ರಾಜಸ್ಥಾನದಲ್ಲಿ ಈ ಬಾರಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಚರಿತ್ರೆ ಮರುಕಳಿಸುವುದೋ ಅಥವಾ ಮತದಾರರು ಹೊಸ ಅಧ್ಯಾಯವನ್ನೇ ಬರೆಯುವರೋ? ಈ ಮರುಭೂಮಿ ರಾಜ್ಯದಲ್ಲಿ ಹಿಂದಿನ 25 ವರ್ಷಗಳಿಂದ, ಅಂದರೆ 1997ರಿಂದ, ಅಧಿಕಾರಕ್ಕೇರುವ ಯಾವುದೇ ಪಕ್ಷ ಐದು ವರ್ಷಗಳ ನಂತರ ಮತ್ತೆ ಚುನಾಯಿಸಿ ಬಂದ ನಿದರ್ಶನವಿಲ್ಲ. ಈ ನಂಬಿಕೆಯೊಂದಿಗೆ, ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಬಿಜೆಪಿ ಸಜ್ಜಾಗಿದೆ. ಆದರೆ, 2021ರಲ್ಲಿ ಕೇರಳದಲ್ಲಿ ಏನಾಯಿತು ಎಂಬುದು ಈ ಎರಡು ಪಕ್ಷಗಳಿಗೂ ಗೊತ್ತಿರಬಹುದು. ಅಲ್ಲಿ ಅಧಿಕಾರದಲ್ಲಿದ್ದ ಎಡರಂಗ ನೇತೃತ್ವದ ಸರ್ಕಾರ, ಆಡಳಿತಾರೂಢ ಪಕ್ಷ ಗೆಲ್ಲಲಾರದು ಎಂಬ ನಂಬಿಕೆಯನ್ನು ಹುಸಿಗೊಳಿಸಿತು. 1977ರ ನಂತರ ನಡೆದ ಮೊದಲ ಬೆಳವಣಿಗೆಯಲ್ಲಿ, ಐದು ವರ್ಷಗಳ ತರುವಾಯ ಅಲ್ಲಿ ಮತ್ತೆ ಗೆದ್ದು ಬಂದಿತು.
ರಾಜಸ್ಥಾನದಲ್ಲಿ ನಡೆದ 2018ರ ಚುನಾವಣೆಯಲ್ಲಿ ಕೇಸರಿ ಪಕ್ಷ ಸೋತರೂ ಒಟ್ಟಾರೆ ಮತ ಗಳಿಕೆಯಲ್ಲಿ ಅದು ಹಿಂದೆ ಬೀಳಲಿಲ್ಲ– ಇಲ್ಲಿ ಕಾಂಗ್ರೆಸ್- ಬಿಜೆಪಿ ನಡುವಿನ ಮತಗಳ ಅಂತರ ಶೇ 1ಕ್ಕಿಂತ ಕಡಿಮೆಯಿತ್ತು. ಈಗಿನ ಸಮೀಕ್ಷೆಗಳ ಪ್ರಕಾರ ಬಿಜೆಪಿ ಮುಂದಿದ್ದರೂ, ಎರಡೂ ಪಕ್ಷಗಳು ಗೆಲ್ಲಲು ಭಾರಿ ಕಸರತ್ತು ನಡೆಸುತ್ತಿವೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಜೊತೆಗಿನ ಬಿಜೆಪಿ ಹೈಕಮಾಂಡ್ ಸಂಬಂಧ ಅಷ್ಟೇನೂ ಚೆನ್ನಾಗಿ ಇಲ್ಲದಿದ್ದರೂ, ಈಗ ರಾಜಿ ಮಾಡಿಕೊಂಡಂತಿದೆ ಹಾಗೂ ತಮ್ಮ ಅನೇಕ ಹಿಂಬಾಲಕರಿಗೆ ಪಕ್ಷದ ಟಿಕೆಟ್ ಕೊಡಿಸುವಲ್ಲಿ ರಾಜೆ ಯಶಸ್ವಿಯಾಗಿದ್ದಾರೆ.
ಬಿಜೆಪಿಯು ಶತಾಯಗತಾಯ ಗೆಲ್ಲಲೇಬೇಕೆಂದು ನಡೆಸಿರುವ ಪ್ರಯತ್ನದ ಭಾಗವಾಗಿ 7 ಮಂದಿ ಸಂಸತ್ ಸದಸ್ಯರನ್ನು ಕಣಕ್ಕಿಳಿಸಿದೆ. ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿಯ ಹಾಗೆ ಇಲ್ಲಿ ಕೂಡ ಪಕ್ಷವು ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬಹುದು ಎಂಬುದನ್ನು ಬಹಿರಂಗಪಡಿಸಿಲ್ಲ- ಬಿಜೆಪಿಯ ಬಹಳಷ್ಟು ನಾಯಕರು ಆ ಕನಸನ್ನಂತೂ ಕಾಣುತ್ತಿದ್ದಾರೆ. ಅವರಲ್ಲಿ ರಾಜೆ, ಗಜೇಂದ್ರ ಶೆಖಾವತ್, ಅರ್ಜುನ್ ಮೇಘವಾಲ್, ಬಾಬಾ ಬಾಲಕನಾಥ್, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಪ್ರಮುಖರು. ಬಿಜೆಪಿಯು ಅಶೋಕ್ ಗೆಹಲೋತ್ ನೇತೃತ್ವದ ಸರ್ಕಾರದ ‘ವೈಫಲ್ಯ’ಗಳನ್ನು ಎತ್ತಿಹಿಡಿಯುವುದರಲ್ಲಿ ಹಿಂದೆ ಬಿದ್ದಿಲ್ಲ. ಮಹಿಳೆಯರಿಗೆ ಸುರಕ್ಷತೆ ಕಲ್ಪಿಸುವಲ್ಲಿ ಸೋಲು, 2022ರ ಮತೀಯ ದಂಗೆ, ಪ್ರಶ್ನೆಪತ್ರಿಕೆಗಳ ಸೋರಿಕೆ, ನೇಮಕಾತಿಯಲ್ಲಿ ಭ್ರಷ್ಟಾಚಾರ, ನಿರುದ್ಯೋಗ ಇವುಗಳಲ್ಲಿ ಪ್ರಮುಖವಾದವು.
ಇನ್ನು ಕಾಂಗ್ರೆಸ್ ಪಕ್ಷದಲ್ಲಿನ ವಿದ್ಯಮಾನಗಳನ್ನು ಗಮನಿಸಿದರೆ, ಪಕ್ಷವನ್ನು ಹಿಂದಿನ ಮೂರ್ನಾಲ್ಕು ವರ್ಷಗಳಿಂದ ಕಾಡುತ್ತಿದ್ದ ಆಂತರಿಕ ಕಲಹ ಸದ್ಯಕ್ಕೆ ಶಮನಗೊಂಡಂತಿದೆ. ಗೆಹಲೋತ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ನಡುವಿನ ವ್ಯೆಮನಸ್ಸು 2020ರಲ್ಲಿ ಬೀದಿಗೆ ಬಂದಿತ್ತು. 2018ರ ಚುನಾವಣೆ ಸಮಯದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಪೈಲಟ್ ತಾವೇ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದರು. ಆದರೆ ಹೆಚ್ಚಿನ ಸಂಖ್ಯೆಯ ಶಾಸಕರ ಬೆಂಬಲ ಗೆಹಲೋತ್ ಅವರಿಗಿತ್ತು. ಹೋದ ವರ್ಷದ ಬೆಳವಣಿಗೆಯಲ್ಲಿ, ಗೆಹಲೋತ್ ಅವರನ್ನು ಕಾಂಗ್ರೆಸ್‌ನ ರಾಷ್ಟ್ರೀಯ
ಅಧ್ಯಕ್ಷರನ್ನಾಗಿ ಮಾಡುವ ಯೋಚನೆ ಪಕ್ಷದ ಹೈಕಮಾಂಡ್‌ಗೆ ಇತ್ತು. ಇದರ ಹಿಂದಿನ ಉದ್ದೇಶ ಪೈಲಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು. ಇದನ್ನು ಅರಿತ ಗೆಹಲೋತ್ ಬೆಂಬಲಿಗರು ಶಾಸಕಾಂಗ ಪಕ್ಷದ ಸಭೆಯನ್ನು ಬಹಿಷ್ಕರಿಸಿದರು. ಹೈಕಮಾಂಡ್‌ಗೆ ಭಾರಿ ಮುಖಭಂಗವಾಯಿತು. ಗೆಹಲೋತ್ ಮುಖ್ಯ
ಮಂತ್ರಿಯಾಗಿ ಮುಂದುವರಿದರು.
ಆದಾಗ್ಯೂ, ಈ ಇಬ್ಬರು ನಾಯಕರು ಇತ್ತೀಚಿನ ವಾರಗಳಲ್ಲಿ ತಮ್ಮ ಕಲಹ ಮರೆತು ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಚುನಾವಣಾ ಟಿಕೆಟ್ ಹಂಚಿಕೆ ಕಾರ್ಯ ಸುಸೂತ್ರವಾಗಿ ನಡೆದಿದೆ. ಅವರು ಸೂಚಿಸಿದ ಎಲ್ಲರಿಗೂ ಟಿಕೆಟ್ ದೊರಕಿದೆ. ಪಕ್ಷ ಮುಂದಿನ ಮುಖ್ಯಮಂತ್ರಿಯ ಹೆಸರನ್ನು ಸೂಚಿಸಿಲ್ಲವಾದರೂ, ಕಾಂಗ್ರೆಸ್ ಗೆದ್ದರೆ ಗೆಹಲೋತ್ ಅವರೇ ಮುಂದುವರಿಯುವುದರಲ್ಲಿ ಸಂದೇಹವಿಲ್ಲ.
ಹಿಂದಿನ 30 ವರ್ಷಗಳಲ್ಲಿ ಸಣ್ಣ ಪಕ್ಷಗಳು ಹಾಗೂ ಪಕ್ಷೇತರರು (ಬಹುತೇಕ ಎರಡೂ ಪಕ್ಷಗಳಲ್ಲಿ ಬಂಡಾಯ ಎದ್ದವರು) ಚುನಾವಣೆಗಳಲ್ಲಿ ವಹಿಸುತ್ತಾ ಬಂದಿರುವ ಪಾತ್ರ ಪ್ರಮುಖವಾದುದು. ಅವರು ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ಗೆಲ್ಲದಿದ್ದರೂ, ಗಣನೀಯ ಪ್ರಮಾಣದಲ್ಲಿ ಮತ ಗಳಿಸಿ ದೊಡ್ಡ ಪಕ್ಷಗಳಿಗೆ ತಲೆನೋವಾಗಿದ್ದಾರೆ. ಇವರು ಸರಾಸರಿ ಶೇ 20ರಷ್ಟು ಮತಗಳನ್ನು ಪಡೆದು ಕಾಂಗ್ರೆಸ್ ಅಥವಾ ಬಿಜೆಪಿಯ ಸೋಲು, ಗೆಲುವಿಗೆ ಕಾರಣರಾಗುತ್ತಾ ಬಂದಿದ್ದಾರೆ. ಈ ಬಾರಿ ಕೂಡ ಈ ಬೆಳವಣಿಗೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಯೇನೂ ಕಂಡುಬಂದಿಲ್ಲ– ಪ್ರಸಕ್ತ ಚುನಾವಣೆಯಲ್ಲಿ ಕನಿಷ್ಠ 40 ಮಂದಿ ಬಂಡಾಯಗಾರರು ಸ್ಪರ್ಧಿಸಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಬಿಜೆಪಿಯಲ್ಲಿ ಟಿಕೆಟ್ ಸಿಗಲಿಲ್ಲವೆಂದು ಬಂಡಾಯ ಎದ್ದವರು. ಈ ಸಲ 78 ಸಣ್ಣಪುಟ್ಟ
ಪಕ್ಷಗಳು ಕಣದಲ್ಲಿ ಇರುವುದು ಇನ್ನೊಂದು ಕುತೂಹಲಕರ ಅಂಶ.
ಬೇರೆ ಯಾವುದೇ ರಾಜ್ಯದಲ್ಲಿ ಇರದಂತಹ ಗಮನಾರ್ಹ ಸಂಗತಿಯೆಂದರೆ, ‘ಎತ್ತ ಬೇಕಾದರೂ ವಾಲಬಹುದಾದ’ ಕ್ಷೇತ್ರಗಳು ರಾಜಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು. ಒಟ್ಟು 200 ಕ್ಷೇತ್ರಗಳಲ್ಲಿ 166ರಲ್ಲಿ ಇಂತಹ ಸ್ಥಿತಿ ಇದೆ. ಇವುಗಳ ಪೈಕಿ, 2013ರಲ್ಲಿ ಬಿಜೆಪಿ 135 ಅನ್ನು ಗೆದ್ದಿದ್ದರೆ, 2018ರಲ್ಲಿ ಕಾಂಗ್ರೆಸ್ 95 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಕಾರಣದಿಂದಾಗಿ, ಕೇಸರಿ ಪಕ್ಷಕ್ಕಾಗಲೀ ಕಾಂಗ್ರೆಸ್ ಪಕ್ಷಕ್ಕಾಗಲೀ ‘ಸುರಕ್ಷಿತ’ ಕ್ಷೇತ್ರಗಳ ಸಂಖ್ಯೆ ಕಡಿಮೆ– ಬಿಜೆಪಿಗೆ 43, ಕಾಂಗ್ರೆಸ್‌ಗೆ 31 ಇಂತಹ ಕ್ಷೇತ್ರಗಳಿವೆ. ಸುರಕ್ಷಿತ ಕ್ಷೇತ್ರವೆಂದರೆ, ಯಾವುದೇ ಪಕ್ಷ ಅಲ್ಲಿ ಸತತವಾಗಿ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಗೆದ್ದಿರುವುದು. ಹೀಗಾಗಿ, ವಿಸ್ತೀರ್ಣದಲ್ಲಿ ದೇಶದ ಬಹುದೊಡ್ಡ ರಾಜ್ಯವಾಗಿರುವ ರಾಜಸ್ಥಾನದಲ್ಲಿ, ಹೆಚ್ಚಿನ ಕ್ಷೇತ್ರಗಳಲ್ಲಿ ಯಾವುದೇ ಪಕ್ಷ ಬೇಕಾದರೂ ಗೆಲ್ಲಬಹುದಾದಂತಹ ಪರಿಸ್ಥಿತಿ ಇದೆ. ಥಾರ್ ಮರುಭೂಮಿಯ ಮರಳು ಹೊರಳುವಂತೆ ಈ ಕ್ಷೇತ್ರಗಳಲ್ಲಿನ ಗೆಲುವು ಕೂಡ ಎತ್ತ ಬೇಕಾದರೂ ಹೊರಳಬಹುದು. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವು ಪ್ರತಿ ಐದು ವರ್ಷಗಳಿಗೊಮ್ಮೆ ಬದಲಾಗುತ್ತಾ ಬಂದಿರುವುದಕ್ಕೆ ಇದು ಕೂಡ ಒಂದು ಕಾರಣವಾಗಿರಬಹುದು.
ಹಿಂದಿನ ಐದು ಬಾರಿಯ ಚುನಾವಣೆಗಳಲ್ಲಿ ಕಾಂಗ್ರೆಸ್ 53 ಕ್ಷೇತ್ರಗಳಲ್ಲಿ ಹಾಗೂ ಬಿಜೆಪಿ 19 ಕ್ಷೇತ್ರಗಳಲ್ಲಿ ಒಂದು ಸಲವೂ ಗೆದ್ದಿಲ್ಲ. ಈ ರಾಜ್ಯದಲ್ಲಿ ಸೋಲು, ಗೆಲುವಿನ ಅಂತರ ಕೂಡ ಕಡಿಮೆ. 2018ರ ಚುನಾವಣೆಯಲ್ಲಿ ಶೇ 38ರಷ್ಟು ಕ್ಷೇತ್ರಗಳಲ್ಲಿ ಈ ಅಂತರ 5,000 ಮತಗಳಿಗೂ ಕಡಿಮೆ ಇತ್ತು ಹಾಗೂ ಇಡೀ ರಾಜ್ಯದಲ್ಲಿ ಈ ಎರಡೂ ಪಕ್ಷಗಳಿಗೆ ಬಂದ ಒಟ್ಟು ಮತಗಳ ನಡುವಿನ ಅಂತರ ಬರೀ 1.5 ಲಕ್ಷ.
ಇದೇ ಮೊದಲ ಬಾರಿಗೆ ವೋಟ್ ಮಾಡುವ ಅರ್ಹತೆ ಪಡೆದಿರುವ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಈ 22 ಲಕ್ಷ ಯುವಕ, ಯುವತಿಯರ ಮತಗಳು ಚುನಾವಣೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂದು ನೋಡಬೇಕು.
ರಾಜಸ್ಥಾನದಲ್ಲಿ 59 ಮೀಸಲು ಕ್ಷೇತ್ರಗಳಿವೆ. ಇವುಗಳಲ್ಲಿ 34 ಪರಿಶಿಷ್ಟ ಜಾತಿ ಹಾಗೂ 25 ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. ಇವುಗಳಲ್ಲಿ ಕಾಂಗ್ರೆಸ್ 2018ರಲ್ಲಿ 34 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು.
ಈ ರಾಜ್ಯಕ್ಕೆ ಸಂಬಂಧಿಸಿದ ಇನ್ನೊಂದು ಕುತೂಹಲಕರ ಸಂಗತಿಯೆಂದರೆ, ಇಲ್ಲಿ ಪ್ರಮುಖ ಪಕ್ಷಗಳು ಯಾವುದೇ ಜಾತಿಯನ್ನು ಸಂಪೂರ್ಣವಾಗಿ ನೆಚ್ಚಿಕೊಳ್ಳುವಂತಿಲ್ಲ. ಏಕೆಂದರೆ, ಇಲ್ಲಿ ಬಲಾಢ್ಯ ಜಾತಿಗಳಾದ ರಜಪೂತರು ಕಾಂಗ್ರೆಸ್‌ಗೆ ವೋಟ್ ಮಾಡಿದರೆ, ಜಾಟರು ಬಿಜೆಪಿಗೆ ಮತ ಹಾಕುತ್ತಾರೆ ಅಥವಾ ರಜಪೂತರು ಬಿಜೆಪಿಯನ್ನು ಬೆಂಬಲಿಸಿದರೆ, ಜಾಟರು ಕಾಂಗ್ರೆಸ್ ಪರವಾಗಿ ಇರುತ್ತಾರೆ. ಗುಜ್ಜರ್‌ಗಳು ಬಿಜೆಪಿಗೆ ಮತ ಚಲಾಯಿಸಿದರೆ, ಮೀನಾಗಳು ಕಾಂಗ್ರೆಸ್‌ಗೆ ಒಲಿಯುತ್ತಾರೆ ಅಥವಾ ಇದು ಉಲ್ಟಾ ಆಗುತ್ತದೆ.
ಇನ್ನು ಚುನಾವಣಾ ಪ್ರಣಾಳಿಕೆಗಳನ್ನು ಗಮನಿಸಿದರೆ, ಎಲ್ಲ ಪಕ್ಷಗಳೂ ಭರವಸೆಗಳ ಮಳೆಯನ್ನೇ ಸುರಿಸಿವೆ. ಕರ್ನಾಟಕದಲ್ಲಿ 5 ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್, ಇಲ್ಲಿ 6 ಗ್ಯಾರಂಟಿಗಳನ್ನು ಕೊಟ್ಟಿದೆ. ಭರಪೂರ ಭರವಸೆಗಳನ್ನು ನೀಡುವುದರಲ್ಲಿ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ. ರಾಜಸ್ಥಾನದ ಪ್ರಜ್ಞಾವಂತ ಮತದಾರರು ಈ ಭರವಸೆಗಳಿಗೆ ಮಾರುಹೋಗುತ್ತಾರೋ ಅಥವಾ ವಿವೇಚನೆ ಬಳಸಿ ಮತದಾನ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕು.
ಲೇಖಕ: ಹಿರಿಯ ಪತ್ರಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.