ADVERTISEMENT

ವಿಶ್ಲೇಷಣೆ | ಶಿಕ್ಷಕರ ಸ್ಮರಣೆ: ಹೊಸ ಬಗೆ ಸಾಧ್ಯವೇ?

ಶಿಕ್ಷಕರ ದಿನಾಚರಣೆಯನ್ನು ಇನ್ನಷ್ಟು ಅರ್ಥಪೂರ್ಣ ಆಗಿಸುವ ದಿಕ್ಕಿನಲ್ಲಿ ಪ್ರಯತ್ನ ನಡೆಯಬೇಕಿದೆ

ಅರವಿಂದ ಚೊಕ್ಕಾಡಿ
Published 7 ಅಕ್ಟೋಬರ್ 2024, 23:30 IST
Last Updated 7 ಅಕ್ಟೋಬರ್ 2024, 23:30 IST
   

ಜಿಲ್ಲೆಯೊಂದರ ವಿವಿಧ ತಾಲ್ಲೂಕುಗಳಲ್ಲಿ ಮತ್ತು ಜಿಲ್ಲಾ ಕೇಂದ್ರದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಗಳ ಎಲ್ಲ ಆಮಂತ್ರಣ ಪತ್ರಿಕೆಗಳನ್ನು ಒಟ್ಟಿಗೆ ಇಟ್ಟುಕೊಂಡು ನೋಡುವುದೇ ಒಂದು ಸಂಭ್ರಮ.‌ ಎಲ್ಲ ತಾಲ್ಲೂಕುಗಳಲ್ಲೂ ಜಿಲ್ಲಾ ಕೇಂದ್ರದಲ್ಲೂ ನಡೆಯುವ ಕಾರ್ಯಕ್ರಮಗಳಲ್ಲಿ ಅದೇ ಅಭ್ಯಾಗತರು ಇರುತ್ತಾರೆ! ಕಾರ್ಯಕ್ರಮಗಳೆಲ್ಲ ಒಂದೇ ಸಮಯಕ್ಕೆ ನಿಗದಿಯಾಗಿರುತ್ತವೆ. ಒಬ್ಬನೇ ವ್ಯಕ್ತಿ ಒಂದೇ ಸಮಯದಲ್ಲಿ ಎಲ್ಲ ಸ್ಥಳಗಳಲ್ಲೂ ಇರುವುದು ಸಾಧ್ಯವಿಲ್ಲವೆಂದು ಆಹ್ವಾನಿತರಾದವರಿಗೂ ಆಹ್ವಾನಿಸಿದವರಿಗೂ ಆಮಂತ್ರಣ ಪತ್ರಿಕೆ ನೋಡುವವರಿಗೂ ಗೊತ್ತಿರುತ್ತದೆ.‌ ಆದರೆ ಅವು ಶಿಷ್ಟಾಚಾರದ ಪ್ರಕಾರ ನಮೂದಿಸಬೇಕಾದ ಹೆಸರುಗಳು.‌ ನೂರು ವರ್ಷಗಳ ನಂತರದ ಜನರಿಗೆ ಈ ಆಮಂತ್ರಣ ಪತ್ರಿಕೆಗಳು ನಮ್ಮ ಚಿಂತನಾಶೂನ್ಯತೆಗೆ ಪುರಾವೆಯಾಗಿ ಸಿಗುತ್ತವೆ. ಶಿಕ್ಷಕರ ದಿನಾಚರಣೆಯ ಆಮಂತ್ರಣ ಪತ್ರಿಕೆಯೇ ಈ ಮಾದರಿಯಲ್ಲಿರುವುದು ನಮ್ಮ ಕಾಲಮಾನದ ಸುಶಿಕ್ಷಿತರ ವಿವೇಕದ ಮಟ್ಟ ಏನು ಎಂಬುದನ್ನು ಸೂಚಿಸುತ್ತದೆ. ಇಂಥವರು ಬರಲು ಸಾಧ್ಯವಿಲ್ಲ ಎಂದು ಖಚಿತವಾಗಿ ಗೊತ್ತಿರುವಾಗ ಹೆಸರನ್ನು ಕೈಬಿಡಲು ಸಾಧ್ಯವಾಗುವ ಹಾಗೆ ಶಿಷ್ಟಾಚಾರದಲ್ಲಿ ಪರಿಷ್ಕರಣೆ ತರಲು ಸಾಧ್ಯವಾದೀತೆ?

ಸರ್ವಪಲ್ಲಿ ರಾಧಾಕೃಷ್ಣನ್ ಅವರ ಅಭಿಮಾನಿಗಳಲ್ಲಿ ಕೆಲವರು ‘ನಿಮ್ಮ ಜನ್ಮದಿನವನ್ನು ಆಚರಿಸುತ್ತೇವೆ’ ಎಂದಾಗ, ರಾಧಾಕೃಷ್ಣನ್ ಅವರು, ‘ನನ್ನ ಜನ್ಮದಿನ ಎಂದು ಬೇಡ. ಆಚರಿಸುವುದಿದ್ದರೆ ನನ್ನ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸಿ’ ಎಂದರು. ಅದರ ಪರಿಣಾಮವಾಗಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ರಾಧಾಕೃಷ್ಣನ್ ಅವರನ್ನು ದೊಡ್ಡ ಮನುಷ್ಯ ಎಂದು ಹೊಗಳಲಾಗುತ್ತದೆ. ಆದರೆ ರಾಧಾಕೃಷ್ಣನ್ ಅವರ ತತ್ವಶಾಸ್ತ್ರೀಯ ಕೃತಿಗಳಲ್ಲಿ ಯಾವುದನ್ನೂ ಪರಿಚಯಿಸುವ ವ್ಯವಸ್ಥೆ ಶಿಕ್ಷಕರ ದಿನಾಚರಣೆಯಲ್ಲಿ ಇರುವುದಿಲ್ಲ. ಅಂದರೆ ರಾಧಾಕೃಷ್ಣನ್ ಅವರ ಚಿಂತನೆಗಳನ್ನು ತಿಳಿಯದೆಯೇ ಅವರನ್ನು ಹೊಗಳುವ ಪದ್ಧತಿಯನ್ನು ಅನುಸರಿಸಲಾಗುತ್ತದೆ! ಅಕ್ಟೋಬರ್ 5 ವಿಶ್ವ ಶಿಕ್ಷಕರ ದಿನ. ಈ ಸಂದರ್ಭವು, ಭಾರತದಲ್ಲಿ ಸೆಪ್ಟೆಂಬರ್ 5ರಂದು ಆಚರಿಸಲಾಗುತ್ತಿರುವ ಶಿಕ್ಷಕರ ದಿನದ ಬಗ್ಗೆ ಒಂದಿಷ್ಟು ಅವಲೋಕನ ನಡೆಸಲು ಕಾರಣವಾಯಿತು.

ಎಲ್ಲ ವ್ಯವಸ್ಥೆಗಳ ಹಾಗೆ ಶಿಕ್ಷಕರ ದಿನಾಚರಣೆಯೂ ಸಂಕೀರ್ಣವಾಗಿದೆ. ಶಿಕ್ಷಕರ ದಿನಾಚರಣೆ ಎಂದು ಮಾಡುವುದಾದರೆ ಅಂಗನವಾಡಿ ಕಾರ್ಯಕರ್ತೆಯರಿಂದ ತೊಡಗಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರವರೆಗೆ ಎಲ್ಲರೂ ಒಂದು ದಿನದ ಮಟ್ಟಿಗಾದರೂ ಒಟ್ಟಾಗಿ ಸೇರುವ ವಿನ್ಯಾಸದಲ್ಲಿ ಮಾಡಬೇಕು. ಆಗ ಶಿಕ್ಷಣದ ವಿವಿಧ ಸ್ತರಗಳಲ್ಲಿ ಪರಿಸ್ಥಿತಿ ಹೇಗಿದೆ ಎಂದಾದರೂ ಚರ್ಚಿಸಲು ಒಂದು ವೇದಿಕೆ ಸೃಷ್ಟಿಯಾಗುತ್ತದೆ. ಆದರೆ ಈಗ ನಡೆಯುವ ಶಿಕ್ಷಕ ದಿನಾಚರಣೆಗಳ ವಿನ್ಯಾಸವೇ ಬೇರೆ. ಪ್ರಾಥಮಿಕ ಶಾಲೆಯ ಶಿಕ್ಷಕರಿಗೆ ಕಡ್ಡಾಯ, ಪ್ರೌಢಶಾಲೆಯವರು ಬೇಕಾದರೆ ಹೋಗಬಹುದು, ಕಾಲೇಜಿನವರಿಗೆ ‘ಇಲ್ಲ’ ಎನ್ನುವ ಮಾದರಿಯ ರೂಪದಲ್ಲಿದೆ. ಅಲ್ಲದೆ ಅನುದಾನರಹಿತ ಶಾಲೆಯವರಿಗೂ ‘ಇಷ್ಟ ಇದ್ದರೆ ಬನ್ನಿ. ಇಲ್ಲದಿದ್ದರೆ ಬೇಡ’ ಎಂಬ ಮಾದರಿ ಜಾರಿಯಲ್ಲಿದೆ. ಅಂದರೆ ಶಿಕ್ಷಕರ ದಿನಾಚರಣೆಯೇ ಶಿಕ್ಷಕರನ್ನು ಸಮಾನತೆಯ ತಳಹದಿಗೆ ತರುವ ಬದಲು ಅಸಮಾನತೆಯ ತಳಹದಿಯಲ್ಲಿ ಕಾಣುತ್ತದೆ. ಆಗ ಖಾಸಗಿ ಶಾಲೆಯವರದ್ದೊಂದು ಶಿಕ್ಷಕರ ದಿನಾಚರಣೆ, ವಸತಿ ಶಾಲೆಯವರದ್ದೊಂದು ಶಿಕ್ಷಕರ ದಿನಾಚರಣೆ, ಪದವಿಪೂರ್ವ ಕಾಲೇಜಿನವರದ್ದೊಂದು ಶಿಕ್ಷಕರ ದಿನಾಚರಣೆ, ಪದವಿಯವರದ್ದು ಮತ್ತೊಂದು, ವಿಶ್ವವಿದ್ಯಾಲಯದವರದ್ದು ಇನ್ನೊಂದು, ಖಾಸಗಿ ಶಾಲೆ–ಕಾಲೇಜು–ವಿಶ್ವವಿದ್ಯಾಲಯದವರದ್ದು ಪ್ರತ್ಯೇಕ ಶಿಕ್ಷಕ ದಿನಾಚರಣೆಗಳು ಆಗುತ್ತವೆ. ತಿಂಗಳಿಡೀ ಅಲ್ಲಲ್ಲಿ ಶಿಕ್ಷಕರ ದಿನಾಚರಣೆಗಳು ಇರುತ್ತವೆ.

ADVERTISEMENT

ಎಲ್ಲ ಕಾರ್ಯಕ್ರಮಗಳ ಹಾಗೆ ಶಿಕ್ಷಕರ ದಿನಾಚರಣೆಗೂ ಅದ್ದೂರಿತನದ ಪ್ರವೇಶ ಆಗಿದೆ. ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲು ಹಣ ಬೇಕು. ಸರ್ಕಾರವೇ ಸಂಪೂರ್ಣ ಖರ್ಚು ವಹಿಸಿಕೊಳ್ಳದೆ ಇದ್ದಾಗ ಸಂಘಟಕರಿಗೆ ಹಣಕ್ಕಾಗಿ ಯಾರಾದರೂ ಪ್ರಾಯೋಜಕರನ್ನು ಹುಡುಕುವ ಜವಾಬ್ದಾರಿ ಬರುತ್ತದೆ. ಕೊನೆಗೆ ಏನಲ್ಲದಿದ್ದರೆ ಆಯಾ ಭಾಗದ ಶಾಸಕರನ್ನು ಕೇಳಿಕೊಳ್ಳುವ ಕೆಲಸ ನಡೆಯುತ್ತದೆ.‌ ಹಣ ಪಡೆದಾಗ ಹಣ ಕೊಟ್ಟವರು ಗಣ್ಯ ವ್ಯಕ್ತಿಯಾಗುವುದು ಸಹಜ. ಆದರೆ ಶಿಕ್ಷಕರ ದಿನಾಚರಣೆಯಲ್ಲಿ ಒಬ್ಬ ನಿವೃತ್ತ ಅಥವಾ ಸಮರ್ಥ ಶಿಕ್ಷಕನೇ ಗಣ್ಯ ವ್ಯಕ್ತಿಯಾಗಿ ಉಳಿಯಲು ಆಗುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ.‌ ಪ್ರತಿಭಾವಂತ ಶಿಕ್ಷಕರಿಗೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಇರುತ್ತದೆ. ಆದರೆ ಸನ್ಮಾನಿಸುವ ಗಣ್ಯ ವ್ಯಕ್ತಿ ಬೇರೆಯೇ ಆಗಿರುತ್ತಾರೆ. ಹಣದ ವ್ಯವಹಾರ ಬಂದ ಕೂಡಲೇ ಅದರ ಉಪಉತ್ಪನ್ನವಾಗಿ ಬರುವ ಇನ್ನೂ ಅನೇಕ ಸವಾಲು-ಸಮಸ್ಯೆಗಳನ್ನು ಶಿಕ್ಷಕರ ದಿನಾಚರಣೆಯ ಸಂಘಟಕರು ಎದುರಿಸಬೇಕಾಗುತ್ತದೆ. ಕೆಲವೆಡೆಯಲ್ಲಿ ‘ಶಿಕ್ಷಕರಿಗೆ ಜಯವಾಗಲಿ’ ಎಂದು ಶಿಕ್ಷಕರೇ ಘೋಷಣೆ ಕೂಗಿಕೊಂಡು ಮೆರವಣಿಗೆ ಹೋಗುವಂತಹ ತಮಾಷೆಗಳೆಲ್ಲ ನಡೆಯುತ್ತವೆ. ಸಮಾರಂಭದ ಭಾಷಣಗಳು ಸಾಮಾನ್ಯವಾಗಿ ಶಿಕ್ಷಕರಿಗೆ ಸನ್ಮಾನ ಮಾಡಿ ಅಭಿನಂದಿಸಿ ಶಿಕ್ಷಕರಿಗೆ ಹೇಳುವ ಬುದ್ಧಿಮಾತುಗಳು ಅಥವಾ ಉಪದೇಶಗಳ ರೂಪದಲ್ಲಿರುತ್ತವೆ. ಇದನ್ನು ಯಾರಾದರೂ ನಿವೃತ್ತ ಶಿಕ್ಷಕರೋ ವಿದ್ವಾಂಸರೋ ಹೇಳುವುದಕ್ಕೂ, ಶಿಕ್ಷಣ ಕ್ಷೇತ್ರದ ಅನುಭವವೇ ಇಲ್ಲದ ಗಣ್ಯ ವ್ಯಕ್ತಿಗಳು ಹೇಳುವುದಕ್ಕೂ ವ್ಯತ್ಯಾಸ ಇರುತ್ತದೆ. ಅಂತಿಮವಾಗಿ ಇವೆಲ್ಲವೂ ಯಾವುದೇ ಉದ್ದೇಶ ಈಡೇರಿಸಲಾಗದ ಒಂದು ಸಂಪ್ರದಾಯವಾಗಿ ಮುಗಿಯುತ್ತವೆ. ಹೀಗಾಗಿ ಶಿಕ್ಷಕರ ದಿನಾಚರಣೆಯಲ್ಲಿ ಮುಂದಿನ ದಿನಗಳಲ್ಲಿ ಕೆಲವೊಂದು ಪರಿಷ್ಕರಣೆಗಳನ್ನು ಮಾಡಿಕೊಂಡರೆ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸಬಹುದೇನೊ.

ವ್ಯವಸ್ಥೆ ದೊಡ್ಡದಾಗಿ ಬೆಳೆದಾಗ ಒಳ್ಳೆಯ ಶಿಕ್ಷಕರು ಎಲ್ಲಿದ್ದಾರೆ ಎಂದು ವ್ಯವಸ್ಥೆಗೇ ಗುರುತಿಸಲು ಕಷ್ಟವಾಗ
ಬಹುದು. ಆಗ ಒಬ್ಬ ಶಿಕ್ಷಕ ತಮ್ಮ ಅರ್ಹತೆಯನ್ನು ಪರಿಗಣಿಸಿ ಎಂದು ಕೇಳುವುದರಲ್ಲಿ ತಪ್ಪೇನಿಲ್ಲ. ಅದನ್ನು ಅರ್ಜಿ ಹಾಕಿ ಪಡೆದ ಪ್ರಶಸ್ತಿ ಎಂದು ಮೂದಲಿಸಬೇಕಾಗಿಲ್ಲ. ಅರ್ಜಿ ಹಾಕಿದರೂ ಪರಿಶೀಲಿಸಲು ಪರಿಶೀಲನಾ ಸಮಿತಿ ಇರುತ್ತದಲ್ಲ? ಆದರೆ ಈ ಪ್ರಕ್ರಿಯೆ ಹೆಚ್ಚು ಗೌರವಾನ್ವಿತ ಆಗಿರಬೇಕು. ಅರ್ಜಿ ಹಾಕಿದ ಶಿಕ್ಷಕರೇ ತಾವು ಮಾಡಿದ ಕೆಲಸಗಳ ದಾಖಲೆಗಳನ್ನು ಸಿದ್ಧಪಡಿಸಿ ಕೊಡುವ ಕಾರಕೂನರಾಗದ ಹಾಗೆ ನೋಡಿಕೊಳ್ಳಬೇಕು.

ಅರ್ಜಿ ಸಲ್ಲಿಸಿದ ಶಿಕ್ಷಕರ ವಿವರಗಳನ್ನು ಆಯ್ಕೆ ಸಮಿತಿಯೇ ತರಿಸಿಕೊಳ್ಳಬೇಕು. ಆ ಶಿಕ್ಷಕರಲ್ಲಿ ಕಲಿತು ಹೋದ ವಿದ್ಯಾರ್ಥಿಗಳ ವರದಿ ತೆಗೆದುಕೊಳ್ಳಬೇಕು. ವರ್ತಮಾನದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಾದಾಗ ಅವರಿಗೆ ಪ್ರಿಯವಾದದ್ದನ್ನು ಮಾಡುವ ಶಿಕ್ಷಕರು ಮುಖ್ಯರಾಗುತ್ತಾರೆ. ಶಿಕ್ಷಕರ ಬೋಧನಾ ದಕ್ಷತೆಯನ್ನೇ ಮೌಲ್ಯಮಾಪನ ಮಾಡಬಲ್ಲಷ್ಟು ಸಮರ್ಥರಾಗಿರುವುದಿಲ್ಲ. ಕಲಿಕೆ ಮುಗಿದು ಸುಮಾರು ಹತ್ತು ವರ್ಷ ಕಳೆದ ಹಿರಿಯ ವಿದ್ಯಾರ್ಥಿಗಳಾದರೆ ಅವರಿಗೆ ಶಿಕ್ಷಕರ ಬೋಧನಾ ದಕ್ಷತೆಯನ್ನು ಅರ್ಥೈಸುವ ಸಾಮರ್ಥ್ಯ ಬಂದಿರುತ್ತದೆ. ಹೀಗೆ ಆಯ್ಕೆ ಮಾಡಿದ ನಂತರ ರಾಜ್ಯ ಮಟ್ಟದಲ್ಲಿ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ‌ ಶಿಕ್ಷಕರಿಗೆ ಪ್ರಶಸ್ತಿ ಕೊಡಬೇಕು.

ಜಿಲ್ಲಾ ಮಟ್ಟ ಮತ್ತು ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ರದ್ದುಪಡಿಸುವುದು ಸೂಕ್ತ. ಬದಲಿಗೆ ರಾಧಾಕೃಷ್ಣನ್ ಅವರ ಜನ್ಮದಿನದಂದೇ ಆಯಾ ಶಾಲೆ, ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ವಿದ್ಯಾರ್ಥಿ ಸಂಘಗಳು ಹಳೆಯ ವಿದ್ಯಾರ್ಥಿ ಸಂಘದೊಂದಿಗೆ ಸೇರಿಕೊಂಡು ಶಿಕ್ಷಕರ ದಿನಾಚರಣೆಯನ್ನು ಮಾಡುವುದು ಸೂಕ್ತ. ಶಿಕ್ಷಕರ ದಿನಾಚರಣೆಯ ನೇತೃತ್ವವನ್ನು ವಿದ್ಯಾರ್ಥಿಗಳೇ ವಹಿಸುವುದು ಸಮಂಜಸ. ಅಲ್ಲಿಗೆ ಆಯಾ ಶಾಲೆ, ಕಾಲೇಜು ವ್ಯಾಪ್ತಿಯ ಸಾರ್ವಜನಿಕರು, ಜನಪ್ರತಿನಿಧಿಗಳು ಬಂದು ಶಿಕ್ಷಕರ ದಿನವನ್ನು ಸಂಭ್ರಮದಿಂದ ಆಚರಿಸಬಹುದು. ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಂದ ಏನನ್ನು ನಿರೀಕ್ಷಿಸುತ್ತಾರೆ ಎಂದು ವಿದ್ಯಾರ್ಥಿಗಳೊಂದಿಗೆ ಶಿಕ್ಷಕರ ಮುಕ್ತ ಸಂವಾದ ನಡೆಯಬೇಕು.‌ ಊರಿನಲ್ಲಿರುವ ನಿವೃತ್ತ ಶಿಕ್ಷಕರು, ಶಿಕ್ಷಣ ಕ್ಷೇತ್ರದ ಅನುಭವ ಉಳ್ಳವರು, ಜನಪ್ರತಿನಿಧಿಗಳು ಸೇರಿಕೊಂಡು ಉತ್ತಮ ಶಿಕ್ಷಕರ ಲಕ್ಷಣಗಳ ಬಗ್ಗೆ, ಶಿಕ್ಷಣದ ಗುಣಮಟ್ಟದ ಬಗ್ಗೆ ಸಂವಾದಗಳನ್ನು ನಡೆಸಬೇಕು. ಜೊತೆಗೆ ಶಿಕ್ಷಕರ ಪ್ರತಿಭಾ ಪ್ರದರ್ಶನ, ಪ್ರತಿಭಾವಂತ ಶಿಕ್ಷಕರಿಗೆ ಸನ್ಮಾನ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಇವೆಲ್ಲವನ್ನೂ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಮಾಡುವುದು ಹೆಚ್ಚು ಅರ್ಥಪೂರ್ಣ.‌ ಶಿಕ್ಷಕರ ದಿನಾಚರಣೆಯ ಸಂದೇಶಗಳು ವಿದ್ಯಾರ್ಥಿಗಳನ್ನು ಪರಿಣಾಮಕಾರಿಯಾಗಿ ತಲುಪಲು ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.