ಇವತ್ತಿನಿಂದ ರಾಜ್ಯದಾದ್ಯಂತ ಮೊದಲ ಹಂತದ ಶಾಲೆಗಳು ಪುನರಾರಂಭಗೊಳ್ಳುತ್ತಿವೆ. ಇದು ಆರೋಗ್ಯಕರ ಬೆಳವಣಿಗೆ. ಆರೋಗ್ಯವೇ ಭಾಗ್ಯ ಅನ್ನುವ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಕೊರೊನಾ ಕಾಲಘಟ್ಟದಲ್ಲಿ ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ಶಾಲೆ, ಶಿಕ್ಷಣ ಮಗುವಿನ ಹಕ್ಕು. ಅದನ್ನು ಮನುಷ್ಯ ಮಾತ್ರದಿಂದ ಕಸಿಯಲಾಗದು. ಕಾಲ ಮತ್ತು ಕಾಲದ ತೀರ್ಪುಗಳಿಗೆ ನಾವು ತಲೆಬಾಗಲೇಬೇಕು.
ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿ ಮಾಡುವುದು ಸೂಕ್ತ ಅನ್ನುವ ಮಾತಿದೆ. ಶೈಕ್ಷಣಿಕವಾಗಿ ಸದೃಢವಾದ ಮಾನವ ಸಂಪತ್ತು ಉತ್ಪಾದಿಸುವುದು ಸಮಾಜದ, ಸರ್ಕಾರದ ಮೂಲ ಕರ್ತವ್ಯ. ಗಾಂಧೀಜಿ ತಮ್ಮ ಆತ್ಮಕಥೆ ‘ನನ್ನ ಸತ್ಯಾನ್ವೇಷಣೆ’ಯಲ್ಲಿ ಶಿಕ್ಷಣದ ಮಹತ್ವ ಸಾರುತ್ತಾ ‘ಮಗು ಕಲಿಯುತ್ತಾ ಸಮಾಜ ಮುಖಿಯಾಗಬೇಕು. ನವೀನ ಶಿಕ್ಷಣದ ಮೂಲಕ ಜೀವನದ ಎಲ್ಲಾ ಹಂತಗಳನ್ನು ಅರ್ಥೈಸಿಕೊಂಡು ಸಮಾಜದ ಶಕ್ತಿಯಾಗಿ ಬೆಳೆಯಬೇಕು ' ಎಂದಿದ್ದಾರೆ.
ಶಾಲೆ, ಶಿಕ್ಷಕ, ಶಿಕ್ಷಣ ಮಗುವಿನ ಪಾಲಿಗೆ ಪರಿವರ್ತನಾ ತ್ರಿಶಕ್ತಿಗಳು. ಅದನ್ನು ಯಾವ ರೂಪದಲ್ಲಾದರೂ ಮಗುವಿಗೆ ತಲುಪಿಸಬೇಕಿದೆ. ಕೊರೊನಾ ಅಲೆಗಳ ಆರ್ಭಟದಲ್ಲಿ ಪ್ರಪಂಚದ ವ್ಯವಹಾರಗಳೇ ತಲೆಕೆಳಗಾಗಿ ಹೋಗಿವೆ. ಅದರಲ್ಲಿ ಶಿಕ್ಷಣ ಕ್ಷೇತ್ರವಂತೂ ಒಂದು ಭವಿತವ್ಯದ ಪೀಳಿಗೆಯನ್ನೇ ಪಕ್ಕ ಸರಿಸಿದ್ದು ದುರಂತ.
ಕಾಲಕ್ಕೆ ತಕ್ಕಂತೆ ನಡೆಯಬೇಕು ಅನ್ನುವುದು ಬದಲಾಗಿ ಕೊರೊನಾಕ್ಕೆ ತಕ್ಕಂತೆ ಸಾಗಬೇಕೆಂಬ ಎಚ್ಚರಿಕೆಯಲ್ಲಿ ಎರಡು ವರ್ಷಗಳ ಅವಧಿ ಶೈಕ್ಷಣಿಕವಾಗಿ ಆಪೋಶನಗೈದೆವು.
ಪೋಷಕವರ್ಗ, ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರ, ಸಮಾಜ ಇಲ್ಲದ ಶಿಕ್ಷಣಕ್ಕಾಗಿ ಅಪಾರವಾಗಿ ಹಲುಬಿಬಿಟ್ಟವು. ಮಕ್ಕಳ ಮೇಲಿನ ಕಲಿಕಾ ಪ್ರೀತಿಯ ಕಾಳಜಿಯಿಂದ ಚಂದನ ವಾಹಿನಿಯ ಮೂಲಕ ಸಂವೇದ, ವಿದ್ಯಾಗಮ ಮುಂತಾದ ಪಠ್ಯಾಧಾರಿತ ಕಾರ್ಯಕ್ರಮ ಪ್ರಸಾರ ಮಾಡಿ ಪೂರಕವಾದ ಕಲಿಕಾ ವಾತಾವರಣ ನಿರ್ಮಿಸಿಕೊಟ್ಟವು. ಅದರ ಉಪಯೋಗ ಕಿಂಚಿತ್ತಾದರೂ ಕೆಲ ಮಕ್ಕಳು ಪಡೆದಿದ್ದು ಸುಳ್ಳಲ್ಲ. ಆನ್‌ಲೈನ್ ಎಂಬ ಇಂಜೆಕ್ಷನ್ ಕೂಡಾ ಮಕ್ಕಳಿಗೆ ನೀಡಲಾಯಿತಾದರೂ ಮುಖ ತಿರುವಿದವರೆಷ್ಟೋ, ನುಣುಚಿಕೊಂಡವರೆಷ್ಟೋ, ಸ್ವೀಕರಿಸಿ ಧನ್ಯರಾದವರೆಷ್ಟೋ ಅವರವರ ಭಾವಕ್ಕೆ ಅವರವರ ಭಕುತಿಗೆಗೊತ್ತು!
ಇದೀಗ ಬಹಳ ದಿನಗಳ ನಂತರ ಮರಳಿ ಶಾಲೆಯತ್ತ ಮಕ್ಕಳು ಮುಖ ಮಾಡುತ್ತಿರುವುದು, ಸರ್ಕಾರ ಮನಮಾಡಿ 'ಅಸ್ತು' ಅಂದಿರುವುದು ದೇಶದ, ರಾಜ್ಯದ ಅಭ್ಯುದಯಕ್ಕೆ ಹೊಸ ನಾಂದಿಯಾಗಲಿದೆ.
ಮನೆ, ಹೊಲ, ದುಡಿಮೆ, ಹಣ, ಮೊಬೈಲ್, ಖಾಲಿತನ, ಅಕ್ಷರ, ಪುಸ್ತಕಗಳಿಂದ ದೂರ ಉಳಿದ ಮಕ್ಕಳನ್ನು ಮತ್ತೆ ಶಾಲೆಯೆಡೆ, ಮೇಷ್ಟರ ಕಡೆ, ಓದಿನತ್ತ ಮುಖ ಮಾಡಿ ನಿಲ್ಲಿಸುವುದು ಅಷ್ಟು ಸರಳ ವಿಚಾರವಲ್ಲ.
ಟ್ರಿಂ ಮಾಡದ ಕಾಡು ಮರ ಹೇಗೆ ಅಡ್ಡಾದಿಡ್ಡಿಯಾಗಿ ಬೆಳೆಯುತ್ತೋ ಹಾಗೆ ನಮ್ಮ ಮಕ್ಕಳ ಸ್ಥಿತಿಯಾಗಿದೆ. ಶಾಲೆಗಳು , ಗುರುಗಳು, ಪೋಷಕರು ಕೂಡಿ ಈ ಸಸಿಯ ಟ್ರಿಮ್ಮಿಂಗ್ ಮಾಡಿ ಅಂದಗಾಣಿಸಬೇಕಿದೆ. ಸರ್ಕಾರದ ಎಚ್ಚರಿಕೆ ಮತ್ತು ಸೂಚನೆಗಳನ್ನು ಆರೋಗ್ಯದ ದೃಷ್ಟಿಯಿಂದ ಪಾಲಿಸಿ ಮಕ್ಕಳನ್ನು ಕಾಪಾಡಬೇಕಿದೆ. ಮಕ್ಕಳು ಬಂದರೆಂದ ಕೂಡಲೇ ಹಿಡಿದು ಪಾಠ ಕೋಣೆಯಲ್ಲಿ ಕೂಡಿಹಾಕದೇ...ಹೊಸ ಹೂವಿನ ತೆರದಿ ಸ್ವಾಗತಿಸಬೇಕಿದೆ. ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ವಿಚಾರಿಸಬೇಕಿದೆ. ಕೊರೋನಾ ಭಯ ನಿವಾರಿಸಿ ಮುನ್ನೆಚ್ಚರಿಕೆ ಬಗ್ಗೆ ಮಾಹಿತಿ ನೀಡುವ ಕೆಲಸವಾಗಬೇಕಿದೆ.
ಮಕ್ಕಳೇ ಕಳೆದಿದ್ದು ಕಳೆಯಲಿ ಮುಂದಿರುವ ಸುಂದರ ದಿನಗಳು ನಿಮ್ಮವೇ ನೆನಪಿರಲಿ. ಶಿಕ್ಷಣದಿಂದ ಮಾತ್ರ ಸಾಮಾಜಿಕವಾಗಿ, ಕೌಟುಂಬಿಕವಾಗಿ, ವೈಯಕ್ತಿಕವಾಗಿ ನಿಮ್ಮನ್ನು ಗಟ್ಟಿಗೊಳಿಸಲು ಸಾಧ್ಯ.
ಬನ್ನಿ ನಿಮಗಾಗಿ ಸರ್ಕಾರ, ನಿಮ್ಮ ಶಾಲೆ, ನಿಮ್ಮ ಭವಿಷ್ಯ ರೂಪಿಸುವ ಶಿಕ್ಷಕರು, ನಿಮ್ಮ ಶೈಕ್ಷಣಿಕ ಬುನಾದಿಯ ಶಾಲೆ ಕಾಯುತ್ತಿದೆ. ಹೆತ್ತವರ ಕನಸಾಗಿ, ನಿಮ್ಮ ಒಳದನಿಯ ಹಾಡಾಗಿ, ಪ್ರಗತಿಯ ಕಿರಣವಾಗಿ ಬನ್ನಿ. ನಿಮ್ಮ ಶಾಲೆ, ನಿಮ್ಮ ಕನಸು, ನಿಮ್ಮದೇ ಲೋಕ..
(ಬರಹಗಾರರು ಶಿಕ್ಷಕರು ಮತ್ತು ಸಾಹಿತಿ, ಕರ್ನಾಟಕ ಪಬ್ಲಿಕ್ ಸ್ಕೂಲ್, ಸಂತೇಬೆನ್ನೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.