ಬೆಂಗಳೂರು: ಕಡ್ಲೆಕಾಳು, ಹುರುಳಿ, ಹೆಸರು ಬೇಳೆಯಿಂದ ಕೃತಕವಾಗಿ ಕೋಳಿ ಮಾಂಸದ ಸ್ವಾದದ ‘ತುಣುಕು’ಗಳನ್ನು (chicken nuggets) ತಯಾರಿಸಬಹುದೇ? ಹೌದು, ಮುಂಬರುವ ಕೆಲವೇ ವರ್ಷಗಳಲ್ಲಿ ಕೃತಕ ಮಾಂಸದ ತುಣುಕುಗಳು ಮಾರುಕಟ್ಟೆಗೆ ಬರಲಿವೆ!
ಜಾಗತಿಕ ತಾಪಮಾನ ಮತ್ತು ಅದರಿಂದ ವಿಶ್ವದಲ್ಲಿ ಆಗುತ್ತಿರುವ ಅನಾಹುತಗಳಿಗೆ ತೆರೆ ಎಳೆಯಲು ಕೃತಕ ಮಾಂಸ ಸೇವಿಸಬೇಕಾಗಿ ಬರಬಹುದು. ಆದರೆ, ಮಾಂಸದ ಸ್ವಾದ ಮತ್ತು ರುಚಿಗೆ ಮೋಸವಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಗೆ ಪಶು ಸಂಗೋಪನೆಯೂ ಒಂದು ಕಾರಣ ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ; ಪ್ರಾಣಿಜನ್ಯ ಪ್ರೊಟೀನ್‌ಗೆ ಪರ್ಯಾಯವಾಗಿ ಸಸ್ಯಜನ್ಯ ಪ್ರೊಟೀನ್ ಅಭಿವೃದ್ಧಿಗಾಗಿ ಹಲವು ದೇಶಗಳ ಪ್ರಯೋಗಾಲಯಗಳಲ್ಲಿ ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.
ಭಾರತದಲ್ಲೂ ಹಲವು ಐಐಟಿಗಳು, ವಿಜ್ಞಾನದ ಪ್ರಯೋಗಾಲಯಗಳಲ್ಲಿ ಕೃತಕವಾಗಿ ಮಾಂಸದ ಸ್ವಾದ ಮತ್ತು ಪ್ರೊಟೀನ್ ಸೃಷ್ಟಿಸುವ ಕಾರ್ಯ ನಡೆದಿದೆ. ಮೈಸೂರಿನ ಸಿಎಫ್‌ಟಿಆರ್‌ಐನಲ್ಲೂ ಇಂತಹದ್ದೊಂದು ಪ್ರಯತ್ನ ನಡೆಸಿರುವ ಬಗ್ಗೆ ಸಂಸ್ಥೆಯ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕೃಷಿ ಮತ್ತು ಆಹಾರ ವಿಷಯಕ್ಕೆ ಸಂಬಂಧಿಸಿದ ಗೋಷ್ಠಿಯಲ್ಲಿ ಅವರು ಭಾಗವಹಿಸಿದ್ದರು.
‘ಹವಾಮಾನ ಬದಲಾವಣೆಯನ್ನು ನಿಯಂತ್ರಣಕ್ಕೆ ತರಲು ಪ್ರಾಣಿಜನ್ಯ ಪ್ರೊಟೀನ್‌ಗೆ ಪರ್ಯಾಯವಾಗಿ ಸಸ್ಯಜನ್ಯ ಪ್ರೊಟೀನ್ ಬಳಕೆಗೆ ತರುವುದು ಅತ್ಯಗತ್ಯ. ನಮ್ಮ ಸಂಸ್ಥೆಯಲ್ಲಿಬೇಳೆ– ಕಾಳುಗಳಿಂದ ಪ್ರೊಟೀನ್ ಅಭಿವೃದ್ಧಿಪಡಿಸುವ ಕಾರ್ಯ ನಡೆದಿದೆ. ಸಸ್ಯಜನ್ಯ ಪ್ರೊಟೀನ್ ತಯಾರಿಕೆಯ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗುವ ಅವಕಾಶ ಭಾರತಕ್ಕೆ ಇದೆ’ ಎಂದು ಅವರು ಹೇಳಿದರು.
‘ಒಂದು ಹಸುವಿಗೆ ಒಂದು ಕೆ.ಜಿ ಹುಲ್ಲು ಅಥವಾ ಸಸ್ಯವನ್ನು ನೀಡಿದರೆ, ಅದರಿಂದ ಉತ್ಪಾದನೆ ಆಗುವಪ್ರೊಟೀನ್ ಕೇವಲ ನಾಲ್ಕು ಗ್ರಾಂಗಳು. ಈ ಸಸ್ಯಗಳು ಅಥವಾ ಹುಲ್ಲು ಬೆಳೆಯಲು ಬೇಕಾಗುವ ಭೂಮಿ ಮತ್ತು ನೀರು ಅತ್ಯಧಿಕ. ಅದು ಅತ್ಯಂತ ದುಬಾರಿ ವ್ಯವಹಾರ. ಪ್ರಾಣಿಗಳ ಮಾಂಸಕ್ಕಿಂತ ಸಸ್ಯಜನ್ಯ ಪ್ರೊಟೀನ್ ಅನ್ನೇ ಮಾಂಸದ ಸ್ವಾದದ ರೀತಿಯಲ್ಲಿ ರೂಪಾಂತರಿಸುವುದಕ್ಕೆ ಕಡಿಮೆ ವೆಚ್ಚವಾಗುತ್ತದೆ. ಇದರಿಂದ ಪರಿಸರಕ್ಕೂ ಹಾನಿ ಆಗುವುದಿಲ್ಲ’ ಎಂದರು.
‘ನಮ್ಮ ದೇಶದಲ್ಲಿ ವಿಭಿನ್ನ ರೀತಿಯ ಕಾಳುಗಳನ್ನು ಬೆಳೆಯುತ್ತೇವೆ. ಇವುಗಳನ್ನು ಬಳಸಿ ಪ್ರೊಟೀನ್ ಅಭಿವೃದ್ಧಿಪಡಿಸಬಹುದು.ಹಲವು ಬಗೆಯ ಕಾಳುಗಳು ಬಳಕೆಯೇ ಆಗದೇ ವ್ಯರ್ಥವಾಗುತ್ತಿದೆ. ಇದನ್ನು ಪ್ರೊಟೀನ್ ತಯಾರಿಕೆಗೆ ಬಳಸಬಹುದು. ಕೆಲವು ಬಗೆಯ ಪಾಚಿಗಳನ್ನೂ ಬಳಸಬಹುದು. ಸಸ್ಯಜನ್ಯ ಪ್ರೊಟೀನ್ ಅಭಿವೃದ್ಧಿಯಲ್ಲಿ ಯಶಸ್ವಿಯಾದರೆ, ಇಡೀ ವಿಶ್ವಕ್ಕೇ ಪೂರೈಸುವಷ್ಟು ಸಾಮರ್ಥ್ಯವಿದೆ. ಈ ದಿಸೆಯಲ್ಲಿ ಹಲವು ನವೋದ್ಯಮಗಳು, ಸಂಶೋಧನಾ ಸಂಸ್ಥೆಗಳು ಕಾರ್ಯ ನಿರತವಾಗಿವೆ’ ಎನ್ನುತ್ತಾರೆ ಅನ್ನಪೂರ್ಣ ಸಿಂಗ್.
ಮುಖ್ಯವಾದ ಸಮಸ್ಯೆ ಎಂದರೆ, ಬೀಜಗಳು ಮತ್ತು ಕಾಳುಗಳಲ್ಲಿರುವ ಪ್ರೊಟೀನ್ ದೇಹದೊಳಗೆ ಬೇಗನೇ ಕರಗುವುದಿಲ್ಲ. ಏಕೆಂದರೆ, ಇದರಲ್ಲಿ ಅಧಿಕ ಪ್ರಮಾಣದ ಆಣ್ವಿಕವಿರುತ್ತದೆ. ಪ್ರಾಣಿ ಜನ್ಯ ಪ್ರೊಟೀನ್ ಬೇಗನೇ ಕರಗುತ್ತದೆ. ಪ್ರಾಣಿಗಳು ಸಸ್ಯಗಳನ್ನು ಸೇವಿಸಿದ ಬಳಿಕ ಅತಿ ಸುಲಭವಾಗಿ ಪ್ರೊಟೀನ್ ಆಗಿ ಮಾರ್ಪಾಡಾಗುವ ವ್ಯವಸ್ಥೆಯನ್ನು ಒಳಗೊಂಡಿವೆ. ಪ್ರಾಣಿಜನ್ಯ ಪ್ರೊಟೀನ್‌ನಂತೆ ಸಸ್ಯಜನ್ಯ ಪ್ರೊಟೀನ್ ಕೂಡ ಮಾನವ ದೇಹದಲ್ಲಿ ಸುಲಭವಾಗಿ ಜೀರ್ಣವಾಗುವಂತೆ ಮಾಡುವುದು ಒಂದು ಪ್ರಮುಖ ಸವಾಲು ಎಂದು ಹೇಳಿದರು.
‘ನಮ್ಮ ಸಂಸ್ಥೆಯಲ್ಲಿ ಕಡಳೆಕಾಳು, ಹುರುಳಿ, ಹೆಸರು ಬೇಳೆಯನ್ನು ಬಳಸಿ ಸಸ್ಯಜನ್ಯ ಪ್ರೊಟೀನ್ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಲ್ಲಿ ಸಾಕಷ್ಟು ಯಶಸ್ವಿಯೂ ಸಿಕ್ಕಿದೆ. ಕೋಳಿ ಮಾಂಸದ ತುಣುಕುಗಳಂತೆ ಮಾರ್ಪಡಿಸುವ ಕಾರ್ಯವೂ ನಡೆದಿದೆ. ಅದರ ಸ್ವಾದವನ್ನು ಸೇರಿಸುವ ಕೆಲಸ ಆಗಬೇಕಿದೆ’ ಎಂದರು.
ತಣ್ಣೀರಿನಲ್ಲಿ ಹಿಟ್ಟು ಕಲೆಸಿ ಬಿಸಿ ರಾಗಿ ಮುದ್ದೆ!
ರಾಗಿ ಮುದ್ದೆಯನ್ನು ಸುಲಭವಾಗಿ ಮತ್ತು ತ್ವರಿತವಾಗಿ ತಯಾರಿಸಲು ಅನುಕೂಲವಾಗುವ ವಿಶೇಷ ರೀತಿಯಲ್ಲಿ ರಾಗಿ ಹಿಟ್ಟನ್ನು ಅಭಿವೃದ್ಧಿಪಡಿಸಲಾಗಿದೆ. ಈ ಹಿಟ್ಟನ್ನು ತಣ್ಣೀರಿನಲ್ಲಿ ಕಲೆಸಿ ಮುದ್ದೆಯ ರೂಪಕೊಟ್ಟು, ಇಡ್ಲಿಯಂತೆ 5 ರಿಂದ 10 ನಿಮಿಷ ಬೇಯಿಸಿದರೆ ಬಿಸಿ ಬಿಸಿ ಮುದ್ದೆ ತಯಾರು! ನಗರದ ಗಡಿಬಿಡಿ ಜೀವನದಲ್ಲಿ ಕೆಲವರಿಗೆ ಮುದ್ದೆ ತಿನ್ನಲು ಇಷ್ಟವಿದ್ದರೂ ಮಾಡಲು ಸಮಯವಿರುವುದಿಲ್ಲ. ಇವರಿಗಾಗಿ ಈ ಹಿಟ್ಟನ್ನು ತಯಾರಿಸಲಾಗಿದೆ. ಈ ಹಿಟ್ಟು ಮಾರುಕಟ್ಟೆಗೆ ಬಿಡುಗಡೆ ಸಿದ್ಧವಾಗಿದ್ದು, ತಯಾರಿಕೆಗೆ ಯಾವುದೇ ಕಂಪನಿ ಮುಂದೆ ಬಂದರೆ, ಲೈಸೆನ್ಸ್ ನೀಡಲಾಗುವುದು ಎಂದು ಶ್ರೀದೇವಿ ಅನ್ನಪೂರ್ಣಸಿಂಗ್ ತಿಳಿಸಿದರು.
‘ದೇಶದಲ್ಲಿ ಹೂಡಿಕೆ ಸ್ನೇಹಿ ವಾತಾವರಣ’
ಸುಸ್ಥಿರ ಮತ್ತು ಶಾಂತಿಯುತ ವಾತಾವರಣವನ್ನು ಹೂಡಿಕೆದಾರರು ಬಯಸುತ್ತಾರೆ. ಈಗ ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಅಂತಹ ವಾತಾವರಣ ಇದೆ. ಇಂಧನ, ಆಹಾರ ಮತ್ತು ಭದ್ರತಾ ವಿಚಾರಗಳು ಹೂಡಿಕೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಹೇರಳವಾದ ಇಂಧನ ಸಂಪನ್ಮೂಲ ಇರುವ ರಾಷ್ಟ್ರಗಳಲ್ಲಿ ಅಸ್ಥಿರತೆ ಇದೆ. ಯುದ್ಧದಿಂದ ಆಹಾರ ಧಾನ್ಯಗಳ ಸಮಸ್ಯೆ ಕೆಲವೆಡೆ ಇದೆ. ಆದರೆ, ಭಾರತದಲ್ಲಿ ಅಂತಹ ಯಾವ ಸಮಸ್ಯೆಗಳೂ ಇಲ್ಲ. ಚೀನಾ ಮತ್ತು ಯುರೋಪ್‌ನಿಂದ ಹೂಡಿಕೆದಾರರು ಕಾಲ್ತೆಗೆಯುತ್ತಿದ್ದಾರೆ. ಅಂತಹ ಹೂಡಿಕೆದಾರರನ್ನು ಆಕರ್ಷಿಸುವ ಕೆಲಸ ಆಗಬೇಕಿದೆ. ಕಾನೂನುಗಳ ಸರಳೀಕರಣ, ಸುಲಲಿತ ವಹಿವಾಟು, ಹೂಡಿಕೆ ಸ್ನೇಹಿ ಆಡಳಿತದ ಮೂಲಕ ಭಾರತವು ಹೂಡಿಕೆದಾರರ ನೆಚ್ಚಿನ ಆಯ್ಕೆಯ ತಾಣವಾಗುತ್ತಿದೆ. ಕರ್ನಾಟಕವು ದೇಶದ ಕೈಗಾರಿಕಾ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡುತ್ತಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ದೇಶದಲ್ಲೇ ಹೆಚ್ಚು ಯಶಸ್ಸು ಸಾಧಿಸಿದೆ. ಕೇಂದ್ರ ಸರ್ಕಾರದ ನೀತಿಗಳಿಗೆ ಪೂರಕವಾಗಿ ಕರ್ನಾಟಕ ಸರ್ಕಾರವೂ ನಡೆಯುತ್ತಿರುವುದರಿಂದ ಇದು ಸಾಧ್ಯವಾಗಿದೆ
- ನಿರ್ಮಲಾ ಸೀತಾರಾಮನ್,ಕೇಂದ್ರ ಹಣಕಾಸು ಸಚಿವೆ
---
‘ಇಲ್ಲಿ ಹೂಡಿಕೆ ಮಾಡುವವರು ಬುದ್ಧಿವಂತರು’
ಕರ್ನಾಟಕದಲ್ಲಿ ಕೌಶಲವುಳ್ಳ ಮಾನವ ಸಂಪನ್ಮೂಲ ಲಭ್ಯವಿದೆ. ಅತ್ಯುತ್ತಮ ತಂತ್ರಜ್ಞಾನ ಮತ್ತು ಕೈಗಾರಿಕೆಗಳ ಜತೆ ಸಮನ್ವಯವೂ ಚೆನ್ನಾಗಿದೆ. ಇಲ್ಲಿ ಹೂಡಿಕೆ ಮಾಡುವವರು ಬುದ್ಧಿವಂತರು. ಜಗತ್ತಿನ ಬೇರೆ ಬೇರೆ ದೇಶಗಳ ಉದ್ಯಮಿಗಳು ಇಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿರುವುದು ಹಲವು ಬಾರಿ ನನ್ನ ಅನುಭವಕ್ಕೆ ಬಂದಿದೆ. ಕರ್ನಾಟಕದಲ್ಲಿರುವ ಮೂಲಸೌಕರ್ಯ, ಉತ್ತಮವಾದ ಸಾರಿಗೆ ಸಂಪರ್ಕ, ಉದ್ಯಮಸ್ನೇಹಿ ವಾತಾವರಣ ಇದಕ್ಕೆ ಕಾರಣ. ಇಲ್ಲಿನ ಸ್ಥಳೀಯ ಕಲೆ ಮತ್ತು ಪರಂಪರೆ ಕುರಿತು ಕಡಿಮೆ ವೆಚ್ಚದಲ್ಲಿ ನಿರ್ಮಿಸಿರುವ ‘ಕಾಂತಾರ’ ಸಿನಿಮಾ ಹತ್ತು ಪಟ್ಟು ಹೆಚ್ಚು ಸಂಪಾದಿಸಿದೆ. ಇದು ಯಶಸ್ವಿ ಹೂಡಿಕೆಗೆ ಒಂದು ಮಾದರಿ
- ಪೀಯೂಷ್ ಗೋಯಲ್,ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ
---
‘ಗಣಿಯಲ್ಲಿ ಹೂಡಿಕೆಗೆ ಅವಕಾಶ’
ದೇಶದಲ್ಲಿ ಕಲ್ಲಿದ್ದಲು ಸೇರಿದಂತೆ ಗಣಿ ಕ್ಷೇತ್ರದಲ್ಲಿ ಹೂಡಿಕೆಗೆ ಹೆಚ್ಚು ಅವಕಾಶಗಳಿವೆ. ಹೂಡಿಕೆದಾರರು ಈ ಕ್ಷೇತ್ರದತ್ತ ಆಸಕ್ತಿ ತೋರಬೇಕು. ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆ ಆರಂಭವಾಗಿದೆ. ಅತ್ಯುತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. ಗಣಿ ಕ್ಷೇತ್ರದಿಂದ ದೇಶದ ಜಿಡಿಪಿಗೆ ಶೇ 2.5ರಷ್ಟು ಕೊಡುಗೆ ಬರುವಂತಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಇನ್ನಷ್ಟು ಗಣಿಗಳ ಹರಾಜು ನಡೆಯಲಿದೆ
- ಪ್ರಲ್ಹಾದ ಜೋಶಿ,ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.