ADVERTISEMENT

ಬೆಂಗಳೂರಿನ ನವೋದ್ಯಮದ ನೂತನ ಪ್ರಯತ್ನ: ಮೆಕ್ಕೆಜೋಳದ ಪರಿಸರ ಸ್ನೇಹಿ ಬ್ಯಾಗ್‌

ಇನ್ವೆಸ್ಟ್ ಕರ್ನಾಟಕ

ಸಚ್ಚಿದಾನಂದ ಕುರಗುಂದ
Published 2 ನವೆಂಬರ್ 2022, 19:45 IST
Last Updated 2 ನವೆಂಬರ್ 2022, 19:45 IST
ಮೆಕ್ಕೆಜೋಳದಿಂದ ತಯಾರಿಸಿರುವ ಜೈವಿಕ ಬ್ಯಾಗ್‌
ಮೆಕ್ಕೆಜೋಳದಿಂದ ತಯಾರಿಸಿರುವ ಜೈವಿಕ ಬ್ಯಾಗ್‌   

ಬೆಂಗಳೂರು: ಪ್ಲಾಸ್ಟಿಕ್‌ ರೀತಿಯಲ್ಲೇ ಕಾಣುವ ಈ ಬ್ಯಾಗ್‌ಪರಿಸರ ಸ್ನೇಹಿ.ಮೆಕ್ಕೆಜೋಳದಿಂದ ಬ್ಯಾಗ್‌ಗಳನ್ನು ತಯಾರಿಸಿ ಹಲವು ಕಂಪನಿಗಳ ಉತ್ಪನ್ನಗಳ ಪ್ಯಾಕೇಜಿಂಗ್‌ಗೆ ಪೂರೈಸಲಾಗುತ್ತಿದೆ.

ಬೆಂಗಳೂರಿನ ನವೋದ್ಯಮ‘ಇಕೊ365’ ಕಂಪನಿ ಇಂತಹ ವಿನೂತನ ಪ್ರಯತ್ನ ಕೈಗೊಂಡಿದೆ.ಜಾಗತಿಕ ಹೂಡಿಕೆದಾರರ ಸಮಾವೇಶದ ಪ್ರದರ್ಶನದಲ್ಲಿ ಈ ಜೈವಿಕ ಪ್ಲಾಸ್ಟಿಕ್‌ ಬ್ಯಾಗ್‌ ಗಮನಸೆಳೆಯುತ್ತಿದೆ.

’ರಾಸಾಯನಿಕ ಮುಕ್ತ ಜೈವಿಕ ಪ್ಲಾಸ್ಟಿಕ್‌ ಬ್ಯಾಗ್‌ ಇದಾಗಿದ್ದು, ಮಣ್ಣಿನಲ್ಲಿ ಸುಲಭವಾಗಿ ಕೊಳೆಯುತ್ತದೆ. ಇದರಿಂದ, ಪರಿಸರಕ್ಕೆ ಯಾವುದೇ ರೀತಿ ಧಕ್ಕೆಯಾಗುವುದಿಲ್ಲ. ಒಂದು ಬಾರಿ ಮಣ್ಣಿನಲ್ಲಿ ಕರಗಿದಾಗ ಸಸ್ಯಗಳಿಗೆ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ’ ಎಂದು ಕಂಪನಿ ಪ‍್ರತಿಪಾದಿಸಿದೆ.

ADVERTISEMENT

‘ಎರಡು ವರ್ಷಗಳಿಂದ ಈ ಬ್ಯಾಗ್‌ಗಳನ್ನು ತಯಾರಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ. ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದಿಲ್ಲ. ಆದಿತ್ಯ ಬಿರ್ಲಾ ಗ್ರೂಪ್‌,ಫ್ಲಿಪ್‌ಕಾರ್ಟ್‌, ಸ್ವಿಗ್ಗಿ,ಮಿಂತ್ರಾ, ಅಮೆಝಾನ್‌, ಮೈಂಡ್‌ಟ್ರೀ, ಡೆಲ್‌, ಎಬಿಬಿ, ಮ್ಯಾಕ್‌ಡೊನಾಲ್ಡ್‌ ಸೇರಿದಂತೆ ಹಲವು ಕಂಪನಿಗಳಿಗೆ ಬ್ಯಾಗ್‌ಗಳನ್ನು ಪೂರೈಸುತ್ತಿದ್ದೇವೆ’ ಎಂದು ಕಂಪನಿಯ ಪ್ರತಿನಿಧಿ ಮಿತೇಶ್‌ ಸುರಾಣ ವಿವರಿಸುತ್ತಾರೆ.

‌‘ಬಟ್ಟೆಗಳು, ಕಸ ಹಾಕಲು ಸೇರಿದಂತೆ ದಿನನಿತ್ಯದ ಬಳಕೆಗೆ ವಿವಿಧ ರೀತಿಯ ಬ್ಯಾಗ್‌ಗಳು ಲಭ್ಯ. ಗ್ರಾಹಕರ ಬೇಡಿಕೆಯನ್ನು ಪರಿಗಣಿಸಿ ವಿವಿಧ ರೀತಿ ಬ್ಯಾಗ್‌ಗಳನ್ನು ಸಹ ತಯಾರಿಸುತ್ತೇವೆ. ವಾರ್ಷಿಕ 1,800 ಮೆಟ್ರಿಕ್‌ ಟನ್‌ ಉತ್ಪಾದನೆ ಸಾಮರ್ಥ್ಯವನ್ನು ಕಂಪನಿ ಹೊಂದಿದೆ. ಜತೆಗೆ, 25ಸಾವಿರ ಚದರ ಅಡಿಯಷ್ಟು ಜಾಗವನ್ನು ಜೈವಿಕ ಪ್ಲಾಸ್ಟಿಕ್‌ ಅನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ಮೀಸಲಿರಿಸಲಾಗಿದೆ. ನಮ್ಮ ಉತ್ಪನ್ನಗಳನ್ನು ಕೇಂದ್ರೀಯ ಪೆಟ್ರೊಕೆಮಿಕಲ್‌ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಐಪಿಇಟಿ) ಹಾಗೂ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ಪ್ರಮಾಣೀಕರಿಸಿವೆ’ ಎಂದು ಅವರು ಹೇಳುತ್ತಾರೆ.

ವಿಮಾನ ತಯಾರಿಸಲು ಹೂಡಿಕೆದಾರರ ನಿರೀಕ್ಷೆ: ವೈಮಾಂತರಿಕ್ಷ ತಜ್ಞರು ಬೆಂಗಳೂರಿನಲ್ಲಿ 1997ರಲ್ಲಿ ಆರಂಭಿಸಿದ ‘ಜೆನ್‌ಸೆರ್‌’ ಕಂಪನಿ ವೈಮಾನಿಕ ಕ್ಷೇತ್ರದಲ್ಲಿ ವಿವಿಧ ಸೇವೆಗಳನ್ನು ಒದಗಿಸುತ್ತಿದೆ.

ಈಗ ಏಳು ಸೀಟುಗಳ ವಿಮಾನದ ವಿಶಿಷ್ಟ ವಿನ್ಯಾಸವನ್ನು ಈ ಕಂಪನಿಯ ಅಂಗಸಂಸ್ಥೆ ‘ಅಂಗಾಸ್‌’ ರೂಪಿಸಿದೆ. ಹೂಡಿಕೆದಾರರು ಆಸಕ್ತಿ ತೋರಿಸಿದರೆ ಸಹಭಾಗಿತ್ವದಲ್ಲಿ ವಿಮಾನಗಳನ್ನು ತಯಾರಿಸಲಾಗುವುದು ಎಂದು ಕಂಪನಿಯ ಪ್ರತಿನಿಧಿ ತಿಳಿಸಿದರು.

ಗಮನಸೆಳೆದ ಚಳ್ಳಕೆರೆ ಎಣ್ಣೆ

ದೇಶಿಯವಾಗಿ ತಯಾರಿಸಿದ ‘ಚಳ್ಳಕೆರೆ ನಟ್ಸ್‌’ ಎನ್ನುವ ಶೇಂಗಾ ಎಣ್ಣೆ ಸಹ ಪ್ರದರ್ಶನದಲ್ಲಿ ಗಮನಸೆಳೆಯಿತು. ಈ ಎಣ್ಣೆಯನ್ನು ಸ್ಥಳೀಯವಾಗಿ ಬೆಳೆಯುವ ’ಗೆಜ್ಜೆ ಕಡಲೆಕಾಯಿ’ ಎನ್ನುವ ವಿಶೇಷ ನಾಟಿ ತಳಿಯ ಬೀಜಗಳಿಂದ ತಯಾರಿಸಲಾಗಿದೆ.

ಮರದ ಗಾಣದ ಮೂಲಕ ಸಾಂಪ್ರದಾಯಿಕ ಪದ್ಧತಿಯಲ್ಲಿ ಈ ಎಣ್ಣೆಯನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಸಿದ್ದೇಶ್ವರಣದುರ್ಗದ ಶ್ರೀ ಲಕ್ಷ್ಮಿ ರಂಗನಾಥ್ ನ್ಯಾಚುರಲ್‌ ಪ್ರಾಡಕ್ಟ್ಸ್‌ ತಯಾರಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.