ಕೇಂದ್ರ ಸರ್ಕಾರದ ಮಂತ್ರಿಮಂಡಲ ಪುನರ್ ರಚನೆಗೆ ಒಂದು ದಿನ ಮುಂಚೆ ಹೊಸ ಸಹಕಾರಿ ಸಚಿವಾಲಯದ ಏರ್ಪಾಟಿನ ಸುದ್ದಿ ಬಂತು.ಸರ್ಕಾರದ ಅನೇಕ ಸಚಿವಾಲಯಗಳ ಪುನರ್‌ರಚನೆಯಂತೆ ಇದೂ ಇರಬಹುದು ಎನ್ನುವ ನಂಬಿಕೆಯಿಂದ ಅದರ ಬಗ್ಗೆ ಹೆಚ್ಚಿನ ಮಾತುಕತೆಆದಂತಿಲ್ಲ. ಅಲ್ಲಿ ಇಲ್ಲಿ ಇದನ್ನು ಸ್ಲಾಗತಿಸುವ ಸುದ್ದಿಗಳು ಬಂದುವು. ಆದರೆ ಈ ಹೊಸ ಸಚಿವಾಲಯವನ್ನು ದೇಶದ ಗೃಹ ಮಂತ್ರಿ ಅಮಿತ್ ಶಾ ಕೈಗೆ ಕೊಟ್ಟಾಗಿನಿಂದ ಈ ಬಗೆಗಿನ ಚರ್ಚೆಗಳು ಮಂತ್ರಿಮಂಡಲದ ಪುನರ್‌ರಚನೆಯ ವಿಷಯದಲ್ಲಿ ಇರುವ ಟಿಪ್ಪಣಿಗಳಷ್ಟೇಮಹತ್ವವನ್ನು ಪಡೆದಿವೆ. ನಮ್ಮ ಕಾಲದ ದುರಂತವೆಂದರೆ, ಕೆಲ ವ್ಯಕ್ತಿಗಳ ಕೈಗೆ ಕೆಲವು ಕೆಲಸಗಳನ್ನು ಒಪ್ಪಿಸಿದರೆ, ತಕ್ಷಣ ಅದಕ್ಕೆಇರಬಹುದಾದ ಮತ್ತು ಇಲ್ಲದಿರಬಹುದಾದ ಪದರಗಳು ಸೇರಿಕೊಳ್ಳುತ್ತವೆ. ಹೀಗಾಗಿಯೇ ಹೊಸ ಸಹಕಾರಿ ಸಚಿವಾಲಯದ ವಿಷಯವನ್ನು ನಾವು ಜಾಗರೂಕವಾಗಿ ನೋಡಬೇಕಾಗಿದೆ.
ಸಾಂವಿಧಾನಿಕವಾಗಿ ಸಹಕಾರ ವ್ಯವಸ್ಥೆ ರಾಜ್ಯ ಸರ್ಕಾರದ ಅಧಿಕಾರದ ವ್ಯಾಪ್ತಿಯಲ್ಲಿ ಬರುತ್ತದೆ. ಬಹುರಾಜ್ಯ ಸಹಕಾರಿ ಸಂಘಗಳಷ್ಟೇ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವಾದ್ದರಿಂದ ಈ ಹೊಸ ಸಚಿವಾಲಯವು ಅನೇಕ ಪ್ರಶ್ನೆಗಳಿಗೂ ಕುತೂಹಲಕ್ಕೂ ಕಾರಣವಾಗಿದೆ. ಇದನ್ನು ನಾವು ಜಾಗರೂಕತೆಯಿಂದ ನೋಡಬೇಕು. ಭಾರತದಲ್ಲಿರುವ ಸಹಕಾರಿ ವ್ಯವಸ್ಥೆಯನ್ನು ನಾವು ಮುಖ್ಯವಾಗಿ ನಾಲ್ಕು ವಿಭಾಗಗಳಲ್ಲಿ ನೋಡಬಹುದು. ಇವುಗಳ ಮೇಲೆ ಹೊಸ ಸಚಿವಾಲಯವು ಯಾವ ರೀತಿಯಲ್ಲಿ ಪ್ರಭಾವ ಬೀರಬಹುದು?
ಮೊದಲಿಗೆ ಸಹಕಾರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಗ್ರಾಮೀಣ ಪತ್ತಿನ ಸಂಘಗಳ ವಿಷಯಕ್ಕೆ ಬರೋಣ. ಈ ಪತ್ತಿನಸಂಘಗಳ ಕಾಯಕಲ್ಪಕ್ಕೆ ಕೇಂದ್ರ ಸರ್ಕಾರ ವೈದ್ಯನಾಥನ್ ಸಮಿತಿಯನ್ನು ರಚಿಸಿತ್ತು. ಆ ಸಮಿತಿಯು ಹದಿನೈದು ವರ್ಷಗಳ ಹಿಂದೆ ಕೊಟ್ಟ ವರದಿಯನ್ನು ಸಹಕಾರ ವ್ಯವಸ್ಥೆತುಂಬು ಹೃದಯದಿಂದ ಸ್ವಾಗತಿಸಿದರೂ ಅದನ್ನು ಜಾರಿ ಮಾಡುವಾಗ ಅನೇಕ ರಾಜಿಗಳನ್ನು ಮಾಡಿಕೊಂಡಿದ್ಜದರಿಂದ ನಾವು ಹಿಂದಿದ್ದ ಸ್ಥಿತಿಗೆ ಮುಟ್ಟಿದ್ದೇವೆ.
ಕೇರಳದಲ್ಲಿ ಜಿಲ್ಲಾ ಬ್ಯಾಂಕುಗಳನ್ನು – ರಾಜ್ಯ ಸಹಕಾರಿ ಬ್ಯಾಂಕಿನೊಂದಿಗೆ ವಿಲೀನಗೊಳಿಸಿ – ಮೂರು ಸ್ತರದ ಸಹಕಾರಿ ವ್ಯವಸ್ಥೆಯನ್ನು ಎರಡು ಸ್ತರಗಳಿಗೆ ಇಳಿಸಿರುವುದನ್ನು ಕಂಡಿದ್ದೇವೆ. ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ದಿಶಾ ನಿರ್ದೇಶನದ ಸುತ್ತೋಲೆಯನ್ನು ಹೊರಡಿಸಿ ಇತರ ರಾಜ್ಯಗಳು ಕೂಡ ತಮ್ಮಸಹಕಾರಿ ವ್ಯವಸ್ಥೆಯನ್ನು ಕೇರಳ ಮಾದರಿಯಲ್ಲಿ ಪುನರ್‌ರಚಿಸುವುದನ್ನು ಪ್ರೋತ್ಸಾಹಿಸಿದೆ. ಈ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಮಾಡಲು ಉಳಿದಿರುವುದೇನೂಇಲ್ಲ. ವೈದ್ಯನಾಥನ್ ಸಮಿತಿಯು ಸೂಚಿಸಿದ ಕಾಯಕಲ್ಪವನ್ನು ಮಾಡಬಹುದಾದರೂ, ಅದಕ್ಕಿರುವ ಅವಕಾಶಗಳು ಸೀಮಿತವಾಗಿವೆ.
ವೈದ್ಯನಾಥನ್ಸಮಿತಿ ರಾಜ್ಯದ ಕಾನೂನುಗಳಲ್ಲಿ ಅನೇಕ ಸುಧಾರಣೆಗಳನ್ನು ಸೂಚಿಸಿತ್ತು. ಆದರೆ, ನಮ್ಮ ಸಂವಿಧಾನಕ್ಕೆ 2013ರಲ್ಲಿ ಮಾಡಿದ 97ನೇ ತಿದ್ದುಪಡಿ ರಾಜ್ಯದ ಕಾನೂನಿನಲ್ಲಿರಬಹುದಾದ ಅನೇಕ ವಿರೋಧಾಭಾಸಗಳನ್ನು ಇತ್ಯರ್ಥ ಮಾಡಿದಂತಿತ್ತು. ಹೀಗಾಗಿ ಗ್ರಾಮೀಣ ಪತ್ತಿನ ವ್ಯವಸ್ಥೆಯಲ್ಲಿ ದೊಡ್ಡ ಪ್ರಮಾಣದ ಸುಧಾರಣೆಯ ಲಕ್ಷಣಗಳು ನಮಗೆ ಈ ಪ್ರಕ್ರಿಯೆಯಲ್ಲಿ ಕಾಣುತ್ತಿಲ್ಲ.
ಸಹಕಾರ ಕ್ಷೇತ್ರದಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ ಮತ್ತೊಂದು ವ್ಯವಸ್ಥೆ ಪಟ್ಟಣ ಸಹಕಾರಿ ಬ್ಯಾಂಕುಗಳದ್ದು. ಇವುಗಳನ್ನು ರಿಸರ್ವ್ ಬ್ಯಾಂಕಿನ ಮೂಲಕ ಕೇಂದ್ರದ ಅಡಿಗೆ ತರುವ ಪ್ರಕ್ರಿಯೆಯನ್ನು ಬ್ಯಾಂಕಿಂಗ್ ಕಾಯ್ದೆಗಳ ತಿದ್ದುಪಡಿಯೊಂದಿಗೆ ಸರ್ಕಾರ ಮಾಡಿಯಾಗಿದೆ. ಇಲ್ಲೂ ಸುಧಾರಣೆ-ಕಾಯಕಲ್ಪದ ಸಾಧ್ಯತೆಯಿದ್ದು, ಸದರಿ ಸುಧಾರಣೆಗಳನ್ನು ಪರೀಕ್ಷಿಸಲು ಈ ಲೇಖಕನನ್ನು ಒಳಗೊಂಡಿರುವ ಸಮಿತಿಯನ್ನು ರಿಸರ್ವ್ ಬ್ಯಾಂಕು ನೇಮಿಸಿದೆ. ಈ ಸಮಿತಿಯ ವರದಿ ಶೀಘ್ರದಲ್ಲಿ ಸಲ್ಲಿಕೆಯಾಗುವ ಸಾಧ್ಯತೆಯಿದೆ. ಇದನ್ನು ಸದ್ಯಕ್ಕೆ ಬಿಟ್ಟುಕೊಡೋಣ.
ಈ ಎರಡೂ ಕ್ಷೇತ್ರಗಳನ್ನು ಬಿಟ್ಟರೆ, ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದ ಸಹಕಾರ ಸಂಘಗಳನ್ನು ನಾವು ಕಾಣಬಹುದು. ಈ ಕ್ಷೇತ್ರದಲ್ಲಿವಿಕೇಂದ್ರೀಕೃತವಾಗಿ, ಅಡಕೆ, ಕೋಕೋ, ತೆಂಗು, ಅಡಿಗೆ ತೈಲ, ಕೈಮಗ್ಗ ಹೀಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಸಹಕಾರ ಸಂಘಗಳಿವೆಯಾದರೂ ಪ್ರಮುಖವಾಗಿ ನಿಲ್ಲುವುದು ಸಕ್ಕರೆ (ಮಹಾರಾಷ್ಟ್ರ) ಮತ್ತು ಹೈನುಗಾರಿಕೆಗೆ (ಗುಜರಾತ್, ಕರ್ನಾಟಕ)ಸೇರಿದ ಸಹಕಾರ ವ್ಯವಸ್ಥೆ. ಈ ಕ್ಷೇತ್ರಗಳು ರಾಜಕೀಯದ ದೃಷ್ಟಿಯಿಂದ ಮುಖ್ಯವಾದವು. ಇದಕ್ಕಿಂತ ಮಿಗಿಲಾಗಿ ಸಹಕಾರ ಕ್ಷೇತ್ರದಲ್ಲಿ ಭವಿಷ್ಯದ ಅಜೆಂಡಾ ಹೊತ್ತು ನಡೆಯುತ್ತಿರುವ, ಸಹಕಾರಿ ಸಂಘಗಳಲ್ಲದ, ಆದರೆ ಸಹಕಾರದ ತತ್ವದ ಮೇಲೆ ನಡೆಯುವ ಸಂಸ್ಥೆಗಳು – ರೈತರ ಉತ್ಪನ್ನ ಸಂಸ್ಥೆ – ಎಫ್‌ಪಿಒ -ಗಳು ಭವಿಷ್ಯದ ಕಡೆಗೆ ಮುಖ ಮಾಡಿ ನಿಂತಿವೆ.
ಈ ನಾಲ್ಕು ಸ್ತಂಭಗಳಲ್ಲಿ ಗೃಹ (ಮತ್ತೀಗ ಸಹಕಾರ) ಮಂತ್ರಿಗಳ ದೃಷ್ಟಿ ಯಾವುದರತ್ತ ಬೀಳುತ್ತದೋ – ಅವರ ಮನಸ್ಸಿನಲ್ಲಿ ಏನಿದೆಯೋ ತಿಳಿಯುವುದು ಕಷ್ಟದ ಮಾತೇ.
ಆದರೆ, ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಬಹುಶಃ ಎರಡು ರೀತಿಯ ಬೆಳವಣಿಗೆಗಳು ನಮಗೆ ಕಾಣಬಹುದು. ರಾಜ್ಯದ ಪಟ್ಟಿಗೆ ಸಂದಿರುವ ಸಹಕಾರ ವ್ಯವಸ್ಥೆಯ ಕೇಂದ್ರೀಕರಣದ ಪ್ರಯತ್ನಗಳು ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಜ್ಯದ ಪಟ್ಟಿಯಲ್ಲಿರುವ ಆರೋಗ್ಯ, ಕೃಷಿ, ವಿದ್ಯಾಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರ ಹೆಚ್ಚಿನ ಆಸಕ್ತಿಯನ್ನು ತೋರುತ್ತಾ ಆ ವಿಷಯಗಳ ಬಗ್ಗೆ ಕಾನೂನು ನಿಯಮಾವಳಿಗಳನ್ನು ಈಗಾಗಲೇ ರೂಪಿಸಿದೆ. ಅನೇಕ ಮಾರ್ಗಗಳನ್ನು ಉಪಯೋಗಿಸಿ, ತನ್ನ ಛಾಪು ಮೂಡಿಸುತ್ತಿರುವುದನ್ನೂ ನೋಡುತ್ತಿದ್ದೇವೆ.
ಹೀಗಾಗಿ, ಸಹಕಾರ ಕ್ಷೇತ್ರವು ರಾಷ್ಟ್ರೀಯ ಮಟ್ಟದಲ್ಲಿ ಪ್ರಬಲವಾಗುವ ಮತ್ತು ಕ್ಷೇತ್ರೀಯ ಮಟ್ಟದಲ್ಲಿ ದುರ್ಬಲವಾಗುವ ಸಾಧ್ಯತೆಗಳು ನಮಗೆ ಕಾಣಬಹುದು. ಉದಾಹರಣೆಗೆ ಗುಜರಾತಿನ ಅಮುಲ್ ಸಂಸ್ಥೆ ಆ ರಾಜ್ಯಕ್ಕೇ ಸೀಮಿತವಾಗಿರುವ ಸಂಸ್ಥೆಯಾದರೂ ಅನೇಕರಾಜ್ಯಗಳಲ್ಲಿ ತನ್ನ ವಹಿವಾಟುಗಳನ್ನು ನಡೆಸುತ್ತಿದೆ. ಇದಕ್ಕೆ ಹೆಚ್ಚಿನ ಬಲ ಕೊಟ್ಟು ಅದನ್ನೊಂದು ರಾಷ್ಟ್ರೀಯ ಮಟ್ಟದ ಸಹಕಾರಿವ್ಯವಸ್ಥೆಯನ್ನಾಗಿಸಿ, ಸ್ಥಳೀಯ ಸಹಕಾರ ವ್ಯವಸ್ಥೆ ಅದರಡಿ ಬರುವ (ನಂದಿನಿ) ಹುನ್ನಾರವನ್ನು ನಾವು ಕಾಣಬಹುದು. ಆಗ
ಸಂಪನ್ಮೂಲಗಳೆಲ್ಲಾ ಒಂದೆಡೆ ಸೇರಿದಂತಾಗುತ್ತದೆ. ಈ ಒಂದು ವಿಚಿತ್ರ ‘ರಾಷ್ಟ್ರೀಕರಣ’, ಕೇಂದ್ರೀಕರಣವನ್ನು ಕಾಣುತ್ತೇವೇನೋ.
ಹಾಗೆಯೇ ಹಣಕಾಸು ಸಚಿವರು ಬಜೆಟ್‌ನಲ್ಲಿ ಘೋಷಿಸಿದ ಸಾಮಾಜಿಕ ಷೇರು ವಿನಿಮಯ ವ್ಯವಸ್ಥೆಯ ಬಗೆಗಿನ ವರದಿಗಳು ಬಂದಿವೆ. ತನ್ಮೂಲಕ ಸಹಕಾರಿ ವ್ಯವಸ್ಥೆಗೆ ಖಾಸಗಿ ಮೂಲಗಳಿಂದ ಹೂಡಿಕೆ ಆಕರ್ಷಿಸುವ ಯೋಜನೆಗಳು ಬರುವುದರಲ್ಲಿ ಅನುಮಾನವಿಲ್ಲ. ಸಹಕಾರಿವ್ಯವಸ್ಥೆಯಲ್ಲಿ ನವ ದಕ್ಷತೆ ಮತ್ತು ಹೂಡಿಕೆ ತರುವ ನೆಪಹೂಡಿ ಬೆಳವಣಿಗೆ ಕನಸನ್ನು ಕಾಣಿಸುತ್ತಾ ಸಹಕಾರಿ ವ್ಯವಸ್ಥೆಯ ಖಾಸಗೀಕರಣದತ್ತ ನಾವು ಸಾಗುತ್ತಿರಬಹುದೇ...
ಕೃಷಿ ಕ್ಷೇತ್ರವನ್ನು ಖಾಸಗೀಕರಣದತ್ತ ತಳ್ಳುತ್ತಿರುವ ಮತ್ತು ದಕ್ಷತೆಗೂ, ಹೂಡಿಕೆಗೂ, ಖಾಸಗಿ ಕ್ಷೇತ್ರಕ್ಕೂ ನಂಟುಹಾಕಿರುವ ಈ ವಿಚಾರದ ಮುಂದಿನ ದಾರಿ ಇದೇ ಇರಬಹುದು. ಅಲ್ಪಸ್ವಲ್ಪ ದಕ್ಷತೆಯಿಂದ ನಡೆಯುತ್ತಿರುವ ಸಹಕಾರ ವ್ಯವಸ್ಥೆಯಲ್ಲಿ ಖಾಸಗಿ ಕ್ಷೇತ್ರ ನುಸುಳದಂತೆ – ಅದಕ್ಕೆ ಕೊಂಡಿ ಹಾಕಿಕೊಂಡಿರುವ ಕೃಷಿ ಮತ್ತು ಕೃಷಿ ಮಾರುಕಟ್ಟೆ ವ್ಯವಸ್ಥೆತಮ್ಮ ಅಸ್ಮಿತೆ ಮತ್ತು ಅಸ್ತಿತ್ವವನ್ನು ಜಾಗರೂಕವಾಗಿ ಕಾಪಾಡಿಕೊಳ್ಳಬೇಕಾದ ಸಮಯ ಬಂದಿದೆಯೇನೋ.
ಖಾಸಗಿ ಕ್ಷೇತ್ರ ಇರಬಾರದು ಎನ್ನುವುದು ನಮ್ಮ ವಾದವಲ್ಲ. ಖಂಡಿತವಾಗಿ ಮಾರುಕಟ್ಟೆಯಲ್ಲಿ ಪಾಲ್ಗೊಳ್ಳಲು ಯಾರಿಗಾದರೂ ಹಕ್ಕಿರಬೇಕು. ಆದರೆ, ಬಂಡವಾಳದ ಮೂಲವನ್ನು ನಿರಾಕರಿಸಿ ಸದಸ್ಯರ ಹಿತಾಸಕ್ತಿಯನ್ನು ಕೇಂದ್ರದಲ್ಲಿಟ್ಟು ಮುಂದುವರಿದಿರುವ ಸಹಕಾರಿ ವ್ಯವಸ್ಥೆಯನ್ನು ಒಳಗಿನಿಂದ ದುರ್ಬಲಗೊಳಿಸುವ ಯತ್ನದ ವಿರುದ್ಧ ನಾವು ಜಾಗರೂಕರಾಗಿರಬೇಕು.
ಈ ಹೊಸ ಸಚಿವಾಲಯದಿಂದ ನಮಗೆ ಆಶಾಕಿರಣ ಕಾಣುವುದಕ್ಕೆ ಬದಲು ಆತಂಕ ಏಕೆ ಕಾಣಿಸುತ್ತಿದೆ? ಏಕೆ ಹಲವು ದಿನಗಳಿಂದ ಅನೇಕಲೇಖನಗಳು ಸಹಕಾರಿ ವ್ಯವಸ್ಥೆಯನ್ನು ಪರೀಕ್ಷಿಸುತ್ತಿರುವುದಲ್ಲದೇ ಯಾಕೆ ಈ ಸಚಿವಾಲಯವು ಹುಟ್ಟಿಕೊಂಡಿತೆಂದು ಗಾಳಿಪಟಗಳನ್ನು ಹಾರಿಸುತ್ತಿದ್ದೇವೆ?
ಈ ಪ್ರಶ್ನೆಯನ್ನು ಕೇಳಿಕೊಂಡಾಗ ಸದರಿ ಕೇಂದ್ರ ಸರ್ಕಾರದ ಬಗ್ಗೆ ಇರುವ ನಂಬಿಕೆ ಎಷ್ಟು ಮಟ್ಟಿನದ್ದೆಂದು ನಮಗೆ ತಿಳಿದು ಬರುತ್ತದೆ. ಆದರೆ ಅದೃಷ್ಟವಶಾತ್ ಈ ಒಂದು ಕ್ರಮದಿಂದ ಸಹಕಾರ ಕ್ಷೇತ್ರವು ಆರ್ಥಿಕ ವಲಯದಲ್ಲಿ ಒಂದು ಪ್ರಬಲ ವ್ಯಾಪಾರಮಾಧ್ಯಮವಾಗಿ ಬೆಳೆಯುವುದೇ ಆದರೆ ಅದಕ್ಕಿಂತ ಒಳ್ಳೆಯ ಸಮತಾವಾದದ ಸುದ್ದಿ ಏನಿರಬಹುದು?
ಆದರೆ, ಸದರಿ ಸರ್ಕಾರಏಳುವರ್ಷಗಳಿಂದ ಪಾಲಿಸುತ್ತಾ ಬಂದಿರುವ ಆರ್ಥಿಕ-ವಿತ್ತೀಯ ನೀತಿಗಳನ್ನು ಕಂಡಾಗ ನಂಬಿಕೆಗಿಂತ ಅನುಮಾನಗಳೇ ಬರುತ್ತಿವೆಯಲ್ಲಾ... ಯಾವುದು ಏನೇ ಇದ್ದರೂ ಒಟ್ಟಾರೆ ಸಹಕಾರ ವ್ಯವಸ್ಥೆಯ ಬಗ್ಗೆ, ಅದರ ಗುಣಾಗುಣಗಳ ಬಗ್ಗೆ, ಅದರ ಅವಶ್ಯಕತೆಗಳ ಬಗ್ಗೆ ಒಂದು ಮುಕ್ತ ಚರ್ಚೆಗೆ ಇದು ನಾಂದಿ ಹಾಡಿದೆ.
ಆರ್ಥಿಕ ಬೆಳವಣಿಗೆ-ಒಳಗೊಳ್ಳುವಿಕೆಯ ವಿಚಾರವಾದದ ಬಗ್ಗೆ ನಾವು ಚರ್ಚಿಸಲುಮುಂದಾಗಿದ್ದೇವೆ ಎನ್ನುವುದು ಜಾತಿ-ಜನಸಂಖ್ಯೆ-ಧರ್ಮ-ಪುನರ್ ನಾಮಕರಣ-ಗೋಹತ್ಯೆಗಳ ಚರ್ಚೆಗಿಂತ ಉತ್ತಮವಾದದ್ದೇ. ಆದೃಷಿಯಿಂದಲಾದರೂ ನಾವು ಈ ಕ್ರಮವನ್ನು ಸ್ವಾಗತಿಸುತ್ತಲೇ, ರಾಜ್ಯಗಳಿಗೆ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಿರೆಂಬಕಿವಿಮಾತನ್ನು ಹೇಳಬೇಕಾಗಿದೆ.
ಹಿಂದಿನ ಸ್ಥಾಪಿತ ವ್ಯವಸ್ಥೆಗಳನ್ನು ಅಲುಗಾಡಿಸದೇ, ಹೈನುಗಾರಿಕೆಯಲ್ಲಿ ಕ್ರಾಂತಿ ತಂದಂತೆ ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ತರಲು ನಮ್ಮ ಗೃಹ-ಸಹಕಾರ ಸಚಿವರು ಹೊರಟಿದ್ದರೆ ಅದು ಸ್ವಾಗತಾರ್ಹವೇ. ಕಾದು ನೋಡೋಣ.
ಲೇಖಕ: ಐಐಎಂನ ಸಂದರ್ಶಕ ಪ್ರಾಧ್ಯಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.