ADVERTISEMENT

ಹಾಂಗ್‌ಕಾಂಗ್‌ನಲ್ಲಿ ಪ್ರಜಾತಂತ್ರದ ಅಂತ್ಯ?

ರಾಷ್ಟ್ರೀಯ ಭದ್ರತಾ ಕಾನೂನಿನ ನಿಯಮಗಳು ಈ ಪ್ರದೇಶದ ಭವಿಷ್ಯವನ್ನು ನಿರ್ಧರಿಸಲಿವೆ

​ಪ್ರಜಾವಾಣಿ ವಾರ್ತೆ
Published 29 ಮೇ 2020, 20:00 IST
Last Updated 29 ಮೇ 2020, 20:00 IST
ಹಾಂಗ್‌ಕಾಂಗ್‌ನಲ್ಲಿ ಪ್ರತಿಭಟನೆ ಹತ್ತಿಕ್ಕುತ್ತಿರುವ ಪೊಲೀಸರು
ಹಾಂಗ್‌ಕಾಂಗ್‌ನಲ್ಲಿ ಪ್ರತಿಭಟನೆ ಹತ್ತಿಕ್ಕುತ್ತಿರುವ ಪೊಲೀಸರು   
""

ಹಾಂಗ್‌ಕಾಂಗ್‌‌ನಲ್ಲಿ ನಡೆಯುವ ಪ್ರತ್ಯೇಕತಾವಾದ, ಭಯೋತ್ಪಾದನೆ, ಪ್ರಭುತ್ವವನ್ನು ಉರುಳಿಸುವ ಯತ್ನ ಹಾಗೂ ರಾಷ್ಟ್ರದ ಭದ್ರತೆಗೆ ಬೆದರಿಕೆ ಒಡ್ಡಬಹುದಾದ ಯಾವುದೇ ಕೃತ್ಯವನ್ನು ಹತ್ತಿಕ್ಕುವ ಯೋಜನೆಗೆ ಚೀನಾದ ಶಾಸನಸಭೆಯು ಈಚೆಗೆ ಅವಿರೋಧವಾಗಿ ಅನುಮೋದನೆ ನೀಡಿದೆ. ಇದರ ಕಾರಣದಿಂದಾಗಿ ಹಾಂಗ್‌ಕಾಂಗ್‌ನಲ್ಲಿನ ಪ್ರತಿಭಟನೆಗಳನ್ನು ಬಗ್ಗುಬಡಿಯುವ ವಿಸ್ತೃತ ನೆಲೆಯ ಅಧಿಕಾರವು ಚೀನಾಕ್ಕೆ ಈಗ ಸಿಕ್ಕಂತಾಗಿದೆ.

ರಾಷ್ಟ್ರೀಯ ಭದ್ರತಾ ಕಾನೂನಿನ ಅಂತಿಮ ನಿಯಮಗಳು ಹಾಂಗ್‌ಕಾಂಗ್‌ನ ಭವಿಷ್ಯವನ್ನು ನಿರ್ಧರಿಸಲಿವೆ. ಈ ನಗರದ ಸ್ವಾಯತ್ತ ಸ್ಥಾನಮಾನವನ್ನು ಎಷ್ಟರಮಟ್ಟಿಗೆ ಉಳಿಸಿಕೊಳ್ಳಲಾಗುವುದು, ಚೀನಾ ಈ ನಗರದ ಮೇಲೆ ಎಷ್ಟರಮಟ್ಟಿಗೆ ಹಿಡಿತ ಸಾಧಿಸಲಿದೆ ಎಂಬುದನ್ನು ಅದು ತೀರ್ಮಾನಿಸಲಿದೆ. ಈ ಕಾನೂನು ಸೆಪ್ಟೆಂಬರ್‌ ವೇಳೆಗೆ ಜಾರಿಗೆ ಬರುವ ನಿರೀಕ್ಷೆಯಿದೆ. ಅದಾದಾಗ, ಪ್ರತಿಭಟನೆಗಳನ್ನು ಹತ್ತಿಕ್ಕಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬಂಥ ಸೂಚನೆಗಳು ಚೀನಾದ ಅಧಿಕಾರಿಗಳಿಂದ ಬಂದಿವೆ.

ತೀವ್ರವಾದಿ ಸಂಘಟನೆಗಳನ್ನು ನಿಷೇಧಿಸಬಹುದು. ರಾಷ್ಟ್ರೀಯ ಭದ್ರತಾ ಕಾನೂನು ಉಲ್ಲಂಘಿಸುವವರಿಗೆ ನ್ಯಾಯಾಲಯಗಳು ದೀರ್ಘಾವಧಿಯ ಜೈಲುವಾಸ ವಿಧಿಸಬಹುದು. ಚೀನಾದ ಭದ್ರತಾ ಸಂಸ್ಥೆಗಳು ಹಾಂಗ್‌ಕಾಂಗ್‌ನಲ್ಲಿ ಬಹಿರಂಗವಾಗಿ ತಮ್ಮ ಕೆಲಸ ಆರಂಭಿಸಬಹುದು. ಕೆಲವು ನಾಗರಿಕ ಹಕ್ಕುಗಳನ್ನು ಮುಂದೆಯೂ ಸಹಿಸಿಕೊಳ್ಳಲಾಗುತ್ತದೆ ಎಂದು ಹೇಳಲಾಗದು ಎಂಬ ಸೂಚನೆಯನ್ನು ಅಲ್ಲಿನ ಮುಖ್ಯ ಕಾರ್ಯನಿರ್ವಾಹಕಿ ಕ್ಯಾರಿ ಲ್ಯಾಮ್‌ ಕೂಡ ನೀಡಿದ್ದಾರೆ.

ADVERTISEMENT

‘ಈ ಸಂದರ್ಭದಲ್ಲಿ ನಮ್ಮದು ಬಹಳ ಮುಕ್ತವಾದ ಸಮಾಜ. ಜನರಿಗೆ ತಮಗೆ ಅನಿಸಿದ ಏನನ್ನು ಬೇಕಿದ್ದರೂ ಹೇಳುವ ಸ್ವಾತಂತ್ರ್ಯವಿದೆ. ಹಕ್ಕುಗಳು ಮತ್ತು ಸ್ವಾತಂತ್ರ್ಯ ಅನಿರ್ಬಂಧಿತವಲ್ಲ’ ಎಂದು ಅವರು ಹೇಳಿದ್ದಾರೆ. ರಾಷ್ಟ್ರೀಯ ಭದ್ರತಾ ಕಾನೂನು ಜಾರಿಗೆ ಬರುವ ಸಾಧ್ಯತೆಯು ಹಾಂಗ್‌ಕಾಂಗ್‌ನಲ್ಲಿ ಪ್ರತಿಭಟನೆಗೆ ಕಾರಣವಾಗಿದೆ. ಅಲ್ಲಿ ಪ್ರತಿಭಟನಕಾರರು ಮತ್ತೆ ಬೀದಿಗಿಳಿದಿದ್ದಾರೆ. ಅಲ್ಲಿನ ಜನರ ನಾಗರಿಕ ಹಕ್ಕುಗಳನ್ನು ಮೊಟಕುಗೊಳಿಸಬಾರದು ಎಂಬ ಎಚ್ಚರಿಕೆಯನ್ನು ಅಂತರರಾಷ್ಟ್ರೀಯ ಸಮುದಾಯ ಕೂಡ ನೀಡಿದೆ.

ಹಾಂಗ್‌ಕಾಂಗ್‌ ಜೊತೆಗಿನ ವಿಶೇಷ ವಾಣಿಜ್ಯ ಮತ್ತು ಆರ್ಥಿಕ ಸಂಬಂಧಗಳನ್ನು ತುಂಡರಿಸುವ ಮಾತುಗಳು ಅಮೆರಿಕದ ಕಡೆಯಿಂದ ಬಂದಿವೆ. ಇದಕ್ಕೆ ಕಾರಣ ಚೀನಾದ ನಡೆ. ಇಂತಹ ಸಂಬಂಧ ಇರಬೇಕು ಎಂದಾದರೆ ಹಾಂಗ್‌ಕಾಂಗ್‌ಗೆ ಗಮನಾರ್ಹ ಮಟ್ಟದಲ್ಲಿ ಸ್ವಾಯತ್ತ ಸ್ಥಾನ ಇರಬೇಕು. ಆದರೆ ಆ ಸ್ಥಾನಮಾನ ಇದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯ ಭಾವಿಸುತ್ತಿಲ್ಲ ಎಂದು ಸಚಿವ ಮೈಕ್‌ ಪಾಂಪಿಯೊ ಹೇಳಿದ್ದಾರೆ.

ರಾಷ್ಟ್ರೀಯ ಭದ್ರತಾ ಕಾನೂನು ಹಾಂಗ್‌ಕಾಂಗ್‌ನ ಸಮೃದ್ಧಿ ಹಾಗೂ ಸ್ಥಿರತೆಯನ್ನು ರಕ್ಷಿಸುತ್ತದೆ ಎಂದು ಚೀನಾದ ಮುಖ್ಯಸ್ಥ ಲೀ ಕಚ್ಯಾಂಗ್‌ ಹೇಳಿದ್ದಾರೆ. ಅಷ್ಟೇ ಅಲ್ಲ, ಹಾಂಗ್‌ಕಾಂಗ್‌ನ ವಿದ್ಯಮಾನಗಳಲ್ಲಿ ಅಮೆರಿಕ ಹಸ್ತಕ್ಷೇಪ ನಡೆಸುತ್ತಿದೆ ಎಂಬ ಆರೋಪವನ್ನೂ ಲಿ ಮಾಡಿಲ್ಲ. ಆದರೆ ಇದೇ ವೇಳೆ, ಹಾಂಗ್‌ಕಾಂಗ್‌ನಲ್ಲಿರುವ ಚೀನಾದ ವಿದೇಶಾಂಗ ಇಲಾಖೆಯ ಕಚೇರಿಯು, ಅಮೆರಿಕ ತನ್ನ ಕೆಲಸ ಮುಂದುವರಿಸಿದ್ದೇ ಆದಲ್ಲಿ ‘ಪ್ರಬಲ ಪ್ರತಿರೋಧದ ಕ್ರಮಗಳು’ ಎದುರಾಗಲಿವೆ ಎಂಬ ಎಚ್ಚರಿಕೆ ನೀಡಿತು.

ಬರಲಿರುವ ಕಾನೂನಿನಲ್ಲಿ ಏನಿರಲಿವೆ ಎಂಬುದರ ಸುಳಿವು ಈ ಕಾನೂನಿನ ಹಿಂದಿನ ಅವತಾರಗಳಲ್ಲಿ ಸಿಗುತ್ತದೆ. ಹಿಂದಿನ (2003ರ) ಒಂದು ಮಸೂದೆ ಹಾಗೂ ಕಾನೂನಿನಲ್ಲಿ ದೇಶದ್ರೋಹ, ಪ್ರತ್ಯೇಕತಾವಾದ, ಪಿತೂರಿಯಂತಹ ಕೃತ್ಯಗಳನ್ನು ನಿಷೇಧಿಸುವ, ವಿಶಾಲ ಅರ್ಥ ನೀಡುವ ಪದಗಳ ಬಳಕೆಯಾಗಿತ್ತು. ಹಾಗೆಯೇ, ಕಾನೂನು ಜಾರಿ ಸಂಸ್ಥೆಗಳ ಅಧಿಕಾರ ಹೆಚ್ಚಿಸುವ ಮಾತುಗಳಿದ್ದವು. ಹಾಂಗ್‌ಕಾಂಗ್‌ಗೆ ಸಂಬಂಧಿಸಿದ ಹಿಂದಿನ ಮಸೂದೆಯಲ್ಲಿ, ವಾರಂಟ್‌ ಇಲ್ಲದೆಯೇ ಮನೆ ಮೇಲೆ ದಾಳಿ ನಡೆಸುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿತ್ತು. ಇದು ಭಾರಿ ಪ್ರತಿಭಟನೆಗೆ ಕಾರಣವಾಗಿತ್ತು.

ಈ ಎರಡೂ ಕಾನೂನುಗಳು ಸರ್ಕಾರಗಳಿಗೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಯ ಸಾಧಿಸುವುದನ್ನು ಸುಲಭಗೊಳಿಸಿದ್ದವು. ಪೊರ್ಚುಗೀಸರ ವಸಾಹತು ಆಗಿದ್ದ ಮಕಾವ್‌ಗಾಗಿ ಸಿದ್ಧಪಡಿಸಿದ್ದ ಒಂದು ಕಾನೂನಿನ ಅನ್ವಯ, ವಿದೇಶಿ ಪೌರತ್ವ ಹೊಂದಿರುವ ನ್ಯಾಯಮೂರ್ತಿಗಳು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುವಂತಿಲ್ಲ.

ಹಾಂಗ್‌ಕಾಂಗ್‌ನ ರಾಜಕೀಯ ಚೌಕಟ್ಟು ಹೊಸ ಕಾನೂನಿನಿಂದ ಹೆಚ್ಚಿನ ರಕ್ಷಣೆಯನ್ನೇನೂ ನೀಡುವುದಿಲ್ಲ. ಹಾಂಗ್‌ಕಾಂಗ್‌ ನಗರದ ‘ಮೂಲ ಕಾನೂನು ಮತ್ತು ಹಕ್ಕುಗಳ ಸಂಹಿತೆ’ಯಲ್ಲಿ ನಾಗರಿಕ ಹಕ್ಕುಗಳಿಗೆ ವಿಸ್ತೃತ ರಕ್ಷಣೆ ನೀಡಲಾಗಿದೆ. ಆದರೆ, ಚೀನಾ ಈಗ ಸಿದ್ಧಪಡಿಸುತ್ತಿರುವಂತಹ ರಾಷ್ಟ್ರೀಯ ಭದ್ರತಾ ಕಾನೂನುಗಳಿಗೆ ಅದರಲ್ಲಿ ದೊಡ್ಡ ವಿನಾಯಿತಿ ಇದೆ.

‘ಪ್ರತ್ಯೇಕತಾವಾದ, ಸರ್ಕಾರವನ್ನು ಉರುಳಿಸುವುದು, ಭಯೋತ್ಪಾದನೆ ಅಥವಾ ಹಾಂಗ್‌ಕಾಂಗ್‌ನ ವಿಚಾರಗಳಲ್ಲಿ ವಿದೇಶಿ ಶಕ್ತಿಗಳ ಜೊತೆ ಕೈಜೋಡಿಸುವಂತಹ ಕೆಲಸಗಳಲ್ಲಿ ಭಾಗಿಯಾಗದೆ ಇರುವರು ಭಯಪಡಬೇಕಾದ ಅಗತ್ಯವೇ ಇಲ್ಲ’ ಎಂದು ತುಂಗ್‌ ಚೀಹ್ವಾ ಹೇಳಿದ್ದಾರೆ. ಇವರು 2003ರಲ್ಲಿ ಹಾಂಕಾಂಗ್‌ನ ಮುಖ್ಯ ಕಾರ್ಯನಿರ್ವಾಹಕ ಆಗಿದ್ದವರು.

ಹೊಸ ಕಾನೂನು ರಚನೆ ಹಾಗೂ ಅದರ ಅಂಗೀಕಾರದ ಪ್ರಕ್ರಿಯೆಯು ಕಳವಳಕ್ಕೆ ಕಾರಣವಾಗುತ್ತಿದೆ. ಚೀನಾದ ಶಾಸನಸಭೆಯ ಸ್ಥಾಯಿ ಸಮಿತಿಯು ಹೊಸ ನಿಯಮಗಳನ್ನು ರೂಪಿಸುತ್ತಿದೆ. ಈ ಪ್ರಕ್ರಿಯೆಯಲ್ಲಿ ಅದು ಹಾಂಗ್‌ಕಾಂಗ್‌ನ ಪರಿಣತರ ಜೊತೆ ಸಮಾಲೋಚನೆ ನಡೆಸಿಲ್ಲ. ನಿಯಮಗಳನ್ನು ರೂಪಿಸುವ ಪ್ರಕ್ರಿಯೆ ಪೂರ್ಣಗೊಂಡ ನಂತರ, ಹಾಂಗ್‌ಕಾಂಗ್‌ನಲ್ಲಿ ಚೀನಾದಿಂದ ನೇಮಕಗೊಂಡಿರುವ ನಾಯಕತ್ವವು ಅದನ್ನು ಕಾಯ್ದೆಯ ರೂಪಕ್ಕೆ ತಕ್ಷಣವೇ ತರುತ್ತದೆ. ‘ಇದು ಕೇಂದ್ರ ಸರ್ಕಾರದ ಕೆಲಸ ಆಗಿರುವ ಕಾರಣ, ಹಾಂಗ್‌ಕಾಂಗ್‌ನಲ್ಲಿ ಸಾರ್ವಜನಿಕ ಸಮಾಲೋಚನೆ ಇರುವುದಿಲ್ಲ ಎಂಬ ಆತಂಕ ನನ್ನಲ್ಲಿದೆ’ ಎಂದು ಹೇಳುತ್ತಾರೆ ಲ್ಯಾಮ್‌.

ಚೀನಾ ಈ ಕಾನೂನನ್ನು ರೂಪಿಸುತ್ತಿರುವ ಪ್ರಕ್ರಿಯೆಯು ಸಾಂವಿಧಾನಿಕವಾಗಿ ಇದೆಯೇ ಎಂಬ ಪ್ರಶ್ನೆಯನ್ನು ಪ್ರಜಾತಂತ್ರದ ಪರ ಇರುವ ಕೆಲವು ವಕೀಲರು ಎತ್ತಿದ್ದಾರೆ. ಆದರೆ, ಹಾಂಗ್‌ಕಾಂಗ್‌ನಲ್ಲಿ ಸಾಂವಿಧಾನಿಕ ಪ್ರಶ್ನೆಗಳು ಎದುರಾದರೆ ಅದನ್ನು ಅಂತಿಮವಾಗಿ ತೀರ್ಮಾನಿಸುವ ಅಧಿಕಾರವಿರುವುದು ಚೀನಾಕ್ಕೆ ಮಾತ್ರ.

2015ರ ಕೊನೆಯಲ್ಲಿ ಚೀನಾದಲ್ಲಿ ಕ್ರಿಮಿನಲ್‌ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ತಂದ ತಿದ್ದುಪಡಿ ಅನ್ವಯ, ‘ಭಯೋತ್ಪಾದನೆ ಅಥವಾ ತೀವ್ರವಾದದ ವಿಚಾರಗಳನ್ನು ಪುಸ್ತಕ, ಧ್ವನಿ ಮತ್ತು ದೃಶ್ಯಗಳ ರೂಪದಲ್ಲಿ ಅಥವಾ ಇತರ ರೂಪದಲ್ಲಿ ಪಸರಿಸಿದರೆ, ಅಥವಾ ಇಂಥ ವಿಚಾರಗಳನ್ನು ಬೋಧಿಸಿದರೆ’ ಅವರಿಗೆ ದೀರ್ಘಾವಧಿಯ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ಸರ್ಕಾರವನ್ನು ಉರುಳಿಸುವ ಕೃತ್ಯದ ವ್ಯಾಖ್ಯಾನವನ್ನು ಈಗಿನ ರಾಷ್ಟ್ರೀಯ ಭದ್ರತಾ ಕಾನೂನು ವಿಸ್ತರಿಸಿದೆ. 2003ರ ಮಸೂದೆಯು ಚೀನಾದ ಕಮ್ಯುನಿಸ್ಟ್‌ ಪಕ್ಷದ ವಿರುದ್ಧ ಎಸಗಿದ ಕೃತ್ಯಗಳನ್ನು ಈ ವ್ಯಾಖ್ಯಾನದ ಅಡಿ ಅಪರಾಧ ಎಂದು ತೀರ್ಮಾನಿಸುತ್ತಿತ್ತೇ ಎಂಬುದು
ಸ್ಪಷ್ಟವಿರಲಿಲ್ಲ ಎನ್ನುತ್ತಾರೆ ಹಾಂಗ್‌ಕಾಂಗ್‌ ವಿಶ್ವವಿದ್ಯಾಲಯದ ಕಾನೂನು ಪ್ರೊಫೆಸರ್ ಆಲ್ಬರ್ಟ್‌ ಚೆನ್. ಆದರೆ, ಕಮ್ಯುನಿಸ್ಟ್‌ ಪಕ್ಷದ ನಾಯಕತ್ವದ ಅಧಿಕಾರ ಕುಗ್ಗಿಸುವ ಯತ್ನಗಳನ್ನು ಹೊಸ ಕಾನೂನು ಅಪರಾಧವೆಂದು ಪರಿಗಣಿಸಬಹುದು.

ತಿಯಾನನ್‌ಮನ್‌ ಚೌಕದಲ್ಲಿ 1989ರಲ್ಲಿ ಸಾವಿಗೀಡಾದವರ ನೆನಪಿನಲ್ಲಿ ಪ್ರತಿವರ್ಷ ಜೂನ್‌ 4ರಂದು ವಿಕ್ಟೋರಿಯಾ ಪಾರ್ಕ್‌ನಲ್ಲಿ ಸಾವಿರಾರು ಜನ ಸೇರುತ್ತಾರೆ. ಅವರು ಕಮ್ಯುನಿಸ್ಟ್‌ ಪಕ್ಷದ ವಿರುದ್ಧ ಘೋಷಣೆ ಕೂಗುತ್ತಾರೆ. ಇಂತಹ ಘೋಷಣೆಗಳನ್ನು ಹೊಸ ಕಾನೂನು ನಿಷೇಧಿಸಲಿಕ್ಕಿಲ್ಲ. ಆದರೆ, ‘ಚೀನಾ ವಿರೋಧಿ ರಾಜಕೀಯ ಗುಂಪುಗಳು‘ ನಡೆಸುವ ಚಟುವಟಿಕೆಗಳನ್ನು ಇದು ನಿಷೇಧಿಸಬಹುದು ಎಂಬ ಅನಿಸಿಕೆ ವ್ಯಕ್ತವಾಗಿದೆ.

ಕೃಪೆ: ದಿ ನ್ಯೂಯಾರ್ಕ್‌ ಟೈಮ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.