ADVERTISEMENT

ಉದ್ಯೋಗ ಬಿಕ್ಕಟ್ಟಿಗೆ ಹೀಗೊಂದು ಪರಿಹಾರ

ನಿಜವಾದ ಆಸಕ್ತರಿಗಾಗಿ ಸಾಮಾಜಿಕ ವಲಯದ ಸವಾಲುಗಳು ಕಾಯುತ್ತಿವೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 19:45 IST
Last Updated 5 ಜುಲೈ 2019, 19:45 IST
sudheesh
sudheesh   

ಎಲ್ಲರಿಗೂ ತಿಳಿದಿರುವಂತೆ, ಇಂದು ಉದ್ಯೋಗಗಳ ಸ್ವರೂಪ ಬದಲಾಗುತ್ತಿದೆ. ತಂತ್ರಜ್ಞಾನವು ನಮ್ಮ ಬದುಕಿನ ಎಲ್ಲ ಆಯಾಮಗಳನ್ನೂ ಆಕ್ರಮಿಸಿಕೊಂಡಿದೆ. ಹೀಗಾಗಿ ಭಾರತವು ಹಿಂದೆಂದಿಗಿಂತಲೂ ಇಂದು ಉದ್ಯೋಗದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಳೆದ ದಶಕದಲ್ಲಿನ ನಮ್ಮ ಆರ್ಥಿಕ ಬೆಳವಣಿಗೆಯು ಅಗತ್ಯಕ್ಕೆ ತಕ್ಕಷ್ಟು ನಿಯತ ಉದ್ಯೋಗಗಳನ್ನು ಸೃಷ್ಟಿಸಲು ಸೋತಿತು. ಸೃಷ್ಟಿಸಿದ ಉದ್ಯೋಗಗಳಲ್ಲೂ ಹೆಚ್ಚಿನವು ಕಡಿಮೆ ಸಂಬಳದ, ಅಸಂಘಟಿತ ವಲಯದ ಉದ್ಯೋಗಗಳಾಗಿದ್ದವು. ಹಳೆಯ ಕಾಲದ ಕೌಶಲಗಳು ಅಪ್ರಯೋಜಕ ಎನಿಸತೊಡಗಿದವು. ಯಾಂತ್ರೀಕರಣದ ಭರಾಟೆಗೆ ಸಿಲುಕಿ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳತೊಡಗಿದರಲ್ಲದೆ, ತಮ್ಮ ಕೌಶಲವನ್ನು ಇಂದಿನ ಕಾಲಮಾನಕ್ಕೆ ತಕ್ಕಂತೆ ಎತ್ತರಿಸಿಕೊಳ್ಳಲು ಒದ್ದಾಡುತ್ತ ತಮಗಿರುವ ಬೇಡಿಕೆಯನ್ನು ಉಳಿಸಿಕೊಳ್ಳಲು ಹೆಣಗಾಡತೊಡಗಿದರು.

ಉದ್ಯೋಗದ ಸ್ಥಳಗಳಲ್ಲಿ ಉದ್ಯೋಗಿಗಳ ಸಂಖ್ಯೆ ಅಥವಾ ಉದ್ಯೋಗಿಗಳ ಸಾಂದ್ರತೆ (ಒಂದು ನಿರ್ದಿಷ್ಟ ಮೊತ್ತದ ಬಂಡವಾಳ ಹೂಡಿಕೆಗೆ ಅನುಗುಣವಾಗಿ ಇರುವ ಉದ್ಯೋಗಿಗಳ ಸಂಖ್ಯೆ) ಈ ಮೂರು ದಶಕಗಳಲ್ಲಿ ಶೇಕಡ 90ರಷ್ಟು ಕುಸಿತ ಕಂಡಿದೆ. ನಮ್ಮಲ್ಲಿ ಪ್ರತೀ ತಿಂಗಳು ಏನಿಲ್ಲವೆಂದರೂ 10 ಲಕ್ಷ ಜನರು ಉದ್ಯೋಗ ಮಾರುಕಟ್ಟೆಯನ್ನು ಪ್ರವೇಶಿಸುತ್ತಾರೆ. ಆದರೆ, ಉದ್ಯೋಗಗಳ ಸಂಖ್ಯೆ ಕಡಿಮೆ ಇದ್ದು, ಉದ್ಯೋಗವನ್ನು ಅರಸುತ್ತಿರುವವರ ಸಂಖ್ಯೆ ವಿಪರೀತವಾಗಿದೆ. ಹೀಗಾಗಿ, ಸಮಾಜದಲ್ಲಿ ಅಶಾಂತಿ ತಲೆದೋರಿದೆ. ದೇಶದ ವಿವಿಧೆಡೆಗಳಲ್ಲಿ ಜಾಟರು, ಪಾಟಿದಾರರು ಮತ್ತು ಮರಾಠರು ನಡೆಸಿದ ಚಳವಳಿಗಳ ಹಿಂದೆ ಬಹುಶಃ ಈ ಉದ್ಯೋಗ ಬಿಕ್ಕಟ್ಟಿನ ಕಾರಣವೇ ಇತ್ತು ಎನಿಸುತ್ತದೆ.

ಸಾಮಾಜಿಕ ಕ್ಷೋಭೆ ಮತ್ತು ಅಸಮಾನತೆಯು ದಿನದಿಂದ ದಿನಕ್ಕೆ ಬೆಳೆಯುತ್ತಿವೆ. ಇದಕ್ಕೆ ಸಮಾಜವು ಪರಿಹಾರವನ್ನು ತನ್ನೊಳಗಿನಿಂದಲೇ ಕಂಡುಕೊಳ್ಳಬೇಕಾಗಿದೆ. ಇದನ್ನು ಮಾಡಬಲ್ಲವರು ಸ್ವತಃ ಜನರೇ ವಿನಾ ಬೇರಾರೂ ಅಲ್ಲ. ಇದು ಸಾಧ್ಯವಾಗಬೇಕೆಂದರೆ, ಅಂದರೆ ಉದ್ಯೋಗಸೃಷ್ಟಿ ಆಗಬೇಕೆಂದರೆ ನಾವು ಸಾಂಪ್ರದಾಯಿಕ ಪದ್ಧತಿಗಳ ಆಚೆಗೆ ಇರುವ ಸಾಧ್ಯತೆಗಳತ್ತ ನೋಡಬೇಕಾಗಿದೆ. ಹಾಗಾದರೆ, ಒಂದು ಸಮಾಜವು ಸುಸ್ಥಿರತೆಯನ್ನು ಸಾಧಿಸಬೇಕಾದರೆ ಉದ್ಯೋಗವು ಅದಕ್ಕೊಂದು ಸಾಧನ ಎಂದು ಪರಿಭಾವಿಸಲು ಇದು ತಕ್ಕ ಸಮಯವೇ? ಬಹುಶಃ ಹೌದು. ನಾವು ಅದನ್ನು ಇದುವರೆಗೂ ಪರಿಭಾವಿಸಿಕೊಂಡು ಬಂದಿರುವ ರೀತಿಯಲ್ಲೇ ಉದ್ಯೋಗವನ್ನು- ಕೃಷಿ ಕ್ಷೇತ್ರ, ಉತ್ಪಾದನಾ ವಲಯ, ಸೇವಾ ವಲಯ ಅಥವಾ ಸರ್ಕಾರಿ ಉದ್ಯೋಗ ಇಲ್ಲವೇ ಶಿಕ್ಷಣ ಕ್ಷೇತ್ರದಲ್ಲಿನ ಉದ್ಯೋಗವೆಂಬಂತೆ ಮಾತ್ರವೇ ಇನ್ನು ಮುಂದೆಯೂ ನೋಡಬೇಕಾಗಿಲ್ಲ. ಬದಲಿಗೆ, ಉದ್ಯೋಗವೆಂದರೆ ಒಂದು ಒಳ್ಳೆಯ ಸಮಾಜವನ್ನು ಕಟ್ಟಲು ಅಗತ್ಯವಾಗಿರುವ ಕೆಲಸವೂ ಆಗಿರಬಹುದು. ಇದು ಸಮಾಜದಲ್ಲಿನ ಅನೇಕ ಜಟಿಲ ಸಮಸ್ಯೆಗಳನ್ನು ಬಗೆಹರಿಸುವ, ಈ ಜಗತ್ತನ್ನು ನಾವೆಲ್ಲರೂ ಬದುಕಲು ಮತ್ತಷ್ಟು ಸುಸ್ಥಿರಗೊಳಿಸುವ ಅಂಶಗಳನ್ನೂ ಒಳಗೊಂಡಿರಬಹುದು.

ADVERTISEMENT

ಅಭಿವೃದ್ಧಿ ವಲಯವನ್ನು ಲಾಗಾಯ್ತಿನಿಂದಲೂ, ಸಮಾಜದ ತೀರಾ ಒಂದು ಅಂಚಿನಲ್ಲಿ ಕೆಲಸ ಮಾಡುತ್ತಾ ಸಮುದಾಯದ ಬಲು ಸಣ್ಣ ಗುಂಪಿಗೆ ಮಾತ್ರ ಪ್ರಸ್ತುತವೆನಿಸುವಂತಹ ಸಮಸ್ಯೆಗಳನ್ನು ಪರಿಹರಿಸುವ ಸಂಸ್ಥೆಗಳ ಸಮೂಹ ಎಂದು ನೋಡಲಾಗುತ್ತಿದೆ. ಜನರು ಕೂಡ ಸಾಮಾಜಿಕ ವಲಯದಲ್ಲಿ ಉದ್ಯೋಗವೆಂದರೆ ಸಾಮಾನ್ಯವಾಗಿ ವ್ಯವಸ್ಥೆಯ ವಿರುದ್ಧ ಸಕ್ರಿಯವಾಗಿ ಹೋರಾಡುವುದು ಎನ್ನುವ ಭಾವನೆ ಹೊಂದಿದ್ದಾರೆ. ಆದರೆ, ಇಂದು ಪರಿಸ್ಥಿತಿಗಳು ಬಹಳಷ್ಟು ವಿಧದಲ್ಲಿ ಬದಲಾಗುತ್ತಿವೆ. ದಿನೇದಿನೇ ಬಹಳಷ್ಟು ಉದ್ಯೋಗದಾತ ಸಂಸ್ಥೆಗಳು ತುಂಬಾ ವ್ಯವಸ್ಥಿತವಾದ ರೀತಿಯಲ್ಲಿ ಮತ್ತು ಸಾಂಸ್ಥಿಕ ಸ್ವರೂಪದಲ್ಲಿ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಸವಾಲೆನಿಸಿರುವಂತಹ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತಿವೆ.

ಉದ್ದಿಮೆಗಳಲ್ಲಿ ಹೆಚ್ಚಾಗುತ್ತಿರುವ ಮಾನವಕಲ್ಯಾಣದ ಉಪಕ್ರಮಗಳು ಮತ್ತು ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ಉಪಕ್ರಮಗಳು (ಸಿಎಸ್ಆರ್- ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ) ಇದರ ಹಿಂದಿರುವ ಚಾಲಕಶಕ್ತಿಗಳಾಗಿವೆ. ಜತೆಗೆ ಜನಕೇಂದ್ರಿತವಾದ, ಪ್ರಕ್ರಿಯಾಪ್ರೇರಿತ ಮತ್ತು ಸರಿಯಾದ ಫಲಿತಾಂಶವನ್ನು ತರಬಲ್ಲಂತಹ ವ್ಯವಸ್ಥಿತ ಉದ್ದಿಮೆಗಳನ್ನು ಕಟ್ಟುವುದಕ್ಕೆ ಸಂಪನ್ಮೂಲಗಳು ಹಾಗೂ ಹಣಕಾಸನ್ನು ಒದಗಿಸುತ್ತಿವೆ. ಒಟ್ಟಿನಲ್ಲಿ ಸಾಮಾಜಿಕ ಉದ್ಯಮಶೀಲತೆಯು ಹೆಚ್ಚಾಗುತ್ತಿದೆ; ಬದಲಾವಣೆಯನ್ನು ತರಲು ಬಯಸುವಂತಹ ಸಂಸ್ಥೆಗಳಿಗೆ ಹಣಕಾಸು ಸುಲಭವಾಗಿ ಸಿಗುತ್ತಿದೆ. ಈ ವಲಯದಲ್ಲಿ ಹೊಸ ಬಗೆಯ ಚಿಂತನೆ ಕಾಣಿಸುತ್ತಿದ್ದು, ಭರವಸೆದಾಯಕವಾದ ಆಲೋಚನೆಗಳನ್ನು ನಿಕಷಕ್ಕೆ ಒಡ್ಡಲಾಗುತ್ತಿದೆ.

ಸಾಮಾಜಿಕ ವಲಯದಲ್ಲಿನ ಸಂಸ್ಥೆಗಳು ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿದ್ದು, ಕೆಲವಂತೂ ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ನೀಡಿವೆ. ಆರೋಗ್ಯ, ಮಹಿಳಾ ಸಬಲೀಕರಣ, ಮಕ್ಕಳ ಆರೈಕೆ, ಪೌಷ್ಟಿಕ ಆಹಾರ, ಕೃಷಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅನೇಕ ಸಂಸ್ಥೆಗಳು ಆಸಕ್ತಿದಾಯಕವಾದ ಕೆಲಸವನ್ನು ಮಾಡುತ್ತಿವೆ. ಇವುಗಳ ಪೈಕಿ ಕೆಲವು, ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದರೆ, ನೀತಿ ಚಿಂತಕ ತಂಡಗಳಂತಹ ಹೆಚ್ಚಿನ ಸಂಸ್ಥೆಗಳು ದೀರ್ಘಾವಧಿಯಲ್ಲಿ ನೀತಿ ನಿರೂಪಣೆಯ ಮೇಲೆ ಸತ್ಪರಿಣಾಮ ಬೀರುವಂತಹ ಕೆಲಸವನ್ನು ಇನ್ನೊಂದು ತುದಿಯಲ್ಲಿ ಮಾಡುತ್ತಿವೆ. ಈ ವ್ಯಾಪಕತೆ ಅಥವಾ ವೈಶಾಲ್ಯವು ಯಾವುದೇ ಒಬ್ಬ ವ್ಯಕ್ತಿಗೆ ತನ್ನ ವೃತ್ತಿಬದುಕನ್ನು ಕಟ್ಟಿಕೊಳ್ಳಲು ಬಹುದೊಡ್ಡ ಅವಕಾಶವನ್ನು ನೀಡುತ್ತದೆ. ಸಾಮಾಜಿಕ ವಲಯದ ಸಂಸ್ಥೆಗಳು ಒಳ್ಳೆಯ ತರಬೇತಿ ತಾಣಗಳಾಗಿ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ತೃಪ್ತಿಕರ ಹುದ್ದೆಗಳನ್ನು ನೀಡುವುದರ ಜತೆಗೆ ವೈವಿಧ್ಯಮಯವಾದ ಉದ್ಯೋಗಾವಕಾಶಗಳನ್ನೂ ಒದಗಿಸುತ್ತಿವೆ.

ಸಾಮಾಜಿಕ ವಲಯದ ಸಂಸ್ಥೆಯಲ್ಲಿ ಒಬ್ಬ ಉದ್ಯೋಗಿಯು ತನ್ನ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಲು ಅಪಾರವಾದ ಅವಕಾಶಗಳಿರುತ್ತವೆ. ಉದಾಹರಣೆಗೆ, ಐ.ಐ.ಟಿ.ಯಲ್ಲಿ ಓದಿರುವಂತಹ, ಅನುದಾನ ನೀಡಿಕೆ ಸಂಸ್ಥೆಯ ಸಿಇಒ ಆಗಿದ್ದವರು, ಈ ಹುದ್ದೆಗೆ ಬರುವ ಮೊದಲು ಒಂದು ಪರ್ಯಾಯ ಸ್ವರೂಪದ ಶಾಲೆಯಲ್ಲಿ ಪಾಠ ಮಾಡಿರಬಹುದಲ್ಲದೆ, ಜಾಗತಿಕ ಮಟ್ಟದ ದೊಡ್ಡ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ನಿರ್ಣಾಯಕ ಜವಾಬ್ದಾರಿಗಳನ್ನು ಕೂಡ ನಿರ್ವಹಿಸಿರಬಹುದು.

ಸುತ್ತಲಿನ ಜಗತ್ತಿನ ಮೇಲೆ ಪರಿಣಾಮ ಉಂಟುಮಾಡುವಂತಹ ಒಂದು ಒಳ್ಳೆಯ ಉದ್ಯೋಗವನ್ನು ಹುಡುಕುತ್ತಿರುವ ಸಾವಿರಾರು ಜನರ ಬೇಡಿಕೆಯನ್ನು ಪೂರೈಸಲು ಸಾಮಾಜಿಕ ವಲಯದ ಸಂಸ್ಥೆಗಳು ಸಮರ್ಥವಾಗಿವೆ. ಅಭಿವೃದ್ಧಿ ವಲಯದ ಹೆಚ್ಚಿನ ಸಂಸ್ಥೆಗಳು ಪ್ರತಿಭಾವಂತ ಯುವಜನರ ಬಗ್ಗೆ ಒಲವು ಹೊಂದಿರುವುದರ ಜತೆಯಲ್ಲೇ ಅನುಭವಿಗಳಿಗೂ ಅವಕಾಶ ಕೊಡುವ ಮನಸ್ಸನ್ನು ಹೊಂದಿವೆ. ಕೈವಲ್ಯ ಫೌಂಡೇಷನ್, ಕೋಟಕ್ ಫೌಂಡೇಷನ್ ಮತ್ತು ಪ್ರಧಾನ್ ತರಹದ ಸಂಸ್ಥೆಗಳು ದೇಶದಾದ್ಯಂತ ಇರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಹೋಗಿ, ತಮಗೆ ಸೂಕ್ತವೆನಿಸಿದವರನ್ನು ನಿಗದಿತವಾಗಿ ನೇಮಕ ಮಾಡಿಕೊಳ್ಳುತ್ತಲೇ ಇರುತ್ತವೆ. ಹೆಚ್ಚಿನ ಸಂಸ್ಥೆಗಳು ಅರ್ಹರಿಗೆ ಅಲ್ಪಾವಧಿಯ ಫೆಲೋಶಿಪ್‌ ಅನ್ನೂ ನೀಡುತ್ತಿವೆ.

ಸಾಮಾಜಿಕ ವಲಯಕ್ಕೆ ವಿಶ್ಲೇಷಣಾತ್ಮಕ ಮನಃಸ್ಥಿತಿಯುಳ್ಳವರು ಮತ್ತು ಸಮಸ್ಯೆಗಳನ್ನು ಪರಿಹರಿಸುವಂತಹ ಉತ್ಕಟ ಹಂಬಲದ ವ್ಯಕ್ತಿಗಳು ಬೇಕಾಗಿದ್ದಾರೆ. ಇಲ್ಲಿ ಕೆಲಸದ ಸ್ವಭಾವವೇ ಬೇರೆ; ಕೆಲಸ ಮಾಡುವ ಜಾಗಗಳು ಸಹ ದುರ್ಗಮ. ಆದರೆ, ಮಾಡುವ ಕೆಲಸ ಮಾತ್ರ ತುಂಬಾ ತೃಪ್ತಿದಾಯಕವಾಗಿ ಇರುತ್ತದೆ. ಇದಕ್ಕಿಂತ ಹೆಚ್ಚಾಗಿ, ನೀವು ಒಂದು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳುವುದೇ ನಿಜವಾದ ಸಮ್ಮಾನ! ಯುವಜನರಿಗೆ ಮತ್ತು ಏನಾದರೂ ಸಾಧಿಸಲು ಚಡಪಡಿಸುತ್ತಿರುವವರಿಗೆ, ಸಮಾಜದ ಇಂದಿನ ಸ್ಥಾಯಿ ಪರಿಸ್ಥಿತಿಯಲ್ಲಿ ಬದಲಾವಣೆಯನ್ನು ತರಬಯಸುವವರಿಗೆ ಸಾಮಾಜಿಕ ವಲಯವು ತೆರೆದ ಬಾಹುಗಳಿಂದ ಸ್ವಾಗತಿಸುತ್ತಿದೆ. ನಿಜವಾದ ಆಸಕ್ತರಿಗಾಗಿ ಇಲ್ಲಿರುವ ಸವಾಲುಗಳು ಕಾಯುತ್ತಿವೆ!

ಲೇಖಕ: ಚೀಫ್ ಪೀಪಲ್ ಆಫೀಸರ್, ಅಜೀಂ ಪ್ರೇಮ್‌ಜಿ ಫೌಂಡೇಷನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.