ಇತಿಹಾಸವನ್ನು ನೋಡಿದರೆ, ಭಾರತೀಯ ಜನತಾ ಪಕ್ಷವು ಸೈದ್ಧಾಂತಿಕ ಬದ್ಧತೆಯಿಂದ ಮೀಸಲಾತಿ ಪರವಾಗಿ ಎಂದೂ ಗಟ್ಟಿಯಾಗಿ ನಿಂತ ಉದಾಹರಣೆಗಳೇ ಇಲ್ಲ. ಬಿಜೆಪಿಗೆಮೀಸಲಾತಿಯ ವಿರೋಧದಿಂದ ಲಾಭವಾಗಿದೆಯೇ ವಿನಾ ಮೀಸಲಾತಿ ಪರ ನಿಲುವಿನಿಂದ ಖಂಡಿತ ಅಲ್ಲ ಎಂಬ ರಾಜಕೀಯ ವಾಸ್ತವವೂ ಇದಕ್ಕೆ ಕಾರಣ ಇರಬಹುದು. 1984ರಲ್ಲಿ ಲೋಕಸಭೆಯಲ್ಲಿ ಎರಡೇ ಎರಡು ಸ‍್ಥಾನಗಳನ್ನು ಹೊಂದಿದ್ದ ಬಿಜೆಪಿಯ ಪ್ರಾರಂಭಿಕ ಹಂತದ ರಾಜಕೀಯ ಯಶಸ್ಸಿನ ದೊಡ್ಡ ಪಾಲು ‘ಮಂಡಲ’ ವಿರುದ್ಧದ ‘ಕಮಂಡಲ’ ಚಳವಳಿಗೆ ಸಲ್ಲುತ್ತದೆ.
‘ಮಂಡಲ– ಕಮಂಡಲ’ ಸಂಘರ್ಷದ ನಂತರ ಗಂಗೆ- ಕಾವೇರಿಯಲ್ಲಿ ಬಹಳಷ್ಟು ನೀರು ಹರಿದುಹೋಗಿದೆ. ದೇಶದ ರಾಜಕೀಯ- ಸಾಮಾಜಿಕ ಸ್ಥಿತಿ ಮಗ್ಗುಲು ಬದಲಿಸಿದೆ. ‘ಬ್ರಾಹ್ಮಣ್- ಬನಿಯಾ ಪಕ್ಷ’ ಎಂಬ ಟೀಕೆಗೆ ಒಳಗಾಗಿದ್ದ ಬಿಜೆಪಿಯಲ್ಲಿ ಈಗ ಹಿಂದುಳಿದ ಜಾತಿಯ ವ್ಯಕ್ತಿ ಪ್ರಧಾನಿಯಾಗಿದ್ದಾರೆ. ಒಂದು ಕಾಲದ ಬಿಜೆಪಿಯ ಐಡಲಾಗ್ ಗೋವಿಂದಾಚಾರ್ಯರು ಠಂಕಿಸಿದ್ದ ‘ಸೋಷಿಯಲ್ ಎಂಜಿನಿಯರಿಂಗ್’ ಎಂಬ ಜಾತಿ ರಾಜಕೀಯದ ಸೂತ್ರವನ್ನು ಬಿಜೆಪಿ ತನ್ನ ಪ್ರಮುಖ ಎದುರಾಳಿ ಪಕ್ಷ ಕಾಂಗ್ರೆಸ್‌ಗಿಂತ ಯಶಸ್ವಿಯಾಗಿ ಪ್ರಯೋಗಿಸುತ್ತಾ ಬಂದಿದೆ.
ಉತ್ತರಪ್ರದೇಶ ಮತ್ತು ಬಿಹಾರದಲ್ಲಿನ ಯಾದವರು ಮಂಡಲೋತ್ತರ ರಾಜಕೀಯದ ಪ್ರಮುಖ ಫಲಾನುಭವಿ ಸಮುದಾಯ. ಆ ಎರಡು ರಾಜ್ಯಗಳಲ್ಲಿನ ‘ಇತರ ಹಿಂದುಳಿದ ಜಾತಿ’ಗಳನ್ನು ತಮ್ಮ ಕಡೆ ಸೆಳೆಯುವ ಮೂಲಕ ಯಾದವರ ರಾಜಕೀಯ ಶಕ್ತಿಯನ್ನು ಬಿಜೆಪಿ ಯಶಸ್ವಿಯಾಗಿ ಕುಂದಿಸಿದೆ. ಇದೇ ರೀತಿ, ಉತ್ತರಪ್ರದೇಶ ದಲ್ಲಿ ಮಾಯಾವತಿ ಅವರ ಸ್ವಜಾತಿಯ ಜಾಟವರಿಂದ ಇತರ ದಲಿತ ಜಾತಿಗಳನ್ನು ದೂರ ಮಾಡುವ ಕೆಲಸವನ್ನು ‘ಮಹಾದಲಿತ್’ ಗುಂಪು ಕಟ್ಟುವ ಮೂಲಕ ಮಾಡಿದೆ. ಬಿಹಾರದಲ್ಲಿ ರಾಮವಿಲಾಸ್ ಪಾಸ್ವಾನ್ ಅವರ ಮೂಲಕ ದಲಿತರನ್ನು ಒಡೆದು ರಾಜಕೀಯ ಲಾಭ ಮಾಡಿಕೊಂಡಿದೆ.
ಉತ್ತರ ಭಾರತದ ಈ ಪ್ರಯೋಗವನ್ನು ಬೇರೆ ರಾಜ್ಯಗಳಲ್ಲಿಯೂ ಮಾಡುವ ಪ್ರಯತ್ನ ಬಿಜೆಪಿಯಿಂದ ನಡೆದಿದೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯೊಳಗಿನ ಎಡ- ಬಲ ಗುಂಪುಗಳ ನಡುವಿನ ಸಾಮಾಜಿಕ ಮತ್ತು ರಾಜಕೀಯ ಸಂಘರ್ಷವನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯುತ್ತಾ ಬಂದಿರುವುದಕ್ಕೆ ಇತ್ತೀಚಿನ ಚುನಾವಣೆಗಳಲ್ಲಿ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಗಳಿಸುತ್ತಿರುವ ಸ್ಥಾನಗಳೇ ಸಾಕ್ಷಿ.
ಕರ್ನಾಟಕದ ಹಿಂದುಳಿದ ಜಾತಿಗಳ ಮೇಲೆ ಈ ಸೋಷಿಯಲ್ ಎಂಜಿನಿಯರಿಂಗ್ ಪ್ರಯೋಗವನ್ನು ಎರಡು ದಶಕಗಳ ಹಿಂದೆಯೇ ಪ್ರಾರಂಭಿಸಿದ್ದ ಬಿಜೆಪಿ ಕಣ್ಣು ಹಾಕಿದ್ದು ರಾಜ್ಯದ ಹಿಂದುಳಿದ ಜಾತಿಗಳಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ಕುರುಬರು ಮತ್ತು ಈಡಿಗರ ಮೇಲೆ. ಬಿಹಾರದಲ್ಲಿ ಕುರ್ಮಿ ಜಾತಿಯ ನಿತೀಶ್ ಕುಮಾರ್ ಅವರನ್ನು ಯಾದವ ನಾಯಕ ಲಾಲು ಪ್ರಸಾದ್ ಅವರ ಎದುರು ಎತ್ತಿಕಟ್ಟಿ ಯಾದವೇತರ ಹಿಂದುಳಿದ ಜಾತಿಗಳನ್ನು ಸೆಳೆದ ಹಾಗೆಯೇ ಕರ್ನಾಟಕ ದಲ್ಲಿ ಈ ರಾಜಕೀಯಕ್ಕೆ ಬಿಜೆಪಿ ಆರಿಸಿಕೊಂಡದ್ದು
ಎಸ್.ಬಂಗಾರಪ್ಪ ಅವರನ್ನು. ಬಂಗಾರಪ್ಪ ಬಹುಬೇಗ ಬಿಜೆಪಿ ಬಗ್ಗೆ ಭ್ರಮನಿರಸನಗೊಂಡು ಹೊರಗೆ ಬಂದರೂ ಅವರ ಜೊತೆ ಹೋಗಿದ್ದ ಹಿಂದುಳಿದ ಜಾತಿಗಳ ಹಲವು ನಾಯಕರು ಮತ್ತು ಬಹಳಷ್ಟು ಮತದಾರರು ಆ ಕಡೆಯೇ ಉಳಿದುಬಿಟ್ಟರು.
ಇದಾದ ನಂತರವೂ ಕಾಂಗ್ರೆಸ್ ಪರವಾಗಿರುವ ಹಿಂದುಳಿದ ಜಾತಿಗಳನ್ನು ಸಂಪೂರ್ಣವಾಗಿ ಒಡೆಯಲು ಬಿಜೆಪಿಗೆ ಸಾಧ್ಯವಾಗಿಲ್ಲ. ಕೆ.ಎಸ್.ಈಶ್ವರಪ್ಪ ಎಂಬ ಸಂಘನಿಷ್ಠ ನಾಯಕ ಪಕ್ಷದಲ್ಲಿಯೇ ಇದ್ದರೂ ಅವರನ್ನು ಕುರುಬರು ಇಲ್ಲವೇ ಹಿಂದುಳಿದ ಜಾತಿಗಳವರು ತಮ್ಮ ನಾಯಕನೆಂದು ಎಂದೂ ಒಪ್ಪಿಕೊಂಡಿಲ್ಲ. ಬಿಹಾರದಲ್ಲಿ ಲಾಲು ಪ್ರಸಾದ್ ಅವರಂತೆ ಕರ್ನಾಟಕದಲ್ಲಿ ಬಿಜೆಪಿ ಜೊತೆ ಎಂದೂ ರಾಜಿಯಾಗದೆ ಹಿಂದುಳಿದ ಜಾತಿಗಳು ಮತ್ತು ಬಿಜೆಪಿ ನಡುವೆ ತಡೆಗೋಡೆಯಾಗಿ ನಿಂತಿರುವವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಬೇಡಿಕೆಯನ್ನು ಹುಟ್ಟುಹಾಕಿ ಅವರನ್ನು ಏಕಾಂಗಿ ಮಾಡುವ ನಾಟಕ ನಡೆದರೂ ಅದು ವಿಫಲವಾಯಿತು.
ಬಿಜೆಪಿಗೆ ಮುಂದಿನ ಲೋಕಸಭಾ ಚುನಾವಣೆ ಎಷ್ಟು ಮುಖ್ಯವೋ ದಕ್ಷಿಣದ ರಾಜ್ಯಗಳಲ್ಲಿ ಏಕೈಕ ಭರವಸೆಯಾಗಿ ಉಳಿದಿರುವ ಕರ್ನಾಟಕದ ವಿಧಾನಸಭಾ ಚುನಾವಣೆಯೂ ಅಷ್ಟೇ ಮುಖ್ಯ. ಬಾಬರಿ ಮಸೀದಿ ಧ್ವಂಸ ನಂತರದ ಮೊದಲ ಹದಿನೈದು ವರ್ಷಗಳ ಅವಧಿಯಲ್ಲಿ ಹಿಂದುತ್ವದ ಅಜೆಂಡಾ ಮೂಲಕ ಪಕ್ಷವನ್ನು ಕಟ್ಟಿದ ಬಿಜೆಪಿ, ನಂತರದ ಹದಿನೈದು ವರ್ಷಗಳ ಅವಧಿಯಲ್ಲಿ ಧರ್ಮದ ಜೊತೆಯಲ್ಲಿ ಜಾತಿಯನ್ನೂ ಸೇರಿಸಿಕೊಂಡು ಹೊಸ ಬಗೆಯ ಸೋಷಿಯಲ್ ಎಂಜಿನಿಯರಿಂಗ್ ಪ್ರಯೋಗಕ್ಕೆ ಇಳಿದಿದೆ.
ರಾಜ್ಯದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯನ್ನು ತನ್ನ ಸಾಧನೆಯ ಬಲದಿಂದ ಇಲ್ಲವೇ ಕೇವಲ ಧರ್ಮಾಧಾರಿತ ರಾಜಕಾರಣದಿಂದ ಎದುರಿಸುವ ವಿಶ್ವಾಸ ಬಿಜೆಪಿಯಲ್ಲಿ ಉಳಿದಿಲ್ಲ. ಉಳಿದಿರುವುದು ಒಂದೇ ದಾರಿ ಅದು ‘ಹಿಂದ’ (ಹಿಂದುಳಿದ-ದಲಿತ) ಮತಬ್ಯಾಂಕ್ ವಶೀಕರಣದ ಸೋಷಿಯಲ್ ಎಂಜಿನಿಯರಿಂಗ್.
ಈ ಹಿನ್ನೆಲೆಯಲ್ಲಿಯೇ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ವರದಿ ಆಧಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಮೀಸಲಾತಿಯನ್ನು ಮುಟ್ಟುವುದೆಂದರೆ ಜೇನುಗೂಡಿಗೆ ಕೈ ಹಾಕಿದ ಹಾಗೆ. ಈಗಾಗಲೇ ಮೀಸಲಾತಿ ಹೆಚ್ಚಳದ ಹಳೆಯ ಬೇಡಿಕೆಗಳ ಜೊತೆ ಹೊಸ ಬೇಡಿಕೆಗಳು ಕೇಳಿಬರ ತೊಡಗಿವೆ. ಇದರಲ್ಲಿ ಪ್ರಬಲ ಸಮುದಾಯಗಳಾದ ಒಕ್ಕಲಿಗ ಮತ್ತು ಲಿಂಗಾಯತರಿಂದ ಹಿಡಿದು ಕುರುಬ, ಈಡಿಗ, ಗೊಲ್ಲ, ಮೊಗವೀರ, ಮಡಿವಾಳ, ಸವಿತಾ ಸಮುದಾಯದಂತಹ ಪ್ರಮುಖ ಹಿಂದುಳಿದ ಜಾತಿಗಳೂ ಸೇರಿವೆ. ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸದೆ ಈ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವೇ ಇಲ್ಲ ಎನ್ನುವುದು ಇಂದಿನ ವಾಸ್ತವ.
ಮೀಸಲಾತಿ ಹೆಚ್ಚಳಕ್ಕೆ ಇರುವ ಏಕೈಕ ಅಡ್ಡಿ- ಒಟ್ಟು ಮೀಸಲಾತಿ ಪ್ರಮಾಣವು ಶೇಕಡ 50 ಮೀರಬಾರದು ಎಂದು ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 1992ರಲ್ಲಿ ನೀಡಿರುವ ತೀರ್ಪು. ಇದಕ್ಕಿಂತ ಎರಡು ವರ್ಷ ಮೊದಲೇ ತಮಿಳುನಾಡು ಸರ್ಕಾರ ಶೇಕಡ 69ರಷ್ಟು ಮೀಸಲಾತಿ ನಿಗದಿಗೊಳಿಸಿದ ಕಾನೂನನ್ನು ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಸೇರಿಸಿ ಸುರಕ್ಷಿತಗೊಳಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿ ಈಗ ಕೇಂದ್ರ ಸರ್ಕಾರವೂ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ. ಬೇರೆ ರಾಜ್ಯಗಳ ಮೀಸಲಾತಿ ಹೆಚ್ಚಳದ ಪ್ರಕರಣ ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿದೆ.
ಇತಿಹಾಸದಲ್ಲಿ ಹೆಸರು ದಾಖಲಿಸಲು ಎಲ್ಲರಿಗೂ ಅವಕಾಶಗಳು ಕೂಡಿಬರುವುದಿಲ್ಲ. ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಐತಿಹಾಸಿಕ ನಿರ್ಧಾರ ಕೈಗೊಂಡು ಬಸವರಾಜ ಬೊಮ್ಮಾಯಿ ಅವರು ಆ ಅವಕಾಶವನ್ನು ತಮ್ಮದಾಗಿಸಿಕೊಳ್ಳಬಹುದು. ಇದಕ್ಕಾಗಿ ಬೊಮ್ಮಾಯಿ ಅವರು ಪ್ರತ್ಯೇಕ ಕಾನೂನನ್ನು ರಚಿಸುವ ಅಗತ್ಯವಿಲ್ಲ. 1994ರಲ್ಲಿ ಎಂ.ವೀರಪ್ಪ ಮೊಯಿಲಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಟ್ಟು ಮೀಸಲಾತಿಯನ್ನು ಶೇಕಡ 73ಕ್ಕೆ ಹೆಚ್ಚಿಸಿ ಜಾರಿಗೊಳಿಸಿದ್ದ ಕಾನೂನು ಇದೆ.
ತಮಿಳುನಾಡು ಸರ್ಕಾರವು ಐತಿಹಾಸಿಕ ನಿರ್ಧಾರ ಕೈಗೊಂಡ ನಾಲ್ಕು ವರ್ಷಗಳ ನಂತರ ಮೊಯಿಲಿ ನೇತೃತ್ವದ ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು. ಇದು ಎಸ್‌ಸಿ- ಶೇ 18, ಎಸ್‌ಟಿ- ಶೇ 5, ಪ್ರವರ್ಗ 1- ಶೇ 7, ಪ್ರವರ್ಗ 2 (ಎ)- ಶೇ 20, ಪ್ರವರ್ಗ 2 (ಬಿ)- ಶೇ 6, ಪ್ರವರ್ಗ 3(ಎ) ಶೇ 7 ಮತ್ತು ಪ್ರವರ್ಗ 3 (ಬಿ)- ಶೇ 10 ಹೀಗೆ ಮೀಸಲಾತಿಯನ್ನು ಶೇಕಡ 73ಕ್ಕೆ ಹೆಚ್ಚಿಸಿದ್ದ ಐತಿಹಾಸಿಕ ನಿರ್ಧಾರದ ಕಾನೂನು. ಈ ಮೀಸಲಾತಿ ಕಾನೂನನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ರಿಟ್ ಅರ್ಜಿಯನ್ನು ಸಲ್ಲಿಸ ಲಾಗಿತ್ತು. ಇತಿಹಾಸದ ವ್ಯಂಗ್ಯವೆಂದರೆ, ಈ ಕಾನೂನು ರಚನೆಗೆ ಕಾರಣವಾಗಿದ್ದ ಕಾಂಗ್ರೆಸ್ ಪಕ್ಷ ಮತ್ತು ವೀರಪ್ಪ ಮೊಯಿಲಿ ಅವರೂ ಈ ಕಾನೂನನ್ನು ಮರೆತಿರುವುದು.
ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಅವರು ಹೇಳಿಕೊಳ್ಳುತ್ತಿರುವಂತೆ ಬಿಜೆಪಿಯು ಪ್ರಾಮಾಣಿಕವಾಗಿ ಸಾಮಾಜಿಕ ನ್ಯಾಯದ ಪರ ನಿಲುವು ಹೊಂದಿದ್ದರೆ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ, ಕಾಂಗ್ರೆಸ್ ಸರ್ಕಾರ ರೂಪಿಸಿದ ಶೇಕಡ 73ರ ಮೀಸಲಾತಿ ಕಾನೂನಿಗೆ ತನ್ನ ಬೆಂಬಲ ಇದೆ ಎಂದು ಘೋಷಿಸಬೇಕು, ಮೀಸಲಾತಿ ಹೆಚ್ಚಳಕ್ಕೆ ಅಗತ್ಯವಿರುವ ಅಂಕಿ–ಅಂಶಗಳನ್ನು ಸಲ್ಲಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.