ADVERTISEMENT

ವಿಶ್ಲೇಷಣೆ | ಶಿಕ್ಷಣ ಮಾಧ್ಯಮದ ವೈರುಧ್ಯ

ಸಮುದಾಯ ಮತ್ತು ನುಡಿಗಳ ಸಂಬಂಧ ಮೇಳೈಸಿದ ನೀತಿಗಳಿಂದ ಪರಿಹಾರದ ಹಾದಿ

ಮೇಟಿ ಮಲ್ಲಿಕಾರ್ಜುನ
Published 9 ಆಗಸ್ಟ್ 2020, 19:30 IST
Last Updated 9 ಆಗಸ್ಟ್ 2020, 19:30 IST
   

ಕನ್ನಡ ನುಡಿ ಕುರಿತ ಚರ್ಚೆಗಳು ದಿನವೂ ಒಂದಲ್ಲ ಒಂದು ವಿಧದಲ್ಲಿ ಮುಂಚೂಣಿಗೆ ಬರುತ್ತಿವೆ. ಈ ಚರ್ಚೆಗಳಲ್ಲಿ ಎರಡು ಮಹತ್ವದ ಸಂಗತಿಗಳು ಅತ್ಯಂತ ವ್ಯಾಪಕವೂ ಪ್ರಧಾನವೂ ಆಗಿರುತ್ತವೆ. ಒಂದು, ಶಿಕ್ಷಣ ಮಾಧ್ಯಮವಾಗಿ ಕನ್ನಡ ಕುರಿತ ಪ್ರಶ್ನೆಯಾದರೆ, ಕನ್ನಡ ನುಡಿ ಅಳಿವಿನ ಪ್ರಶ್ನೆ ಮತ್ತೊಂದು. ಮೇಲ್ನೋಟಕ್ಕೆ ಇವೆರಡೂ ಬೇರೆ ಬೇರೆಯಾಗಿ ಕಂಡರೂ ಆಂತರ್ಯದಲ್ಲಿ ಇವೆರಡರ ನಡುವೆ ಅತ್ಯಂತ ನಿಕಟವಾದ ನಂಟಿದೆ. ಈ ನೆಂಟಸ್ತಿಕೆಯ ಸ್ವರೂಪವನ್ನು ಅರಿಯಬೇಕೆಂದರೆ, ಶಿಕ್ಷಣ ಮಾಧ್ಯಮ ಎಂದರೇನು ಹಾಗೂ ನುಡಿಯೊಂದರ ಅಳಿವು ಎಂದರೇನು ಎಂಬುದನ್ನು ಪ್ರತ್ಯೇಕವಾಗಿ ಚರ್ಚಿಸಬೇಕಾದ ಜರೂರಿದೆ.

ಈ ಎರಡೂ ಪ್ರಶ್ನೆಗಳ ಕುರಿತು ಗಂಭೀರವಾದ ಚರ್ಚೆಗಳನ್ನು ನಡೆಸುವವರು ಬಹುಮಟ್ಟಿಗೆ ಉನ್ನತ ಶಿಕ್ಷಣವನ್ನು ಪಡೆದವರು, ಒಳ್ಳೆಯ ಹುದ್ದೆಗಳಲ್ಲಿ ಇರುವವರು ಹಾಗೂ ಯಾವುದೇ ಆತಂಕವಿಲ್ಲದೆ ಸಲೀಸಾಗಿ ದಿನನಿತ್ಯದ ಜೀವನ ನಡೆಸುವವರು. ಕೂಲಿಕಾರ್ಮಿಕರು, ಪೌರಕಾರ್ಮಿಕರು, ವಲಸಿಗರು, ಕೃಷಿಕರು ಹಾಗೂ ತಮ್ಮ ನಿತ್ಯದ ಬದುಕಿನ ಉಳಿವಿಗಾಗಿ ಹೋರಾಡುವವರು ಇಂತಹ ಚರ್ಚೆಗಳಲ್ಲಿ
ಪಾಲ್ಗೊಂಡಿರುವುದಿಲ್ಲ. ಅಂದರೆ, ಕನ್ನಡ ಮಾಧ್ಯಮ ಇಲ್ಲವೇ ಇಂಗ್ಲಿಷ್ ಮಾಧ್ಯಮ ಬೇಕು– ಬೇಡ ಎಂಬ ತೀರ್ಮಾನಗಳನ್ನು ರೂಪಿಸುವವರು ಕೂಡ ಬದುಕಿನ ಸವಲತ್ತುಗಳಿಗೆ ಹತ್ತಿರ ಇರುವವರೇ ಆಗಿರುತ್ತಾರೆ.

ಕನ್ನಡವನ್ನು ಉಳಿಸುವ, ಬಳಸುವ ಮತ್ತು ಅದರ ಸಾಧ್ಯತೆಗಳನ್ನು ತೀವ್ರಗೊಳಿಸುವ ಹೊಣೆಗಾರಿಕೆ ಹೊತ್ತವರಂತೆ ಮಾತನಾಡುವವರು, ಕನ್ನಡದಿಂದಲೇ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಹಂಗಿನಲ್ಲಿ ಇರುವುದಿಲ್ಲ. ಆದರೆ ಕನ್ನಡವನ್ನು ಬರೀ ತಮ್ಮ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಸ್ಮಿತೆಯ ರೂಪಕವನ್ನಾಗಿ ಮಾಡಿಕೊಂಡಿರುತ್ತಾರೆ. ನಾಡು- ನುಡಿಗಾಗಿ ನಾವೆಷ್ಟೊಂದು ಶ್ರಮಿಸುತ್ತೇವೆ ಎಂಬ ನಂಬಿಕೆಯನ್ನು ಸೃಷ್ಟಿಸುವ ಹಂಬಲವೇ ಇದಕ್ಕೆ ಕಾರಣ. ಇದು ನಮ್ಮ ನಡೆ ಮತ್ತು ನುಡಿಗಳ ನಡುವಣ ಒಪ್ಪಂದವಾಗಿರುವುದಿಲ್ಲ. ಹಾಗಾಗಿ, ನುಡಿದಂತೆ ನಡೆಯಬೇಕು ಎನ್ನುವ ಯಾವುದೇ ನೈತಿಕತೆಯನ್ನೂ ಇಲ್ಲಿ ಕಾಣಲಾಗದು.

ADVERTISEMENT

ಇಂತಹ ನಿಲುವುಗಳ ನೆಲೆಯಿಂದ ಚರ್ಚಿಸುವ ವಿಚಾರಗಳ ಗುರಿ ಏನೆಂಬುದನ್ನು ನಾವು ಸಹಜವಾಗಿ ಅರ್ಥೈಸಿಕೊಳ್ಳಬಹುದು. ಕನ್ನಡದ ಮೂಲಕ ಕಲಿಯಬೇಕು ಅಥವಾ ಇಂಗ್ಲಿಷಿನ ಮೂಲಕ ಕಲಿಯಬೇಕು ಎನ್ನುವುದು ಮೇಲ್ನೋಟಕ್ಕೆ ಅವರವರ ಆಯ್ಕೆಯಾಗಿ ಕಾಣಿಸುತ್ತದೆ. ಆದರೆ, ಇದು ಬರೀ ಆಯ್ಕೆಯ ಪ್ರಶ್ನೆಯಲ್ಲ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನಿರ್ಧಾರಗಳು ಇಲ್ಲಿ ಮುಖ್ಯವಾಗುತ್ತವೆ.

ಯಾರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಲಾಢ್ಯರಾಗಿರುವರೋ ಅವರಿಗೆ ಶೈಕ್ಷಣಿಕ ನಿಲುವುಗಳು ಸ್ಪಷ್ಟವಾಗಿರುತ್ತವೆ. ಅಂದರೆ, ತಮ್ಮ ಮಕ್ಕಳನ್ನು ಯಾವ ಉದ್ಯೋಗಕ್ಕೆ ಕಳಿಸಬೇಕು, ಅವರಿಗೆ ಯಾವ ಬಗೆಯ ಶಿಕ್ಷಣ ನೀಡಬೇಕು ಎಂಬೆಲ್ಲ ವಿಚಾರಗಳ ಬಗೆಗೆ ಸ್ಪಷ್ಟತೆ ಇರುವವರಿಗೆ ಶಿಕ್ಷಣ ಮಾಧ್ಯಮದ ಬಗೆಗೆ ಗೊಂದಲಗಳಿರುವುದಿಲ್ಲ. ಇದಕ್ಕೆ ಪೂರಕವಾಗಿ ಅವರು ಮುನ್ನಡೆಯುತ್ತಾರೆ ಹಾಗೂ ನಾಡು, ನುಡಿಯ ಬಗೆಗಿನ ಕಾಳಜಿಗಳನ್ನು ವ್ಯಕ್ತಪಡಿಸುವುದಕ್ಕೆ ಕನ್ನಡವನ್ನು ಅಭಿಮಾನದ ಸಂಕೇತದಂತೆ ಆರಾಧಿಸುತ್ತಾರೆ.

ಬದುಕು ಮತ್ತು ಭಾಷೆಯ ನಡುವೆ ಯಾವುದೇ ಅಂತರಗಳಿಲ್ಲದೆ ಜೀವನವನ್ನು ನಡೆಸುವವರಿಗೆ ಇಂತಹ ವ್ಯತ್ಯಾಸಗಳು ಇರುವುದಿಲ್ಲ. ನುಡಿ ಬೇರೆ ಹಾಗೂ ಬದುಕು ಬೇರೆ ಎಂದು ಪ್ರತ್ಯೇಕಿಸಿ ನೋಡುವ ರಾಜಕೀಯ ಪ್ರಜ್ಞೆ ಇಲ್ಲವೇ ಸಾಮಾಜಿಕ ಅವಕಾಶವೂ ಇವರಿಗೆ ಇರುವುದಿಲ್ಲ. ಇದೇನೂ ಅಪರಾಧವಲ್ಲ. ಆದರೆ ಇದರಿಂದ ವಾಸ್ತವದಲ್ಲಿ, ಆಯಾ ನುಡಿಯನ್ನು ಉಳಿಸಿ ಬೆಳೆಸುವ ಜನರಿವರು ಎನ್ನುವ ಸಾಮಾನ್ಯ ಗ್ರಹಿಕೆಯೂ ನಮ್ಮ ಸಮುದಾಯಗಳಲ್ಲಿ ಏರ್ಪಡುವುದಿಲ್ಲ.

ಹೀಗೆ ಬದುಕಿಗೂ ನುಡಿಗೂ ಅಂತರವಿಲ್ಲದೇ ಬದುಕುವ ಜನ, ತಮ್ಮ ಬದುಕಿನ ಏಳ್ಗೆಗೆ ಪೂರಕವಾದ ಅವಕಾಶಗಳನ್ನಾಗಲೀ ಸವಲತ್ತುಗಳನ್ನಾಗಲೀ ಪಡೆಯುವಲ್ಲಿ ವಂಚಿತರಾಗಿಯೇ ಉಳಿಯುತ್ತಾರೆ. ಇಂತಹ ಸಮುದಾಯಗಳನ್ನು ಪ್ರತಿನಿಧಿಸುವ ಬುದ್ಧಿಜೀವಿಗಳು ಅಥವಾ ಹೋರಾಟಗಾರರು ಕೂಡ ಮಾನವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಪರಿಭಾಷೆಗಳನ್ನು ಬಳಸಿ, ಎಲ್ಲವನ್ನೂ ಸರಿಪಡಿಸಿದೆವು ಎಂದುಕೊಳ್ಳುತ್ತಾರೆ. ಹಾಗಾದರೆ ಇವರು ಮತ್ತೇನು ಮಾಡಬೇಕು ಎನ್ನುವ ಪ್ರಶ್ನೆಯನ್ನು ಯಾರಾದರೂ ಕೇಳಬಹುದು. ದಿಟ, ಶಿಕ್ಷಣ ನೀತಿಗೂ ಭಾಷಾ ನೀತಿಗೂ ನಡುವಣ ನಿಕಟ ಸಂಬಂಧವನ್ನು ಗುರುತಿಸಿ, ಅವು ಪರಸ್ಪರ ವ್ಯವಹರಿಸುವುದಕ್ಕೆ ಪೂರಕವಾಗಿ ನಮ್ಮ ಹೋರಾಟಗಳು ಹಾಗೂ ಚರ್ಚೆಗಳು ಇರಬೇಕಾಗುತ್ತದೆ. ದುರಂತವೆಂದರೆ, ಭಾರತದಲ್ಲಿ ಬಹುತೇಕ ನೀತಿಗಳು ಸಾಮಾಜಿಕ ಇಲ್ಲವೇ ಸಾಂಸ್ಕೃತಿಕ ಸರಿತನದ ನೆಲೆಯಲ್ಲಿರದೆ, ಕೇವಲ ರಾಜಕೀಯ ಸರಿತನದ ಆಯಾಮಗಳನ್ನು ಪಡೆದುಕೊಂಡಿರುತ್ತವೆ. ಇಂತಹ ನಿಲುವುಗಳು, ಎಲ್ಲವೂ ಸರಿಯಾಗಿವೆ ಎನ್ನುವ ಅಭಿಪ್ರಾಯವನ್ನೇಮೇಲ್ನೋಟದಲ್ಲಿ ರೂಪಿಸುತ್ತವೆ. ಆದರೆ ವಾಸ್ತವದಲ್ಲಿ ಇಂತಹ ನೀತಿ
ನಿರೂಪಣೆಗಳಲ್ಲಿ ಯಾವುದೇ ಸಾಮಾಜಿಕ ನ್ಯಾಯ ಅಥವಾ ಸಾಂಸ್ಕೃತಿಕ ಸರಿತನ ಅಡಕಗೊಂಡಿರುವುದಿಲ್ಲ.

ಶಿಕ್ಷಣ ಮತ್ತು ಮಾಧ್ಯಮದ ಪ್ರಶ್ನೆಗಳನ್ನು ಎದುರಿಸುವವರು ಏಕಕಾಲಕ್ಕೆ ಎರಡು ಸಂಗತಿಗಳನ್ನು ನಿಭಾಯಿಸಬೇಕಾಗುತ್ತದೆ. ಶೈಕ್ಷಣಿಕ ನೀತಿಗಳು ಮೈದಾಳಿದ ತಾತ್ವಿಕ ಚೌಕಟ್ಟುಗಳ ಕುರಿತು ಯೋಚಿಸುವುದು ಒಂದು ಸವಾಲಾದರೆ, ಈ ತಾತ್ವಿಕ ಗುರಿಗಳನ್ನು ಈಡೇರಿಸಲು ರೂಪಿಸುವ ಪಠ್ಯಕ್ರಮ ಮತ್ತೊಂದು ಸವಾಲಾಗಿದೆ. ಇವೆರಡರ ನಡುವಿನ ತಾತ್ವಿಕ ಮತ್ತು ವೈಚಾರಿಕ ವಿನ್ಯಾಸಗಳನ್ನು ಗ್ರಹಿಸದೇ ಹೋದರೆ, ಶಿಕ್ಷಣ ನೀತಿಗೂ ಶಿಕ್ಷಣ ಮಾಧ್ಯಮಗಳಿಗೂ ಹೊಂದಾಣಿಕೆ ಏರ್ಪಡುವುದಿಲ್ಲ.

ಬಹುಭಾಷಿಕ ಸನ್ನಿವೇಶದಲ್ಲಿ ಬದುಕುವ ಪ್ರತಿಯೊಂದು ಸಮುದಾಯದ ಮಕ್ಕಳ ಸಾಮಾಜಿಕತೆ ಮತ್ತು ಗ್ರಹಿಕೆಯ ಸ್ವರೂಪವನ್ನು ಒಳಗೊಳ್ಳುವ ಪಠ್ಯಕ್ರಮವನ್ನು ರೂಪಿಸಬೇಕಾಗುತ್ತದೆ. ಹೌದು, ಯಾವುದೇ ಒಂದು ಭಾಷೆಯ ಮೂಲಕ ಈ ಪಠ್ಯಕ್ರಮವನ್ನು ಕಲಿಯಲು ಮತ್ತು ಕಲಿಸಲು ಅವಕಾಶವಿದ್ದರೂ ಈ ಮೂಲಕ ಒದಗುವ ತಿಳಿವಿನೊಳಗೆಯೇ ಬಹುಭಾಷಿಕ, ಬಹುಸಾಂಸ್ಕೃತಿಕ ಗ್ರಹಿಕೆಯ ಚಹರೆಗಳು ನೆಲೆಗೊಂಡರೆ, ಮಾಧ್ಯಮದ ಪ್ರಶ್ನೆ ಒಂದು ಸವಾಲಾಗಿ ಕಾಣಿಸದು. ಅಂದರೆ ಶಿಕ್ಷಣ ಮಾಧ್ಯಮ ಎನ್ನುವುದು ಜ್ಞಾನ ಪ್ರಸರಣ ಹಾಗೂ ಸಾಮಾಜಿಕ ವಿವೇಕದ ಬಗೆಯಾಗಿದೆ ವಿನಾ, ಕೇವಲ ಒಂದು ನಿರ್ದಿಷ್ಟ ಭಾಷೆಯ ಲಿಪಿ ಮತ್ತು ವಾಕ್ಯಗಳ ಮೂಲಕ ರವಾನಿಸುವ ಮಾಹಿತಿಯಲ್ಲ.

ಕನ್ನಡ ಮಾಧ್ಯಮದಲ್ಲಿ ಪಾಠ ಮಾಡಿದರೂ ಆ ಮೂಲಕ ಲಭ್ಯವಾಗುವ ತಿಳಿವು ವಿದ್ಯಾರ್ಥಿ ಬದುಕಿನ ಪರಿಸರಕ್ಕೆ ಸಂಪೂರ್ಣವಾಗಿ ಅನ್ಯವಾಗಿದ್ದರೆ, ಇಲ್ಲಿ ಮಾಧ್ಯಮ ಮಾತ್ರವೇ ವಿದ್ಯಾರ್ಥಿಗಳಿಗೆ ಹೇಗೆ ಸಹಾಯ ಮಾಡಬಲ್ಲದು? ಶಿಕ್ಷಣ ಮಾಧ್ಯಮ ಕುರಿತ ಚರ್ಚೆಗಳು ಬಹುತೇಕವಾಗಿ ಬರೀ ಭಾಷೆಯ ಬಗೆಗಿನ ಚರ್ಚೆಗಳಾಗಿರುತ್ತವೆ. ಅಂದರೆ ಕನ್ನಡವೋ ಅಥವಾ ಇಂಗ್ಲಿಷೋ ಎಂದು ಇಬ್ಭಾಗವಾಗಿ, ಜನರಲ್ಲಿ ಗೊಂದಲಕ್ಕೆ ಕಾರಣವಾಗುತ್ತವೆ.

ಕರ್ನಾಟಕದಲ್ಲಿ ನೂರಾರು ನುಡಿ ಸಮುದಾಯಗಳಿವೆ. ಇಂತಹ ವಿದ್ಯಾರ್ಥಿಗಳಿಗೆ ಕನ್ನಡದ ಮೂಲಕ ಕಲಿಸಿದ ತಕ್ಷಣ ಅವರು ಅದನ್ನು ಗ್ರಹಿಸಲು ಸಾಧ್ಯವಿಲ್ಲ. ಏಕೆಂದರೆ ಕೆಲವರಿಗೆ ಕನ್ನಡವೂ ಅನ್ಯಭಾಷೆಯೇ ಆಗಿರುತ್ತದೆ. ಆದ್ದರಿಂದ, ಸಮುದಾಯಗಳಲ್ಲಿ ಅಡಕವಾಗಿರುವ ತಿಳಿವಿನ ಮಾದರಿಗಳನ್ನು ನೆಲೆಯಾಗಿಸಿಕೊಂಡು ನಮ್ಮ ಪಠ್ಯಕ್ರಮ ಮತ್ತು ಮಾಧ್ಯಮ ನೀತಿಗಳು ಮುಂಚೂಣಿಗೆ ಬಂದರೆ, ಆಗ ಒಂದು ಮಟ್ಟಿನ ಪರಿಣಾಮಕಾರಿ ಕಲಿಕೆ ಏರ್ಪಡುತ್ತದೆ. ಶಿಕ್ಷಣದಲ್ಲಿ ಸಮುದಾಯ ಮತ್ತು ನುಡಿಗಳ ಸಂಬಂಧವನ್ನು ಮೇಳೈಸಿಕೊಂಡ ನೀತಿಗಳು ಜಾರಿಗೆ ಬಂದರೆ ಹಲವು ಸಮಸ್ಯೆಗಳಿಗೆ ಪರಿಹಾರದ ಹಾದಿಗಳು ದೊರೆಯುತ್ತವೆ. ಅಂದರೆ, ಸಮುದಾಯಗಳಲ್ಲಿ ನೆಲೆ ನಿಂತಿರುವ ಸಾಮಾಜಿಕ, ಸಾಂಸ್ಕೃತಿಕ ಬಹುಳತೆಯ ಚಹರೆಗಳು ಶೈಕ್ಷಣಿಕ ಪಠ್ಯಕ್ರಮಗಳಲ್ಲಿ ಜಾಗ ಪಡೆದುಕೊಂಡರೆ, ನುಡಿ ಅಳಿವಿನ ಸವಾಲುಗಳು ಇಷ್ಟೊಂದು ಅಪಾಯದ ಸ್ಥಿತಿಯನ್ನು ಮುಟ್ಟಲಾರವು.

ನುಡಿಯೊಂದರ ಉಳಿವಿನ ಸಾಧ್ಯತೆಯು ಪ್ರಮುಖವಾಗಿ ಶಿಕ್ಷಣ ಸಂಸ್ಥೆಗಳ ಮೂಲಕವೇ ಎಂದು ಹೇಳಬಹುದು. ಹಾಗಾಗಿ ನಾವು ಹೋರಾಟ ಮಾಡಬೇಕಿರುವುದು ಬರೀ ಮಾಧ್ಯಮದ ಪ್ರಶ್ನೆಯೊಂದನ್ನೇ ಮುಂದಿಟ್ಟುಕೊಂಡಲ್ಲ. ಬದಲಾಗಿ, ಶೈಕ್ಷಣಿಕ ಪಠ್ಯಕ್ರಮಗಳು ಎಷ್ಟು ಪರಿಣಾಮಕಾರಿಯಾಗಿ ನಮ್ಮ ಬಹುಸಮೂಹಗಳ ಚಹರೆಗಳನ್ನು ಒಳಗೊಂಡಿರಬೇಕು ಎನ್ನುವ ಪ್ರಶ್ನೆ ಇಲ್ಲಿ ಮೊದಲಾಗಬೇಕು.

ಲೇಖಕ: ಭಾಷಾಶಾಸ್ತ್ರ ಪ್ರಾಧ್ಯಾಪಕ, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.