ದೇಶದಾದ್ಯಂತ ಈಗ ಎಲೆಕ್ಟ್ರಿಕ್ ವಾಹನಗಳದ್ದೇ ಸುದ್ದಿ. ಎರಡು ಹಾಗೂ ಮೂರು ಚಕ್ರದ ವಾಹನಗಳ ಮಾರುಕಟ್ಟೆಯನ್ನು ಎಲೆಕ್ಟ್ರಿಕ್ ವಾಹನಗಳಿಂದ ತುಂಬಿ ತುಳುಕುವಂತೆ ಮಾಡುವುದರ ಮೂಲಕ ಮಾಲಿನ್ಯ ಮತ್ತು ವಾತಾವರಣದ ಬಿಸಿಯನ್ನು ನಿಯಂತ್ರಿಸುವ ಇರಾದೆ ನಮ್ಮ ಆಡಳಿತದ್ದು.
ಇಪ್ಪತ್ತೊಂದಕ್ಕೂ ಹೆಚ್ಚು ರಾಜ್ಯಗಳು ಎಲೆಕ್ಟ್ರಿಕ್ ವಾಹನ ನೀತಿ ರೂಪಿಸಿದ್ದು, ಹೊಗೆ ಉಗುಳುವ ದ್ವಿಚಕ್ರ, ತ್ರಿಚಕ್ರ ವಾಹನಗಳನ್ನು ರಸ್ತೆಯಿಂದ ಹೊರಹಾಕುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿವೆ. ಗ್ಲಾಸ್ಗೊ ಒಪ್ಪಂದಕ್ಕೆ ಸಹಿ ಹಾಕಿರುವ ನಾವು, 2030ರ ವೇಳೆಗೆ ನೂರು ಕೋಟಿ ಟನ್ ಇಂಗಾಲದ ಹೊಮ್ಮುವಿಕೆಯನ್ನು ಕಡಿಮೆ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದೇವೆ. ದೇಶದ ಪ್ರತೀ ನಗರಕ್ಕೂ ತನ್ನದೇ ಆದ ಶುದ್ಧ ಗಾಳಿ ಕ್ರಿಯಾ ಯೋಜನೆ ರೂಪಿಸಿದ್ದೇವೆ. ಆ ದಿಸೆಯಲ್ಲಿ 132 ನಗರಗಳು ಈಗಾಗಲೇ ಕಾರ್ಯಪ್ರವೃತ್ತವಾಗಿವೆ.
ಆಂಧ್ರಪ್ರದೇಶ, ಕೇರಳ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಈ ದಶಕದ ಕೊನೆಯ ವೇಳೆಗೆ ತಲಾ ಹತ್ತು ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಯೋಜನೆ ತಯಾರಿಸಿವೆ. ಮೇಘಾಲಯ, ಗೋವಾ, ಹರಿಯಾಣ, ದೆಹಲಿ, ಒಡಿಶಾ, ಅಸ್ಸಾಂ, ಪಂಜಾಬ್ ಮತ್ತು ಮಹಾರಾಷ್ಟ್ರ ಇನ್ನೈದು ವರ್ಷಗಳಲ್ಲಿ ತಮ್ಮ ರಾಜ್ಯದ ರಸ್ತೆಗಳ ಮೇಲೆ ಶೇ 30ರಷ್ಟು ಎಲೆಕ್ಟ್ರಿಕ್ ವಾಹನಗಳು ಸಂಚರಿಸಲಿವೆ ಎಂದಿವೆ.
ಕೇಂದ್ರ ಸರ್ಕಾರ ಇದಕ್ಕಾಗಿ ₹ 10 ಸಾವಿರ ಕೋಟಿ ಬಂಡವಾಳ ಮೀಸಲಿಟ್ಟಿದೆ. ಇದರಿಂದ 10 ಲಕ್ಷ ದ್ವಿಚಕ್ರ, 5 ಲಕ್ಷ ತ್ರಿಚಕ್ರ ವಾಹನಗಳು, 55 ಸಾವಿರ ಕಾರು ಹಾಗೂ 70,000 ಎಲೆಕ್ಟ್ರಿಕ್ ಬಸ್‍ಗಳು ರಸ್ತೆಗೆ ಇಳಿಯಲಿವೆ. ದೆಹಲಿ ಸರ್ಕಾರ ಮುಂದಿನ ವರ್ಷದ ಕೊನೆಯ ವೇಳೆಗೆ 5 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಗುರಿ ಇಟ್ಟುಕೊಂಡಿದ್ದು, ಈ ವರ್ಷಾಂತ್ಯಕ್ಕೆ, ಡೀಸೆಲ್‌ನಿಂದ ಓಡುವ ಎಲ್ಲ ತ್ರಿಚಕ್ರ ವಾಹನಗಳ ಓಡಾಟವನ್ನು ಸ್ಥಗಿತಗೊಳಿಸುವ ತೀರ್ಮಾನ ಮಾಡಿದೆ.
ಒಡಿಶಾ ತನ್ನ ರಾಜ್ಯದ ಪೆಟ್ರೋಲ್, ಡೀಸೆಲ್, ಗ್ಯಾಸ್‍ನಿಂದ ಓಡುವ ಆಟೊರಿಕ್ಷಾಗಳನ್ನು ಎಲೆಕ್ಟ್ರಿಕ್‍ಗೆ ಬದಲಾಯಿಸುವ ಕೆಲಸಕ್ಕೆ ಕೈ ಹಾಕಿದೆ. ಕೊಚ್ಚಿನ್ ನಗರದಲ್ಲಿ ಚಾಲಕರು ಕೈನೆಟಿಕ್ ಗ್ರೀನ್ ಕಂಪನಿಯಿಂದ ಇ-ಆಟೊ ರಿಕ್ಷಾಗಳನ್ನು ಬಾಡಿಗೆಗೆ ಪಡೆದು ಓಡಿಸುತ್ತಿದ್ದಾರೆ.
ನಮ್ಮ ರಾಜ್ಯದಲ್ಲಿ ಒಂದೂವರೆ ಲಕ್ಷ ಇ-ವಾಹನಗಳಿವೆ. ಇವುಗಳಿಗಾಗಿ 2016ರಲ್ಲೇ ನೀತಿ ರೂಪಿಸಿದ್ದ ದೇಶದ ಪ್ರಥಮ ರಾಜ್ಯ ನಮ್ಮದು. ಸರ್ಕಾರ ಅಂದಿನಿಂದಲೇ ಇ-ವಾಹನಗಳ ರಸ್ತೆ ತೆರಿಗೆಯನ್ನು ಸಂಪೂರ್ಣ ತೆಗೆದುಹಾಕಿತ್ತು. ಇತರ ರಾಜ್ಯಗಳು ಶೂನ್ಯ ರಸ್ತೆ ತೆರಿಗೆಯ ಜೊತೆ ಹಲವು ರಿಯಾಯಿತಿಗಳನ್ನೂ ನೀಡುತ್ತಿವೆ. ರಾಷ್ಟ್ರೀಯ ಹೆದ್ದಾರಿ ಮತ್ತು ಸಾರಿಗೆ ಸಚಿವಾಲಯವು 2021ರ ಆಗಸ್ಟ್‌ನಲ್ಲಿ ಇ-ವಾಹನಗಳ ನೋಂದಣಿ ಹಾಗೂ ನವೀಕರಣ ಶುಲ್ಕ ಎರಡನ್ನೂ ತೆಗೆದುಹಾಕಿದೆ.
ಆದರೆ ಇದುವರೆಗೆ ನೀಡುತ್ತಿದ್ದ ಶೂನ್ಯ ರಸ್ತೆ ತೆರಿಗೆ ರಿಯಾಯಿತಿಯನ್ನು ತೆಗೆದುಹಾಕುವ ಯೋಚನೆ ನಮ್ಮ ರಾಜ್ಯ ಸರ್ಕಾರಕ್ಕೆ ಬಂದಿದೆ. ಸಾಮಾನ್ಯ ವಾಹನಗಳಿಗೆ ವಿಧಿಸುವಂಥ ತೆರಿಗೆ ಪದ್ಧತಿ ಇ-ವಾಹನಗಳಿಗೂ ಬರಲಿದೆ. ಕರ್ನಾಟಕದಲ್ಲಿ ಎರಡು ಕೋಟಿಗೂ ಹೆಚ್ಚು ಮೋಟಾರು ವಾಹನಗಳು ನೋಂದಣಿಗೊಂಡಿವೆ. ಇ-ವಾಹನಗಳ ಸಂಖ್ಯೆ ಕನಿಷ್ಠ ಸಂಖ್ಯೆಯಲ್ಲಿದೆ. ಈ ಸಂಖ್ಯೆ 40 ಲಕ್ಷ ತಲುಪುವವರೆಗೆ ಈಗಿರುವ ಶೂನ್ಯ ರಸ್ತೆ ತೆರಿಗೆ ಪದ್ಧತಿಯನ್ನು ಮುಂದುವರಿಸಿದರೆ ಒಳ್ಳೆಯದು, ಇಲ್ಲದಿದ್ದರೆ ಇ-ವಾಹನಗಳ ಖರೀದಿಗೆ ಜನ ಮುಂದಾಗುವುದಿಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ.
ರಾಜ್ಯ ಸರ್ಕಾರಗಳಿಗೆ ಅತಿ ಹೆಚ್ಚಿನ ಆದಾಯ ತರುವ ಮೂಲಗಳಲ್ಲಿ ಮೋಟಾರು ವಾಹನಗಳ ತೆರಿಗೆಯೂ ಒಂದು. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಸಾಧಾರಣ ವಾಹನಗಳ ಮೇಲೆ ಅತಿ ಹೆಚ್ಚು ತೆರಿಗೆ ಇರುವುದು ನಮ್ಮ ರಾಜ್ಯದಲ್ಲಿಯೆ. ದೇಶದಾದ್ಯಂತ ನೋಂದಣಿಯಾಗಿರುವ ಇ– ವಾಹನಗಳ ಸಂಖ್ಯೆ ಕೇವಲ 18 ಲಕ್ಷ. ಉತ್ತರಪ್ರದೇಶದಲ್ಲಿ ಅತಿ ಹೆಚ್ಚು 4.1 ಲಕ್ಷ, ದೆಹಲಿ 1.8 ಲಕ್ಷ, ಮಹಾರಾಷ್ಟ್ರ 1.7 ಲಕ್ಷ, ಕರ್ನಾಟಕ 1.5 ಲಕ್ಷ, ರಾಜಸ್ಥಾನ 1.2 ಲಕ್ಷ, ಬಿಹಾರ 1.1 ಲಕ್ಷ ಮತ್ತು ತಮಿಳುನಾಡಿನಲ್ಲಿ 1 ಲಕ್ಷ ಇ– ವಾಹನಗಳಿವೆ.
ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳ ಕೊರತೆಯೂ ಇ-ವಾಹನಗಳ ಖರೀದಿಗೆ ಹಿನ್ನಡೆಯುಂಟು ಮಾಡುತ್ತಿದೆ. ದಾಖಲೆಗಳ ಪ್ರಕಾರ, ದೇಶದಲ್ಲಿ 6,000 ಸಾರ್ವಜನಿಕ ಇ-ಚಾರ್ಜಿಂಗ್ ಘಟಕಗಳಿವೆ. ನಮ್ಮಂಥ ದೊಡ್ಡ ದೇಶಕ್ಕೆ ಇದು ಅತ್ಯಂತ ಕಡಿಮೆ. ಚಿಕ್ಕ ದೇಶ ನೆದರ್‍ಲೆಂಡ್ಸ್‌ನಲ್ಲಿ 75,000 ಸಾರ್ವಜನಿಕ ಇ- ಚಾರ್ಜಿಂಗ್ ಕೇಂದ್ರಗಳಿವೆ. ನಾರ್ವೆ ದೇಶದ ಇ-ಕಾರುಗಳ ಪ್ರಮಾಣ ಶೇ 81ರಷ್ಟು. ಈ ವರ್ಷದ ಕೊನೆಯ ವೇಳೆಗೆ ರಸ್ತೆಯ ಮೇಲೆ ಸಂಚರಿಸುವ ಎಲ್ಲ ವಾಹನಗಳೂ ಇ-ವಾಹನಗಳಾಗಲಿವೆ ಎಂದು ನಾರ್ವೆ ಹೇಳಿದೆ. ವಿಶ್ವ ಆರ್ಥಿಕ ವೇದಿಕೆಯ ಪ್ರಕಾರ, ಹಿಂದಿನ ದಶಕದಲ್ಲಿ ಇ-ವಾಹನಗಳ ಮಾರಾಟದಲ್ಲಿ ಶೇ 30ರಷ್ಟು ವೃದ್ಧಿಯಾಗಿದೆ. ವಾಹನಗಳ ಸಂಖ್ಯೆಯ ದೃಷ್ಟಿಯಿಂದ ಒಂದು ಕೋಟಿಗೂ ಹೆಚ್ಚು ಇ-ವಾಹನಗಳಿರುವ ಚೀನಾ ಇ-ವಾಹನ ಬಳಕೆಯ ದೇಶಗಳ ಪೈಕಿ ನಂಬರ್ ಒನ್ ಆಗಿದೆ.
ಬ್ಯಾಟರಿ ಚಾರ್ಜ್ ಮಾಡಲು ಒಂದು ಯುನಿಟ್ ವಿದ್ಯುತ್‌ಗೆ ಮನೆಯಲ್ಲಿ ₹ 8 ಖರ್ಚಾದರೆ, ಸಾರ್ವಜನಿಕ ಘಟಕಗಳಲ್ಲಿ ₹ 20 ವ್ಯಯಿಸಬೇಕಾಗುತ್ತದೆ. ಎರಡು ಹಾಗೂ ಮೂರು ಚಕ್ರದ ಇ-ವಾಹನಗಳ ಬಳಕೆ ಹೆಚ್ಚಾಗಿರುವುದರಿಂದ ಚಾರ್ಜಿಂಗ್ ಬೇಡಿಕೆಯೂ ಅದೇ
ಪ್ರಮಾಣದಲ್ಲಿದೆ. ದೆಹಲಿಯಲ್ಲಿ ಆ್ಯಸಿಡ್ ಬ್ಯಾಟರಿಗಳಿಂದ ಚಲಿಸುವ ಒಂದು ಲಕ್ಷ ರಿಕ್ಷಾಗಳಿವೆ. ಲೀಥಿಯಂ ಬ್ಯಾಟರಿಯಿಂದ ಓಡುವ ವಾಹನಗಳ ಬೆಲೆ ಜಾಸ್ತಿಯಾದ್ದರಿಂದ ಚಾಲಕರ ಒಲವು ಅತ್ತ ಕಡೆ ಹೆಚ್ಚಾಗಿಲ್ಲ. ಸಾಲ ಮಾಡಿ ತೆಗೆದುಕೊಳ್ಳುವವರಿಗೆ ಬ್ಯಾಂಕುಗಳು ಎರಡು ವರ್ಷಕ್ಕಿಂತ ಹೆಚ್ಚಿನ ಮರುಪಾವತಿ ಸಮಯ ನೀಡುತ್ತಿಲ್ಲ. ಇ-ಆಟೊ ರಿಕ್ಷಾಗಳಿಗೆ ಕಂಪನಿ ಕೊಡುವ ಗ್ಯಾರಂಟಿ ಎರಡು ವರ್ಷ ಮಾತ್ರ. ಬ್ಯಾಂಕ್‍ಗಳೂ ಎರಡೇ ವರ್ಷಗಳ ಸಾಲ ಮರುಪಾವತಿ ಅವಧಿ ನೀಡುವುದನ್ನು ರೂಢಿಸಿಕೊಂಡಿವೆ. ಇದು ಇ-ವಾಹನ ಕೊಳ್ಳುವವರ ಉತ್ಸಾಹಕ್ಕೆ ತಣ್ಣೀರೆರಚುತ್ತಿದೆ.
ದೇಶದಲ್ಲಿ ಮಾರಾಟವಾಗುತ್ತಿರುವ ಇ-ವಾಹನಗಳ ಪ್ರಮಾಣ ಶೇ 1ಕ್ಕಿಂತ ಕಡಿಮೆ ಇದೆ. ದುಬಾರಿ ಬೆಲೆ, ಕಡಿಮೆ ಸಂಖ್ಯೆಯ ಚಾರ್ಜಿಂಗ್ ಘಟಕಗಳು, ಸರಕುಸಾಗಣೆ ವಾಹನಗಳಲ್ಲಿ ಹೆಚ್ಚಿನ ಮಾದರಿಗಳಿಲ್ಲದಿರುವುದು ಕೊಳ್ಳುಗರಲ್ಲಿ ನಿರುತ್ಸಾಹ ಮೂಡಿಸಿದೆ.
ಕ್ಯಾಲಿಫೋರ್ನಿಯಾದಲ್ಲಿ 35 ವಿವಿಧ ಬಗೆಯ ಇ-ಕಾರುಗಳು ಲಭ್ಯವಿವೆ. ನಮ್ಮಲ್ಲಿ ಇ-ವಾಹನಗಳ ಭರಾಟೆ ಏನಿದ್ದರೂ 2-3 ಚಕ್ರದ ವಾಹನಗಳಿಗೆ ಸೀಮಿತವಾದಂತೆ ತೋರುತ್ತಿದೆ. ಇ-ವಾಹನಗಳ ಬಿಡಿ ಭಾಗಗಳ ತಯಾರಕರು ಹೇಳುವಂತೆ, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಮಾರಾಟ ವಿಭಾಗ ಸದ್ಯಕ್ಕೆ ಏರುಗತಿಯಲ್ಲಿದೆ, ನಂತರದ ಸ್ಥಾನ ಬಸ್‍ಗಳದ್ದಾಗಿದೆ. ಇ-ಕಾರುಗಳ ಮಾರಾಟ ವೃದ್ಧಿಯಾಗುವ ಕಾಲವಿನ್ನೂ ನಮ್ಮಲ್ಲಿ ಪಕ್ವವಾಗಿಲ್ಲ ಎಂಬ ಅಭಿಪ್ರಾಯ ಮಾರುಕಟ್ಟೆಯಲ್ಲಿದೆ.
ವಿಶ್ವದ ಅನೇಕ ಕಾರು ಕಂಪನಿಗಳು ಡೀಸೆಲ್ ಎಂಜಿನ್ ಅಭಿವೃದ್ಧಿಯನ್ನು ನಿಲ್ಲಿಸಿ ಇ ಮತ್ತು ಹೈಬ್ರಿಡ್ ಕಾರುಗಳನ್ನು ನಿರ್ಮಿಸುತ್ತಿವೆ. ಬೆಂಗಳೂರಿನ ನವೋದ್ಯಮ ಏಥರ್ ಎನರ್ಜಿ ದೇಶದ ಆಯ್ದ ನಗರಗಳಲ್ಲಿ ಇ-ಸ್ಕೂಟರ್ ಬಿಡುಗಡೆ ಮಾಡಿದೆ. ರಾವಿನ್, ಮಹೀಂದ್ರ, ಟಾಟಾ ಕಾರು ಕಂಪನಿಗಳು ಇ-ಕಾರುಗಳನ್ನು ಪರಿಚಯಿಸಿ ದಶಕಗಳೇ ಕಳೆದಿವೆ. ಹಿಂದೆಲ್ಲಾ ಕಾರಿನ ಬ್ಯಾಟರಿ ಚಾರ್ಜ್ ಆಗಲು 8-10 ತಾಸು ಸಮಯ ಹಿಡಿಯುತ್ತಿತ್ತು. ಟೆಸ್ಲಾ ಕಂಪನಿಯ ಕಾರುಗಳು ಮಾರುಕಟ್ಟೆಗೆ ಬಂದ ನಂತರ ಒಂದೇ ತಾಸಿನಲ್ಲಿ ಕಾರಿನ ಬ್ಯಾಟರಿಯನ್ನು ಶೇ 80ರಷ್ಟು ವೇಗವಾಗಿ ಚಾರ್ಜ್ ಮಾಡುವ ತಂತ್ರಜ್ಞಾನವೂ ಬಂತು. ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನೆಯ ಖರ್ಚು ಜಾಸ್ತಿಯಾದ್ದರಿಂದ ಆಮದು ಮಾಡಿಕೊಳ್ಳುವುದೇ ಸೂಕ್ತ ಎನ್ನುವುದು ತಜ್ಞರ ಮಾತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.