ಹುಬ್ಬಳ್ಳಿ: ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಕೇಂದ್ರದಲ್ಲಿ ಹಣಕಾಸು ಖಾತೆಯನ್ನು ಹೊಂದಿರುವ ಪ್ರಭಾವಿ ಸಚಿವರು. ಜತೆಗೆ ಬೆಳಗಾವಿ ಸಂಸದ ಸುರೇಶ ಅಂಗಡಿ, ರೈಲ್ವೆ ಖಾತೆಯ ರಾಜ್ಯ ಸಚಿವರು. ಇಬ್ಬರೂ ‘ನಮ್ಮವರೇ’ ಇರುವಾಗ ರೈಲ್ವೆಯಲ್ಲಿ ರಾಜ್ಯಕ್ಕೆ ಸಿಕ್ಕಾಪಟ್ಟೆ ಲಾಭ ಆಗುತ್ತದೆ ಎನ್ನುವ ಲೆಕ್ಕಾಚಾರ ಕನ್ನಡಿಗರದ್ದು.
ರೈಲ್ವೆ ವಿಚಾರದಲ್ಲಿ ಕರ್ನಾಟಕ ಅತಿ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ರಾಜ್ಯ. ಈ ಕಾರಣದಿಂದಲೇ ಪ್ರತಿ ಬಾರಿಯೂ ರೈಲ್ವೆ ಬಜೆಟ್ ಸಂದರ್ಭದಲ್ಲಿ ರಾಜ್ಯಕ್ಕೆ ಏನಾದರೂ ಸಿಗುತ್ತದೆಂದು ಬೆರಗುಗಣ್ಣಿನಿಂದ ನೋಡುವಂತಹ ಪರಿಸ್ಥಿತಿ ಇದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈಲ್ವೆಗೇ ಪ್ರತ್ಯೇಕವಾದ ಬಜೆಟ್ ಮಂಡಿಸುವುದನ್ನು ಕೈಬಿಟ್ಟು ಸಾಮಾನ್ಯ ಬಜೆಟ್ ಜತೆಯೇ ಸೇರಿಸಲಾಗಿದೆ. ಈ ಬಾರಿಯೂ ಅದು ಮುಂದುವರಿಯಲಿದೆ.
ನಿರ್ಮಲಾ ಅವರು ಜುಲೈ 5ರಂದು 2019– 20ನೇ ಸಾಲಿನ ಪೂರ್ಣ ಬಜೆಟ್ ಮಂಡಿಸಲಿದ್ದಾರೆ. ಇದಕ್ಕೆ ನೈರುತ್ಯ ರೈಲ್ವೆ ಕೂಡ ತಯಾರಿ ನಡೆಸಿ, ಉದ್ದೇಶಿತ ಯೋಜನೆಗಳ ಬಗ್ಗೆ ಮಾಹಿತಿಯನ್ನೂ ರೈಲ್ವೆ ಮಂಡಳಿ ಜತೆ ಹಂಚಿಕೊಂಡಿದೆ. ಹೊಸ ಯೋಜನೆಗಳನ್ನು ಪ್ರಕಟಿಸುವುದಕ್ಕಿಂತ ಈಗಾಗಲೇ ಘೋಷಿಸಿರುವ; ಬಹಳ ವರ್ಷಗಳಿಂದ ಬಾಕಿ ಇರುವ ಕಾಮಗಾರಿಗಳಿಗೆ ಆದ್ಯತೆ ನೀಡುವ ಭರವಸೆಯನ್ನು ರೈಲ್ವೆ ಸಚಿವರು ಕೊಟ್ಟಿದ್ದಾರೆ.
ಹಿಂದಿನ ಸರ್ಕಾರಗಳು ಹೊಸ ರೈಲ್ವೆ ಯೋಜನೆಗಳನ್ನು ಪ್ರಕಟಿಸುವುದಕ್ಕೆ ಕೊಟ್ಟಷ್ಟು ಆದ್ಯತೆಯನ್ನು ಅವುಗಳ ಅನುಷ್ಠಾನಕ್ಕೆ ಕೊಡಲಿಲ್ಲ. ಹೀಗಾಗಿ 25 ವರ್ಷಗಳ ಹಿಂದೆ ಪ್ರಕಟಿಸಿದ್ದ ಅನೇಕ ರೈಲ್ವೆ ಯೋಜನೆಗಳು ಇವತ್ತಿಗೂ ಪೂರ್ಣಗೊಂಡಿಲ್ಲ. ಪರಿಣಾಮ ಅಂತಹ ಯೋಜನೆಗಳ ಅಂದಾಜು ವೆಚ್ಚ ಗಗನಮುಖಿಯಾಗಿದೆ.
ನಿರೀಕ್ಷೆ ಏನು:ಬಜೆಟ್ ಎಂದಾಕ್ಷಣ ನಿರೀಕ್ಷೆಗಳು ಅಧಿಕ. ಹೊಸ ಮಾರ್ಗ, ಜೋಡಿ ಮಾರ್ಗ, ವಿದ್ಯುದೀಕರಣ, ಹೊಸ ರೈಲು, ಬೆಂಗಳೂರು ಉಪನಗರ ರೈಲು ಯೋಜನೆ, ನಿಲ್ದಾಣಗಳ ಅಭಿವೃದ್ಧಿ... ಹೀಗೆ ದೊಡ್ಡ ಪಟ್ಟಿಯೇ ಬೆಳೆಯುತ್ತದೆ. ಇವುಗಳಲ್ಲಿ ಈ ಬಾರಿ ಯಾವುದಕ್ಕೆ ಆದ್ಯತೆ ಕೊಡಬೇಕು ಎನ್ನುವುದರ ಲೆಕ್ಕಾಚಾರ ನಡೆದಿದ್ದು, ಬಜೆಟ್ ಬಳಿಕ ಸ್ಪಷ್ಟವಾಗಲಿದೆ.
ಪ್ರಮುಖ ಯೋಜನೆಗಳು:ರಾಯದುರ್ಗ– ತುಮಕೂರು (207 ಕಿ.ಮೀ), ಬಾಗಲಕೋಟೆ– ಕುಡಚಿ (142 ಕಿ.ಮೀ); ಗದಗ–ವಾಡಿ (252 ಕಿ.ಮೀ), ಮುನಿರಾಬಾದ್– ರಾಯಚೂರು (165 ಕಿ.ಮೀ)– ಈ ಹೊಸ ಮಾರ್ಗಗಳನ್ನು ಆದ್ಯತೆ ಮೇಲೆ ಮುಗಿಸಬೇಕಾದ ಅಗತ್ಯ ಇದೆ. ಇದರ ಜತೆಗೆ ಬೆಂಗಳೂರು– ಹುಬ್ಬಳ್ಳಿ ನಡುವಿನ ಪ್ರಯಾಣ ಅವಧಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ತುಮಕೂರು– ಚಿತ್ರದುರ್ಗ– ದಾವಣಗೆರೆ ಮಾರ್ಗಕ್ಕೆ 2011–12ರಲ್ಲೇ ಅನುಮೋದನೆ ನೀಡಿದ್ದರೂ ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದಾಗಿ ಅದು ಇವತ್ತಿಗೂ ಟೇಕ್ಆಫ್ ಆಗಿಲ್ಲ.
ಇದೇ ರೀತಿ ಧಾರವಾಡ– ಬೆಳಗಾವಿ ನಡುವಿನ ಪ್ರಯಾಣ ಅವಧಿಯನ್ನು ಕಡಿಮೆ ಮಾಡಲು ಕಿತ್ತೂರು ಮಾರ್ಗವಾಗಿ ಬೆಳಗಾವಿಗೆ ನೇರ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಕೈಗೆತ್ತಿಕೊಂಡರೆ ದೇಶದ ವಾಣಿಜ್ಯ ರಾಜಧಾನಿ ಮುಂಬೈ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ. ಜತೆಗೆ ಬೆಂಗಳೂರಿನ ತ್ವರಿತ ಸಂಪರ್ಕಕ್ಕೂ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡುವ ಭರವಸೆಯನ್ನು ಸುರೇಶ್ ಅಂಗಡಿಯವರೇ ಕೊಟ್ಟಿದ್ದಾರೆ.
ಇದನ್ನೂ ಓದಿ:ಹಳೆಯ ಯೋಜನೆಗಳಿಗೆ ಆದ್ಯತೆ– ಸಚಿವ ಸುರೇಶ ಅಂಗಡಿ
ಜೋಡಿ ಮಾರ್ಗ:ರೈಲುಗಳ ತ್ವರಿತ ಸಂಚಾರಕ್ಕೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ರಾಜ್ಯದಲ್ಲಿ 12 ಪ್ರಮುಖ ಮಾರ್ಗಗಳಲ್ಲಿ ಜೋಡಿ ರೈಲು ಮಾರ್ಗಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಒಟ್ಟು 1,394 ಕಿ.ಮೀ ಉದ್ದದ ಜೋಡಿ ಮಾರ್ಗದ ಕಾಮಗಾರಿ ಪೈಕಿ 354 ಕಿ.ಮೀ ಉದ್ದದ ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಇನ್ನೂ 1,040 ಕಿ.ಮೀ ಬಾಕಿ ಇದೆ. 2019– 20ರಲ್ಲಿ ಕನಿಷ್ಠ 266 ಕಿ.ಮೀ ಉದ್ದದ ಜೋಡಿ ಮಾರ್ಗ ನಿರ್ಮಿಸಬೇಕೆನ್ನುವ ಗುರಿಯನ್ನು ನೈರುತ್ಯ ರೈಲ್ವೆ ಹೊಂದಿದೆ. ಕನಿಷ್ಠ 500 ಕಿ.ಮೀ ಆದರೂ ಮುಗಿಸಬೇಕೆನ್ನುವ ನಿಟ್ಟಿನಲ್ಲಿ ಒತ್ತಡ ಹೆಚ್ಚಿದ್ದು, ಭೂಮಿ ಹಸ್ತಾಂತರ ಇದಕ್ಕೆ ದೊಡ್ಡ ತೊಡಕಾಗಿದೆ.
ರಾಜ್ಯದ ಬಹುತೇಕ ಯೋಜನೆಗಳು ವೆಚ್ಚ ಹಂಚಿಕೆ ಒಪ್ಪಂದದ ಮೇಲೆ ಅನುಷ್ಠಾನವಾಗುತ್ತಿದ್ದು, ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದ ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಲು ಆಗುತ್ತಿಲ್ಲ ಎಂದು ರೈಲ್ವೆ ಅಧಿಕಾರಿಗಳು ಹೇಳುತ್ತಿದ್ದಾರೆ. ಹಲವು ಯೋಜನೆಗಳಿಗೆ ರಾಜ್ಯ ಸರ್ಕಾರವೇ ಉಚಿತವಾಗಿ ಭೂಮಿ ನೀಡುವ ಒಪ್ಪಂದ ಮಾಡಿಕೊಂಡಿದ್ದು, ನಿರೀಕ್ಷೆ ಪ್ರಕಾರ ಭೂಮಿ ಹಸ್ತಾಂತರ ಮಾಡುತ್ತಿಲ್ಲ ಎನ್ನುವ ದೂರು ಇದೆ.
ಇದನ್ನೂ ಓದಿ: ಮಧ್ಯಂತರ ಬಜೆಟ್ 2019 | ರೈಲ್ವೆಗೆ ₹1.6 ಲಕ್ಷ ಕೋಟಿ
ಹೊಸ ರೈಲುಗಳ ಬೇಡಿಕೆ:ಬೆಂಗಳೂರಿನಿಂದ ದೆಹಲಿಗೆ ತೆರಳುವ ಸಂಪರ್ಕಕ್ರಾಂತಿ ಎಕ್ಸ್‌ಪ್ರೆಸ್ ರೈಲು ತುಮಕೂರು– ಹುಬ್ಬಳ್ಳಿ ಮಾರ್ಗವಾಗಿ ವಾರದಲ್ಲಿ ಎರಡು ದಿನ ಸಂಚರಿಸುತ್ತಿದೆ. ಉಳಿದ 5 ದಿನ ಆಂಧ್ರಪ್ರದೇಶ ಮಾರ್ಗವಾಗಿ ಹೋಗುತ್ತಿದ್ದು, ಇದರಿಂದ ರಾಜ್ಯದ ಜನರಿಗೆ ಹೆಚ್ಚಿನ ಅನುಕೂಲ ಆಗುತ್ತಿಲ್ಲ. ಹೀಗಾಗಿ ಈ ರೈಲು ನಿತ್ಯವೂ ಹುಬ್ಬಳ್ಳಿ ಮಾರ್ಗವಾಗಿಯೇ ದೆಹಲಿಗೆ ಓಡಿಸಬೇಕು ಎಂಬುದು ಕರ್ನಾಟಕ ರೈಲ್ವೆ ವೇದಿಕೆಯ ಕೃಷ್ಣಪ್ರಸಾದ್ ಅಭಿಪ್ರಾಯ.
ಹುಬ್ಬಳ್ಳಿಯಿಂದ ಹೈದರಾಬಾದ್ ಕರ್ನಾಟಕದ ಮೂಲಕ ದೆಹಲಿಗೆ ರಾಜಧಾನಿ ಎಕ್ಸ್‌ಪ್ರೆಸ್ ಓಡಿಸಬೇಕು ಎನ್ನುವ ಬೇಡಿಕೆ ಬಹಳ ವರ್ಷಗಳಿಂದ ಇದ್ದು, ಇದೇ ಭಾಗದವರು ಸಚಿವರಾಗಿರುವ ಕಾರಣ ಈಡೇರುವ ವಿಶ್ವಾಸವಿದೆ. ಮಂಗಳೂರಿಗೆ ಹುಬ್ಬಳ್ಳಿಯಿಂದ ನೇರ ರೈಲು ಸಂಪರ್ಕ ಇಲ್ಲ. ಈ ಬಾರಿಯಾದರೂ ಇದು ಈಡೇರಬೇಕು ಎನ್ನುವುದು ಈ ಭಾಗದ ಜನರ ಅಭಿಪ್ರಾಯ. ಗೋವಾ, ಉಡುಪಿ ಮಾರ್ಗವಾಗಿ ಮಂಗಳೂರಿಗೆ ರೈಲು ಬಿಟ್ಟರೆ ಅನುಕೂಲ ಆಗುತ್ತದೆ.
ಬೆಂಗಳೂರು– ಮುಂಬೈಗೆ ಹುಬ್ಬಳ್ಳಿ ಮಾರ್ಗವಾಗಿ ನಿತ್ಯ ಮತ್ತೊಂದು ರೈಲು ಓಡಿಸಬೇಕು. ಬೆಂಗಳೂರು– ಗೋವಾ ನಡುವೆ ನಿತ್ಯ ಒಂದು ರೈಲು ಬಿಡಬೇಕು. ಬೆಂಗಳೂರು– ಮಂಗಳೂರು ನಡುವೆ ಮತ್ತೊಂದು ರೈಲಿಗೆ ಬೇಡಿಕೆ ಇದೆ. ಮಲ್ಲಿಕಾರ್ಜುನ ಖರ್ಗೆ, ರೈಲ್ವೆ ಸಚಿವರಿದ್ದ ಸಂದರ್ಭದಲ್ಲಿ ಕಲಬುರ್ಗಿಯಲ್ಲಿ ರೈಲ್ವೆ ವಿಭಾಗ ಸ್ಥಾಪಿಸುವ ಘೋಷಣೆ ಮಾಡಿದ್ದರು. ಅದರ ಆರಂಭಕ್ಕೆ ಕ್ರಮಜರುಗಿಸಬೇಕು ಹಾಗೂ ಮಂಗಳೂರು ಭಾಗವನ್ನು ನೈರುತ್ಯ ರೈಲ್ವೆ ವ್ಯಾಪ್ತಿಗೆ ಸೇರಿಸಬೇಕು ಎನ್ನುವುದು ಬಹುದಿನಗಳ ಬೇಡಿಕೆಯಾಗಿದೆ.
ಟೇಕ್‌ಅಫ್ ಆಗದ ಉಪನಗರ ರೈಲು:ಬೆಂಗಳೂರು ಉಪನಗರ ರೈಲು ಯೋಜನೆ ಜಾರಿ ಸಂಬಂಧ ಹಲವು ಸಭೆಗಳು ನಡೆದರೂ ಇವತ್ತಿಗೂ ಸ್ಪಷ್ಟವಾದ ತೀರ್ಮಾನಗಳು ಆಗಿಲ್ಲ. ರಾಜ್ಯ ಸರ್ಕಾರ ಆಸಕ್ತಿ ತೋರಿಸಿದರೂ ರೈಲ್ವೆ ಹಿಂದೇಟು ಹಾಕುತ್ತಿದೆ. ಈ ನಡುವೆ ಬೆಂಗಳೂರು ಮೆಟ್ರೊ ರೈಲು ನಿಗಮ, ಉಪನಗರ ರೈಲಿಗೆ ಅಪಸ್ವರ ತೆಗೆದು ಪತ್ರ ಬರೆದಿದೆ ಎಂದು ಹೇಳಲಾಗುತ್ತಿದೆ. ಮೆಟ್ರೊ ರೈಲು ಇದ್ದ ಮೇಲೆ ಉಪನಗರ ರೈಲು ಅಗತ್ಯ ಇಲ್ಲ ಎನ್ನುವ ಅಭಿಪ್ರಾಯವನ್ನು ಅದು ವ್ಯಕ್ತಪಡಿಸಿದೆ ಎನ್ನಲಾಗಿದೆ.
ಉಪನಗರ ರೈಲು ಕಡಿಮೆ ವೆಚ್ಚದಾಯಕ. ಹೀಗಾಗಿ ಇದರ ಅಗತ್ಯ ಇದೆ ಎಂಬುದು ಸರ್ಕಾರದ ವಾದ. ಆದರೆ, ಸ್ಪಷ್ಟವಾದ ತೀರ್ಮಾನಗಳು ಆಗದ ಕಾರಣ ಅದರ ಭವಿಷ್ಯ ಮಂಕಾಗಿದೆ. ಈ ನಿಟ್ಟಿನಲ್ಲಿ ತ್ವರಿತವಾದ ತೀರ್ಮಾನಗಳನ್ನು ತೆಗೆದುಕೊಂಡಲ್ಲಿ, ಮೆಟ್ರೊಗೆ ಪರ್ಯಾಯವಾಗಿ ಉಪನಗರ ರೈಲು ಸೇವೆ ರಾಜಧಾನಿಯ ಜನರಿಗೆ ಸಿಗಲಿದೆ. ಈ ಬಜೆಟ್‌ನಲ್ಲಿ ಕೇಂದ್ರದ ನಿಲುವು ಸ್ಪಷ್ಟವಾಗಬೇಕಾಗಿದೆ.
ನೈರುತ್ಯ ರೈಲ್ವೆ ಸಂಕ್ಷಿಪ್ತ ಮಾಹಿತಿ
ನೈರುತ್ಯ ರೈಲ್ವೆ ವಲಯವು ಒಟ್ಟು3,566 ಕಿ.ಮೀ ರೈಲು ಮಾರ್ಗ ಹೊಂದಿದೆ. ರಾಜ್ಯದಲ್ಲಿ ಒಟ್ಟು373 ರೈಲ್ವೆ ನಿಲ್ದಾಣಗಳು ಇವೆ.ಒಟ್ಟು36,747 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ವರ್ಷಕ್ಕೆ ₹5,622 ಕೋಟಿ ವಹಿವಾಟು ನಡೆಸುತ್ತದೆ.
ರೈಲ್ವೆ ಇಲಾಖೆಗೆ ಸಂಬಂಧಿಸಿದ ತಾಜಾ ಮಾಹಿತಿಗೆhttps://www.prajavani.net/tags/railwayನೋಡಿ
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.