ಕರ್ನಾಟಕದ ನಿಗದಿತ ಚುನಾವಣಾ ದಿನಾಂಕಕ್ಕೆ 10 ದಿನಗಳ ಹಿಂದಿನ ಮಾತು. ಅದು ಬೆಂಗಳೂರಿನಿಂದ ದೂರದಲ್ಲಿರುವ ವಿಧಾನಸಭಾ ಕ್ಷೇತ್ರ. ಅಭ್ಯರ್ಥಿಯೊಬ್ಬರು ನೇರವಾಗಿ ವಿಷಯಕ್ಕೆ ಬಂದರು: ‘ಈ ಚುನಾವಣೆ ನಡೆಯುತ್ತಿರುವುದು ಜಾತಿ ಅಥವಾ ಧರ್ಮದ ಕುರಿತಾಗಿ ಅಲ್ಲ, ಬಡತನದ ಕುರಿತಾಗಿ. ಏರುತ್ತಿರುವ ದಿನಬಳಕೆ ವಸ್ತುಗಳ ಬೆಲೆಯಿಂದ ಕುಟುಂಬಗಳು ತತ್ತರಿಸುತ್ತಿವೆ. ಮನೆಯ ಹೆಂಗಸರು ವಾರಕ್ಕೆ ಎರಡು– ಮೂರು ಬಾರಿ ಉಪವಾಸ ಮಾಡುತ್ತಿದ್ದಾರೆ. ಕುಟುಂಬಗಳು ಸಾಲದ ಬಲೆಯಲ್ಲಿ ಸಿಕ್ಕಿಬಿದ್ದಿವೆ. ಬಡತನ ನಮ್ಮ ಮನೆಗಳನ್ನು ಮರುಪ್ರವೇಶಿಸುತ್ತಿದೆ’.
ಬರೀ 10 ವರ್ಷಗಳ ಹಿಂದೆ ಹಣದ ಹೊಳೆ ಹರಿಯುತ್ತಿದ್ದ ಆ ಕ್ಷೇತ್ರದಲ್ಲಿನ ಈ ಕರಾಳ ಕಥೆಯನ್ನು ಕೇಳಿದವರಿಗೆ, ಈ ಮಾತುಗಳಲ್ಲಿ ಕೊಂಚ ಅತಿಶಯೋಕ್ತಿಯಿದೆ ಅನ್ನಿಸಬಹುದು. ಆದರೆ 2023ರ ಚುನಾವಣೆಯ ಫಲಿತಾಂಶವನ್ನು ನೋಡಿದಾಗ, ಅದರ ಎಳೆಗಳನ್ನು ಬಿಚ್ಚಿ ನಿಕಷಕ್ಕೆ ಒಡ್ಡಿದಾಗ, ಆ ಜಯಶಾಲಿ ಅಭ್ಯರ್ಥಿಯ ಮಾತುಗಳನ್ನು ನೆನೆದಾಗ, ಹಾಗಿದ್ದರೆ ಕನ್ನಡಿಗರ ಆರ್ಥಿಕ ಸ್ಥಿತಿ ಹೇಗಿರಬಹುದು ಎಂಬ ದೊಡ್ಡ ಪ್ರಶ್ನೆ ಮೂಡುತ್ತದೆ. ಅಂದರೆ, ಈ ಪ್ರಶ್ನೆ ರಾಜ್ಯದ ಆರ್ಥಿಕ ಸ್ಥಿತಿಗೆ ಸಂಬಂಧಿಸಿದ್ದಲ್ಲ, ಅದರ ಪ್ರಜೆಗಳಿಗೆ, ಸಾಮಾನ್ಯ ಜನರಿಗೆ ಸಂಬಂಧಿಸಿದ್ದು.
ದೇಶದ 28 ರಾಜ್ಯಗಳ ಪೈಕಿ ಕರ್ನಾಟಕ ಉನ್ನತ ಸ್ಥಾನದಲ್ಲಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡಿನ ನಂತರ ದೇಶದ ನಾಲ್ಕನೇ ಶ್ರೀಮಂತ ರಾಜ್ಯವಾಗಿದ್ದು, ಅದರ ಬಜೆಟ್‌ನ ಗಾತ್ರ ₹ 3 ಲಕ್ಷ ಕೋಟಿ.
ದಕ್ಷಿಣ ಭಾರತದ ಐದು ರಾಜ್ಯಗಳ ಪೈಕಿ ಅದು ಹೊಂದಿರುವ ತಲಾವಾರು ಅತಿ ಹೆಚ್ಚು ನೈಜ ಆದಾಯ ₹ 1,68,050. ದೇಶದ ಜಿಡಿಪಿಗೆ, ಅಂದರೆ ಒಟ್ಟು ಆಂತರಿಕ ಉತ್ಪನ್ನಕ್ಕೆ ಗುಜರಾತಿಗಿಂತ ಹೆಚ್ಚು ಕೊಡುಗೆ: ಶೇ 8.1ರಷ್ಟು. ಯಾವ ರಾಜ್ಯಕ್ಕೂ ಬರದಷ್ಟು ವಿದೇಶಿ ನೇರ ಹೂಡಿಕೆ (ಎಫ್‌ಡಿಐ): 22.07 ಬಿಲಿಯನ್ ಡಾಲರ್. ಅಂದರೆ ಅಂದಾಜು ₹ 1.89 ಲಕ್ಷ ಕೋಟಿ. ಮಹಾರಾಷ್ಟ್ರ ಹಾಗೂ ದೆಹಲಿಯ ನಂತರ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯ: ಶೇ 12.
ಮೇಲ್ನೋಟಕ್ಕೆ ಸಿಹಿಯಾಗಿ ಕಾಣುವ ಅಂಕಿ ಅಂಶಗಳನ್ನು ಒಳಗೊಂಡ ಈ ಸಾಗರದಲ್ಲಿ ಬಡತನದ ದ್ವೀಪಗಳು- ಹಸಿವು, ಅಪೌಷ್ಟಿಕತೆ, ರೋಗ, ನಿರುದ್ಯೋಗ, ಋಣಭಾರ- ಹೇಗೆ ಅಡಗಿವೆ ಎಂಬುದಕ್ಕೆ ಈ ಬಾರಿಯ ಚುನಾವಣಾ ತೀರ್ಪೇ ಒಂದು ಪುಟ್ಟ ನಿದರ್ಶನ. ರಾಜ್ಯದಾದ್ಯಂತ ಮತಗಳು ಚಲಾವಣೆಯಾಗಿರುವ ರೀತಿಯನ್ನು ಗಮನಿಸಿದರೆ, ಈ ಚುನಾವಣೆ ನಡೆದದ್ದು ಬರೀ ಭ್ರಷ್ಟಾಚಾರ, ದುರಾಡಳಿತ, ಜಾತಿ, ಕೋಮುವಾದ, ಬೆಲೆ ಏರಿಕೆಯ ವಿರುದ್ಧ ಮಾತ್ರವಲ್ಲ, ಅದು ಒಂದು ರೀತಿಯಲ್ಲಿ ದುರಹಂಕಾರದ ವಿರುದ್ಧ ಕೆಳ ವರ್ಗಗಳ ನಿಶ್ಶಬ್ದ ಸಮರವಾಗಿತ್ತು ಎಂಬುದು ತಿಳಿದುಬರುತ್ತದೆ.
ಎರಡು ಪ್ರತಿಷ್ಠಿತ ಸಂಸ್ಥೆಗಳ ಸಮೀಕ್ಷೆಗಳಿಂದ ಇದು ನಮಗೆ ಹೆಚ್ಚು ಸ್ಪಷ್ಟವಾಗುತ್ತದೆ. ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್‌ಡಿಎಸ್) ನಡೆಸಿದ ಚುನಾವಣಾಪೂರ್ವ ಸಮೀಕ್ಷೆಯಲ್ಲಿ, ನಿರುದ್ಯೋಗದ (ಶೇ 28) ನಂತರ ಬಡತನ (ಶೇ 25) ಅತಿ ದೊಡ್ಡ ವಿಷಯವಾಗಿತ್ತು. ಇದಕ್ಕೆ ಪುರಾವೆ ಎಂಬಂತೆ, ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಬಡವರಲ್ಲಿ ಅತಿ ಹೆಚ್ಚು ಅತೃಪ್ತಿ ಕಂಡುಬಂದಿತ್ತು (ಶೇ 67). ಶ್ರೀಮಂತರಲ್ಲಿ ಇದ್ದ ಅತೃಪ್ತಿಯ ಪ್ರಮಾಣ ಶೇ 49.
ಇದರ ಪರಿಣಾಮವು ಫಲಿತಾಂಶದಲ್ಲಿ ಗೋಚರಿಸುತ್ತದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಪ್ರಕಾರ, ವಾರ್ಷಿಕ ಆದಾಯ ₹ 1.4 ಲಕ್ಷಕ್ಕಿಂತ ಕೆಳಗಿರುವವರನ್ನು ಒಳಗೊಂಡ ಪ್ರದೇಶಗಳಲ್ಲಿ ಕಾಂಗ್ರೆಸ್ಸಿಗೆ ಹೆಚ್ಚು ಮತಗಳು ದೊರಕಿವೆ. ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿಗೆ ಅಧಿಕ ಸಮರ್ಥನೆ ಸಿಕ್ಕಿರುವುದು ₹ 2.5 ಲಕ್ಷದಿಂದ ₹ 4 ಲಕ್ಷ ವಾರ್ಷಿಕ ಆದಾಯವಿರುವ ಭಾಗಗಳಿಂದ.
‘ನಂ. 1’ ರಾಜ್ಯದಲ್ಲಿ ಇಂತಹ ಇಬ್ಭಾಗವು ಹೇಗೆ ಸಾಧ್ಯವಾಯಿತು? ಅದು ಹೇಗೆ ಮೊದಲೇ ನಮ್ಮ ಕಣ್ಣು, ಕಿವಿಯನ್ನು ತಲುಪಲಿಲ್ಲ? ಮೂರೇ ಪದಗಳಲ್ಲಿ ಉತ್ತರ ಹೇಳಬೇಕೆಂದರೆ, ಬೆಂಗಳೂರು ನಗರವೊಂದೇ ಕರ್ನಾಟಕವಲ್ಲ. ರಾಜ್ಯವು ಮೇಲ್ನೋಟಕ್ಕೆ ಅಭಿವೃದ್ಧಿಯೆಡೆಗೆ ದೈತ್ಯಾಕಾರದ ದಾಪುಗಾಲುಗಳನ್ನು ಹಾಕುತ್ತಿದ್ದರೂ, ಇದು ಬಹುಪಾಲು ರಾಜಧಾನಿಗೆ ಸೀಮಿತ. ರಾಜ್ಯದಲ್ಲಿ ಬೆಳವಣಿಗೆ ಏಕರೂಪವಾಗಿಲ್ಲ. ಉತ್ತರ- ದಕ್ಷಿಣ ಎಂಬ ವಿಭಜನೆ ಇದೆ. ಕೆಲವು ಜಿಲ್ಲೆಗಳಲ್ಲಿನ ಬಡತನದ ಪ್ರಮಾಣವು ಉತ್ತರ ಮತ್ತು ಪೂರ್ವ ಭಾರತದ ಬಡ ರಾಜ್ಯಗಳಲ್ಲಿನ ಬಡತನದಷ್ಟೇ ಇದೆ.
ಇದು ಹಳೆಯ ಕಥೆಯಾದರೆ, ಹೊಸ ವಿಷಯ ಬೇರೆಯದೇ ಇದೆ. ಕೇಂದ್ರ ಸರ್ಕಾರದ ಯಾವುದೇ ಕಾರ್ಯಕ್ರಮಗಳಿಗೆ ನರೇಂದ್ರ ಮೋದಿ ಅವರು ‘ಪ್ರಧಾನಮಂತ್ರಿ’ ಹಣೆಪಟ್ಟಿ ಕಟ್ಟಿದರೂ ಜನರ ಸ್ಥಿತಿ ಹದಗೆಟ್ಟಿರುವುದು ಸುಳ್ಳಲ್ಲ. ಉದಾಹರಣೆಗೆ, 2022ರ ಒಳಗೆ ರೈತರ ಆದಾಯವನ್ನು ದ್ವಿಗುಣ ಮಾಡುವುದಾಗಿ ಮೋದಿ 2017ರಲ್ಲಿ ಘೋಷಿಸಿದ್ದರು. ಆದರೆ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜಾನ್ ಡ್ರೆಜ್ ಅವರ ಪ್ರಕಾರ, ಹಿಂದಿನ 8 ವರ್ಷಗಳಲ್ಲಿ ಕೃಷಿ ಕಾರ್ಮಿಕರ ವೇತನ ಮೂಲದ ಆದಾಯ ಬರೀ ಶೇ 0.9ರಷ್ಟು ಹೆಚ್ಚಾಗಿದೆ. ಕೃಷಿಯೇತರ ಕಾರ್ಮಿಕರದು ಇನ್ನೂ ಕಡಿಮೆ, ಅಂದರೆ ಶೇ 0.2ರಷ್ಟು.
ಇನ್ನೊಂದೆಡೆ, ಉದ್ಯೋಗ ಅವಕಾಶಗಳ ಕೊರತೆ. ಮೋದಿ ಅವರು ಅಧಿಕಾರಕ್ಕೆ ಬಂದ ನಂತರ, ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯನ್ನು ಕೊಟ್ಟರು. ಮಾಜಿ ಸಂಸದ ಪ್ರೊ. ರಾಜೀವ ಗೌಡ ಅವರ ಪ್ರಕಾರ, ಹಿಂದಿನ ಏಳು ವರ್ಷಗಳಲ್ಲಿ ಕರ್ನಾಟಕದ ಶೇ 21ರಷ್ಟು ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಯುವಕರಲ್ಲಿ ನಿರುದ್ಯೋಗದ ಪ್ರಮಾಣ ಶೇ 22 ಮುಟ್ಟಿದೆ. ಅಂದರೆ ನಾಲ್ಕು ಮಂದಿಯಲ್ಲಿ ಒಬ್ಬರಿಗೆ ಉದ್ಯೋಗವಿಲ್ಲ. ಕನ್ನಡಿಗರ ದುಃಸ್ಥಿತಿಗೆ ಕನ್ನಡಿ ಹಿಡಿಯುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೊಂದಿಲ್ಲ.
ವಸ್ತುಸ್ಥಿತಿ ಹೀಗಿರುವಾಗ, ಆಡಳಿತ ಪಕ್ಷದ ವಿರುದ್ಧ ಆಕ್ರೋಶದ ಅಲೆ ಏಳದೇ ಇರುತ್ತದೆಯೇ? ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಬಿಜೆಪಿಗೆ ಸಿಕ್ಕ ಬೆಂಬಲ ಐದು ವರ್ಷಗಳ ಹಿಂದೆ ಇದ್ದ ಶೇ 55ರಿಂದ ಶೇ 25ಕ್ಕೆ ಕುಸಿದಿತ್ತು. ಅಂದರೆ ಶೇ 30ರಷ್ಟು ಕಡಿಮೆಯಾಗಿತ್ತು. ನಗರ ಪ್ರದೇಶಗಳಲ್ಲಿ ಇಂತಹ ಕುಸಿತದ ಪ್ರಮಾಣ ಶೇ 7. ಸೆಂಟರ್ ಫಾರ್ ಪಾಲಿಸಿ ರಿಸರ್ಚ್ (ಸಿಪಿಆರ್) ತನ್ನ ಚುನಾವಣೋತ್ತರ ಸಮೀಕ್ಷೆಯಲ್ಲಿ ಉಪಗ್ರಹ ಚಿತ್ರಗಳನ್ನು ಬಳಸಿ ತೋರಿಸಿದ್ದು ಇದನ್ನೇ.
ಇಂತಹ ಸಮಸ್ಯೆಗಳಿಗೆ ಸಂಬಂಧಿಸಿ ಜನರಿಗೆ ಸಾಂತ್ವನ ನೀಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಬದಲು, ನಿರ್ಗತಿಕರು ಪಡೆಯುತ್ತಿದ್ದ ಸಣ್ಣಪುಟ್ಟ ಸೌಲಭ್ಯಗಳನ್ನೂ ಕಿತ್ತುಕೊಳ್ಳಲಾಯಿತು. ಕೊಡುತ್ತಿದ್ದ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಿದ ಬಿಜೆಪಿ ರಾಜಕಾರಣಿಗಳು ಏನೋ ದೊಡ್ಡ ಸಾಧನೆ ಮಾಡಿದಂತೆ ಬೀಗಿದರು. ರಾಜ್ಯಕ್ಕೆ ಪ್ರಧಾನಿಯವರ ಒಂದು ದಿನದ ಭೇಟಿಗಾಗಿ 37 ಕೋಟಿ ರೂಪಾಯಿ ವೆಚ್ಚ ಮಾಡಿದ ಸರ್ಕಾರದ ಬಳಿ, ಇಂದಿರಾ ಕ್ಯಾಂಟೀನ್‌ಗಳನ್ನು ನಡೆಸಲು ಹಣ ಇರಲಿಲ್ಲ. ‘ಅಸಮಾನತೆಗೆ ಕಾರಣ ಆರ್ಥಿಕ ಸ್ಥಿತಿಯಲ್ಲ, ಬದಲಾಗಿ ರಾಜಕೀಯ ಮತ್ತು ಸಿದ್ಧಾಂತ’ ಎಂದು ಹೇಳುತ್ತಾರೆ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿ. ಈ ವಿಷಯದಲ್ಲಿ ಅವರ ಮಾತು ನೂರಕ್ಕೆ ನೂರು ಸತ್ಯವಾಗಿದೆ.
2004ರಲ್ಲಿ ವಾಜಪೇಯಿ ನೇತೃತ್ವದ ಸರ್ಕಾರವು ಸ್ವಯಂ ಸೃಷ್ಟಿಸಿದ ಸುಳ್ಳುಗಳನ್ನು ನಂಬಿ, ‘ಇಂಡಿಯಾ ಶೈನಿಂಗ್’ ಎಂಬ ಘೋಷವಾಕ್ಯವನ್ನು ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆ ಎದುರಿಸಿತು. ಆದರೆ ಆ ಚುನಾವಣೆಯಲ್ಲಿ ಪಕ್ಷ ಸೋಲನುಭವಿಸಿತು. 2023ರಲ್ಲಿ ‘ಕರ್ನಾಟಕ ಶೈನಿಂಗ್’ ಎಂಬ ಘೋಷವಾಕ್ಯವು ರಾಜ್ಯದಲ್ಲಿ ಬಿಜೆಪಿಯನ್ನು ಅದೇ ಸ್ಥಿತಿಗೆ ತಲುಪಿಸಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದಾಗ ಹಿಜಾಬ್, ಹಲಾಲ್, ಎಕ್ಸ್‌ಪ್ರೆಸ್‌ವೇ, ಡಬಲ್ ಎಂಜಿನ್‌ನಂತಹ ವಿಷಯಗಳಿಂದ ಏನು ಪ್ರಯೋಜನ ಎಂಬ ಸಂದೇಶವನ್ನು ಬಡ ಕನ್ನಡಿಗರು ರವಾನಿಸಿದ್ದಾರೆ.
ಕರ್ನಾಟಕವೊಂದೇ ಅಲ್ಲ, ಇದಕ್ಕೂ ಮುನ್ನ ಪಶ್ಚಿಮ ಬಂಗಾಳ, ತಮಿಳುನಾಡು, ಮಹಾರಾಷ್ಟ್ರ, ಬಿಹಾರ, ದೆಹಲಿ... ಈ ಎಲ್ಲಾ ರಾಜ್ಯಗಳಲ್ಲಿ ಮೇಲ್ವರ್ಗದ ವಿದ್ಯಾವಂತ, ಶ್ರೀಮಂತರು ಟೊಳ್ಳು ಪ್ರಚಾರಕ್ಕೆ ಬಲಿಯಾದರೆ, ಕೆಳ ವರ್ಗದ ಮತದಾರರು ವಾಟ್ಸ್‌ಆ್ಯಪ್‌ನಿಂದ ದೂರವಿದ್ದು, ದ್ವೇಷಭಕ್ತಿಯನ್ನು ತಿರಸ್ಕರಿಸಿ, ತಮ್ಮ ಹಕ್ಕಿಗಾಗಿ ಶ್ರಮಿಸಿದ್ದಾರೆ. 2023ರ ಫಲಿತಾಂಶವನ್ನು ನೋಡಿದಾಗ, ಕರ್ನಾಟಕದ ಪ್ರಜಾಪ್ರಭುತ್ವವನ್ನು ಯಾರು ಎತ್ತು ಹಿಡಿದಿದ್ದಾರೆ ಎಂಬುದು ನಿಸ್ಸಂಶಯವಾಗಿ ಸ್ಪಷ್ಟವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.