ಬಾಬಾ ಸಾಹೇಬ್ ಅಂಬೇಡ್ಕರ್ ಕೋಟ್ಯಂತರ ಯುವ ಮನಸ್ಸುಗಳ ಒಳಗೆ ಇಳಿದು ಬೆಳೆಯುತ್ತಲೇ ಇರುವ ಪರಿ ನಿಜಕ್ಕೂ ಅಚ್ಚರಿ ಅನಿಸುತ್ತದೆ. ಅಂಬೇಡ್ಕರ್ ಅವರೊಳಗಿನ ಅನಂತ ಕರುಣೆಯ ಒರತೆ, ಮಾನವ ಹಕ್ಕುಗಳ ಪಾಠ ಹೇಳುವ ಮಹೋಪಾಧ್ಯಾಯ, ಪ್ರತೀ ಕ್ಷಣವೂ ಎಚ್ಚರಿಸುವ ಪ್ರಖರ ಆತ್ಮಸಾಕ್ಷಿ, ಪ್ರಜ್ಞೆ ಮತ್ತು ಕರುಣೆಯ ಜೀವಂತ ಪರಂಪರೆ. ಎಂಥ ಗ್ರಹಿಕೆ! ಹೊಸನುಡಿಗಟ್ಟು, ಹೊಸ ಆಲೋಚನೆ, ನೋಡುವ ಕ್ರಮವೂ ಹೊಸದೇ. ಆರಾಧನೆಗಿಂತ ಅರಿವಿಗೆ ಆದ್ಯತೆ. ಆಕ್ರೋಶಕ್ಕಿಂತ ವಿವೇಕದ ಮಾತು. ಪ್ರತಿಕಾರಕ್ಕಿಂತ ಮಾನವೀಯತೆಯೇ ಮೇಲು ಎನ್ನುವ ಪ್ರಬುದ್ಧತೆ. ಹಳೆಯ ಗಾಯವನ್ನು ನೆನಪಿಸಿಕೊಳ್ಳುತ್ತಲೇ ಅದಕ್ಕೆ ಮದ್ದು ಅರೆಯುವ ಕನಸು. ಹೊಸ ಬಗೆಯ ದೃಷ್ಟಿಕೋನ. ಇಂತಹ ಯುವ ಮನಸ್ಸುಗಳನ್ನು ಅರಿತಾಗ ನಾಳಿನ ಭಾರತದ ಬಗೆಗೆ ಭರವಸೆ ಮೂಡುತ್ತದೆ.
––––––––
ಅನಂತ ಕರುಣೆಯ ಒರತೆ
ಅಂಬೇಡ್ಕರ್ ಅಂದರೆ ಯಾರು ಎಂದು ನನ್ನೊಳಗೆ ನಾನು ಕೇಳಿಕೊಂಡರೆ ಕೇಳಿಸುವ ಉತ್ತರ- ದಿಕ್ಕು ದಿಕ್ಕಿಗೂ ಬೆಂಕಿಯುಂಡೆ ತೂರಿಬರುವ ಕ್ರೌರ್ಯದ ಕಗ್ಗಾಡಿನಲ್ಲಿ ಸದ್ದಿರದೆ ತೆರೆದುಕೊಂಡ ರಕ್ಷೆಯ ಸೂರು. ಆ ಸೂರಿನಡಿಯಲ್ಲಿ ದ್ವೇಷವಿಲ್ಲ, ಅಸೂಯೆ ಇಲ್ಲ, ಪಕ್ಷಪಾತಗಳಿಲ್ಲ. ಅಲ್ಲಿರುವುದು ಕರುಣೆ, ತಿಳಿವು, ಸಂಕಟಗಳ ಆಳದಿಂದ ಎದ್ದ ಜೀವಪರ ಪ್ರಜ್ಞೆ.
ಎಂದೋ, ಎಲ್ಲೋ ಹುಟ್ಟಿ, ಅಕ್ಷರ ಕಲಿತು, ಒಂದು ನೆಲದ ನಾಡಿಮಿಡಿತಕ್ಕೆ ನಾದ ಹೊಸೆದು, ಸುಮ್ಮನೆದ್ದು ಹೋದರೆ ಬಾಬಾ ಸಾಹೇಬರು? ಬಹುಶಃ ಅದು ಅಷ್ಟೇ ಆಗಿದ್ದರೆ ಈ ಚರಿತ್ರೆಯ ಬಣ್ಣ ಬೇರೆ ಆಗಿದ್ದೀತು. ತಾವು ಉಂಡ ಸಂಕಟಗಳ ಹಾದಿಯಲ್ಲಿ ಹೂ ತೋಟ ರೂಪಿಸಲು ನಿದ್ರೆಗೆಟ್ಟ ಜೀವ. ಇವರನ್ನು ಈ ಸಮಾಜ ಒಂದು ನಿರ್ದಿಷ್ಟ ಜಾತಿಯ ಪಾಲಕ ಎಂದು ಕರೆದರೆ? ಸ್ವಾಮಿ ಆ ಕೊಳಚೆಯನ್ನು ತಾನೂ ಮೀರಿ, ತನ್ನಂಥವರನ್ನು, ತನಗಿಂತ ದೀನರನ್ನು ಕರೆದು ಅವರ ಅಂಗೈಗೆ ಹೊಸ ನಾಳೆಗಳ ನಕ್ಷೆ ಬರೆದುಕೊಳ್ಳುವ ಅಕ್ಷರದ ಆಯುಧವನ್ನು ಬಲು ಜತನದಿಂದ ರೂಪಿಸಿ ಕೊಟ್ಟ ಅವರು, ನಮ್ಮ ನಿಮ್ಮಂತೆಯೇ ಒಬ್ಬ ಸಾಮಾನ್ಯ ಮನುಷ್ಯ ಎಂದರೆ ನಂಬಲು ಇನ್ನೂ ಪುರಾವೆಗಳು ಬೇಕೆ?
ಕಾಣದ ದೇವರನ್ನು ನಂಬಿಬಿಡುವ ನಮಗೇಕೆ ಒಂದು ಕರುಣೆಯ ಉದ್ದೇಶ ನಾಟುವುದಿಲ್ಲ? ಒಬ್ಬ ಮನುಷ್ಯಜೀವಿ ಇನ್ನೊಬ್ಬ ಮನುಷ್ಯಜೀವಿಯನ್ನು ಕನಿಷ್ಠಕ್ಕಿಂತಲೂ ಕೀಳಾಗಿ ನಡೆಸಿಕೊಳ್ಳುವ, ದುಡಿಸಿಕೊಳ್ಳುವ, ಸಾವು ಬದುಕುಗಳ ನಡುವಿನ ವ್ಯತ್ಯಾಸಗಳೆಲ್ಲ ಬೆರೆತುಹೋಗುವಂತಹ ಯಾತನೆಗಳನ್ನೇ ಪರಂಪರೆ, ಸಂಸ್ಕೃತಿ, ಇದು ಇರಬೇಕಾದದ್ದೇ ಹೀಗೆ ಎಂದೆಲ್ಲ ಬಿಂಬಿಸಿ ನಂಬಿಸಿ ಒಂದಿಡೀ ಸಮುದಾಯವನ್ನೇ ವಿನಾಕಾರಣ ಇನ್ನಿಲ್ಲದ ಅಂಧಕಾರದಿಂದ ಬಿಡುಗಡೆಯೇ ಇಲ್ಲ ಎಂದು ತಲೆಮಾರುಗಳಿಂದ ತಲೆಮಾರಿಗೆ ಹೇಳಿಕೊಡುತ್ತಲೇ ಬರುವ, ಇರುವ, ಅದನ್ನು ಒಪ್ಪುವಂತೆ ಬಲತ್ಕಕರಿಸುವ, ಒಪ್ಪದಿದ್ದಾಗ ಕತ್ತಿ, ಕುತಂತ್ರ, ಮೌಢ್ಯದ ಕಡೆಗೆ ದೇವರ ಹೆಸರಿಟ್ಟು ನಂಬಿಸುವ ಅಕ್ಷರವಂತರು, ಅವರೂ ನಮ್ಮದೇ ರಕ್ತ–ಮಾಂಸವನ್ನು ಹೊತ್ತ ಮನುಷ್ಯರು ಎಂದರೆ ನಿಜವೆಂದು ನಂಬುತ್ತಿಲ್ಲವೇ ನಾವು ಕೂಡ? ಆಶ್ಚರ್ಯಪಡದೆ?
ಈ ದೇಶ, ಅದಕೊಂದು ಸಂವಿಧಾನ. ಈ ದೇಶ, ಅದಕೊಂದು ಸಂಸ್ಕೃತಿ. ಈ ಸಂಸ್ಕೃತಿಯೇ ಸಂವಿಧಾನವಾಗಬೇಕೆಂದರೆ ನಮ್ಮ ಆಯ್ಕೆ ಏನಾಗಿರಬೇಕು? ಅದಕ್ಕೆ ಕಾಲ ಕಾಲಕ್ಕೆ ನಮ್ಮ ಚರಿತ್ರೆಯಲ್ಲಿ ಉದಾಹರಣೆಗಳು ಸೃಜಿಸಿವೆ. ಹಾಗಾಗಿ ಇಂದು ನಮ್ಮ ಸಂವಿಧಾನವೇ ಸಂಸ್ಕೃತಿಯಾಗಬೇಕಾದ ತುರ್ತು. ಏಕೆಂದರೆ, ನಿಮ್ಮ ಸಂಸ್ಕೃತಿ ಭೂಮಿ, ದುಡಿಮೆ, ನೀರು, ನೆಲ ಎಲ್ಲವನ್ನು ಕಿತ್ತುಕೊಂಡು ನಮ್ಮನ್ನು ಬೇಡುವ ಬೊಗಸೆಯಾಗಿಯಷ್ಟೇ ಉಳಿಸಲು ಪ್ರೇರೇಪಿಸಿತು. ಇನ್ನೂ ಆ ಯತ್ನಗಳು ನಡೆದೇ ಇವೆ. ನಿಮ್ಮ ಧರ್ಮಗ್ರಂಥವೂ ಅದನ್ನೇ ಪೋಷಿಸಿತು. ನಿಮ್ಮ ಸಂಸ್ಕೃತಿ ಹಸಿದವನಿಗೆ ಪಾಪ–ಪುಣ್ಯದ ಪ್ರವಚನ ಹೇಳಿ, ತಪ್ಪು ಕಾಣಿಕೆಯಾಗಿ ಕಪ್ಪ ಕೇಳಿದರೆ, ನಮ್ಮ ಸಂವಿಧಾನ ಅಕ್ಕಿ ಕದ್ದವನ ಬಡಿಯಲಿಲ್ಲ. ಅವನ ಮನೆಗೆ ಬೊಗಸೆ ಅಕ್ಕಿಗೆ ದಿಕ್ಕು ಬರೆಯಿತು. ನಮ್ಮ ಸಂವಿಧಾನ ಯಾರನ್ನು ಸುಡಲಿಲ್ಲ, ನೀರು, ನೆಲಕ್ಕೆ ಗಡಿ-ಮಡಿಗಳ ಇಕ್ಕಟ್ಟುಗಳ ಪೋಷಿಸಲಿಲ್ಲ. ಅದು ತಾನೇ ಸರ್ವಕಾಲಕೂ ಅಂತಿಮ ಅಂತಲೂ ಎಲ್ಲೂ ಸಾರಿಲ್ಲ. ಹಾಗಾಗಿಯೇ ನಾವಿನ್ನು ಕೃತಜ್ಞರಾಗಿರದಿದ್ದರೂ ಅಲ್ಲಿ ಕ್ಷಮೆ ಉಂಟು. ಕಡು ಕ್ರೂರಿಗೂ ದಯಾಮಯ ತೀರ್ಪುಂಟು. ಅಲ್ಲಿ ಹೊಸ ನೋವಿಗೆ ಮುಲಾಮುಂಟು. ಹಳೆ ವ್ಯಾಧಿಗೆ ಸೌಮ್ಯದ ತಿಳಿವುಗಳುಂಟು. ನನ್ನೊಳಗೆ ಬಾಬಾ ಸಾಹೇಬ್ ಅಂಬೇಡ್ಕರ್ ಯಾರು ಎಂದರೆ, ಅವರಿಗಿರುವ ಇಲ್ಲಿವರೆಗಿನ ಎಲ್ಲಾ ವಿದ್ವತ್ತು, ಅವರ ನೌಕರಿ, ಇತ್ಯಾದಿ ಇತ್ಯಾದಿ ಮಾಹಿತಿಗಳಿಗಿಂತ ಅದೊಂದು ಮನುಷ್ಯತ್ವದ ಪರಾಕಾಷ್ಠೆಯ ಮೂರ್ತರೂಪ, ಅದೊಂದು ಅನಂತ ಕರುಣೆಯ ಒರತೆ ಎಂಬುದೇ ಮತ್ತೆ ಮತ್ತೆ ನನ್ನ ಉತ್ತರವಾಗಿರುತ್ತದೆ.
–ಮೌಲ್ಯ ಸ್ವಾಮಿ, ಕವಯಿತ್ರಿ, ಸಂಶೋಧನಾರ್ಥಿ
–––––
ನನ್ನರಿವಿನ ಆರದ ಹಣತೆ
‘ಬಾಬಾ ಸಾಹೇಬ್’ ಎಂಬುದಾಗಿ ಕೋಟ್ಯಂತರ ಹೃದಯಗಳ ಭಾವಾಂತರಾಳದಲ್ಲಿ ನೆಲೆ ನಿಂತಿರುವ ಅಂಬೇಡ್ಕರ್; ಇಂದು ನನ್ನ ಅರಿವಿನ ಆರದ ಹಣತೆಯಾಗಿಯೂ ಬೆಳಗುತ್ತಿದ್ದಾರೆ. ಸಾಮಾನ್ಯವಾಗಿ, ಶೂದ್ರವರ್ಗದಲ್ಲಿ ಅಂಬೇಡ್ಕರ್ ಅವರ ಬಗ್ಗೆ ಅಜ್ಞಾನವನ್ನು ವ್ಯವಸ್ಥಿತವಾಗಿ ಬೆಳೆಸಲಾಗಿದೆ. ಅದಕ್ಕೊಂದು ನೆಪವೆಂಬಂತೆ ಮೀಸಲಾತಿಯ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗಿದೆ. ಎಕ್ವಿಟಿ (ನ್ಯಾಯ)ಗೂ ಇಕ್ವಾಲಿಟಿ (ಸಮಾನತೆ)ಗೂ ಇರುವ ಸರಳ ವ್ಯತ್ಯಾಸವನ್ನು ಅರಿಯದೆ ಇರುವುದೇ ಇದಕ್ಕೆ ಕಾರಣ. ಸಾಮಾಜಿಕ ನ್ಯಾಯವೆಂಬುದು ಈ ದೇಶದ ಶೋಷಣೆಯನ್ನು ಅಂತ್ಯಗೊಳಿಸುವ ಸೂಕ್ತ ಸಾಧನ ಎನ್ನಬಹುದು. ಬಹುಜನ ಹಿತವೆಂಬ ನವಜಾತ ಶಿಶುವಿನ ಜನನ ಸಿರಿಗೆ ಭೀಮರಾಯರ ವಿಚಾರ ಬಲವೇ ಆಧಾರ. ಒಂದೂವರೆ ದಶಕಗಳ ಕೆಳಗೆ ಬಾಳ ಜೊತೆಗಾರ ಹಚ್ಚಿದ ಅಂಬೇಡ್ಕರ್ ಹಣತೆಯು; ನನ್ನರಿವಿನಾಳದಲ್ಲಿ ಹುದುಗಿದ್ದ ಬಹುಬಗೆಯ ಬಾಲಿಶತನವನ್ನು ಬಯಲಿಗೆಳೆಯಿತೆಂದು ವಿನಯದಿಂದ ಹೇಳಲು ಬಯಸುತ್ತೇನೆ. ಅಂಬೇಡ್ಕರ್ ಎಂದರೆ ಜಾತಿಯ ಭೀತಿಯಲ್ಲ, ಅದೊಂದು ಮಾನವ ಪ್ರೀತಿ.
‘ಕೊನೆ ಮೊದಲಲ್ಲಿಯೂ ನಾನೊಬ್ಬ ಭಾರತೀಯ’ನೆಂಬ ಭಾವೈಕ್ಯತೆಯ ಬಂಧುತ್ವದ
ಬೆಳೆ ತೆಗೆಯಲು ದುಡಿದು ಮಡಿದ ಮಹಾ ಮಾನವನ ಭೀಮಯಾನವನ್ನು ಭಾರತೀಯ
ರಾದ ನಾವು ಅರಿಯುವುದು ಅನಿವಾರ್ಯ. ಏಕೆಂದರೆ ಪ್ರಜಾಪ್ರಭುತ್ವವನ್ನು ಅಣಕಿಸುವ ಕಣ್ಣುಗಳಲ್ಲೀಗ ಕಾಂತಿ ಹೆಚ್ಚುತ್ತಿದೆ, ಸರ್ವಾಧಿಕಾರದ ಸರಸ–ಸಲ್ಲಾಪಗಳು ಸರ್ಪಗಳಾಗಿ ಸಿಡಿಯುತ್ತಿವೆ. ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರ ಭಾವನೆಗಳ ಸಾಗರದಲ್ಲೀಗ ಕೋಮುವಾದದ ಉಲ್ಕೆಗಳು ಅಪ್ಪಳಿಸತೊಡಗಿವೆ. ಸಮತೆ-ಮಮತೆಗಳ ಸಮನ್ವಯ ಸಾಧನವಾದ ಸಂವಿಧಾನವೆಂಬ ತೇರಿನ ಗಾಲಿಗಳನ್ನು ಗೇಲಿಗಳ ಮೂಲಕ ಮುರಿಯುವ ಕುಬುದ್ಧಿವಂತರ ಕಾಲವಿದು. ‘ಸರ್ವಜನಾಂಗದ ಶಾಂತಿಯ ತೋಟ’ದಲ್ಲೀಗ ಅಸಹಿಷ್ಣುತೆಯದೇ ರಾಜ್ಯಭಾರ. ಇದೆಲ್ಲದರ ನಿವಾರಣೆಗೆ ಅಂಬೇಡ್ಕರ್ ವಿಚಾರಧಾರೆಯಲ್ಲಿನ ಚಿಕಿತ್ಸಕ (Therapeutic) ಅಂಶಗಳು ಅತ್ಯಂತ ಪ್ರಾಮುಖ್ಯತೆ ಪಡೆಯುವ ತುರ್ತು ಇಂದು ಮುಖ್ಯ.
ಅಂಬೇಡ್ಕರ್ ಆರಾಧನೆಯ ಆಳದಲ್ಲಿನ ಅನ್ಯಾಯದ ಅಲೆಗಳನ್ನು ಅರಿತಿದ್ದರು. ಆದರೆ ಅದರ ಸೆಳೆತಗಳಿಗೆ ಅವರ ಹೆಸರು ದುರ್ಬಳಕೆಯಾಗದಂತೆ ರಕ್ಷಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ನಾ ಕಂಡ ಅಂಬೇಡ್ಕರ್ ಅನ್ಯಾಯಕ್ಕೆದುರು ಪ್ರಜ್ವಲಿಸುವ ವಿಚಾರ ಜ್ವಾಲೆ, ಬಡವರ ಗುಡಿಸಲಿನಲ್ಲಿ ಮಗನ ಓದಿಗೆ ಜೊತೆಯಾಗುವ ಬುಡ್ಡಿದೀಪ. ಸಂಕುಚಿತ ಸ್ವಾರ್ಥಗಳಿಂದ ಕೊಳೆಯುತ್ತಿದ್ದ ಜಾತಿವಾದಿ ಮಿದುಳು ಮತ್ತು ಮನಸ್ಸುಗಳಿಗೆ ಮಾನವ ಹಕ್ಕುಗಳ ಪಾಠ ಹೇಳಿದ ಮಹೋಪಾಧ್ಯಾಯ. ಭಾರತದ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಭವಿಷ್ಯಕ್ಕೊಂದು ಭಾಷ್ಯ ಬರೆದವರು ನನ್ನೊಳಗಿನ ಅಂಬೇಡ್ಕರ್.
–ಪದ್ಮಶ್ರೀ ಟಿ, ಉಪನ್ಯಾಸಕಿ
––––––
ಸ್ವಾಭಿಮಾನ ಕಲಿಸಿದ ಸಾಹೇಬ..
ನನ್ನೊಳಗಿನ ಅಂಬೇಡ್ಕರ್ ಅಂದ್ರೆ ತುಂಬು ಸ್ವಾಭಿಮಾನಿ. ಪ್ರತಿಕ್ಷಣಕ್ಕೂ ಘನತೆಯಿಂದ ಬದುಕಬಲ್ಲ ಚೇತನ. ಅರೆಕ್ಷಣ ನನ್ನ ವ್ಯಕ್ತಿತ್ವ ಮುಕ್ಕಾಗುವ ಕಡೆ ಅಲ್ಲಿ ನನ್ನ ಚಪ್ಪಲಿಯನ್ನು ಬಿಡಬೇಡ ಎಂದು ಕೂಗುವ ತೇಜಸ್ಸು, ಹ್ಞಾಂ, ಭೀಮ ಸಾಹೇಬ್ ನನ್ನೊಳಗೆ ಇರುವುದು ಹೀಗೆ.
ಪ್ರಬುದ್ಧ ಬದುಕಿಗಾಗಿ ಕಷ್ಟಪಡುವ, ಸತ್ಯವನ್ನೇ ನಡೆವ ಹಾದಿಯುದ್ದಕ್ಕೂ ಚೆಲ್ಲುವ, ತುಳಿವವರ ಕಂಡು ಧೂಮಕೇತುವಂತೆ ಅಪ್ಪಳಿಸುವ, ತುಳಿತಕ್ಕೊಳಗಾದವರ ಬದುಕಿಗೆ ಬದುವಾಗಿ ನಿಲ್ಲುವ ಮಾರ್ಗಕ್ಕಿರುವ ಬೆಳಕು ನನ್ನ ಭೀಮ ಸಾಹೇಬ್.
ಸಾಂತ್ವನ-ಕಾರುಣ್ಯ-ಕನಸುಗಳ ಗೂಡು ಕಟ್ಟಿದವರು. ನಾವು ಮೊದಲು ಭಾರತೀಯರು, ಅಂತಿಮವಾಗಿಯೂ ಎಂದು ದೇಶಭಕ್ತಿಯ ಬೀಜಬಿತ್ತಿದವರು. ಅಸ್ಪೃಶ್ಯತೆಗೆ ಸ್ವತಃ ನಲುಗಿ ಸಮತ್ವದ ಹಾದಿ ಕೊಟ್ಟವರು. ಸ್ತ್ರೀ ಸಮಾನತೆಗಾಗಿ ನಿಂತವರು. ದೇಶಕ್ಕಾಗಿ ಆರ್ಥಿಕ ನೀತಿ ರೂಪುರೇಷೆ ಕೊಟ್ಟವರು. ಪ್ರಕೃತಿಯ ಒಡಲ ಕಾಯಲು ನಿಂತವರು–ಹೀಗೆ ಹೇಳುತ್ತಾ ಹೋದರೆ ನನ್ನೊಳಗಿನ ಅಂಬೇಡ್ಕರ್ ನಾವೇ ಆಗಲು ಎಷ್ಟೊಂದು ಮಾರ್ಗಗಳನ್ನು ರೂಪಿಸಿಕೊಟ್ಟಿದ್ದಾರೆ; ಸಂವಿಧಾನದ ಪ್ರತಿ ಪದಕ್ಕೂ ಇಡೀ ಜೀವನವನ್ನೇ ಮೀಸಲಿಟ್ಟು.
ನನ್ನೊಳಗಿನ ಅಂಬೇಡ್ಕರ್ ಪ್ರತಿಕ್ಷಣಕ್ಕೂ ಎಚ್ಚರಿಕೆಯಲ್ಲಿರುವ ಆತ್ಮಸಾಕ್ಷಿ. ಹಸಿದವರಿಗೆ ಅಷ್ಟಿಷ್ಟು ಅನ್ನ ಕೊಡುವಂತೆ ಓದಲು ಪ್ರೇರೇಪಿಸಿದವ, ಬೌದ್ಧಿಕ ಗುಲಾಮಗಿರಿಯನ್ನು ತೊರೆಯಲು ತಾನೇ ಜ್ಞಾನದ ಜ್ಯೋತಿಯಾಗಿ ನಿಂತು ತುಚ್ಛವಾಗಿ ಕಾಣುವ ಜಾತಿಯಲ್ಲಿ ಉಚ್ಚ ಸ್ಥಾನಕ್ಕೆ ಕರೆದು ಕೂರಿಸುವವ, ಘನತೆಯ ಬದುಕಿಗೆ ಇಷ್ಟಲ್ಲದೇ ನನ್ನ ಪರಿವಾರಕ್ಕೂ ಶಿಕ್ಷಣ, ಹೋರಾಟ, ಸಂಘಟನೆಯ ಶಕ್ತಿ ಕೊಟ್ಟವರು.
ಜನ್ಮಿಸಿದಿಂದ ಇಲ್ಲಿವರೆಗೂ ಮನೆಯಿಂದ ಮಂದಿರದವರೆಗೂ, ಉಳುವ ನೆಲದಿಂದ ಕಾಯ್ವ ಗಡಿವರೆಗೂ, ಶಾಲೆಯಿಂದ ಸರ್ಕಾರದವರೆಗೂ, ಸಂಸ್ಕೃತಿಯಿಂದ ಹಸನಾದ ಬದುಕಿನವರೆಗೂ ಇರುವರು. ಧೈರ್ಯವಾಗಿ ಬದುಕಾಗಿ ಬೆಳಕಾಗಿ ಬೆಂಗಾವಲಾಗಿ ಆತ್ಮಸ್ಥೈರ್ಯವಾಗಿ ನಿಲ್ಲುವ ಅಂಬೇಡ್ಕರ್ ಎಲ್ಲರೊಳಗಿನ ಅರಿವಿನ ಬೆಳಕು.
–ಶ್ರೀನಿವಾಸ್ ಶೆಟ್ಟಿ, ಪೊಲೀಸ್ ಶಸ್ತ್ರ ಪಡೆ.
–––––
ನನ್ನೊಳಗಿನ ಬಹುರೂಪಿ
ಇದನ್ನು ಬರೆಯುತ್ತಿರುವಾಗ ನಾನು ವಿಮಾನದಲ್ಲಿ ಕುಳಿತಿದ್ದೇನೆ. ಕೆಳಗೆ ಅಗಾಧ ನೀಲಿ ಕಡಲು ಕಾಣುತ್ತಿದೆ. ನಾನು ಬರೆಯುತ್ತಿರುವ ಕಪ್ಪು ಮೊಬೈಲ್ ಸ್ಕ್ರೀನ್ನಿಂದ ಬಿಳಿ ಬಣ್ಣದ ಅಕ್ಷರಗಳು ಮೂಡುತ್ತಿವೆ. ಸ್ಲೇಟಿನ ಮೇಲೆ ತಿದ್ದಿದ ಅಕ್ಷರಗಳು ಈಗ ಪರದೆ ಮೇಲೆ ಹೊಳೆಯುತ್ತಿವೆ. ಇಲ್ಲೆಲ್ಲ ನನಗೆ ಬಾಬಾ ಸಾಹೇಬರ ಇರುವಿಕೆ ಕಾಣುತ್ತದೆ. ನಾನು ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದೆ. ಆಗ ನಮ್ಮೂರಿನಲ್ಲಿ ಜಾತಿ ದೌರ್ಜನ್ಯವಾಗಿ ಇಡೀ ಕೇರಿ ತಲ್ಲಣಿಸಿ ಹೋಗಿದ್ದಾಗ ಯಾರೋ ಬರೆಸಿ ತಂದ ‘ದಸಂಸ’ದ ಬೋರ್ಡನ್ನು ನಾವೇ ಮಕ್ಕಳು ನೀರಿಲ್ಲದ ಹಟ್ಟಿಯ ಪಾಳುಬಾವಿಯ ಮುಂದೆ ಗುಣಿ ತೋಡಿ ಗಿಡದಂತೆ ನೆಟ್ಟೆವು. ಆ ಬೋರ್ಡಿನಲ್ಲಿ ಬಾಬಾ ಸಾಹೇಬರ ಚಿತ್ರವಿತ್ತು. ಆ ಚಿತ್ರ ನಮ್ಮನ್ನೇ ನೋಡಿದಂತೆ ಅನಿಸಿ ನಮಗೆ ಧೈರ್ಯ ಬಂತು. ಆಗಿದ್ದ ಅನ್ಯಾಯದ ವಿರುದ್ಧ ಜೋರಾಗಿ ಘೋಷಣೆಗಳನ್ನು ಕೂಗಿದೆವು. ಇದು ಬಾಬಾ ಸಾಹೇಬರ ಕುರಿತು ನನಗಿರುವ ಮೊದಲ ಬಿಂಬ.
ಇದಾದ ಮೇಲೆ ಅವರು ಕೊಟ್ಟು ಹೋದ ಅಕ್ಷರಗಳಲ್ಲಿ ಅವರನ್ನು ಹುಡುಕಿದಾಗ ಅವರು ನನ್ನದೇ ಜಗತ್ತಿನ ಹಲವು ಪದರುಗಳನ್ನು ತೆರೆದಿಟ್ಟರು. ಲೋಕದಲ್ಲಿ ದುಃಖವಿದೆ ಎಂದು ಬುದ್ಧನೇನೋ ಹೇಳಿಹೋದ. ಅದು ಮುಂದುವರೆದು ನನ್ನಲ್ಲಿ, ನನ್ನ ಜನರಲ್ಲಿ ಯಾಕಿಷ್ಟು ದುಃಖವಿದೆ ಎಂದು ಕಾಣಿಸಿದವರು ಬಾಬಾ ಸಾಹೇಬರು. ನನಗೆ ನನ್ನನ್ನು ಕಾಣಿಸಿದ ಕನ್ನಡಿಯಾದರು.
ನಮ್ಮವ್ವ ಹೇಳುತ್ತಿದ್ದ ಕಥೆಗಳೆಲ್ಲ ಬರಗಾಲ, ಹಸಿವು, ಅನ್ನ, ನೋವು, ಮಳೆ, ಮರ, ಬಸುರಿ, ಬಾಣಂತಿಯರ ಸುತ್ತಲೇ ಇರುತ್ತಿದ್ದವು. ಬಸುರಿ, ಬಾಣಂತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವವನೆ ಒಳ್ಳೆಯ ರಾಜನಾಗಿರುತ್ತಿದ್ದ. ಮೈತ್ರಿಯೇ ಮರೀಚಿಕೆಯಾದ ನೆಲದಲ್ಲಿ ಮನುಷ್ಯರ ಮೂಲಕ ಒಳಿತನ್ನು ಸಾಧ್ಯವಾಗಿಸುವ ಕುರಿತು ಬಾಬಾ ಸಾಹೇಬರು ಜೀವನದುದ್ದಕ್ಕೂ ಕೆಲಸ ಮಾಡಿದ್ದಾರೆ ಮತ್ತು ತೀರಾ ಪ್ರಾಕ್ಟಿಕಲ್ ಆದ ದಾರಿಗಳನ್ನು ತೋರಿಸಿ ಹೋಗಿದ್ದಾರೆ. ಇದು ನನ್ನ ಹಟ್ಟಿಯ ಹೆಣ್ಣುಗಳ ಗುಣ. ಈ ಕಾರಣಕ್ಕೋ ಏನೋ ನನ್ನೊಳಗಿನ ಅಂಬೇಡ್ಕರರು ಹೆಣ್ಣು.
ತನಗೆ ತನ್ನದೇ ನೆಲ, ಹೊಲ ಯಾವುದೂ ಇಲ್ಲದೆ ಇದ್ದಾಗಲೂ ಪ್ರತಿ ಬೇರಿಗೂ ನೀರು ತಲುಪಲೇಬೇಕು ಅನ್ನುವ ನಿಷ್ಠುರ, ನ್ಯಾಯವಂತ ನೀರಗಂಟಿ. ನಾನು ಕಲಾವಿದನಾದ್ದರಿಂದ ಬಾಬಾ ಸಾಹೇಬರ ಬಹಳಷ್ಟು ಕೃತಿಗಳನ್ನು ಸಾಂಸ್ಕೃತಿಕ ಪಠ್ಯಗಳೆಂದೇ ಓದುತ್ತೇನೆ. ಅವರು ನನಗೆ Cultural Pedagog (ಬಹು ಜ್ಞಾನ ಶಿಸ್ತಿನ ಕಲಿಕೆಗಳನ್ನು ವಿನ್ಯಾಸಗೊಳಿಸುವ ಪರಿಣಿತರು ಮತ್ತು ಹಲವು ಜ್ಞಾನಶಿಸ್ತುಗಳ ಅಂತರ್ ಸಂಬಂಧಗಳನ್ನು ಬೆಸೆಯುವವರು). ಅವರನ್ನು ಹೆಚ್ಚು ಹೆಚ್ಚು ಓದಿದಂತೆಲ್ಲ ಇನ್ನು ಹತ್ತು ಹಲವು ಆಯಾಮಗಳಲ್ಲಿ ನನ್ನೊಳಗೆ ಬಾಬಾ ಸಾಹೇಬರು ಬೆಳೆಯುತ್ತಲೇ ಹೋಗುತ್ತಾರೆ. ನನ್ನೊಳಗಿನ ಅಂಬೇಡ್ಕರ್ ಬಹುರೂಪಿ, ಸದಾ ವಿಕಸಿತಗೊಳ್ಳುತ್ತಲೇ ಇರುವ ಪ್ರಜ್ಞೆ ಮತ್ತು ಕರುಣೆಯ ಜೀವಂತ ಪರಂಪರೆ.
ನನಗೆ ಅಂಬೇಡ್ಕರ್ ಒಬ್ಬರೇ ಸಾಕು ಅಂದಾಗಲೆಲ್ಲ ಇದು ಎಲ್ಲರನ್ನು ಒಳಗೊಳ್ಳುವ ನಡೆಯಲ್ಲವೆಂದು ಹಲವರು ದೂರುತ್ತಾರೆ. ಆದರೆ ಇಡಿಯ ಜೀವ ಮಂಡಲವನ್ನೇ ಒಳಗೊಳ್ಳುವ ಚೈತನ್ಯ ನನ್ನೊಳಗಿನ ‘ನವಯಾನ ಅಂಬೇಡ್ಕರ್’ ಪರಂಪರೆಗೆ ಇರುವಾಗ ನನ್ನ ನಡೆ-ನಿಲುವಿನ ಬಗೆಗೆ ನನಗೆ ಅನುಮಾನ ಮೂಡುವುದಿಲ್ಲ.
–ಕೆ.ಪಿ. ಲಕ್ಷ್ಮಣ, ರಂಗ ನಿರ್ದೇಶಕ
******
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.