ಇಂದಿನ ವ್ಯವಸ್ಥೆಯನ್ನು ರಾಕ್ಷಸ ಆರ್ಥಿಕತೆಯೆಂದು ನಾನು ಕರೆದಾಗ ಅದು ನಿಮಗೆ ಬೈಗುಳದಂತೆ ಕೇಳಿಸುವುದು ಖಂಡಿತ. ಬೈಗುಳವಲ್ಲ ಇದು, ಒಂದು ವಾಸ್ತವಿಕ ಚಿತ್ರಣ. ಇಂದಿನ ಆರ್ಥಿಕತೆಯು ತನ್ನ ಗಾತ್ರ ಹಾಗೂ ಗುಣ ಎರಡರಲ್ಲೂ ರಾಕ್ಷಸವೇ ಹೌದು. ನೀವೇ ನೋಡಿ! ವಿಶ್ವವನ್ನೇ ಆವರಿಸಿಕೊಂಡಿದೆ ಇದು. ರಾಷ್ಟ್ರಗಳ ಗಡಿಗಳನ್ನೇ ಅಳಿಸಿಹಾಕಿದೆ ಇದು. ಸಮುದಾಯಗಳು, ಸಂಸ್ಕೃತಿಗಳು, ಮಾತೃಭಾಷೆಗಳು, ಜನಾಂಗಗಳು, ನದಿ, ಬೆಟ್ಟ, ಕಾಡುಗಳನ್ನು ಅಳಿಸಿಹಾಕಿದೆ ಇದು. ಪುರುಷನನ್ನು ಪ್ರಕೃತಿಯಿಂದ ಪ್ರತ್ಯೇಕಿಸಿ ಏಕಾಂಗಿಯಾಗಿಸಿದೆ ಇದು. ಸಮುದಾಯಪ್ರಜ್ಞೆ, ಸಹಕಾರಗುಣ ಇತ್ಯಾದಿಯಾಗಿ ಯಾವುದನ್ನು ನಾವು ಮನುಷ್ಯತ್ವ ಅಥವಾ ಮಾನವ ಧರ್ಮ ಎಂದು ಕರೆಯುತ್ತೇವೆಯೋ ಅವೆಲ್ಲವನ್ನೂ ಅಳಿಸಿಹಾಕಿದೆ ಇದು. ಸ್ಪರ್ಧಾತ್ಮಕತೆ, ಹಿಂಸೆ, ಅಸಹನೆ, ಧಾರ್ಮಿಕ ಅಸಹಿಷ್ಣುತೆ ಹಾಗೂ ಶ್ರೀಮಂತಿಕೆಯ ಅಟ್ಟಹಾಸಗಳನ್ನು ಸಾರ್ವತ್ರಿಕಗೊಳಿಸಿದೆ ಈ ರಾಕ್ಷಸ ಆರ್ಥಿಕತೆ.
ಈಗ ಸೋಲತೊಡಗಿದೆ ಇದು. ಮಾತ್ರವಲ್ಲ, ನಮ್ಮನ್ನೂ ಸೋಲಿಸತೊಡಗಿದೆ. ದಸರೆಯ ಕಡೆಯ ದಿನ ಉತ್ತರ ಭಾರತದ ಜನ, ರಾಮನ ಗೆಲುವನ್ನು ಸಂಭ್ರಮಿಸುತ್ತ, ರಾವಣನ ಪ್ರತಿಕೃತಿಯನ್ನು ದಹಿಸುವಾಗ ಅದು ಹೇಗೆ ಸುತ್ತಲೂ ಉದುರಿ ಬೀಳುತ್ತದೆಯೋ ಹಾಗೆಯೇ ಇದು ಕೂಡ ಉದುರಿ ಬೀಳತೊಡಗಿದೆ ನಮ್ಮ ಸುತ್ತಮುತ್ತ, ನಮ್ಮ ತಲೆಗಳ ಮೇಲೆ. ಇದರ ಹತ್ತು ಹಲವಾರು ಶಿರಸ್ಸುಗಳು, ಶಿರಸ್ತ್ರಾಣಗಳು, ಗುರಾಣಿ, ಕತ್ತಿ, ಕೈ ಕಾಲುಗಳು, ನಮ್ಮ ಮೇಲೆ ಬೀಳತೊಡಗಿವೆ. ಆದರೂ, ನಾವು ರಾಮಭಕ್ತರಾದರೂ, ದಸರೆಯ ಹಬ್ಬ ಆಚರಿಸಲು ಹಿಂಜರಿಯುತ್ತಿದ್ದೇವೆ. ರಾಕ್ಷಸನನ್ನು ಬದುಕಿಸುವ ಕಳ್ಳಯತ್ನ ಮಾಡುತ್ತಿದ್ದೇವೆ.
ಈ ಉದಾಹರಣೆ ನೋಡಿ! ಮಂತ್ರಿಗಳು ಹಾಗೂ ಸರ್ಕಾರಿ ಅಧಿಕಾರಿಗಳಿಗಾಗಿ, ತೆರಿಗೆದಾರರ ಹಣದಿಂದ ಕಾರುಗಳನ್ನು ಕೊಂಡು ಆಟೊಮೊಬೈಲ್ ಕೈಗಾರಿಕೆಗಳನ್ನು ಉಳಿಸುವ ಮಾತನ್ನಾಡುತ್ತಿದೆ ಕೇಂದ್ರ ಸರ್ಕಾರ ಅಥವಾ ಬ್ಯಾಂಕುಗಳು, ಭಾರಿ ಕಳ್ಳಕುಳಗಳಿಗಾಗಿ ಕ್ರಮಮೀರಿ ಸಾಲ ಕೊಟ್ಟು, ವಸೂಲಿ ಮಾಡಲಾಗದೆ ಕೈಸುಟ್ಟುಕೊಂಡಾಗ, ಅವರನ್ನು ಕ್ಷಮಿಸಿ, ಮತ್ತೆ ಸಾಲ ನೀಡಲೆಂದು ಮತ್ತಷ್ಟು ಹಣ ನೀಡುತ್ತಿದೆ ಕೇಂದ್ರ ಸರ್ಕಾರ. ಇದನ್ನು ರಾಮಭಕ್ತಿ ಎನ್ನುತ್ತೀರೋ ರಾವಣಭಕ್ತಿ ಎನ್ನುತ್ತೀರೋ?
ರಾಕ್ಷಸ ಆರ್ಥಿಕತೆಯನ್ನು ಈ ಹಿಂದೆ ಕೊಂದವನು ರಾಮ. ರಾಮನೊಟ್ಟಿಗೆ ಅಂದು ಕಪಿಸೇನೆ, ಕರಡಿ, ಮುದಿಗೃಧ್ರ, ಇಣಚಿ, ನದಿ, ಬೆಟ್ಟ, ನೀರುಗಳೂ ಸೇರಿ ಯುದ್ಧ ಸಾರಿದ್ದವು. ಆಶ್ರಮಗಳು, ಆಶ್ರಮವಾಸಿಗಳು, ಗುಡ್ಡಗಾಡು ಜನರು, ರೈತರು ಹಾಗೂ ಕುಶಲಕರ್ಮಿಗಳ ಪರವಾಗಿ ನಡೆದಿತ್ತು ಯುದ್ಧ. ಇಂದಿನ ಯುದ್ಧವು ರಾಮನ ಹೆಸರಿನಲ್ಲಿ ಕಾರುಗಳು, ಕಾರ್ಖಾನೆಗಳು ಹಾಗೂ ಲಂಕೆಯಂತಹ ಸ್ಮಾರ್ಟ್ ನಗರಗಳ ಪರವಾಗಿ ನಡೆದಿದೆ. ಕಪಿ, ಕರಡಿ, ಮುದಿಗೃಧ್ರಗಳಿರಲಿ, ಪಾಪ ಮನುಷ್ಯರು ಸಹ ರಾಮ ರಾಮಾ ಎನ್ನಬೇಕಾಗಿದೆ ಹತಾಶೆಯಿಂದ.
ನಮಗಿಂದು ಖಂಡಿತವಾಗಿ ಬೇಕಿದೆ ಪವಿತ್ರ ಆರ್ಥಿಕತೆ. ನಮಗೆ ಗಾಂಧೀಜಿ ಬೇಡವಾಗಿರಲಿ, ರಾಮ ಬೇಡವಾಗಿರಲಿ, ಪವಿತ್ರ ಆರ್ಥಿಕತೆ ಬೇಕಿದೆ. ಪವಿತ್ರ ಆರ್ಥಿಕತೆಯೆಂದರೆ ಎಡಪಂಥೀಯರು ಸಿಡಿಯುತ್ತಾರೆ. ಸಂಯಮವಿರಲಿ. ಪವಿತ್ರ ಆರ್ಥಿಕತೆ ಎಂದರೆ ಸಂಯಮದ ಆರ್ಥಿಕತೆಯೇ ಸರಿ. ಹಳೆಯ ರಾಮಭಕ್ತರು ಇದನ್ನು ರಾಮರಾಜ್ಯ ಎಂದು ಕರೆದರು. ಹಳೆಯ ಬಸವಭಕ್ತರು ಇದನ್ನು ಕಾಯಕದ ಧರ್ಮ ಎಂದು ಕರೆದರು, ಹಳೆಯ ಬುದ್ಧಭಕ್ತರು ಇದನ್ನು ಮಧ್ಯಮಮಾರ್ಗ ಎಂದು ಕರೆದರು. ಆದರೆ ಪೂಜಾರಿಗಳು ಮಾತ್ರ ಜನಿವಾರ ತೊಡಿಸಿದರೆ ಸಾಕು, ಎಲ್ಲ ಆರ್ಥಿಕತೆಯೂ ಪವಿತ್ರವಾಗುತ್ತದೆ ಎಂದರು. ಅಥವಾ ಶಿವದಾರ ಅಥವಾ ಶಿಲುಬೆ.
ತಮಾಷೆಯೆಂದರೆ, ಜನಿವಾರ ಸಹ ಶ್ರಮದಿಂದಲೇ ತಯಾರಾದದ್ದು. ತೊಡುವವರನ್ನು ಕೇಳಿ, ಹೇಳುತ್ತಾರೆ. ತಾವೇ ಹತ್ತಿ ಕಿತ್ತುತಂದು, ತಾವೇ ಬಿಡಿಸಿ, ತಾವೇ ಸ್ವಚ್ಛಗೊಳಿಸಿ, ತಮ್ಮದೇ ಕೈಗಳಿಂದ ನೂತು, ತಾವೇ ಧರಿಸುತ್ತಾರೆ ಜನಿವಾರವನ್ನು. ಗಾಂಧೀಜಿ ಇದೇ ಪವಿತ್ರ ದಾರವನ್ನು ಕೈಮಗ್ಗದಲ್ಲಿ ನೇಯಿಸಿ ಎಲ್ಲರ ಬತ್ತಲನ್ನೂ ಮುಚ್ಚಿ, ಎಲ್ಲರನ್ನೂ ಪವಿತ್ರವಾಗಿಸಿದ್ದರು. ಗಾಂಧೀಜಿ ನಂತರ ಕಾಂಗ್ರೆಸ್ಸಿಗರು ಮತ್ತದೇ ಹಳೆಯಚಾಳಿಗೆ ಬಿದ್ದರು, ಖಾದಿ ಟೊಪ್ಪಿಗೆಯನ್ನು ಜನಿವಾರದಂತೆಯೇ ಪ್ರತ್ಯೇಕಿಸಿ ತಾವು ಧರಿಸಿದರು. ಬಡಜನರ ಬತ್ತಲನ್ನು ಮರೆತರು. ಈಗ ರಾಮಭಕ್ತರು ರಾಕ್ಷಸ ಆರ್ಥಿಕತೆಯ ಸೂಟಿನ ಮೇಲೆ ಜನಿವಾರ ತೊಡಿಸಿದ್ದಾರೆ. ಧರ್ಮ ಬೇರೆ, ಆರ್ಥಿಕತೆ ಬೇರೆ ಎಂದು ಪ್ರತ್ಯೇಕಿಸಿದ್ದಾರೆ. ಧರ್ಮಕ್ಕೆ ಸಲ್ಲುವ ಸಂಯಮವು ಆರ್ಥಿಕತೆಗೆ ಸಲ್ಲುವುದಿಲ್ಲ ಎಂದಿದ್ದಾರೆ! ಅಲ್ಲಿ ಉಪವಾಸ ಮಾಡಿ, ಇಲ್ಲಿ ಸ್ವೇಚ್ಛಾಚಾರ ಮಾಡಿ ಎಂದಿದ್ದಾರೆ. ಉಳ್ಳವರಸ್ವೇಚ್ಛಾಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಅಷ್ಟೆ, ಇಬ್ಬರೂ.
ಇವರಿಬ್ಬರ ಆರ್ಥಶಾಸ್ತ್ರದಲ್ಲೂ ಸಂಯಮಕ್ಕೆ ಸ್ಥಳವಿಲ್ಲ. ಮನಮೋಹನ್ ಸಿಂಗ್ ಅವರಿರಲಿ, ನಿರ್ಮಲಾ ಸೀತಾರಾಮನ್ ಅವರಿರಲಿ ಇಬ್ಬರೂ ಸ್ವೇಚ್ಛಾಚಾರಿ ಆರ್ಥಿಕತೆಯ ಬೆಂಬಲಿಗರೇ ಸರಿ. ಉತ್ಪಾದನೆ ಹೆಚ್ಚಿಸು, ಬಳಕೆ ಹೆಚ್ಚುತ್ತದೆ, ಬಳಕೆ ಹೆಚ್ಚಿದರೆ ಲಾಭದಾಯಕತೆ ಹೆಚ್ಚುತ್ತದೆ ಎಂದೇ ಹೇಳುತ್ತಾರೆ ಇಬ್ಬರೂ. ಇಲ್ಲದ ಬೇಡಿಕೆಯ ಮೇಲೆ ನಿಂತಿದ್ದಾರಾದ್ದರಿಂದ, ಉತ್ಪಾದಿಸಿ ಉತ್ಪಾದಿಸಿ ಉರುಳಿಬಿದ್ದಿದೆ ಇಬ್ಬರದ್ದೂ ಶಾಸ್ತ್ರ.
ಸ್ವಯಂಚಾಲಿತಯಂತ್ರ ಸಿಕ್ಕಿದೆಯೆಂದು ಸಂಯಮವಿಲ್ಲದೆ ಉತ್ಪಾದಿಸುತ್ತ ಹೋದರೆ ಲಾಭಬಡುಕ ಉದ್ಯಮಿಗಳಿಗೆ ಹಾಗೂ ಲಾಭಬಡುಕ ಸರ್ಕಾರಗಳಿಗೆ ಲಾಭವೇ ಹೊರತು ಮನುಷ್ಯರಿಗಲ್ಲ. ಎಷ್ಟೆಂದು ಕೊಂಡಾನು ಹೇಳಿ ಮಾನವ. ಮನುಷ್ಯರೇ ಇರದೆ ಉತ್ಪಾದನೆ ಮಾಡಿದರೆ ಮಾಲೀಕನಿಗೆ ಅಥವಾ ಷೇರುದಾರನಿಗೆ ಲಾಭ ಖಂಡಿತ. ಮನುಕುಲವನ್ನೇ ಷೇರುದಾರರನ್ನಾಗಿಸಿ ಶ್ರೀಮಂತರನ್ನಾಗಿಸುತ್ತೇವೆ ಎಂದು ಸುಳ್ಳು ಹೇಳಿದರು ಇಬ್ಬರೂ. ಈಗ ಷೇರುಪೇಟೆಗಳೇ ದಿವಾಳಿಯಾಗುತ್ತಿವೆ.
ಪವಿತ್ರ ಆರ್ಥಿಕತೆಯೆಂದರೆ ಅತ್ಯಂತ ಕಡಿಮೆ ಹೂಡಿಕೆ ಮಾಡಿ, ಅತ್ಯಂತ ಹೆಚ್ಚು ಜನರಿಗೆ ದುಡಿಮೆಯ ಮಾರ್ಗ ತೋರಿಸುವ ವ್ಯವಸ್ಥೆ. ಹಣದ ಕಡಿಮೆ ಹೂಡಿಕೆಯೂ ಹೌದು, ಪ್ರಕೃತಿಯ ಕಡಿಮೆ ಹೂಡಿಕೆಯೂ ಹೌದು. ಇವೆರಡೂ ಹೂಡಿಕೆ ಕಡಿಮೆಯಾದಷ್ಟೂ ಪ್ರಕೃತಿಗೆ ಒಳ್ಳೆಯದು, ಪುರುಷನಿಗೂ ಒಳ್ಳೆಯದು. ಹೂಡಿಕೆ ಕಡಿಮೆಯಾದದ್ದರಿಂದ ಹಣದ ಲಾಭ ಕಡಿಮೆ ಈ ಆರ್ಥಿಕತೆಯಲ್ಲಿ. ಆದರೆ ಪರಿಸರದ ಲಾಭ, ಸಮಾಜದ ಲಾಭ ಹಾಗೂ ಸಂಸ್ಕೃತಿಯ ಲಾಭ ಹೆಚ್ಚು. ಪವಿತ್ರವಾದದ್ದು ಕಷ್ಟಕರವಾದದ್ದೂ ಹೌದು. ಸುಲಭದ ದುಡಿಮೆಗೆ ಒಗ್ಗಿಕೊಂಡು ಮೈಗಳ್ಳರಾಗಿರುವ ನಮಗೆ, ಕಷ್ಟ ಕಷ್ಟ. ಆದರೆ ಬೇರೆ ದಾರಿಯಿಲ್ಲ.
ಪಾವಿತ್ರ್ಯದ ಮತ್ತೊಂದು ಉದಾಹರಣೆಯೆಂದರೆ ತೀರ್ಥ. ಮಂದಿರಗಳಲ್ಲಿ, ಬೆಳ್ಳಿಯ ಚಮಚದಿಂದ ಬೊಗಸೆಗೆ ಎಸೆಯಲ್ಪಡುವ ನೀರು, ಅರ್ಥಾತ್ ನದಿಯ ನೀರು ತೀರ್ಥ. ಗಂಗೆಯೂ ಆದೀತು, ಯಮುನೆಯೂ ಆದೀತು, ಗೋದಾವರಿ, ಕೃಷ್ಣೆ, ಕಾವೇರಿ, ತುಂಗೆ ಯಾವುದೂ ಆದೀತು. ನದಿಯ ನೀರಿನ ಪಾವಿತ್ರ್ಯ, ಮೃಗದ ಮೂತ್ರದಿಂದ ಕೆಡುವುದಿಲ್ಲ ಅಥವಾ ದಲಿತ ಮಿಂದದ್ದರಿಂದ ಕೆಡುವುದಿಲ್ಲ. ಆದರೆ, ಕಾರ್ಖಾನೆಗಳು ಮೂತ್ರಿಸಿದಾಗ ಖಂಡಿತವಾಗಿ ಕೆಡುತ್ತದೆ. ಒಟ್ಟು ಕತೆಯ ನೀತಿಯೆಂದರೆ, ಶ್ರಮ ಹಾಗೂ ಶ್ರಮಜೀವಿಗಳು ಖಂಡಿತವಾಗಿ ನಮ್ಮ ನಿಮ್ಮ ಪಾವಿತ್ರ್ಯ ಕೆಡಿಸುವುದಿಲ್ಲ. ಕಾರ್ಖಾನೆಗಳು ಕೆಡಿಸುತ್ತವೆ.
ಎಲ್ಲರೂ ಸೇರಿ ಪವಿತ್ರರಾಗೋಣ ಬನ್ನಿ. ಕಾರ್ಖಾನೆಗಳ ಅಪವಿತ್ರ ಮೂತ್ರವು ನದಿಗಳಿಗೆ ಹರಿಯದಂತೆ ತಡೆಯೋಣ ಬನ್ನಿ. ಪವಿತ್ರವಾದದ್ದನ್ನು ಬೆಳೆಯೋಣ, ನೇಯೋಣ, ಕೊಳ್ಳೋಣ, ಬನ್ನಿ. ಕೊಂಡರೂ, ಹಿತಮಿತವಾಗಿ ಕೊಳ್ಳೋಣ ಬನ್ನಿ. ಇದನ್ನು ನಮಗೆ ಮನಮೋಹನ್ ಸಿಂಗ್ ಅವರೂ ಹೇಳುವುದಿಲ್ಲ, ನಿರ್ಮಲಾ ಸೀತಾರಾಮನ್ ಅವರೂ ಹೇಳುವುದಿಲ್ಲ. ಹೇಳಲಾರರು ಅವರು. ನರೇಂದ್ರ ಮೋದಿಯವರಂತೂ ಹೇಳುವ ಆಸಕ್ತಿ ಸಹ ತೋರಿಸುತ್ತಿಲ್ಲ. ಚಂದ್ರನತ್ತ ನೋಡುತ್ತ ಮುಗುಳು ನಗುತ್ತ ಅಥವಾ ಅತ್ತ ಶಿವನ ಕಣ್ಣೊರೆಸುತ್ತ, ಸುತ್ತಲ ಪ್ರಪಂಚ ಮರೆತು, ಕುಳಿತುಬಿಟ್ಟಿದ್ದಾರೆ. ರಾಮ ರಾಮಾ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.