ADVERTISEMENT

ಸಾಸಿವೆಯಷ್ಟು ಸುಖಕ್ಕಾಗಿ...

ಈಗಿನ ಸ್ಥಿತಿಯು ಶಿಕ್ಷಣ, ಅಭಿವೃದ್ಧಿ, ಆರ್ಥಿಕತೆಯ ಮರುಚಿಂತನೆಗೆ ನಮ್ಮನ್ನು ಪ್ರೇರೇಪಿಸುವುದೇ?

ಜಿ.ಎಸ್.ಜಯದೇವ
Published 3 ಏಪ್ರಿಲ್ 2020, 20:00 IST
Last Updated 3 ಏಪ್ರಿಲ್ 2020, 20:00 IST
   
""

ಮೈಸೂರಿನ ಜೆಎಸ್‍ಎಸ್ ಸಭಾಂಗಣದಲ್ಲಿ ಆರ್ಥಿಕ ತಜ್ಞೆ ಡಾ. ಗೀತಾ ಗೋಪಿನಾಥನ್ ಅವರ ಭಾಷಣ ನಡೆದಿತ್ತು. ಸುವರ್ಣಭಾಷಣ ಮಾಲೆಯಡಿ ನಡೆದ ಅನೇಕ ಭಾಷಣಗಳಲ್ಲಿ ಇದೂ ಒಂದು. ಜಾಗತೀಕರಣ ಮತ್ತು ಅಭಿವೃದ್ಧಿಯಿಂದಾಗಿ, ವಿಮಾನದ ಬಿಡಿ ಭಾಗಗಳನ್ನು ಜಗತ್ತಿನ ನೂರಾರು ದೇಶಗಳು ಹೇಗೆ ತಯಾರು ಮಾಡುತ್ತವೆ; ಇವುಗಳನ್ನು ಒಂದು ದೇಶಕ್ಕೆ ತರಿಸಿಕೊಂಡು, ಅಲ್ಲಿ ವಿಮಾನವನ್ನು ಹೇಗೆ ತಯಾರಿಸಲಾಗುತ್ತದೆ ಎಂಬ ವಿಷಯವನ್ನು ಜಾಗತೀಕರಣದ ಅನುಕೂಲಗಳನ್ನು ವಿವರಿಸಬಹುದಾದ ಮಾದರಿಯಾಗಿ ನಮ್ಮ ಮುಂದಿಟ್ಟರು.

ಜಾಗತೀಕರಣದಿಂದಾಗಿ ಸಂಪತ್ತಿನ ಧ್ರುವೀಕರಣವಾಗಿದೆ, ಕೆಲವೇ ಶ್ರೀಮಂತರ ಮುಷ್ಟಿಯಲ್ಲಿ ಜಗತ್ತಿನ ಅರ್ಧದಷ್ಟು ಸಂಪತ್ತು ಇದೆಯೆಂದು ಒಪ್ಪಿಕೊಂ ಡರೂ, ಒಟ್ಟಾರೆಯಾಗಿ ಜಗತ್ತಿನ ಬಡತನರೇಖೆ ಮೇಲೆ ಬಂದಿದೆ, ಬಡಜನರ ಆರ್ಥಿಕ ಸಾಮರ್ಥ್ಯ ಹಿಂದಿಗಿಂತ ಹೆಚ್ಚಾಗಿದೆ ಎಂಬುದು ಈ ಮಂಡನೆಯ ಸಾರಾಂಶ.

ಜಾಗತೀಕರಣದ ಫಲವಾಗಿ ಖಂಡಾಂತರ ವಿಮಾನಯಾನ ಸಾಧ್ಯವಾಗಿದೆ ನಿಜ. ಇದರ ಜೊತೆಜೊತೆಗೇ ಕೊರೊನಾ ವೈರಾಣುಗಳೂ ಜಗತ್ತಿನಾದ್ಯಂತ ವಿತರಣೆಯಾಗುತ್ತ ಜಗತ್ತನ್ನೇ ತಲ್ಲಣಗೊಳಿಸುತ್ತಿವೆ. ಕೇವಲ ನೂರು ವರ್ಷದ ಹಿಂದಷ್ಟೇ ಕಂಡುಹಿಡಿದ ವಿಮಾನ ಈಗ ಬೃಹತ್‍ ಉದ್ಯಮವಾಗಿ ಬೆಳೆದು ನಿಂತಿದೆ. ಒಂದು ಅಂದಾಜಿನ ಪ್ರಕಾರ, ಜಗತ್ತಿನಲ್ಲಿ ಇಂದು 39,000 ವಿಮಾನಗಳಿವೆ. ಪ್ರಯಾಣಿಕರು ಹಾಗೂ ಸರಕುಗಳನ್ನು ಸಾಗಿಸುವ ವಿಮಾನಗಳ ಸಂಖ್ಯೆ 23,000. ಉಳಿದವು ಮಿಲಿಟರಿ ಇತ್ಯಾದಿಗಳಿಗೆ ಬಳಸುವ ವಿಮಾನಗಳು. ಜಗತ್ತಿನ 780 ಕೋಟಿ ಜನರ ಪೈಕಿ ಎಷ್ಟು ಮಂದಿ ವಿಮಾನಗಳಲ್ಲಿ ಹಾರಾಡುತ್ತಾರೆ? ಅಮೆರಿಕ, ಚೀನಾ, ಇಂಗ್ಲೆಂಡ್ ಮತ್ತು ಜರ್ಮನಿ ದೇಶಗಳ ಜನ ಜಗತ್ತಿನ್ನಲ್ಲೇ ಅತಿ ಹೆಚ್ಚು ವಿಮಾನಯಾನ ಮಾಡುವವರು. ಒಂದು ಅಂದಾಜಿನ ಪ್ರಕಾರ, ಜಗತ್ತಿನ ಶೇಕಡ 6 ಭಾಗದಷ್ಟು ಶ್ರೀಮಂತರು ವಿಮಾನಯಾನಿಗಳು. ಇದರ ಫಲವಾಗಿ ಇಂದು ಜಗತ್ತಿನ ಶೇಕಡ 90 ಭಾಗದಷ್ಟು ಜನ ಕೊರೊನಾ ಸೋಂಕಿನ ನೆರಳಲ್ಲಿ ನರಳುತ್ತಿದ್ದಾರೆ.

ADVERTISEMENT

‘ಮನುಷ್ಯ ತನ್ನ ನಿಜವಾದ ಅವಶ್ಯಕತೆಗಳನ್ನು ಪೂರೈಸಿಕೊಂಡು ತೃಪ್ತನಾಗುವುದನ್ನು, ಸ್ವಯಂಪೂರ್ಣನಾಗುವುದನ್ನು ಕಲಿಯಬೇಕು; ಅವನಿಗೆ ಈ ನಿಯಂತ್ರಣ ಸಾಧ್ಯವಾಗದೇ ಇದ್ದರೆ ತನ್ನನ್ನೇ ತಾನು ಕಾಪಾಡಿಕೊಳ್ಳಲಾರ’ ಎಂಬ ಗಾಂಧೀಜಿಯ ಮಾತು ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ. ವಿಮಾನಯಾನದಂತೆ ಜಾಗತೀಕರಣ ಸಾಧ್ಯ ಮಾಡಿರುವ ಅನೇಕ ಅನುಕೂಲಗಳು ಮನುಷ್ಯನ ನಿಜವಾದ ಅವಶ್ಯಕತೆಗಳೇ ಅಲ್ಲ. ಬಾಂಬ್ ಹಾಕುವ ಯುದ್ಧವಿಮಾನಗಳ ವಿಧ್ವಂಸಕ ಸಾಮರ್ಥ್ಯವು ವಿಮಾನದ ಎಲ್ಲ ಅನುಕೂಲಗಳನ್ನೂ ನಿರಾಕರಿಸುವಂತೆ ಮಾಡುತ್ತದೆ.

ಮನುಷ್ಯನು ಯಂತ್ರಗಳನ್ನು ಮನರಂಜನೆಯ ಆಟಿಕೆಗಳಂತೆ ಬೇಜವಾಬ್ದಾರಿಯಿಂದ ಬಳಸುತ್ತಿರುವುದೇ ಈ ಎಲ್ಲ ಅನಾಹುತಗಳಿಗೆ ಕಾರಣ. ಈಗ ನಾವು ಶ್ರೀಮಂತರನ್ನು ಮಾತ್ರ ದೂಷಿಸಿ ಪ್ರಯೋಜನವಿಲ್ಲ. ಏಕೆಂದರೆ ಬಹುಸಂಖ್ಯಾತ ಬಡ- ಮಧ್ಯಮ ವರ್ಗದವರಿಗೂ ಈ ಸುಖಲೋಲುಪತೆಯ ತೃಷೆಯು ಕುದಿವ ಕಡಲಿನಂತಾಗಿದೆ. ‘ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ...’ ಎಂಬ ಅಲ್ಲಮನ ಮಾತಿನಂತಾಗಿದೆ ನಮ್ಮ ಇಂದಿನ ಪರಿಸ್ಥಿತಿ.

ಈ ಅವಘಡಗಳ ಸರಣಿಯು ನಮ್ಮ ಶಿಕ್ಷಣ, ಅಭಿವೃದ್ಧಿ ಮತ್ತು ಆರ್ಥಿಕತೆಯ ಬಗ್ಗೆ ಮರುಚಿಂತನೆ ಮಾಡುವಂತೆ ನಮ್ಮನ್ನು ಪ್ರೇರೇಪಿಸುತ್ತದೆಯೇ? ಇದೊಂದು ಕ್ಲಿಷ್ಟ ಪ್ರಶ್ನೆ. ಮನುಷ್ಯ ನಿಸ್ಸಂದೇಹವಾಗಿ ಈ ಕೊರೊನಾ ಪೀಡೆಯಿಂದ ಪಾರಾಗುತ್ತಾನೆ, ನಿಜ. ಈಗ ಸಂಭವಿಸುತ್ತಿರುವ ಹೃದಯವಿದ್ರಾವಕ ಘಟನೆಗಳು ಜಾಣ ಮನುಷ್ಯನ ಅಂತಃಕರಣವನ್ನು ಕಲಕಿ, ತನ್ನ ಆದ್ಯತೆಗಳು, ತಾನು ಬದುಕುತ್ತಿರುವ ರೀತಿನೀತಿಗಳನ್ನು ಪುನರ್‌ಪರಿಶೀಲನೆ ಮಾಡುವಂತೆ ಮಾಡುತ್ತವೆಯೇ? ಈ ಪ್ರಶ್ನೆಗೆ ಉತ್ತರ ಸುಲಭವಲ್ಲ. ನಮ್ಮ ಶಾಲಾ ಶಿಕ್ಷಣದಿಂದ ಹಿಡಿದು ಹಾರ್ವರ್ಡ್‌ ವಿಶ್ವವಿದ್ಯಾಲಯದ ತನಕ ಶಿಕ್ಷಣ ಸಂಸ್ಥೆಗಳು ಬಂಡವಾಳಶಾಹಿಗಳ, ಬಹುರಾಷ್ಟ್ರೀಯ ಕಂಪನಿಗಳ ಪ್ರತ್ಯಕ್ಷ ಅಥವಾ ಪರೋಕ್ಷ ಹಿಡಿತದಲ್ಲಿವೆ.

ಈ ಕಂಪನಿ ಕೃಪಾಪೋಷಿತ ಶಿಕ್ಷಣ ಸಂಸ್ಥೆಗಳು ತಮ್ಮ ಮಾರುಕಟ್ಟೆ ವಸ್ತುಗಳ ಬಿಕರಿಗಾಗಿ, ಆರ್ಥಿಕ ಗುರಿಗಳಿಗಾಗಿ ಶಿಕ್ಷಣ ಕೊಡುವುದಲ್ಲದೆ ಮತ್ತೇನು ಮಾಡಬಲ್ಲವು? ಕೈಗಾರಿಕೆಗಳ ಮೂಲಕ ಹೆಚ್ಚು ಹೆಚ್ಚು ಉತ್ಪಾದನೆ ಮತ್ತು ಮಾರಾಟ ಇದರ ಮೂಲ ತತ್ವ. ಕೈಗಾರಿಕೀಕರಣದಲ್ಲಿ ಅಂತರ್ಗತವಾಗಿರುವ ಕೆಡುಕನ್ನು ಗಾಂಧೀಜಿ ಗುರುತಿಸಿದರು. ಮನುಷ್ಯನಿಗಾಗಿ ಆರ್ಥಿಕತೆಯೋ ಅಥವಾ ಆರ್ಥಿಕತೆಗಾಗಿ ಮನುಷ್ಯನೋ? ಈ ಪ್ರಶ್ನೆಯನ್ನು ಗಾಂಧೀಜಿ ಜೀವನದುದ್ದಕ್ಕೂ ಚಿಂತಿಸಿದರು, ಧ್ಯಾನಿಸಿದರು.

ಆರ್ಥಿಕ ಸುಸ್ಥಿತಿಯು ಮನುಷ್ಯನ ನಿಜವಾದ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಬೇಕು. ಮನುಷ್ಯನಿಗಾಗಿ ವ್ಯವಸ್ಥೆಯೇ ಹೊರತು ಒಂದು ವ್ಯವಸ್ಥೆ ಹೇಗೋ ಬೆಳೆದುಬಂದಿದೆ ಎಂಬ ಕಾರಣಕ್ಕೆ ಮನುಷ್ಯ ತನ್ನ ಜೀವನದ ಮಹತ್ವವನ್ನೇ ಮನಗಾಣದೆ ಆ ವ್ಯವಸ್ಥೆಗೆ ಅನುಗುಣವಾದ ಅಸ್ಮಿತೆ- ಸಭ್ಯತೆಯನ್ನು ಅಳವಡಿಸಿಕೊಳ್ಳಬೇಕೇ? ಶಿಕ್ಷಣವು ಈ ಅನುಕರಣೆಯ ವಿರುದ್ಧ ಒಂದು ಬಂಡಾಯಪ್ರಜ್ಞೆ ಚಿಗುರುವಂತೆ ಮಾಡಿದರೆ, ಅದನ್ನು ನಾವು ನಿಜವಾದ ಶಿಕ್ಷಣ ಎನ್ನಬಹುದು. ವಿಮಾನಗಳ ಹಾರಾಟಕ್ಕೆ ಪೂರಕವಾಗಿ ಬೆಳೆದು ತುತ್ತತುದಿಗೆ ಬಂದುನಿಂತಿರುವ ನಮ್ಮ ಇಂದಿನ ಶಿಕ್ಷಣ ಮತ್ತು ಆರ್ಥಿಕತೆಯು ಕೊರೊನಾ ಮಹಾಮಾರಿಯನ್ನು ತಂದಿಟ್ಟಿದೆ. ಕೆಲವರ ವೈಭವಕ್ಕಾಗಿ ಹಲವರು ಬಲಿಯಾಗಬೇಕಾಗಿದೆ.

ಅಸಮಾನತೆ ಹುಟ್ಟಿಸುವ ಕೋಪ, ಹತಾಶೆಗಳನ್ನು ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಮಂತ್ರ ಜಪಿಸುತ್ತ ಶಮನಗೊಳಿಸುತ್ತಲೇ ವ್ಯವಸ್ಥೆಯನ್ನು ಶ್ರೀಮಂತರ ಪರವಾಗಿ ಬೆಳೆಸುತ್ತಿದ್ದೇವೆ. ಎಲ್ಲರಿಗೂ ಸಮಪಾಲು ಎಂಬುದು ಹಿಂದಿನಿಂದಲೂ ಪ್ರಚಲಿತವಿರುವ ಒಂದು ಜನಪ್ರಿಯ ನಂಬಿಕೆ. ವಾಸ್ತವವಾಗಿ ಜೀವಜಗತ್ತಿನ ರಚನೆಯೇ ಪಿರಮಿಡ್‍ನಂತಿದೆ. ಇದನ್ನು ಇಕಲಾಜಿಕಲ್ ಪಿರಮಿಡ್‍ಗಳು ಎನ್ನುತ್ತೇವೆ.

ಸಸ್ಯಗಳು, ಎಂದರೆ ಉತ್ಪಾದಕರು ಯಥೇಚ್ಛವಾಗಿದ್ದರೆ ಅವುಗಳನ್ನು ತಿಂದುಬದುಕುವ ಸಸ್ಯಾಹಾರಿ ಪ್ರಾಣಿಗಳು ಅಲ್ಪಸಂಖ್ಯೆಯಲ್ಲಿರುತ್ತವೆ. ಈ ಸಸ್ಯಾಹಾರಿ ಪ್ರಾಣಿಗಳನ್ನು ತಿಂದು ಬದುಕುವ ಹುಲಿ ಮುಂತಾದ ಮಾಂಸಾಹಾರಿ ಪ್ರಾಣಿಗಳು ಇನ್ನೂ ಅಲ್ಪಸಂಖ್ಯೆಯಲ್ಲಿ ಪಿರಮಿಡ್‍ನ ತುದಿಯಲ್ಲಿರುತ್ತವೆ. ಹಾಗೆಯೇ ದುಡಿಯುವ ಬಡವರ್ಗ ಪಿರಮಿಡ್‍ನ ಪಾದವಾಗಿದ್ದರೆ, ಇವರ ಮೇಲೆ ಮಧ್ಯಮ ವರ್ಗ, ಇವರ ಮೇಲೆ ಪಿರಮಿಡ್‍ನ ತುದಿಯಲ್ಲಿ ಕೆಲವೇ ಸಂಖ್ಯೆಯ ಅತಿ ಶ್ರೀಮಂತ ಜನರಿರುತ್ತಾರೆ. ಮೂಲತಃ ನಮ್ಮ ಸಮಾಜವು ಅಸಮಾನತೆಯನ್ನು ಒಪ್ಪಿಕೊಂಡೇ ಬಂದಿದೆ. ಅಸಮಾನತೆಗೆ ಶೋಷಣೆಯೇ ಮುಖ್ಯ ಕಾರಣ. ಶೋಷಣೆಯನ್ನು ‘ಸ್ಮಾರ್ಟ್’ ಪದದಿಂದ ಮುಚ್ಚಿಟ್ಟುಕೊಂಡು ನವನಾಗರಿಕತೆಯ ಚಹರೆಯನ್ನು ಆರೋಪಿಸಿಕೊಂಡಾಕ್ಷಣ ಶೋಷಣೆಯು ಕಹಿ ಫಲಗಳನ್ನು ಕೊಡದೆ ಇರುತ್ತದೆಯೇ?

ಇಂತಹ ಶಿಕ್ಷಣ ಮತ್ತು ಆರ್ಥಿಕತೆ ರೂಪಿಸಿದ ಬಲಿಷ್ಠ ರಾಷ್ಟ್ರನಾಯಕರ ನಿಲುವು ಮತ್ತು ಸ್ಪಂದನೆಗಳು ಹೇಗಿರುತ್ತವೆ? ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ತಮ್ಮ ಬಳಿಯಿರುವ ಭಾರಿ ಬೆಲೆಯ ಶಸ್ತ್ರಾಸ್ತ್ರಗಳ ರುಚಿ ನೋಡಬೇಕೇ ಎಂದು ಇರಾನ್‍ ದೇಶವನ್ನು ಹೆದರಿಸಿದ್ದುಂಟು. ಈಗ ಕೊರೊನಾ ವಿರುದ್ಧ ಇವರ ಬಳಿ ಯಾವ ಅಸ್ತ್ರವಿದೆ? ‘ಯುರೋಪಿನ ರಕ್ತರಂಜಿತ ಮಾರ್ಗ ಬೇಡ. ಶಾಂತ ಹಾಗೂ ರಕ್ತರಹಿತ ಮಾರ್ಗ ಬೇಕು... ಪಶ್ಚಿಮದ ಈ ಮಹಾಪ್ರವಾಹವನ್ನು ನಾನು ತಡೆಯಲಾರೆನು ಎಂಬ ಆಲಸ್ಯ, ಅಸಹಾಯಕತೆಯ ಉದ್ಗಾರವನ್ನು ಭಾರತವು ಎಂದೂ ತೆಗೆಯಕೂಡದು’ ಎಂಬ ಗಾಂಧೀಜಿಯ ಮಾತನ್ನು ನಾವು ಮತ್ತೆ ಮೆಲುಕು ಹಾಕಬೇಕಾಗಿದೆ.

ಇಂದು ವಾಹನಗಳ ಭರಾಟೆ ಕಡಿಮೆಯಾಗಿ ಕಾರ್ಬನ್ ಮತ್ತು ನೈಟ್ರೋಜನ್ ಮಾಲಿನ್ಯ ತಗ್ಗಿದೆ. ಅನೇಕ ಪ್ರಾಣಿಗಳು ನಿರ್ಭಯವಾಗಿ ಹೊರಗೆ ಬಂದಿರುವ ವರದಿಗಳಿವೆ. ಈ ಭೂಮಿಯನ್ನು ಮನುಷ್ಯರು ಉಳಿದ ಜೀವಿಗಳೊಡನೆ ಹಂಚಿಕೊಂಡು ಬಾಳಬಾರದೇಕೆ ಎಂಬಂಥ ಉದ್ಗಾರಗಳು ವಿದೇಶಿ ಟಿ.ವಿ.ಗಳಲ್ಲೂ ಹರಿದಾಡುತ್ತಿವೆ. ಈ ಶಾಂತಸ್ಥಿತಿಯೇ ಶಾಶ್ವತವಾಗಲಿ ಎಂದು ಹಾರೈಸೋಣ.

ಜಿ.ಎಸ್.ಜಯದೇವ​

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.