ADVERTISEMENT

ಸಿನಿಮಾ ಸಬ್ಸಿಡಿ ಪದ್ಧತಿ ಬದಲಾಗಲಿ

ಹೊಂದಾಣಿಕೆಯಲ್ಲೇ ಚಿತ್ರ ತಯಾರಿಸಿ, ಕೆಂಬೂತವನ್ನೇ ನವಿಲೆಂದು ಕುಣಿಸಬೇಕಾಗಿದೆ!

ಕೇಸರಿ ಹರವು
Published 11 ಅಕ್ಟೋಬರ್ 2019, 20:00 IST
Last Updated 11 ಅಕ್ಟೋಬರ್ 2019, 20:00 IST
   

ನೂರು, ನೂರಿಪ್ಪತ್ತೈದು ಚಲನಚಿತ್ರಗಳಿಗೆ ಸಬ್ಸಿಡಿ ನೀಡುವುದಾಗಿ ಸರ್ಕಾರ ಘೋಷಿಸಿದಾಗಿನಿಂದಲೂ ‘ಸಬ್ಸಿಡಿಗಾಗಿಯೇ ಚಿತ್ರ ತಯಾರಿಸುವ ಮಂದಿಯನ್ನು ಇನ್ನಷ್ಟು ಪ್ರೋತ್ಸಾಹಿಸಿದಂತಾಗುತ್ತದೆ’ ಎನ್ನುವ ಆಕ್ಷೇಪ ಇದೆ. ನಿಜವೇ, ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಔದಾರ್ಯ ಪ್ರದರ್ಶಿಸುವ ಸರ್ಕಾರ ತನ್ನ ಸಬ್ಸಿಡಿ ನೀತಿಯನ್ನು ಪರಾಮರ್ಶಿಸುವವರೆಗೆ, ಅದರ ದುರುಪಯೋಗ ಮಾಡಿಕೊಳ್ಳುವವರು ಇದ್ದೇ ಇರುತ್ತಾರೆ. ಇದರಿಂದ ಚಿತ್ರೋದ್ಯಮಕ್ಕೂ, ಚಲನಚಿತ್ರ ಮಾಧ್ಯಮಕ್ಕೂ ಯಾವುದೇ ಉಪಯೋಗವಿಲ್ಲ.

ಚಿತ್ರನಿರ್ಮಾಣದ ಇಂದಿನ ಬಜೆಟ್ಟಿನ ಮುಂದೆ ಸಹಾಯಧನದ ಮೊತ್ತ ಏನೂ ಅಲ್ಲ, ತೆರಿಗೆ ಹಣ ಸುಮ್ಮನೆ ಪೋಲಾಗುತ್ತದೆ, ಹಾಗಾಗಿ ಅದನ್ನು ನಿಲ್ಲಿಸುವುದೇ ಒಳ್ಳೆಯದು ಎನ್ನುವ ವಾದ ಸಾಂಸ್ಕೃತಿಕವಾಗಿ ಅಪಾಯಕಾರಿ. ದೊಡ್ಡ ಬಜೆಟ್ಟಿನ, ದೊಡ್ಡ ತಾರಾಮೌಲ್ಯ ಹೊಂದಿದ ಚಿತ್ರಗಳಿಗೆ ಸಬ್ಸಿಡಿಯ ಅವಶ್ಯಕತೆ ಇಲ್ಲದಿರಬಹುದು. ಆದರೆ, ಕರ್ನಾಟಕದಲ್ಲಿ ನಮ್ಮ ಭಾಷಾ ಚಿತ್ರರಂಗ ಗುಣಾತ್ಮಕವಾಗಿ ಬೆಳೆದು, ರಾಜ್ಯದ ಸಂಸ್ಕೃತಿ, ಸಾಮಾಜಿಕತೆಯನ್ನು ಎಲ್ಲೆಡೆ ಬಿಂಬಿಸಲಿ ಎನ್ನುವ ಉದ್ದೇಶದಿಂದಲೇ ಸಹಾಯಧನ ನೀತಿ ಬಂದಿದ್ದು. ಈ ಉದ್ದೇಶವನ್ನು ಅನೇಕ ಸಲ ಸಣ್ಣ ಬಜೆಟ್ಟಿನಲ್ಲಿ ಸೃಜನಾತ್ಮಕ ಕೃತಿಗಳೇ ಪೂರೈಸುತ್ತಿವೆ, ರಾಜ್ಯಕ್ಕೆ ಹೆಸರು ತಂದುಕೊಡುತ್ತಿವೆ ಎನ್ನುವುದು ಚಾರಿತ್ರಿಕ ಸತ್ಯ. ಒಂದು ವೇಳೆ ಸಬ್ಸಿಡಿ ನಿಲ್ಲಿಸಿದ್ದೇ ಆದರೆ, ಸಾಮಾಜಿಕ ವಾಸ್ತವದ ಸೃಜನಾತ್ಮಕ ಚಿತ್ರಗಳು ತಯಾರಾಗುವುದು ಕಷ್ಟ. ಈ ಕಾರಣಕ್ಕಾಗಿಯೇ ಸಹಾಯಧನ ನೀತಿ ಮುಂದುವರಿಯಬೇಕಾಗುತ್ತದೆ. ಆದರೆ, ನೀಡಿಕೆಯ ರೂಪುರೇಷೆ ಕಾಲಕ್ಕೆ ತಕ್ಕಂತೆ ಬದಲಾಗಬೇಕಾಗುತ್ತದೆ.

ಪ್ರತಿವರ್ಷ ರಾಜ್ಯದಲ್ಲಿ ತಯಾರಾಗುತ್ತಿರುವ ಸುಮಾರು 250 ಚಿತ್ರಗಳಲ್ಲಿ ಎಷ್ಟು ಚಿತ್ರಗಳು ನಿಜ ಅರ್ಥದಲ್ಲಿ ಗುಣಮಟ್ಟದ ಚಿತ್ರಗಳಾಗಿ ತಯಾರಾಗುತ್ತವೆ? ರಾಷ್ಟ್ರಪ್ರಶಸ್ತಿಯೊಂದೇ ಗುಣಮಟ್ಟದ ಮಾನದಂಡವಲ್ಲ ಎನ್ನುವುದು ಹೌದಾದರೂ, ಇತರ ಭಾಷಾ ಚಿತ್ರಗಳೊಂದಿಗೆ ನಮ್ಮ ಚಿತ್ರಗಳ ತುಲನೆಗೆ ಅದರಿಂದ ಸಹಾಯವಾಗುತ್ತದೆ. ಈ ವರ್ಷವೇನೋ ಕನ್ನಡ ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿಕೊಂಡವು. ಆದರೆ ಈ ಹಿಂದಿನ ವರ್ಷಗಳಲ್ಲಿನ ಸತ್ಯ ಬೇರೆಯೇ ಇದೆ. 2016-17ನೇ ಸಾಲಿನಲ್ಲಿ ರಾಜ್ಯದಿಂದ 59 ಚಿತ್ರಗಳು ರಾಷ್ಟ್ರ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿದ್ದವು. ಪ್ರಾದೇಶಿಕ ಪ್ರಶಸ್ತಿ ಮತ್ತು ಒಂದೆರಡು ವೈಯಕ್ತಿಕ ಪ್ರಶಸ್ತಿಗಳನ್ನು ಬಿಟ್ಟರೆ, ಅಷ್ಟೂ ಚಿತ್ರಗಳಲ್ಲಿ ಒಂದಕ್ಕೂ ರಾಷ್ಟ್ರ ಮಟ್ಟದ ಪ್ರಶಸ್ತಿ ದೊರೆಯಲಿಲ್ಲ.

ADVERTISEMENT

ನಾನು ಎರಡು ಬಾರಿ ರಾಷ್ಟ್ರೀಯ ಆಯ್ಕೆ ಸಮಿತಿಯ ಸದಸ್ಯನಾಗಿ ಹೋದಾಗಿನ ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ, ಸ್ಪರ್ಧೆಗೆ ಬರುವ ಅನೇಕ ಕನ್ನಡ ಚಿತ್ರಗಳು ನಮ್ಮ ಚಿತ್ರರಂಗವನ್ನು ನಗೆಪಾಟಲಿಗೆ ಗುರಿಯಾಗಿಸುತ್ತವೆ. ಅಂದರೆ, ವಸ್ತು-ವಿನ್ಯಾಸ ವೈವಿಧ್ಯ ಮತ್ತು ತಾಂತ್ರಿಕ ಗುಣಮಟ್ಟದಲ್ಲಿ ಇತರ ಭಾಷಾ ಚಿತ್ರಗಳಿಗೆ ಸಮಾನವಾಗಿ ಇರುವುದಿಲ್ಲ ಎಂದು ಅರ್ಥೈಸಬಹುದು. ಇದಕ್ಕೆ ಮುಖ್ಯ ಕಾರಣವು ಮರಾಠಿ, ಕೊಂಕಣಿ, ಮಲಯಾಳಂ ಚಿತ್ರಗಳ ನಿರ್ಮಾಣಕ್ಕೆ ಅಲ್ಲಿನ ಸರ್ಕಾರ ಕಲ್ಪಿಸಿರುವಂತಹ ವಾತಾವರಣ ನಮ್ಮಲ್ಲಿ ಇಲ್ಲದಿರುವುದು.

ಹಾಗೆಂದು ಆ ರಾಜ್ಯಗಳಲ್ಲಿನ ಸಬ್ಸಿಡಿ ನೀತಿಗಳು ಅತ್ಯುತ್ತಮವಾಗಿವೆ, ಅವನ್ನು ನಾವು ಅನುಸರಿಸಬೇಕು ಎನ್ನುವುದು ಕರ್ನಾಟಕದಲ್ಲಿ ಇರುವ ನಿರ್ಮಾಣ, ವಿತರಣೆ ಮತ್ತು ಪ್ರದರ್ಶನ ವಾತಾವರಣದ ದೃಷ್ಟಿಯಿಂದ ತಪ್ಪಾಗುತ್ತದೆ. ಆ ರಾಜ್ಯಗಳ ಚಿತ್ರಗಳಿಗೆ ಇರುವ ಮಾರುಕಟ್ಟೆ ವ್ಯಾಪ್ತಿ ನಮ್ಮ ಚಿತ್ರಗಳಿಗೆ ಇಲ್ಲ. ಹಾಗಾಗಿ ನಾವು ಎಲ್ಲ ಹಂತದಲ್ಲೂ ಹೊಂದಾಣಿಕೆ ಮಾಡಿಕೊಂಡೇ ಚಿತ್ರಗಳನ್ನು ತಯಾರಿಸಬೇಕಾಗುತ್ತದೆ. ಒಂದು ಚಿತ್ರ ಸಂಪೂರ್ಣವಾಗಿ ತನ್ನ ಸ್ವಂತ ಬಂಡವಾಳ ಹಾಗೂ ಸೃಜನಶೀಲ ಬಲದಿಂದಲೇ ತಯಾರಾಗಿ ಉತ್ತಮ ಎನಿಸಿಕೊಳ್ಳಬೇಕಿದೆ ಇಲ್ಲಿ.

ಕನ್ನಡ ಚಿತ್ರರಂಗದಲ್ಲಿ ನಿಜಕ್ಕೂ ಸೃಜನಶೀಲ ಪ್ರಯತ್ನಗಳು ನಡೆದು, ಉತ್ತಮ ಗುಣಮಟ್ಟದ ಹತ್ತಾರು ಚಿತ್ರಗಳು ಪ್ರತಿವರ್ಷವೂ ಬರಬೇಕು ಎನ್ನುವುದೇ ಸರ್ಕಾರದ ಪ್ರೋತ್ಸಾಹದ ಉದ್ದೇಶವಾಗಿದ್ದರೆ, ನಮ್ಮಲ್ಲಿ ಅಂತಹ ವಾತಾವರಣ ನಿರ್ಮಾಣವಾಗಬೇಕು. ಅದಕ್ಕೆ ಇಂದಿನ ಸಹಾಯಧನದ ನೀತಿ ಸಂಪೂರ್ಣ ಬದಲಾಗಬೇಕು.

ಮೊದಲನೆಯದಾಗಿ, ಎಷ್ಟಾದರೂ ಜೀವ ತೇದುಕೊಂಡು, ಹೇಗಾದರೂ ಚಲನಚಿತ್ರಗಳನ್ನು ತಯಾರಿಸಿಕೊಂಡು ಬನ್ನಿ, ಅವನ್ನು ಒಂದು ಸಮಿತಿ ಅಳೆದು ಸಬ್ಸಿಡಿ ಕೊಡಬೇಕೋ, ಬೇಡವೋ ಎನ್ನುವುದನ್ನು ತೀರ್ಮಾನಿಸುತ್ತದೆ ಎನ್ನುವ ವ್ಯವಸ್ಥೆ ಕೊನೆಯಾಗಬೇಕು. ಇಂದು ಅನೇಕ ಪ್ರತಿಷ್ಠಿತ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಕಾಣುವಂತಹ ಪುರೋಗಾಮಿ ಪ್ರೋತ್ಸಾಹಕ ವ್ಯವಸ್ಥೆ ಇಲ್ಲಿಯೂ ಬರಬೇಕು. ಚಲನಚಿತ್ರವೊಂದರ ತಯಾರಿಕೆಯ ಹಂತದಲ್ಲಿಯೇ ಇದು ಒಂದು ಉತ್ತಮ ಪ್ರಯತ್ನ ಆಗಲಿದೆ ಎನ್ನುವುದನ್ನು ಸರ್ಕಾರ ಗುರುತಿಸಬೇಕು. ಅದಕ್ಕೆ ಆ ಹಂತದಿಂದಲೇ ಪ್ರೋತ್ಸಾಹ ಸಿಗುವಂತಾದರೆ, ಆ ಚಿತ್ರವು ಹಣದ ಅಭಾವವಿದೆ ಎನ್ನುವ ಒಂದೇ ಕಾರಣದಿಂದ ಸೊರಗುವುದಿಲ್ಲ.

ಅದಕ್ಕಾಗಿ, ಪ್ರತಿವರ್ಷ ಸರ್ಕಾರವು ಟ್ರೀಟ್‍ಮೆಂಟ್ (ವಿಸ್ತೃತ ಪರಿಕಲ್ಪನೆ) ಹಂತದಲ್ಲಿರುವ ಚಿತ್ರಕಥೆಗಳನ್ನು ಸ್ಪರ್ಧೆಗೆ ಆಹ್ವಾನಿಸಲಿ. ಅವುಗಳಲ್ಲಿ ಸುಮಾರು ಅರ್ಧದಷ್ಟನ್ನು ಆಯ್ಕೆ ಮಾಡಲಿ. ಅವುಗಳಿಗೆ ಸ್ಕ್ರಿಪ್ಟ್ ಡೆವಲಪ್‍ಮೆಂಟ್ ಸಪೋರ್ಟ್‌ ಫಂಡ್ ಎಂದು ತಲಾ ಐದು ಲಕ್ಷ ರೂಪಾಯಿಗಳನ್ನು ಕೊಟ್ಟು ಪ್ರೋತ್ಸಾಹಿಸಲಿ. ಮೂರರಿಂದ ನಾಲ್ಕು ತಿಂಗಳು ಸಮಯ ಕೊಟ್ಟು, ಆ ಪೂರ್ಣಗೊಳಿಸಿದ ಚಿತ್ರಕಥೆಗಳನ್ನು ಮತ್ತೆ ತುಲನೆ ಮಾಡಿ, ಅವುಗಳಲ್ಲಿ ಮತ್ತೆ ಅರ್ಧದಷ್ಟು ಸ್ಕ್ರೀನ್‍ಪ್ಲೇಗಳನ್ನು ಆಯ್ಕೆ ಮಾಡಬೇಕು. ಅವುಗಳ ನಿರ್ಮಾಣಕ್ಕೆ ವಿವಿಧ ತಯಾರಿಕಾ ಹಂತಗಳಲ್ಲಿ ತಲಾ ₹40 ಲಕ್ಷದಿಂದ ₹50 ಲಕ್ಷದಷ್ಟನ್ನು ಪ್ರೋತ್ಸಾಹಕವಾಗಿ ಒದಗಿಸಬೇಕು.

ಎರಡನೆಯದಾಗಿ, ಮೇಲಿನ ಸ್ಪರ್ಧೆಯಲ್ಲಿ ಭಾಗವಹಿಸದ, ಆದರೆ ತಯಾರಿಕಾ ಹಂತದಲ್ಲಿರುವ ಕೆಲವು ಉತ್ತಮ ಪ್ರಯತ್ನಗಳು ಪೂರ್ಣಗೊಳಿಸುವ ಹಂತದಲ್ಲಿ ಹಣದ ಕೊರತೆ ಎದುರಿಸಬಹುದು. ಅಂಥ ಚಿತ್ರಗಳ ಕರಡು ಪ್ರತಿಗಳನ್ನು ಸ್ಪರ್ಧೆಗೆ ಆಹ್ವಾನಿಸಿ, ಉತ್ತಮವಾದ ಕೆಲವನ್ನು ಆಯ್ದು ಕನಿಷ್ಠ ₹20 ಲಕ್ಷದಷ್ಟು ಫಿನಿಶಿಂಗ್‌ ಸಪೋರ್ಟ್ ಒದಗಿಸಬೇಕು. ಈ ಎಲ್ಲ ಪ್ರಕ್ರಿಯೆ ದೇಶದ ವಿವಿಧೆಡೆಯ ಒಂದಿಬ್ಬರು ತಜ್ಞರನ್ನೂ ಒಳಗೊಂಡ ಸಮಿತಿಯ ಮೂಲಕ ಪಾರದರ್ಶಕವಾಗಿ ನಡೆಯಬೇಕು.

ಇವೆಲ್ಲವೂ ಸಬ್ಸಿಡಿಯ ವಿವಿಧ ರೂಪಗಳಷ್ಟೇ. ಹೀಗೆ ವಿತರಿಸಿದರೂ ಅದರ ಮೊತ್ತವು ಸರ್ಕಾರ ಇಂದು ಸಬ್ಸಿಡಿಗಾಗಿ ತೆಗೆದಿರಿಸುವ ವಾರ್ಷಿಕ ಬಜೆಟ್‍ಗಿಂತ ತೀರ ಹೆಚ್ಚಾಗುವುದಿಲ್ಲ. ಬದಲಿಗೆ, ಸಬ್ಸಿಡಿ ಸದುಪಯೋಗವಾಗುತ್ತದೆ. ವರ್ಷಕ್ಕೆ ಉತ್ತಮ ಗುಣಮಟ್ಟದ ಕನಿಷ್ಠ 20 ಚಿತ್ರಗಳಾದರೂ ತಯಾರಾಗುತ್ತವೆ. ಅವುಗಳಲ್ಲಿ ಕೆಲವು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಪಡೆಯಬಹುದು. ಸ್ಥಳೀಯ ಸೃಜನಶೀಲ ಪ್ರತಿಭೆಗಳು ಜಾಗತಿಕವಾಗಿ ಅರಳುತ್ತವೆ. ಇನ್ನು ಕೆಲವು ಚಿತ್ರಗಳು ಇದ್ಯಾವುದರ ಗೊಡವೆಯೇ ಇಲ್ಲದೆಯೂ ತಯಾರಾಗಬಹುದು. ಅಂತಹ ಗರಿಷ್ಠ 30 ಚಿತ್ರಗಳನ್ನು ಆಯ್ಕೆ ಸಮಿತಿಯ ಮೂಲಕ ಆಯ್ದು ಅವಕ್ಕೂ ಸೂಕ್ತ ಸಹಾಯಧನ ನೀಡಬಹುದು.

ಮೂರನೆಯದಾಗಿ, ಚಲನಚಿತ್ರ ಅಕಾಡೆಮಿ ಅಸ್ತಿತ್ವದಲ್ಲಿ ಇಲ್ಲದಿದ್ದಾಗ ಪ್ರಶಸ್ತಿ, ಸಹಾಯಧನ ನೀಡುವ ಕೆಲಸಗಳನ್ನು ವಾರ್ತಾ ಇಲಾಖೆ ನಿರ್ವಹಿಸುತ್ತಿತ್ತು. ಇಂದು ಅಕಾಡೆಮಿ ಈ ಕಾರ್ಯಕ್ರಮಗಳನ್ನು ನಡೆಸಬೇಕಿದೆ. ಚಲನಚಿತ್ರ ಮಾಧ್ಯಮದಲ್ಲಿ ಸೃಜನಶೀಲತೆಯನ್ನು, ಪ್ರಯೋಗಗಳನ್ನು ಉತ್ತೇಜಿಸುವುದೇ ಅಕಾಡೆಮಿಯೊಂದರ ಕೆಲಸ. ಆದರೆ ಅಕಾಡೆಮಿ ತನ್ನ ಸದಸ್ಯ ಮಂಡಳಿಯಲ್ಲಿ ವಾರ್ತಾ ಇಲಾಖೆ, ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಹಾಗೂ ನಿರ್ದೇಶಕರ ಸಂಘಗಳಿಗೆ ಪ್ರಾತಿನಿಧ್ಯ ನೀಡಬೇಕೆಂಬ ನಿಯಮವಿದೆ. ಈ ನಿಯಮವನ್ನು ಅವಶ್ಯ ಬದಲಿಸಬೇಕಿದೆ. ಚಲನಚಿತ್ರದ ಕಲಾತ್ಮಕ, ತಾಂತ್ರಿಕ ಪರಿಣತರು ಮತ್ತು ಶ್ರೇಷ್ಠ ಸಿನಿಮೋಪಾಸಕರನ್ನಷ್ಟೇ ಅಕಾಡೆಮಿಯ ಅಧ್ಯಕ್ಷರು, ಸದಸ್ಯರನ್ನಾಗಿ ನೇಮಿಸಿ, ಅಕಾಡೆಮಿಯನ್ನು ನಿಜಕ್ಕೂ ಅಕಡೆಮಿಕ್ ಆಗಿ ಮಾಡಬೇಕಿದೆ. ವಾರ್ತಾ ಇಲಾಖೆಯ ಮೇಲ್ವಿಚಾರಣೆಯಲ್ಲಿ ಅಕಾಡೆಮಿ ಕಾರ್ಯನಿರ್ವಹಿಸುವುದು ಅನಿವಾರ್ಯ ಎಂದು ಸರ್ಕಾರಕ್ಕೆ ಅನಿಸಿದರೆ, ಅಂತಹ ವ್ಯವಸ್ಥೆಯೊಳಗೇ ಅಕಾಡೆಮಿಗೆ ಪೂರ್ಣ ಸ್ವಾಯತ್ತತೆ ಲಭಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.