ಮಾದಕವಸ್ತುಗಳ ಸೇವನೆ ಹಾಗೂ ಕಳ್ಳಸಾಗಣೆ ಎಂಬುದು ಅಂತರರಾಷ್ಟ್ರೀಯ ಸಮಸ್ಯೆಯಾಗಿದ್ದು, ಭಾರತವೂ ಇದಕ್ಕೆ ಹೊರತಾಗಿಲ್ಲ. ಮಾದಕವಸ್ತುಗಳ ಉತ್ಪಾದನೆಯ ಮೂಲವಾಗಿ, ಕಳ್ಳಸಾಗಣೆಯ ಕೇಂದ್ರವಾಗಿ ಹಾಗೂ ದೊಡ್ಡ ಮಾರುಕಟ್ಟೆಯಾಗಿ ಭಾರತವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ.
ಮಾದಕವಸ್ತುಗಳ ವ್ಯಸನಕ್ಕೆ ಭಾರತದ ಯುವಕರು ಬಲಿಯಾಗುತ್ತಿದ್ದಾರೆ. ಹಾನಿಕಾರಕ ಪರಿಣಾಮಗಳನ್ನೂ ಎದುರಿಸುತ್ತಿದ್ದಾರೆ. ಸಮಾಜದಲ್ಲಿ ಅಧಿಕಗೊಂಡಿರುವ ಹಿಂಸಾಪ್ರವೃತ್ತಿ ಹಾಗೂ ಅಪರಾಧ ಪ್ರಕರಣಗಳೇ ಇದಕ್ಕೆ ನಿದರ್ಶನ. ದುಡಿಯುವ ವಯಸ್ಸಿನ, ಅಂದರೆ ಸುಮಾರು 18–35 ವಯೋಮಾನದ ಯುವಕರೇ ಹೆಚ್ಚಾಗಿ ಮಾದಕವಸ್ತು ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ದೇಶದ ಮಾನವ ಸಂಪನ್ಮೂಲವೂ ವ್ಯರ್ಥವಾಗುತ್ತಿದೆ. ಈ ವ್ಯಸನವು ಯುವಜನಾಂಗದ ದೈಹಿಕ, ಮಾನಸಿಕ, ನೈತಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ. ಮಾದಕವಸ್ತು ಸೇವನೆ ಎಂಬ ಈ ವಿಪತ್ತನ್ನು ತಡೆಯಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಬಹಳಷ್ಟು ಕ್ರಮಗಳನ್ನು ಕೈಗೊಂಡಿವೆ.
ಮಾದಕವಸ್ತು ಹಾಗೂ ನಿದ್ರಾಜನಕ ವಸ್ತುಗಳ ಬಗೆಗಿನ ಭಾರತದ ನೀತಿಯು ನಮ್ಮ ಸಂವಿಧಾನದ 47ನೇ ವಿಧಿಯಲ್ಲಿನ ತತ್ವಗಳನ್ನು ಆಧರಿಸಿದೆ. ‘ವೈದ್ಯಕೀಯ ಉದ್ದೇಶಗಳಿಗಾಗಿ ಮಾತ್ರವೇ ಡ್ರಗ್ಸ್ ಅನ್ನು ಬಳಸಬೇಕು. ಆರೋಗ್ಯಕ್ಕೆ ಹಾನಿಕಾರಕವಾಗುವ ಡ್ರಗ್ಸ್‌ನ ಬಳಕೆಯನ್ನು ಸರ್ಕಾರವು ನಿಷೇಧಿಸಬೇಕು’ ಎನ್ನುತ್ತದೆ 47ನೇ ವಿಧಿ. ಮಾದಕವಸ್ತು ಸೇವನೆ, ಅಕ್ರಮ ಸಾಗಣೆ ನಿಷೇಧಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಮುಖ್ಯವಾಗಿ ಮೂರು ಕಾಯ್ದೆಗಳಿವೆ. ಅವುಗಳೆಂದರೆ: 1940ರ ಮಾದಕವಸ್ತು ಹಾಗೂ ಸೌಂದರ್ಯವರ್ಧಕಗಳ ಕಾಯ್ದೆ, 1985ರ ಮಾದಕವಸ್ತು ಹಾಗೂ ಉದ್ರೇಕಕಾರಿ ಮಾದಕವಸ್ತುಗಳ ಕಾಯ್ದೆ, 1988ರ ಮಾದಕವಸ್ತು ಅಕ್ರಮ ಸಾಗಣೆ ಹಾಗೂ ಉದ್ರೇಕಕಾರಿ ಮಾದಕವಸ್ತುಗಳ ತಡೆ ಕಾಯ್ದೆ.
ಇಷ್ಟೊಂದು ಕಾನೂನುಗಳಿದ್ದರೂ ದೇಶದ ನಗರಗಳಲ್ಲಿ ಇಂದಿಗೂ ಮಾದಕವಸ್ತುಗಳ ಅಕ್ರಮ ಸಾಗಣೆ ಹಾಗೂ ಸೇವನೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ, ಹೊಸ ಹೊಸ ಸಿಂಥೆಟಿಕ್ ಡ್ರಗ್ಸ್ ಬಂದಿವೆ. ಮಾದಕವಸ್ತುಗಳ ಸಾಗಣೆ ಕೂಡ ಆಧುನಿಕಗೊಂಡಿದೆ. ಆದರೆ, ಮಾದಕವಸ್ತುವಿನ ಸುತ್ತಲ ಈ ಆಧುನಿಕ ಜಾಲವನ್ನು ಭೇದಿಸುವ ಕಾನೂನು ನಮ್ಮಲ್ಲಿ ಇಲ್ಲ. ಅಕ್ರಮ ಸಾಗಣೆಗಾಗಿ ಮನುಷ್ಯರೇ ಬೇಕಾಗಿಲ್ಲ ಎನ್ನುವಷ್ಟು ಡಾರ್ಕ್ ವೆಬ್, ಡೀಪ್ ವೆಬ್‌ಗಳಂಥ ತಂತ್ರಜ್ಞಾನವು ಬೆಳೆದುನಿಂತಿದೆ. ಈ ಜಾಲದಿಂದ ಯುವಕರನ್ನು ಹೊರತರಲು ಈ ಕೆಲವು ಕಾರ್ಯತಂತ್ರಗಳನ್ನು ಕೂಡಲೇ ಕೈಗೊಳ್ಳಬೇಕಾಗಿದೆ. ಅವು ಹೀಗಿವೆ: ಔಷಧ ಹಾಗೂ ವೈಜ್ಞಾನಿಕ ಉದ್ದೇಶಕ್ಕೆ ಬಳಸುವ ಡ್ರಗ್ಸ್‌ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರವಾನಗಿ ನೀಡುತ್ತವೆ. ಕೇಂದ್ರದಲ್ಲಿ ಮಾದಕವಸ್ತು ಆಯುಕ್ತರು ಪರವಾನಗಿ ನೀಡಿದರೆ, ರಾಜ್ಯ ಮಟ್ಟದಲ್ಲಿ ಡ್ರಗ್ಸ್ ನಿಯಂತ್ರಕರು ಪರವಾನಗಿ ನೀಡುತ್ತಾರೆ. 1985ರ ಎನ್‌ಡಿಪಿಎಸ್ ಕಾಯ್ದೆ ಹಾಗೂ 1988ರ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ರಾಜ್ಯ ಪೊಲೀಸರಿಗೆ, ಎನ್‌ಸಿಬಿ ಹಾಗೂ ಕೇಂದ್ರ ಸರ್ಕಾರದ ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ವ್ಯಸನಿಗಳ ಚಿಕಿತ್ಸೆ ಹಾಗೂ ವ್ಯಸನಮುಕ್ತ ಕೇಂದ್ರಗಳ ನಿರ್ವಹಣೆಯ ಜವಾಬ್ದಾರಿಯು ಕೇಂದ್ರ ಆರೋಗ್ಯ ಸಚಿವಾಲಯದ ಮೇಲಿದೆ. ಈ ಎಲ್ಲ ಸಂಸ್ಥೆಗಳ ನಡುವೆ ಅರ್ಥಪೂರ್ಣ ಸಹಕಾರವು ಮಾದಕವಸ್ತು ತಡೆ ಹೋರಾಟದಲ್ಲಿ ಹೆಚ್ಚು ಪರಿಣಾಮಕಾರಿಯಾಗಲಿದೆ.
ಮಾದಕವಸ್ತು ಸಾಗಣೆ ಸಂಬಂಧ ಗಡಿಗಳಲ್ಲಿ ನಡೆಯುವ ಚಟುವಟಿಕೆಗಳ ಕುರಿತ ಗುಪ್ತಚರ ಮಾಹಿತಿ ಗಳನ್ನು ಪರಸ್ಪರ ಹಂಚಿಕೊಳ್ಳುವುದು ಈ ಜಾಲವನ್ನು ಭೇದಿಸಲು ಮುಂದಿಡುವ ಪ್ರಮುಖ ಹೆಜ್ಜೆಯಾಗಬಲ್ಲದು. ಅಕ್ರಮ ಸಾಗಣೆಯಲ್ಲಿನ ಪ್ರಸ್ತುತ ಬೆಳವಣಿಗೆಗಳ ಕುರಿತು, ಇದನ್ನು ತಡೆಗಟ್ಟಲು ಕೈಗೊಳ್ಳಬಹುದಾದ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಅಂತರರಾಜ್ಯ ಪೊಲೀಸರ ಸಭೆಗಳನ್ನು ಆಯೋಜಿಸಬೇಕು. ಇಂಟರ್ ಪೋಲ್ ಹಾಗೂ ವಿಶ್ವಸಂಸ್ಥೆಯ ಮಾದಕವಸ್ತು ಹಾಗೂ ಅಪರಾಧ ಕಚೇರಿಯೊಂದಿಗಿನ (ಯುಎನ್‌ಒಡಿಸಿ) ನಮ್ಮ ಸಹಭಾಗಿತ್ವವನ್ನು ಇನ್ನಷ್ಟು ಬಿಗಿಗೊಳಿಸಿಕೊಳ್ಳಬೇಕು.
ಪೆಡ್ಲರ್‌ಗಳು ಹಾಗೂ ಕಳ್ಳಸಾಗಣೆದಾರರನ್ನು ಬಂಧಿಸಲಾಗುತ್ತದಾದರೂ ಮಾದಕವಸ್ತುವಿನ ಪೂರೈಕೆಯ ಮೂಲವನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಸೋಲುತ್ತಾರೆ. ಈ ಕಾರ್ಯಕ್ಕೆ ಹೆಚ್ಚಿನ ಪರಿಶ್ರಮದ ಅಗತ್ಯವಿದೆ. ಭಾರತದಲ್ಲಿ ಇದನ್ನು ಉತ್ಪಾದಿಸುವ ಸ್ಥಳಗಳು, ಅಕ್ರಮ ಸಾಗಣೆ ಮಾರ್ಗದ ನಕ್ಷೆಯನ್ನು ರೂಪಿಸಿಕೊಳ್ಳಬೇಕಿದೆ. ಕರಾವಳಿ ಪ್ರದೇಶದಲ್ಲಿ ಕಣ್ಗಾವಲು ವ್ಯವಸ್ಥೆಯನ್ನು ಇನ್ನಷ್ಟು ತೀವ್ರಗೊಳಿಸಬೇಕಿದೆ. ವಿಮಾನ ನಿಲ್ದಾಣದ ಕಣ್ಗಾವಲು ವ್ಯವಸ್ಥೆಯನ್ನೂ ಇನ್ನಷ್ಟು ಬಿಗಿಗೊಳಿಸಬೇಕಿದೆ. ಮಾದಕವಸ್ತು ಪತ್ತೆ ತಂತ್ರಜ್ಞಾನವನ್ನು ಆಧುನಿಕಗೊಳಿಸಿಕೊಳ್ಳಬೇಕಿದೆ.
ಡಾರ್ಕ್ ವೆಬ್ ಮಾರುಕಟ್ಟೆಯಲ್ಲಿನ ಕಾರ್ಯಚಟುವಟಿಕೆಗಳ ಕುರಿತು ನಿಗಾ ಇರಿಸಲು ಅತ್ಯಾಧುನಿಕ ಸೈಬರ್ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿದೆ. ಈ ವೆಬ್ ಅನ್ನು ನಿಷ್ಕ್ರಿಯಗೊಳಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಪಡೆದುಕೊಳ್ಳಬಹುದು. ಮಾದಕವಸ್ತುವಿನ ಹೊಸ ಟ್ರೆಂಡ್‌ಗಳನ್ನು ಪತ್ತೆ ಮಾಡಲು ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಜಾರಿ ಮಾಡಬೇಕಿದೆ.
ಮಾದಕವಸ್ತುಗಳ ಅಕ್ರಮ ಸಾಗಣೆ ಕುರಿತು ತನಿಖೆ ನಡೆಸುವ ಸವಾಲನ್ನು ಸಶಕ್ತವಾಗಿ ಎದುರಿಸಲೆಂದೇ ರಾಜ್ಯ ಪೊಲೀಸರಲ್ಲಿ ವಿಶೇಷ ಕೌಶಲಗಳನ್ನು ಅಭಿವೃದ್ಧಿಪಡಿಸಬೇಕಿದೆ. ಸಂಘಟಿತವಾಗಿ ಅಪರಾಧ ಎಸಗುವ ಗುಂಪುಗಳನ್ನು ಪತ್ತೆ ಹಚ್ಚುವಂಥ ತನಿಖಾ ತಂತ್ರಗಾರಿಕೆಯನ್ನು ಕಲಿಸಲು ತನಿಖಾಧಿಕಾರಿಗೆ ತರ
ಬೇತಿ ನೀಡಬೇಕು. ಮಾದಕವಸ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳು ನೀಡಿದ ತೀರ್ಪಿನ ಅರಿವನ್ನೂ ತನಿಖಾಧಿಕಾರಿಗೆ ನೀಡಬೇಕು. ಆಗ ತನಿಖೆಯು ಪರಿಣಾಮಕಾರಿ ಆಗುವುದರ ಜೊತೆಗೆ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆಯೂ ಇರಲಿದೆ. ಕ್ರಿಪ್ಟೊ ಕರೆನ್ಸಿ ಸಂಬಂಧ ದೇಶದ ಕಾನೂನನ್ನು ಇನ್ನಷ್ಟು ಬಲಗೊಳಿಸಬೇಕು.
ಎಷ್ಟು ಪ್ರಮಾಣದ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಎನ್ನುವುದಕ್ಕೆ ಅನುಗುಣವಾಗಿ ವ್ಯಕ್ತಿಗೆ ಶಿಕ್ಷೆ ವಿಧಿಸುವ ಕಾರ್ಯವಾಗಬೇಕಿದೆ. ಮಾದಕವಸ್ತು ಅಕ್ರಮ ಸಾಗಣೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಕಾನೂನುಗಳನ್ನು ಮರುಪರಿಶೀಲಿಸಬೇಕಾಗಿದೆ. ಜೊತೆಗೆ ಇವುಗಳನ್ನು ಇನ್ನಷ್ಟು ಬಿಗಿಗೊಳಿಸಬೇಕಾಗಿದೆ. ಅನುಮಾನಾಸ್ಪದ ರೀತಿಯಲ್ಲಿ ಹಣ ವರ್ಗಾವಣೆಆಗುತ್ತಿದ್ದರೆ, ಇಂಥ ವ್ಯವಹಾರಗಳ ಕುರಿತು ಮಾಹಿತಿ ನೀಡದ ಬ್ಯಾಂಕಿಂಗ್ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಾದಕವಸ್ತು ಮಾಫಿಯಾದ ಸದಸ್ಯರು ಹಾಗೂ ಪದೇ ಪದೇ ಅಪರಾಧಗಳನ್ನು ಎಸಗುವವರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗಬೇಕು.
ಯುವಕರು, ಅದರಲ್ಲಿಯೂ ಖಿನ್ನತೆಯಿಂದ ಬಳಲುತ್ತಿರುವವರು ಹಾಗೂ ಅಭದ್ರತೆಯ ಭಾವ ಇರುವವರು ಸುಲಭವಾಗಿ ಪೆಡ್ಲರ್‌ಗಳ ಬಲೆಗೆ ಬೀಳುತ್ತಾರೆ. ಜಾಗೃತಿ ಮೂಡಿಸಲು ಶೈಕ್ಷಣಿಕ ಸಂಸ್ಥೆಗಳು, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಪೊಲೀಸ್ ಇಲಾಖೆಯೂ ಕೈಜೋಡಿಸಬೇಕು. ಉಪನ್ಯಾಸಗಳ ಮೂಲಕ, ಸಿನಿಮಾ ಪ್ರದರ್ಶನ ಹಾಗೂ ಅಕ್ರಮ ಸಾಗಣೆ ಪರಿಣಾಮಗಳ ಕುರಿತ ಬರಹಗಳನ್ನು ನೀಡುವುದರ ಮೂಲಕ ಯುವಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಜಾಗೃತಿ ಮೂಡಿಸುವ ಹೋರಾಟದಲ್ಲಿ ಎನ್‌ಜಿಒಗಳೊಂದಿಗಿನ ಸಹಭಾಗಿತ್ವವೂ ಸಹಕಾರಿ
ಆಗುತ್ತದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ನಾಯಕರನ್ನು ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದೂ ಮುಖ್ಯವಾಗುತ್ತದೆ.
ಹಲವು ಎನ್‌ಜಿಒಗಳು ವ್ಯಸನಮುಕ್ತ ಕೇಂದ್ರಗಳನ್ನು ನಡೆಸುತ್ತಿವೆ. ಆದರೆ, ಈ ಕೆಲವು ಕೇಂದ್ರಗಳು ದುಬಾರಿಯಾಗಿವೆ. ಅದಕ್ಕಾಗಿ, ಸರ್ಕಾರವೇ ಜಿಲ್ಲಾ ಮಟ್ಟದಲ್ಲಿ ವ್ಯಸನಮುಕ್ತ ಕೇಂದ್ರಗಳನ್ನು ತೆರೆಯಬಹುದು. ಇಂಥ ಕೇಂದ್ರಗಳು ಹಾಗೂ ಆಪ್ತ ಸಮಾಲೋಚನೆಯು ಹಲವು ಜೀವಗಳನ್ನು ಉಳಿಸಬಹುದು. ಈ ಚಿಕಿತ್ಸೆಯು ಕೈಗೆಟಕುವ ದರದಲ್ಲಿ ಇರಬೇಕು. ಜೊತೆಗೆ, ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನೂ ನೀಡುವಂತಿರಬೇಕು.ಈ ಎಂಟೂ ಕಾರ್ಯತಂತ್ರಗಳು ಕೆಲವು ಉದಾಹರಣೆಗಳಷ್ಟೆ. ಮಾದಕವಸ್ತುವಿನ ಅಕ್ರಮ ಸಾಗಣೆಯು ವ್ಯಕ್ತಿಯ ಮೇಲೆ ಮಾತ್ರವಲ್ಲದೆ ಇಡೀ ಸಮಾಜದ ಮೇಲೇ ಪರಿಣಾಮ ಬೀರುತ್ತದೆ. ಒಂದಿಡೀ ಜನಾಂಗವನ್ನು ಹಾಳುಗೆಡಹುವಂಥ ಶಕ್ತಿ ಇದಕ್ಕಿದೆ. ಆದ್ದರಿಂದ, ಸಮಾಜದಿಂದ ಈ ವಿಪತ್ತನ್ನು ಹೊಡೆದಟ್ಟಲು ತನಿಖಾ ಸಂಸ್ಥೆಗಳ ಜೊತೆ ಸಮಾಜದ ಪ್ರತಿ ಪ್ರಜೆಯೂ ಕೈಜೋಡಿಸುವುದು ಅತ್ಯಗತ್ಯ.
ಲೇಖಕ: ಪೊಲೀಸ್ ಮಹಾನಿರ್ದೇಶಕ
ಆರ್ಥಿಕ ಅಪರಾಧಗಳ ವಿಭಾಗ, ಸಿಐಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.