ಸಮಾಜಕ್ಕೆ ಸರ್ವ ಸಮಾನತೆಯ ತಳಹದಿಯನ್ನು ಒದಗಿಸದ ಹೊರತು ‘ಸಬ್ ಕಾ ವಿಕಾಸ್’ ಸಾಧ್ಯವಿಲ್ಲ. ಶಿಕ್ಷಣವೇ ಇಂತಹ ತಳಹದಿಯನ್ನು ಒದಗಿಸುವಲ್ಲಿ ಪ್ರಧಾನವಾದ ಸಾಧನ. ಈಗ ಅಂತಹ ಸಾಧನವನ್ನು ಫಲಪ್ರದವಾಗುವಂತೆ ಉಪಯೋಗಿಸುವ ಅವಕಾಶ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮುಂದಿದೆ. ಏಕೆಂದರೆ ಹೊಸ ಶಿಕ್ಷಣ ನೀತಿ– 2019 ಅನ್ನು ಅನ್ವಯಿಸುವ ಹೊಸ್ತಿಲಲ್ಲಿ ನಾವಿದ್ದೇವೆ.
ಮುಖ್ಯ ಸಮಸ್ಯೆಯೆಂದರೆ, ಶಿಕ್ಷಣವನ್ನು ಹೇಗೆ ಕಟ್ಟಿಕೊಡುತ್ತೀರಿ ಎಂಬುದು. ಕನ್ನಡದಲ್ಲಿ ಕಟ್ಟಿ ಕೊಡುವುದಾದರೆ ಮೂರು ಕಾಸಿಗೆ ಆಗಬೇಕು, ಇಂಗ್ಲಿಷ್‍ನಲ್ಲಿ ಎಂದಾದರೆ ಕೇಳಿದಷ್ಟು ಶುಲ್ಕ ಕೊಡಲು ತಯಾರು. ಇಂತಹ ಶಾಲೆಗಳಲ್ಲಿ ಬಾಯಿಪಾಠದ ಕಲಿಕೆಯ ಸ್ಪೆಷಲ್ ಕೋಚಿಂಗ್ ಇರುತ್ತದೆ. ಇವುಗಳಲ್ಲಿ ಸಿ.ಬಿ.ಎಸ್.ಇ.ಯ ಅತಿಯಾದ ಪಾಠಪಟ್ಟಿಯ ಒತ್ತಡದಿಂದ ಶಿಕ್ಷಣವು ಶಿಕ್ಷೆ ಆಗಿದೆ. ಹೆಚ್ಚಿನ ಶುಲ್ಕಕ್ಕೆ ವಿವರಣೆಯಾಗಿ ಭವ್ಯವಾದ ಕಟ್ಟಡ, ಸಮವಸ್ತ್ರ, ಪಠ್ಯಪುಸ್ತಕಗಳು, ಊಟ-ಉಪಾಹಾರ, ದುಬಾರಿ ಪೀಠೋಪಕರಣ, ಆಟೋಪಕರಣ, ವಿವಿಧ ಕೌಶಲಗಳ ಶಿಕ್ಷಣ, ಶಾಲಾ ವಾಹನ, ಗ್ರ್ಯಾಜುಯೇಷನ್ ಡೇ ಮುಂತಾದ ವೆಚ್ಚಗಳ ಲೆಕ್ಕ ಕೊಡುತ್ತಾರೆ. ಇಂಗ್ಲಿಷ್ ಮೀಡಿಯಂ ಎಂಬ ಕಾರಣಕ್ಕೆ ಈ ವೆಚ್ಚಗಳೆಲ್ಲವೂ ಪ್ರಶ್ನಾತೀತವಾಗಿ ಬಿಡುತ್ತವೆ.
ಅಂದರೆ ಸರ್ಕಾರಿ ವ್ಯವಸ್ಥೆಯಲ್ಲಿ ಸಮವಸ್ತ್ರ, ಶೂಸ್, ಮಧ್ಯಾಹ್ನದ ಊಟ, ಪುಸ್ತಕಗಳು ಎಲ್ಲವನ್ನೂ ಉಚಿತವಾಗಿ ನೀಡುತ್ತಿದ್ದರೂ ಅವನ್ನು ನಿರ್ಲಕ್ಷಿಸಿ, ಎಲ್ಲಕ್ಕೂ ದುಡ್ಡು ವಸೂಲು ಮಾಡುವ ಖಾಸಗಿ ಶಿಕ್ಷಣ ವ್ಯವಸ್ಥೆಗೆ ಮೊರೆ ಹೋಗುವುದು ಭವಿಷ್ಯದಲ್ಲಿ ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಅನೇಕ ಬಡವರು ಜಾಣ್ಮೆ ಇದ್ದರೂ ಕಲಿಯುವ ಅವಕಾಶದಿಂದ ವಂಚಿತರಾಗುತ್ತಾರೆ. ಈ ಲೋಪವನ್ನು ನಿವಾರಿಸಲು ಹೊಸ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿ ಯಾವ ಪರಿಹಾರವೂ ಇಲ್ಲ.
21ನೇ ಶತಮಾನಕ್ಕೆ ಕಾಲಿಡುವವರೆಗೂ ತಳ ಸಮುದಾಯಗಳಲ್ಲಿ ‘ಮಕ್ಕಳು ಕಲಿತು ಏನಾಗಬೇಕಾಗಿದೆ? ಅವರಿಂದ ಕಲಿಯುವುದು ಸಾಧ್ಯವಿಲ್ಲ’ ಎಂಬ ಮನೋಭಾವ ಇತ್ತು. ಆದರೆ ಈಗ ಅಂತಹ ನಕಾರಾತ್ಮಕ ಮನೋಭಾವ ಮರೆಯಾಗಿದೆ. ಜನರೆಲ್ಲರೂ ಆಸೆಯಿಂದ ಶಿಕ್ಷಣದತ್ತ ನೋಡುತ್ತಿದ್ದಾರೆ. ಆದರೆ ಅಷ್ಟರಲ್ಲಿ ಶಿಕ್ಷಣವು ವ್ಯಾಪಾರದ ಸ್ವರೂಪವನ್ನು ಪಡೆದಿದೆ. ಹಾಗಾಗಿ ಹಣ ತೆರುವವರಿಗೆ ಖಾಸಗಿ ಶಾಲೆ ಮತ್ತು ಬಡವರಿಗೆ ಸರ್ಕಾರಿ ಶಾಲೆ ಎಂಬ ಸ್ತರೀಕರಣ (stratification) ಆಗಿದೆ. ಈ ಸ್ತರೀಕರಣವನ್ನು ಹೋಗಲಾಡಿಸದೆ ಸಬ್ ಕಾ ವಿಕಾಸ್ ಹೇಗೆ ಸಾಧ್ಯ? ಹಾಗಾಗಿ ಸರ್ವರಿಗೂ ಗುಣಮಟ್ಟದ ಶಿಕ್ಷಣ ನೀಡುವ ಕ್ರಾಂತಿಕಾರಿ ಹೆಜ್ಜೆ ಇಡುವ ಸವಾಲು ಸರ್ಕಾರದ ಮುಂದಿದೆ. ಅಂದರೆ ಶಿಕ್ಷಣದ ಹೊಸ ನೀತಿಯಲ್ಲಿ ಶಿಕ್ಷಣದ ವ್ಯಾಪಾರವನ್ನು ನಿಲ್ಲಿಸುವ ನಿರ್ಧಾರವನ್ನು ಸೇರಿಸಬೇಕು. ನೋಟ್ ಬ್ಯಾನ್ ಮಾಡಿದಂತೆ ಖಾಸಗಿ ಶಾಲೆಗಳನ್ನೂ ಬ್ಯಾನ್ ಮಾಡಿ ಅವುಗಳನ್ನು ಸಮಾನ ಶಿಕ್ಷಣದ ವ್ಯವಸ್ಥೆಯಡಿಗೆ ತರಬೇಕು. ಅರ್ಥಾತ್, ಪಿ.ಯು.ಸಿ ಹಂತದವರೆಗಿನ ಶಾಲೆಗಳ ರಾಷ್ಟ್ರೀಕರಣವೇ ಆಗಬೇಕು. ಅಂತಹ ಯಾವ ಪ್ರಸ್ತಾವವೂ ಕರಡು ಪ್ರತಿಯಲ್ಲಿ ಇಲ್ಲ. ಬದಲಾಗಿ, ಆರ್.ಟಿ.ಇ. ಸೌಲಭ್ಯವನ್ನು ಹನ್ನೆರಡನೇ ತರಗತಿಯ ತನಕ ವಿಸ್ತರಿಸಬೇಕೆಂದು ಶಿಫಾರಸು ಮಾಡಲಾಗಿದೆ. ಆದರೆ ಇದನ್ನು ಹೇಳುವಾಗ ಪ್ರಸ್ತುತ ಆರ್.ಟಿ.ಇ. ಜಾರಿಗೊಳಿಸಿದ್ದರಲ್ಲಿ ಆಗಿರುವ ನ್ಯೂನತೆಗಳನ್ನು ಪರಿಗಣಿಸಿಲ್ಲ. ಮುಖ್ಯವಾಗಿ, ಆರ್.ಟಿ.ಇ. ಸೀಟುಗಳನ್ನು ಹಣವಂತರೇ ದಕ್ಕಿಸಿಕೊಂಡಿದ್ದಾರೆ. ಅದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಿ ಸರ್ಕಾರದ ಮೇಲೆ ಶುಲ್ಕ ಮರುಪಾವತಿಯ ಹೊರೆ ಹೆಚ್ಚಿಸಿದೆ. ಆರ್.ಟಿ.ಇ. ಬದಲು ದೇಶದ ಎಲ್ಲಾ ಮಕ್ಕಳಿಗೆ ಹನ್ನೆರಡನೇ ತರಗತಿಯ ತನಕ ಉತ್ತಮ ಗುಣಮಟ್ಟದ ಉಚಿತ ಶಿಕ್ಷಣ ನೀಡುವ ನೀತಿ ಬರಲಿ.
ಶಿಕ್ಷಣದಲ್ಲಿ ಸ್ತರೀಕರಣ ಹೆಚ್ಚಿದಷ್ಟು ಸಮಾಜದಲ್ಲೂ ಸ್ತರಭೇದ ಘನೀಭವಿಸುತ್ತದೆ. ದೇಶದಾದ್ಯಂತ ರಾಜ್ಯ ಭಾಷೆಯ ಮಾಧ್ಯಮದ ಶಾಲೆಗಳು ಸರ್ಕಾರಿ ಶಾಲೆಗಳಾಗಿದ್ದು, ಖಾಸಗಿ ವಲಯದವರು ಇಂಗ್ಲಿಷ್ ಮೀಡಿಯಂ ನೆಚ್ಚಿಕೊಂಡಿದ್ದಾರೆ. ಸೇವೆಯ ಹೆಸರಿನಲ್ಲಿ ವ್ಯಾಪಾರ ನಡೆಸಲು ಅದಕ್ಕಿಂತ ಉತ್ತಮ ಮಾರ್ಗವಿಲ್ಲ. ಸರ್ಕಾರಿ ಶಾಲೆಗಳನ್ನು ‘ಉಳಿಸುವ’ ಹೆಸರಿನಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳಾಗಿ ಪರಿವರ್ತಿಸುವ ಪ್ರಯೋಗ ಕರ್ನಾಟಕ ಪಬ್ಲಿಕ್ ಸ್ಕೂಲ್‍ಗಳ ಸ್ಥಾಪನೆಯ ಮೂಲಕ ಈಗಾಗಲೇ ನಮ್ಮ ರಾಜ್ಯದಲ್ಲಿ ಆರಂಭವಾಗಿದೆ. ಈ ಮೊದಲೇ ಗುಪ್ತವಾಗಿ ಸ್ಥಳಿಯರೇ ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಪರಿವರ್ತಿಸಿದ ಉದಾಹರಣೆ
ಗಳಿವೆ. ಅಂತಹವರ ಅಕ್ರಮವು ಸಕ್ರಮವಾಗುವುದರೊಂದಿಗೆ ಅದು ಸುಧಾರಣೆಯ ಪ್ರಯತ್ನವೆಂದು ಪರಿಗಣಿಸಲ್ಪಡುತ್ತಿದೆ. ಆದರೆ ಇದು ಶಿಕ್ಷಣ, ಭಾಷೆ ಹಾಗೂ ಸಂಸ್ಕೃತಿಯನ್ನು ಕೆಡಿಸುವ ಪ್ರಕ್ರಿಯೆಯಾಗಿದೆ. ಈ ವಿದ್ಯಮಾನವನ್ನು ಅವಲೋಕಿಸಿದ ವಿವರವು ಕರಡು ಪ್ರತಿಯಲ್ಲಿ ಕಾಣಿಸುತ್ತಿಲ್ಲ.
ಖಾಸಗಿ ಶಾಲೆಗಳಲ್ಲೂ ಅದ್ಭುತವಾದ ಸ್ತರೀಕರಣ ಇದೆ. ಸಮವಸ್ತ್ರ, ಶೂಸ್, ಬ್ಯಾಗ್, ವಾಹನ ಎಂದು ಪ್ರತಿಯೊಂದರಲ್ಲೂ ವೈವಿಧ್ಯ ತರುವುದರೊಂದಿಗೆ ಏರ್ ಕಂಡಿಷನ್ ವ್ಯವಸ್ಥೆಯುಳ್ಳ ತರಗತಿ ಕೊಠಡಿಗಳು, ಕ್ರೀಡಾಂಗಣಗಳು, ಸಭಾಂಗಣಗಳು, ಈಜು, ಕುದುರೆ ಸವಾರಿ ಇತ್ಯಾದಿಗಳಿರುವ ಬಹು ದುಬಾರಿ ಮಟ್ಟದ ಶಾಲೆಗಳೂ ಇವೆ. ಹಾಗಾಗಿ ಕೆಳಮಧ್ಯಮ ವರ್ಗದಿಂದ ಅತಿ ಶ್ರೀಮಂತರ ತನಕ ಖರ್ಚು ಮಾಡುವ ತಾಕತ್ತಿಗೆ ಹೊಂದಿ ಸೇವೆ (?) ನೀಡುವ ಶಾಲೆಗಳಿವೆ. ಈ ವೈವಿಧ್ಯಮಯ ಶಾಲೆಗಳಿಗೆ ಹೋಗುವ ಒಂದೇ ಸಮಾಜದ ಮಕ್ಕಳು ಸ್ತರೀಕರಣ ರೇಖೆಗಳಲ್ಲಿಯೇ ಸಾಗುತ್ತಿರುತ್ತಾರೆ. ಅವರು ಒಂದೇ ಆಟದ ಬಯಲಿನಲ್ಲಿ ಪರಸ್ಪರ ಭೇಟಿಯಾಗುವುದು ಯಾವಾಗ? ಅವರು ಭೇಟಿಯಾಗುವುದೇ ಬೇಡವೇ? ಯಾವ ಮಗುವೂ ಏರ್ ಕಂಡಿಷನ್ ವ್ಯವಸ್ಥೆಯ ತರಗತಿಯಲ್ಲಿ ಕಲಿಯಬೇಕಾಗಿಲ್ಲ. ಸಮಾನತೆಗಾಗಿ ನೀಡುವ ಸಮಾನ ಅವಕಾಶಗಳಲ್ಲಿ ಸಮಾನ ಸ್ವರೂಪದ ತರಗತಿ ಕೊಠಡಿಗಳು ಬರುತ್ತವೆ. ಅವುಗಳಲ್ಲೇ ಎಲ್ಲರೂ ಕಲಿಯಲಿ. ಇದಾಗಬೇಕಿದ್ದರೆ ಶಿಕ್ಷಣ ಮಾಧ್ಯಮದ ಗೋಜಲನ್ನು ಸ್ಫೋಟಿಸಬೇಕಿದೆ.
ಶಿಕ್ಷಣದ ಸುಧಾರಣೆಗೆ ಅನೇಕ ರಾಚನಿಕ ಹಾಗೂ ಕಾರ್ಯಾತ್ಮಕ ಪರಿವರ್ತನೆಗಳ ಪ್ರಸ್ತಾವವನ್ನು ಮುಂದಿಟ್ಟಿರುವ ಈ ಕರಡು ಪ್ರತಿಯಲ್ಲಿ ಶಿಕ್ಷಣ ಮಾಧ್ಯಮದ ಬಗ್ಗೆ ನಿರಾಶಾದಾಯಕ ಸಲಹೆ ಇದೆ. ಸಾಧ್ಯವಿದ್ದಾಗ ಒಂದರಿಂದ ಐದನೇ ತರಗತಿಯ ತನಕ ಮನೆಯ ಭಾಷೆ, ಮಾತೃಭಾಷೆ, ಸ್ಥಳೀಯ ಭಾಷೆಯೇ ಶಿಕ್ಷಣ ಮಾಧ್ಯಮ ಆಗಿರಬೇಕೆಂದು ನೀತಿ ಆಯೋಗ ಹೇಳಿದೆ. ಇದೇ ಮಾಧ್ಯಮ ಎಂಟನೇ ತರಗತಿಯವರೆಗೂ ಇದ್ದರೆ ಒಳ್ಳೆಯದೆಂದು ಹೇಳಿದೆ. ಆದರೆ ‘ಸಾಧ್ಯವಿದ್ದಾಗ’ ಎಂಬ ಪದವನ್ನು ಪ್ರಯೋಗಿಸಿರುವುದರಿಂದ, ಹೆತ್ತವರು ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ನುಗ್ಗಲು ಪೂರ್ಣ ಅನುಕೂಲವಿದೆ. ಮಾತೃಭಾಷೆಯ ಪರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಸಂಭವಿಸಿರುವ ದುರಂತದ ಬಗ್ಗೆ ಗೊತ್ತಿದ್ದೂ ಆಯೋಗವು ಇಂತಹ ಲೋಪವನ್ನು ಇರಿಸಿರುವುದು ಆಶ್ಚರ್ಯಕರ. ಪ್ರಾಥಮಿಕ ಹಂತದಲ್ಲಿ ರಾಜ್ಯಭಾಷೆಯನ್ನೇ ಶಿಕ್ಷಣ ಮಾಧ್ಯಮವಾಗಿ ಜಾರಿಗೊಳಿಸಬೇಕು ಎಂದು ಸ್ಪಷ್ಟಪಡಿಸಿದ್ದರೆ ಸಮಸ್ಯೆ ಉಳಿಯುತ್ತಿರಲಿಲ್ಲ.
ರಾಜ್ಯಗಳ ವಿಂಗಡಣೆಗೆ ಭಾಷಾವಾರು ನೀತಿಯನ್ನು ಅನುಸರಿಸಿದ ಬಳಿಕ ರಾಜ್ಯಭಾಷೆಯನ್ನೇ ಪ್ರಾಥಮಿಕ ಶಿಕ್ಷಣ ಮಾಧ್ಯಮವಾಗಿ ಕಲಿಸುವಷ್ಟು ಮಟ್ಟದಲ್ಲಿ ಹೊಸ ಶಿಕ್ಷಣ ನೀತಿ ಬಲಿಷ್ಠವಾಗಬೇಕು. ಅದಾಗದೇ ಹೋದರೆ ಭಾರತದ ಸಾಂಸ್ಕೃತಿಕ ವೈವಿಧ್ಯ ಮರೆಯಾಗಿ ಇಂಗ್ಲಿಷ್ ಭಾಷೆಯ ಏಕಸಂಸ್ಕೃತಿಯು ಆವರಿಸಲಿದೆ. ಹಿಂದಿ ಹೇರಿಕೆಯಂತೂ ಹಿಂದೆ ಸರಿದಿದೆ. ಈಗ ಉಳಿದಿರುವುದು ಭಾಷೆ ಮತ್ತು ಸಂಸ್ಕೃತಿ ರಕ್ಷಣೆಯ ಸವಾಲು.
ಕರ್ನಾಟಕದಲ್ಲಿ ಈ ವರ್ಷ ಇಂಗ್ಲಿಷ್‌ನ ಮೇಘಸ್ಫೋಟವಾಗಿ, ಸರ್ಕಾರಿ ಶಾಲೆಗಳಿಂದಲೂ ಕನ್ನಡವು ಪ್ರವಾಹದಲ್ಲಿ ಕೊಚ್ಚಿಹೋಗುವ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಾ ಸರ್ಕಾರಿ ಶಾಲೆಗಳೂ ಇಂಗ್ಲಿಷ್ ಮಾಧ್ಯಮಮಯ ಆಗಲಿವೆ. ಇಂತಹ ಆತಂಕ ಇರುವಾಗ, ಹೊಸ ಶಿಕ್ಷಣ ನೀತಿಯಿಂದ ಕರ್ನಾಟಕದಲ್ಲಿ ಕನ್ನಡದ ಪುನರ್ವಸತಿ ಸಾಧ್ಯವೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.