ADVERTISEMENT

ವಿಶ್ಲೇಷಣೆ | ಯಾರಾಗಬಲ್ಲರು ಹೆಚ್ಚು ಬಲಿಷ್ಠ?

ಅಮೆರಿಕ, ಚೀನಾ ಅಥವಾ ರಷ್ಯಾ ಅಲ್ಲ...

ರುಚಿರ್ ಶರ್ಮಾ
Published 22 ಜುಲೈ 2020, 19:31 IST
Last Updated 22 ಜುಲೈ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಶ್ಚಿಮ ಜಗತ್ತಿನ ಪ್ರಮುಖ ಆರ್ಥಿಕ ಶಕ್ತಿಗಳಲ್ಲಿ ಒಂದಾದ ಆ ದೇಶಕ್ಕೆ ಕೊರೊನಾ ವೈರಾಣು ತಡವಾಗಿ ಕಾಲಿರಿಸಿತು. ಅಲ್ಲಿನ ಸರ್ಕಾರವು ವಿಳಂಬ ಧೋರಣೆ ಅನುಸರಿಸುವ ಬದಲು, ಅಗತ್ಯ ಕ್ರಮಗಳನ್ನು ಬೇಗನೆ ತೆಗೆದುಕೊಂಡಿತು. ವೈರಾಣು ಹರಡುವುದನ್ನು ತಡೆಯಲು ಪರೀಕ್ಷೆ ನಡೆಸುವ, ಸಂಪರ್ಕಿತರನ್ನು ಪತ್ತೆ ಮಾಡುವ ವ್ಯವಸ್ಥೆಯನ್ನು ಅದು ಸಿದ್ಧವಾಗಿಟ್ಟುಕೊಂಡಿತ್ತು. ಅದು ತನ್ನಲ್ಲಿ ಸಾವಿನ ಪ್ರಮಾಣವನ್ನು ಪಶ್ಚಿಮದ ಇತರ ಯಾವುದೇ ಕೈಗಾರಿಕಾ ಶಕ್ತಿಗಿಂತ ಕಡಿಮೆ ಇರಿಸಿತು. ವೈರಾಣು ಹರಡುವಿಕೆಯನ್ನು ತಡೆಯಲು ಸಾಧ್ಯವಾಗಿದ್ದರಿಂದ, ಲಾಕ್‌ಡೌನ್‌ ಕೂಡ ಅಲ್ಲಿ ಸೀಮಿತವಾಗಿತ್ತು, ಕಿರು ಅವಧಿಯದ್ದಾಗಿತ್ತು. ಇದರಿಂದಾಗಿ ಅಲ್ಲಿ ನಿರುದ್ಯೋಗದ ಪ್ರಮಾಣ ಶೇಕಡ 6ರಷ್ಟನ್ನು ದಾಟಲಿಲ್ಲ.

ಅಂತರರಾಷ್ಟ್ರೀಯ ಸಮುದಾಯದಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದಂತೆಯೇ, ಈ ದೇಶದ ನಾಯಕಿಯ ಜನಪ್ರಿಯತೆಯ ಪ್ರಮಾಣ ಶೇಕಡ 40ರಷ್ಟು ಇದ್ದಿದ್ದು, ಶೇಕಡ 70ಕ್ಕೆ ಏರಿತು. ಇವೆಲ್ಲ ಆಗಿದ್ದು ಏಂಜೆಲಾ ಮರ್ಕೆಲ್ ಅವರ ಆಡಳಿತ ಇರುವ ಜರ್ಮನಿಯಲ್ಲಿ. ಮರ್ಕೆಲ್ ಅವರ ಹೆಚ್ಚುತ್ತಿರುವ ಜನಪ್ರಿಯತೆಯು ಅಲ್ಲಿನ ತೀವ್ರ ಬಲಪಂಥೀಯರನ್ನೂ ತೀವ್ರ ಎಡಪಂಥೀಯರನ್ನೂ ರಾಜಕೀಯವಾಗಿ ಪಕ್ಕಕ್ಕೆ ತಳ್ಳಿಬಿಟ್ಟಿದೆ. ಜರ್ಮನಿಯ ಕಾರ್ಮಿಕ ಸಂಘಟನೆಗಳು ತಮ್ಮ ಮಾಲೀಕರ ಜೊತೆ ನಿಂತು, ಕಾರ್ಖಾನೆಗಳಲ್ಲಿ ಕೆಲಸದ ವಾತಾವರಣ ಸುರಕ್ಷಿತ
ವಾಗಿರುವಂತೆ, ಕಾರ್ಖಾನೆಗಳು ಮುಚ್ಚದಂತೆ ನೋಡಿಕೊಂಡಿವೆ.

ಸಾಂಕ್ರಾಮಿಕ ಹರಡುವುದನ್ನು ತಡೆಯಲು ಮರ್ಕೆಲ್ ನೇತೃತ್ವದ ಸರ್ಕಾರವು ಜರ್ಮನಿಯ ಎಲ್ಲ ರಾಜ್ಯಗಳ ಜೊತೆ ಸಹಕಾರದಿಂದ ಕೆಲಸ ಮಾಡಿದೆ. ಐರೋಪ್ಯ ಒಕ್ಕೂಟದ ಸದಸ್ಯರ ಜೊತೆಗೂಡಿ, ಈ ವೈರಾಣುವಿನಿಂದಾಗಿ ತೀವ್ರ ಹಾನಿ ಅನುಭವಿಸಿದ ದೇಶಗಳಿಗಾಗಿ ನಿಧಿಯೊಂದನ್ನು ಸ್ಥಾಪಿಸಲು ಕೂಡ ಕೆಲಸ ಮಾಡುತ್ತಿದೆ. ಜರ್ಮನಿ ತೋರುತ್ತಿರುವ ಶಕ್ತಿಯು, ಅದನ್ನು ಈ ಸಾಂಕ್ರಾಮಿಕ ಪರಿಹಾರವಾದ ನಂತರದ ಜಗತ್ತಿನಲ್ಲಿ ವೇಗವಾಗಿ ಬೆಳೆಯುವ ಸಾಧ್ಯತೆ ಹೆಚ್ಚಿರುವ ದೇಶವನ್ನಾಗಿಸಿದೆ.

ADVERTISEMENT

2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ರಾಷ್ಟ್ರಗಳ ಅರ್ಥವ್ಯವಸ್ಥೆಗಳು ತಮ್ಮ ಗಡಿಗಳನ್ನು ಮುಚ್ಚಲು ಆರಂಭಿಸಿದವು. ಈ ಪ್ರಕ್ರಿಯೆಗೆ ಕೊರೊನಾ ವೈರಾಣು ವೇಗ ತಂದುಕೊಟ್ಟಿದೆ. ಬೆಳವಣಿಗೆ ಪ್ರಮಾಣ ಉಳಿಸಿಕೊಳ್ಳಲು ಸರ್ಕಾರಗಳು ಹೆಚ್ಚು ಸಾಲ ಮಾಡುತ್ತಿವೆ, ಆರ್ಥಿಕ ಜೀವನದ ಮೇಲೆ ಹೆಚ್ಚಿನ ನಿಯಂತ್ರಣ ಹೇರುತ್ತಿವೆ, ವಿದೇಶಿ ವ್ಯವಹಾರಗಳ ಮೇಲೆ ಹೊಸ ನಿರ್ಬಂಧಗಳನ್ನು ತರುತ್ತಿವೆ. ಜನ ಕೆಲಸ ಮಾಡುವುದು, ಆಟವಾಡುವುದು ಹಾಗೂ ಖರೀದಿ ಮಾಡುವುದು ಇಂಟರ್ನೆಟ್ ಮೂಲಕ ಆಗಿರುವ ಕಾರಣ ವಿಶ್ವದ ಅರ್ಥ ವ್ಯವಸ್ಥೆಯ ವಾಸ್ತವೋಪಮ (ವರ್ಚುವಲ್) ಅಂಗ ಮಾತ್ರ ಬೆಳವಣಿಗೆ ಕಾಣುತ್ತಿದೆ.

ತಾಂತ್ರಿಕವಾಗಿ ಪ್ರಾಬಲ್ಯ ಹೊಂದಿದ್ದರೂ ಅಮೆರಿಕ ಮತ್ತು ಚೀನಾ ದೇಶಗಳು ಸಾಲ ಎತ್ತುವುದು ಹೆಚ್ಚುತ್ತಿದೆ. ಅಲ್ಲದೆ, ಅಲ್ಲಿನ ಸರ್ಕಾರಗಳು ಈ ಸಾಂಕ್ರಾಮಿಕವನ್ನು ಸರಿಯಾಗಿ ನಿಭಾಯಿಸಲಿಲ್ಲ ಎಂಬ ಟೀಕೆ ವ್ಯಾಪಕವಾಗಿದೆ. ವೈರಾಣು ಹರಡುವಿಕೆ ತಡೆಯುವಲ್ಲಿ ವಿಯೆಟ್ನಾಂನ ಪ್ರಯತ್ನ ಭರವಸೆ ಮೂಡಿಸುತ್ತಿದೆ. ರಷ್ಯಾ ಅರ್ಥವ್ಯವಸ್ಥೆ ಆಸಕ್ತಿ ಮೂಡಿಸುವಂತೆ ಇದೆ. ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ತಮ್ಮ ದೇಶವನ್ನು ವಿದೇಶಿ ಆರ್ಥಿಕ ಒತ್ತಡಗಳಿಂದ ಮುಕ್ತಗೊಳಿಸುವ ಕೆಲಸವನ್ನು ವರ್ಷಗಳಿಂದ ಮಾಡುತ್ತಿದ್ದಾರೆ. ಜಾಗತೀಕರಣಕ್ಕೆ ವಿರುದ್ಧವಾಗಿ ಸಾಗುತ್ತಿರುವ ಜಗತ್ತಿನಲ್ಲಿ ಈ ರಕ್ಷಣಾತ್ಮಕ ನಡೆಯು ಒಳ್ಳೆಯ ಫಲ ಕೊಡಬಹುದು.

ಆದರೆ, ಇವೆಲ್ಲವುಗಳ ನಡುವೆ ಜರ್ಮನಿ ಹೆಚ್ಚಿನ ಒಳಿತನ್ನು ಕಾಣುವ ಸಾಧ್ಯತೆಯಿದೆ. ಸಾಂಕ್ರಾಮಿಕಕ್ಕೆ ಅದು ಪ್ರತಿಕ್ರಿಯಿಸಿದ ರೀತಿಯು ಆ ದೇಶಕ್ಕೆ ಅದಾಗಲೇ ಇದ್ದ ಶಕ್ತಿಗಳನ್ನು ತೋರಿಸಿಕೊಟ್ಟಿದೆ: ದಕ್ಷ ಸರ್ಕಾರ, ಕಡಿಮೆ ಸಾಲ, ಶ್ರೇಷ್ಠ ಕೈಗಾರಿಕಾ ಸಂಸ್ಕೃತಿ, ಅಮೆರಿಕ ಮತ್ತು ಚೀನಾದ ಅಂತರ್ಜಾಲ ಕಂಪನಿಗಳು ಪ್ರಬಲವಾಗಿದ್ದರೂ ಸ್ಥಳೀಯವಾಗಿ ತಂತ್ರಜ್ಞಾನ ಕಂಪನಿಗಳನ್ನು ಸೃಷ್ಟಿಸುವ ಶಕ್ತಿ. ಈಚೆಗೆ ಶುರುವಾಗಿರುವ ಉದ್ಯೋಗನಷ್ಟಗಳು ಶಾಶ್ವತವಾಗಬಹುದು ಎಂದು ಇತರ ರಾಷ್ಟ್ರಗಳು ತಲೆಬಿಸಿ ಮಾಡಿಕೊಂಡಿದ್ದರೂ ಜರ್ಮನಿಯ ಉದ್ಯೋಗಿಗಳಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆ ಹೆಚ್ಚಿರಲಿಲ್ಲ. ಇದಕ್ಕೆ ಕಾರಣ, ತಾತ್ಕಾಲಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಅಲ್ಲಿನ ಸರ್ಕಾರವು ಕಂಪನಿಗಳಿಗೆ ಹಣಕಾಸಿನ ನೆರವು ಒದಗಿಸುವ ವ್ಯವಸ್ಥೆಯನ್ನು ಶತಮಾನದ ಹಿಂದಿನಿಂದಲೇ ಹೊಂದಿರುವುದು.

ಈ ವ್ಯವಸ್ಥೆಯ ವ್ಯಾಪ್ತಿಯನ್ನು ಹಿಗ್ಗಿಸಲು ಜರ್ಮನಿಗೆ ಸಾಧ್ಯವಾಯಿತು. ಇದಕ್ಕೆ ಕಾರಣ ಆ ದೇಶದ ಮಿತವ್ಯಯ ಸಂಸ್ಕೃತಿ. ಮರ್ಕೆಲ್ ಅವರು ಯುರೋಪಿನ ಇತರ ರಾಷ್ಟ್ರಗಳ ಬಳಿ ಮಿತವ್ಯಯದ ಬಗ್ಗೆ ಮಾತನಾಡುತ್ತಿದ್ದಾಗ, ಆ ದೇಶಗಳ ಪ್ರತಿನಿಧಿಗಳು ಮರ್ಕೆಲ್ ಅವರನ್ನು ಜಿಪುಣ ಮಹಿಳೆ ಎಂದು ಆಡಿಕೊಳ್ಳುತ್ತಿದ್ದರು. ಆದರೆ, ಅವರು ಮರ್ಕೆಲ್ ಅವರನ್ನು ಕಂಡು ನಗುವ ಕೆಲಸವನ್ನು ಈಗ ಮಾಡುತ್ತಿಲ್ಲ. ಸರ್ಕಾರದ ಬಳಿ ಮಿಗತೆ ಹಣ ಇದ್ದ ಹೊತ್ತಿನಲ್ಲಿ ಜರ್ಮನಿಗೆ ಸಾಂಕ್ರಾಮಿಕದ ಸಮಸ್ಯೆ ಎದುರಾಯಿತು. ಈ ಕಾರಣಕ್ಕಾಗಿ ಅದು ಕುಟುಂಬಗಳಿಗೆ ನೇರವಾಗಿ ಹಣಕಾಸಿನ ನೆರವು ಒದಗಿಸಿ, ತೆರಿಗೆ ಕಡಿತ ಮಾಡಿ, ವಾಣಿಜ್ಯೋದ್ಯಮಗಳಿಗೆ ಸಾಲ ಒದಗಿಸಿ, ಜಿಡಿಪಿಯ ಶೇಕಡ 55ರಷ್ಟು ಮೊತ್ತವನ್ನು ಇತರ ನೆರವುಗಳ ರೂಪದಲ್ಲಿ ನೀಡಿ ಅರ್ಥವ್ಯವಸ್ಥೆಗೆ ನೆರವಾಗಲು ಸಾಧ್ಯವಾಯಿತು.

ಜರ್ಮನಿ ಘೋಷಿಸಿರುವುದು ವಿಶ್ವದ ಅತ್ಯಂತ ಉದಾರಿ ಪರಿಹಾರ ಪ್ಯಾಕೇಜ್. ಇದೇ ಮೊದಲ ಬಾರಿಗೆ ಎಂಬಂತೆ, ನೆರೆಹೊರೆಯ ದೇಶಗಳಿಗೆ ತುರ್ತು ಪರಿಹಾರ ನಿಧಿ ಒದಗಿಸಲು ಜರ್ಮನಿಗೆ ಸಾಧ್ಯವಾಯಿತು, ಅದನ್ನು ನೀಡಲು ಆ ದೇಶ ಸಿದ್ಧವಾಯಿತು.

ಹೀಗಿದ್ದರೂ ಜರ್ಮನಿಯು ಸಮತೋಲನದ ಬಜೆಟ್‌ ಬಗ್ಗೆ ತನಗಿರುವ ಬದ್ಧತೆಯನ್ನು ಬಿಟ್ಟುಕೊಟ್ಟಿಲ್ಲ. ಜರ್ಮನಿ ಮಾಡಲಿರುವ ಬಹುತೇಕ ವೆಚ್ಚಗಳು ಅದರ ಉಳಿತಾಯದ ಹಣದಿಂದ ಆಗಲಿವೆ. ಆದರೂ ಜರ್ಮನಿ ಸರ್ಕಾರದ ಸಾಲದ ಪ್ರಮಾಣವು ಒಟ್ಟು ಜಿಡಿಪಿಯ ಶೇಕಡ 82ರಷ್ಟಕ್ಕೆ ಹೆಚ್ಚುವ ನಿರೀಕ್ಷೆ ಇದೆ. ಇದು ಅಮೆರಿಕ ಮತ್ತು ಇತರ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಹೊಂದಿರುವ ಸಾಲದ ಹೊರೆಯ ಪ್ರಮಾಣಕ್ಕಿಂತ ಹೆಚ್ಚು.

ಜರ್ಮನಿ ಈಗ ಕೈಗಾರಿಕಾ ರಫ್ತಿನ ಮೇಲೆ ಅವಲಂಬಿತ ಆಗಿರುವುದು ಅಪಾಯಕಾರಿ ಮಟ್ಟ ತಲುಪಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡಿರುವ ಜರ್ಮನಿ, ತನ್ನ ದೇಶದ ಮುಂಚೂಣಿ ರಫ್ತುದಾರರನ್ನು ಆಧುನಿಕಗೊಳಿಸುವ ಯತ್ನಕ್ಕೆ ಮುಂದಾಗಿದೆ. ಅದು, ಈಗಲೂ ಲಾಭದಾಯಕ ಆಗಿರುವ ಪೆಟ್ರೋಲ್ ಹಾಗೂ ಡೀಸೆಲ್‌ ಚಾಲಿತ ಕಾರು ತಯಾರಿಕೆಯ ಬದಲು ವಿದ್ಯುತ್‌ ಬಳಸಿ ಚಲಿಸುವ ಕಾರು ತಯಾರಿಸುವಂತೆ ತನ್ನಲ್ಲಿನ ಕಾರು ತಯಾರಕರನ್ನು ಒತ್ತಾಯಿಸುತ್ತಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಶಕ್ತಿಯುತ ಆಗಲು ಅದು ಯತ್ನ ನಡೆಸಿದೆ. ಅಮೆರಿಕವು ಮೀಸಲಿಡುವಷ್ಟೇ ಹಣವನ್ನು ಜರ್ಮನಿ ಕೂಡ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿಗೆ ಮೀಸಲಿಡುತ್ತಿದೆ. ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ಇರುವಂತಹ ಔದ್ಯಮಿಕ ವಾತಾವರಣ ಸೃಷ್ಟಿಸುವ ದೂರಗಾಮಿ ಆಲೋಚನೆಗಳು ಕೂಡ ಜರ್ಮನಿಗೆ ಇವೆ. ಸಾಂಪ್ರದಾಯಿಕ ಕೈಗಾರಿಕೋದ್ಯಮಗಳನ್ನು ಡಿಜಿಟಲ್ ಜಗತ್ತಿಗೆ ಕರೆತರುವ ಸ್ಟಾರ್ಟ್‌ಅಪ್‌ಗಳಿಗೆ ಜರ್ಮನಿ ನೆರವು ಪ್ರಕಟಿಸಿದೆ.

ಜರ್ಮನಿಯದ್ದು ಸಾಂಪ್ರದಾಯಿಕ ಸಮಾಜ. ಆದರೆ, ಈ ದೇಶ ಬದಲಾವಣೆಗಳನ್ನು ಕಾಣುವುದು ಬಹಳ ನಿಧಾನವಾಗಿ ಎಂದು ಹೇಳುವವರ ಮಾತು ಸುಳ್ಳಾಗಿರುವುದೂ ಇದೆ. 2000ನೇ ಇಸವಿಯ ಹೊತ್ತಿನಲ್ಲಿ ಜರ್ಮನಿಯನ್ನು ‘ಯುರೋಪಿನ ರೋಗಿ’ ಎಂದು ಕರೆಯುತ್ತಿದ್ದರು. ಆಗ, ಕಾರ್ಮಿಕ ಮಾರುಕಟ್ಟೆಯಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಂಡ ಜರ್ಮನಿ, ಆ ಖಂಡದ ಅತ್ಯಂತ ಸ್ಥಿರವಾದ ಅರ್ಥವ್ಯವಸ್ಥೆ ಎಂಬ ಹೆಗ್ಗಳಿಕೆ
ಯನ್ನು ತನ್ನದಾಗಿಸಿಕೊಂಡಿತು. ಈ ಸಾಂಕ್ರಾಮಿಕವು ಡಿಜಿಟಲೀಕರಣ ಪ್ರಕ್ರಿಯೆಗೆ ವೇಗ ನೀಡುತ್ತಿದೆ, ಜಗತ್ತಿನ ಸಾಲವನ್ನು ಹೆಚ್ಚಿಸುತ್ತಿದೆ. ಇಂತಹ ಸಂದರ್ಭದಲ್ಲಿ ಜರ್ಮನಿಯು ಈ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರುವ ಸರ್ಕಾರವನ್ನು ಹೊಂದಿದೆ.

- ದಿ ನ್ಯೂಯಾರ್ಕ್‌ ಟೈಮ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.