿಕೊಂಡು ತನ್ನನ್ನು ಆಳ-ಅಗಲಕ್ಕೆ ವಿಸ್ತರಿಸಿಕೊಂಡು ಬುಡ ಭದ್ರ ಮಾಡಿಕೊಳ್ಳುವುದು ಮಾತ್ರವಲ್ಲ, ಸರ್ಕಾರಕ್ಕೆ ಮುಜುಗರ ಉಂಟುಮಾಡುವ ಮಾತು-ಕೃತಿಗಳಿಂದ ಸಾಧ್ಯವಿದ್ದಷ್ಟೂ ದೂರ ಇರುವುದು, ಅಧಿಕಾರ ಕೈಯಿಂದ ದೂರ ಸರಿದಾಗ ಉಗ್ರಸ್ವರೂಪ ತಾಳಿ ಹಿಂದೂ ಮತಗಳ ಧ್ರುವೀಕರಣಕ್ಕಾಗಿ ತನ್ನಲ್ಲಿರುವ ಕೋಮುವಾದದ ಮದ್ದುಗುಂಡುಗಳನ್ನೆಲ್ಲ ಬಳಸಿಕೊಂಡು ಕದನಕ್ಕೆ ಇಳಿದುಬಿಡುವುದು.
ಆದ್ದರಿಂದ ಮೋಹನ್ ಭಾಗವತ್ ಅವರ ಹೇಳಿಕೆಯ ಬಗ್ಗೆ ಆತ್ಮಾವಲೋಕನ ಇಲ್ಲವೇ ಕದನವಿರಾಮ ಎಂಬ ತೀರ್ಮಾನಕ್ಕೆ ಬಂದರೆ, ಹಿಂದುತ್ವದ ಅಸಲಿ ಮುಖವಾದ ಆರ್‌ಎಸ್‌ಎಸ್‌ನ ಪರಿಚಯ ಇಲ್ಲ ಎಂದರ್ಥ. ಇನ್ನೇನು ಒಂದು ವರ್ಷಕ್ಕೆ ನೂರು ತುಂಬಲಿರುವ ಆರ್‌ಎಸ್‌ಎಸ್ ಕೈಕಟ್ಟಿ ಕೂರುವ ಸಂಘಟನೆ ಅಲ್ಲ. ಉಳಿದಿರುವ ಅಜೆಂಡಾಗಳನ್ನು ಜಾರಿಗೆ ತರಲು ಬೇಕಾದ ರಾಜಕೀಯ ಅಧಿಕಾರ ಗಳಿಸುವ ಇನ್ನೊಂದು ಸುತ್ತಿನ ಕದನಕ್ಕೆ ಅದು ರೆಡಿಯಾಗಿದೆ. ಈ ಕದನ ಮೊದಲು ಒಳಗಿನಿಂದಲೇ ಶುರುವಾಗಿದೆ. ಇದಕ್ಕೆ ಸದ್ಯದಲ್ಲಿಯೇ ನಡೆಯಬೇಕಾಗಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ವೇದಿಕೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.