ಸಾಮಾನ್ಯ ಜನ ನಿಧನರಾದಾಗ ಸಹಜವಾಗಿ ಖಾಸಗಿಯಾಗಿ ನಡೆದುಹೋಗುವ ಅಂತ್ಯಕ್ರಿಯೆ, ವಿಶೇಷ ವ್ಯಕ್ತಿಗಳು ಅಗಲಿದಾಗ ಹಲವು ಸಂದಿಗ್ಧಗಳನ್ನು ಮುಂದೊಡ್ಡುತ್ತದೆ. ಸಾಹಿತ್ಯ, ಸಂಗೀತ, ಕಲೆ, ಸಿನಿಮಾ, ರಾಜಕೀಯ… ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿ ಸಾರ್ವಜನಿಕ ವ್ಯಕ್ತಿತ್ವ ಗಳಿಸಿದವರು ತೀರಿಕೊಂಡಾಗ ಪ್ರಮುಖವಾಗಿ ಅಂತ್ಯಕ್ರಿಯೆಯನ್ನು ಎಲ್ಲಿ ಮತ್ತು ಹೇಗೆ ಮಾಡುವುದು ಎಂಬ ಎರಡು ಪ್ರಶ್ನೆಗಳು ಧುತ್ತೆಂದು ಉದ್ಭವಿಸುತ್ತವೆ. ಸಾಮಾನ್ಯವಾಗಿ ಎಲ್ಲಿ ಎಂಬುದಕ್ಕೆ ಆ ಸಮಯದಲ್ಲಿ ಅಧಿಕಾರದಲ್ಲಿರುವ ಸರ್ಕಾರದ ನಿರ್ಧಾರ ಉತ್ತರವಾಗುತ್ತದೆ; ಹೇಗೆ ಎಂಬುದನ್ನು ಸತ್ತವರ ಕುಟುಂಬಸ್ಥರಿಗೆ ಬಿಡಲಾಗುತ್ತದೆ.
ಅಂತ್ಯಕ್ರಿಯೆಯ ಸ್ಥಳದ ಆಯ್ಕೆಯನ್ನು ಅಧಿಕಾರದಲ್ಲಿ ಇರುವವರ ಮರ್ಜಿ, ಹಿತಾಸಕ್ತಿ, ರಾಜಕೀಯ ಲೆಕ್ಕಾಚಾರ ಪ್ರಭಾವಿಸುವುದೇ ಹೆಚ್ಚು. ವ್ಯಕ್ತಿಯ ಜಾತಿ, ಜನಪ್ರಿಯತೆ ಕೂಡಾ ಕೆಲಸ ಮಾಡುತ್ತವೆ. ಬಹುಕಾಲೀನ ಮತ್ತು ಬಹುವ್ಯಾಪ್ತಿಯ ಮಹತ್ವ ಹೊಂದಿದ ಗಂಭೀರ ವಿಷಯವೊಂದನ್ನು ಹೀಗೆ ಸರ್ಕಾರ ನಡೆಸುವವರ ಸಾಂದರ್ಭಿಕ ನಿರ್ಧಾರ ಅಥವಾ ವಿವೇಚನಾ ಶಕ್ತಿಯ ಅವಲಂಬನೆಗೆ ಸೀಮಿತಗೊಳಿಸುವ ಬದಲು ಅದಕ್ಕೊಂದು ರಾಜ್ಯವ್ಯಾಪಿ ನೀತಿ ರೂಪಿಸುವ ಅಗತ್ಯವಿದೆ. ಇತ್ತೀಚೆಗೆ ನಮ್ಮನ್ನು ಅಗಲಿದ ಚಂದ್ರಶೇಖರ ಪಾಟೀಲರ ಸಂದರ್ಭ ಇಂತಹ ನೀತಿಯ ಅನಿವಾರ್ಯವನ್ನು ಎತ್ತಿತೋರಿಸಿದೆ.
ಚಂಪಾ ಅವರ ಅಂತ್ಯಕ್ರಿಯೆಯನ್ನು ಅವರ ಮನೆಯವರು ಬೆಂಗಳೂರಿನ ಕಲಾಗ್ರಾಮದ ಆವರಣದಲ್ಲಿ ನೆರವೇರಿಸುವ ಒಲವು ಹೊಂದಿದ್ದರು. ಗಣ್ಯ ಸಾಹಿತಿಗಳ ರುದ್ರಭೂಮಿಯಾಗಿ ಈಗಾಗಲೇ ಅನಧಿಕೃತ ಶಿಷ್ಟಾಚಾರದ ಸ್ವರೂಪ ಪಡೆದಿರುವ ಕಲಾಗ್ರಾಮ ಈ ಸಂದರ್ಭದಲ್ಲಿ ಸಹಜ ಆಯ್ಕೆಯಾಗಿ ಗೋಚರಿಸಿದ್ದು ಅಚ್ಚರಿಯೇನಲ್ಲ. ಇಲ್ಲಿ ಈ ಮೊದಲು ಯು.ಆರ್.ಅನಂತಮೂರ್ತಿ ಅವರ ಪಾರ್ಥಿವ ಶರೀರವನ್ನು ಸಕಲ ಸರ್ಕಾರಿ ಗೌರವ ಮತ್ತು ಸಂಪೂರ್ಣ ವೈದಿಕ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಲಾಗಿತ್ತು. ಅದಾದ ನಂತರ ಜಿ.ಎಸ್.ಶಿವರುದ್ರಪ್ಪ ಅವರ ಅಂತ್ಯಕ್ರಿಯೆಯನ್ನು ಇದೇ ಆವರಣದಲ್ಲಿ ಧಾರ್ಮಿಕ ವಿಧಿವಿಧಾನಗಳಿಲ್ಲದೇ ನೆರವೇರಿಸಲಾಗಿತ್ತು. ಇತ್ತೀಚೆಗೆ ಕವಿ ಡಾ.ಸಿದ್ಧಲಿಂಗಯ್ಯನವರಿಗೂ ಇಲ್ಲಿಯೇ ಸ್ಥಳಾವಕಾಶ ದೊರೆತಿತ್ತು.
ಈ ಹಿನ್ನೆಲೆಯಲ್ಲಿ ತಮ್ಮ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಹತ್ತೀಮತ್ತೂರು ಗ್ರಾಮದವರಾದ ಚಂಪಾ ಅವರ ಅಂತ್ಯಕ್ರಿಯೆಗೆ ಕಲಾಗ್ರಾಮದಲ್ಲಿ ವ್ಯವಸ್ಥೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಡಚಣೆಯೇನೂ ಇರಲಿಲ್ಲ. ಆದರೆ ಅಂದು ಚಂಪಾ ಅವರ ಮನೆಯಲ್ಲಿ ಸೇರಿದ್ದ ಬರಗೂರು ರಾಮಚಂದ್ರಪ್ಪ, ರಾಜಪ್ಪ ದಳವಾಯಿ, ಆರ್.ಜಿ.ಹಳ್ಳಿ ನಾಗರಾಜ ಮೊದಲಾದ ಬಂಡಾಯದ ಸಂಗಾತಿಗಳು ಚಂಪಾ ಅವರ ಕುಟುಂಬದವರ ಜೊತೆ ಮಾತನಾಡಿ ಮನವೊಲಿಸಿದ್ದರಿಂದ ಕಲಾಗ್ರಾಮದ ಆಯ್ಕೆಯನ್ನು ಕೈಬಿಡಲಾಯಿತು. ಹಾಗಾಗಿ ಪಾಟೀಲರ ಮೃತದೇಹವನ್ನು ಸಾರ್ವಜನಿಕ ರುದ್ರಭೂಮಿಯಲ್ಲಿ ಹೂಳಲು ಸಾಧ್ಯವಾಯಿತು. ಈ ಸಂದರ್ಭದಲ್ಲಿ ಚಂಪಾ ಅವರ ಮನೆಯವರ ಉದಾರ ಮತ್ತು ಮುಕ್ತ ಮನಸ್ಸು ಮೆಚ್ಚುಗೆಗೆ ಅರ್ಹ.
‘ಆದಿ ಕವಿ ಪಂಪ, ಅಂತ್ಯ ಕವಿ ಚಂಪಾ’ ಎಂದು ಕರೆದುಕೊಂಡಿದ್ದ ಪಾಟೀಲರ ‘ಪಾಳೆ’ ಬಂದಾಗಲೇ ಕಲಾಗ್ರಾಮದಲ್ಲಿನ ಅಂತ್ಯಕ್ರಿಯೆ ಪರಂಪರೆಗೆ ‘ಅಂತ್ಯ’ ಹಾಡುವಂತಾಗಿದ್ದು ವಿಶೇಷ. ಇದೇ ರೀತಿ ಡಾ.ರಾಜಕುಮಾರ್ ಅವರ ಅಂತ್ಯಕ್ರಿಯೆಯಿಂದ ಆರಂಭವಾಗಿರುವ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದ ಸಿನಿಮಾ ನಟರ ಅಂತ್ಯಕ್ರಿಯೆ ಬಳಕೆಗೂ ಕೊನೆ ಕಾಣಿಸಬೇಕಾಗಿದೆ. ಇಲ್ಲದಿದ್ದರೆ ಆಯಾ ಕಾಲಘಟ್ಟದ ಅಧಿಕಾರಸ್ಥರ ದೂರದೃಷ್ಟಿಯ ಅಭಾವದಿಂದ ಇಂತಹ ಕ್ರಿಯೆಗಳಿಗೆ ಅಂತ್ಯವೇ ಇಲ್ಲದಂತಾಗುತ್ತದೆ. ಸತ್ತವರಿಗೆ ಸಮಾಧಿ ನಿರ್ಮಿಸಿದರೆ ಆ ಸ್ಥಳ ಪ್ರವಾಸಿ ತಾಣವಾಗಬಹು
ದಷ್ಟೇ. ಬದಲಾಗಿ ಅಗಲಿದವರ ಅರ್ಥಪೂರ್ಣ ಸ್ಮಾರಕ ರೂಪಿಸಿದರೆ ಅವರ ಬದುಕಿನ ಸಂದೇಶಗಳನ್ನು ಜತನ ಮಾಡಬಹುದು. ಈ ನಿಟ್ಟಿನಲ್ಲಿ ಕುಪ್ಪಳಿಯ ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ಸ್ಮಾರಕ ಮತ್ತು ಸಂಸ್ಮರಣೆಯ ಚಟುವಟಿಕೆಗಳು ಮಾದರಿಯಾಗಿ ಒದಗುತ್ತವೆ. ಸತ್ತವರು ಎಲ್ಲಿ ಹೋಗುತ್ತಾರೆ ಎಂಬ ತಮ್ಮ ಪ್ರಶ್ನೆಗೆ ತಾವೇ ಉತ್ತರಿಸಿದ್ದಾರೆ ಚಂಪಾ: ‘ಸತ್ತವರು ಎಲ್ಲೂ ಹೋಗುವುದಿಲ್ಲ… ಇದ್ದವರ ನೆನಪಿನ ಗುದ್ದಿನಲ್ಲಿ, ಗೆದ್ದಲಿಯಾಗುತ್ತಾರೆ. ಅವರ ಶ್ವಾಸೋಚ್ಛ್ವಾಸದ ಹಳ್ಳ ಕೊಳ್ಳಗಳಲ್ಲಿ, ಹಾವಾಗಿ ಹರಿದಾಡುತ್ತಾರೆ. ಅವರ ಆಕಾಶದ ತುಂಬ, ಹುಡಿಯಾಗಿ ಅಡರುತ್ತಾರೆ. ಹಕ್ಕಿಯಾಗಿ ರೆಕ್ಕೆ ಬಿಚ್ಚುತ್ತಾರೆ. ಚಿಕ್ಕೆಯಾಗಿ ಚಿಮುಕುತ್ತಾರೆ. ಎಲ್ಲಿಯ ತನಕ? ಇದ್ದವರು ಸಾಯುವ ತನಕ’. ಸ್ಥಾವರದ ತಾತ್ಕಾಲಿಕತೆ ಮತ್ತು ಜಂಗಮದ ಸಾರ್ವಕಾಲಿಕತೆ ಸಂದೇಶವನ್ನು ಇದಕ್ಕಿಂತ ಪರಿಣಾಮಕಾರಿಯಾಗಿ ಅರುಹಲು ಸಾಧ್ಯವೇ?
ಇನ್ನು, ಅಗಲಿದವರ ಅಂತ್ಯಕ್ರಿಯೆ ಹೇಗೆ ನಡೆಸಬೇಕು ಎಂಬುದನ್ನು ನಿರ್ಧರಿಸುವುದು ಕುಟುಂಬಸ್ಥರ ಜವಾಬ್ದಾರಿಯಾಗಿರುತ್ತದೆ. ಕೆಲವೊಮ್ಮೆ ತೀರಿಕೊಂಡ ವ್ಯಕ್ತಿಯ ಮತ್ತು ಕುಟುಂಬದ ನಂಬಿಕೆಗಳಲ್ಲಿ ವ್ಯತ್ಯಾಸವಿರಲೂ ಸಾಧ್ಯ. ಸಂಪ್ರದಾಯದ ವಿಷಯದಲ್ಲಿ ಕುಟುಂಬದ ಸದಸ್ಯರಲ್ಲೇ ಭಿನ್ನಾಭಿಪ್ರಾಯ ಇರಬಹುದು. ತೀವ್ರ ದುಃಖದಲ್ಲಿ ಮುಳುಗಿದ ಹತ್ತಿರದ ಸಂಬಂಧಿಗಳು ತಕ್ಷಣ ವಿವೇಕಯುತ ನಿಲುವು ತಾಳುತ್ತಾರೆಂದು ನಿರೀಕ್ಷಿಸುವುದು ಕಷ್ಟ. ಇಂತಹ ಸನ್ನಿವೇಶದಲ್ಲಿ ಯಾರದೋ ಮಾತು, ಯಾವುದೋ ನಿರ್ಧಾರದಿಂದ ಅಂತಿಮವಾಗಿ ಆಭಾಸ ಸೃಷ್ಟಿಯಾಗುವುದು ಅಪರೂಪವೇನಲ್ಲ.
ಎಲ್ಲ ಮೂಢ ಸಂಪ್ರದಾಯಗಳನ್ನು ಮೀರಿ ಬರೆದ, ಬದುಕಿದ ಪಿ.ಲಂಕೇಶ್ ಅವರ ಅಂತ್ಯಕ್ರಿಯೆಯಲ್ಲಿ ನಾನೇ ಕಂಡಂತೆ ಕಾವಿಧಾರಿ ಲಿಂಗಾಯತ ಸ್ವಾಮಿಯೊಬ್ಬರು ಇದ್ದಕ್ಕಿದ್ದಂತೆ ಮಂತ್ರ ಹೇಳಲು ಶುರು ಮಾಡಿದರು. ಆಗ ಗೌರಿ ಲಂಕೇಶ್, ‘ಇದೆಲ್ಲಾ ಬೇಡ… ಅಪ್ಪನಿಗೆ ಇಷ್ಟವಾಗುತ್ತಿರಲಿಲ್ಲ’ ಎಂದು ಕೂಗಿಕೊಂಡ ದನಿ ಇನ್ನೂ ನನ್ನ ಕಿವಿಯಲ್ಲಿದೆ. ಹಾಗೆಯೇ ಯು.ಆರ್.ಅನಂತಮೂರ್ತಿ ಅವರ ಅಪ್ಪಟ ವೈದಿಕ ವಿಧಿವಿಧಾನಗಳ ಅಂತ್ಯಸಂಸ್ಕಾರ ಅವರ ನಂಬಿಕೆಯಾಗಿತ್ತೋ ಅಥವಾ ಕುಟುಂಬದವರ ಆಯ್ಕೆಯಾಗಿತ್ತೋ ಎಂಬ ಸಂಶಯ ಉತ್ತರ ಕಾಣದೆ ಉಳಿದಿದೆ. ವ್ಯಕ್ತಿಯ ನಂಬಿಕೆಯಲ್ಲಿನ ಸರಿತಪ್ಪುಗಳ ಹುಡುಕಾಟಕ್ಕಿಂತ ಆತನ ಚಿಂತನೆಗೆ ವ್ಯತಿರಿಕ್ತವಾಗದಂತೆ ಅಂತ್ಯಕ್ರಿಯೆ ನಡೆಯುವುದು ಬಹಳ ಮುಖ್ಯ. ಇವ್ಯಾವುದರ ಗೊಡವೆಯಿಲ್ಲದೆ ವೈದ್ಯಕೀಯ ಸಂಶೋಧನೆಗೆ ದೇಹದಾನ ಮಾಡಿದ ಮಹನೀಯರ ನಿದರ್ಶನಗಳೂ ಇವೆ.
ಮೈಸೂರಿನ ಶ್ರೀಕಂಠದತ್ತ ಒಡೆಯರ್ ಅವರ ಸಾವಿನ ಸಂದರ್ಭದಲ್ಲಿ ಅವರನ್ನು ಯದು ವಂಶದ ‘ಕೊನೆಯ ಕುಡಿ’ ಎಂದು ಬಿಂಬಿಸಲಾಯಿತು. ವಾಸ್ತವವಾಗಿ ಶ್ರೀಕಂಠದತ್ತ ಅವರಿಗೆ ಐವರು ಸಹೋದರಿಯರಿದ್ದರು. ಅವರನ್ನೆಲ್ಲಾ ಗಣನೆಗೆ ತೆಗೆದುಕೊಳ್ಳದೆ ಲಿಂಗ ತಾರತಮ್ಯ ಎಸಗಿದ್ದು ಸ್ಪಷ್ಟ. ಹಾಗೆಯೇ ದಿವಂಗತರಿಗೆ ಗಂಡು ಮಕ್ಕಳಿಲ್ಲದಿದ್ದರೆ ಅವರ ಹೆಣ್ಣು ಮಗಳಿಗೆ ಅಥವಾ ಹೆಂಡತಿಗೆ ಅಂತ್ಯಕ್ರಿಯೆಯ ವಿಧಿವಿಧಾನ ನೆರವೇರಿಸುವ ಅವಕಾಶ ಕಲ್ಪಿಸದೇ ಹತ್ತಿರದ ಸಂಬಂಧಿಕರ ಗಂಡು ಮಗನ ಮೊರೆ ಹೋಗುವುದನ್ನು ಕಂಡಿದ್ದೇವೆ. ಸಾರ್ವಜನಿಕ ಜೀವನದಲ್ಲಿ ಮೇಲ್ಪಂಕ್ತಿ ಹಾಕಬೇಕಾದ ಪ್ರತಿಷ್ಠಿತ ಕುಟುಂಬಗಳು ಕೆಲವೊಮ್ಮೆ ಅಂತಿಮ ಕ್ಷಣದ ಗೊಂದಲದಿಂದ ಆದರ್ಶ ಮೆರೆಯುವ ಅವಕಾಶಕ್ಕೆ ಎರವಾಗಬೇಕಾಗುತ್ತದೆ. ದಿವಂಗತ ಸಿಡಿಎಸ್ ಬಿಪಿನ್ ರಾವತ್ ಅವರ ಅಂತ್ಯಕ್ರಿಯೆಯನ್ನು ಅವರ ಇಬ್ಬರು ಹೆಣ್ಣು ಮಕ್ಕಳು ನೆರವೇರಿಸಿದ ಅನುಕರಣೀಯ ಮಾದರಿಯೂ ನಮ್ಮ ಮುಂದಿದೆ. ಸಾರ್ವಜನಿಕ ರಂಗದ ಜನಪ್ರಿಯ ವ್ಯಕ್ತಿಗಳನ್ನು ಎಲ್ಲಾ ವಿಷಯಗಳಲ್ಲಿ ಅನುಕರಿಸುವ ಅಭಿಮಾನಿಗಳ, ಹಿಂಬಾಲಕರ ಸಂಖ್ಯೆ ಬಹುದೊಡ್ಡದು ಎಂಬುದು ಗಮನಾರ್ಹ ವಾಸ್ತವ.
ಸರ್ಕಾರದ ‘ಅಂತ್ಯಕ್ರಿಯೆ ನೀತಿ’ ಜೊತೆಗೆ ಗಣ್ಯರು (ಸಾಮಾನ್ಯರು ಕೂಡಾ) ತಮ್ಮ ಅಂತ್ಯಕ್ರಿಯೆ ಎಲ್ಲಿ, ಹೇಗೆ, ಯಾರಿಂದ ನಡೆಯಬೇಕು ಎಂಬುದರ ಬಗ್ಗೆ ಬದುಕಿರುವಾಗಲೇ ಘೋಷಿಸುವುದು ಅತ್ಯುತ್ತಮ ಮಾರ್ಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.