ಅಸಂಬದ್ಧವಾದುದಕ್ಕೆ ಅಸಂಬದ್ಧವಾಗಿಯೇ ಪ್ರತಿಕ್ರಿಯಿಸಬೇಕೆಂಬ ಮನಃಸ್ಥಿತಿ ಬೆಳೆಸುತ್ತಿರುವ ಇಂದಿನ ಧಾರ್ಮಿಕ ವಾತಾವರಣದ ಮಧ್ಯೆ ಬುದ್ಧನ ಬದುಕಿನಲ್ಲಿ ನಡೆದ ಘಟನೆಯೊಂದು ನೆನಪಾಗುತ್ತದೆ:
ಪಂಡಿತನೊಬ್ಬ ಬುದ್ಧನನ್ನು ಒಂದೇ ಸಮನೆ ನಿಂದಿಸ ತೊಡಗಿದಾಗ, ಬುದ್ಧ ಕರುಣಾಪೂರ್ಣ ದೃಷ್ಟಿಯಿಂದ ಅವನನ್ನು ನೋಡುತ್ತಿದ್ದ. ಕೊನೆಗೆ ‘ಪಂಡಿತ, ನನ್ನನ್ನು ಕ್ಷಮಿಸು, ನಿನ್ನ ಬೈಗುಳಗಳಾವುವೂ ನನ್ನನ್ನು ತಲುಪಲೇ ಇಲ್ಲ’ ಎಂದಾಗ ಪಂಡಿತನಿಗೆ ಗಾಬರಿಯಾಯಿತು. ಇವನ ಕಿವಿಗೆ ಏನಾದರೂ ಕಿವುಡುತನ ಹತ್ತಿತೋ ಎಂದು ಗೊಂದಲಗೊಂಡ. ಬುದ್ಧ ಮುಂದುವರಿದು ‘ಪಂಡಿತ, ನಿನ್ನ ಮನೆಗೆ ಆಗಾಗ ನೆಂಟರಿಷ್ಟರು ಬರುತ್ತಾರಲ್ಲವೇ?’ ಎಂದು ಕೇಳಿದ. ಪಂಡಿತ ‘ಹೌದು ಬರುತ್ತಾರೆ, ಅದಕ್ಕೇನೀಗ?’ ಎಂದು ಕೇಳಿದ.
ಬುದ್ಧ ‘ಅವರಿಗೆ ಅನ್ನಾಹಾರಗಳನ್ನು ನೀಡಿ ಸತ್ಕರಿಸು ವೆಯೋ ಇಲ್ಲವೋ?’
‘ಅತಿಥಿ ಸತ್ಕಾರ ಮಾಡಲೇಬೇಕಲ್ಲವೇ?’
‘ಒಂದು ವೇಳೆ ಅವರು ನಿನ್ನ ಊಟ ಸ್ವೀಕರಿಸದಿದ್ದರೆ?’
‘ಆಗ ಅದನ್ನು ನಾನೇ ಉಣ್ಣುತ್ತೇನೆ’.
ಬುದ್ಧ ‘ನಾವು ನಿನ್ನ ಬೈಗುಳವನ್ನು ಸ್ವೀಕರಿಸಿಲ್ಲ. ಈಗ ನಿನ್ನ ಬೈಗುಳವನ್ನು ನೀನೇ ಉಣ್ಣಬೇಕಾಗಿದೆ. ಬೈಗುಳಕ್ಕೆ ಪ್ರತಿಬೈಗುಳ, ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇವೆಲ್ಲ ನಡೆ ದಾಗಲಷ್ಟೇ ಅತಿಥಿ- ಆತಿಥೇಯ ಸಂಬಂಧ ಸಂಪನ್ನವಾಗು ತ್ತದೆ. ಆದರೆ ನಾವು ನಿನ್ನ ಔತಣಕೂಟದಲ್ಲಿ ಭಾಗವಹಿಸು ವವರಲ್ಲ. ಈಗ ಎಲ್ಲವೂ ನಿನ್ನದೇ ಪಂಡಿತ, ಎಲ್ಲವೂ ನಿನ್ನದೇ’ ಎಂದ.
ಮೌನದ ಪರಿಣಾಮಕಾರಿತ್ವವನ್ನು ಸಾರುವ ಕತೆ ಇದು.
‘ಒಂದು ಬಂದೂಕನ್ನು ಕೈಲಿ ಹಿಡಿದಿರುವ ವ್ಯಕ್ತಿ ಆ ಕ್ಷಣದಲ್ಲಿ ಒಬ್ಬಿಬ್ಬರನ್ನೋ ಅಥವಾ ಹತ್ತಾರು ಜನರನ್ನೋ ಕೊಲ್ಲಬಹುದು. ಆದರೆ ಒಂದು ಸಿದ್ಧಾಂತ ವನ್ನು ಭದ್ರವಾಗಿ ಹಿಡಿದುಕೊಂಡ ವ್ಯಕ್ತಿ ನಿರಂತರವಾಗಿ ಹತ್ಯಾಕಾಂಡದಲ್ಲಿ ನಿರತನಾಗಬಲ್ಲ’ ಎಂದು ಇತ್ತೀಚೆಗೆ ತೀರಿಕೊಂಡ ವಿಯೆಟ್ನಾಂನ ಸಂತ ಥಿಚ್ ನಾತ್ ಹನ್ ಹೇಳಿದ್ದರು.
ಅವರ ಈ ಮಾತು ಅಸಲಿಗೆ ಶಾಕ್ಯಮುನಿಯ ಸಿದ್ಧಾಂತ ವಿರೋಧಿ ನಿಲುವಿನ ಒಂದು ಸರಳ ವ್ಯಾಖ್ಯಾನವಾಗಿದೆ. ಸಿದ್ಧಾಂತಗಳ ದುಷ್ಪರಿಣಾಮವನ್ನು ಬುದ್ಧ ಪ್ರತ್ಯಕ್ಷವಾಗಿ ಕಂಡಿದ್ದನೆನಿಸುತ್ತದೆ. ಆದ್ದರಿಂದಲೇ ಅವನು ತನ್ನ ಉಪದೇಶಗಳು ಸಿದ್ಧಾಂತದ ರೂಪವನ್ನು ಪಡೆಯದಂತೆ ಪ್ರಯತ್ನಿಸಿದ.
ಸಂಯುತ್ತ ನಿಕಾಯದಲ್ಲಿ, ವಚ್ಚಗೊಟ್ಟ ಎಂಬಾತ ಬುದ್ಧನನ್ನು ಭೇಟಿಯಾದ ಪ್ರಸಂಗ ಬರುತ್ತದೆ. ವಚ್ಚಗೊಟ್ಟ ಬುದ್ಧನೊಂದಿಗೆ ಮಾತುಕತೆ ನಡೆಸುತ್ತ ‘ಭಂತೇ, ಆತ್ಮವಸ್ತು ಇದೆಯೇ?’ ಎಂದು ಕೇಳಿದಾಗ ಬುದ್ಧ ಏನನ್ನೂ ನುಡಿಯದೆ ಸುಮ್ಮನಿದ್ದ. ವಚ್ಚಗೊಟ್ಟ ತನಗೆ ತಾನೇ ಊಹಿಸಿಕೊಂಡು ‘ಹಾಗಿದ್ದರೆ ಆತ್ಮವಸ್ತು ಇಲ್ಲ ಎಂಬುದು ನಿನ್ನ ಅಭಿಪ್ರಾಯವೋ?’ ಎಂದು ಮತ್ತೊಮ್ಮೆ ಕೇಳಿದ. ಆಗಲೂ ಬುದ್ಧ ಮೌನವಾಗೇ ಇದ್ದ. ವಚ್ಚಗೊಟ್ಟನಿಗೆ ಮುಂದೆ ಏನು ಕೇಳಬೇಕೋ ತೋಚದೆ ಅಲ್ಲಿಂದ ನಿರ್ಗಮಿಸಿದ.
ಅನತಿ ದೂರದಲ್ಲಿ ನಿಂತು ಇವರಿಬ್ಬರ ಸಂವಾದ ಕೇಳಿಸಿಕೊಳ್ಳುತ್ತಿದ್ದ ಆನಂದ, ವಚ್ಚಗೊಟ್ಟ ಹೊರಟು ಹೋದ ಮೇಲೆ ‘ಭಗವಾನ್, ನೀನು ಧರ್ಮಪ್ರವಚನ ನೀಡುವಾಗ ಆತ್ಮವಸ್ತುವಿಲ್ಲ ಎಂದು ಬಹಳ ಸಲ ಹೇಳಿದ್ದೆ. ಆದರೆ ಇಂದು ವಚ್ಚಗೊಟ್ಟನ ಪ್ರಶ್ನೆಗೆ ಅದೇಕೆ ಉತ್ತರ ನೀಡದೇ ಸುಮ್ಮನಿದ್ದೆ?’ ಎಂದು ಕೇಳಿದಾಗ ಬುದ್ಧ ‘ನಿಮ್ಮ ಅಂತರಂಗದಲ್ಲಿ ಆತ್ಮದಂತಹ ಯಾವ ವಸ್ತುವೂ ಇಲ್ಲ ಎಂದು ನಾನು ಹೇಳಿದ್ದುಂಟು. ಭಿಕ್ಕುಗಳು ತಮ್ಮೊಳಗೆ ಯಾವ ಆತ್ಮವಸ್ತುವಿಗೂ ತಡಕಾಡದೇ ಸುಮ್ಮನೆ ಧ್ಯಾನಸ್ಥರಾಗಬೇಕೆಂಬ ಉದ್ದೇಶದಿಂದ ನಾನು ಅನಾತ್ಮ ತತ್ವವನ್ನು ಬೋಧಿಸಿದ್ದೆ. ಅದನ್ನೆಲ್ಲ ಸಿದ್ಧಾಂತ ಮಾಡಿಕೊಂಡರೆ ನೀವು ಮತ್ತೆ ಜಟಿಲವಾದ ಗಂಟಿನೊಳಗೆ ಸಿಲುಕಿಬಿಡುವಿರಿ. ವಚ್ಚ ಗೊಟ್ಟ ಯಾವುದೋ ಸಿದ್ಧಾಂತವನ್ನು ಹುಡುಕಿಕೊಂಡು ಇಲ್ಲಿಗೆ ಬಂದಿದ್ದನೇ ವಿನಾ ಅಂತರಂಗದ ಸಾಧನೆಗಾಗಿ ಬಂದಿರಲಿಲ್ಲ. ಆದ್ದರಿಂದ ನಾನು ಸುಮ್ಮನಿದ್ದೆ. ಅವನು ನನ್ನ ಬೋಧನೆಯನ್ನು ಒಂದು ಕಗ್ಗಂಟನ್ನಾಗಿ ಮಾಡಿಕೊಳ್ಳ ಬಾರದೆಂಬ ಉದ್ದೇಶದಿಂದ ಸುಮ್ಮನಿರಬೇಕಾಯಿತು. ಆ ಸಂದರ್ಭದಲ್ಲಿ ನಾನು ಏನೇ ನುಡಿದಿದ್ದರೂ ಅದೊಂದು ಸಿದ್ಧಾಂತವಾಗಿ ಮಾರ್ಪಡುತ್ತಿತ್ತು’ ಎಂದು ಉತ್ತರಿಸಿದ.
ಒಂದು ಪ್ರಶ್ನೆಗೆ ನಾಲ್ಕು ರೀತಿಯ ಉತ್ತರಗಳನ್ನು ನೀಡಬಹುದೆಂದು ಬುದ್ಧ ಹೇಳುತ್ತಾನೆ. ‘ಕೆಲವು ಪ್ರಶ್ನೆಗಳಿಗೆ ‘ಇದೆ’ ಅಥವಾ ‘ಇಲ್ಲ’ ಎಂದು ಉತ್ತರಿಸಬೇಕಾಗುತ್ತದೆ, ಕೆಲವಕ್ಕೆ ‘ಇದೆ’- ‘ಇಲ್ಲ’ ಎಂಬ ಉತ್ತರ ಸಾಕಾಗದೆ ಹೆಚ್ಚಿನ ವಿವರಣೆ ಬೇಕಾಗುತ್ತದೆ. ಕೆಲವು ಪ್ರಶ್ನೆಗಳಿಗೆ ವಿವರಣೆ ನೀಡದೆ ಮರುಪ್ರಶ್ನೆ ಕೇಳುವ ಮೂಲಕ ಉತ್ತರಿಸಬೇಕಾಗುತ್ತದೆ, ಮತ್ತೆ ಕೆಲವು ಪ್ರಶ್ನೆಗಳಿಗೆ ಏನನ್ನೂ ಉತ್ತರಿಸದೆ ಸುಮ್ಮನಿದ್ದು ಬಿಡಬೇಕಾಗುತ್ತದೆ’.
ಜಗತ್ತಿನ ಎಲ್ಲ ಧರ್ಮಗಳೂ ಶಬ್ದಪ್ರಮಾಣವನ್ನು ನಂಬಿವೆ. ಎಲ್ಲ ಪ್ರಶ್ನೆಗಳಿಗೂ ತನ್ನಲ್ಲಿ ಉತ್ತರವಿದೆ ಎಂಬ ಧಿಮಾಕು ಬೆಳೆಸಿಕೊಂಡಿವೆ. ಬೌದ್ಧಧರ್ಮವಾದರೂ ಶಬ್ದ ಪ್ರಮಾಣಕ್ಕಿಂತ ಮೌನಪ್ರಮಾಣದಲ್ಲಿ ಶ್ರದ್ಧೆಯಿಟ್ಟಿರುವ ಧರ್ಮವಾಗಿದೆ. ‘ವಿಮಲಕೀರ್ತಿ ನಿರ್ದೇಶ ಸೂತ್ರ’ದಲ್ಲಿ ಬೋಧಿಸತ್ವ ಮಂಜುಶ್ರೀ, ವಿಮಲಕೀರ್ತಿಯ ಮೌನದ ಗಹನತೆಯನ್ನು ವರ್ಣಿಸುತ್ತಾ ‘ಅವನದು ಗುಡುಗಿನಂತಹ ಮೌನ’ ಎಂದು ಉದ್ಗರಿಸುತ್ತಾನೆ. ಗುಡುಗಿನ ಸದ್ದು ಹೇಗೆ ಮಾರ್ದನಿಸುತ್ತ ಎಲ್ಲ ದಿಕ್ಕುಗಳಲ್ಲೂ ಅನುರಣಿಸುತ್ತದೋ ಅದೇ ರೀತಿ ವಿಮಲಕೀರ್ತಿಯ ಮೌನವೂ ಅವನ ಸುತ್ತ ಒಂದು ‘ಬುದ್ಧಕ್ಷೇತ್ರ’ವನ್ನು ನಿರ್ಮಾಣ ಮಾಡಿತ್ತು. ಆ ಬುದ್ಧಕ್ಷೇತ್ರ ಉಂಟು ಮಾಡಿದ್ದ ದಿವ್ಯತ್ವದ ಸ್ಪಂದನವನ್ನು ಮಂಜುಶ್ರೀ ಸ್ವತಃ ಅನುಭವಿಸಿದ್ದ ಕಾರಣ ಅವನು ಹಾಗೆ ಉದ್ಗರಿಸಿದ್ದನೆನಿಸುತ್ತದೆ.
ಬುದ್ಧನು ಸಿದ್ಧಾಂತಗಳನ್ನು, ಶಾಸ್ತ್ರ ಪ್ರಮಾಣವನ್ನು ಬೋಧಿಸಿದವನಲ್ಲ. ತನ್ನ ಬೋಧನೆಗಳನ್ನು ಅನ್ಯರ ಮೇಲೆ ಹೇರಿದವನಲ್ಲ. ಬದಲಾಗಿ, ‘ನಿನಗೆ ನೀನೇ ಬೆಳಕಾಗು’ (ಅಪ್ಪೋ ದೀಪೋ ಭವ) ಎಂದವನು. ಸೈದ್ಧಾಂತಿಕ ಪ್ರಶ್ನೆ, ಜಿಜ್ಞಾಸೆಗಳು ಪ್ರಾರಂಭವಾದಾಗಲೆಲ್ಲ ಅವನು ಮೌನಕ್ಕೆ ಮೊರೆ ಹೋಗುತ್ತಿದ್ದ. ಒಮ್ಮೆ ತನ್ನ ಮೌನಕ್ಕೆ ತಾನೇ ಹೀಗೆ ವಿವರಣೆ ನೀಡಿದ್ದ:
‘ಒಬ್ಬ ಮನುಷ್ಯ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಯಾವುದೋ ದಿಕ್ಕಿನಿಂದ ಬಾಣವೊಂದು ರಭಸವಾಗಿ ನುಗ್ಗಿ ಅವನ ಎದೆಯೊಳಗೆ ಹೊಕ್ಕಿತು. ಆಸುಪಾಸಿನಲ್ಲಿದ್ದವರು ತಕ್ಷಣವೇ ಓಡಿಬಂದು ಅವನ ಎದೆಗೆ ನಾಟಿದ್ದ ಬಾಣವನ್ನು ತೆಗೆಯಲು ಮುಂದಾದಾಗ ಅವನು ಅವರನ್ನು ತಡೆದ. ‘ಬಾಣವನ್ನು ತೆಗೆಯಬೇಡಿ, ಇದನ್ನು ಬಿಟ್ಟವನು ಬ್ರಾಹ್ಮಣನೋ ಕ್ಷತ್ರಿಯನೋ ವರ್ತಕನೋ ಬೇಡನೋ ಎಂಬುದು ನನಗೆ ಗೊತ್ತಾಗಬೇಕು. ಅವನ ಹೆಸರೇನು, ಅವನು ಉದ್ದವಿರುವನೋ, ಕುಳ್ಳಗಿರುವನೋ, ಕಪ್ಪುವರ್ಣದವನೋ, ಬಿಳಿಯ ಚರ್ಮದವನೋ ತಿಳಿಯಬೇಕು. ಬಾಣವನ್ನು ಬಿಟ್ಟ ಬಿಲ್ಲನ್ನು ಯಾವ ವಸ್ತುವಿನಿಂದ ತಯಾರಿಸಲಾಗಿದೆ ಎಂಬುದು ತಿಳಿಯಬೇಕು. ಬಾಣದ ಆ ತುದಿಯಲ್ಲಿರುವ ಗರಿ ಯಾವ ಪಕ್ಷಿಯದ್ದೆಂದು ನನಗೆ ಗೊತ್ತಾಗಬೇಕು. ಬಾಣದ ಈ ತುದಿಯಲ್ಲಿರುವ ಮೊನಚಾದ ವಸ್ತು ಲೋಹದ್ದೋ ಮೂಳೆಯದ್ದೋ ಅಥವಾ ಎತ್ತಿನ ಕೊಂಬಿ ನಿಂದ ಮಾಡಿದ್ದೋ ತಿಳಿಯಬೇಕು...’ ಹೀಗೆ ಪ್ರಶ್ನೆಗಳನ್ನು ಕೇಳುತ್ತಲೇ ಅವನು ಸತ್ತುಹೋದ. ಅವನ ಪ್ರಶ್ನೆಗಳು ಮಾತ್ರ ಬದುಕುಳಿದವು’ (ಚೂಳಮಾಲುಕ್ಯ ಸೂತ್ರ).
ಸಾಧಕರು ‘ಈ ಸೃಷ್ಟಿಯ ಮೂಲವೇನು, ಸೃಷ್ಟಿಕರ್ತ ಇರುವನೇ, ತಥಾಗತನಿಗೆ ಮರುಹುಟ್ಟು ಇದೆಯೇ, ಜೀವಾತ್ಮವುಂಟೇ...?’ ಎಂಬಿತ್ಯಾದಿ ಯಾವುದೇ ಸೈದ್ಧಾಂತಿಕ ಪ್ರಶ್ನೆಯೊಂದಿಗೆ ಬಂದಾಗ ಬುದ್ಧ ಮೌನ ವಹಿಸುತ್ತಿದ್ದ. ಬಳಿಕ ಅವರಿಗೆ ಈ ಕತೆ ಹೇಳುತ್ತಿದ್ದ. ‘ದುಃಖವೆಂಬ ಬಾಣ ನಿನ್ನೆದೆಗೆ ನಾಟಿರುವಾಗ ಅದನ್ನು ಮೊದಲು ಕಳೆದುಕೊ. ಬಳಿಕ ಈ ಪ್ರಶ್ನೆಗಳ ಬೆನ್ನುಹತ್ತಿ ಹೊರಡು’ ಎನ್ನುತ್ತಿದ್ದ. ಬುದ್ಧನ ಈ ಮೌನವನ್ನು ಬೌದ್ಧರು ‘ಬುದ್ಧನ ಮಹಾಮೌನ’ ಎಂದು ಕರೆಯುತ್ತಾರೆ.
ಇಂದು ಜಗತ್ತಿನ ಬಹುತೇಕ ಹಿಂಸಾಚಾರ, ಅನಾಚಾರಗಳಿಗೆ ಇಂತಹ ಸೈದ್ಧಾಂತಿಕ ಪ್ರಶ್ನೆಗಳೇ ಮೂಲ ಕಾರಣಗಳಾಗಿವೆ. ಸಿದ್ಧಾಂತದ ಬಡಿವಾರವಿಲ್ಲದ ಧರ್ಮದ ಅವಶ್ಯಕತೆಯನ್ನು ನಾವಿಂದು ಮನಗಾಣಬೇಕಿದೆ. ಗುಡಿ ಚರ್ಚು ಮಸೀದಿಗಳು ಮೈಕುಗಳ ಮೂಲಕ ಪ್ರತಿನಿತ್ಯ ವಾತಾವರಣದಲ್ಲಿ ಶಬ್ದಮಾಲಿನ್ಯ ಉಂಟು ಮಾಡುತ್ತಿರುವ ಇಂದಿನ ದಿನಮಾನದಲ್ಲಿ ಶಾಕ್ಯಮುನಿಯ ಮೌನ ವ್ಯಾಖ್ಯಾನಕ್ಕೆ ಸ್ಪಂದಿಸಬೇಕಾದ ಅಗತ್ಯವಿದೆ.
ಲೇಖಕ: ಸಹಾಯಕ ಪ್ರಾಧ್ಯಾಪಕ, ಜ್ಯೋತಿನಿವಾಸ್ ಕಾಲೇಜ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.