ADVERTISEMENT

ಗಂಗೆ ಎಂದು ‘ನಿರ್ಮಲೆ’ಯಾದಾಳು?

ಇಂದಿನ ಪೀಳಿಗೆ ಮಾತುಮಾತಿಗೆ ‘ಷಿಟ್’ ಎನ್ನುವುದರ ವಾಚ್ಯಾರ್ಥ ಕೊಡುವ ಚಿತ್ರಣವೇ ಬೇರೆ!

ಟಿ.ಆರ್.ಅನಂತರಾಮು
Published 5 ನವೆಂಬರ್ 2019, 20:00 IST
Last Updated 5 ನವೆಂಬರ್ 2019, 20:00 IST
.
.   

ಇದೇ ಅ. 2ರಂದು, ಗಾಂಧಿ ಜಯಂತಿಯ ದಿನ ಪ್ರಧಾನಿ ನರೇಂದ್ರ ಮೋದಿಯವರು ‘ಭಾರತ, ಬಯಲುಶೌಚದಿಂದ ಮುಕ್ತವಾಗಿದೆ’ ಎಂದು ಘೋಷಿಸಿದರು. ಸರಿಯಾಗಿ ಐದು ವರ್ಷಗಳ ಹಿಂದೆ ಇದೇ ದಿನ ಸ್ವಚ್ಛಭಾರತ ಅಭಿಯಾನ ಪ್ರಾರಂಭವಾಯಿತು. ಗಾಂಧಿಯವರ 150ನೇ ಜಯಂತಿಯಂದು ಈ ಘೋಷಣೆ ಮಾಡುತ್ತಿರುವುದು ಗಾಂಧೀಜಿಗೆ ಸಂದ ಗೌರವ ಎಂಬ ಮಾತನ್ನೂ ಪ್ರಧಾನಿ ಸೇರಿಸಿದರು. ನಾವು ‘ಪೋಲಿಯೊಮುಕ್ತ ಭಾರತ’ ಎಂದು ಎದೆಯುಬ್ಬಿಸಿ ಹೇಳಬಹುದು. ಏಕೆಂದರೆ ಅದನ್ನು ಈಗಾಗಲೇ ದೇಶ ಸಾಧಿಸಿ ತೋರಿಸಿದೆ. ‘ಹಸಿವುಮುಕ್ತ ಭಾರತ’ ಎನ್ನುವುದು ಕನಸು ಅಥವಾ ಆಶಯ. ಎಲ್ಲ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆ ಕೂಡ. ಆದರೆ ‘ಬಯಲು ಶೌಚಮುಕ್ತ ಭಾರತ’ ಎಂದು ಘೋಷಿಸಬೇಕಾದರೆ ರಾಷ್ಟ್ರದಾದ್ಯಂತ ಸರಿಯಾದ ಸಮೀಕ್ಷೆ ಆಗಬೇಕು. ಸದ್ಯಕ್ಕೆ ಸ್ಪಷ್ಟವಾಗಿ ಮಾಹಿತಿ ಇರುವುದು 2014ರಿಂದ 2019ರವರೆಗೆ ದೇಶದಾದ್ಯಂತ ಸರ್ಕಾರದ ವತಿಯಿಂದ ಕಟ್ಟಿರುವ ಶೌಚಾಲಯಗಳ ಸಂಖ್ಯೆಯ ಬಗ್ಗೆ.

ಕಳೆದ ಐದು ವರ್ಷಗಳಿಂದ ಸ್ವಚ್ಛಭಾರತ ಅಭಿಯಾನದಲ್ಲಿ ಪ್ರತಿ ನಿಮಿಷಕ್ಕೆ 40 ಶೌಚಾಲಯಗಳು ನಿರ್ಮಾಣವಾಗಿವೆ ಎಂದು ‘ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್‍ವಿರಾನ್‍ಮೆಂಟ್’ ಎಂಬ ಸ್ವಯಂ ಸೇವಾ ಸಂಸ್ಥೆಯು ವರದಿಯೊಂದರಲ್ಲಿ ತಿಳಿಸಿದೆ. ಈ ಅವಧಿಯಲ್ಲಿ ದೇಶದಾದ್ಯಂತ ನಿರ್ಮಿಸಿರುವ ಶೌಚಾಲಯಗಳು ಹತ್ತು ಕೋಟಿ. ಈ ಪೈಕಿ ಗ್ರಾಮೀಣ ಪ್ರದೇಶದಲ್ಲೇ ಅತಿಹೆಚ್ಚು ಎಂಬುದು ಗಮನಾರ್ಹ. ದೇಶವ್ಯಾಪಿ ಮಾಡಿದ ಸ್ಥೂಲ ಸಮೀಕ್ಷೆಯಲ್ಲಿ, ಈ ಅವಧಿಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಐದು ವರ್ಷದ ಕೆಳಗಿನ ಮಕ್ಕಳು ಭೇದಿಗೆ, ಮಲೇರಿಯಾಕ್ಕೆ ಬಲಿಯಾಗಿರುವುದು ಗಣನೀಯವಾಗಿ ಕಡಿಮೆಯಾಗಿದೆ ಎನ್ನುವುದನ್ನು ಅನುಮಾನದಿಂದ ನೋಡಬೇಕಾಗಿಲ್ಲ.

ಈ ಹಿನ್ನೆಲೆಯಲ್ಲಿ ಒಮ್ಮೆ ಗಂಗಾ ನದಿಯ ಸ್ಥಿತಿಯನ್ನು ಗಮನಿಸಿದರೆ, ವಾಸ್ತವ ಕಣ್ಣಿಗೆ ರಾಚುತ್ತದೆ. ಇಂದಿನ ಪೀಳಿಗೆ ಮಾತುಮಾತಿಗೆ ‘ಷಿಟ್’ ಎನ್ನುವುದನ್ನು ನಾವು ವಾಚ್ಯಾರ್ಥದಲ್ಲಿ ತೆಗೆದುಕೊಂಡರೆ ಅದು ಕೊಡುವ ಚಿತ್ರಣವೇ ಬೇರೆ. ಇಡೀ ಭಾರತದಲ್ಲಿ ಒಂದು ದಿನದಲ್ಲಿ ಉತ್ಪಾದನೆಯಾಗುವ ಮಲದ ಪ್ರಮಾಣದ ಅಂದಾಜು ಸಿಕ್ಕಿದೆ. ನಗರಗಳಲ್ಲಿ 1.20 ಲಕ್ಷ ಟನ್ನು, ಗ್ರಾಮೀಣ ಪ್ರದೇಶಗಳಲ್ಲಿ 2.50 ಲಕ್ಷ ಟನ್ನು ಮಲದ ರಾಶಿ ಹುಟ್ಟುತ್ತದೆ. ಒಂದೇ ವರ್ಷದಲ್ಲಿ ನಂದಿ ಬೆಟ್ಟವನ್ನು ಮೀರಿಸುವಷ್ಟು ಮಲರಾಶಿ! ಗಂಗಾ ನದಿಗೆ ದುರ್ಗತಿ ಒದಗಿರುವುದು ಸದ್ಯಕ್ಕೆ ಪ್ಲಾಸ್ಟಿಕ್ ಮಾಲಿನ್ಯದಿಂದಲೂ ಅಲ್ಲ, ಬಿಸುಡುವ ಅರೆಬೆಂದ ಹೆಣಗಳಿಂದಲೂ ಅಲ್ಲ. ಆ ಮಟ್ಟಿಗೆ ಸರ್ಕಾರ ಕಣ್ಗಾವಲಿಟ್ಟಿದೆ. ಗಂಗಾ ನದಿಗೆ ದುರ್ಗತಿ ಒದಗಿರುವುದು ಅದರ ಪಾತ್ರದುದ್ದಕ್ಕೂ ಆಗುವ ಮಲ ವಿಸರ್ಜನೆಯಿಂದ. ಹಿಮಾಲಯದ ಉದ್ದಕ್ಕೆ ಸಡ್ಡು ಹೊಡೆದು, ಗಂಗಾ ನದಿಯು ಉತ್ತರಾಖಂಡದಿಂದ ತೊಡಗಿ ಬಾಂಗ್ಲಾ ದೇಶದಲ್ಲಿ ಬಂಗಾಳ ಕೊಲ್ಲಿಯನ್ನು ಸೇರುವ ಹೊತ್ತಿಗೆ 2,525 ಕಿ.ಮೀ. ಹರಿದಿರುತ್ತದೆ. ಈ ಪೈಕಿ ಉತ್ತರಾಖಂಡ ಮತ್ತು ಉತ್ತರಪ್ರದೇಶದಲ್ಲೇ 1,000 ಕಿ.ಮೀ. ಹರಿದಿರುತ್ತದೆ. ಭಾರತದ ಶೇ 43ರಷ್ಟು ಭಾಗದ ಜನಸಂಖ್ಯೆ ಇರುವುದು ಗಂಗಾ ನದಿಯ ಬಯಲಿನಲ್ಲೇ ಎಂಬುದು ಹೊಸ ಶೋಧವೇನಲ್ಲ.

ADVERTISEMENT

ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇತ್ತೀಚೆಗೆ ವರದಿ ನೀಡಿ, ಇಡೀ ಗಂಗಾ ನದಿಯ ಬೇರೆ ಬೇರೆ ಭಾಗಗಳಲ್ಲಿ ಪ್ರತಿದಿನ ತಲಾ 10 ಲಕ್ಷ ಲೀಟರ್‌ ಕೊಳಚೆ ಒಯ್ಯುವ 151 ದೊಡ್ಡ ಚರಂಡಿಗಳಿವೆ; ಶುದ್ಧೀಕರಣ ಘಟಕಗಳ ಸಾಮರ್ಥ್ಯವನ್ನೂ ಮೀರಿರುವುದರಿಂದ 1.05 ಲಕ್ಷ ಲೀಟರ್‌ ಕೊಳಚೆಯು ಮಲಮೂತ್ರದೊಡನೆ ನೇರವಾಗಿ ಗಂಗಾ ನದಿಯನ್ನೇ ಸೇರುತ್ತಿದೆ ಎಂದು ತಿಳಿಸಿದೆ. ಇದನ್ನು ಹೀಗೂ ಹೇಳಬಹುದು. ಈ ಮೂಲಕ ಪ್ರತಿದಿನ ಒಂದು ಕೋಟಿ ಜನರ ಮಲವು ಗಂಗೆಯ ಒಡಲನ್ನು ಸೇರುತ್ತಿದೆ. ಗಂಗಾ ನದಿಯ ಮಾಲಿನ್ಯದ ಶೇ 80ರಷ್ಟು ಭಾಗದ ಕೊಡುಗೆ ಯಮುನಾ ಮತ್ತು ಗೋಮತಿ ನದಿಗಳಿಂದಲೇ ಆಗುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

1986ರಲ್ಲಿ ‘ಗಂಗಾ ಕಾರ್ಯಯೋಜನೆ’ ಅನುಷ್ಠಾನವಾಯಿತು. ಇದಕ್ಕೆ ಖರ್ಚಾದದ್ದು ₹ 462 ಕೋಟಿ. ಆ ಹಿಂದೆ ಗಂಗೆಯ ಮಾಲಿನ್ಯದ ಬಗ್ಗೆ ದೊಡ್ಡ ನಿರ್ಧಾರವನ್ನೇನೂ ಸರ್ಕಾರ ತೆಗೆದುಕೊಂಡಿರಲಿಲ್ಲ. ಇದರ ಹಿಂದೆಯೇ ಯಮುನಾ ಮತ್ತು ಗೋಮತಿ ನದಿಗಳ ಕಾರ್ಯಯೋಜನೆಯೂ ಜಾರಿಗೆ ಬಂತು. ವಿಶೇಷವಾಗಿ, ಯಮುನಾ ನದಿ ದಂಡೆಯ ಮೇಲಿನ ಕಾರ್ಖಾನೆಗಳನ್ನು ನಿಯಂತ್ರಿಸುವಲ್ಲಿ ಸ್ವಲ್ಪಮಟ್ಟಿನ ಯಶಸ್ಸು ಆಯಿತೇ ವಿನಾ ಮಲಮೂತ್ರವು ನದಿಯನ್ನು ಕೊಲ್ಲುತ್ತದೆ ಎಂಬುದನ್ನು ಆಗ ಗಮನಿಸಿರಲಿಲ್ಲ.

ನಿರ್ಮಲ ಗಂಗಾ ರಾಷ್ಟ್ರೀಯ ಅಭಿಯಾನದ (ಎನ್‌ಎಂಸಿಜಿ) ಮೂಲಕವೇ ₹ 20,000 ಕೋಟಿ ಮೊತ್ತದ ‘ನಮಾಮಿಗಂಗೆ’ ಯೋಜನೆ ಪ್ರಾರಂಭ ವಾಯಿತು. ಗಂಗಾ ನದಿಯನ್ನು, ವಿಶೇಷವಾಗಿ ಮಲವಿಸರ್ಜನೆಯ ಮೂಲಕ ಮಲಿನ ಮಾಡುತ್ತಿರುವ 97 ನಗರಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಸ್ವಚ್ಛಭಾರತ ಅಭಿಯಾನದಡಿ ಮೂರು ಕೋಟಿ ಶೌಚಾಲಯಗಳು ನಿರ್ಮಾಣವಾಗಿವೆ ಎಂದರೆ, ಮಲ ತರುವ ಮಾಲಿನ್ಯದ ಭೀಕರತೆ ಅರ್ಥವಾಗಬಹುದು.

2017ರಲ್ಲಿ ಕೇಂದ್ರ ಸರ್ಕಾರ ವಿಶೇಷವಾಗಿ ನಗರ ನೈರ್ಮಲ್ಯವನ್ನು ಗಮನದಲ್ಲಿ ಇಟ್ಟುಕೊಂಡು ‘ಗಟ್ಟಿ ಮಲ ಮತ್ತು ನೈರ್ಮಲ್ಯ ನಿರ್ವಹಣಾ ಯೋಜನೆ’ಯನ್ನು ಹುಟ್ಟುಹಾಕಿತು. ಈ ಯೋಜನೆಯ ಒಂದು ಅಂಗವಾಗಿ, ಕೊಳಚೆಯಲ್ಲಿ ಮಲವನ್ನು ಹೀರಿ, ಟ್ರಕ್ಕುಗಳಿಗೆ ತುಂಬಿ ಸುರಕ್ಷಿತ ಜಾಗದಲ್ಲಿ ವಿಲೇವಾರಿ ಮಾಡುವ ಯೋಜನೆ ಬಂತು. ಅದಕ್ಕೆ ‘ಹನಿ ಸಕ್ಕಿಂಗ್’ ಎಂಬ ಹೆಸರು ಯಾರು ಸೂಚಿಸಿದರೋ? ಗಂಗಾ ನದಿ ಬಯಲಿನ ಶೌಚ ಸ್ಥಿತಿ ದಿಗಿಲು ಹುಟ್ಟಿಸುತ್ತದೆ. 5,000 ಲೀಟರ್‌ ಮಲದ ಕೊಳಚೆಯನ್ನು ಸಾಗಿಸಲು ಒಂದು ಟ್ರಕ್ಕು ಬೇಕು. ಇಡೀ ಗಂಗೆ ಹರಿಯುವ ಪಾತ್ರದ ಆಜೂಬಾಜು ಈ ಕೆಲಸಕ್ಕಾಗಿ ಪ್ರತಿದಿನ 4,000 ಟ್ರಕ್ಕುಗಳು ಬಳಕೆಯಾಗುತ್ತಿವೆ, ಕನಿಷ್ಠ ಎರಡು ಟ್ರಿಪ್ ಎಂಬ ಸಂಗತಿ ಕಳವಳಕಾರಿ. ಗಂಗೆಯ ಮಾಲಿನ್ಯದ ಸಮಸ್ಯೆಯೇ ಜಲಚರಗಳಿಗೂ ಕಂಟಕ ತಂದಿದೆ.

ಪ್ರತಿ ಲೀಟರ್ ನೀರಿನಲ್ಲಿ ಐದು ಮಿಲಿಗ್ರಾಂ ಆಕ್ಸಿಜನ್ ವಿಲೀನವಾಗಿದ್ದರೆ ಮಾತ್ರ ಅವು ಬದುಕಿಯಾವು. ಈಗ ಆಕ್ಸಿಜನ್ ಮಟ್ಟವು ಕುಸಿಯುತ್ತಿದೆ. ಒಂದು ಅಂದಾಜಿನಂತೆ, ಇಡೀ ಗಂಗಾ ನದಿಯ ಜಲಚರಗಳು ಉಳಿಯಲು ಕನಿಷ್ಠ 400 ಟನ್ ಆಕ್ಸಿಜನ್ ಅಗತ್ಯವಿದೆ. ಈ ಎಚ್ಚರಿಕೆಯೂ ಕೆಲಸ ಮಾಡಿದಂತಿಲ್ಲ. ಬಹುಶಃ ಇದು ಆದ್ಯತೆಯಲ್ಲ!

ಗಟ್ಟಿ ಮಲವನ್ನು ನಿರ್ವಹಿಸಲೆಂದೇ ಪ್ರತ್ಯೇಕ ಯೋಜನೆ ರೂಪಿಸಿದಾಗ, ಅದರ ಲಾಭವನ್ನು ತತ್‍ಕ್ಷಣವೇ ಬಳಸಿಕೊಂಡಿದ್ದು ಒಡಿಶಾ. ಅಲ್ಲಿ ಈಗಾಗಲೇ ಇಂಥ ಹತ್ತು ಮಲಸಂಗ್ರಹ ಸ್ಥಾವರಗಳನ್ನು ಸ್ಥಾಪಿಸಲಾಗಿದೆ. ಇನ್ನೂ 26 ಸ್ಥಾವರಗಳು ನಿರ್ಮಾಣದ ಹಂತದಲ್ಲಿವೆ. ಕರ್ನಾಟಕ ಇದರಲ್ಲೂ ಹಿಂದುಳಿದಿದೆ. ದೇವನಹಳ್ಳಿಯ ಬಳಿ ಇಂಥ ಒಂದು ಸಂಗ್ರಹ ಸ್ಥಾವರ ನಿರ್ಮಾಣವಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಪ್ರಶ್ನೆ ಏಳುವುದು, ಅಂತಿಮವಾಗಿ ವಿಸರ್ಜನೆ ಮಾಡಲು ಬೇಕಾದ ಜಾಗ. ಈ ಕುರಿತು ಯಾವ ನೀಲನಕ್ಷೆಯೂ ಇಲ್ಲ. ಏಕೆಂದರೆ ಈ ತ್ಯಾಜ್ಯವನ್ನು ಬೇಕಾಬಿಟ್ಟಿ ಬಿಸುಟರೆ ಬ್ಯಾಕ್ಟೀರಿಯಾಗಳು ಹರಡುವ ಕಾಯಿಲೆಯ ಬಗ್ಗೆ ಅಂದಾಜಿಲ್ಲ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಕಟ್ಟಿರುವ ಶೌಚಾಲಯಗಳ ಗುಣಮಟ್ಟದ ಬಗ್ಗೆಯೂ ಅಪಸ್ವರ ಕೇಳಿಬರುತ್ತಿದೆ. ಹೆಚ್ಚಿನ ಭಾಗಗಳಲ್ಲಿ ನದಿಗಳು ಇಲ್ಲದಿರುವುದರಿಂದ, ಈ ಶೌಚಾಲಯಗಳು ತುಂಬಿ ಬಂದಾಗ ಮತ್ತೆ ಅದೇ ವಿಲೇವಾರಿಯ ಸಮಸ್ಯೆ ಏಳುತ್ತದೆ.

ಇಡೀ ಗಂಗೆ ತನ್ನ ಪಾತ್ರದುದ್ದಕ್ಕೂ ಶುಚಿಯಾಗ ಬೇಕೆಂದರೆ, ಅದು ಬೇಡುವ ಮೊತ್ತ ₹ 28,450 ಕೋಟಿ ಎಂದು ಅಂದಾಜು ಮಾಡಲಾಗಿದೆ. ಎಂದಿನಂತೆ ವಿಶ್ವಬ್ಯಾಂಕಿಗೆ ಮೊರೆ ಹೋಗಬೇಕು. ಸರ್ಕಾರದ ಕಾನೂನು ಎಲ್ಲವನ್ನೂ ಬದಲಿಸಲಾರದು. ಜನರ ಶೌಚ ಅಭ್ಯಾಸಗಳೂ ಬದಲಾಗಬೇಕು, ಆಗ ಮಾತ್ರ ಗಂಗೆ ‘ನಿರ್ಮಲ’ವಾಗಬಹುದು.

ಟಿ.ಆರ್.ಅನಂತರಾಮು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.