ಡಿ. 23 ರೈತ ದಿನ. ಅದರ ಸಂಭ್ರಮವನ್ನು ಸೂಸಬೇಕಾದ ಕಣ್ಣು ಕಿಡಿ ಕಾರುತ್ತಿದೆ. ದೇಶದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ಸರ್ಕಾರ ತನ್ನ ಮೂರು ಮಸೂದೆಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದೇ ಹೇಳಿದೆ. ಪರಿಣಾಮ ರೈತರು ಮತ್ತು ಸರ್ಕಾರದ ನಡುವೆ ಸಂಘರ್ಷ ಹೆಚ್ಚಾಗುತ್ತಲೇ ಇದೆ. ಕೃಷಿಕರು ಭಾವುಕರಾಗಿ ತಮ್ಮ ಪ್ರಾಣ ತ್ಯಾಗಕ್ಕೂ ಸಿದ್ಧ ಎನ್ನುವ ಸಂದೇಶವನ್ನೂ ನೀಡುತ್ತಿದ್ದಾರೆ. ಮಾತ್ರವಲ್ಲ, ದೆಹಲಿಯ ಭೀಕರ ಚಳಿಗೆ ಮೈಯೊಡ್ಡಿಬಯಲಲ್ಲಿ ಶಾಂತಿಯುತ ಹೋರಾಟವನ್ನು ಮುಂದುವರಿಸಿದ್ದಾರೆ. ಸುಪ್ರೀಂ ಕೋರ್ಟ್ ರೈತ ಹೋರಾಟ ಸಂವಿಧಾನ ಬದ್ಧ ಹಕ್ಕು ಎಂದು ಹೇಳಿದೆ. ಕೃಷಿಯನ್ನು ರಾಷ್ಟ್ರೀಕರಣ ಮಾಡಬೇಕಾದ ಸರ್ಕಾರ ಖಾಸಗೀಕರಣಗೊಳಿಸುತ್ತಿದೆ ಎಂಬ ಮಾತೂ ಕೇಳಿಬಂದಿದೆ. ಪ್ರತಿಭಟನಾನಿರತರು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ರೂಪಿತವಾಗಿರುವ ಸರ್ಕಾರಿ ಸ್ವಾಮ್ಯದ ಎಪಿಎಂಸಿಯ ಬೆನ್ನು ಮೂಳೆ ಮುರಿಯುವ ಕಾನೂನನ್ನು ಸರ್ಕಾರವೇ ರೂಪಿಸುತ್ತಿದೆ ಎಂದು ಆರೋಪಿಸಿದ್ದಾರೆ. ಸರ್ಕಾರ ರೈತರ ಹಿತದೃಷ್ಟಿಯಿಂದಲೇ ಮೂರು ಕಾಯಿದೆ ಮಾಡುತ್ತಿರುವುದಾಗಿ ಹೇಳಿದೆ. ಹಾಗಾದರೆ ಸರ್ಕಾರದ ಧೋರಣೆ ಮತ್ತು ರೈತ ಚಳವಳಿಯ ಆಶಯವೇನು?
ಕೇಂದ್ರ ಸರ್ಕಾರವೇ ರೂಪಿಸಿರುವ ‘ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ– 2019–20’ರ ಪರಿಹಾರ ಧನ ಸಂಪೂರ್ಣ ಪ್ರಮಾಣದಲ್ಲಿ ಅರ್ಹ ಫಲಾನುಭವಿ ರೈತರ ಕೈ ಸೇರಿಲ್ಲ. ಕೃಷಿ ವಿಮೆಯನ್ನೇ ಸಮರ್ಪಕವಾಗಿ ನಿಭಾಯಿಸಲು ಸಾಧ್ಯ ಇಲ್ಲದ ಸರ್ಕಾರ ಕಾರ್ಪೋರೆಟ್‌ಗಳ ಹಿತ ಕಾಯಲು ರೈತರ ಅನುಕೂಲಕ್ಕೆಂದು ಕೃಷಿ ಕಂಟಕ ಕಾನೂನು ರೂಪಿಸುತ್ತಿದೆ. ಆ ಮೂಲಕ ಸಾಂಪ್ರದಾಯಿಕ ಕೃಷಿಯನ್ನು ನಿರ್ಮೂಲನೆ ಮಾಡುತ್ತಿದೆ ಎನ್ನುವುದೂ ರೈತರ ದೂರು.
ನೇಗಿಲ ಕುಳದೊಳಗಡಗಿದೆ ಕರ್ಮ
ನೇಗಿಲ ಮೇಲೆಯೆ ನಿಂತಿದೆ ಧರ್ಮ...(ನಾಡ ರೈತಗೀತೆ)
ಇದು ಕವಿ ಕುವೆಂಪು ಅವರ ಕಾವ್ಯದ ಸಾಲು. ಧರ್ಮ– ಕರ್ಮದ ಸೂತ್ರದಾರ ರೈತನೇ ಎನ್ನುವುದು ಕವಿತೆಯ ಆಶಯ. ಅಂತಹ ರೈತ ದೇಶದ ರಾಜಧಾನಿಯ ಗಡಿ ಬೀದಿಯಲ್ಲಿ ನಡುಗುತ್ತ ತನ್ನ ಬತ್ತಿಹೋದ ಭರವಸೆಗೆ ಗಟ್ಟಿ ದನಿಯಾಗಿದ್ದಾನೆ. ಅವರು ಬಯಲಿಗೆ ಬಂದು ಇಂದಿಗೆ 25 ದಿನ ತುಂಬಿವೆ ಇನ್ನೂ 25 ದಿನ ಕಳೆದರೂ ಅವರ ಬೇಡಿಕೆಗಳು ಈಡೇರುವ ಲಕ್ಷಣ ಕಾಣಿಸುತ್ತಿಲ್ಲ. ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಜನ್ಮ ದಿನದ ಸವಿ ನೆನಪಿಗಾಗಿ ‘ರೈತ ದಿನ’ ಎಂದು ಡಿ.23ರಂದು ಆಚರಿಸಲಾಗುತ್ತಿದೆ. ಬುಧವಾರ ರೈತ ದಿನವಾದರೂ ರೈತರು ತಮ್ಮ ದಿನವನ್ನು ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ.
ರೈತರ ಸ್ಮರಣೀಯ ದಿನವೂ ಅವರ ಪ್ರತಿರೋಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. 40ಕ್ಕೂ ಹೆಚ್ಚಿನ ಬೇರೆ ಬೇರೆ ಸಂಘಟನೆಗಳು ಈ ಹೋರಾಟವನ್ನು ರೂಪಿಸಿವೆ. ಮಹಾರಾಷ್ಟ್ರದ ರೈತರೂ ದೆಹಲಿಯತ್ತ ಹೊರಟ್ಟಿದ್ದಾರೆ. ಬೆಂಗಳೂರಿನಲ್ಲಿಯೂ ಸತ್ಯಾಗ್ರಹ ನಡೆಯುತ್ತಿದೆ. ದೇಶವ್ಯಾಪಿ ಸಹಾನುಭೂತಿ ವ್ಯಕ್ತವಾಗುತ್ತಿದೆ. ದೆಹಲಿ ಗಡಿಯ ಐದು ಕಡೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ.ಸಿಂಗೂ ಗಡಿಯಲ್ಲಿಯೇ ದೊಡ್ಡ ಪ್ರಮಾಣದಲ್ಲಿ ರೈತರು ಜಮಾವಣೆಯಾಗಿದ್ದಾರೆ. ಇದು ಸಂಸತ್ತಿನಿಂದ ಸುಮಾರು 40 ಕಿ.ಮಿ. ದೂರದಲ್ಲಿದೆ. ಹರಿಯಾಣ ಮತ್ತು ದೆಹಲಿ ಮಾರ್ಗದ ಚೆಕ್ ಪೋಸ್ಟ್ ಕೇಂದ್ರವೇ ಸಿಂಗೂ ಗಡಿ. ಇಲ್ಲಿ ಸುಮಾರು ಹತ್ತು ಕಿ.ಮೀ.ನಷ್ಟು ದೂರ ಟ್ರಾಕ್ಟರ್‌ಗಳು ನಿಂತಿವೆ ಎನ್ನಲಾಗುತ್ತಿದೆ. ಟಿಕ್ರಿ, ಗಾಜಿಯಾ, ಚಿಲಿ, ನೊಯಿಡಾ ಗಡಿಯಲ್ಲಿಯೂ ರೈತರು ಸೇರಿದ್ದಾರೆ.
ಸರ್ಕಾರದ ದೃಷ್ಟಿಯಲ್ಲಿ ರೈತ ಹೋರಾಟ
‘ರೈತರು’ ಎಂದು ಹೋರಾಟ ಮಾಡುತ್ತಿದ್ದವರಿಗೆ ಮಸೂದೆಗಳ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲ. ಅವರು ವಿರೋಧ ಪಕ್ಷದ ಕಾರ್ಯಕರ್ತರು. ಪಂಜಾಬಿನ ಎರಡು ಪ್ರಭಾವಿ ರಾಜಕೀಯ ಕುಟುಂಬಗಳು ಎಪಿಎಂಸಿಯನ್ನು ಹಿಡಿತದಲ್ಲಿ ಇಟ್ಟುಕೊಂಡಿವೆ. ಎಪಿಎಂಸಿ (ಮಂಡಿ)ಯಲ್ಲಿ ಪ್ರತಿ ವರ್ಷ ಲಕ್ಷಾಂತರ ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ. ಅದರಲ್ಲಿ ಬಹುಪಾಲು ಲಾಭವನ್ನು ಆ ಎರಡು ಕುಟುಂಬ ಪಡೆಯುತ್ತಿವೆ. ಈಗ ಅವರ ಹಿಡಿತ ತಪ್ಪುತ್ತದೆ ಎನ್ನುವ ಕಾರಣಕ್ಕೆ ಹೋರಾಟ ಮಾಡಲಾಗುತ್ತಿದೆ. ಮಸೂದೆಗಳು ರೈತ ಪರವಾಗಿವೆ ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ವಿರೋಧಿಸುವ ಪ್ರಶ್ನೆಯೇ ಎದುರಾಗುವುದಿಲ್ಲ ಎನ್ನುವುದು ಸರ್ಕಾರದ ದೃಷ್ಟಿ.
ಹೋರಾಟ ಭೂಮಿಯ ಸ್ವರೂಪ
‘ಪ್ರಶ್ನಿಸುವುದು’, ‘ಪ್ರತಿರೋಧಿಸುವುದು’ ಮೂಲಭೂತ ಹಕ್ಕೇ ಆಗಿದ್ದರೂ ಇವತ್ತಿನ ರೈತ ಚಳವಳಿಯನ್ನು ಗುಮಾನಿಯಿಂದ ನೋಡುವ ಆರೋಪಿಸುವ ರಾಜಕಾರಣದ ಬಗ್ಗೆ ಯೋಚಿಸಬೇಕಿದೆ. ಟೊಮೊಟೊ ಬೆಳೆಗಾರರ ‘ಹುಳಿ’ ಅನುಭವ ಒಂದು ಬಗೆಯಾದರೆ ಕಬ್ಬು ಬೆಳಗಾರರ ‘ಸಿಹಿ’ ಅನುಭವ ಒಂದು ಬಗೆ. ಭಿನ್ನ ಬೆಳೆಯ ಬೇಗುದಿಗಳು ಭಿನ್ನವಾಗಿರುತ್ತವೆ. ಅದು ಪ್ರದೇಶದಿಂದ ಪ್ರದೇಶಕ್ಕೂ ಭಿನ್ನವಾಗಿರುತ್ತದೆ. ಕರ್ನಾಟಕಕ್ಕಿಂತ ನೆರೆಯ ರಾಜ್ಯಗಳ ಕೃಷಿ ಬಿಕ್ಕಟ್ಟುಗಳು ಬೇರೆಯೇ ಆಗಿರುತ್ತವೆ. ಹೀಗಿರುವಾಗಲೇ ಸರ್ಕಾರದ ‘ಸುಧಾರಣೆಯ’ ನೀತಿ ದೇಶದ ಕೃಷಿಕರನ್ನೆಲ್ಲಾ ಒಂದಾಗಿಸಿದೆ.
ಒಗ್ಗಟಿನ ರೈತ ಚಳವಳಿ ಸಂಸತ್ತಿನ ಅಂಗಳದಲ್ಲಿ ಕುಳಿತು ತನ್ನ ನೋವನ್ನು ಹೊರಹಾಕಿದೆ. ಮೈಕೊರೆಯುವ ಚಳವಳಿಯಲ್ಲಿ ದಿನ ದಿನವೂ ಹೋರಾಟದ ಕಿಚ್ಚು ಹೆಚ್ಚುತ್ತಿದೆ. ರೈತ ಚಳವಳಿಗೆ ದೇಶ ದ್ರೋಹದ ಆರೋಪ ಬಂದರೂ ಲೆಕ್ಕಿಸದೆ ತಮ್ಮ ಐಕ್ಯ ಹೋರಾಟವನ್ನು ಅದು ಮುಂದುವರಿಸಿದೆ. ಅದರ ಹಿಂದೆ ರಾಜಕೀಯ ಇದೆ ಎಂಬ ಅಸ್ತ್ರವನ್ನೂ ಪ್ರಯೋಗಿಸಿದೆ. ಹಾಗಾದರೆ ಹೋರಾಟ ಅಪರಾಧವೇ? ಎಲ್ಲ ಹೋರಾಟಗಳೂ ರಾಜಕೀಯ ಚಟುವಟಿಕೆಯ ಭಾಗ ಅಲ್ಲವೇ? ಒಂದು ವೇಳೆ ರಾಜಕೀಯ ಪ್ರೇರಿತವೇ ಆಗಿದ್ದರೂ ಅದರಲ್ಲೇನು ತಪ್ಪು? ಸುಪ್ರೀಂ ಕೋರ್ಟ್ ಪ್ರತಿರೋಧ ಸಂವಿಧಾನ ಬದ್ಧ ಹಕ್ಕು ಎಂದೇ ಹೇಳಿದೆ. ಪ್ರತಿಭಟನಾನಿರತರು ಮಾಧ್ಯಮಗಳ ಮೇಲೂ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಹೋರಾಟದ ವಾಸ್ತವವನ್ನು ಮಾಧ್ಯಮ ಬಿತ್ತರಿಸುತ್ತಿಲ್ಲ ಎನ್ನುವುದು ಅವರ ಆಕ್ಷೇಪ. ತಮ್ಮ ಒಲವು ನಿಲುವುಗಳನ್ನು ಜನತೆಗೆ ತಲುಪಿಸಲು ಅವರೇ ‘ಕಿಸಾನ್ ಏಕ್ತಾ ಮೋರ್ಚಾ’ (Kisan ekta morcha) ಎಂಬ ಯೂಟೂಬ್ ಚಾನೆಲ್ ಆರಂಭಿಸಿದ್ದಾರೆ. ಇದರ ಜೊತೆ ಪತ್ರಿಕೆಯನ್ನೂ ಆರಂಭಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಸರ್ಕಾರ ಏನು ಮಾಡಬಹುದು?
ಸಮಿತಿಯೊಂದನ್ನು ರಚಿಸಿ ರೈತರ ಬೇಡಿಕೆಗಳನ್ನು ಈಡೆರಿಸುವ ಬಗ್ಗೆ ಸರ್ಕಾರ ಯೋಚಿಸಬಹುದು ಎಂಬ ಸಲಹೆಯನ್ನು ಸುಪ್ರೀಂಕೋರ್ಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಪಿ. ಸಾಯಿನಾಥ್ ಅವರಂತಹ ಚಿಂತಕರ ನೇತೃತ್ವದಲ್ಲಿ ಸಮಿತಿಯೊಂದನ್ನು ರೂಪಿಸುವ ಸಾಧ್ಯತೆ ಇದೆ. ಸಾಯಿನಾಥ್ ಅವರನ್ನು ಕೈ ಬಿಟ್ಟರೂ ಸಮಿತಿಯನ್ನು ಅನಿವಾರ್ಯವಾಗಿ ಸರ್ಕಾರ ಮಾಡಬೇಕಾಗುತ್ತದೆ. ಏಕೆಂದರೆ ನ್ಯಾಯಾಲಯದ ಮೂಲಕ ಹೋರಾಟವನ್ನು ಹತ್ತಿಕ್ಕುವ ತಂತ್ರ ವಿಫಲವಾಗಿದೆ. ಹೋರಾಟವನ್ನು ಬಲಪ್ರಯೋಗದಿಂದಲೂ ಹತ್ತಿಕ್ಕಲು ಈಗ ಸಾಧ್ಯವೇ ಇಲ್ಲ. ಅಂದ ಮೇಲೆ ರೈತರ ಜೊತೆ ಸಮನ್ವಯ ಸಾಧಿಸಲು ಮಾತುಕತೆ ಒಂದೇ ಉಳಿದ ಮಾರ್ಗ. ಸದ್ಯದ ಸ್ಥಿತಿಯಲ್ಲಿ ರೈತರು ಹಿಂದಕ್ಕೆ ಸರಿಯುವ ಲಕ್ಷಣ ಕಾಣುತ್ತಿಲ್ಲ. ಹೀಗೆ ಮುಂದುವರಿದ ಪಕ್ಷದಲ್ಲಿ ಕೊನೆಗೂ ಸರ್ಕಾರವೇ ತನ್ನ ಮಸೂದೆಯನ್ನು ಹಿಂದಕ್ಕೆ ಪಡೆಯುವ ಅನಿವಾರ್ಯತೆಯೂ ಎದುರಾಗಬಹುದು.
ಆ ಮೂರು ಮಸೂದೆಗಳು
ಮೊದಲನೆಯದು: ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಉತ್ತೇಜನ– ಸೌಲಭ್ಯ ಕಲ್ಪಿಸುವ ಮಸೂದೆ. (Farmers Produce Trade and Commerce (Promotion And Facilitation) Bill 2020) ರೈತರು ಬಹುದಿನಗಳಿಂದ ತಮ್ಮ ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆಯನ್ನು ವೈಜ್ಞಾನಿಕವಾಗಿ ನೀಡಬೇಕು. ಎಪಿಎಂಸಿಯಲ್ಲಿ ಈಗ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸುತ್ತಲೇ ಬಂದಿದ್ದಾರೆ. ಅದನ್ನು ನಿವಾರಿಸಬೇಕಿದ್ದ ಸರ್ಕಾರ ಎಪಿಎಂಸಿ ಅಥವಾ ಮಂಡಿ ವ್ಯವಸ್ಥೆಯನ್ನು ಬದಲಿಸಿ ಖಾಸಗೀಕರಣಕ್ಕೆ ಒತ್ತುಕೊಡುತ್ತಿದೆ. ಸರ್ಕಾರಿ ಸ್ವಾಮ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅವಸಾನಗೊಳಿಸಿ ಖಾಸಗೀಕರಣವನ್ನು ಉತ್ತೇಜಿಸಿದಂತೆ ಆಗುತ್ತದೆ. ಇದು ಮುಂದೊಂದು ದಿನ ರೈತ ಸಂಕುಲಕ್ಕ ದೊಡ್ಡಪೆಟ್ಟು ಎನ್ನುವುದು ರೈತರ ಆರೋಪ.
ಎರಡನೆಯದು: ರೈತರು ಹಾಗೂ ಕಂಪನಿಗಳ ಜೊತೆ ಬೆಳೆಯ ಬೆಲೆ, ಗುಣಮಟ್ಟ ಮತ್ತು ಸೇವೆಗೆ ಸಂಬಂಧಿಸಿದಂತೆ ಒಪ್ಪಂದ. (The Farmers (Empowerment And Protection) Agreement On Price Assurance And Farm Services Bill, 2020) ಈ ಮಸೂದೆ ಕೃಷಿ ಉತ್ಪನ್ನದ ಮೌಲ್ಯ ಮತ್ತು ಗುಣಮಟ್ಟವನ್ನು ಖಾಸಗಿ ಸಂಸ್ಥೆ ನಿರ್ವಹಿಸುತ್ತವೆ. ಸರ್ಕಾರೇತರ ಸಂಸ್ಥೆಯಿಂದ ನ್ಯಾಯಯುತವಾದ ಮೌಲ್ಯ ನಿರ್ಧಾರ ಆಗುವುದಿಲ್ಲ ಎಂದು ರೈತರು ಈ ಮಸೂದೆಯನ್ನು ಒಪ್ಪಲು ಸಿದ್ಧರಿಲ್ಲ.
ಮೂರನೆಯದು: The Essential Commodities (Amendment) Ordinance, 2020. ಕೃಷಿ ಕಂಪನಿಗಳಿಗೆ ಆಹಾರ ಸರಕುಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಲು ಅವಕಾಶ ಕೊಡುವ ಕಾಯಿದೆ. ಇದರಿಂದ ಕೃತಕ ಅಭಾವ ಸೃಷ್ಟಿಯಾಗುವ ಅಪಾಯ ಇದೆ. ಬೆಲೆ ನಿಯಂತ್ರಣ ಕೂಡ ಸಂಪೂರ್ಣ ದೊಡ್ಡ ಕಂಪನಿಗಳ ಕೈ ಸೇರುವುದರಿಂದ ಕೃಷಿ ಉತ್ಪನ್ನ ಬಳಕೆದಾರಿಗೂ ತೊಂದರೆಯಾಗುತ್ತದೆ ಎನ್ನುವುದು ರೈತರ ಆರೋಪ.
ಪ್ರತಿರೋಧವನ್ನು ಭಯೋತ್ಪಾದನೆ- ನಕ್ಸಲ್ ಎಂದು ಜರಿಯುವುದನ್ನು ಬಿಟ್ಟು ಅವರ ಅಗತ್ಯಗಳಿಗೆ ಸ್ಪಂದಿಸುವುದು ಸದ್ಯದ ತುರ್ತು. ಎಪಿಎಂಸಿಯಲ್ಲಿ ಲೋಪಗಳು ಇವೆ. ಆ ಲೋಪವನ್ನು ನಿವಾರಿಸುವುದನ್ನು ಬಿಟ್ಟು ಅದನ್ನೇ ನಿರ್ಮೂಲನೆ ಮಾಡುವ ಕಾರ್ಯತಂತ್ರ, ನೆಗಡಿಯಾದರೆ ಮೂಗು ಕೂಯ್ದುಕೊಂಡತೆಯೇ ಸರಿ. ಈ ನಿಟ್ಟಿನಲ್ಲಿ ನೋಡಿದಾಗ ರೈತರ ಬೇಕು– ಬೇಡಗಳು ಅವರ ಇಷ್ಟದಂತೆಯೇ ಇರಬೇಕು. ಈಗ ತಂದಿರುವ ಮಸೂದೆಗಳ ಬಗ್ಗೆ ಸಮಗ್ರ ಚರ್ಚೆ ಆಗಬೇಕು. ಈ ಹಿಂದೆ ಸಂವಿಧಾನ ಪರಾಮರ್ಶೆಗೆ ಸಂಬಂಧಿಸಿದಂತೆ ಜರುಗಿದ ವಿಚಾರ ವಿನಿಮಯ, ರೈತ ಮಸೂದೆಗಳ ಮೇಲೂ ನಡೆದರೆ ನಿರ್ಣಾಯಕ ಫಲಿತಾಂಶವನ್ನು ಪಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.