ADVERTISEMENT

ವಿಶ್ಲೇಷಣೆ | ನಷ್ಟ ಪರಿಹಾರ ನಿಧಿ: ಬೇಕಿದೆ ಬದ್ಧತೆ

ಈ ಜಾಗತಿಕ ನಿಧಿ ಸ್ಥಾಪನೆಗೆ ಸಿಕ್ಕಿರುವ ಬಹುರಾಷ್ಟ್ರಗಳ ಒಪ್ಪಿಗೆಯು ಮಹತ್ವದ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2022, 19:30 IST
Last Updated 13 ಡಿಸೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಈಜಿಪ್ಟ್‌ನಲ್ಲಿ ಹಿಂದಿನ ತಿಂಗಳು ನಡೆದ ವಿಶ್ವಸಂಸ್ಥೆಯ ವಾಯುಗುಣ ಬದಲಾವಣೆ ಶೃಂಗಸಭೆಯ ಅತಿ ಮಹತ್ವದ ಸಾಧನೆಯೆಂದರೆ, ‘ನಷ್ಟ ಮತ್ತು ಹಾನಿ ಪರಿಹಾರ ನಿಧಿ’ಯ ಸ್ಥಾಪನೆಗೆ 197 ಸದಸ್ಯ ರಾಷ್ಟ್ರಗಳು ನೀಡಿದ ಒಪ್ಪಿಗೆ ಎಂಬುದು ಎಲ್ಲ ಅಭಿವೃದ್ಧಿಶೀಲ ದೇಶಗಳ ಒಮ್ಮತದ ಅಭಿಪ್ರಾಯ. ವಾಯುಗುಣ ಬದಲಾವಣೆಯ ನೇರ ಪರಿಣಾಮವಾಗಿ ಹೆಚ್ಚುತ್ತಿರುವ ನೈಸರ್ಗಿಕ ವಿಕೋಪಗಳಿಂದ, ಬಹುಮುಖ್ಯವಾಗಿ ಅಭಿವೃದ್ಧಿಶೀಲ ದೇಶಗಳಲ್ಲಿ ಸಂಭವಿಸುತ್ತಿರುವ ತೀವ್ರ ಹಾನಿ ಮತ್ತು ನಷ್ಟವನ್ನು ಭರಿಸುವಂತಹ ಜಾಗತಿಕ ನಿಧಿಯೊಂದನ್ನು ಸ್ಥಾಪಿಸಬೇಕೆಂಬುದು ಬಹುತೇಕ ದೇಶಗಳ ಹಲವಾರು ವರ್ಷಗಳ ಬೇಡಿಕೆಯಾಗಿತ್ತು. ಆದರೆ ಐತಿಹಾಸಿಕವಾಗಿ ವರ್ಷ ವರ್ಷವೂ ಅತ್ಯಧಿಕ ಪ್ರಮಾಣದಲ್ಲಿ ಹಸಿರುಮನೆ ಅನಿಲಗಳನ್ನು ಉತ್ಸರ್ಜಿಸಿ, ಇಂದಿನ ವಿಷಮ ಪರಿಸ್ಥಿತಿಗೆ ಕಾರಣವಾಗಿರುವ ಶ್ರೀಮಂತ ದೇಶಗಳು ಈ ಬೇಡಿಕೆಗೆ ಅಡ್ಡಗಾಲು ಹಾಕುತ್ತಲೇ ಬಂದಿದ್ದವು. ಈ ನೆಲೆಯಲ್ಲಿ ಪರಿಹಾರ ನಿಧಿಯ ಸ್ಥಾಪನೆಗೆ ದೊರೆತಿರುವ ಒಪ್ಪಿಗೆ ಒಂದು ಮಹತ್ವದ ಬೆಳವಣಿಗೆ.

ಆದರೆ ಈ ಪರಿಹಾರ ನಿಧಿಯ ಸ್ಥಾಪನೆ ದೀರ್ಘವಾದ ಪ್ರಕ್ರಿಯೆ. ಈ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿ, 24 ದೇಶಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯೊಂದು ರೂಪುಗೊಳ್ಳಲಿದೆ. ಪರಿಹಾರ ನಿಧಿಯ ರೂಪುರೇಷೆ ಹೇಗಿರಬೇಕು, ಯಾವ ದೇಶ ಎಷ್ಟು ಹಣವನ್ನು ಈ ನಿಧಿಗೆ ನೀಡಬೇಕು, ಹೀಗೆ ಸಂಗ್ರಹವಾದ ಹಣವನ್ನು, ನೈಸರ್ಗಿಕ ವಿಕೋಪಗಳಿಗೆ ತುತ್ತಾದ ದೇಶಗಳಿಗೆ ಯಾವ ಪ್ರಮಾಣದಲ್ಲಿ ಹೇಗೆ ವಿತರಿಸಬೇಕು ಎಂಬಂತಹ ವಿವರಗಳನ್ನು ಚರ್ಚಿಸಿ, ಸೂಕ್ತವಾದ ಶಿಫಾರಸುಗಳನ್ನು ಈ ಸಮಿತಿ ಮಾಡಲಿದೆ. 2023ರಲ್ಲಿ ದುಬೈನಲ್ಲಿ ನಡೆಯಲಿರುವ ವಾಯುಗುಣ ಶೃಂಗಸಭೆಯಲ್ಲಿ (ಸಿಒಪಿ 28) ಈ ಶಿಫಾರಸುಗಳ ಪರಿಶೀಲನೆ ನಡೆಯಲಿದೆ.

ಈ ಪರಿಹಾರ ನಿಧಿಯ ಪರಿಕಲ್ಪನೆ ಸ್ವಾಗತಾರ್ಹವಾದರೂ ವಿವಿಧ ದೇಶಗಳ ಕೊಡುಗೆ ಸುಲಭವಾಗಿ ಬರುವುದಿಲ್ಲವೆಂಬ ಸೂಚನೆಗಳು ಈಗಾಗಲೇ ದೊರೆತಿವೆ. ಈ ನಿಧಿಗೆ ನೀಡುವ ದೇಣಿಗೆ ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿರಬೇಕು. ಅಲ್ಲಿ ಒತ್ತಾಯ ಇರಬಾರದು. ಈ ರೀತಿಯ ಕೊಡುಗೆ ಶ್ರೀಮಂತ ದೇಶಗಳಿಗೆ ಮಾತ್ರ ಸೀಮಿತವಾಗದೆ ಎಲ್ಲ ದೇಶಗಳಿಗೂ ಅನ್ವಯವಾಗಬೇಕೆಂಬ ಅಂಶವನ್ನು ಶ್ರೀಮಂತ ದೇಶಗಳು ಈಗಾಗಲೇ ಸ್ಪಷ್ಟಪಡಿಸಿವೆ. ಜಾಗತಿಕ ಮಟ್ಟದಲ್ಲಿ ಈ ರೀತಿಯ ನಿಧಿ ಸ್ಥಾಪನೆಯ ಪ್ರಯತ್ನಗಳು ಈ ಹಿಂದೆಯೂ ನಡೆದಿವೆ. ಉದಾಹರಣೆಗೆ, 2001ರಲ್ಲಿ, ಅತಿ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಿಗೆ ಬೆಂಬಲ ನೀಡುವ ಕ್ಲೈಮೇಟ್ ಫಂಡ್, ಸ್ಪೆಷಲ್ ಕ್ಲೈಮೇಟ್ ಚೇಂಜ್ ಫಂಡ್ ಮತ್ತು ಅಡಾಪ್ಟೇಶನ್ ಫಂಡ್ ಎಂಬ ಮೂರು ನಿಧಿಗಳನ್ನು ವಿಶ್ವಸಂಸ್ಥೆ ಸ್ಥಾಪಿಸಿತು. ಆದರೆ ಈ ಯಾವ ನಿಧಿಗೂ ನಿರೀಕ್ಷಿತ ಪ್ರಮಾಣದಲ್ಲಿ ಹಣ ಹರಿದುಬರಲಿಲ್ಲ. 2009ರಲ್ಲಿ ಕೋಪನ್‍ಹೇಗನ್‌ನಲ್ಲಿ ನಡೆದ 15ನೆಯ ವಾಯುಗುಣ ಬದಲಾವಣೆಯ ಶೃಂಗಸಭೆಯಲ್ಲಿ (ಸಿಒಪಿ 15), 2020ರ ವೇಳೆಗೆ ಪ್ರತಿವರ್ಷವೂ 10,000 ಕೋಟಿ ಡಾಲರ್‌ಗಳಷ್ಟು ವಾಯುಗುಣ ನಿಧಿಯನ್ನು, 43 ಕೈಗಾರಿಕೀಕೃತ, ಶ್ರೀಮಂತ ದೇಶಗಳಿಂದ ಸಂಗ್ರಹಿಸುವ ನಿರ್ಧಾರ ಕೈಗೊಳ್ಳಲಾಯಿತು. ಆದರೆ ಇಂದಿಗೂ ಈ ಗುರಿಯನ್ನು ಮುಟ್ಟಲಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಹೊಸದೊಂದು ನಿಧಿಗೆ ಹಣ ಎಲ್ಲಿಂದ ಬರಲಿದೆಯೆಂಬ ಪ್ರಶ್ನೆಗೆ ಖಚಿತ ಉತ್ತರ ದೊರೆತಿಲ್ಲ.

ADVERTISEMENT

ವಾಯುಗುಣ ಬದಲಾವಣೆ ಸಮಸ್ಯೆಗಳ ನಿರ್ವ ಹಣೆಗೆ ಈಗಾಗಲೇ ವಿವಿಧ ನಿಧಿಗಳಲ್ಲಿರುವ ಹಣ ವನ್ನು ಮರು ವಿತರಣೆ ಮಾಡಿ ನಷ್ಟ ಮತ್ತು ಹಾನಿ ಪರಿಹಾರಕ್ಕೆ ಬಳಸಬಹುದೆಂಬ ಯೋಚನೆಯೂ ಇದೆ. ಇಂಡೊನೇಷ್ಯಾದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ಕಲ್ಲಿದ್ದಲ ಬಳಕೆಯನ್ನು 2030ರ ಹೊತ್ತಿಗೆ ಸಂಪೂರ್ಣವಾಗಿ ನಿಲ್ಲಿಸಲು, ಅಮೆರಿಕ ಮತ್ತು ಜಪಾನ್ 2,000 ಕೋಟಿ ಡಾಲರ್‌ಗಳ ಆರ್ಥಿಕ ನೆರವನ್ನು ಘೋಷಿಸಿವೆ. ಈ ರೀತಿಯ ಎಲ್ಲ ನೆರವನ್ನೂ ಮುಂದೆ ನಷ್ಟ ಮತ್ತು ಹಾನಿ ಪರಿಹಾರ ನಿಧಿಯಡಿಯಲ್ಲಿ ನೀಡುವ ಚಿಂತನೆಯೂ ನಡೆದಿದೆ. ಪರಿಹಾರ ನಿಧಿಗೆ ಸಂಬಂಧಪಟ್ಟ ಒಪ್ಪಂದದ ಪಠ್ಯವನ್ನು ಪರಿಶೀಲಿಸಿರುವ ಪರಿಣತರು ‘ಈಗಿರುವ ನೆರವಿನ ವ್ಯವಸ್ಥೆಗೆ ಮತ್ತಷ್ಟು ಹಣ ಸೇರಿಸಿ, ಕೊರತೆಯನ್ನು ತುಂಬಿ, ಎಲ್ಲ ನೆರವನ್ನೂ ಪರಿಹಾರ ನಿಧಿಯಡಿಯಲ್ಲಿ ತರುವ ಯೋಚನೆಗೇ ಹೆಚ್ಚಿನ ಒಲವನ್ನು ಅಭಿವೃದ್ಧಿ ಹೊಂದಿದ ದೇಶಗಳು ತೋರಲಿವೆ’ ಎಂದಿದ್ದಾರೆ. ಈ 20 ವರ್ಷಗಳಲ್ಲಿ ವಾಯುಗುಣ ಬದಲಾವಣೆ ಸಮಸ್ಯೆಗಳ ನಿರ್ವಹಣೆಗೆ ವಿಶ್ವಸಂಸ್ಥೆಯ ಅಡಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ವಿವಿಧ ನಿಧಿಗಳ ಕೆಲಸ ಕಾರ್ಯಗಳನ್ನು ಪರಿಶೀಲಿಸುತ್ತ ಬಂದಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕ ಬೆನಿಟೋ ಮ್ಯುಲರ್, ಈ ಪ್ರಸ್ತಾವಿತ ಪರಿಹಾರ ನಿಧಿಯನ್ನು ಕೇವಲ ‘ನೆಪಮಾತ್ರದ ನಿಧಿ’, ಅಭಿವೃದ್ಧಿ ದೇಶಗಳು ನಿಧಿಗೆ ನೀಡುವ ಕೊಡುಗೆಯ ಬಗ್ಗೆ ಯಾವ ಬದ್ಧತೆಯನ್ನೂ ವ್ಯಕ್ತಪಡಿಸಿಲ್ಲ ಎನ್ನುತ್ತಾರೆ.

ಹಿಂದಿನ ತಿಂಗಳು ವಾಯುಗುಣ ಶೃಂಗಸಭೆ ನಡೆಯುತ್ತಿದ್ದ ಸಮಯದಲ್ಲೇ ವಿಶ್ವಸಂಸ್ಥೆಯ 16 ಸಣ್ಣ ದ್ವೀಪ ದೇಶಗಳ ಒಕ್ಕೂಟವು ವನ್ವಾಟು ಗಣರಾಜ್ಯದ ನಾಯಕತ್ವದಲ್ಲಿ ವಿನೂತನ ಕಾರ್ಯತಂತ್ರವೊಂದಕ್ಕೆ ಅಂತಿಮ ಸ್ಪರ್ಶ ನೀಡಿದೆ. ವನ್ವಾಟು, ಆಸ್ಟ್ರೇಲಿಯಾದ ಪೂರ್ವಕ್ಕೆ 1,800 ಕಿ.ಮೀ.ಗಳ ದೂರದಲ್ಲಿರುವ, 3 ಲಕ್ಷ ಜನಸಂಖ್ಯೆಯ, 50 ಸಣ್ಣ ಸಣ್ಣ ದ್ವೀಪಗಳಿಂದಾದ ದೇಶ. ವನ್ವಾಟುವಿನಂತಹ ಸುಮಾರು 40 ದೇಶಗಳಿವೆ. ಇವುಗಳ ಒಟ್ಟು ವಾರ್ಷಿಕ ಹಸಿರುಮನೆ ಅನಿಲದ ಉತ್ಸರ್ಜನೆಯ ಪ್ರಮಾಣವು ಇಡೀ ಪ್ರಪಂಚದ ಒಟ್ಟು ಉತ್ಸರ್ಜನೆಯ ಶೇ 1ಕ್ಕಿಂತ ಕಡಿಮೆ. ಹೀಗಾಗಿ ವಾಯುಗುಣ ಬದಲಾವಣೆ ತರುತ್ತಿರುವ ನೈಸರ್ಗಿಕ ವಿಕೋಪಗಳಿಗೆ ಇವುಗಳ ಕೊಡುಗೆ ಅತ್ಯಲ್ಪ. ಆದರೆ ಅದರ ಮಾರಕ ಪರಿಣಾಮಗಳನ್ನು ಮಾತ್ರ ಈ ದೇಶಗಳೇ ಗರಿಷ್ಠ ಪ್ರಮಾಣದಲ್ಲಿ ಅನುಭವಿಸುತ್ತಿವೆ.

2021ರ ವಿಶ್ವಸಂಸ್ಥೆಯ ‘ವರ್ಲ್ಡ್‌ ರಿಸ್ಕ್ ರಿಪೋರ್ಟ್’ ಪ್ರಕಾರ, ವಾಯುಗುಣ ಬದಲಾವಣೆಯಿಂದ ಅತಿ ಹೆಚ್ಚಿನ ಅಪಾಯಕ್ಕೆ ಈಡಾಗುವ ದೇಶಗಳ ಪಟ್ಟಿಯಲ್ಲಿ ವನ್ವಾಟು ಮೊದಲನೆಯ ಸ್ಥಾನದಲ್ಲಿದೆ. ಈ ಶತಮಾನದ ಅಂತ್ಯದೊಳಗೆ ವನ್ವಾಟು ಪೆಸಿಫಿಕ್ ಸಾಗರದಲ್ಲಿ ಮುಳುಗಲಿದೆ ಎಂಬ ಮುನ್ಸೂಚನೆಯಿದೆ. ಹೀಗಾಗಿ ತಮ್ಮ ಉಳಿವಿಗಾಗಿ ಹೋರಾಡುತ್ತಿರುವ ಇಂತಹ ದೇಶಗಳು ವಿಶ್ವಸಂಸ್ಥೆಯ ನೆರವನ್ನು ಕೋರುವುದರ ಜೊತೆಗೆ, ಹೇಗ್‍ನಲ್ಲಿರುವ ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ ನಡೆಸಿವೆ. ‘ವಾಯುಗುಣ ಬದಲಾವಣೆ ತರುತ್ತಿರುವ ಪ್ರಾಣಾಂತಿಕ ಪರಿಣಾಮಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಹಾಗೂ ಮುಂದಿನ ಜನಾಂಗವನ್ನು ರಕ್ಷಿಸಲು ನಮಗಿರುವ ಹಕ್ಕುಗಳೇನು ಮತ್ತು ಈ ಪರಿಸ್ಥಿತಿಗೆ ಕಾರಣವಾಗಿರುವ ದೇಶಗಳ ಹೊಣೆಗಾರಿಕೆಯೇನು’ ಎಂಬ ಬಗ್ಗೆ ಕಾನೂನಾತ್ಮಕ ಅಭಿಪ್ರಾಯ ವ್ಯಕ್ತಪಡಿಸಬೇಕೆಂದು ಅಂತರರಾಷ್ಟ್ರೀಯ ನ್ಯಾಯಾಲಯವನ್ನು ಕೋರಲಿವೆ. ಆದರೆ ಇವು ನೇರವಾಗಿ ಈ ನ್ಯಾಯಾಲಯದ ಮೆಟ್ಟಿಲೇರು ವಂತಿಲ್ಲ. ಅದಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸರಳ ಬಹುಮತದ ಅನುಮೋದನೆ ಬೇಕು. ಹೀಗಾಗಿ ಈ ತಿಂಗಳ ಒಳಗಾಗಿ ನಡೆಯಲಿರುವ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಈ ಪ್ರಸ್ತಾವದ ಬಗ್ಗೆ ಠರಾವೊಂದನ್ನು ಮಂಡಿಸಲಿವೆ. ಅದಕ್ಕೆ ಅನುಮೋದನೆ ದೊರೆತ ನಂತರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುತ್ತದೆ.

ಸಣ್ಣ ದ್ವೀಪ ದೇಶಗಳ ಒಕ್ಕೂಟದ ಅಹವಾಲನ್ನು ಸಮಗ್ರವಾಗಿ ಪರಿಶೀಲಿಸಿದ ನಂತರ ನ್ಯಾಯಾಲಯ ತನ್ನ ನಿಲುವನ್ನು ಪ್ರಕಟಿಸುತ್ತದೆ. ಆದರೆ ಇದು ನ್ಯಾಯಾಲಯದ ಕಾನೂನು ಅಭಿಪ್ರಾಯವಾಗಬಹುದೇ ಹೊರತಾಗಿ ಎಲ್ಲ ದೇಶಗಳೂ ಪಾಲಿಸಲೇಬೇಕಾದ ಆದೇಶವಾಗುವುದಿಲ್ಲ. ಆದರೆ ಈ ಜಾಗತಿಕ ನ್ಯಾಯಾಲಯದ ಅಭಿಪ್ರಾಯಕ್ಕೆ ಅಪಾರವಾದ ನೈತಿಕ ಬಲವಿದ್ದು, ಬಹುತೇಕ ದೇಶಗಳು ಅಂತಹ ಅಭಿಪ್ರಾಯವನ್ನು ಗೌರವಿಸುತ್ತವೆ.

ವಾಯುಗುಣ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಹೊಸ ಕಾನೂನುಗಳನ್ನು ರೂಪಿಸುವಾಗಲೂ ಅಂತರರಾಷ್ಟ್ರೀಯ ನ್ಯಾಯಾಲಯದ ಅಭಿಪ್ರಾಯ ನೆರವಾಗಲಿದೆ. ವನ್ವಾಟು ಗಣರಾಜ್ಯದ ಈ ವಿನೂತನ ಪ್ರಯತ್ನಕ್ಕೆ ದಿನಕಳೆದಂತೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಬೆಂಬಲ ಹೆಚ್ಚುತ್ತಿದ್ದು, ಒಕ್ಕೂಟದ ಪ್ರಸ್ತಾವಕ್ಕೆ ಸರಳ ಬಹುಮತ ದೊರೆಯುವುದು ಬಹುತೇಕ ಖಚಿತವಾಗಿದೆ. ಈ ಮಧ್ಯೆ ಅಭಿವೃದ್ಧಿಶೀಲ ರಾಷ್ಟ್ರಗಳು, ಈಜಿಪ್ಟ್ ಶೃಂಗಸಭೆಯಲ್ಲಿನ ತಮ್ಮ ಸಾಧನೆಯಿಂದ ಸಂತುಷ್ಟಗೊಂಡಿವೆ. ಪರಿಹಾರ ನಿಧಿಯ ಒಪ್ಪಂದದ ಯಾವ ಹಂತದಲ್ಲೂ ಖಚಿತವಾದ, ಪಾಲಿಸಲೇಬೇಕಾದ ಆಶ್ವಾಸನೆಯನ್ನು ನೀಡುವ ಒತ್ತಡದಿಂದ ತಪ್ಪಿಸಿಕೊಂಡ ಶ್ರೀಮಂತ ರಾಷ್ಟ್ರಗಳೂ ಖುಷಿಯಾಗಿವೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.