ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರಿಗೆ ಆಗ 10 ವರ್ಷ ವಯಸ್ಸು. ಭಾರತಕ್ಕೆ ಇನ್ನೂ ಸ್ವಾತಂತ್ರ್ಯ ಬಂದಿರಲಿಲ್ಲ. ಢಾಕಾದ ತಮ್ಮ ಮನೆಯಲ್ಲಿ ಆಡಿಕೊಳ್ಳುತ್ತಿದ್ದರು. ಬೆನ್ನೆಲ್ಲಾ ರಕ್ತದಿಂದ ತೋಯ್ದುಹೋಗಿದ್ದ ಒಬ್ಬ ವ್ಯಕ್ತಿ ಅಳುತ್ತಾ ಇವರ ಮನೆಗೆ ಓಡಿಬರುತ್ತಾನೆ. ಅದು ಕೋಮುಗಲಭೆ ನಡೆಯುತ್ತಿದ್ದ ಸಂದರ್ಭ. ಆತನನ್ನು ಯಾರೋ ಚಾಕುವಿನಿಂದ ಇರಿದಿದ್ದರು. ಆತ ದಿನಗೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿ. ಹೊಟ್ಟೆಪಾಡಿಗೆ ನೆರೆಹೊರೆಯ ಮನೆಗಳಲ್ಲಿ ಕೆಲಸಕ್ಕೆ ಬಂದಿದ್ದಾಗ, ಬಹುಸಂಖ್ಯಾತರೇ ಹೆಚ್ಚಾಗಿದ್ದ ಇವರ ಬಡಾವಣೆಯಲ್ಲಿ ಯಾರೋ ಕೋಮು ವಾದಿ ದುರುಳರು ಆತನನ್ನು ಇರಿದಿದ್ದರು. ಸೇನ್ ಅವರ ತಂದೆ ಆತನನ್ನು ಆಸ್ಪತ್ರೆಗೆ ಕರೆದೊಯ್ದರು.
‘ನಮ್ಮನ್ನು ದ್ವೇಷಿಸುವವರೇ ಹೆಚ್ಚಾಗಿರುವ ಬಡಾವಣೆಗೆ ಹೋಗಬೇಡ’ ಎಂದು ಆ ಕೂಲಿಕಾರ್ಮಿಕನ ಹೆಂಡತಿ ಹೇಳುತ್ತಲೇ ಇದ್ದಳಂತೆ. ಆದರೆ ಆತನಿಗೆ ಹೀಗೆ ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿತ್ತು. ಕಿತ್ತು ತಿನ್ನುವ ಬಡತನ. ಆರ್ಥಿಕ ಸ್ವಾತಂತ್ರ್ಯ ಇಲ್ಲದ ಕಾರಣಕ್ಕೆ ಆತ ಪ್ರಾಣವನ್ನು ಪಣಕ್ಕೆ ಒಡ್ಡಬೇಕಾಯಿತು.
ಬಡತನದಿಂದಾಗಿ ಮನುಷ್ಯ ಆರ್ಥಿಕ ಸ್ವಾತಂತ್ರ್ಯವನ್ನುಕಳೆದುಕೊಳ್ಳುತ್ತಾನೆ. ಅದರ ಪರಿಣಾಮವಾಗಿ, ಇತರ ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯಗಳಿಂದಲೂ ವಂಚಿತನಾಗಿಬಿಡುತ್ತಾನೆ. ಸಾಮಾಜಿಕ ಅಥವಾ ರಾಜಕೀಯ ಸ್ವಾತಂತ್ರ್ಯ ಇಲ್ಲದಿರುವುದು ಕೂಡ ಆರ್ಥಿಕ ಸ್ವಾತಂತ್ರ್ಯ ಇಲ್ಲದಿರುವುದಕ್ಕೆ ಕಾರಣವಾಗುತ್ತದೆ. ಇದನ್ನು ಅರ್ಥಮಾಡಿಕೊಂಡ ಸೇನ್, ಅಭಿವೃದ್ಧಿಯನ್ನು ಈಸ್ವಾತಂತ್ರ್ಯಗಳನ್ನು ವಿಸ್ತರಿಸುವ ಪ್ರಕ್ರಿಯೆಯಾಗಿ ನೋಡು ತ್ತಾರೆ. ಅಭಿವೃದ್ಧಿಯನ್ನು ಸಾಮಾನ್ಯವಾಗಿ ಜಿಡಿಪಿ ಹೆಚ್ಚಳ, ಕೈಗಾರಿಕೀಕರಣ, ತಾಂತ್ರಿಕ ಬೆಳವಣಿಗೆ, ಸಾಮಾಜಿಕ ಆಧುನೀಕರಣ ಅನ್ನುವ ಅರ್ಥದಲ್ಲಿ ನೋಡಲಾಗುತ್ತದೆ. ಜಿಡಿಪಿಯ ಹೆಚ್ಚಳದಿಂದ ಸಮಾಜದಲ್ಲಿ ಮನುಷ್ಯನಿಗಿರುವ ಸ್ವಾತಂತ್ರ್ಯ ಬಲಗೊಳ್ಳುತ್ತದೆಯಾದರೂ ಜನರ ಬದುಕನ್ನು ಹೆಚ್ಚು ಶ್ರೀಮಂತಗೊಳಿಸುವುದಕ್ಕೆ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯಗಳೂ ಮುಖ್ಯವಾಗುತ್ತವೆ. ಇವು ಮನುಷ್ಯನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಜನ ನಿಜವಾಗಿ ಬದುಕಬೇಕು ಅಂದುಕೊಂಡ ರೀತಿಯಲ್ಲಿ ಬದುಕುವುದಕ್ಕೆ ನೆರವಾಗುತ್ತವೆ.
ಸೇನ್ ಗುರುತಿಸುವಂತೆ, ಈ ಸ್ವಾತಂತ್ರ್ಯಗಳು ಮನುಷ್ಯನ ಜೀವನಮಟ್ಟವನ್ನು ಸುಧಾರಿಸುವುದರ ಜೊತೆಗೆ ಇತರ ಹಲವು ಸಮಸ್ಯೆಗಳಿಗೂ ಪರಿಹಾರ ದೊರಕಿಸಿಕೊಡು ತ್ತವೆ. ಉದಾಹರಣೆಗೆ, ಜನಸಂಖ್ಯಾ ಹೆಚ್ಚಳವನ್ನು ಹೆಚ್ಚಿನ ಸಾಮಾಜಿಕ ಭದ್ರತೆ, ಶಿಕ್ಷಣದ ಮೂಲಕ ನಿಯಂತ್ರಿಸಬಹುದು. ಬೆಳವಣಿಗೆಯನ್ನು ಸ್ವಾತಂತ್ರ್ಯಗಳನ್ನು ವಿಸ್ತರಿಸುವ ಪ್ರಕ್ರಿಯೆಯಾಗಿ ನೋಡುವುದಕ್ಕೆ ಸಾಧ್ಯವಾಗಬೇಕು. ಆಗ ನಮಗೆ ಅಭಿವೃದ್ಧಿಯನ್ನು ಹೇಗೆ ಸಾಧಿಸಬೇಕು ಅನ್ನುವುದಕ್ಕಿಂತ ಅಭಿವೃದ್ಧಿ ಯಾಕೆ ಬೇಕು ಅನ್ನುವುದು ಮುಖ್ಯವಾಗುತ್ತದೆ.
ಈ ಚಿಂತನೆಯನ್ನು ಮುಂದುವರಿಸುತ್ತಾ ಮತ್ತೊಬ್ಬ ಅರ್ಥಶಾಸ್ತ್ರಜ್ಞ ಜೋಸೆಫ್ ಸ್ಟಿಗ್‌ಲಿಟ್ಜ್, ಸ್ವಾತಂತ್ರ್ಯವನ್ನು
ಒಬ್ಬ ವ್ಯಕ್ತಿಯ ಆಯ್ಕೆಗಿರುವ ಅವಕಾಶವನ್ನಾಗಿ ನೋಡು ತ್ತಾರೆ. ಆಯ್ಕೆಗಿರುವ ಅವಕಾಶ ಹೆಚ್ಚಾಗಿ ಇದ್ದಷ್ಟೂ ಮನುಷ್ಯನ ಸ್ವಾತಂತ್ರ್ಯ ಹೆಚ್ಚುತ್ತದೆ. ಒಬ್ಬ ಹೊಟ್ಟೆಗೇ ಇಲ್ಲದ ಸ್ಥಿತಿಯಲ್ಲಿದ್ದರೆ ಅವನು ಎಲ್ಲಾ ಅವಕಾಶಗಳಿಂದ ವಂಚಿತನಾಗಿರುತ್ತಾನೆ. ಅವನಿಗೆ ಯಾವ ಸ್ವಾತಂತ್ರ್ಯವೂ ಇರುವುದಿಲ್ಲ. ಒಂದು ದೇಶದಲ್ಲಿ ಅಂತಹವರೇ ಹೆಚ್ಚಾಗಿದ್ದರೆ ಆ ದೇಶದಲ್ಲಿ ಸ್ವಾತಂತ್ರ್ಯ ಇಲ್ಲ ಅಂತಲೇ ಭಾವಿಸಬೇಕು.
ಸ್ಟಿಗ್‌ಲಿಟ್ಜ್ ದೃಷ್ಟಿಯಲ್ಲಿ ಅಸಮಾನತೆ ಹಾಗೂ ಬಡತನ ಹೆಚ್ಚಾಗಿರುವ ದೇಶಗಳು ಸ್ವತಂತ್ರ ದೇಶಗಳಲ್ಲ. ಬಡತನ, ನಿರುದ್ಯೋಗ ಅಥವಾ ಅನಾರೋಗ್ಯ ಇವೆಲ್ಲಾ ಮನುಷ್ಯನ ಸ್ವಾತಂತ್ರ್ಯವನ್ನು ಅತಿಯಾಗಿ ಕುಗ್ಗಿಸುತ್ತವೆ. ಅದಕ್ಕೆ ವ್ಯತಿರಿಕ್ತವಾಗಿ, ಸರ್ಕಾರಗಳು ನೀಡುವ ಹಣಕಾಸಿನ ಬೆಂಬಲ ಹಾಗೂ ಶಿಕ್ಷಣ, ತರಬೇತಿ, ಆರೋಗ್ಯದ ನೆರವು, ಸಬ್ಸಿಡಿಗಳು ಜನರ ಸ್ವಾತಂತ್ರ್ಯವನ್ನು ಹೆಚ್ಚಿಸುತ್ತವೆ. ಸರ್ಕಾರ ಎಲ್ಲರಿಗೂ ಆಹಾರ, ಉದ್ಯೋಗ, ಗುಣಮಟ್ಟದ ಶಿಕ್ಷಣ, ಆರೋಗ್ಯ, ಪಿಂಚಣಿಯನ್ನು ನೀಡುವ ಮೂಲಕ ಜನರ ಸ್ವಾತಂತ್ರ್ಯವನ್ನು ಸದೃಢಗೊಳಿಸಬಹುದು. ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕೆ ಸರ್ಕಾರಕ್ಕೆ ಹಣ ಬೇಕು. ಹಣವನ್ನು ಕ್ರೋಡೀಕರಿಸುವುದಕ್ಕೆ ಸರ್ಕಾರಕ್ಕೆ ಇರುವ ದಾರಿ ಅಂದರೆ ತೆರಿಗೆ.
ಇಂದು ನಾವು ಅನುಸರಿಸುತ್ತಿರುವ ಬೆಳವಣಿಗೆಯ ಮಾದರಿಯಲ್ಲಿ ಒಂದು ಸಮಸ್ಯೆಯಿದೆ. ಅದು ಆರ್ಥಿಕ ಪ್ರಗತಿಗೆ ಬೃಹತ್ ಹೂಡಿಕೆದಾರರನ್ನು ನೆಚ್ಚಿಕೊಂಡಿದೆ. ಅದರಿಂದಾಗಿ ಸರ್ಕಾರದ ಆದ್ಯತೆಗಳೆಲ್ಲಾ ಅವರ ಸ್ವಾತಂತ್ರ್ಯವನ್ನು ವಿಸ್ತರಿಸುವ ಕಡೆಗಿವೆ. ಅವರ ಸಂಪತ್ತಿನ ಮೇಲೆ ತೆರಿಗೆ ವಿಧಿಸುವುದನ್ನು ಅವರ ಸ್ವಾತಂತ್ರ್ಯಕ್ಕೆ ಅಡ್ಡಿ ಎಂಬಂತೆ ನೋಡಲಾಗುತ್ತಿದೆ. ತೆರಿಗೆ ಹಾಗೂ ನಿಯಂತ್ರಣದಂತಹವು ಗಳಿಂದ ಮುಕ್ತಗೊಳಿಸುವ ಮೂಲಕ ಅವರ ಸ್ವಾತಂತ್ರ್ಯವನ್ನು ಬಲಪಡಿಸುವ ದಿಸೆಯಲ್ಲಿ ನೀತಿಗಳು ರೂಪುಗೊಳ್ಳು ತ್ತಿವೆ. ಹಾಗೆ ಮಾಡುವುದರಿಂದ ಹೂಡಿಕೆ ಹೆಚ್ಚುತ್ತದೆ, ಆರ್ಥಿಕ ಪ್ರಗತಿಯಾಗುತ್ತದೆ ಎಂದು ಹಲವು ಆರ್ಥಿಕ ತಜ್ಞರು ವಾದಿಸುತ್ತಿದ್ದಾರೆ. ಅವರ ಪ್ರಕಾರ, ಆರ್ಥಿಕತೆಯಲ್ಲಿ ಸರ್ಕಾರದ ಪಾತ್ರ ಕನಿಷ್ಠ ಪ್ರಮಾಣದಲ್ಲಿ ಇರಬೇಕು. ಹೀಗೆ ಹೇಳುವಾಗ ಅವರು ಒಂದು ಅಂಶವನ್ನು ಮರೆಯುತ್ತಾರೆ. ರಸ್ತೆಗಳು, ಬಂದರುಗಳಂತಹವು ಇಲ್ಲದೇ ಹೋಗಿದ್ದರೆ ಉದ್ದಿಮೆದಾರರಿಗೆ ಸರಕುಗಳನ್ನು ಸಾಗಿಸಲು ಸಾಧ್ಯವಾಗುತ್ತಿರಲಿಲ್ಲ. ಶಿಕ್ಷಣ, ಆರೋಗ್ಯ ಇಲ್ಲದಿದ್ದರೆ ಉದ್ಯೋಗಿಗಳು ಸಿಗುತ್ತಿರಲಿಲ್ಲ. ಕಾನೂನು ಸುವ್ಯವಸ್ಥೆ ಇಲ್ಲದೇ ಹೋಗಿದ್ದರೆ ಮುಕ್ತ ವಾಣಿಜ್ಯ ಚಟುವಟಿಕೆ ಸಾಧ್ಯವಾಗುತ್ತಿರಲಿಲ್ಲ.
ಜಗತ್ತಿನ ಬಹುಪಾಲು ರಾಷ್ಟ್ರಗಳು ಖಾಸಗಿ, ಸರ್ಕಾರಿ, ಸಹಕಾರಿ ಹಾಗೂ ಲಾಭದ ಉದ್ದೇಶ
ಇಲ್ಲದ ಉದ್ದಿಮೆಗಳಿಂದ ಕೂಡಿದ್ದ ಸೊಗಸಾದ, ಸಂಕೀರ್ಣ ವಾದ ಆರ್ಥಿಕತೆಯನ್ನು ಹೊಂದಿದ್ದವು. ಕಾರ್ಪೊರೇಟ್ ಕೇಂದ್ರಿತ ಆರ್ಥಿಕ ಚಿಂತನೆಯಿಂದ ಅದೊಂದು ಲಾಭ ಮುಖ್ಯವಾಗಿರುವ ಮುಕ್ತ ಉದ್ದಿಮೆಗಳ ಆರ್ಥಿಕತೆಯಾಗಿಬಿಟ್ಟಿದೆ ಎಂದು ಸ್ಟಿಗ್‌ಲೆಟ್ಜ್ ಹೇಳುತ್ತಾರೆ. ಕೆಲವು ಉದ್ಯಮಿಗಳು ಅನಿಯಂತ್ರಿತ ಏಕಸ್ವಾಮ್ಯದ ಸ್ವಾತಂತ್ರ್ಯ ಬಯಸುವುದುಂಟು. ನೈಸರ್ಗಿಕ ಸಂಪತ್ತಿನ ಒಡೆತನವೂ ಬೇಕು. ಅಂತಹ ಆರ್ಥಿಕತೆಯಲ್ಲಿ ಅಭಿವೃದ್ಧಿಯ ಫಲ ಎಲ್ಲರಿಗೂ ಸಮಾನವಾಗಿ ಸಿಗುವುದಕ್ಕೆ ಸಾಧ್ಯವೇ ಇಲ್ಲ.
ಬೃಹತ್ ಹೂಡಿಕೆದಾರರಿಗೆ ನೀಡುತ್ತಿರುವ ಕೆಲವು ವಿಶೇಷ ಸವಲತ್ತುಗಳು ಹಾಗೂ ಸ್ವಾತಂತ್ರ್ಯದ ಪರಿಣಾಮವಾಗಿ ಇಂದು ದೇಶದಲ್ಲಿ ಅಸಮಾನತೆ, ಪರಿಸರ ಮಾಲಿನ್ಯ, ಬೃಹತ್ ಉದ್ಯಮಗಳ ಏಕಸ್ವಾಮ್ಯ, ಹಣಕಾಸು ಬಿಕ್ಕಟ್ಟು, ನಿರಂಕುಶ ಆಳ್ವಿಕೆಯಂಥವು ಹೆಚ್ಚುತ್ತಿರುವುದನ್ನು ನೋಡುತ್ತಿದ್ದೇವೆ. ಈ ಪ್ರಕ್ರಿಯೆಯಲ್ಲಿ ಜನರ ಸ್ವಾತಂತ್ರ್ಯ ಕಡಿಮೆಯಾಗುತ್ತಿದೆ. ಬದುಕು ದುಸ್ತರವಾಗುತ್ತಿದೆ. ಬದುಕಲು ಇರುವ ಸ್ವಾತಂತ್ರ್ಯ ಉಳಿದ ಸ್ವಾತಂತ್ರ್ಯಗಳಿಗಿಂತ ಶ್ರೇಷ್ಠವಾದದ್ದು. ದೊಡ್ಡ ಉದ್ಯಮಪತಿಗಳಿಗೆ ಪರಿಸರ ಕೆಡಿಸಬಾರದು ಎಂಬ ನಿರ್ಬಂಧ ಹೇರಿದರೆ ಮುಂದಿನ ತಲೆಮಾರಿನವರಿಗೆ ಒಳ್ಳೆಯ ಬದುಕು ಸಾಧ್ಯ ಆಗುತ್ತದೆ. ಯಾವುದಾದರೂ ನಿಯಂತ್ರಣದಿಂದ ಒಟ್ಟಾರೆ ಸಮಾಜಕ್ಕೆ ಒಳಿತಾಗುವುದಾದರೆ ಅದು ಸಮರ್ಥನೀಯ.
ಜನರ ಸಾಮರ್ಥ್ಯವನ್ನು, ಅವರಿಗಿರುವ ಆಯ್ಕೆಯ ಅವಕಾಶವನ್ನು ಹೆಚ್ಚಿಸುವ ದೃಷ್ಟಿಯಿಂದ ಸ್ಟಿಗ್‌ಲಿಟ್ಜ್ ತರಹದ ಚಿಂತಕರು ಸರ್ಕಾರವು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಸೂಚಿಸುತ್ತಾರೆ. ಶಿಕ್ಷಣ, ಆರೋಗ್ಯದಂತಹವುಗಳನ್ನು ಒದಗಿಸುವ ಮೂಲಕ ಮಾನವ ಬಂಡವಾಳವನ್ನು, ಸಹಕಾರ ಹಾಗೂ ವಿಶ್ವಾಸವನ್ನು ಆಧರಿಸಿದ ಸಾಮಾಜಿಕ ಬಂಡವಾಳವನ್ನು, ಒಳ್ಳೆಯ ಗಾಳಿ ಹಾಗೂ ತಾಳಿಕೆಯ ಪರಿಸರವಿರುವ ನೈಸರ್ಗಿಕ ಬಂಡವಾಳವನ್ನು ಹೆಚ್ಚಿಸಬೇಕು ಎನ್ನುತ್ತಾರೆ. ಇವ್ಯಾವುದರಿಂದಲೂ ಜಿಡಿಪಿ ಹೆಚ್ಚುವುದಿಲ್ಲ. ಆದರೆ ಇವು ಮುಖ್ಯ. ಸರ್ಕಾರಕ್ಕೆ ಇಂತಹ ಸಾರ್ವಜನಿಕ ಸ್ವತ್ತನ್ನು ಬೆಳೆಸುವುದಕ್ಕೆ ಬಂಡವಾಳ ಬೇಕಾಗುತ್ತದೆ. ಅದಕ್ಕಾಗಿ ತೆರಿಗೆ ಸಂಗ್ರಹಿಸಬೇಕಾಗುತ್ತದೆ.
ಕೋಟ್ಯಧಿಪತಿಗಳು ತಮ್ಮ ಸಂಪತ್ತಿನ ಮೇಲೆ ಸ್ವಲ್ಪ ಹೆಚ್ಚಿನ ತೆರಿಗೆ ಕಟ್ಟಬೇಕಾಗಬಹುದು. ಅದರಿಂದ ಅವರಿಗೆ ಒಂದಿಷ್ಟು ಅನನುಕೂಲವಾಗಬಹುದು. ಆದರೆ ಅವರೂ ಸರ್ಕಾರ ಕಲ್ಪಿಸಿರುವ ಮೂಲಸೌಕರ್ಯದ ಲಾಭ ಪಡೆದುಕೊಂಡೇ ಬಂದಿರುತ್ತಾರೆ. ಹೆಚ್ಚುವರಿ ತೆರಿಗೆಯಿಂದ ಕಲ್ಪಿಸಬಹುದಾದ ಸೌಲಭ್ಯದಿಂದ, ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿರುವ ಮಗುವಿನ ಬದುಕಿನಲ್ಲಿ, ಸಮಾಜದ ಕಟ್ಟಕಡೆಯ ಮನುಷ್ಯನ ಬದುಕಿನಲ್ಲಿ ಆಗಬಹುದಾದ ಬದಲಾವಣೆಯನ್ನು ಊಹಿಸಿಕೊಳ್ಳಿ. ಅವರ ಬದುಕು ಸುಧಾರಿಸುತ್ತದೆ. ಅಂತಿಮವಾಗಿ ಒಟ್ಟಾರೆ ಸಮಾಜಕ್ಕೆ ಅನುಕೂಲವಾಗುತ್ತದೆ. ಹಾಗಾಗಿ ವರಮಾನದ, ಸಂಪತ್ತಿನ ಒಂದಿಷ್ಟನ್ನು ತೆರಿಗೆಯಾಗಿ ಕಟ್ಟಲು ಮಾಡುವ ಒತ್ತಾಯವನ್ನು ಇಡೀ ಸಮಾಜದ ಒಳಿತಿನ ಕಡೆಗಿನ, ವಿಮೋಚನೆಯ ಕಡೆಗಿನ ಹೆಜ್ಜೆಯಾಗಿ ನೋಡುವುದಕ್ಕೆ ಸಾಧ್ಯವಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.