ADVERTISEMENT

ವಿಶ್ಲೇಷಣೆ | ಚುನಾವಣಾ ಅಖಾಡ ಮತ್ತು ಮಹಿಳಾ ದನಿ

ನಮ್ಮ ನೇತಾರರ ಮನಸ್ಸು ಸೂಕ್ಷ್ಮವಾಗಬೇಕು, ಹೃದಯ ಪರಿವರ್ತನೆ ಕಾಣಬೇಕು

ಸಿ.ಜಿ.ಮಂಜುಳಾ
Published 26 ಏಪ್ರಿಲ್ 2024, 19:16 IST
Last Updated 26 ಏಪ್ರಿಲ್ 2024, 19:16 IST
   
ಲೋಕಸಭಾ ಚುನಾವಣೆಗಾಗಿ ಮತದಾನದ ಮೊದಲ ಹಂತ ಮುಗಿದ ನಂತರ ಕೋಮುವಾದಿ ನೆಲೆಯಲ್ಲಿ ಮತದಾರರನ್ನು ವಿಭಜಿಸಲು ನಡೆದ ಯತ್ನಗಳು ನಮ್ಮ ರಾಜಕಾರಣದ ವಾಗ್ವಾದದ ಮಟ್ಟ ತಲುಪಿರುವ ಅಧೋಗತಿಗೆ ದ್ಯೋತಕ. ನೇಹಾ ಹತ್ಯೆ ಪ್ರಕರಣವು ರಾಜ್ಯದಲ್ಲಿ ಕೋಮುವಾದದ ರಾಜಕಾರಣಕ್ಕೆ ಎಲ್ಲಿಲ್ಲದ ಹುಮ್ಮಸ್ಸು ತಂದುಕೊಟ್ಟಿತು. ಈಗ ನಾವು ನೋಡುತ್ತಿರುವ ಆಕ್ರಮಣಕಾರಿ ರಾಜಕಾರಣದ ಚುನಾವಣಾ ಅಖಾಡದಲ್ಲಿ ಮಹಿಳೆಯ ದನಿ ಇಲ್ಲವೇ ಇಲ್ಲ ಎನ್ನುವಂತಿದೆ.

ಲೋಕಸಭಾ ಚುನಾವಣೆಗಾಗಿ ಮತದಾನದ ಮೊದಲ ಹಂತ ಮುಗಿದ ನಂತರ ಕೋಮುವಾದಿ ನೆಲೆಯಲ್ಲಿ ಮತದಾರರನ್ನು ವಿಭಜಿಸಲು ನಡೆದ ಯತ್ನಗಳು ನಮ್ಮ ರಾಜಕಾರಣದ ವಾಗ್ವಾದದ ಮಟ್ಟ ತಲುಪಿರುವ ಅಧೋಗತಿಗೆ ದ್ಯೋತಕ. ನೇಹಾ ಹತ್ಯೆ ಪ್ರಕರಣವು ರಾಜ್ಯದಲ್ಲಿ ಕೋಮುವಾದದ ರಾಜಕಾರಣಕ್ಕೆ ಎಲ್ಲಿಲ್ಲದ ಹುಮ್ಮಸ್ಸು ತಂದುಕೊಟ್ಟಿತು. ಈಗ ನಾವು ನೋಡುತ್ತಿರುವ ಆಕ್ರಮಣಕಾರಿ ರಾಜಕಾರಣದ ಚುನಾವಣಾ ಅಖಾಡದಲ್ಲಿ ಮಹಿಳೆಯ ದನಿ ಇಲ್ಲವೇ ಇಲ್ಲ ಎನ್ನುವಂತಿದೆ.

ಶುಕ್ರವಾರ (ಏ. 26) ಎರಡನೇ ಹಂತದಲ್ಲಿ 13 ರಾಜ್ಯಗಳಲ್ಲಿ ಮತದಾನ ನಡೆದ 88 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 1,192 ಅಭ್ಯರ್ಥಿಗಳಲ್ಲಿ ಬರೀ 100 ಮಂದಿ ಮಹಿಳೆಯರಿದ್ದರು. ಹಿಂದಿನ ಶುಕ್ರವಾರ (ಏ. 19) ಮೊದಲ ಹಂತದ ಮತದಾನ ನಡೆದ 102 ಲೋಕಸಭಾ ಕ್ಷೇತ್ರಗಳ 1,625 ಅಭ್ಯರ್ಥಿಗಳ ಪೈಕಿ 134 ಮಂದಿ ಮಾತ್ರ ಮಹಿಳೆಯರಿದ್ದರು. ಎಂದರೆ, ಮಹಿಳಾ ಅಭ್ಯರ್ಥಿಗಳ ಪ್ರಮಾಣ ಶೇಕಡ 8ರ ಮಟ್ಟದಲ್ಲೇ ಉಳಿದಿದೆ.

ಹೀಗಿದ್ದೂ ಅಧಿಕಾರದ ಗದ್ದುಗೆ ಹಿಡಿಯುವ ಸ್ಪರ್ಧೆಯಲ್ಲಿ ಬಿಗಿಯುತ್ತಿರುವ ಭಾಷಣಗಳಲ್ಲಿ ‘ಮಹಿಳೆ’ಯನ್ನು ಬೇಕಾಬಿಟ್ಟಿ ಎಳೆದುತರುತ್ತಿದ್ದಾರೆ ನಮ್ಮ ರಾಜಕೀಯ ನೇತಾರರು. ‘ಪ್ರಜಾಪ್ರಭುತ್ವದ ತಾಯಿ’ ಎಂದು ಭಾರತವನ್ನು ಬಣ್ಣಿಸುವ ನಮ್ಮ ಪ್ರಧಾನಿ ನರೇಂದ್ರ ಮೋದಿಯವರೂ ಇದಕ್ಕೆ ಹೊರತಾಗಲಿಲ್ಲ ಎಂಬುದು ಮಾತ್ರ ಖೇದಕರ. ‘ಬೇಟಿ ಬಚಾವೋ ಬೇಟಿ ಪಢಾವೋ’ ‘ನಾರಿ ಶಕ್ತಿ’, ‘ಮಹಿಳಾ ನೇತೃತ್ವದ ಅಭಿವೃದ್ಧಿ’ ಎಂದೆಲ್ಲಾ ಆಕರ್ಷಕ ಪದಪುಂಜಗಳಲ್ಲಿ ಸಕಾರಾತ್ಮಕವಾಗಿ ಮಹಿಳೆಯ ಸಬಲತೆ, ಶಕ್ತಿಯನ್ನು ಬಿಂಬಿಸುತ್ತಿದ್ದ ಪ್ರಧಾನಿಯವರು ‘ಮಂಗಳಸೂತ್ರವೂ ನಿಮ್ಮ ಬಳಿ ಉಳಿಯುವುದಿಲ್ಲ’ ಎಂದು ಹೇಳುತ್ತಾ ‘ಅಬಲೆ’ಯರಿಗೆ ತಾವೇ ರಕ್ಷಕನೆಂಬಂತೆ ಬಿಂಬಿಸಿಕೊಳ್ಳುವ ಯತ್ನ ನಡೆಸಿದ್ದಾರೆ. ಇನ್ನೂ ಎಷ್ಟು ಕಾಲ ಇಂತಹ ‘ಅನುಗ್ರಹಪೂರ್ವಕ’ವಾದ ‘ದೀನರಕ್ಷಾ ಶೌರ್ಯ’ದ ಮಾತುಗಳನ್ನು ಕೇಳಿಸಿಕೊಳ್ಳಬೇಕು ಭಾರತದ ಮಹಿಳೆ? ಸ್ವತಂತ್ರ ಅಸ್ಮಿತೆಯ ಮಹಿಳೆಯನ್ನು ನಮ್ಮ ರಾಜಕಾರಣಿಗಳ ರಾಜಕೀಯ ನಿರೂಪಣೆಗಳಲ್ಲಿ, ಪರಿಭಾಷೆಗಳಲ್ಲಿ ತರಲು ಇನ್ನೂ ಎಷ್ಟು ಕಾಲ ಬೇಕು?

ADVERTISEMENT

ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹಾಗೂ ಅವರ ಪತಿ ಚಿತ್ರನಟ ಶಿವರಾಜ್ ಕುಮಾರ್ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಸಂದರ್ಭದಲ್ಲಿ, ಬೆವರಿಳಿಸುವ ಬಿಸಿಲಿನಲ್ಲಿ ಹಣೆಯಲ್ಲಿನ ಕರಗಿದ ಕುಂಕುಮ ಒರೆಸಿಕೊಂಡ ವಿಡಿಯೊವನ್ನು ಮುಸ್ಲಿಮರ ಓಲೈಕೆಗೆ ಕುಂಕುಮ ಅಳಿಸಿಹಾಕಿಕೊಂಡವರು ಎಂಬರ್ಥದಲ್ಲಿ ತಿರುಚಿದಂತಹ ವಿಡಿಯೊ ವೈರಲ್ ಮಾಡಲಾಗಿತ್ತು. ಹಿಂದಿನ ವರ್ಷ ಮಾರ್ಚ್ 8ರ ಅಂತರರಾಷ್ಟ್ರೀಯ ಮಹಿಳಾ ದಿನದಂದೇ ಮಹಿಳೆಯೊಬ್ಬರನ್ನು ‘ಬೊಟ್ಟು ಯಾಕಿಟ್ಟಿಲ್ಲ? ಗಂಡ ಬದುಕಿದ್ದಾನೆ ತಾನೇ?’ ಎಂದೆಲ್ಲಾ ನಿಂದಿಸಿದ್ದ ಕೋಲಾರದ ಬಿಜೆಪಿಯ ಸಂಸದ ಎಸ್.ಮುನಿಸ್ವಾಮಿ ಅವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳದಿರುವುದು ಹೇಗೆ?

ಮಂಗಳಸೂತ್ರ, ಕುಂಕುಮ ಎಂದೆಲ್ಲಾ ಬಡಬಡಿಸಿದ ಹಾಗೆಯೇ ‘ನಾನೇನೂ ಬಳೆ ತೊಟ್ಟಿಲ್ಲ’ ಎಂದು ಪದೇಪದೇ ಪುರುಷ ರಾಜಕಾರಣಿಗಳು ಪಕ್ಷಾತೀತವಾಗಿ ‘ಪರಾಕ್ರಮ’ ಮೆರೆಯುವುದನ್ನೂ ನೋಡುತ್ತಿದ್ದೇವೆ. ಇದು ಗಂಡಸಿನ ರಕ್ಷಣೆಯಲ್ಲಿ ಇರಬೇಕಾದ ಅಬಲೆಯಾಗಿ ಹೆಣ್ಣನ್ನು ನೋಡುವ ಪಿತೃಸಂಸ್ಕೃತಿಯ ಅಭಿವ್ಯಕ್ತಿಯಲ್ಲದೆ ಮತ್ತೇನಲ್ಲ. ಹೀಗಾಗಿಯೇ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಲು ಮಹಿಳೆಗೆ ರಾಜ್ಯದಲ್ಲಿ ಸಿಕ್ಕಿರುವ ಅವಕಾಶವನ್ನೂ ಟೀಕಿಸುತ್ತಾ ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ‘ತಾಯಂದಿರು ದಾರಿ ತಪ್ಪುತ್ತಿದ್ದಾರೆ’ ಎಂಬಂಥ ಮಾತುಗಳನ್ನಾಡುತ್ತಾರೆ. ಇದರ ಹಿಂದಿರುವುದೂ ಇದೇ ಸಂಸ್ಕೃತಿ, ಗಂಡಾಳಿಕೆಯ ಮನಃಸ್ಥಿತಿ.

ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ, ಅಲೆದಾಟಗಳು ಮಹಿಳೆಗೆ ಪುರುಷನಷ್ಟು ಸುಲಭವಲ್ಲ. ಮನೆಯಿಂದ ಆಕೆ ಹೊರಬರಲು ಅನೇಕ ಅಡ್ಡಿ ಆತಂಕ, ತಾರತಮ್ಯಗಳು ಇವೆ. ಉಚಿತ ಬಸ್ ಪ್ರಯಾಣವು ದುಡಿಯುವ ಬಡ ಮಹಿಳೆಯರ ಆರ್ಥಿಕ ಸಂಕಷ್ಟವನ್ನು ಒಂದಿಷ್ಟು ಕಡಿಮೆ ಮಾಡಿದರೆ, ಮನೆಯೊಳಗೇ ಬಂದಿಯಾಗಿರುವ ಮಹಿಳೆಯರಿಗೂ ಹೊರ ಊರುಗಳಿಗೆ ಓಡಾಡಲು ಸ್ವಲ್ಪ ಸಹಕಾರಿಯಾಗಿದೆ. ಹೀಗಿರುವಾಗ, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಹಾಜರಿ ಹೆಚ್ಚಾಗುವುದನ್ನು ಸಹಿಸದಂತಹ ಮನಃಸ್ಥಿತಿ ಇಂದು ನಮ್ಮ ರಾಜಕೀಯ ರಂಗದಲ್ಲೂ ಪ್ರತಿಫಲಿಸುತ್ತಿದೆ. ಹೀಗಾಗಿಯೇ ರಾಜ್ಯ ವಿಧಾನಸಭೆಯಲ್ಲಿ ಶಾಸಕಿಯರ ಪ್ರಮಾಣ ನಾಚಿಕೆಗೇಡಿನ ಶೇ 4.5ರಷ್ಟು ಮಾತ್ರ ಇದೆ. ದಾವಣಗೆರೆಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಗಾಯತ್ರಿ ಸಿದ್ಧೇಶ್ವರ ಅವರು ‘ಅಡುಗೆ ಮಾಡೋಕೇ ಲಾಯಕ್’ ಎಂದು ಕಾಂಗ್ರೆಸ್‌ನ ಅತ್ಯಂತ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರು ಹೇಳಿದ ಮಾತಂತೂ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಗೆ ವಿರುದ್ಧವಾಗಿರುವ ಪೂರ್ವಗ್ರಹಗಳಿಗೆ ದ್ಯೋತಕ. ಇತ್ತೀಚಿನ ದಶಕದಲ್ಲಿ ಔದ್ಯೋಗಿಕ ಕ್ಷೇತ್ರದಲ್ಲೂ ಮಹಿಳೆಯ ಪಾಲ್ಗೊಳ್ಳುವಿಕೆ ಪ್ರಮಾಣ ಕುಸಿದಿದ್ದಕ್ಕೂ ಇದೇ ಪಿತೃಸಂಸ್ಕೃತಿ ಕಾರಣ ಎಂಬುದನ್ನು ಈಗಾಗಲೇ ಹಲವು ವಿಶ್ಲೇಷಣೆಗಳು ಹೇಳಿವೆ.

ಜಾತಿಭೇದ ಮಾತ್ರವಲ್ಲ, ಮಹಿಳೆಯನ್ನು ಪ್ರತ್ಯೇಕಿಸುವ ಮನಃಸ್ಥಿತಿಯನ್ನು ಹೋಗಲಾಡಿಸುವುದೂ ಮುಖ್ಯ ಎಂಬುದನ್ನು ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ ಹೇಳಿದ್ದರು. ‘ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿರುವ - ಜಾತಿ ಹಾಗೂ ಮಹಿಳೆ – ಈ ಎರಡು ಪ್ರತ್ಯೇಕತೆ ಅಥವಾ ಭೇದಭಾವವು ಭಾರತೀಯರ ಚೈತನ್ಯದ ಉಡುಗುವಿಕೆಗೆ ಕಾರಣವಾಗಿದೆ. ಈ ಭೇದಭಾವವು ಸಾಹಸ ಹಾಗೂ ಸಂತೋಷದ ಎಲ್ಲಾ ಸಾಮರ್ಥ್ಯಗಳನ್ನು ಕೊಲ್ಲುವ ಶಕ್ತಿ ಪಡೆದಿದೆ’ ಎಂದು ಲೋಹಿಯಾ ಹೇಳಿದ್ದರು. ಅವರು ಒಮ್ಮೆ ಹೀಗೆ ಬರೆದಿದ್ದಾರೆ: ‘ಒಂದು ದಿನ ಕಾಫಿ ಹೌಸ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದ ಜನರ ಗುಂಪಿನಲ್ಲಿ ನಾನೂ ಇದ್ದೆ. ಇಂತಹ ‘ಕಾಫಿ ಟಾಕ್’ಗಳೇ ಫ್ರೆಂಚ್ ಕ್ರಾಂತಿ ಹುಟ್ಟುಹಾಕಿದ್ದು ಎಂದಾಗ ನನಗೆ ತೀರಾ ಕೋಪ ಬಂತು. ಏಕೆಂದರೆ, ಆ ಗುಂಪಿನಲ್ಲಿ ನಮ್ಮ ಜೊತೆ ಒಬ್ಬ ಶೂದ್ರ ಇರಲಿಲ್ಲ, ಒಬ್ಬ ಮಹಿಳೆ ಇರಲಿಲ್ಲ.’

ಇಷ್ಟು ವರ್ಷಗಳ ನಂತರ, ‘ಆಜಾದಿ ಕಾ ಅಮೃತಕಾಲ’ದಲ್ಲಿದ್ದರೂ ಈ ದಿಸೆಯಲ್ಲಿ ನಾವು ಮಾಡಿರುವ ಸಾಧನೆ ಹೆಚ್ಚಿಲ್ಲ. ರಾಜಕೀಯದಲ್ಲಿ ಮಹಿಳೆ ಈಗಲೂ ಪ್ರತ್ಯೇಕಿಸಲ್ಪಟ್ಟಿದ್ದು ಹೊರಗಿದ್ದಾಳೆ. ಹೀಗಾಗಿ ರಾಜಕೀಯವು ಪುರುಷಮಯವಾಗಿದೆ. ಅಪ್ಪ, ಗಂಡ ಹೀಗೆ ಪುರುಷ ಬಂಧುತ್ವದ ಬಲವಿಲ್ಲದ ಮಹಿಳೆಗೆ ಚುನಾವಣಾ ರಾಜಕೀಯ ಪ್ರವೇಶವೇ ದುಸ್ತರ ಎನಿಸುವ ಸ್ಥಿತಿಯನ್ನು ನೋಡುತ್ತಿದ್ದೇವೆ. ಈಗಿನ ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಪ್ರಮಾಣ ಕೇವಲ ಶೇ 14ರಷ್ಟು. ‘ಲೋಹಿಯಾ ಅವರ ಶ್ರೀಮಂತ ಚಿಂತನೆಗಳು, ನಮ್ಮ ಸಮಾಜೋ-ರಾಜಕೀಯ ಚಿಂತನೆಗಳನ್ನು ರೂಪಿಸುವುದನ್ನು ಮುಂದುವರಿಸಿವೆ’ ಎಂದು 2018ರಲ್ಲಿ ರಾಮಮನೋಹರ ಲೋಹಿಯಾ ಜಯಂತಿ ಸಂದರ್ಭದಲ್ಲಿ ನರೇಂದ್ರ ಮೋದಿ ಹೇಳಿದ್ದರು. ನೆಹರೂ ಅವರ ಕಟು ಟೀಕಾಕಾರರಾದ ಮೋದಿಯವರು ಲೋಹಿಯಾ ಚಿಂತನೆಗಳನ್ನು ಉಲ್ಲೇಖಿಸುತ್ತಲೇ ಇರುತ್ತಾರೆ. ಆದರೆ, ಮಹಿಳಾ ಮೀಸಲು ಮಸೂದೆಯು, ‘ನಾರಿ ಶಕ್ತಿ ವಂದನಾ ಅಧಿನಿಯಮ’ ಎಂಬ ವಾಗಾಡಂಬರದಲ್ಲಿ ಸದ್ಯಕ್ಕೆ ನಗದೀಕರಿಸಿಕೊಳ್ಳಲು ಸಾಧ್ಯವಾಗದ ಚೆಕ್‌ನಂತೆ ನಮ್ಮ ಮುಂದೆ ಇದೆ ಅಷ್ಟೆ.

‘ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದ ಮೂಲಕ ಸಮುದಾಯದ ಪ್ರಗತಿಯನ್ನು ನಾನು ಅಳೆಯುತ್ತೇನೆ’ ಎಂದಿದ್ದರು ನಮ್ಮ ಸಂವಿಧಾನದ ಶಿಲ್ಪಿ ಬಿ.ಆರ್. ಅಂಬೇಡ್ಕರ್. ಐರೋಪ್ಯ ರಾಷ್ಟ್ರಗಳಿಗೂ ಮೊದಲೇ ಮಹಿಳೆಗೆ ಸಮಾನ ಮತದಾನದ ಹಕ್ಕು ಸಿಗಲು ಕಾರಣರಾದವರು ಅಂಬೇಡ್ಕರ್. ಮಹಿಳೆಯರ ಪ್ರಗತಿಗೆ ಭದ್ರ ಬುನಾದಿ ಹಾಕಿದ ಇಂತಹ ಮಹನೀಯರ ಚಿಂತನೆಗಳು ನಮ್ಮ ಚುನಾವಣಾ ರಾಜಕಾರಣದ ಸಂಕಥನಗಳಲ್ಲಿ ಕಾಣೆಯಾಗಿ ವಾಗ್ವಾದಗಳು ಕ್ಷುಲ್ಲಕೀಕರಣಗೊಂಡಿವೆ.

ಸಬಲೀಕರಣ ಎಂಬುದು ನಿರಂತರ ಪ್ರಕ್ರಿಯೆ. ಮಹಿಳಾ ಸಬಲೀಕರಣ ಎಂದರೆ ಅವಕಾಶಗಳ ಸಮಾನತೆ. ಸಾಮರ್ಥ್ಯ ಹೆಚ್ಚಿಸುವ ಯೋಜನೆ, ಕಾರ್ಯಕ್ರಮಗಳು ಸರ್ಕಾರದ ಹೊಣೆಗಾರಿಕೆಯೂ ಹೌದು ಎಂಬುದನ್ನು ನಮ್ಮ ರಾಜಕೀಯ ನೇತಾರರು ಅರಿತುಕೊಳ್ಳಲಿ. ಮಹಿಳೆಯರ ಬದುಕಿನಲ್ಲಿ ಪರಿವರ್ತನೆ ಬರಬೇಕೆಂದರೆ ಸಾಮಾಜಿಕ ರಚನೆಯ ಸ್ವರೂಪಗಳೂ ಬದಲಾಗಬೇಕು. ಇದಕ್ಕಾಗಿ ಶಾಸನ, ನೀತಿಗಳನ್ನು ರೂಪಿಸುವ ನಮ್ಮ ನೇತಾರರ ಮನಸ್ಸು ಸೂಕ್ಷ್ಮವಾಗಬೇಕು, ಭಾಷೆ, ನುಡಿಗಟ್ಟು ಬದಲಾಗಬೇಕು. ಹೃದಯ ವೈಶಾಲ್ಯದ ಜೊತೆಗೆ ನೇತಾರರಲ್ಲಿ ತೀವ್ರತರದಲ್ಲಿ ಹೃದಯ ಪರಿವರ್ತನೆಯೂ ಆಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.