ಭಾರತದ ಸ್ವಾತಂತ್ರ್ಯ ಸಮರದಿಂದ ಮಹಾತ್ಮ ಗಾಂಧೀಜಿ, ನೆಹರೂ ಅವರನ್ನು, ಸಂವಿಧಾನದ ವಿಷಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಮರೆಮಾಚಿಸುವುದೆಂದರೆ ಅದು ಇತಿಹಾಸಕ್ಕೆ ಬಗೆಯುವ ದ್ರೋಹ. ನಮ್ಮಿ ತಾಯ್ನೆಲದ ಭವಿಷ್ಯಕ್ಕೆ ಬುನಾದಿ ಹಾಕಿದವರು ಈ ಮೂವರು. ಇವರನ್ನು ಹೊರಗಿಡುವುದೆಂದರೆ ಭಾರತದ ಪಾರ್ಶ್ವವನ್ನೇ ಗರಗಸಕ್ಕೆ ಒಡ್ಡಿದಂತೆ..
ಸ್ವಾತಂತ್ರ್ಯದ ‘ಅಮೃತ’ ಸಿಂಚನ ದೇಶದೊಡಲ ತುಂಬಾ ರಾಷ್ಟ್ರಪ್ರೇಮದ ಘಮವನ್ನು ಹೂಗಂಪಿನಂತೆ ಚೆಲ್ಲಿದೆ. 75 ವರ್ಷಗಳ ಹಿಂದೆ ಪರಂಗಿಯವರನ್ನು ಓಡಿಸಿ, ಭಾರತೀಯರ ಭವಿತವ್ಯ ಉಜ್ವಲವಾಗಿರಬೇಕೆಂಬ ಕನಸಿಗೆ ತಮ್ಮ ಬಾಲ್ಯ–ತುಂಬು ಯೌವ್ವನವನ್ನೇ ಬಲಿಗೊಟ್ಟು ಬಾಳನ್ನೇ ಧಾರೆ ಎರೆದವರು ಲಕ್ಷಾಂತರ ವೀರರು. ಹುತಾತ್ಮರಾದವರು ಅಗಣಿತ... ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಲಿಗಳ ತ್ಯಾಗ–ಬಲಿದಾನ ದೇಶದ ಇಂಚಿಂಚೂ ಮಣ್ಣನ್ನು ತೋಯಿಸಿ, ಹಿರೀಕರು ಹೊರಿಸಿದ ‘ಋಣ ಭಾರ’ ಭಾರತಾಂಬೆಯ ಮಡಿಲೊಳಗೆ ಜತನದಿಂದ ಇದ್ದು, ನಮ್ಮೆಲ್ಲರನ್ನೂ ಪೊರೆಯುತ್ತಿರುವ ಶಕ್ತಿಯೂ ಆಗಿದೆ.
ಅಮೃತೋತ್ಸವ ಆಚರಣೆ ಹೊತ್ತಿನಲ್ಲಿ ಸ್ವಾತಂತ್ರ್ಯಕ್ಕೆ ಹೋರಾಡಿದವರ ಅನುಪಮ ಕೊಡುಗೆಯನ್ನು ನೆನೆಯದಿದ್ದರೆ ಭಾರತಮಾತೆ ಕ್ಷಮಿಸಲಾರಳು. ಅಮೃತೋತ್ಸವದ ದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ನೀಡಿದ ಜಾಹೀರಾತಿನಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಭಾವಚಿತ್ರವನ್ನೇ ಕೈಬಿಡಲಾಗಿತ್ತು. ಸ್ವಾತಂತ್ರ್ಯದ ಸ್ಮೃತಿಪಟಲದಿಂದ ನೆಹರೂ ಅವರನ್ನು ಅಳಿಸಿಹಾಕುವ ಹೀನಮನಃಸ್ಥಿತಿ, ವಿಸ್ಮೃತಿಗೆ ಜನರನ್ನು ಕೊಂಡೊಯ್ಯುವ ವಿಕೃತಿ. ನಮ್ಮ ಮುಖಕ್ಕೆ ನಾವೇ ಕೆಸರು ಬಳಿದುಕೊಳ್ಳುವ ದುಃಸ್ಥಿತಿ.
ಭಾರತದ ಸ್ವಾತಂತ್ರ್ಯ ಸಮರದಿಂದ ಮಹಾತ್ಮ ಗಾಂಧೀಜಿ, ನೆಹರೂ ಅವರನ್ನು, ಸಂವಿಧಾನದ ವಿಷಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಮರೆಮಾಚಿಸುವುದೆಂದರೆ ಅದು ಇತಿಹಾಸಕ್ಕೆ ಬಗೆಯುವ ದ್ರೋಹ. ನಮ್ಮಿ ತಾಯ್ನೆಲದ ಭವಿಷ್ಯಕ್ಕೆ ಬುನಾದಿ ಹಾಕಿದವರು ಈ ಮೂವರು. ಇವರನ್ನು ಹೊರಗಿಡುವುದೆಂದರೆ ಭಾರತದ ಪಾರ್ಶ್ವವನ್ನೇ ಗರಗಸಕ್ಕೆ ಒಡ್ಡಿದಂತೆ.. ಭಾರತ ವಿಭಜನೆಗೆ ಕಾರಣರಾರು? ನೈಜ ಸ್ವಾತಂತ್ರ್ಯ ಹೋರಾಟಗಾರರು ಯಾರು ಎಂಬ ಚರ್ಚೆ ಅಮೃತೋತ್ಸವದ ಹೊತ್ತಿನೊಳಗೆ ಬಿರುಸುಗೊಂಡಿದೆ. ಭಾರತ ವಿಭಜನೆ ಎಂಬುದು ದುರಂತ ಅಂತ್ಯ. ಹಾಗಂತ, ಆ ಗಾಯವನ್ನು ಮತ್ತೆ ಮತ್ತೆ ಕೆರೆದು ವ್ರಣವಾಗಿಸುವುದು ರಾಜಕೀಯ. ಅದಕ್ಕೆ ಮುಲಾಮು ಸಿಕ್ಕದು.
ಅಖಂಡ ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದವರು ವಿಭಜನೆಯನ್ನು ಸಂಭ್ರಮಿಸಿದವರಲ್ಲ. ಅದಕ್ಕೆ ತಾತ್ವಿಕ ಒಪ್ಪಿಗೆಯನ್ನೂ ಕೊಟ್ಟವರಲ್ಲ. ಹಾಗಿದ್ದರೂ ಅವರನ್ನು ದೂಷಿಸುವುದು ಅಪರಾಧ. ಇದಕ್ಕೆ ದೃಷ್ಟಾಂತಗಳನ್ನು ಹುಡುಕಬೇಕಾದರೆ, 1947ರ ಆಗಸ್ಟ್ 14ರ ರಾತ್ರಿ ಮತ್ತು 15ರ ಇಡೀ ದಿನ ನಡೆದ ಭಾರತ ಸಂವಿಧಾನ ರಚನಾಸಭೆಯ ನಡಾವಳಿಗಳ ಪುಟಗಳನ್ನು ಹಾದು ಬರಬೇಕು. ಆಗ ಮಾತ್ರ, ಸ್ವಾತಂತ್ರ್ಯಕ್ಕೆ ಹೋರಾಡಿದವರು ‘ಕೊಂಡ ಹಾಯ್ದು’ ತಾವೇ ಸುಟ್ಟುಕೊಂಡು ಪರಿತಪಿಸಿದ ನೋವುಗಳು ಕಣ್ಮುಂದೆ ಬರುತ್ತವೆ... ಬನ್ನಿ ಆ ಅಗ್ನಿನಡಿಗೆಯಲ್ಲಿ ಅಗ್ನಿದಿವ್ಯವನ್ನು ಮುಟ್ಟಿ, ಸತ್ಯವನ್ನೇ ಸಾರಿದವರ ದಾರಿಯನ್ನು ಅವಲೋಕಿಸೋಣ...
ಬ್ರಿಟಿಷರು ಅಧಿಕಾರವನ್ನು ಹಸ್ತಾಂತರಿಸಿದ ಹೊತ್ತಿನ ನಡಾವಳಿಗಳು ಇತಿಹಾಸದಲ್ಲಿ ದಾಖಲಾಗಿವೆ.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಾರತವು ಎರಡು ರಾಷ್ಟ್ರಗಳಾಗಿ ರೂಪುಗೊಳ್ಳಬೇಕೆಂಬುದು ನಿರ್ಧರಿಸಿದ್ದು ಬ್ರಿಟಿಷರು. ಬ್ರಿಟನ್ ಸಂಸತ್‌ನಲ್ಲಿ 1947ರ ಜುಲೈ 18ರಂದು ಅಂಗೀಕಾರಕೊಂಡ ‘ಇಂಡಿಯನ್ ಇಂಡಿಪೆಂಡೆನ್ಸ್ ಆ್ಯಕ್ಟ್– 1947’ರಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿತ್ತು.
ಭಾರತಕ್ಕೆ ಅಧಿಕಾರವನ್ನು ಹಸ್ತಾಂತರಿಸಿದ ಸಂದರ್ಭದಲ್ಲಿ ಅದನ್ನು ವಹಿಸಿಕೊಂಡ ಭಾರತ ಸಂವಿಧಾನ ರಚನಾ ಸಭೆಯಲ್ಲಿ 299 ಸದಸ್ಯರಿದ್ದರು. 12 ಪ್ರಾಂತ್ಯಗಳಿಂದ ಆಯ್ಕೆಯಾಗಿದ್ದ 229 ಸದಸ್ಯರು, ರಾಜಸಂಸ್ಥಾನಗಳಿಂದ ನಾಮನಿರ್ದೇಶನಗೊಂಡಿದ್ದ 70 ಸದಸ್ಯರಿದ್ದರು. ಇವರ ಸಮ್ಮುಖದಲ್ಲಿ ಸಭೆ ನಡೆಯಿತು.
ಮೊದಲ ಚರಣ
lಗುರುವಾರ, 14 ನೇ ಆಗಸ್ಟ್, 1947: ಭಾರತ ಸಂವಿಧಾನ ರಚನಾ ಸಭೆಯ ಐದನೆಯ ಅಧಿವೇಶನವು ನವದೆಹಲಿಯ ಸಂವಿಧಾನ ಸಭಾಂಗಣದಲ್ಲಿ (ಈಗಿನ ಸಂಸತ್ ಭವನದ ಸೆಂಟ್ರಲ್ ಹಾಲ್) ಸಭಾಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್ ಅಧ್ಯಕ್ಷತೆಯಲ್ಲಿ ರಾತ್ರಿ ಹನ್ನೊಂದು ಗಂಟೆಗೆ ಪ್ರಾರಂಭವಾಯಿತು.
ವಂದೇ ಮಾತರಂ ಗೀತೆಯ ಗಾಯನ
lಸಭಾಧ್ಯಕ್ಷರ ಭಾಷಣ: ‘ಹಲವಾರು ವರ್ಷಗಳ ಹೋರಾಟದ ತರುವಾಯ ಈ ದೇಶದ ಆಡಳಿತ ಸೂತ್ರವನ್ನು ನಾವು ಕೈಗೆತ್ತಿಕೊಳ್ಳುತ್ತಿರುವ ಈ ಐತಿಹಾಸಿಕ ಪವಿತ್ರ ಸಮಯದಲ್ಲಿ, ನಗುನಗುತ್ತಲೇ ನೇಣುಗಂಬದತ್ತ ಹೆಜ್ಜೆಹಾಕಿದ ಅಥವಾ ಬಂದೂಕಿನ ಗುಂಡಿಗೆ ಎದೆಯೊಡ್ಡಿದ, ಅಂಡಮಾನ್ ಕಾರಾಗೃಹಗಳಲ್ಲಿ ಜೀವಚ್ಛವಗಳಾಗಿ ಬದುಕು ಸವೆಸಿದ ಅಥವಾ ಭಾರತದ ಸೆರೆಮನೆಗಳಲ್ಲಿ ದೀರ್ಘಾವಧಿ ಸೆರೆಯನ್ನುನುಭವಿಸಿದ, ವಿದೇಶಗಳಲ್ಲಿ
ಸ್ವಇಚ್ಛೆಯಿಂದ ಹಿಂಸೆಯ ಬದುಕನ್ನಪ್ಪಿಕೊಂಡ, ತಮ್ಮ ಸಿರಿಸಂಪತ್ತನಷ್ಟೇ ಅಲ್ಲ, ಪ್ರೀತಿಪಾತ್ರರನ್ನೂ ತೊರೆದು ಇಂದು ನಾವು ನೋಡುತ್ತಿರುವ ಈ ಸ್ವಾತಂತ್ರ್ಯದ ಉನ್ನತ ಧ್ಯೇಯದ ಸಾಧನೆಗಾಗಿ ತಮ್ಮನೇ ತಾವು ಅರ್ಪಿಸಿಕೊಂಡ, ನಮಗೆ ಗೊತ್ತಿರುವ, ಗೊತ್ತಿರದ ಎಲ್ಲ ಸ್ತ್ರೀ, ಪುರುಷರ ಸೇವೆ ಹಾಗೂ ಬಲಿದಾನವನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸೋಣ.
ಕಳೆದ ಮೂವತ್ತು ವರ್ಷಗಳಿಗಿಂತ ಹೆಚ್ಚು ಕಾಲ ನಮ್ಮ ಗುರು ಹಾಗೂ ದಾರಿದೀಪವಾಗಿರುವ ಮಹಾತ್ಮ ಗಾಂಧಿಯವರಿಗೆ ನಮ್ಮ ಪ್ರೀತ್ಯಾದರಗಳನ್ನು ಸಲ್ಲಿಸೋಣ. ನಿರಾಶೆ–ಹತಾಶೆಯ ಕೂಪದಿಂದ ನಮ್ಮನ್ನು ಮೇಲೆತ್ತಿ, ಸ್ವಾತಂತ್ರ್ಯವೆಂಬ ನಮ್ಮ ಜನ್ಮಸಿದ್ಧ ಹಕ್ಕನ್ನು ಕೇಳಲು ಚೈತನ್ಯ ತುಂಬಿದವರು ಗಾಂಧೀಜಿ. ಸತ್ಯ ಹಾಗೂ ಅಹಿಂಸೆಯ ಅಜಿಂಕ್ಯ ಹಾಗೂ ಅಪ್ರತಿಹತ ಆಯುಧವನ್ನು ನಮ್ಮ ಕೈಗಿತ್ತು ಅದರ ಬಲದಿಂದ ನಿರಾಯುಧರಾಗಿಯೇ ನಮಗಾಗಿ ಅನರ್ಘ್ಯ ಸ್ವರಾಜ್ಯವನ್ನು ಗೆದ್ದುಕೊಟ್ಟವರು ಅವರು.
ಒಂದು ರಾಷ್ಟ್ರವೆಂದು ಭಗವಂತ ಹಾಗೂ ಪ್ರಕೃತಿ ನಿಯಮಿಸಿದ್ದ ದೇಶ ಇಂದು ಇಬ್ಭಾಗವಾಗಿದೆ. ಪ್ರೀತಿಪಾತ್ರರು ಹಾಗೂ ಸ್ವಲ್ಪಕಾಲದ ಒಡನಾಟವಿದ್ದ ಅಪರಿಚಿತರಿಂದ ದೂರವಾಗುವುದು, ನಿಜವಾಗಿಯೂ ನೋವಿನ ಸಂಗತಿಯೇ. ಇಂಥ ಅಗಲುವಿಕೆಯಿಂದಾಗುವ ದುಃಖವನ್ನು ಒಪ್ಪಿಕೊಳ್ಳದಿದ್ದರೆ ನನ್ನನ್ನೇ ನಾನು ವಂಚನೆ ಮಾಡಿಕೊಂಡಂತೆ. ಇಂದಿನವರೆಗೆ ನಮ್ಮ ದೇಶದ ಭಾಗವಾಗಿದ್ದ ಪಾಕಿಸ್ತಾನ ಹಾಗೂ ನಮ್ಮ ಒಡನಾಡಿಗಳಾಗಿದ್ದ ಪಾಕಿಸ್ತಾನದ ಜನತೆಯ ಸರ್ಕಾರವನ್ನು, ಅದರ ಪರಿಶ್ರಮದ ಯಶಸ್ಸಿಗಾಗಿ ಅಭಿನಂದಿಸುತ್ತೇನೆ. . .
lಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ, ಎರಡು ನಿಮಿಷ ಮೌನ
– ಸದಸ್ಯರಿಂದ ಪ್ರತಿಜ್ಞೆಯ ಪ್ರಸ್ತಾವ –
ಸಭಾಧ್ಯಕ್ಷರು: ಪಂಡಿತ್ ಜವಾಹರಲಾಲ್ ನೆಹರೂ ಈಗ ಪ್ರಸ್ತಾವ ಮಂಡಿಸುತ್ತಾರೆ
ನೆಹರೂ: ನಾವು ಸ್ವಾತಂತ್ರ್ಯವನ್ನು ಬಹುಮಟ್ಟಿಗೆ ಪಡೆದಿದ್ದೇವೆ. ಕೆಲವೇ ಕ್ಷಣಗಳ ತರುವಾಯ ಈ ಸಭೆ ಸಂಪೂರ್ಣ ಮುಕ್ತ ಹಾಗೂ ಸ್ವತಂತ್ರ ನಿಕಾಯವೆಂಬ ಸ್ಥಾನಮಾನವನ್ನು ಧಾರಣ ಮಾಡುತ್ತದೆ ಹಾಗೂ ಅದು ಸ್ವತಂತ್ರ ದೇಶವನ್ನು ಪ್ರತಿನಿಧಿಸುತ್ತದೆ.
ನಾವು ಒಂದು ಹಂತ ಪೂರೈಸಿದ್ದೇವೆ. ಆದ್ದರಿಂದಲೇ ಇಂದು ಸಡಗರದ ಆಚರಣೆ ಆರಂಭವಾಗಿದೆ. ಆದರೆ ಈ ಸಡಗರ, ದೇಶದ ತುಂಬ ಹರಡಿಲ್ಲವೆಂಬುದು ನಮಗೆ ಗೊತ್ತು. ನಮ್ಮ ಮನಸ್ಸು ದುಃಖಪೂರಿತವಾಗಿದೆ. ದೆಹಲಿ ಸಮೀಪದಲ್ಲೇ ಇರುವ ನಗರಗಳು ಹೊತ್ತಿ ಉರಿಯುತ್ತಿವೆ. ಅದರ ಝಳ ಇಲ್ಲಿ ನಮಗೂ ತಾಕುತ್ತಿದೆ. ಹೀಗಾಗಿ ನಮ್ಮ ಸಂತೋಷ ಅಪೂರ್ಣವೇ...
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ಅದು ಸಿಕ್ಕ ರೀತಿಯ ಜನರಿಗೆ ಸಂತೋಷ ತಂದಿಲ್ಲ. ಅವರ ಮುಖದಲ್ಲಿ ನಗು ಉಕ್ಕಿಸಿಲ್ಲ. ಕೆಲವರು ನಮ್ಮ ಮೇಲೆ ಹೊರಿಸಿದ ಪ್ರತ್ಯೇಕತಾ ಮನೋಭಾವಕ್ಕೆ ನಾವು ಬಲಿಯಾದೆವಲ್ಲವೇ? ಈಗ ದೇಶ ಇಬ್ಭಾಗವಾಗಿದೆ. ಮಾತಿನ ಚಕಮಕಿಯಲ್ಲಿ ಮುಳುಗದಿರುವುದು ನಮ್ಮ ಕರ್ತವ್ಯ. ಅದರಿಂದ ಏನೂ ಪ್ರಯೋಜನವಿಲ್ಲ.
ಅಂತೂ ಭಾರತ ಈಗ ಸ್ವತಂತ್ರ ದೇಶ. ಅದು ತುಂಬ ಮುದ ನೀಡುವಂತದು. ಬಹಳ ವರ್ಷಗಳ ಹಿಂದೆ ನಾವು ಅದೃಷ್ಟಕ್ಕೆ ಸಮಯ ನಿಗದಿಮಾಡಿದ್ದೆವು. ನಮ್ಮ ಪ್ರತಿಜ್ಞೆಯನ್ನು ತೀರಿಸುವ ಕಾಲ ಈಗ ಬಂದಿದೆ–ಈ ಮಧ್ಯರಾತ್ರಿಯ ಸಮಯದಲ್ಲಿ ಜಗತ್ತೆಲ್ಲ ಮಲಗಿರುವಾಗ ಭಾರತ ಜೀವತಳೆದು ಸ್ವಾತಂತ್ರ್ಯ ಪಡೆದು ಉಸಿರಾಡುತ್ತಿದೆ. ಇದು, ನಾವು ಹಳೆಯದರಿಂದ ಹೊಸದರತ್ತ ಹೆಜ್ಜೆ ಹಾಕುವ, ಹಳೆಯ ಯುಗ ಅಳಿದು, ದೀರ್ಘಕಾಲದಿಂದ ಹತ್ತಿಕ್ಕಲ್ಪಟ್ಟ ನಾಡಿನ ಆತ್ಮದಲ್ಲಿ ಮಾತು ಮೂಡುವ ಗಳಿಗೆ. ಈ ಪವಿತ್ರ ಗಳಿಗೆಯಲ್ಲಿ ನಾವು ಈ ದೇಶದ ಹಾಗೂ ಇಲ್ಲಿನ ಜನತೆಯ ಸೇವೆಗೆ ಹಾಗೂ ಇಡೀ ಮನುಕುಲಕ್ಕಾಗಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳುವ ಪ್ರತಿಜ್ಞೆ ಕೈಗೊಳ್ಳಬೇಕು. ಸ್ವಾತಂತ್ರ್ಯ ಹಾಗೂ ಅಧಿಕಾರದೊಂದಿಗೆ ಬರುವಂತದ್ದು ಜವಾಬ್ದಾರಿ. ಭಾರತದ ಸಾರ್ವಭೌಮ ಪ್ರಜೆಗಳನ್ನು ಪ್ರತಿನಿಧಿಸುವ ಸಾರ್ವಭೌಮ ನಿಕಾಯವಾದ ಈ ಸಭೆಯ ಮೇಲೆ ಆ ಜವಾಬ್ದಾರಿ ಇದೆ.ಭಾರತದ ಕಾಲಾತೀತ ಚೈತನ್ಯಕ್ಕೆ ಯೋಗ್ಯವೆನಿಸುವ ರೀತಿಯಲ್ಲಿ ನಡೆದುಕೊಳ್ಳಬೇಕಿದೆ. ಹೀಗಾಗಿ ಈ ಪ್ರತಿಜ್ಞೆ ಕೈಗೊಳ್ಳೋಣ.
ಸಭಾಧ್ಯಕ್ಷರು: ಗಡಿಯಾರದಲ್ಲಿ ರಾತ್ರಿ 12 ಗಂಟೆಗೆ ಕೇವಲ ಅರ್ಧ ನಿಮಿಷ ಬಾಕಿ ಇದೆ.
12 ಗಂಟೆಯಾದೊಡನೆ ಅಧ್ಯಕ್ಷರು ಮತ್ತು ಸದಸ್ಯರು ಈ ಕೆಳಗಿನಂತೆ ಪ್ರತಿಜ್ಞೆ ಕೈಗೊಂಡರು.
‘ಭಾರತದ ಜನತೆ ಕಷ್ಟ ಹಾಗೂ ತ್ಯಾಗದ ಮೂಲಕ ಸ್ವಾತಂತ್ರ್ಯ ಗಳಿಸಿದ್ದು ಈಗ ಸಂವಿಧಾನ ರಚನಾ ಸಭೆಯ ಸದಸ್ಯನಾದ.... ಎಂಬ ಹೆಸರಿನವನಾದ ನಾನು ಈ ಪುರಾತನ ನಾಡು ಜಗತ್ತಿನಲ್ಲಿ ಹೆಚ್ಚಿನ ಸ್ಥಾನಗಳಿಸಲು, ಜಗತ್ತಿನ ಶಾಂತಿ ಸಂವರ್ಧನೆಗೆ ಹಾಗೂ ಮನುಕುಲದ ಒಳಿತಿಗೆ ಮನಃಪೂರ್ವಕವಾಗಿ ಸಾಧ್ಯವಾಗುವಂತೆ ಭಾರತ ಮತ್ತು ಭಾರತೀಯರ ಸೇವೆಗಾಗಿ ನನ್ನನ್ನು ಸಮರ್ಪಿಸಿಕೊಳ್ಳುತ್ತೇನೆ’
–ಸಂವಿಧಾನ ರಚನಾ ಸಭೆಗೆ ಅಧಿಕಾರ ಗ್ರಹಣವಾದ ಬಗ್ಗೆ ಹಾಗೂ ಲಾರ್ಡ್ ಮೌಂಟ್ ಬ್ಯಾಟನ್ ಅವರನ್ನು ಭಾರತದ ಗವರ್ನರ್ ಜನರಲ್ ಆಗಿ ನೇಮಕ ಮಾಡಲು ಸಭೆ ಒಪ್ಪಿತು–
ಸಭಾಧ್ಯಕ್ಷರು: ವೈಸರಾಯ್ ಅವರಿಗೆ ಈ ಮುಂದಿನಂತೆ ತಿಳಿಸಲು ಸೂಚಿಸಿವೆ.
1.→ಭಾರತದ ಸಂವಿಧಾನ ರಚನಾಸಭೆಯು ಭಾರತದ ಆಡಳಿತದ ಅಧಿಕಾರವನ್ನು ವಹಿಸಿಕೊಂಡಿದೆ.
2.→1947ರ ಆಗಸ್ಟ್ 15ರಿಂದ ಲಾರ್ಡ್ ಮೌಂಟ್ ಬ್ಯಾಟನ್ ಭಾರತದ ಗವರ್ನರ್ ಜನರಲ್ ಆಗಿರಬೇಕೆಂಬ ಶಿಫಾರಸನ್ನು ಸಂವಿಧಾನ ರಚನಾ ಸಭೆಯು ಒಪ್ಪಿಕೊಂಡಿದೆ.
ರಾಷ್ಟ್ರಧ್ವಜ ಸಮರ್ಪಣೆ
ಸಭಾಧ್ಯಕ್ಷರು: ಹಂಸಾ ಮೆಹ್ತಾ ಅವರು ರಾಷ್ಟ್ರಧ್ವಜ ಸಮರ್ಪಿಸುತ್ತಾರೆ.
ಹಂಸಾ ಮೆಹ್ತಾ: ಸರೋಜಿನಿ ನಾಯ್ಡು ಅವರ ಅನುಪಸ್ಥಿತಿಯಲ್ಲಿ ಭಾರತದ ಮಹಿಳೆಯರ ಪರವಾಗಿ ಈ ಧ್ವಜವನ್ನು ರಾಷ್ಟ್ರಕ್ಕೆ ಸಮರ್ಪಿಸುತ್ತೇನೆ. ಧ್ವಜವು ಮಹಾನ್ ಭಾರತದ ಸಂಕೇತವಾಗಿರಲಿ ಮತ್ತು ಯಾವಾಗಲೂ ಎತ್ತರದಲ್ಲಿ ಹಾರುತ್ತಿದ್ದು, ಇಂದು ಜಗತ್ತನ್ನು ಬೆದರಿಸುತ್ತಿರುವ ಅಂಧಕಾರದ ನಡುವಣ ಬೆಳಕಾಗಲಿ, ಅದರ ಘೋಷಣೆಯಲ್ಲಿ ಬಾಳುವವರಿಗೆ ಸಂತೋಷ ತರಲಿ..
(ಧ್ವಜ ಸಮರ್ಪಣಾ ಸಮಿತಿಯಲ್ಲಿ 74 ಜನ ಮಹಿಳೆಯರಿದ್ದರು)
ರಾಷ್ಟ್ರಗೀತೆಯ ಗಾಯನ
ಸುಚೇತಾ ಕೃಪಲಾನಿಯವರು ಸಾರೇಂ ಜಹಾಂ ಸೇ ಅಚ್ಚಾ ಹಾಗೂ ಜನಗಣಮನ ಅಧಿನಾಯಕ ಜಯಹೇ ಗೀತೆಯ ಮೊದಲ ನುಡಿಗಳನ್ನು ಹಾಡಿದರು.
ಸಭಾಧ್ಯಕ್ಷರು: ಆಗಸ್ಟ್ 15ರ ಬೆಳಿಗ್ಗೆ 10ಗಂಟೆಯವರೆಗೆ ಸದನವನ್ನು ಮುಂದೂಡಿದ್ದೇನೆ.
–ಎರಡನೇ ಚರಣ–
ಶುಕ್ರವಾರ, 15 ನೇ ಆಗಸ್ಟ್ 1947
ಸಂವಿಧಾನ ರಚನಾ ಸಭೆ, ನವದೆಹಲಿಯ ಸಂವಿಧಾನ ಸಭಾಂಗಣ ಬೆಳಿಗ್ಗೆ 10ಗಂಟೆಗೆ ಸಮಾವೇಶ ಗೊಂಡಿತು. ಸಭಾಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್ ಅವರು ಗವರ್ನರ್ ಜನರಲ್ ಮೌಂಟ್ ಬ್ಯಾಟನ್ ಮತ್ತು ಲೇಡಿ ಮೌಂಟ್ ಬ್ಯಾಟನ್ ಜತೆ ಸಭಾಂಗಣಕ್ಕೆ ಬಂದರು.
ವಿವಿಧ ದೇಶಗಳಿಂದ ಬಂದಿದ್ದ ಸಂದೇಶಗಳನ್ನು ಸಭಾಧ್ಯಕ್ಷರು ಓದಿದರು.
ಗವರ್ನರ್ ಜನರಲ್ ಭಾಷಣ
ಆರು ತಿಂಗಳ ಹಿಂದೆಷ್ಟೇ ಆಟ್ಲೆಯವರು ನನ್ನನ್ನು ಕೊನೆಯ ವೈಸರಾಯ್ ಆಗಿ ಮಾಡಿದ ನೇಮಕಾತಿಯನ್ನು ಒಪ್ಪಿಕೊಳ್ಳಲು ಆಮಂತ್ರಿಸಿದರು. ಬ್ರಿಟಿಷ್ ಚಕ್ರವರ್ತಿಯವರ ಸರ್ಕಾರ 1948ರ ಜೂನ್ ವೇಳೆಗೆ ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡಲು ನಿರ್ಧರಿಸಿರುವುದರಿಂದ ಇದು ಸುಲಭದ ಕೆಲಸವಲ್ಲ ಎಂದೂ ತಿಳಿಸಿದರು. ಈ ದಿನಾಂಕ ಬಹಳ ಬೇಗ ಎಂದು ಕೆಲವರಿಗೆ ಅನಿಸಿದ್ದುಂಟು. ಏಕೆಂದರೆ 15 ತಿಂಗಳ ಅಲ್ಪಾವಧಿಯಲ್ಲಿ ಇಷ್ಟು ದೊಡ್ಡ ಕಾರ್ಯಾಚರಣೆ ಹೇಗೆ ಪೂರ್ಣಗೊಳ್ಳುತ್ತದೆ ಎಂಬುದು ಅವರ ಭಾವನೆಯಾಗಿತ್ತು. ನಾನು ಇಂಗ್ಲೆಂಡಿನಿಂದ ಹೊರಟಾಗ ಭಾರತದಲ್ಲಿ ಕೋಮು ಆತಂಕ ಹಾಗೂ ಗಲಭೆ ಕಾವೇರತೊಡಗಿದ್ದುದರ ಪರಿಕಲ್ಪನೆಯೂ ನನಗಿರಲಿಲ್ಲ. ಇಲ್ಲಿ ಬಂದ ಒಂದು ವಾರದ ಬಳಿಕ, ಈ ದಳ್ಳುರಿ ಇಡೀ ದೇಶದ ತುಂಬ ಹರಡಬಹುದಾದ ಅಪಾಯ ಇರುವುದರಿಂದ ಜೂನ್‌ಗೆ ಬದಲು, ಅದಕ್ಕಿಂತ ಮೊದಲಿನ ದಿನಾಂಕ ನಿಗದಿ ಪಡಿಸಬೇಕೆಂಬ ನಿರ್ಧಾರ ಅಗತ್ಯ ಎಂದು ತೋರಿತು.
ಕೂಡಲೇ ಸರ್ವಪಕ್ಷಗಳ ನಾಯಕರೊಂದಿಗೆ ಚರ್ಚೆ ಆರಂಭಿಸಿದೆ. ಜೂನ್ 3 ನಿಗದಿತ ದಿನಾಂಕವೆಂದು ನಿರ್ಧರಿಸಲಾಯಿತು. ಈ ಯೋಜನೆಗೆ ಒಪ್ಪಿಗೆ ದೊರೆತ ಸಭೆಯಲ್ಲೇ ನಾನು ವಿಭಜನೆಯ ಪರಿಣಾಮಗಳ ಚರ್ಚೆಯನ್ನು ನಾಯಕರ ಮುಂದೆ ಮಂಡಿಸಿದೆ. ಎರಡೂವರೆ ತಿಂಗಳಿನ ಅಲ್ಪಾವಧಿಯಲ್ಲಿ 400 ದಶಲಕ್ಷ ಜನಸಂಖ್ಯೆಯ ಉಪಖಂಡವನ್ನು ವಿಭಜಿಸಿ ಆಡಳಿತವನ್ನು ಎರಡು ಸ್ವತಂತ್ರ ರಾಷ್ಟ್ರಗಳಿಗೆ ಹಸ್ತಾಂತರಿಸುವ ಕೆಲಸದ ರೂಪು ರೇಷೆ ಸಿದ್ಧಪಡಿಸಲು, ಅಲ್ಲಿಯೇ ಒಂದು ಸಮಿತಿ ರಚಿಸಿದೆವು. ಈ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಹಿಂದಿನ ಕಾರಣವೆಂದರೆ ವಿಭಜನೆಯ ತತ್ವವನ್ನು ಒಮ್ಮೆ ಅಂಗೀಕರಿಸಿದ ಮೇಲೆ, ಎಲ್ಲರ ಹಿತದೃಷ್ಟಿಯಿಂದ ಅದನ್ನು ಆದಷ್ಟು ಬೇಗ ಅನುಷ್ಠಾನಗೊಳಿಸಬೇಕು ಎಂಬುದಾಗಿತ್ತು. ಅದನ್ನು ಯಶಸ್ವಿಯಾಗಿ ಮಾಡಿದೆವು. ಸ್ವಾತಂತ್ರ್ಯವು ಅಖಂಡ ಭಾರತಕ್ಕೆ ಬರಲಿಲ್ಲವೆಂಬ ದುಃಖದಿಂದಾಗಿ ಸಾತಂತ್ರ್ಯೋತ್ಸವದ ಸಡಗರಕ್ಕೆ ತಡೆಯಾಗಿರುವುದು ನನಗೆ ಗೊತ್ತು.
ಜೂನ್ 3ರ ಯೋಜನೆ ಬ್ರಿಟಿಷ್ ಭಾರತದಲ್ಲಿನ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿತ್ತು. ಅಧಿಕಾರ ಹಸ್ತಾಂತರವಾದಾಗ ಭಾರತದ 565 ಸಂಸ್ಥಾನಗಳು ಸ್ವತಂತ್ರವಾಗುತ್ತಿದ್ದವು. ಇದರಲ್ಲಿ ಒಂದು ಸಮಸ್ಯೆಯೂ ಇತ್ತು. ದೂರದರ್ಶಿ ರಾಜಕೀಯ ಮುತ್ಸದ್ದಿಯಾದ ಸರ್ದಾರ್ ವಲ್ಲಭಭಾಯಿ ಪಟೇಲರು ರಾಜ್ಯಗಳ ಇಲಾಖೆಯ ಪ್ರಭಾರಿ ಸದಸ್ಯರಾಗಿದ್ದು, ಅಲ್ಲಿ ರೂಪಿಸಲಾದ ಯೋಜನೆ ಭಾರತ ದೇಶದ ರಾಜ್ಯಗಳ ಹಿತದೃಷ್ಟಿಯಿಂದ ಅತ್ಯಂತ ಉತ್ತಮವಾಗಿತ್ತು. ಭಾರತ ದೇಶ ಮತ್ತು ರಾಜ ಸಂಸ್ಥಾನಗಳು ಇನ್‌ಸ್ಟ್ರುಮೆಂಟ್ ಆಫ್ ಆಕ್ಸೆಷನ್ ಹಾಗೂ ಸ್ಟಾಂಡ್ ಸ್ಟಿಲ್ ಅಗ್ರಿಮೆಂಟ್‌ಗೆ ಮೂರುವಾರದೊಳಗೆ ಸಹಿಹಾಕಿದವು. ಹೀಗೆ 300 ದಶಲಕ್ಷ ಜನರನ್ನು ಹಾಗೂ ಈ ಉಪಖಂಡದ ಪ್ರಧಾನ ಭಾಗವನ್ನು ಒಳಗೊಂಡ ರಾಜಕೀಯ ರಚನೆಯೊಂದು ಸ್ಥಾಪಿತವಾಯಿತು. ಹೈದರಾಬಾದ್ ರಾಜ್ಯ ಮಾತ್ರ ಪ್ರವೇಶ ಪಡೆಯಲಿಲ್ಲ.
ಈ ಐತಿಹಾಸಿಕ ಕ್ಷಣದಲ್ಲಿ ಅಹಿಂಸೆಯಿಂದ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಗಾಂಧಿಯಂಥ ರೂವಾರಿಗೆ ಭಾರತ ಋಣಿಯಾಗಿರಬೇಕು. ಅವರು ಇಲ್ಲಿಲ್ಲ. ಆದರೆ, ಅವರು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿದ್ದಾರೆ. ನಿಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ, ಧೈರ್ಯ ಹಾಗೂ ದೂರದೃಷ್ಟಿಯುಳ್ಳ ವಿಶ್ವವಿಖ್ಯಾತ ನಾಯಕ (ಹರ್ಷೋದ್ಗಾರ).
ರಾಷ್ಟ್ರಧ್ವಜಾರೋಹಣ
ಸಭಾಧ್ಯಕ್ಷರು: ಗವರ್ನರ್ ಜನರಲ್ ಧ್ವಜಾರೋಹಣಕ್ಕೆ ಸೂಚನೆ ನೀಡುತ್ತಾರೆ (ಬಂದೂಕಿನಿಂದ ಗುಂಡು ಹಾರಿದ ಶಬ್ದ)
ಗವರ್ನರ್ ಜನರಲ್: ಈ ಚಾವಣಿಯ ಮೇಲೆ ಧ್ವಜಾರೋಹಣ ಮಾಡಲು ಸೂಚನೆ
ಸಭಾಧ್ಯಕ್ಷರು: ಸದನವನ್ನು 20ನೇ ದಿನಾಂಕಕ್ಕೆ ಮುಂದೂಡಲಾಗಿದೆ.
ಗೌರವಾನ್ವಿತ ಸದಸ್ಯರು: ಮಹಾತ್ಮಗಾಂಧೀ ಕಿ ಜೈ, ಪಂಡಿತ್ ಜವಾಹರ ಲಾಲ್ ನೆಹರೂ ಕಿ ಜೈ, ಮೌಂಟ್ ಬ್ಯಾಟನ್ ಕಿ ಜೈ
ಸದನವನ್ನು ಮುಂದೂಡಲಾಯಿತು..
(ಆಧಾರ; ಭಾರತ ಸಂವಿಧಾನ ರಚನಾ ಸಭೆಯ ಚರ್ಚೆಗಳು (ನಡವಳಿಗಳು)–ಸಂಪುಟ 2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.