ADVERTISEMENT

ವಿಶ್ಲೇಷಣೆ | ಅಮೃತಕಾಲದ ಜಲಾಮೃತ ಸವಾಲು

ಜಲಮೂಲ ಮಾಲಿನ್ಯ, ನೀರು ಶುದ್ಧಿ ಮಾಡುವ ಸವಾಲುಗಳು ಜನರನ್ನು ಹೈರಾಣಾಗಿಸುತ್ತಿವೆ!

ಡಾ.ಕೇಶವ ಎಚ್.ಕೊರ್ಸೆ
Published 16 ಆಗಸ್ಟ್ 2022, 19:30 IST
Last Updated 16 ಆಗಸ್ಟ್ 2022, 19:30 IST
   

ಸ್ವಾತಂತ್ರ್ಯೋತ್ಸವದ ಅಮೃತ ಗಳಿಗೆಯ ಈ ಸಂಭ್ರಮದಲ್ಲೂ, ದೇಶದ ಮುಂದಿರುವ ಸವಾಲುಗಳು ನಮ್ಮನ್ನು ಎಚ್ಚರಿಸಬೇಕಿವೆ. ಕುಡಿಯಲು ಶುದ್ಧನೀರನ್ನು ಒದಗಿಸುವ ಸಂಗತಿಯನ್ನೇ ಒಮ್ಮೆ ಪರಿಶೀಲಿಸಿ. ಮೇಲ್ನೋಟಕ್ಕೆ ಸರಳವಾದ ಈ ವಿಷಯವೂ ಒಂದು ಗಂಭೀರ ಸವಾಲಾಗಿಬಿಟ್ಟಿದೆ. ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರವೇ ಇತ್ತೀಚೆಗೆ ನೀಡಿದ ಮಾಹಿತಿಯಂತೆ, ದೇಶದ ಶೇ 80ಕ್ಕೂ ಮಿಕ್ಕಿ ಜನರು ಇಂದಿಗೂ ಅಶುದ್ಧ ನೀರನ್ನೇ ಕುಡಿಯುತ್ತಿದ್ದಾರೆ!

ಸ್ವಾತಂತ್ರ್ಯ ಬಂದಾಗಿನಿಂದಲೂ ಕುಡಿಯುವ ನೀರಿಗಾಗಿ ಸರ್ಕಾರಿ ಯೋಜನೆಗಳಿವೆ. ಆದರೂ ಹೀಗೇಕೆ? ಏರುತ್ತಿರುವ ಜನಸಂಖ್ಯೆ, ನಗರೀಕರಣ, ನೀರಿನ ಕೊರತೆ ಎಂದು ಸರ್ಕಾರ ಉತ್ತರಿಸೀತು. ಆದರೆ, ಈ ಕ್ಷೇತ್ರದ ಕುರಿತ ಅಧ್ಯಯನಗಳು ಹೇಳುವ ಸಂಗತಿಗಳೇ ಬೇರೆ. ಕುಡಿಯುವ ನೀರಿನ ಮೂಲಗಳಾದ ಬಾವಿ, ಕೆರೆ, ಹೊಳೆ, ನದಿ, ಕೊಳವೆಬಾವಿ- ಎಲ್ಲವೂ ಮಲಿನವಾಗುತ್ತಿವೆ. ಜನವಸತಿಗಳ ಕೊಳಚೆ, ಕೈಗಾರಿಕೆಗಳ ತ್ಯಾಜ್ಯ, ಕ್ರಿಮಿನಾಶಕಗಳ ಅಂಶಗಳಿರುವ ಕೃಷಿಜಮೀನಿನ ಹೊರಹರಿವು- ಇವೆಲ್ಲವೂ ನೀರು ವಿಷವಾಗಲು ಕಾರಣ. ಜಲಮೂಲ ರಕ್ಷಣೆಗೆ ಸೂಕ್ತ ನೀತಿ ರೂಪಿಸಿ, ಅಚ್ಚುಕಟ್ಟಾಗಿ ಅನುಷ್ಠಾನ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು, ಮನೆಮನೆಗೆ ನೀರು ಪೂರೈಸುವ ಸರ್ಕಾರಿ ವಿತರಣಾ ವ್ಯವಸ್ಥೆಗಳಂತೂ ಭ್ರಷ್ಟಾಚಾರದಿಂದಾಗಿ ಕುಸಿಯುತ್ತಿವೆ. ಇವುಗಳಿಂದಾಗಿ, ಬಹುಪಾಲು ಜನರು ಮಲಿನ ನೀರು ಕುಡಿಯುವುದು ಅನಿವಾರ್ಯವಾಗುತ್ತಿದೆ!

ಈ ಸವಾಲನ್ನು ಮಣಿಸಲೆಂದೇ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಯೋಜನೆ ‘ಜಲಜೀವನ ಮಿಷನ್’. 2024ರ ವೇಳೆಗೆ, ದೇಶದ ಪ್ರತಿಮನೆಗೂ ನಲ್ಲಿ ಸಂಪರ್ಕ ಒದಗಿಸಿ, ಪ್ರತಿಯೊಬ್ಬರಿಗೂ ಪ್ರತಿದಿನ ಕನಿಷ್ಠ 55 ಲೀಟರ್‌ ಶುದ್ಧನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯಿದು. ರಾಜ್ಯ ಸರ್ಕಾರವು ಇದಕ್ಕೆ ತನ್ನ ಅನುದಾನವನ್ನೂ ಸೇರಿಸಿ, ‘ಮನೆಮನೆಗೆ ಗಂಗೆ’ ಯೋಜನೆಯ ರೂಪದಲ್ಲಿ ಜಾರಿಗೊಳಿಸುತ್ತಿದೆ. ಇವೆಲ್ಲ ಸ್ವಾಗತಾರ್ಹವೇ. ಆದರೆ, ವಿತರಿಸುವ ನೀರಿನ ಶುದ್ಧತೆ ಖಚಿತಪಡಿಸುವ ಮೂಲಭೂತ ಅಂಶವೇ ಈ ಯೋಜನೆಯಲ್ಲಿ ಇದ್ದಂತಿಲ್ಲ. ಏಕೆಂದರೆ, ಕೊಳವೆಮಾರ್ಗದಲ್ಲಿ ಸಾಗಿಸುವ ಮುನ್ನ ಜಲಮೂಲಗಳನ್ನು ಶುದ್ಧಿಯಾಗಿಸುವ ಜವಾಬ್ದಾರಿ ಈ ಯೋಜನೆಯ ವ್ಯಾಪ್ತಿಗೇ ಬರುವುದಿಲ್ಲ. ಇನ್ನು, ಜಿಲ್ಲೆಗೆ ಒಂದರಂತೆ ಸ್ಥಾಪಿಸಲು ಉದ್ದೇಶಿಸಿರುವ ನೀರಿನ ಗುಣಮಟ್ಟ ಪರೀಕ್ಷಿಸುವಪ್ರಯೋಗಾಲಯಗಳ ತಾಂತ್ರಿಕ ಉತ್ಕೃಷ್ಟತೆ ಹಾಗೂ ನಿರ್ವಹಣಾ ಸಾಮರ್ಥ್ಯದ ಚಿತ್ರಣವೂ ಸ್ಪಷ್ಟವಾಗಿಲ್ಲ. ಈ ಅಂಶಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ, ಇದು ಮತ್ತೊಂದು ‘ಪೈಪ್ ಹಾಕುವ’ ಯೋಜನೆಯಾಗಿ ಬದಲಾದೀತು!

ADVERTISEMENT

ಹೀಗಾಗಿ, ಒಂದು ಮಾತು ಖಚಿತ. ಸರ್ಕಾರಿ ನಲ್ಲಿಯಿರಲಿ ಅಥವಾ ಖಾಸಗಿ ಬಾವಿಯಿರಲಿ, ಮನೆಗೆ ಬಂದ ಗಂಗೆಯನ್ನು ಶುದ್ಧಿ ಮಾಡಿಕೊಳ್ಳುವ ಹೊಣೆಯು ಬಳಸುವ ಕುಟುಂಬಗಳದ್ದೇ. ಇತ್ತೀಚಿನವರೆಗೂ ಹಳ್ಳಿಗಳಲ್ಲಿ ನೀರನ್ನು ಸ್ವಚ್ಛ ಬಟ್ಟೆಯಲ್ಲಿ ಸೋಸಿ, ಕುದಿಸಿ ಬಳಸುತ್ತಿದ್ದರು. ನಗರ–ಪಟ್ಟಣಗಳಲ್ಲಾದರೋ ಮರಳು ಅಥವಾ ಸಿಲಿಕಾದ ಪದರುಗಳ ಮೂಲಕ ನೀರು ಸೋಸುವ ತಂತ್ರದ ಶುದ್ಧೀಕರಣ ಘಟಕಗಳನ್ನು ಬಳಸುತ್ತಿದ್ದರು. ಕಸ-ದೂಳು, ಪ್ಲಾಸ್ಟಿಕ್-ಬಟ್ಟೆಗಳ ತುಂಡು ಇತ್ಯಾದಿಯನ್ನೆಲ್ಲ ಈ ‘ಫಿಲ್ಟರ್-ಕ್ಯಾಂಡಲ್’ನಿಂದಲೇ ಬೇರ್ಪಡಿಸಬಹುದು. ಮನೆಯ ಬಾವಿ ಅಥವಾ ಕಾಡಿನ ಝರಿನೀರು ಮಾತ್ರ ಬಳಸುವವರಿಗೆ ಇದು ಕ್ಷೇಮಕರವೇ. ಆದರೆ, ಇಂದು ವ್ಯಾಪಕವಾಗಿ ಬಳಸುತ್ತಿರುವುದು ಕೆರೆ-ಹಳ್ಳ, ನದಿ, ಕೊಳವೆಬಾವಿ ನೀರು.

ಈ ಜಲಮೂಲಗಳ ಮಾಲಿನ್ಯ ಎಷ್ಟು ಸಂಕೀರ್ಣವಾಗುತ್ತಿದೆಯೆಂದರೆ, ಸರಳ ಶುದ್ಧೀಕರಣ ತಂತ್ರಗಳು ಸಾಲುತ್ತಿಲ್ಲ. ಅದರಲ್ಲಿ ಜನವಸತಿಯ ಕೊಳಚೆ ಅಥವಾ ಕೈಗಾರಿಕಾ ತ್ಯಾಜ್ಯಗಳಿಂದ ಬರುವ ವಿವಿಧ ಸಾವಯವ ಹಾಗೂ ನಿರವಯವ ರಾಸಾಯನಿಕ ಸಂಯುಕ್ತಗಳಿರುತ್ತವೆ. ಗಂಧಕ, ರಂಜಕ, ಕ್ಯಾಲ್ಸಿಯಂ, ಸೋಡಿಯಂ, ನೈಟ್ರೇಟ್, ಕ್ಲೋರೈಡ್ ಇತ್ಯಾದಿ. ಕೃಷಿಭೂಮಿಯಿಂದ ಹರಿದು ಜಲಮೂಲ ಸೇರುವ ನೀರಿನಲ್ಲಿ ಕ್ರಿಮಿನಾಶಕ ಹಾಗೂ ಕಳೆನಾಶಕಗಳ ಕೃತಕ ರಾಸಾಯನಿಕ ಅಂಶಗಳಿರುತ್ತವೆ. ಕೈಗಾರಿಕೆ ಅಥವಾ ನಗರತ್ಯಾಜ್ಯಗಳ ಸಂಪರ್ಕವಿರುವ ಜಲಮೂಲ ಹಾಗೂ ಕೊಳವೆಬಾವಿ ನೀರಿನಲ್ಲಿ ಕಬ್ಬಿಣ, ಸೀಸ, ಪಾದರಸಗಳಂಥ ಭಾರಲೋಹಗಳಿರಬಹುದು.

ಕೊಳವೆಬಾವಿಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಆರ್ಸೆನಿಕ್, ಫ್ಲೋರೈಡ್ ಅಂಶಗಳಿರುವುದಿದೆ.

ದೇಶದ ಹಲವೆಡೆ ಆಳದ ಕೊಳವೆಬಾವಿಯಲ್ಲಿವಿಕಿರಣಕಾರಿ ಯುರೇನಿಯಂಯುಕ್ತ ನೀರು ದೊರಕುತ್ತಿದೆ! ಬಣ್ಣ-ವಾಸನೆ ಇರದೆಯೂ ಇವು ನೀರಿನಲ್ಲಿ ಕರಗಿರಬಹುದು. ಈ ರಾಸಾಯನಿಕಗಳನ್ನೆಲ್ಲ ಒಟ್ಟಾಗಿ ‘ಕರಗಿದ ದ್ರವ್ಯಗಳು’ (ಟಿಡಿಎಸ್) ಎನ್ನುತ್ತಾರೆ. ಈಗಿನ ಅಂಗೀಕೃತ ವೈಜ್ಞಾನಿಕ ನಿಯಮಗಳ ಪ್ರಕಾರ, ಈ ಟಿಡಿಎಸ್ ಎಷ್ಟಿದೆ ಎಂಬುದು ನೀರಿನ ಶುದ್ಧತೆ ಅಳೆಯುವ ಪ್ರಮುಖ ಮಾನದಂಡಗಳಲ್ಲಿ ಒಂದು.

ಕುಡಿಯುವ ನೀರಲ್ಲಿ ಟಿಡಿಎಸ್ ಹೆಚ್ಚಾದಹಾಗೆ, ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ, ಆರ್ಸೆನಿಕ್ ಚರ್ಮದ ಕಾಯಿಲೆ ಹುಟ್ಟುಹಾಕಬಹುದು. ಅಧಿಕ ಕಬ್ಬಿಣ, ಸೀಸದ ಅಂಶಗಳು ಮರೆವಿನ ರೋಗದಂಥ ನರಮಂಡಲದ ಕಾಯಿಲೆಗೆ ಕಾರಣವಾಗಬಹುದು. ಕ್ಯಾಡ್ಮಿಯಂ ಮೂತ್ರಪಿಂಡವನ್ನುಗಾಸಿಗೊಳಿಸಿದರೆ, ಕ್ರೋಮಿಯಂ ಕರುಳಿನ ಊತ ಉಂಟುಮಾಡುವಂಥದ್ದು. ಯುರೇನಿಯಂ ಹಾಗೂಕ್ರಿಮಿನಾಶಕಗಳ ಸಂಯುಕ್ತಗಳಂತೂ ಕ್ಯಾನ್ಸರ್ ತರಹದ ರೋಗಗಳನ್ನೇ ಉದ್ದೀಪಿಸುತ್ತವೆ.

ಇದರ ಹೊರತಾಗಿ ನೀರಿನಲ್ಲಿ ಅಪಾರ ಸೂಕ್ಷ್ಮಾಣುಜೀವಿಗಳೂ ಇರುತ್ತವೆ. ಇವುಗಳಲ್ಲಿ ರೋಗ ಹುಟ್ಟಿಸಬಲ್ಲ ಅಥವಾ ಹರಡಬಲ್ಲ ಬ್ಯಾಕ್ಟೀರಿಯ, ವೈರಸ್, ಶಿಲೀಂಧ್ರ, ಸೂಕ್ಷ್ಮಕೀಟಗಳ ಪ್ರಭೇದಗಳೂ ಇರಬಹುದು. ಹೀಗಾಗಿ, ಕಸ, ಟಿಡಿಎಸ್ ಹಾಗೂ ಅಪಾಯಕಾರಿ ಸೂಕ್ಷ್ಮಾಣುಜೀವಿಗಳು- ಇವನ್ನೆಲ್ಲ ಬೇರ್ಪಡಿಸಿ ನೀರನ್ನು ಒದಗಿಸುವ ತಂತ್ರಜ್ಞಾನವು ಪ್ರತೀ ಅಡುಗೆಮನೆಗೂ ಇಂದು ಅಗತ್ಯವಿದೆ. ಹೀಗಾಗಿ, ಅದೆಷ್ಟೋ ಬಗೆಯ ನೀರು ಶುದ್ಧೀಕರಣ ಯಂತ್ರಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಅವುಗಳಲ್ಲಿ ನಮಗೆ ಯಾವುದು ಸೂಕ್ತ ಎಂದು ಅರಿಯುವುದೇ ದೊಡ್ಡ ಗೊಂದಲ!

ಅವನ್ನು ಮುಖ್ಯವಾಗಿ ಆರು ವಿಧಗಳಲ್ಲಿ ವರ್ಗೀಕರಿಸಬಹುದು. ಮೊದಲಿನದು, ಮರಳು ಅಥವಾ ಸಿಲಿಕಾ ಫಿಲ್ಟರ್ ಬಳಸುವ ತಂತ್ರ. ಎರಡನೆಯದು, ಹೆಚ್ಚು ಪರಿಣಾಮಕಾರಿಯಾದ ಸೂಕ್ಷ್ಮರಂಧ್ರಗಳ ಅಲ್ಟ್ರಾ-ಫಿಲ್ಟರುಗಳು. ಇವು ನೀರನ್ನು ಕಸ ಹಾಗೂ ಕೆಲವು ರಾಸಾಯನಿಕಗಳಿಂದ ಮುಕ್ತಗೊಳಿಸುತ್ತವಾದರೂ, ರೋಗಕಾರಕ ಸೂಕ್ಷ್ಮಾಣುಜೀವಿಗಳು ಹಾಗೂ ಕ್ರಿಮಿನಾಶಕಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಮೂರನೆಯದು, ಅತಿನೇರಳೆ ಕಿರಣ ಬಳಸುವ ವಿಧಾನ. ಇದರಲ್ಲಿ ಸೂಕ್ಷ್ಮಾಣುಜೀವಿಗಳು ನಾಶವಾದರೂ ಟಿಡಿಎಸ್ ಮಾತ್ರ ಉಳಿದುಬಿಡುತ್ತದೆ. ನಾಲ್ಕನೆಯದು, ಸಂಸ್ಕರಿಸಿದ ಇದ್ದಿಲಿನ ಫಿಲ್ಟರ್ ತಂತ್ರ. ಈ ಮೊದಲು ಪ್ರಸ್ತಾಪಿಸಿದ ವಿಧಾನಗಳಿಗಿಂತ ಇದು ಹೆಚ್ಚು ಪರಿಣಾಮಕಾರಿಯಾದ ತಂತ್ರಜ್ಞಾನ.

ಐದನೆಯದು, ಜೀವಕೋಶಗಳ ಆವರಣ ಹೋಲುವ ಕೃತಕ ಪದರುಗಳನ್ನು ಬಳಸಿ ನೀರು ಸೋಸುವ ‘ರಿವರ್ಸ್ ಆಸ್ಮಾಸಿಸ್’ ತಂತ್ರಜ್ಞಾನ. ಇಂದು ವ್ಯಾಪಕ ಬಳಕೆಯಲ್ಲಿರುವ ಕ್ಷಮತೆಯ ತಂತ್ರಜ್ಞಾನವಿದು.ಆದರೆ, ಈ ಯಂತ್ರಗಳು ದೇಹಕ್ಕೆ ಅಗತ್ಯವಿರುವ ಒಳ್ಳೆಯ ಲವಣಗಳನ್ನೂ ಸಂಪೂರ್ಣವಾಗಿ ಬೇರ್ಪಡಿಸುತ್ತವೆ ಎನ್ನುವ ಆರೋಪವಿದೆ. ಹಾಗಿದ್ದಲ್ಲಿ, ಅದರ ನೀರನ್ನು ದೀರ್ಘಕಾಲ ಕುಡಿದರೆ ದೇಹಕ್ಕೆ ಖನಿಜಾಂಶಗಳ ಕೊರತೆಯಾಗುತ್ತದೆ ಎನ್ನುವುದು ತಜ್ಞರ ವಾದ. ಹೀಗಾಗಿ, ಇದರ ಬಳಕೆಗೆ ಮಿತಿ ನಿರ್ಧರಿಸುವ ಸಂಗತಿಯೀಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಅಂತಿಮವಾಗಿ, ಗ್ರಾಫೈಟಿನಿಂದ ಉತ್ಪಾದಿಸುವ ಅತಿಸೂಕ್ಷ್ಮವಾದ ಇಂಗಾಲದ ನ್ಯಾನೊ-ಕೊಳವೆಗಳನ್ನು ಬಳಸಿ ನೀರು ಶುದ್ಧೀಕರಿಸುವುದು. ಇನ್ನಷ್ಟು ಅಭಿವೃದ್ಧಿಆಗಬೇಕಿರುವ ಈ ತಂತ್ರಜ್ಞಾನವು ಮಾರುಕಟ್ಟೆಗೆ ಇನ್ನೂ ಬರಬೇಕಿದೆ. ಆದ್ದರಿಂದ, ಇವೆಲ್ಲವುಗಳ ಸಾಧಕ-ಬಾಧಕಗಳ ಕುರಿತು ಗ್ರಾಹಕರಲ್ಲಿ ವ್ಯಾಪಕ ಜಾಗೃತಿಯಾಗಬೇಕಿದೆ.

ಜಲಮೂಲ ರಕ್ಷಣೆ, ಸೂಕ್ತ ಪೂರೈಕೆ ಹಾಗೂ ಎಲ್ಲರೂ ಶುದ್ಧನೀರನ್ನು ಕುಡಿಯುವುದು- ಈ ಮೂರನ್ನೂ ಸಾಧಿಸಲು ಸರ್ಕಾರ ಹಾಗೂ ಸಮಾಜದ ಜಂಟಿ ಯತ್ನ ಬೇಕು. ಸಕಲರಿಗೂ ಜಲಾಮೃತ ಪೂರೈಸುವ ಕನಸನ್ನು ಈ ಅಮೃತಕಾಲವು ಸಾಕಾರಗೊಳಿಸೀತೆ?

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.