ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಜರುಗಿದ ‘ಬೆಂಗಳೂರು ಟೆಕ್’ ಸಮ್ಮೇಳನದ ‘ಬಯೋ ಇಂಡಿಯಾ’ ಜೈವಿಕ ತಂತ್ರಜ್ಞಾನ ಪ್ರದರ್ಶನದ ಆಕರ್ಷಣೆಗಳಲ್ಲಿ ವಂಶವಾಹಿ ಪರೀಕ್ಷೆ ತಂತ್ರಜ್ಞಾನವೂ ಪ್ರಮುಖವಾಗಿತ್ತು. ದೇಹದ ಒಂದು ಜೀವಕೋಶವಿದ್ದರೆ ಸಾಕು, ಅದರ ಕೋಶಕೇಂದ್ರದಿಂದ ವಂಶವಾಹಿಗಳನ್ನು ಬೇರ್ಪಡಿಸಿ, ಅವುಗಳಲ್ಲಿನ ರಾಸಾಯನಿಕಗಳ ಅಣುರಚನೆ ನೋಡಿ, ಆ ವ್ಯಕ್ತಿಯ ‘ತಳಿನಕ್ಷೆ’ಯನ್ನೇ ರಚಿಸುವ ‘ಜೀನ್ ಟೆಸ್ಟಿಂಗ್’ ತಂತ್ರಜ್ಞಾನವದು.
ದೇಶದಲ್ಲೀಗ ಈ ಬಗೆಯ ಇಪ್ಪತ್ತಕ್ಕೂ ಹೆಚ್ಚಿನ ಪ್ರಯೋಗಾಲಯ ಉದ್ಯಮಗಳು, ಐವತ್ತಕ್ಕೂ ಮೀರಿ ನವೋದ್ಯಮಗಳು ಬೆಳೆದುನಿಂತಿವೆ ಎಂಬ ಅಂದಾಜಿದೆ. ಬೆಂಗಳೂರು ಈ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ.
ಬರೀ ಎರಡು ದಶಕಗಳ ಹಿಂದೆ, ಗರ್ಭಿಣಿಯರ ಭ್ರೂಣಪರೀಕ್ಷೆಯು ಕೆಲವೇ ಸರಳ ಪರೀಕ್ಷೆಗಳಿಗೆ ಸೀಮಿತವಾಗಿತ್ತು. ಗರ್ಭಾಶಯದ್ರವದ ಜೀವಕೋಶಗಳ ಕೋಶಕೇಂದ್ರದಲ್ಲಿ ವರ್ಣತಂತುಗಳ ಜೋಡಣೆ ಸರಿಯಾಗಿದೆಯೇ ಎಂದಷ್ಟೇ ಪರೀಕ್ಷಿಸುತ್ತಿದ್ದರು. ಅವುಗಳ ಸಂಖ್ಯೆ ಹಾಗೂ ಜೋಡಣೆ ಕ್ರಮದಲ್ಲಿ ಏರುಪೇರಿದ್ದರೆ, ಜನಿಸುವ ಮಗು ವಂಶವಾಹಿ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಯಿರುತ್ತದೆ. ಉದಾಹರಣೆಗೆ, ಒಂದು ವರ್ಣತಂತು ಹೆಚ್ಚಿರುವ ‘ಟ್ರೈಸೋಮಿ’ ಮಗು, ಡೌನ್ ಸಿಂಡ್ರೋಂ ಕಾಯಿಲೆಗೆ ತುತ್ತಾಗುತ್ತದೆ. ಆ ಬಗೆಯ ರೋಗಗಳನ್ನು ಗುಣಪಡಿಸಲಾಗದ ಕಾರಣಕ್ಕೆ, ಅಂಥ ಭ್ರೂಣವನ್ನು ನಿರಾಕರಿಸಲು ಕಾನೂನು ಒಪ್ಪಿಗೆಯೂ ಇದೆ.
ಆದರೆ, ಹಿಂದಿನ ಎರಡು ದಶಕಗಳ ಅವಧಿಯಲ್ಲಿ ಈ ಪರೀಕ್ಷೆಗಳು ವರ್ಣತಂತುವಿನ ಹಂತ ದಾಟಿ, ಅದರಲ್ಲಿನ ಕೋಟ್ಯಂತರ ವಂಶವಾಹಿಗಳಲ್ಲಿ ಒಂದೊಂದನ್ನೂ ನಿಖರವಾಗಿ ಗುರುತಿಸುವ ಮಟ್ಟಕ್ಕೆ ಜೈವಿಕ ತಂತ್ರಜ್ಞಾನ ಬೆಳೆದುನಿಂತಿದೆ. ಜೀವಕೋಶಗಳ ಕೋಶಕೇಂದ್ರದಲ್ಲಿ ಇರುವ ವಂಶವಾಹಿಗಳ ಸಮೂಹವಾದ ‘ಜೀನೋಮ್’ ಸ್ವರೂಪದ ಕುರಿತು, ತೊಂಬತ್ತರ ದಶಕದ ನಂತರ ಯಶಸ್ವಿಯಾಗಿ ನಡೆದ ಜಾಗತಿಕ ಸಂಶೋಧನೆಗಳ ಫಲವಾಗಿ, ವಂಶವಾಹಿ ಪರೀಕ್ಷೆಯು ಒಂದು ಬೃಹತ್ ತಂತ್ರಜ್ಞಾನವಾಗಿ ಬೆಳೆಯುತ್ತಿದೆ. ಆರು ಸಾವಿರಕ್ಕೂ ಹೆಚ್ಚು ವಿಧದ ರೋಗಗಳು ಹಾಗೂ ದೈಹಿಕ, ಮಾನಸಿಕ ಸ್ಥಿತಿಗಳನ್ನು ಗುರುತಿಸುವ, ಇಪ್ಪತ್ತಾರು ಸಾವಿರಕ್ಕೂ ಮಿಕ್ಕಿ ‘ಜೆನೆಟಿಕ್ ಪರೀಕ್ಷೆ’ಗಳು ಇಂದು ಜಾಗತಿಕವಾಗಿ ಅಭಿವೃದ್ಧಿ ಆಗಿವೆಯಂತೆ! ಉಗುರಿನ ತುಣುಕು ಅಥವಾ ಒಂದು ಕೂದಲು ಸಿಕ್ಕರೂ ಸಾಕು, ಹಿಂದಿನ ಮೂರು ತಿಂಗಳಲ್ಲಿ ಆ ವ್ಯಕ್ತಿ ಮದ್ಯ ಸೇವಿಸಿದ್ದನೇ ಎಂಬುದನ್ನೂ ನಿಖರವಾಗಿ ಹೇಳುವಷ್ಟು ‘ಜೀನ್ ಟೆಸ್ಟಿಂಗ್’ ಬೆಳೆದುನಿಂತಿದೆ. ನಮ್ಮ ದೇಶವೂ ಈ ಕ್ಷೇತ್ರದಲ್ಲಿ ಕ್ಷಮತೆ ಸಾಧಿಸಿರುವುದನ್ನು ‘ಬೆಂಗಳೂರು ಬಯೋ’ ಸಾರುತ್ತಿತ್ತು.
ಭ್ರೂಣ, ಶಿಶು ಅಥವಾ ವಯಸ್ಕರಲ್ಲಿ ಯಾರ ಮೇಲೆ ಬೇಕಾದರೂ ಈ ಪರೀಕ್ಷೆ ನಡೆಸಲು ಸಾಧ್ಯ. ಇದಕ್ಕೆ ಬೇಕಾದದ್ದು ವರ್ಣತಂತು ಒದಗಿಸುವ ಚಿಟಿಕೆ ಜೀವಕೋಶಗಳು ಮಾತ್ರ. ರಕ್ತ, ಅಂಡಾಣು, ವೀರ್ಯ, ಕೂದಲು, ಉಗುರು, ಜೊಲ್ಲು ಯಾವುದೂ ಆದೀತು. ಪಾರಂಪರಿಕ ರಕ್ತಪರೀಕ್ಷೆ ಪ್ರಯೋಗಾಲಯ ಗಳೂ ಈ ಹೊಸ ತಂತ್ರಜ್ಞಾನದ ನವೋದ್ಯಮಗಳ ಜೊತೆ ಕೈಜೋಡಿಸಿ ಈ ಸೇವೆ ಒದಗಿಸುತ್ತಿವೆ. ಹಲವು ಕಂಪನಿಗಳು ಈ ಸೇವೆಗಳನ್ನು ಅಂತರ್ಜಾಲದ ಮೂಲಕವೂ ಒದಗಿಸುತ್ತಿವೆ. ಅವು ಒದಗಿಸುವ ಪರೀಕ್ಷಾ ಕಿಟ್‌ಗಳ ಸಾಧನಗಳಲ್ಲಿ ಒಂದಿಷ್ಟು ಜೊಲ್ಲು ಸುರಿಸಿ ಹಿಂತಿರುಗಿಸಿದರಾಯಿತು. ಒಂದು ವಾರದಲ್ಲಿ ನಮ್ಮ ಮೊಬೈಲಿಗೆ ನಾವು ಬಯಸಿದ ‘ಜೀನ್ ಟೆಸ್ಟಿಂಗ್’ ವರದಿ ಬರುತ್ತದೆ! ಆರೆಂಟು ಸಾವಿರ ರೂಪಾಯಿಯಷ್ಟು ಕಡಿಮೆ ವೆಚ್ಚದಲ್ಲೂ ಇದು ಲಭ್ಯವಿದೆ.
ಮನುಷ್ಯನ ಯಾವುದೇ ಜೀವಕೋಶವೊಂದರಲ್ಲಿ ಇಪ್ಪತ್ಮೂರು ಜೊತೆ ವರ್ಣತಂತುಗಳಿವೆ. ಅವುಗಳಲ್ಲಿ ಒಂದು ಜೊತೆಯು ಲಿಂಗ ನಿರ್ಣಯಿಸುವ ಎಕ್ಸ್ ಮತ್ತು ವೈ ವರ್ಣತಂತುಗಳನ್ನು ಒಳಗೊಂಡಿದೆ. ರೈಲುಹಳಿಗಳ ನಡುವಿನ ಪಟ್ಟಿಗಳಂತೆ ಉದ್ದಕ್ಕೆ ಅವುಗಳಲ್ಲಿ ವಂಶವಾಹಿ ರಾಸಾಯನಿಕಗಳು ಬೆಸೆದುಕೊಂಡಿದ್ದು, ಅವುಗಳ ಜೋಡಣೆಯ ಕ್ರಮವನ್ನು ಅರ್ಥೈಸಿಕೊಳ್ಳುವ ತಂತ್ರಕ್ಕೆ ಸೀಕ್ವೆನ್ಸಿಂಗ್ ಎನ್ನುತ್ತಾರೆ. ಇದನ್ನು ಆಧರಿಸಿಯೇ ಈ ವಂಶವಾಹಿ ಪರೀಕ್ಷೆಗಳನ್ನು ಮಾಡುವುದು. ಪ್ರಸ್ತುತ ಇವನ್ನು ಮೂರು ಬಗೆಯ ಉದ್ದೇಶಗಳಿಗೆ ಕೈಗೊಳ್ಳುತ್ತಿದ್ದಾರೆ.
ಮೊದಲಿನದು, ವೈದ್ಯಕೀಯ ಕಾರಣಗಳು. ಭ್ರೂಣ, ಮಗು ಅಥವಾ ವಯಸ್ಕರಲ್ಲಿ ವಂಶವಾಹಿ ವ್ಯತ್ಯಯದಿಂದಾಗಿ (ಮ್ಯೂಟೇಶನ್) ಈಗ ಅಥವಾ ಭವಿಷ್ಯದಲ್ಲಿ ತುತ್ತಾಗಬಹುದಾದ ಕಾಯಿಲೆಗಳನ್ನು ಅರಿಯಲು ಮಾಡುವ ಪರೀಕ್ಷೆಗಳು. ಉದಾಹರಣೆಗೆ, ಎಬಿಸಿಸಿ2 ವಂಶವಾಹಿಯ ಸ್ವರೂಪ ಅರಿತು ಯಕೃತ್ತಿನ ಕ್ಯಾನ್ಸರ್ ಸಾಧ್ಯತೆಯನ್ನು ನಿರ್ಧರಿಸಬಹುದು. ಎಚ್‌ಎಲ್‌ಎ– ಬಿ27 ವಂಶವಾಹಿಯನ್ನು ಪರೀಕ್ಷಿಸಿ ಸಂಧಿವಾತವಿದೆಯೇ ಎಂದು ಹೇಳಬಹುದು. ಬಿಆರ್‌ಸಿಎ ವಂಶವಾಹಿಯ ಮ್ಯೂಟೇಶನ್ ಪರೀಕ್ಷಿಸಿ ಸ್ತನ ಕ್ಯಾನ್ಸರ್ ಸಾಧ್ಯತೆಯನ್ನು ಅರಿಯಬಹುದು. ಮಧುಮೇಹ, ರಕ್ತದೊತ್ತಡ, ಜೀರ್ಣಕ್ರಿಯೆರೋಗ, ಬೊಜ್ಜು, ಆಹಾರ ಹಾಗೂ ಔಷಧದ ಅಲರ್ಜಿಯಂತಹ ಹಲವು ಗಂಭೀರ ಕಾಯಿಲೆಗಳು ಹಾಗೂ ಮನೋದೈಹಿಕ ಸ್ಥಿತಿಗಳ ಹಿಂದಿರುವ ತಳಿವಿಜ್ಞಾನದ ಕಾರಣಗಳನ್ನು ಅರಿಯಬಹುದು. ಇದನ್ನಾಧರಿಸಿ ಆ ರೋಗಗಳನ್ನು ಸೂಕ್ತವಾಗಿ ನಿರ್ವಹಿಸಲು ಸಾಧ್ಯ.
ಎರಡನೆಯದು, ವ್ಯಕ್ತಿಯ ಗುರುತು ಪತ್ತೆಹಚ್ಚುವುದು. ವ್ಯಕ್ತಿಗಳ ನಡುವಿನ ಸಂಬಂಧ ಅರಿಯುವುದು, ಆಸ್ತಿ ಹಂಚಿಕೆ ನಿರ್ಣಯ, ಅಪರಾಧಿಗಳನ್ನು ಕಂಡುಹಿಡಿ ಯುವಂತಹ ಕಾನೂನಿನ ಆಯಾಮವಿರುವ ಸಂದರ್ಭ ಗಳಲ್ಲಿ ಈ ಪರೀಕ್ಷೆಗಳು ಸಹಾಯ ಮಾಡುತ್ತವೆ. ಮಗುವೊಂದರ ನೈಜ ತಂದೆ-ತಾಯಿ, ಬಂಧು-ಬಳಗ
ವನ್ನು ಗುರುತಿಸಲು ಅಥವಾ ದೇಶಕ್ಕೆ ವಲಸೆ ಬರುವವರ ನೈಜತೆಯನ್ನು ನಿಖರವಾಗಿ ಗುರುತಿಸಲೂ ಸಾಧ್ಯ.
ಮೂರನೆಯದು, ಈಗ ಸಮಸ್ಯೆಯಿಲ್ಲದೆಯೂ ಮುಂದೆ ಅನಾರೋಗ್ಯ ಕಾಡಬಾರದೆಂದು ಆಶಿಸಿ, ಭವಿಷ್ಯದಲ್ಲಿ ಸಂಭವಿಸಬಹುದಾದ ಅನಾರೋಗ್ಯದ ಬಗ್ಗೆ ಅರಿಯಲು ಸ್ವಯಂಪ್ರೇರಣೆಯಿಂದ ಕೈಗೊಳ್ಳುವ ‘ನೆಮ್ಮದಿ ಬಯಕೆ ಪರೀಕ್ಷೆ’ಗಳು. ಖಾಸಗಿ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ಈ ಮೂರು ಬಗೆಯ ಪರೀಕ್ಷೆಗಳು ಹಲವಾರು ಬಗೆಯ ವೈದ್ಯಕೀಯ, ಕಾನೂನು ಹಾಗೂ ನೈತಿಕ ಸವಾಲುಗಳನ್ನು ಈಗ ಸೃಷ್ಟಿಸುತ್ತಿವೆ. ಉದಾಹರಣೆಗೆ, ವಂಶವಾಹಿಯೊಂದರಲ್ಲಿ ಮ್ಯೂಟೇಶನ್ ಇದೆ ಎಂದಮಾತ್ರಕ್ಕೆ, ಮುಂದೆ ರೋಗ ಬರಲೇಬೇಕೆಂದೇನೂ ಇಲ್ಲ. ಹೀಗಾಗಿ, ಅನವಶ್ಯಕವಾಗಿ ಜೀನ್ ಟೆಸ್ಟಿಂಗ್ ಆಮಿಷಗಳಿಗೆ ಬಲಿಯಾಗದೆ ಜನರು ವಿವೇಕ ತೋರಬೇಕೆಂದು, ಸ್ವತಃ ಇದರ ತಜ್ಞೆಯಾಗಿರುವ ‘ಇಂಡಿಯನ್ ಅಕಾಡೆಮಿ ಆಫ್ ಮೆಡಿಕಲ್ ಜೆನೆಟಿಕ್ಸ್’ನ ಸಂಸ್ಥಾಪಕ ಅಧ್ಯಕ್ಷೆ ಡಾ. ಶುಭಾ ಫಡ್ಕೆ ಹೇಳುತ್ತಾರೆ. ಈ ಪ್ರಯೋಗಾಲಯಗಳ ಗುಣಮಟ್ಟವನ್ನು ನಿಯಂತ್ರಿಸುವ ಕಾನೂನಿನ ಚೌಕಟ್ಟು ಸಹ ಇನ್ನೂ ರೂಪಿತವಾಗಿಲ್ಲ. ಜೀನ್ ಟೆಸ್ಟಿಂಗ್ ವರದಿ ಆಧರಿಸಿ ವಿಮೆ ಕಂಪನಿಗಳು ವಿಮೆ ನಿರಾಕರಿಸುವ ಸಂದರ್ಭಗಳೂ ಉದ್ಭವಿಸುತ್ತಿದ್ದು, ಗ್ರಾಹಕರು ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ.
ಅಂತಿಮವಾಗಿ, ನೈತಿಕ ಸವಾಲುಗಳು. ವೈದ್ಯರ ಹಂಗಿಲ್ಲದೆ ಮುಕ್ತ ಮಾರುಟ್ಟೆಯಲ್ಲಿ ಈಗ ವಂಶವಾಹಿ ಪರೀಕ್ಷೆಗಳು ಗ್ರಾಹಕರಿಗೆ ಲಭ್ಯವಾಗುತ್ತಿವೆ. ಇದರ ಪರಿಣಾಮವೇನು? ವೈಯಕ್ತಿಕ ಮಾಹಿತಿಗಳು ದುರ್ಬಳಕೆ ಯಾದರೆ ಯಾರು ಹೊಣೆ? ಖಾಸಗಿ ಉದ್ಯಮಗಳ ಬಳಿಯಿರುವ ಈ ದತ್ತಾಂಶಗಳು ಅನರ್ಹರ ಕೈಗೆ ದೊರೆಯದಂತೆ ನೋಡಿಕೊಳ್ಳುವುದು ಹೇಗೆ? ಮಾನಸಿಕ ಒತ್ತಡ, ಲೈಂಗಿಕ ಗುಣಾವಗುಣಗಳು, ಕ್ಯಾನ್ಸರ್, ಮಧುಮೇಹ, ಮರೆವಿನ ಕಾಯಿಲೆಯಂತಹ, ಭವಿಷ್ಯದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳು ಈಗಲೇ ತಿಳಿದುಬಿಟ್ಟರೆ, ಅದರ ಪರಿಣಾಮವೇನಾದೀತು? ಅಂತಹ ಮಾಹಿತಿ ಸೋರಿಕೆಯಾದಲ್ಲಿ, ಆ ವ್ಯಕ್ತಿಯು ಎದುರಿಸುವ ಅಪಾಯಗಳೇನು? ಈ ಎಲ್ಲ ವೈದ್ಯಕೀಯ, ಕಾನೂನು ಹಾಗೂ ನೈತಿಕ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಸೂಕ್ತವಾದ ‘ವಂಶವಾಹಿ ಪರೀಕ್ಷೆ ನೀತಿ- ನಿಯಮಾವಳಿ’ಗಳನ್ನು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೀಘ್ರದಲ್ಲಿ ರೂಪಿಸಲೇಬೇಕಿದೆ.
ಇಷ್ಟಾಗಿಯೂ, ಇದನ್ನೂ ಮೀರಿದ ಗಂಭೀರ ಪ್ರಶ್ನೆಯೊಂದಿದೆ. ಛಿದ್ರವಾಗುತ್ತಿರುವ ನೈಸರ್ಗಿಕ ಪರಿಸರ ಹಾಗೂ ಹವಾಮಾನ ಬದಲಾವಣೆಯಿಂದಾಗಿ ದಿನಕ್ಕೊಂದು ಹೊಸ ಕಾಯಿಲೆ ಹುಟ್ಟುತ್ತಿದೆಯಲ್ಲವೇ? ಇದನ್ನು ನಿರ್ವಹಿಸುವ ಸಾಮೂಹಿಕ ಪ್ರಯತ್ನಗಳಿಗೆ ಬದಲಾಗಿ, ಕ್ಷಿಪ್ರ ಪರಿಹಾರವೆಂದು ತೋರುವ ವೈಯಕ್ತಿಕ ವಂಶವಾಹಿ ಪರೀಕ್ಷೆಯ ‘ಜೀನ್ ಜಾತಕ’ದ ಭ್ರಮೆಗೆ ಇಂದಿನ ತಲೆಮಾರು ಎಲ್ಲೆಮೀರಿ ಜಾರುತ್ತಿದೆಯೇ? ಚಿಂತಿಸಬೇಕಾದ ಸಂಗತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.