ADVERTISEMENT

ಪಕ್ಷಗಳ ಪ್ರಣಾಳಿಕೆಯಲ್ಲಿ ಶಾಲೆಗಳು ಎಲ್ಲಿವೆ?

ಶಾಲಾ ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ರಾಷ್ಟ್ರೀಯ ಪಕ್ಷಗಳಲ್ಲಿ ಕಾಣದ ಹೊಸತನ

ದೋಲಶ್ರೀ ಮೈಸೂರು
Published 22 ಏಪ್ರಿಲ್ 2019, 6:54 IST
Last Updated 22 ಏಪ್ರಿಲ್ 2019, 6:54 IST
   

ಭಾರತ, 2014ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದಾಗ, ಶಾಲಾ ಶಿಕ್ಷಣದ ವಿಚಾರದಲ್ಲಿ ಉತ್ಸಾಹದ ವಾತಾವರಣ ಇತ್ತು. ಆ ಚುನಾವಣೆ ನಡೆದಿದ್ದು ಪ್ರಧಾನವಾಗಿ ಬೇರೆ ವಿಷಯಗಳನ್ನು ಮುಂದಿರಿಸಿಕೊಂಡಾದರೂ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಶಾಲಾ ಶಿಕ್ಷಣ ವ್ಯವಸ್ಥೆ ಸುಧಾರಣೆಯ ಬಗ್ಗೆ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದವು. ಆದರೆ, ಈ ವ್ಯವಸ್ಥೆಯಲ್ಲಿನ ಸುಧಾರಣೆ ಕುರಿತ ಉತ್ಸಾಹ ಉಳಿದುಕೊಂಡಿದೆಯೇ? 2019ರ ಚುನಾವಣೆಯಲ್ಲಿ ಶಾಲಾ ಶಿಕ್ಷಣವು ಮುಖ್ಯವಾಗಿ ಉಳಿದುಕೊಂಡಿದೆಯೇ?

ನಾವು ಪ್ರಜೆಗಳಾಗಿ ಮಾತ್ರವಲ್ಲದೆ, ಪಾಲಕರಾಗಿ, ಶಿಕ್ಷಕರಾಗಿ ಮತ್ತು ಶಿಕ್ಷಣ ವ್ಯವಸ್ಥೆಯ ಪಾಲುದಾರರಾಗಿ ಕೂಡ ಮತ ಚಲಾಯಿಸುವ ಕಾರಣ ಈ ಪ್ರಶ್ನೆ ಬಹುಮುಖ್ಯವಾಗುತ್ತದೆ. ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲವನ್ನೂ ಮಾಡಲೇಬೇಕು ಎಂಬುದಿಲ್ಲವಾದರೂ, ಅದು ರಾಜಕೀಯ ಪಕ್ಷಗಳ ಸುಧಾರಣಾ ದೃಷ್ಟಿಕೋನವನ್ನು ಹೇಳುತ್ತದೆ. ಪ್ರಣಾಳಿಕೆಯು ಮತದಾರರ ಪಾಲಿಗೆ ಪ್ರಮುಖ ದಾಖಲೆಯಾಗಿ ಸಿಗುತ್ತದೆ.

ಅಧಿಕಾರದಲ್ಲಿ ಇರುವ ಪಕ್ಷವಾಗಿ ಬಿಜೆಪಿಯು ಈ ಬಾರಿಯ ಚುನಾವಣೆಗೆ ಸಿದ್ಧಪಡಿಸಿರುವ ಪ್ರಣಾಳಿಕೆಯನ್ನು ‘ಸಪ್ಪೆ’ ಎನ್ನಬೇಕಾಗುತ್ತದೆ. ಬಿಜೆಪಿಯು ಶಾಲಾ ಶಿಕ್ಷಣದಲ್ಲಿ ಐದು ಪ್ರಮುಖ ಸುಧಾರಣೆಗಳನ್ನು ತರುವುದಾಗಿ ಹೇಳಿದೆ. ಶಿಕ್ಷಣದ ಲಭ್ಯತೆಯ ವಿಚಾರದಲ್ಲಿ ಸಮಾನತೆಯನ್ನು ಸಾಧಿಸಲಾಗಿದೆ ಎಂಬ ನಿಲುವು ತಾಳಿರುವ ಬಿಜೆಪಿ, ಶಿಕ್ಷಣದ ಗುಣಮಟ್ಟದಲ್ಲಿ ಸುಧಾರಣೆ ಬೇಕಿದೆ ಎನ್ನುತ್ತದೆ. ಕಾಂಗ್ರೆಸ್ಸಿನಂತೆಯೇ ಬಿಜೆಪಿ ಕೂಡ, ನವೋದಯ ವಿದ್ಯಾಲಯಗಳ ಸಂಖ್ಯೆಯನ್ನು ದೇಶದಲ್ಲಿ ಹೆಚ್ಚಿಸಲಾಗುವುದು ಎಂದು ಹೇಳಿದೆ. ಸ್ಮಾರ್ಟ್‌ ತರಗತಿಗಳನ್ನು ಆರಂಭಿಸಿ, ತರಗತಿಗಳಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಿಸುವ ಮಾತನ್ನು ಆಡಿದೆ.

ADVERTISEMENT

ಸುಧಾರಣೆ ತರಲು ಕಾಂಗ್ರೆಸ್ಸಿನ 2019ರ ಪ್ರಣಾಳಿಕೆಯು ಕೆಲವು ಪ್ರಮುಖ ವಿಷಯಗಳನ್ನು ಗುರುತಿಸಿದೆ. ಅದರ ಪ್ರಣಾಳಿಕೆಯು 2014ರ ಪ್ರಣಾಳಿಕೆಗಿಂತ ತೀರಾ ಭಿನ್ನವಾಗಿಲ್ಲ. ಆದರೆ, ಕಾಂಗ್ರೆಸ್ ಸುಧಾರಣೆ ತರಲು ಪ್ರಸ್ತಾಪ ಮಾಡಿರುವಲ್ಲಿ ಎರಡು ಪ್ರಮುಖ ಅಂಶಗಳು ಎದ್ದು ಕಾಣಿಸುತ್ತವೆ. ಮೊದಲನೆಯದು, ಶಿಕ್ಷಣವನ್ನು ಸಮವರ್ತಿ ಪಟ್ಟಿಯಿಂದ ರಾಜ್ಯಗಳ ಪಟ್ಟಿಗೆ ವರ್ಗಾವಣೆ ಮಾಡುವ ಪ್ರಸ್ತಾವ ಪ್ರಣಾಳಿಕೆಯಲ್ಲಿದೆ. ಎರಡನೆಯದು, ಒಂದನೆಯ ತರಗತಿಯಿಂದ ಹತ್ತನೆಯ ತರಗತಿವರೆಗೆ ಎಲ್ಲರನ್ನೂ ಒಳಗೊಳ್ಳುವಂತೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ವ್ಯಾಪ್ತಿಯನ್ನು ವಿಸ್ತರಿಸುವ ಆಶಯ ಪ್ರಣಾಳಿಕೆಯಲ್ಲಿದೆ. ಶಾಲಾ ಶಿಕ್ಷಣದ ಲಭ್ಯತೆ, ಸಮಾನತೆ ಮತ್ತು ಗುಣಮಟ್ಟದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಗುರುತಿಸಿರುವುದೇ ಕಾಂಗ್ರೆಸ್ಸಿನ ಪ್ರಣಾಳಿಕೆಯಲ್ಲಿ ಎದ್ದು ಕಾಣುವ ಅಂಶ.

ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ, ‘ಶಿಕ್ಷಣದ ಲಭ್ಯತೆ ಹಾಗೂ ಸಮಾನತೆಯನ್ನು ಭಾರತ ಸಾಧಿಸಿಯಾಗಿದೆ. ಹಾಗಾಗಿ ನಾವು ಇನ್ನು ಗುಣಮಟ್ಟದ ಶಿಕ್ಷಣ ಒದಗಿಸುವತ್ತ ಗಮನ ನೀಡಬೇಕು’ ಎಂಬ ಗ್ರಹಿಕೆ ಹೊಂದಿದೆ. ಇಂದು ಶಿಕ್ಷಣದ ಲಭ್ಯತೆಯ ಸ್ವರೂಪ ಹೇಗಿದೆ? ಈಗಿನ ವ್ಯವಸ್ಥೆಗೆ ಒದಗಿಸುತ್ತಿರುವ ಅನುದಾನ ಸಾಕಾಗುತ್ತಿಲ್ಲ, ಮುಖ್ಯವಾಹಿನಿಯ ಶಾಲೆಗಳಲ್ಲಿ ಸಮಾಜದ ಅಂಚಿನ ಸಮುದಾಯಗಳ ಮಕ್ಕಳ ಪ್ರಾತಿನಿಧ್ಯ ಕಡಿಮೆ ಇದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಸೇರಿದ ಮಕ್ಕಳು, ಅಂಗವಿಕಲ ಮಕ್ಕಳು ಹಾಗೂ ಹೆಣ್ಣುಮಕ್ಕಳು ಪ್ರಾಥಮಿಕ ಹಂತದ ಕೊನೆಯ ಭಾಗದಲ್ಲಿ ಅಥವಾ ಸೆಕೆಂಡರಿ ಶಿಕ್ಷಣದ ಹಂತದಲ್ಲಿ ಶಾಲೆ ತೊರೆಯುವ ಸಾಧ್ಯತೆಗಳು ಹೆಚ್ಚಿವೆ. ಶಾಲಾ ದಾಖಲಾತಿ ಪ್ರಮಾಣದ ಜೊತೆ ನೋಡಿದಾಗ ಅಂಗವಿಕಲ ಮಕ್ಕಳ ಪ್ರಾತಿನಿಧ್ಯವು ಶೇಕಡ 1.1ರಷ್ಟು ಇದೆ. ಹಾಗಾಗಿ ಶಿಕ್ಷಣದಲ್ಲಿ ಸಮಾನತೆ ಸಾಧಿಸಿಯಾಗಿದೆ, ಶಿಕ್ಷಣ ಎಲ್ಲರಿಗೂ ಲಭ್ಯವಾಗುವಂತೆ ಮಾಡಿಯಾಗಿದೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳುವುದು ತಪ್ಪು ದಾರಿಗೆ ಎಳೆಯುವಂಥದ್ದು.

ಶಿಕ್ಷಣದಲ್ಲಿ ಸಾಂಸ್ಥಿಕ ಬದಲಾವಣೆಗಳನ್ನು ತರುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಶಿಕ್ಷಣವನ್ನು ಸಮವರ್ತಿ ಪಟ್ಟಿಯಿಂದ ರಾಜ್ಯ ಪಟ್ಟಿಗೆ ವರ್ಗಾವಣೆ ಮಾಡುವುದರಿಂದ ಶಿಕ್ಷಣದ ವಿಚಾರದಲ್ಲಿ ಕಾನೂನು ಜಾರಿಗೊಳಿಸಲು, ಶಾಲಾ ಶಿಕ್ಷಣವನ್ನು ನಿಯಂತ್ರಿಸಲು ರಾಜ್ಯ ಗಳಿಗೆ ಹೆಚ್ಚಿನ ಅಧಿಕಾರ ಸಿಗುತ್ತದೆ. ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡುವುದರಿಂದ, ಶಿಕ್ಷಣದ ಗುರಿ, ಶಾಲಾ ಸೌಲಭ್ಯಗಳ ಲಭ್ಯತೆ ಮತ್ತು ಶಿಕ್ಷಣದಿಂದ ಸಿಗುವ ಪ್ರತಿಫಲದ ವಿಚಾರದಲ್ಲಿ ರಾಜ್ಯವಾರು ವ್ಯತ್ಯಾಸಗಳು ಕಂಡುಬರುತ್ತವೆ.

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾದ ಅಗತ್ಯವನ್ನು ಎರಡೂ ರಾಜಕೀಯ ಪಕ್ಷಗಳು ಹೇಳಿವೆ. ಗ್ರಾಮೀಣ ಪ್ರದೇಶಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಇರುವ ನವೋದಯ ವಿದ್ಯಾಲಯಗಳನ್ನು ಹೆಚ್ಚಿಸಬೇಕಾದ ಅಗತ್ಯವನ್ನೂ ಅವು ಹೇಳಿವೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ನವೋದಯ ವಿದ್ಯಾಲಯಗಳು ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದರೂ, ಇವು ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಗಳಲ್ಲ ಎಂಬುದನ್ನು ಗಮನಿಸಬೇಕು. ಹೆಚ್ಚಿನ ನವೋದಯ ಶಾಲೆಗಳನ್ನು ತೆರೆಯಲು ಖರ್ಚು ಮಾಡುವ ಬದಲು, ಈಗಿರುವ ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಅನುದಾನ ನಿಗದಿ ಮಾಡಲು ರಾಜಕೀಯ ಪಕ್ಷಗಳು ಇನ್ನಷ್ಟು ಬದ್ಧತೆ ತೋರಿಸಬೇಕು.

ಸರ್ಕಾರಿ ಶಾಲೆಗಳಿಗೆ ಮಕ್ಕಳು ಸೇರುವ ಸಂಖ್ಯೆ ಕಡಿಮೆಯಾಗಿ, ಹಲವು ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಬಗ್ಗೆ ಎರಡೂ ಪ್ರಣಾಳಿಕೆಗಳು ಸ್ಪಂದಿಸಿರುವಂತೆ ಕಾಣುತ್ತಿಲ್ಲ. ಶಾಲೆಗಳ ಗುಣಮಟ್ಟ ಹೆಚ್ಚಿಸುವ ವಿಚಾರದಲ್ಲಿ ಬಿಜೆಪಿಯು ತಂತ್ರಜ್ಞಾನ ಮತ್ತು ಶಿಕ್ಷಕರ ಬಗ್ಗೆ ಮಾತನಾಡುತ್ತಿದೆಯೇ ವಿನಾ, ಶಾಲೆಗಳಲ್ಲಿನ ಮೂಲಸೌಕರ್ಯದ ಬಗ್ಗೆ ಅಲ್ಲ. ಶೇಕಡ 9.57ರಷ್ಟು ಪ್ರಾಥಮಿಕ ಶಾಲೆಗಳು ಹಾಗೂ ಶೇಕಡ 44.4ರಷ್ಟು ಹಿರಿಯ ಪ್ರಾಥಮಿಕ ಶಾಲೆಗಳು ಮಾತ್ರ ವಿದ್ಯುತ್ ಸಂಪರ್ಕ ಹಾಗೂ ಕಂಪ್ಯೂಟರ್ ಸೌಲಭ್ಯ ಹೊಂದಿವೆ ಎಂಬುದನ್ನು ಎರಡೂ ಪಕ್ಷಗಳು ಗಮನಿಸಿಲ್ಲ.

ಇನ್ನೊಂದು ಮುಖ್ಯ ವಿಚಾರ. ಶಿಕ್ಷಕರ ತರಬೇತಿಯಲ್ಲಿ ಸುಧಾರಣೆ ತರುವುದಾಗಿ ಎರಡೂ ಪಕ್ಷಗಳು ಹೇಳಿದ್ದರೂ, ಅವು ಈ ಸಮಸ್ಯೆಯನ್ನು ಬಗೆಹರಿಸುವ ಅರ್ಥಪೂರ್ಣ ವಿವರಣೆಗಳನ್ನು ನೀಡಿಲ್ಲ. ಈಗಿನ ವ್ಯವಸ್ಥೆಯನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ಹೇಳದೆಯೇ ಬಿಜೆಪಿ ಪ್ರಣಾಳಿಕೆಯು ಶಿಕ್ಷಕರ ತರಬೇತಿಗೆ ‘ರಾಷ್ಟ್ರೀಯ ಸಂಸ್ಥೆ’ಯನ್ನು ಆರಂಭಿಸಿ, ನಾಲ್ಕು ವರ್ಷಗಳ ಕೋರ್ಸ್‌ ಆರಂಭಿಸಲಾಗುವುದು ಎಂದು ಹೇಳಿದೆ.

ಶಿಕ್ಷಕರ ತರಬೇತಿಗೆ ಸೂಕ್ತವಾದ ಸಂಸ್ಥೆಗಳು ಇಲ್ಲದಿರುವ ಸಮಸ್ಯೆಯನ್ನು ಕಾಂಗ್ರೆಸ್ ಪ್ರಣಾಳಿಕೆ ಗುರುತಿಸಿದೆ. ಶಿಕ್ಷಕರ ತರಬೇತಿ ಸಂಸ್ಥೆಗಳ ಸಂಖ್ಯೆಯನ್ನು ಹಾಗೂ ತರಬೇತಿ ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಅದು ಹೊಂದಿದೆ. ಆದರೆ, ಇಷ್ಟು ಮಾತ್ರ ಮಾಡಿದರೆ ಸಾಕಾಗುವುದಿಲ್ಲ. ಏಕೆಂದರೆ, ಈ ಕ್ರಮಗಳು ಶಿಕ್ಷಕರ ತರಬೇತಿವ್ಯವಸ್ಥೆಯಲ್ಲಿನ ಸಾಂಸ್ಥಿಕ ಲೋಪಗಳನ್ನು ಪರಿಹರಿಸುವುದಿಲ್ಲ, ನ್ಯಾಯಮೂರ್ತಿ ಜೆ.ಎಸ್. ವರ್ಮಾ ಆಯೋಗದ ವರದಿಯು ಸುಧಾರಣೆಗಳಿಗೆ ಸಂಬಂಧಿಸಿದಂತೆ ಗುರುತಿಸಿರುವ ಅಂಶಗಳನ್ನು ಜಾರಿಗೆ ತರಲೂ ನೆರವಾಗುವುದಿಲ್ಲ.

ಭಾರತದ ಆಡಳಿತ ನಡೆಸುವ ಮೂಲಕ ಪಡೆದು ಕೊಂಡ ಅನುಭವದ ಪ್ರಯೋಜನವು ಎರಡೂ ಪ್ರಮುಖ ರಾಷ್ಟ್ರೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಪ್ರತಿಫಲಿಸುತ್ತಿಲ್ಲ. ಬೇಸರದ ಸಂಗತಿಯೆಂದರೆ, ಪಾಲಕರಾಗಿಯೂ ಶಿಕ್ಷಕರಾಗಿಯೂ ಮತ ಚಲಾವಣೆ ಮಾಡುವ ಭಾರತದ ಪ್ರಜೆಗಳಿಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಇರುವ ಅಸ್ಪಷ್ಟ ಶೈಕ್ಷಣಿಕ ಸುಧಾರಣೆಗಳು ಹಾಗೂ ಕಾಂಗ್ರೆಸ್ಸಿನ ಪ್ರಣಾಳಿಕೆಯಲ್ಲಿರುವ ‘ಹೊಸ ಬಾಟಲಿಯಲ್ಲಿನ ಹಳೆ ವೈನ್’ ಹೊರತುಪಡಿಸಿದರೆ ಹೆಚ್ಚಿನ ಆಯ್ಕೆಗಳು ಉಳಿದಿಲ್ಲ.

ಲೇಖಕಿ: ಬೆಂಗಳೂರಿನ ‘ಸೆಂಟರ್ ಫಾರ್ ಲಾ ಅಂಡ್ ಪಾಲಿಸಿ ರಿಸರ್ಚ್‌’ ಸಂಸ್ಥೆಯಲ್ಲಿ ಸಂಶೋಧನಾ ಸಹಾಯಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.