‘ಇಡೀ ಅಮೆರಿಕಕ್ಕೆ ಸರಿಹೋಗುವ ಒಂದು ನೀತಿಯನ್ನು ರೂಪಿಸುವುದಕ್ಕೆ ಸಾಧ್ಯವಿಲ್ಲ’ ಎನ್ನುತ್ತಾರೆ, ಅಮೆರಿಕದ ಆರ್ಥಿಕತೆಯನ್ನು ವಿಶ್ಲೇಷಿಸಿರುವ ಅರ್ಥಶಾಸ್ತ್ರಜ್ಞ ರಾಜ್ ಚೆಟ್ಟಿ. ಈ ಮಾತು ಭಾರತವೂ ಸೇರಿದಂತೆ ಎಲ್ಲ ದೊಡ್ಡ ರಾಷ್ಟ್ರಗಳಿಗೆ ಸಂಬಂಧಿಸಿದಂತೆಯೂ ನಿಜ ಎನಿಸುತ್ತದೆ. ಕಾಶ್ಮೀರಕ್ಕೆ ಅನುಕೂಲಕರ ಆಗಬಹುದಾದ ನೀತಿಯು ಕೇರಳಕ್ಕೋ ರಾಜಸ್ಥಾನಕ್ಕೋ ಅನುಕೂಲಕರ ಆಗದೇ ಇರಬಹುದು. ಆ ರಾಜ್ಯಗಳ ಆರ್ಥಿಕ ಪರಿಸ್ಥಿತಿ, ಸಂಸ್ಕೃತಿ, ಹವಾಮಾನ ಎಲ್ಲವೂ ಬೇರೆ ಬೇರೆಯಾಗಿಯೇ ಇರುತ್ತವೆ.
ದೇಶ ದೊಡ್ಡದಾದಷ್ಟೂ ವೈವಿಧ್ಯ ಹೆಚ್ಚುತ್ತದೆ, ಆದ್ಯತೆಗಳು ಬೇರೆಯಾಗುತ್ತಾ ಹೋಗುತ್ತವೆ. ಎಷ್ಟೇ ಎಚ್ಚರಿಕೆಯಿಂದ ನೀತಿಗಳನ್ನು ರೂಪಿಸಿದರೂ ಅದರ ಬಗ್ಗೆ ಒಂದು ಪ್ರಾಂತ್ಯದವರಿಗೋ ಒಂದು ಸಮುದಾಯ
ದವರಿಗೋ ಅತೃಪ್ತಿ ಇದ್ದೇ ಇರುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಈ ಅತೃಪ್ತಿ ಬೆಳೆದು ಹಿಂಸಾತ್ಮಕ ಪ್ರತಿರೋಧವಾಗಿ ಪ್ರಕಟವಾಗಿರುವುದನ್ನೂ ನೋಡಿದ್ದೇವೆ. ಆಡಳಿತವು ಕೇಂದ್ರೀಕೃತವಾದಷ್ಟೂ ಸರ್ಕಾರವು ಜನರಿಂದ ದೂರವಾಗುತ್ತಾ ಹೋಗುತ್ತದೆ. ಪರಿಣಾಮಕಾರಿಯಾದ ಆಡಳಿತ ನೀಡುವುದು ಕಷ್ಟವಾಗುತ್ತದೆ.
ದೊಡ್ಡ ರಾಷ್ಟ್ರಗಳಿಗೆ ಆಂತರಿಕವಾಗಿ ಏಕತೆ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು. ಆದರೆ ಅವುಗಳಿಗೆ ಹಲವು ಅನುಕೂಲಗಳೂ ಇವೆ. ಪ್ರಬಲವಾದ ಸೇನೆಯನ್ನು ಕಟ್ಟಿಕೊಳ್ಳಬಹುದು. ಹೊರಗಿನ ಶತ್ರುಗಳನ್ನು ಪರಿಣಾಮಕಾರಿಯಾಗಿ ಎದುರಿಸಬಹುದು. ಕೊಳ್ಳುವವರ ಸಂಖ್ಯೆ ಹೆಚ್ಚಾಗಿ ಇರುವುದರಿಂದ ಕೈಗಾರಿಕೆಗಳು ಬೆಳೆಯುವುದಕ್ಕೆ ಅನುಕೂಲವಾಗುತ್ತದೆ. ಸಣ್ಣ ದೇಶಗಳು ಸಾಮಾನ್ಯವಾಗಿ ಹೆಚ್ಚು ಸಕ್ರಿಯ
ವಾಗಿರುತ್ತವೆ. ಅಲ್ಲಿ ಹೆಚ್ಚಿನ ಬೆಳವಣಿಗೆಯೂ ಆಗಿರುತ್ತದೆ.
ಭಾರತಕ್ಕೆ ದೊಡ್ಡ ರಾಷ್ಟ್ರಗಳಿಗೆ ಇರುವಂತಹ ಅನುಕೂಲವೂ ಇದೆ, ಸಣ್ಣ ರಾಷ್ಟ್ರಗಳಿಗೆ ಲಭ್ಯವಾಗುವಂತಹ ಅನುಕೂಲವೂ ಇದೆ. ಒಕ್ಕೂಟ ವ್ಯವಸ್ಥೆಯಿಂದಾಗಿ ದಕ್ಕಿರುವ ಅನುಕೂಲಗಳು ಅವು. ರಾಷ್ಟ್ರ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ನಿರ್ವಹಿಸಬೇಕಾದ ರಕ್ಷಣೆ, ಅಂತರರಾಷ್ಟ್ರೀಯ ವ್ಯಾಪಾರ, ನಾಣ್ಯಗಳ ನಿರ್ವಹಣೆ ಎಲ್ಲವನ್ನೂ ಕೇಂದ್ರ ನಿರ್ವಹಿಸುತ್ತದೆ. ಶಿಕ್ಷಣ, ಆರೋಗ್ಯ, ನೈರ್ಮಲ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ರಾಜ್ಯ ಹಾಗೂ ಸ್ಥಳೀಯ ಸರ್ಕಾರಗಳು ನೋಡಿಕೊಳ್ಳುತ್ತವೆ.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಜವಾಬ್ದಾರಿಗಳನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ವಿಂಗಡಿಸಲಾಗಿದೆ. ಹಾಗಿದ್ದಾಗ್ಯೂ ಕೆಲವೊಮ್ಮೆ ರಾಜ್ಯಗಳು ಮತ್ತು ಕೇಂದ್ರದ ನಡುವೆ ಘರ್ಷಣೆಯಿರುತ್ತದೆ. ಅಧಿಕಾರ ಯಾರ ಬಳಿ ಇರಬೇಕು ಎನ್ನುವುದಕ್ಕಿಂತ ಯಾರು ಅದನ್ನು ಹೆಚ್ಚು ಪರಿಣಾಮಕಾರಿಯಾಗಿ,
ಜನತೆಗೆ ಅನುಕೂಲವಾಗುವ ರೀತಿಯಲ್ಲಿ ನಿರ್ವಹಿಸಬಲ್ಲರು ಎನ್ನುವುದು ಮುಖ್ಯವಾಗಬೇಕು. ಅದಕ್ಕೆ ತಕ್ಕಂತೆ ಅಧಿಕಾರ ಹಾಗೂ ಸಂಪನ್ಮೂಲ ಹಂಚಿಕೆಯಾಗಬೇಕು.
ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮದು ರಾಜಕೀಯವಾಗಿ, ಆರ್ಥಿಕವಾಗಿ ಹೆಚ್ಚು ಕೇಂದ್ರೀಕೃತ
ವಾಗಿರುವ ರಾಷ್ಟ್ರ. ಒಟ್ಟಾರೆ ಸಂಗ್ರಹವಾದ ತೆರಿಗೆ ಹಣದಲ್ಲಿ ರಾಜ್ಯಗಳಿಗೆ ಸಿಗುವುದು ಶೇ 30ರಷ್ಟು ಮಾತ್ರ. ಸ್ಥಳೀಯ ಸರ್ಕಾರಗಳಿಗೆ ಸಿಗುವುದು ಬರೀ ಶೇ 3ರಷ್ಟು ಪಾಲು. ತೀರಾ ಕೇಂದ್ರೀಕೃತ ರಾಷ್ಟ್ರ ಎಂದು ಭಾವಿಸಿರುವ ಚೀನಾದಲ್ಲಿ ಶಿಕ್ಷಣ, ಆರೋಗ್ಯದಂತಹ ವಿಷಯಗಳಿಗೆ ಸಂಬಂಧಿಸಿದ ದಿನನಿತ್ಯದ ವ್ಯವಹಾರಗಳನ್ನು ಬಹುತೇಕ ಸ್ಥಳೀಯ ಸರ್ಕಾರಗಳೇ ನೋಡಿಕೊಳ್ಳುತ್ತಿವೆ.
ಭಾರತದಲ್ಲಿ ಅತಿ ಕೇಂದ್ರೀಕರಣಕ್ಕೆ ಐತಿಹಾಸಿಕ ಕಾರಣಗಳಿವೆ. ಸ್ವಾತಂತ್ರ್ಯಪೂರ್ವದಲ್ಲಿ ದೇಶವನ್ನು 500ಕ್ಕೂ ಹೆಚ್ಚು ರಾಜರು ಆಳುತ್ತಿದ್ದರು. ಅವರನ್ನು ಒಟ್ಟಿಗೆ ತರಲು ಒಂದು ಬಲವಾದ ಕೇಂದ್ರ ವ್ಯವಸ್ಥೆ ಬೇಕಿತ್ತು. ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರಕ್ಕೆ ವಿಪರೀತ ಎನಿಸುವಷ್ಟು ಅಧಿಕಾರ ಸಿಕ್ಕಿಬಿಟ್ಟಿತು. ಸಾಮಾಜಿಕವಾಗಿ ಅಂಚಿಗೆ ಸರಿದವರಿಗೆ, ಮಹಿಳೆಯರಿಗೆ ಪಿತೃಪ್ರಧಾನ ಮನಃಸ್ಥಿತಿಯ ಸ್ಥಳೀಯ ನಾಯಕರಿಂದ ತೊಂದರೆಯಾಗುತ್ತದೆ ಎನ್ನುವ ಸಹಜ ಆತಂಕ ಅಂಬೇಡ್ಕರ್ ಹಾಗೂ ನೆಹರೂ
ಅಂತಹವರಿಗಿತ್ತು. ಅದು ಕೂಡ ಪ್ರಬಲ ಕೇಂದ್ರೀಕರಣಕ್ಕೆ ಇಂಬು ಕೊಟ್ಟಿತು.
ಸಂಗ್ರಹವಾದ ತೆರಿಗೆ ಹಣದಲ್ಲಿ ರಾಜ್ಯಗಳಿಗೆ ಹೆಚ್ಚಿನ ಪಾಲು ದೊರಕಿಸಿಕೊಡಲು ಹಣಕಾಸು ಆಯೋಗಗಳು ಪ್ರಯತ್ನಿಸುತ್ತಾ ಬಂದಿವೆ. ರಾಜ್ಯಗಳಿಗೆ ಒಟ್ಟಾರೆ ತೆರಿಗೆಯಲ್ಲಿ ಸಿಗುತ್ತಿದ್ದ ಪಾಲನ್ನು 14ನೇ ಹಣಕಾಸು ಆಯೋಗ ಶೇ 42ಕ್ಕೆ ಏರಿಸಿತ್ತು. ಆದರೆ ಕೇಂದ್ರವು ರಾಜ್ಯಗಳೊಡನೆ ಹಂಚಿಕೊಳ್ಳದ ಸೆಸ್ ಹಾಗೂ ಸರ್‌ಚಾರ್ಜ್ ಪ್ರಮಾಣವನ್ನು ಏರಿಸುವ ಮೂಲಕ, ರಾಜ್ಯಗಳಿಗೆ ಕೊಡುವ ಪಾಲು ಹೆಚ್ಚಾಗದಂತೆ ನೋಡಿಕೊಂಡಿತು. ಆರ್ಥಿಕವಾಗಿ ಹಿಂದುಳಿದ ರಾಜ್ಯಗಳಿಗೆ ಹೆಚ್ಚಿನ ಪಾಲನ್ನು ಕೊಡುವ ಸಂಪ್ರದಾಯವೂ ಇದೆ. ಹಾಗಾಗಿ, ಉತ್ತರಪ್ರದೇಶ, ಬಿಹಾರದಂತಹ ರಾಜ್ಯಗಳಿಗೆ ಹಲವು ದಶಕಗಳಿಂದ ಹೆಚ್ಚು ಹಣ ಹೋಗುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಅಲ್ಲಿ ಪ್ರಗತಿ ಸಾಧ್ಯವಾಗಿಲ್ಲ. ಪರಿಣಾಮವಾಗಿ, ತಮ್ಮ ತೆರಿಗೆಯ ಪಾಲನ್ನು ಬಿಟ್ಟುಕೊಟ್ಟ ಕರ್ನಾಟಕ, ತಮಿಳುನಾಡಿನಂತಹ ರಾಜ್ಯಗಳಲ್ಲಿ ಅತೃಪ್ತಿ ಪ್ರಾರಂಭವಾಗುತ್ತಿದೆ.
ಕೇಂದ್ರ ಪ್ರಾಯೋಜಿತ ಹಲವು ಕಾರ್ಯಕ್ರಮಗಳೂ ರಾಜ್ಯಗಳಿಗೆ ಹೊರೆಯಾಗಬಹುದು, ಉಪಯುಕ್ತವೂ ಅಲ್ಲದಿರಬಹುದು. ರಾಷ್ಟ್ರದ ಹಿತದೃಷ್ಟಿಯಿಂದ ಕೇಂದ್ರವು ರಾಜ್ಯಗಳ ಭಾವನೆಗಳಿಗೆ ಸ್ಪಂದಿಸುವುದು ಒಳ್ಳೆಯದು. ತಮಗೆ ಸೂಕ್ತವಾದ ಯೋಜನೆಗಳನ್ನು ರೂಪಿಸಿಕೊಳ್ಳುವುದಕ್ಕೆ ರಾಜ್ಯಗಳಿಗೆ ಅವಕಾಶ ಇರಬೇಕು. ಆದರೆ ರಾಜ್ಯಗಳಿಗೆ ಅಧಿಕಾರ ಸಿಕ್ಕ ಮಾತ್ರಕ್ಕೆ ವಿಕೇಂದ್ರೀಕರಣ ಆದಂತೆ ಅಲ್ಲ. ರಾಜ್ಯಗಳು ಸ್ಥಳೀಯ ಸರ್ಕಾರಗಳೊಂದಿಗೆ ಅಧಿಕಾರ ಹಂಚಿಕೊಳ್ಳಬೇಕು. ಹಾಗೆ ಮಾಡದ ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ವಿಕೇಂದ್ರೀಕರಣವನ್ನು ಬಯಸುವುದಕ್ಕೆ ನೈತಿಕ ಹಕ್ಕು ಇರುವುದಿಲ್ಲ.
ಆಡಳಿತವು ಜನರ ಬಳಿ ಹೋದಷ್ಟೂ ಅದರ ವ್ಯಾಪ್ತಿ ಚಿಕ್ಕದಾದಷ್ಟೂ ಅದರ ಕಾರ್ಯನಿರ್ವಹಣೆ ಸುಧಾರಿಸುತ್ತದೆ, ಬೆಳವಣಿಗೆ ಹೆಚ್ಚುತ್ತದೆ. ಹಳ್ಳಿಗಳು, ಜಿಲ್ಲೆಗಳು ಬೆಳೆದಷ್ಟೂ ರಾಜ್ಯ ಬೆಳೆಯುತ್ತದೆ. ಆದರೆ ಈ ಪ್ರಕ್ರಿಯೆಯಲ್ಲಿ ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ನ್ಯಾಯಾಲಯ, ಪೊಲೀಸ್ ಇಲಾಖೆಯಂತಹ ವ್ಯವಸ್ಥೆಯು ಹೆಚ್ಚು ಸ್ವಾಯತ್ತವಾಗಿ, ನ್ಯಾಯಯುತವಾಗಿ ಇರುವಂತೆ ಸಾರ್ವಜನಿಕ ಒತ್ತಾಯ ರೂಪುಗೊಳ್ಳಬೇಕು. ನಮ್ಮ ಎಲ್ಲ ಸಮಸ್ಯೆಗಳಿಗೂ ಒಂದು ಸಾರ್ವತ್ರಿಕವಾದ ಪರಿಹಾರವಿದೆ ಎಂದು ಭಾವಿಸುವುದರಲ್ಲೇ ಸಮಸ್ಯೆಯಿದೆ.
ಉದಾಹರಣೆಗೆ, ಬಡತನವನ್ನೇ ಗಮನಿಸಿ. ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರು ಹೇಳುವಂತೆ, ಸಂಶೋಧಕರು ತಮ್ಮ ಕೊಠಡಿಗಳಿಂದ ಹೊರಬಂದು ವಾಸ್ತವ ಜಗತ್ತನ್ನು ಗಮನಿಸಿದರೆ, ಬಡವರು ಅನುಭವಿಸುತ್ತಿರುವ ಹಲವು ಸಮಸ್ಯೆಗಳು ಕಾಣುತ್ತವೆ. ಬಡತನವನ್ನು ಪರಿಹರಿಸಬಹುದಾದ ಸಣ್ಣ ಸಣ್ಣ ಸಮಸ್ಯೆಗಳ ಸಮೂಹವಾಗಿ ನೋಡುವುದಕ್ಕೆ ಸಾಧ್ಯವಾಗುತ್ತದೆ. ಬಡತನದ ವಿಶಾಲ ವ್ಯಾಪ್ತಿಯೊಳಗೆ ಆರೋಗ್ಯ, ಶಿಕ್ಷಣ, ಹಣಕಾಸು, ಉದ್ಯಮಶೀಲತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿಕೊಳ್ಳುತ್ತಾ ಹೋಗಬಹುದು. ಪ್ರತಿ ಸಮಸ್ಯೆಯನ್ನೂ ಇನ್ನಷ್ಟು ಸಣ್ಣ ಸಣ್ಣ ಸಮಸ್ಯೆಗಳನ್ನಾಗಿ ಬಿಡಿಸಿಕೊಳ್ಳಲು ಸಾಧ್ಯವಾಗುತ್ತದೆ.
ಆರೋಗ್ಯದ ಸಮಸ್ಯೆಯು ಆಗ ಪೌಷ್ಟಿಕಾಂಶದ ಕೊರತೆ, ಶಿಶುಮರಣ, ಆಮಶಂಕೆಯಂತಹ ಬಿಡಿಸಿ
ಕೊಳ್ಳಬಹುದಾದ ಸಮಸ್ಯೆಗಳಾಗಿ ಕಾಣುತ್ತದೆ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾ, ಸಣ್ಣ ಸಣ್ಣ ಹೆಜ್ಜೆಗಳನ್ನು ಎಚ್ಚರಿಕೆಯಿಂದ ಇಡುತ್ತಾ ಜವಾಬ್ದಾರಿಯಿಂದ ಮುಂದುವರಿಯಬೇಕು. ಹೀಗೆ ಸಿಗುವ ಬಿಡಿ ಬಿಡಿಯಾದ ಪರಿಹಾರಗಳು ಒಟ್ಟಾರೆಯಾಗಿ ಬಡತನಕ್ಕೆ ಪರಿಹಾರ ಆಗಬಲ್ಲವು. ವಿಕೇಂದ್ರೀಕರಣದ ಈ ಪ್ರಕ್ರಿಯೆಯಲ್ಲಿ ರಾಷ್ಟ್ರಮಟ್ಟದವೆಂದು ಭಾವಿಸಿದ್ದ ಸಮಸ್ಯೆಗಳನ್ನು ರಾಜ್ಯಮಟ್ಟಕ್ಕೆ ತಂದು, ನಂತರ ಅವನ್ನು ಪರಿಹರಿಸುವ ಪ್ರಕ್ರಿಯೆಯಲ್ಲಿ ಸ್ಥಳೀಯ ಆಡಳಿತವನ್ನು ಜೊತೆಗೆ ಸೇರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ನಾವು ಜಗತ್ತನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಲಾಭಕೇಂದ್ರಿತ ದೊಡ್ಡ ಉದ್ದಿಮೆಗಳು ಬೆಳವಣಿಗೆಯ ಕೇಂದ್ರಗಳಾಗುವುದಿಲ್ಲ.
ಸಣ್ಣ ಹಾಗೂ ಮಧ್ಯಮ ವರ್ಗದ ಉದ್ದಿಮೆಗಳು, ಗ್ರಾಮ ಕೈಗಾರಿಕೆಗಳು ಬೆಳವಣಿಗೆಯ ಕೇಂದ್ರಗಳಾಗುತ್ತವೆ. ಬುಲೆಟ್ ರೈಲಿಗಿಂತ ಸ್ಥಳೀಯ ಸಾರಿಗೆ, ವಿದ್ಯುತ್, ನೀರಿನ ವ್ಯವಸ್ಥೆಯಂತಹವು ಆದ್ಯತೆಯ ವಿಷಯಗಳಾಗುತ್ತವೆ. ಬೆಳವಣಿಗೆ ಪ್ರಕ್ರಿಯೆಯು ಸಮಾಜದ ಕಟ್ಟಕಡೆಯ ವ್ಯಕ್ತಿಯ, ತೀರಾ ಹಿಂದುಳಿದ ಸಮುದಾಯದ, ಪ್ರದೇಶದ ಬೆಳವಣಿಗೆಯಿಂದಲೇ ಪ್ರಾರಂಭವಾಗುತ್ತದೆ. ಅದಕ್ಕಾಗಿ, ಸ್ಥಳೀಯ ಆಡಳಿತಕ್ಕೆ ಹೆಚ್ಚಿನ ಅಧಿಕಾರವನ್ನು ಕೊಡುವ ವಿಕೇಂದ್ರೀಕೃತ ಒಕ್ಕೂಟ ವ್ಯವಸ್ಥೆ ರೂಪುಗೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.