ADVERTISEMENT

ವಿಶ್ಲೇಷಣೆ: ಮಂಡಿ, ಮಾರುಕಟ್ಟೆ ನಡುವೆ ರೈತ

ಹೈನುಗಾರಿಕೆ ಇಂದು ಇರುವ ಮಟ್ಟಕ್ಕೆ ಕೃಷಿ ಕ್ಷೇತ್ರ ಬೆಳೆಯಬೇಕಾದರೆ...

ಎಂ.ಎಸ್.ಶ್ರೀರಾಮ್
Published 17 ಡಿಸೆಂಬರ್ 2020, 19:45 IST
Last Updated 17 ಡಿಸೆಂಬರ್ 2020, 19:45 IST
   
""

ಮೊದಲು ಸುಗ್ರೀವಾಜ್ಞೆಯಾಗಿ ಹೊರಡಿಸಿ ನಂತರ ಕಾನೂನಾಗಿ ಪರಿವರ್ತಿಸಿದ ಮೂರು ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡು ಕೃಷಿ ಆರ್ಥಿಕ ತಜ್ಞ ಅಶೋಕ್ ಗುಲಾಟಿ, ಮಾರುಕಟ್ಟೆಗಳು ಅದ್ಭುತವಾಗಿ ನಡೆಯುವುದಕ್ಕೆ ಹಾಗೂ ಮಂಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ಏಜೆಂಟರ ಹೊರತಾಗಿಯೂ ರೈತರು ವ್ಯವಹರಿಸುವುದಕ್ಕೆ ಹೈನುಗಾರಿಕೆಯ ಉದಾಹರಣೆಯನ್ನು ಕೊಟ್ಟರು. ದೇಶದಲ್ಲಿ ಹೈನುಗಾರಿಕೆ ಅದ್ಭುತವಾಗಿ ಬೆಳೆದಿದೆ. ಇದರಲ್ಲಿ ತೊಡಗಿಸಿಕೊಂಡಿರುವ ರೈತರ ಆದಾಯ ತಕ್ಕಮಟ್ಟಿಗೆ ಚೆನ್ನಾಗಿದೆ. ಕೃಷಿ ಕ್ಷೇತ್ರವೂ ಇದೇ ದಾರಿಯಲ್ಲಿ ಸಾಗಿ ಆ ಮಟ್ಟ ತಲುಪಬೇಕೆನ್ನುವ ಭಾವ ಗುಲಾಟಿಯವರ ಮಾತಿನಲ್ಲಿತ್ತು.

ಆ ಆಶಯವು ಸರಿಯಾದದ್ದೇ. ಕೃಷಿಯ ಸಂದರ್ಭದಲ್ಲಿ ಗುಲಾಟಿಯವರ ಈ ತರ್ಕ ಕೆಲಸ ಮಾಡಬೇಕಿದ್ದರೆ ಹಾಗೂ ಈ ಕಾಯ್ದೆಗಳ ಆಶಯದಂತೆ ಕೃಷಿ ಕ್ಷೇತ್ರವು ಸರ್ಕಾರದ ಕೃಪೆಯಿಂದ (ಅಥವಾ ಕಪಿಮುಷ್ಟಿಯಿಂದ) ಹೊರಗೇ ಉಳಿಯಬೇಕಾದರೆ, ಅದಕ್ಕಾಗಿ ಸುಮಾರು 50 ವರ್ಷಗಳ ಕಾಲದ ಹೂಡಿಕೆಯನ್ನು ಸರ್ಕಾರ ಮಾಡಬೇಕಾಗುತ್ತದೆ. ಏಕೆಂದರೆ ನಮ್ಮಲ್ಲಿ ಹೈನುಗಾರಿಕೆ ಈ ಮಟ್ಟಕ್ಕೆ ಬಂದಿರುವುದರ ಹಿಂದೆ ಈ ಬಗೆಯ ಹೂಡಿಕೆ ಇದೆ.

ಕೇಂದ್ರದ ಮಂತ್ರಿಗಳು ರೈತರಿಗೆ ಕೊಡುತ್ತಿರುವ ‘ಬಿಡುಗಡೆ’ ಅರ್ಥಾತ್ ಖಾಸಗಿ ಮಾರುಕಟ್ಟೆಯ ಅವಕಾಶವು ಹೈನುಗಾರಿಕೆಯಲ್ಲಿ ತೊಡಗಿದ್ದ ರೈತರಿಗೆ ಸ್ವಾತಂತ್ರ್ಯಪೂರ್ವದಲ್ಲೂ ಇತ್ತು. ಈಗ ನಾವು ಮಾರುಕಟ್ಟೆಯನ್ನು ಬಣ್ಣಿಸಲು ಉಪಯೋಗಿಸುತ್ತಿರುವ ಸಂಕೇತಗಳಾದ ಅಂಬಾನಿ-ಅದಾನಿಗಳಂತೆ ಪೋಲ್‍ಸನ್ ಎನ್ನುವ ಖಾಸಗಿ ಸಂಸ್ಥೆ ಅಂದು ಹಾಲನ್ನು ಖರೀದಿಸುತ್ತಿತ್ತು. ಯಾವ ಸರ್ಕಾರವೂ ಈ ವ್ಯಾಪಾರದಲ್ಲಿ ಮೂಗು ತೂರಿಸಿರಲಿಲ್ಲ. ಆದರೆ ತಮಗೆ ಸರಿಯಾದ ಬೆಲೆ ದೊರೆಯುತ್ತಿಲ್ಲ ಎಂದು ತಮ್ಮದೇ ಜಿಲ್ಲೆಯವರಾದ ಸರ್ದಾರ್ ವಲ್ಲಭಭಾಯಿ ಪಟೇಲರ ಬಳಿ ರೈತರು ಅಲವತ್ತುಕೊಂಡಾಗ ಅವರು ಹೇಳಿದ್ದು: ‘ಪೋಲ್‍ಸನ್‍ನು ಕಾಡೀನಾಕೋ’ (ಪೋಲ್‍ಸನ್‍ನ ಕಿತ್ತೊಗೆಯಿರಿ). ಆ ಮಾತು ಕೇಳಿದ ರೈತರು ಒಂದು ದೊಡ್ಡ ಪ್ರತಿಭಟನೆಯನ್ನು (ಮಿಲ್ಕ್ ಸ್ಟ್ರೈಕ್) ಕೈಗೊಂಡರು. ತ್ರಿಭುವನ ದಾಸ್ ಪಟೇಲ್ ನೇತೃತ್ವದಲ್ಲಿ ತಮ್ಮದೇ ಸಹಕಾರ ಸಂಘವನ್ನು ಕಟ್ಟಿಕೊಂಡರು. ಹಾಲನ್ನು ತಾವೇ ಮಾರಾಟ ಮಾಡಲು ಪ್ರಾರಂಭಿಸಿದರು. ಈಗ ಅದಾನಿ-ಅಂಬಾನಿಗಳನ್ನು ಕಿತ್ತೊಗೆಯಬೇಕು ಎನ್ನುವ ರೈತರ ಕರೆಗೂ ಸರ್ದಾರ್ ಪಟೇಲರ ಕಾಡೀನಾಕೋ ಕರೆಗೂ ಯಾವುದೇ ವ್ಯತ್ಯಾಸವಿಲ್ಲ...

ADVERTISEMENT

ಮುಂದೇನಾಯಿತು? ಅಮುಲ್ ಒಂದು ಸಹಕಾರಿ ವ್ಯವಸ್ಥೆಯಾಗಿ ಬೆಳೆಯಿತು. ಅದರ ಬೆಳವಣಿಗೆಯಲ್ಲಿ ರೈತರ ಮಾಲೀಕತ್ವ, ಮಾತು, ಅಭಿಪ್ರಾಯ ಮತ್ತು ಮತಗಳಿದ್ದವು. ಅಂಬಾನಿಯವರ ಕಂಪನಿಯಲ್ಲಿ ರೈತರ ಅಭಿಪ್ರಾಯಕ್ಕೆ, ಅದಾನಿಯವರ ಕಂಪನಿಯಲ್ಲಿ ರೈತರ ಮತಕ್ಕೆ ಅವಕಾಶವಿದೆಯೇ ಎನ್ನುವುದನ್ನು ನಾವು ಕೇಳಬೇಕು. ಇದು ಪ್ರಾರಂಭವಾದದ್ದು 1946ರಲ್ಲಿ. ಮೊದಲಿಗೆ ಸಹಕಾರ ಸಂಘ ಮತ್ತು ಹಾಲಿನ ಶೇಖರಣೆ, ನಂತರ ಪರಿಷ್ಕರಣೆ ಮತ್ತು ತಮ್ಮದೇ ಹೆಸರಿನಲ್ಲಿ ಮಾರಾಟ ಹೀಗೆ ಬೆಳೆಯುತ್ತಾ ಹೋಯಿತು. ಹಾಲನ್ನು ಪುಡಿಯಾಗಿ ಪರಿವರ್ತಿಸಲು, ಎಮ್ಮೆಯ ಹಾಲಿನಿಂದ ಚೀಸ್ ಮಾಡಲು ತಂತ್ರಜ್ಞಾನವನ್ನು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‍ಐ) ನೀಡಿತ್ತು. ಇವೆಲ್ಲಾ ಸಾರ್ವಜನಿಕ ಕ್ಷೇತ್ರದ ಹೂಡಿಕೆಗಳು.

ಎಂ.ಎಸ್‌.ಶ್ರೀರಾಮ್‌

ಗುಜರಾತಿನ ಎಲ್ಲ ಸಹಕಾರ ಸಂಘಗಳನ್ನು ಪ್ರತಿನಿಧಿಸುವ ತಮ್ಮದೇ ಮಾರಾಟ ಒಕ್ಕೂಟವನ್ನು 1973ರಲ್ಲಿ– ಮೊದಲ ಸಹಕಾರ ಸಂಘವನ್ನು ಸ್ಥಾಪಿಸಿದ 27 ವರ್ಷಗಳ ನಂತರ ಆರಂಭಿಸಲಾಯಿತು. ಆಗ್ಗೆ ಆ ಒಕ್ಕೂಟದಲ್ಲಿ ಗುಜರಾತಿನ 6 ಜಿಲ್ಲಾ ಸಂಘಗಳಿದ್ದವು. ಎಲ್ಲ ಜಿಲ್ಲೆಗಳಿಗೂ ಈ ಉತ್ತಮವಾದ ಹಾಲು ಮತ್ತು ಉತ್ಪನ್ನಗಳ ಮಾರಾಟ ವ್ಯವಸ್ಥೆ ಹಬ್ಬಲು ಇನ್ನಷ್ಟು ದಶಕಗಳು ಹಿಡಿದವು. ಈ ನಡುವೆ 1965ರಲ್ಲಿ ಸರ್ಕಾರ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಲಿಯನ್ನು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಆಶಯದ ಮೇರೆಗೆ ಸ್ಥಾಪಿಸಿತು. ದೇಶದ ಇತರ ಭಾಗಗಳಲ್ಲಿ ಹಾಲಿನ ವ್ಯಾಪಾರ ಆಗ ಖಾಸಗಿ ಕ್ಷೇತ್ರದಲ್ಲಿಯೇ ಇತ್ತು, ಅಲ್ಲೆಲ್ಲಾ ಈ ಉದ್ಯಮ, ಮಾರುಕಟ್ಟೆ ನೀಡುವ ಎಲ್ಲ ಆಯ್ಕೆಗಳನ್ನೊಳಗೊಂಡು ರೈತರನ್ನು ಶೋಷಿಸುತ್ತಲೇ ಮುಂದುವರಿದಿತ್ತು.

ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಲಿಯು ಯುರೋಪಿನಿಂದ ಅನುದಾನವಾಗಿ ಬಂದ ಹಾಲಿನ ಪುಡಿ ಮತ್ತು ಕೊಬ್ಬನ್ನು ಉಪಯೋಗಿಸಿ, ಹಾಲು– ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ಹೂಡಿಕೆಯಾಗಿ ತೊಡಗಿಸಿ ರಾಷ್ಟ್ರವ್ಯಾಪಿಯಾಗಿ ಸಹಕಾರ ವ್ಯವಸ್ಥೆಯನ್ನು ‘ಆಪರೇಷನ್ ಫ್ಲಡ್’ ಕಾರ್ಯಕ್ರಮದಡಿ ರೂಪಿಸಿತು. 1970ರಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮ ಮೂರು ಹಂತಗಳಲ್ಲಿ 1996ರವರೆಗೂ ಮುಂದುವರಿಯಿತು. ಹಾಲು ಉತ್ಪಾದನೆಯ ಕ್ಷೇತ್ರಗಳನ್ನು ಗುರುತಿಸಿ, ಅಲ್ಲಿ ಸಹಕಾರ ಸಂಘಗಳನ್ನೂ ಹಾಲಿನ ಶೇಖರಣಾ ವ್ಯವಸ್ಥೆಯನ್ನೂ ರೂಪಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಡೈರಿಗಳನ್ನು ನಿರ್ಮಿಸಲಾಯಿತು. ರಾಜ್ಯ ಮಟ್ಟದಲ್ಲಿ ಮಾರಾಟದ ವ್ಯವಸ್ಥೆಯನ್ನು ಸರ್ಕಾರದ ಧನಸಹಾಯದೊಂದಿಗೇ ರೂಪಿಸಲಾಯಿತು.

ಆ ಕಾರ್ಯಕ್ರಮದಡಿ ಕೃತಕ ಗರ್ಭಧಾರಣೆಯ ಮೂಲಕ ಹಸುಗಳ ತಳಿಯನ್ನು ಉತ್ತಮಪಡಿಸಿ ಉತ್ಪಾದಕತೆಯನ್ನು ಹೆಚ್ಚಿಸಲಾಯಿತು. ಸಹಕಾರ ವ್ಯವಸ್ಥೆಯಲ್ಲಿ ಪಶು ಆಹಾರ ಉತ್ಪಾದನೆಯ ವ್ಯವಸ್ಥೆಯನ್ನು ಮಾಡಲಾಯಿತು. ಉಚಿತ ಪಶುವೈದ್ಯಕೀಯ ಸೇವೆಗಳನ್ನು ಒದಗಿಸಲಾಯಿತು ಹಾಗೂ ಈ ಎಲ್ಲವೂ ಆಗುತ್ತಿದ್ದ ಕಾಲದಲ್ಲಿ ಔಪಚಾರಿಕ ಕ್ಷೇತ್ರದಲ್ಲಿ ರೈತರಿಂದ ಹಾಲು ಶೇಖರಿಸಲು ಮುಕ್ತ ಮಾರುಕಟ್ಟೆಯಿರಲಿಲ್ಲ!

ಇಂದು ಹೈನುಗಾರಿಕೆ ಮುಕ್ತ ಮಾರುಕಟ್ಟೆಯಲ್ಲಿ ಸೆಣಸಿ ಗೆಲ್ಲುತ್ತಿದೆ ಎನ್ನುವುದಾದರೆ, ಅದರಲ್ಲಿ ಪ್ರಮುಖವಾದ ಪಾತ್ರವಿರುವುದು ಈಗಲೂ ಸಕ್ರಿಯವಾಗಿರುವ ಐವತ್ತು ವರ್ಷಗಳ ಕಾಲದ ವ್ಯವಸ್ಥಾಪನೆ ಮತ್ತು ಸರ್ಕಾರಿ ಧನ ಸಂಪನ್ಮೂಲದ ಹೂಡಿಕೆಯಿದ್ದ ರೈತರ ಸಂಸ್ಥೆಗಳದ್ದು.

ಈಗ 1946ರಲ್ಲಿದ್ದಷ್ಟೇ ಮುಕ್ತ ಮಾರುಕಟ್ಟೆಯಿದೆ. ರೈತರು ಹಾಲನ್ನು ಎಲ್ಲಿ ಬೇಕಾದರೂ ಮಾರಬಹುದಾದ ಆಯ್ಕೆಯಿದ್ದಂತೆಯೇ ಕೃಷಿ ಉತ್ಪನ್ನಗಳನ್ನೂ ಮುಕ್ತವಾಗಿ ಮಾರಾಟ ಮಾಡಬಹುದು. ಆದರೆ ಬೆಲೆ ಗಿಟ್ಟುತ್ತದೆಯೇ? ನಮ್ಮ ಕಾರ್ಪೊರೇಟ್ ಸಂಸ್ಥೆಗಳು ಆಧುನಿಕ ಪೋಲ್‌ಸನ್‌ ಆಗಿವೆಯೇ? ಈ ಭಯದಿಂದ ರೈತರು ರಸ್ತೆಗಿಳಿದಿದ್ದಾರೆ. ಹೈನುಗಾರಿಕೆಯ ಕ್ಷೇತ್ರದಲ್ಲಿ ತಮ್ಮ ಆಯ್ಕೆಯನ್ನು ಜಾರಿ ಮಾಡಲು ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಅನೇಕ ಸರ್ಕಾರಗಳು ಹೂಡಿಕೆಯನ್ನು ಮಾಡಿವೆ. ಇಷ್ಟಾದರೂ ಹೆಚ್ಚಿನ ವ್ಯಾಪಾರ ಖಾಸಗಿ ಕ್ಷೇತ್ರವಲ್ಲದೇ ಸಹಕಾರಿ ಕ್ಷೇತ್ರದಲ್ಲಿದೆ. ಈ ರೀತಿಯ ತಯಾರಿಯು ಕೃಷಿಯ ಮಿಕ್ಕ ಭಾಗಗಳಲ್ಲಿ ಆಗಿದೆಯೇ?

ರೈತರು ದೇಶವಿರೋಧಿಗಳು ಎಂದೆಲ್ಲಾ ಹೇಳುವ ಜನ, ಒಂದು ಸಮುದಾಯವು ಮಾರುಕಟ್ಟೆಯಲ್ಲಿ ಸೆಣಸಬೇಕಾದರೆ ಆಂತರ್ಯದಲ್ಲಿ ನಡೆಸಬೇಕಾದ ತಯಾರಿಯನ್ನು ಅಂದಾಜು ಮಾಡುತ್ತಿಲ್ಲ. ಈಗಿನ ಕೃಷಿ ಕಾನೂನಿನ ಧಾಟಿಯಲ್ಲಿಯೇ ನಾವು ಕ್ರೀಡಾಕ್ಷೇತ್ರವನ್ನು ಮುಕ್ತಗೊಳಿಸಿ, ಯಾವುದೇ ಒಲಿಂಪಿಕ್ ಪಂದ್ಯಗಳಲ್ಲಿ ಪಾಲ್ಗೊಳ್ಳಲು ನಮ್ಮ ಜನರು ಮುಕ್ತರು ಎಂದು ಹೇಳಿದಂತಿದೆ. ಕ್ರೀಡಾಳುಗಳಿಗೆ ಬೇಕಾದ ಪೌಷ್ಟಿಕತೆ, ತಾಲೀಮಿಗೆ ಬೇಕಾದ ಕ್ರೀಡಾಂಗಣ, ಶಿಕ್ಷಕರು, ಅಭ್ಯಾಸಕ್ಕೆ ಸವಲತ್ತುಗಳಿಲ್ಲದೇ ನೇರವಾಗಿ ನೂರು ಮೀಟರಿನ ರೇಸನ್ನು ಓಡಿ ಪದಕ ಪಡೆಯಲು ಸ್ವಾಯತ್ತತೆಯನ್ನು ಕೊಡುತ್ತಿದ್ದೇವೆ ಎನ್ನುವ ಮಾತನ್ನು ಸರ್ಕಾರ ಹೇಳುತ್ತಿದೆ.

ಕೆಲಸಕ್ಕೆ ಬಾರದ ಕಾನೂನುಗಳನ್ನು ಅಂಗೀಕರಿಸುವಲ್ಲಿ ತೋರುವ ಉತ್ಸಾಹವನ್ನು ಮೂಲ ಸೌಕರ್ಯ ನಿರ್ಮಾಣದಲ್ಲಿ, ಸಾರಿಗೆ ವ್ಯವಸ್ಥೆಯಲ್ಲಿ, ಮಂಡಿಗಳನ್ನು ಆಧುನಿಕಗೊಳಿಸುವಲ್ಲಿ, ಗುಣಮಟ್ಟವನ್ನು ವೈಜ್ಞಾನಿಕವಾಗಿ ಕಂಡುಕೊಳ್ಳುವಂತಹ ಸೌಕರ್ಯಗಳಲ್ಲಿ ಸರ್ಕಾರ ಹೂಡಿಕೆ ಮಾಡಿದರೆ ಅದರಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಲಾಭವಾಗಬಹುದು.

ಮಾರುಕಟ್ಟೆಯನ್ನು ಮುಕ್ತಗೊಳಿಸುವ ಮುನ್ನ ಅದಕ್ಕಾಗಿ ಆಗಬೇಕಿರುವ ತಯಾರಿ ಆಗಿದೆಯೇ ಎನ್ನುವುದನ್ನು ಕಂಡುಕೊಳ್ಳಬೇಕು. ಉತ್ಪಾದಕತೆ ಹಾಗೂ ಕೃಷಿಗೆ ಸಾಲ ನೀಡುವ ವಿಷಯಗಳಲ್ಲಿ ಕೆಲವು ಮೂಲ ಸೌಕರ್ಯಗಳ ನಿರ್ಮಾಣವಾಗಿದೆ. ಸ್ವಲ್ಪ ಮಟ್ಟಿಗೆ ನೀರಾವರಿಯೂ ದಕ್ಕಿದೆ. ಆದರೆ ಕೃಷಿ ಕ್ಷೇತ್ರವು ಹೈನುಗಾರಿಕೆಯ ಮಟ್ಟಕ್ಕೆ ಬರಬೇಕಾದರೆ ಸತತ ಗಮನದೊಂದಿಗೆ 20 ವರ್ಷಗಳ ಕಾಲವಾದರೂ ಹೈನುಗಾರಿಕೆಯಲ್ಲಿ ಕುರಿಯನ್ ಕೆಲಸ ಮಾಡಿದಂತೆ ಆರ್ಥಿಕ ಮತ್ತು ಬೌದ್ಧಿಕ ಸಂಪನ್ಮೂಲಗಳನ್ನು ಹೂಡಬೇಕು. ಅಲ್ಲಿಯತನಕ ಕೃಷಿ ಕಾಯ್ದೆಗಳನ್ನು ಕಾಲದ ಕೋಲ್ಡ್ ಸ್ಟೋರೇಜಿನಲ್ಲಿ ಹಾಕೋಣ. ನಮ್ಮ ತರಕಾರಿಗಳಿಗೆ ದೇಶವ್ಯಾಪಿಯಾಗಿ ಶೀತಲೀಕರಣ ವ್ಯವಸ್ಥೆ ಏರ್ಪಾಟಾದ ನಂತರ ಈ ಕಾಯ್ದೆಗಳನ್ನು ಕೋಲ್ಡ್ ಸ್ಟೋರೇಜ್‌ನಿಂದ ತೆಗೆಯೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.