ADVERTISEMENT

ವಿಶ್ಲೇಷಣೆ: ಅಂಬೇಡ್ಕರ್‌ ಕರೆಗೆ ಶತಮಾನದ ಸಂಭ್ರಮ!

ಭಾರತದ ದಿಕ್ಕು ಬದಲಿಸಿದ ಕ್ರಾಂತಿಕಾರಿ ಕರೆ ಎಲ್ಲ ಜನಪರ ಹೋರಾಟಗಳ ಭಾಗವಾಗಲಿ

ಡಾ.ನಟರಾಜ್ ಹುಳಿಯಾರ್
Published 5 ಜುಲೈ 2024, 21:21 IST
Last Updated 5 ಜುಲೈ 2024, 21:21 IST
   

‘ಎಜುಕೇಟ್, ಆ್ಯಜಿಟೇಟ್ ಆ್ಯಂಡ್ ಆರ್ಗನೈಸ್’.

ಇಸವಿ 1924. ಜುಲೈ 20. ಬಿ.ಆರ್. ಅಂಬೇಡ್ಕರ್ ಅವರ ಕಂಠದಿಂದ ಚಿಮ್ಮಿದ ಈ ಮೂರು ಚಾರಿತ್ರಿಕ ಕರೆಗಳಿಗೆ ಈ ತಿಂಗಳು ನೂರು ವರ್ಷ ತುಂಬಲಿದೆ! ಬಾಬಾಸಾಹೇಬರು ‘ಬಹಿಷ್ಕೃತ ಹಿತಕಾರಿಣಿ ಸಭಾ’ ಸ್ಥಾಪಿಸಿದ ದಿನ ಮೊಳಗಿದ ಕರೆಗಳಿವು.

ಅಂಬೇಡ್ಕರ್ ಅವರು 1923ರಲ್ಲಿ ಇಂಗ್ಲೆಂಡಿನಲ್ಲಿ ಬಾರ್ ಅಟ್ ಲಾ ಪದವಿ ಹಾಗೂ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಡಾಕ್ಟರ್ ಆಫ್ ಸೈನ್ಸ್ ಪದವಿ ಪಡೆದು ಭಾರತಕ್ಕೆ ಮರಳಿ ಬಂದಿದ್ದರು. ವಕೀಲ, ನ್ಯಾಯಾಧೀಶ, ಅಧ್ಯಾಪಕ ವೃತ್ತಿಗಳ ಪೈಕಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಗೊಂದಲದಲ್ಲಿ ಇದ್ದರು. 1920ರಿಂದಲೇ ‘ಮೂಕನಾಯಕ’ ಪತ್ರಿಕೆಯ ಮೂಲಕ ದಲಿತ ಸಮುದಾಯವನ್ನು ಜಾಗೃತಗೊಳಿಸುತ್ತಿದ್ದ ಅವರಿಗೆ ತಾವು ಮಹತ್ತರ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿದೆ ಎಂಬುದು ಖಚಿತವಾಗಿತ್ತು; ದಾರಿ ಸ್ಪಷ್ಟವಾಗಿರಲಿಲ್ಲ.

ADVERTISEMENT

ಆ ಘಟ್ಟದಲ್ಲಿ ಅಂಬೇಡ್ಕರ್ ಅವರು ಬಾಂಬೆಯಲ್ಲಿ ‘ಬಹಿಷ್ಕೃತ ಹಿತಕಾರಿಣಿ ಸಭಾ’ ಆರಂಭಿಸಿದರು. ಅವತ್ತು ಅವರು ಕೊಟ್ಟ ಮೂರು ಕರೆಗಳು ಅವರ ಮುಂದಿನ ದಾರಿ, ಗುರಿಗಳನ್ನು ತೆರೆದಿಟ್ಟವು. ಮೂರೂ ಗುರಿಗಳತ್ತ ದಲಿತ ಸಮುದಾಯವನ್ನು ಮುನ್ನಡೆಸುವ ಜೀವಮಾನದ ಹೊಣೆ ತಮ್ಮದೇ ಎಂಬುದೂ ಅವರಿಗೆ ಖಾತ್ರಿಯಾಯಿತು. ‘ಬಹಿಷ್ಕೃತ ಹಿತಕಾರಿಣಿ ಸಭಾ’ ಅಸ್ಪೃಶ್ಯತೆಯಿಂದ ದಮನಕ್ಕೊಳಗಾದ ಎಲ್ಲ ಜಾತಿಗಳಿಗೂ ವೇದಿಕೆಯಾಯಿತು. ಮೊದಲಿಗೆ, ದಲಿತ ಮಕ್ಕಳಿಗಾಗಿ ವಿದ್ಯಾರ್ಥಿನಿಲಯ, ರೀಡಿಂಗ್ ರೂಮ್ ಶುರುವಾದವು. ಇದು ಅಂಬೇಡ್ಕರ್ ಕರೆಯಲ್ಲಿದ್ದ ‘ಶಿಕ್ಷಣ’ದ ಮೂಲಕ ಜಾಗೃತಿ ಮೂಡಿಸುವ ಮೊದಲ ಘಟ್ಟ. ಆದರೂ ‘ಸಭಾ’ ದೊಡ್ಡ ಮಟ್ಟದಲ್ಲಿ ಹಬ್ಬಲು ಒಂದು ಬೃಹತ್ ಕಾರ್ಯಕ್ರಮ ಅಥವಾ ವಿದ್ಯಮಾನವನ್ನು ಅಂಬೇಡ್ಕರ್ ಎದುರು ನೋಡುತ್ತಿದ್ದರು.

ಅಷ್ಟೊತ್ತಿಗಾಗಲೇ ಸ್ವಾತಂತ್ರ‍್ಯ ಚಳವಳಿಯ ಭಾಗವಾಗಿ ಗಾಂಧೀಜಿ ನೇತೃತ್ವದ ಕಾಂಗ್ರೆಸ್, ಅಸ್ಪೃಶ್ಯತೆಯ ನಿವಾರಣೆಗೆ ಸುಧಾರಣಾ ಕಾರ್ಯಕ್ರಮಗಳನ್ನು ಶುರು ಮಾಡಿತ್ತು. ಕೇರಳದ ವೈಕಂನ ಮಹಾದೇವ ದೇವಾಲಯದ ಸುತ್ತ ಓಡಾಡುವ ದಾರಿಯನ್ನು ದಲಿತರೂ ಬಳಸಲು ಅವಕಾಶ ಇರಬೇಕು ಎಂದು ಕಾಂಗ್ರೆಸ್ ನೇತೃ‌ತ್ವದಲ್ಲಿ ಸತ್ಯಾಗ್ರಹ ಶುರುವಾಗಿತ್ತು. ಗಾಂಧೀಜಿ, ಪೆರಿಯಾರ್ ಈ ಸತ್ಯಾಗ್ರಹವನ್ನು ಬೆಂಬಲಿಸಿದ್ದರು. ದೇವಾಲಯದ ಸುತ್ತ ಓಡಾಡುವ ದಾರಿಗಾಗಿ ಕೂಡ ದಲಿತರು ಹೋರಾಡಬೇಕಾಗಿದ್ದುದನ್ನು ಅಂಬೇಡ್ಕರ್ ಗಮನಿಸುತ್ತಿದ್ದರು. ಜಡ ಸವರ್ಣೀಯ ಮನಸ್ಸು ಇಂಥ ಸತ್ಯಾಗ್ರಹಗಳಿಂದ ಬಗ್ಗುವುದಿಲ್ಲವೆಂಬುದನ್ನು ಮನಗಂಡಿದ್ದರು. ಆ ಹೊತ್ತಿಗಾಗಲೇ ಜಾತಿಪದ್ಧತಿಯ ಗಂಭೀರ ಅಧ್ಯಯನ ಮಾಡಿದ್ದ ಅವರೆದುರು ಜಾತಿಪದ್ಧತಿಯ ವಿರುದ್ಧ ನಿರ್ಣಾಯಕ ಹೋರಾಟವೊಂದನ್ನು ಆರಂಭಿಸುವ ಸವಾಲಿತ್ತು.

ಅದೇ ಸುಮಾರಿಗೆ ಅಂಬೇಡ್ಕರ್ ಭೇಟಿಗೆಂದು ಮಹಾರಾಷ್ಟ್ರದ ಮಹಾಡ್‌ ಪ್ರಾಂತದಿಂದ ತರುಣ ರಾಮಚಂದ್ರ ಬಾಬಾಜಿ ಮೋರೆ ಬಂದರು. ಅಸ್ಪೃಶ್ಯತೆಯ ಅವಮಾನಗಳನ್ನು ಎದುರಿಸುತ್ತಲೇ ಹೈಸ್ಕೂಲ್ ಮುಗಿಸಿದ್ದ ಮೋರೆ, ಮಹಾಡ್‌ ದಲಿತರ ಹಕ್ಕುಗಳಿಗಾಗಿ ಹೋರಾಟ ಆರಂಭಿಸಿದ್ದರು. ಹೋಟೆಲುಗಳಿಗೆ ಪ್ರವೇಶವಿಲ್ಲದ ದಲಿತರಿಗಾಗಿ ಮಹರ್ ಸಮುದಾಯದ ದೇವು ಜೋಶಿ ತೆರೆದ ಹೋಟೆಲ್, ದಲಿತ ಹಕ್ಕುಗಳನ್ನು ಚರ್ಚಿಸುವ ಚಾವಡಿಯಾಯಿತು. ದಲಿತರ ಹಕ್ಕುಗಳಿಗಾಗಿ ಒತ್ತಾಯಿಸಲು ಭಾರಿ ಸಮ್ಮೇಳನವೊಂದನ್ನು ಸಂಘಟಿಸಬೇಕೆಂದು ಮೋರೆಯವರ ಸಂಗಾತಿಗಳು ಯೋಚಿಸಿದರು. ಅಮೆರಿಕ, ಇಂಗ್ಲೆಂಡ್‌ನಲ್ಲಿ ಉನ್ನತ ಅಧ್ಯಯನ ಮಾಡಿ ಬಂದಿದ್ದ ಅಂಬೇಡ್ಕರ್ ಅವರನ್ನು ಈ ಸಮ್ಮೇಳನದಲ್ಲಿ ಸನ್ಮಾನಿಸಬೇಕು; ಅವರ ಮೂಲಕ ಹೊಸ ದಲಿತ ತಲೆಮಾರುಗಳಲ್ಲಿ ಸ್ಫೂರ್ತಿ ತುಂಬಬೇಕು ಎಂದು ಮೋರೆ ತಂಡ ತೀರ್ಮಾನಿಸಿತು.

ಮೋರೆಯ ಉತ್ಸಾಹದ ಬಗ್ಗೆ ಅಂಬೇಡ್ಕರ್ ಅವರಿಗೆ ನಂಬಿಕೆ ಹುಟ್ಟಿತು; ತರುಣನ ಸಂಘಟನಾ ಶಕ್ತಿಯ ಬಗ್ಗೆ ಅನುಮಾನವಿತ್ತು. ಸಂಘಟನೆಯ ಸಿದ್ಧತೆ ನೋಡಲು ಗೆಳೆಯರನ್ನು ಮಹಾಡ್‌ಗೆ ಕಳಿಸಿದರು. ಎರಡು ವರ್ಷಗಳ ಸಿದ್ಧತೆಯ ನಂತರ 1927ರ ಮಾರ್ಚ್‌ 19ರಂದು ಮಹಾಡ್ ಸಮ್ಮೇಳನ ಶುರುವಾಯಿತು. ಅಂಬೇಡ್ಕರ್ ಅವರ ಮೂರೂ ಕರೆಗಳು ದೊಡ್ಡ ಮಟ್ಟದಲ್ಲಿ ಜಾರಿಗೆ ಬಂದದ್ದು ಮಹಾಡ್‌ನಲ್ಲಿ. ಅಲ್ಲಿ ದಲಿತರ ಬೃಹತ್ ‘ಸಂಘಟನೆ’ ಆರಂಭವಾಗಿತ್ತು; ಅಂಬೇಡ್ಕರ್ ಅವರ ಸುದೀರ್ಘ ಮಹಾಡ್ ಭಾಷಣವು ‘ಶಿಕ್ಷಣ’, ಅದರಲ್ಲೂ ಉನ್ನತ ಶಿಕ್ಷಣ ಹಾಗೂ ‘ಜಾಗೃತಿ’ಯ ಮಹತ್ವವನ್ನು, ‘ಸಂಘಟನೆ’, ‘ಮರುಸಂಘಟನೆ’ಗಳ ಅಗತ್ಯವನ್ನು ಹೇಳಿಕೊಟ್ಟಿತು. ‘ಹೋರಾಟ’ದ ಕರೆ ಮಾರನೆಯ ದಿನವೇ ಸಾಕಾರವಾಯಿತು.

ಚೌದಾರ್ ಕೆರೆಯ ನೀರು ಮುಟ್ಟದಂತೆ ಅಸ್ಪೃಶ್ಯರ ಮೇಲೆ ಹೇರಲಾಗಿದ್ದ ನಿಷೇಧವನ್ನು ಅಂಬೇಡ್ಕರ್ ನೇತೃತ್ವದ ಹೋರಾಟಗಾರರು ಮಾರ್ಚ್‌ 20ರಂದು ಶಾಂತಿಯುತವಾಗಿ ಉಲ್ಲಂಘಿಸಿದರು. ದಲಿತ ವಿಮೋಚನೆಯ ಚರಿತ್ರೆಯ ಚಕ್ರ ನಿರ್ಣಾಯಕವಾಗಿ ಚಲಿಸಿತು. 1927ರ ಡಿಸೆಂಬರ್ 25ರಿಂದ 27ರವರೆಗೆ ಬಹಿಷ್ಕೃತ ಹಿತಕಾರಿಣಿ ಸಭಾದ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಮಹಾಡ್ ಸಮ್ಮೇಳನದ ಮೊದಲ ದಿನ ಮನುಸ್ಮೃತಿ ದಹನ ನಡೆಯಿತು. ಇದು, ಅಂಬೇಡ್ಕರ್ ಕರೆಯಲ್ಲಿರುವ ‘ಶಿಕ್ಷಣ’ದ ಅರ್ಥವನ್ನು ಇನ್ನಷ್ಟು ವಿಸ್ತರಿಸಿತು; ಮನುಸ್ಮೃತಿಯ ಸರ್ವಾಧಿಕಾರದ ಬಗ್ಗೆ ಬ್ರಾಹ್ಮಣ, ಶೂದ್ರ, ದಲಿತ, ಮಹಿಳಾ ವಲಯಗಳಲ್ಲಿ ಕ್ರಾಂತಿಕಾರಿ ಜಾಗೃತಿಯನ್ನು ಮೂಡಿಸಿತು.

1970ರ ದಶಕದಲ್ಲಿ ಕರ್ನಾಟಕದ ‘ದಲಿತ ಸಂಘರ್ಷ ಸಮಿತಿ’ ಈ ಕರೆಯನ್ನು ‘ಶಿಕ್ಷಣ, ಸಂಘಟನೆ, ಹೋರಾಟ’ ಎಂದು ಅನುವಾದಿಸಿಕೊಂಡಿತು. ಇದು ಮುಂದೆ ‘ಜಾಗೃತರಾಗಿ, ಹೋರಾಡಿ, ಸಂಘಟಿತರಾಗಿ’; ‘ಜಾಗೃತರಾಗಿ, ಚಿಂತಿಸಿ, ಒಂದಾಗಿ’ ಮುಂತಾಗಿ ವಿಸ್ತಾರಗೊಂಡಿತು.

ಅಂಬೇಡ್ಕರ್ ಕರೆ ಈ ನೂರು ವರ್ಷಗಳಲ್ಲಿ ಬೆಳೆದ ಪರಿ ವಿಸ್ಮಯಕಾರಿಯಾಗಿದೆ. ‘ಎಜುಕೇಟ್’ ಎಂಬುದರ ಅರ್ಥ ವಿಸ್ತಾರವಾಗಿದೆ; ದಲಿತರನ್ನೂ, ದಲಿತರನ್ನು ದಮನಿಸುವ ಸವರ್ಣೀಯರನ್ನೂ ತಿದ್ದುವ, ಜಾಗೃತಗೊಳಿಸುವ ಹೊಣೆಯನ್ನು ಈ ಕರೆ ಹೇಳಿಕೊಟ್ಟಿದೆ. ದಲಿತ ಸಾಹಿತ್ಯ, ದಲಿತ ಚಳವಳಿಗಳು ಮೂರೂ ಕರೆಗಳನ್ನು ನಿರಂತರವಾಗಿ ಮುಂದೊಯ್ದಿವೆ. ಈ ಕರೆಗಳ ಮುಂದಿನ ಹಂತದಂತಿದ್ದ ‘ದಲಿತರು ಬರುವರು ದಾರಿ ಬಿಡಿ; ದಲಿತರ ಕೈಗೆ ರಾಜ್ಯ ಕೊಡಿ’ ಎಂಬ ರೂಪಕ-ಘೋಷಣೆಯನ್ನು ತರುಣ ಕಮ್ಯುನಿಸ್ಟ್ ಕವಿ ಸಿದ್ಧಲಿಂಗಯ್ಯ ಸೃಷ್ಟಿಸಿದರು. ಈ ಕವಿಸಾಲು ಪ್ರಖ್ಯಾತ ಗೋಡೆ ಬರಹವಾಯಿತು; ಭಾರತದ ಹಲವು ಭಾಷೆಗಳಿಗೆ ಅನುವಾದಗೊಂಡಿತು. ಮಾಯಾವತಿ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾದಾಗ ಅಂಬೇಡ್ಕರ್ ಅವರು ಕೊನೆಯ ಘಟ್ಟದಲ್ಲಿ ಹೇಳುತ್ತಿದ್ದ ರಾಜಕೀಯ ಅಧಿಕಾರದ ಗುರಿಯೂ, ಕವಿ ರೂಪಕದ ಆಶಯವೂ ಬೆರೆತುಹೋದವು! ಬಾಬಾಸಾಹೇಬರು ಕರೆ ಕೊಟ್ಟ ಮೂರು ದಶಕಗಳಲ್ಲಿ ಮೂರೂ ಆಶಯಗಳು ಸಮುದಾಯ ಚಳವಳಿಯಾಗಿ ಬೆಳೆದು ಎಚ್ಚೆತ್ತ ದಲಿತ ಸಮುದಾಯವೇ ಸೃಷ್ಟಿಯಾಯಿತು. ನಂತರದ ದಶಕಗಳಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ದೇಶದಾದ್ಯಂತ ಲಕ್ಷಾಂತರ ಶಿಕ್ಷಣ ಸಂಸ್ಥೆಗಳು, ಸಂಘಟನೆಗಳು ಹುಟ್ಟಿ ಬೆಳೆದವು.

ಮೂರು ಕರೆಗಳ ಜೊತೆಗೆ, ‘ಬೌದ್ಧರಾಗಿರಿ’, ‘ಅಧಿಕಾರ ಹಿಡಿಯಿರಿ’ ಎಂಬ ಕರೆಗಳು ಕೂಡ ಅವರೊಳಗೆ ಮೂಡತೊಡಗಿದ್ದನ್ನು ಅವರ ಕೊನೆಯ ಸಂದರ್ಶನಗಳು ಸೂಚಿಸುತ್ತವೆ. ಇವೆರಡೂ ಆಶಯಗಳು ಬಾಬಾಸಾಹೇಬರ ಬದುಕಿನ ಕೊನೆಯ ದಶಕದ ಗುರಿಗಳಾದವು. ಬೌದ್ಧ ಧರ್ಮ ಸ್ವೀಕಾರದ ಗುರಿ 1956ರಲ್ಲಿ ಸಾಕಾರವಾಯಿತು. ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ’ ಮೂಲಕ ರಾಜಕೀಯ ಅಧಿಕಾರದ ಗುರಿಯೆಡೆಗೆ ಚಲಿಸುವ ಮೊದಲೇ ಅಂಬೇಡ್ಕರ್ ನಿರ್ಗಮಿಸಿದರು. ಮುಂದೆ ‘ರಿಪಬ್ಲಿಕನ್ ಪಾರ್ಟಿ’ಯ ರಾಜಕೀಯ ಪ್ರಯತ್ನ ಮುಂದುವರಿಯಿತು. ಅಂಬೇಡ್ಕರ್ ಬರಹಗಳ ಅಧ್ಯಯನದ ಮೂಲಕ ‘ಅಧಿಕಾರದ ಕೀಲಿಕೈ’ ಹುಡುಕಿಕೊಂಡ ಕಾನ್ಶಿರಾಂ ಅವರು ಬಹುಜನ ಸಮಾಜ ಪಕ್ಷವನ್ನು ಅಧಿಕಾರದತ್ತ ಮುನ್ನಡೆಸಿದರು.

ಕಳೆದ ನೂರು ವರ್ಷಗಳಲ್ಲಿ ಅಂಬೇಡ್ಕರ್ ಕರೆಯ ಪ್ರಭಾವವು ಎಲ್ಲ ನ್ಯಾಯಪರ ಚಳವಳಿಗಳ ಮೇಲೂ ಆಗಿದೆ. ರೈತ, ಕಾರ್ಮಿಕ, ಮಹಿಳಾ, ಹಿಂದುಳಿದ ವರ್ಗಗಳ ಚಳವಳಿಗಳು ಅಂಬೇಡ್ಕರ್ ಅವರ ಕರೆಯನ್ನು ಮೊಳಗಿಸದಿದ್ದರೂ, ಅವರ ಕರೆಯನ್ನು ಅನುಸರಿಸುವ ಕೆಲಸವನ್ನಂತೂ ಮಾಡಿವೆ. ಬಾಬಾಸಾಹೇಬರ ಕರೆಯ ಶತಮಾನೋತ್ಸವದ ಆಚರಣೆಯ ಸಂದರ್ಭದಲ್ಲಿ ಎಲ್ಲ ಜನಪರ ಚಳವಳಿಗಳೂ ಈ ಮೂರು ಗುರಿಗಳ ಹಿಂದಿನ ತಾತ್ವಿಕತೆಯನ್ನು ಆಳವಾಗಿ ಅಳವಡಿಸಿಕೊಳ್ಳಬೇಕಾಗಿದೆ. ಭಾರತದ ದಿಕ್ಕನ್ನೇ ಬದಲಿಸಿದ ಈ ಕ್ರಾಂತಿಕಾರಿ ಕರೆಯ ಶತಮಾನೋತ್ಸವದ ಈ ಸಂದರ್ಭದಲ್ಲಿ ಕರೆಯ ಗುರಿಗಳ ವಿಸ್ತರಣೆ, ಮರುಸ್ವೀಕಾರ, ಮರುವ್ಯಾಖ್ಯಾನ ದೊಡ್ಡ ಮಟ್ಟದಲ್ಲಿ ಶುರುವಾದರೆ ಇನ್ನಿತರ ಹುಸಿ ಆಚರಣೆಗಳ ಕರೆಗಳೆಲ್ಲ ಹಿಮ್ಮೆಟ್ಟಬಲ್ಲವು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.