ADVERTISEMENT

ಸರ್ಕಾರಿ ಶಾಲೆ: ಹೊಸ ಭರವಸೆ

ಸ್ವಾಗತಾರ್ಹ ಬದಲಾವಣೆ ದಿಕ್ಕುತಪ್ಪದಂತೆ ನೋಡಿಕೊಳ್ಳಬೇಕಾದ ಹೊಣೆ ಸರ್ಕಾರದ್ದು

ಎಸ್.ನಟರಾಜ ಬೂದಾಳು
Published 1 ಜುಲೈ 2019, 20:12 IST
Last Updated 1 ಜುಲೈ 2019, 20:12 IST
budhal 7
budhal 7   

ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭ ಮಾಡಿದ ನಂತರದ ಪರಿಸ್ಥಿತಿಯನ್ನು ಕುರಿತಾದ ಮುಖ್ಯ ಸಂಗತಿಯೊಂದರ ಕಡೆಗೆ ಗಮನ ಸೆಳೆಯುವುದು ಈ ಲೇಖನದ ಉದ್ದೇಶ. ಇಂಗ್ಲಿಷ್ ಮಾಧ್ಯಮದ ತರಗತಿಗಳು ಮತ್ತು ಪೂರ್ವ ಪ್ರಾಥಮಿಕ ತರಗತಿಗಳು ಆರಂಭವಾದ ಬಹುಪಾಲು ಶಾಲೆಗಳಲ್ಲಿ ಈಗ ಪ್ರವೇಶ ಕೋರಿ ಬರುತ್ತಿರುವ ಮಕ್ಕಳ ಸಂಖ್ಯೆ ಅಪಾರ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಪ್ರವೇಶ ಕೋರಿ ಬರುತ್ತಿರುವ ಎಲ್ಲ ಮಕ್ಕಳಿಗೂ ಪ್ರವೇಶ ನೀಡಲಾಗದೆ ಪರದಾಡುವ ಸ್ಥಿತಿ ಉಂಟಾಗಿದೆ. ಎಷ್ಟೋ ಪೋಷಕರು ಖಾಸಗಿ ಶಾಲೆಗಳಿಗೆ ಸೇರಿಸಿದ್ದ ತಮ್ಮ ಮಕ್ಕಳನ್ನೂ ಕರೆತಂದು ಇಲ್ಲಿ ಸೇರಿಸಲು ಮುಂದಾಗಿದ್ದಾರೆ.

ಎರಡು ಸಂಗತಿಗಳು ಈಗ ನಿಚ್ಚಳವಾಗಿವೆ. ಒಂದು, ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗೆಗೆ ತೀವ್ರ ಆತಂಕಿತರಾಗಿದ್ದಾರೆ ಮತ್ತು ವಿವೇಕಿಗಳಾಗಿದ್ದಾರೆ. ಎರಡನೆಯದಾಗಿ, ಸರ್ಕಾರಿ ಶಾಲೆಗಳನ್ನು ಉಳಿಸುವ ಮಾತಂತಿರಲಿ, ಅವುಗಳ ವಿಸ್ತರಣೆಯನ್ನು ಈಗ ಸರಿಯಾಗಿ ನಿಭಾಯಿಸುವ ಜವಾಬ್ದಾರಿಯನ್ನು ಸರ್ಕಾರ ಎಚ್ಚರದಿಂದ ಮತ್ತು ಕ್ಷಮತೆಯಿಂದ ನಿರ್ವಹಿಸಬೇಕಾಗಿದೆ.

ತುಮಕೂರು ಜಿಲ್ಲೆಯ ಮೂರು ಶಾಲೆಗಳ ಉದಾಹರಣೆಗಳನ್ನು ನೀಡಬಹುದು. ತುಮಕೂರು ತಾಲ್ಲೂಕಿನ ಬೆಳ್ಳಾವಿ, ಪಾವಗಡ ತಾಲ್ಲೂಕಿನ ತಿರುಮಣಿ, ಗುಬ್ಬಿ ತಾಲ್ಲೂಕಿನ ಕಾಡಶೆಟ್ಟಿಹಳ್ಳಿ– ಈ ಶಾಲೆಗಳಲ್ಲೀಗ ವಿದ್ಯಾರ್ಥಿಗಳ ಪ್ರವೇಶ ಕೋರಿ ದೊಡ್ಡ ಸರತಿ ಸಾಲು! ಪ್ರತೀ ಶಾಲೆಗೆ ಪ್ರವೇಶ ಕೋರಿದ 120ಕ್ಕಿಂತ ಹೆಚ್ಚು ಅರ್ಜಿಗಳು ಮತ್ತು ಮಕ್ಕಳ ಕ್ಯೂ. ಆದರೆ ಸರ್ಕಾರ ನೀಡಿರುವುದು ಕೇವಲ 30 ವಿದ್ಯಾರ್ಥಿಗಳ ಸಾಮರ್ಥ್ಯದ ಒಂದು ತರಗತಿ! ಉಳಿದ ಮಕ್ಕಳ ಪಾಡೇನಾಗಬೇಕು? ಅವರಿಗೆ ಪ್ರವೇಶ ಕೊಡದೆ ವಾಪಸ್‌ ಕಳಿಸುವುದು ಸಂವಿಧಾನದತ್ತ ಹಕ್ಕಿನ ನಿರಾಕರಣೆಯ ಜೊತೆಗೆ ಸರ್ಕಾರದ ಹೊಣೆಗೇಡಿತನವನ್ನು ಸಾಬೀತು ಮಾಡುತ್ತದೆ. ನಿಜ, ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶ ನೀಡಿದರೆ ಅಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಆದರೆ ಸರ್ಕಾರದ ಬೃಹತ್ ವ್ಯವಸ್ಥೆಗೆ ಅವು ನಿರ್ವಹಿಸಲಾರದ ಸಮಸ್ಯೆಗಳೇನೂ ಅಲ್ಲ.

ADVERTISEMENT

ಕಟ್ಟಡಗಳು, ಅಧ್ಯಾಪಕರು ಮತ್ತು ಮೂಲ ಸೌಲಭ್ಯ– ಇವಿಷ್ಟು ತಕ್ಷಣಕ್ಕೆ ಇದಿರಾಗುವ ಸಮಸ್ಯೆಗಳು. ಅಗತ್ಯವಿರುವ ನಾಲ್ಕು ಕೊಠಡಿಗಳನ್ನು ಕಟ್ಟಿಸಿಕೊಡುವುದು, ಒಂದು ಅಣೆಕಟ್ಟು ಕಟ್ಟುವ ಕೆಲಸವಲ್ಲ. ಅದನ್ನು ಮೂರು– ನಾಲ್ಕು ತಿಂಗಳಲ್ಲಿ ಮುಗಿಸಿ ಕೊಡಬಹುದು. ರಾಜ್ಯದಲ್ಲಿ ಹೆಚ್ಚುವರಿ ಎಂದು ಪರಿಗಣಿತವಾಗಿರುವ ಅಧ್ಯಾಪಕರ ಪಟ್ಟಿಯೂ ದೊಡ್ಡದಿದೆ. ಅದರಲ್ಲಿಯೇ, ಟಿಇಟಿ ಪಾಸಾದ
ಅಧ್ಯಾಪಕರನ್ನು ಎಲ್ಲೆಲ್ಲಿಗೋ ವರ್ಗಾಯಿಸುವ ಬದಲು ಅವರನ್ನು ಈ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ
ವರ್ಗಾಯಿಸಬಹುದು. ಆಗ ಅವರ ಸಾಮರ್ಥ್ಯದ ಸದುಪಯೋಗ ಆಗುವುದರ ಜೊತೆಗೆ ಅವರಿಗೆ ಒಂದು ಸಕಾಲಿಕ ಮತ್ತು ಸರಿಯಾದ ವ್ಯವಸ್ಥೆಯೂ ಆಗುತ್ತದೆ.

ಕೊಠಡಿಗಳ ವ್ಯವಸ್ಥೆ ಆಗುವವರೆಗೆ ಮೂರು ತಿಂಗಳು ನಮ್ಮ ಮಕ್ಕಳು ಮರದಡಿ ಕುಳಿತು ಪಾಠ ಕೇಳಲು ಬೇಸರಿಸುವುದಿಲ್ಲ. ಅವರಿಗೆ ಶ್ರದ್ಧೆಯಿಂದ ಕಲಿಸುವ, ಸಮರ್ಥ ಶಿಕ್ಷಕರಿಂದ ದೊರಕುವ ಶಿಕ್ಷಣ ಬೇಕು ಅಷ್ಟೆ. ಇನ್ನು ಸರ್ಕಾರಿ ಶಾಲೆಗಳ ಎಲ್ಲ ದೋಷಗಳಿಗೂ ಶಿಕ್ಷಕರನ್ನು ಹೊಣೆ ಮಾಡಲಾಗದು. ಕೆಲವು ಶಿಕ್ಷಕರು ಅಸಮರ್ಥರಿರಬಹುದು. ಆದರೆ ಸರ್ಕಾರದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯು ಇರುವುದರಲ್ಲಿ ಅತ್ಯುತ್ತಮ ಶಿಕ್ಷಕರನ್ನೇ ಆಯ್ಕೆ ಮಾಡಿಕೊಳ್ಳುತ್ತದೆ. ಹಾಗಾಗಿ ಖಾಸಗಿಗೆ ಹೋಲಿಸಿದರೆ ನಮ್ಮ ಸರ್ಕಾರಿ ಶಾಲೆಯ ಶಿಕ್ಷಕರು ಎಲ್ಲ ರೀತಿಯಲ್ಲೂ ದಕ್ಷರು ಮತ್ತು ಅತ್ಯುತ್ತಮ ವೇತನ ಪಡೆಯುತ್ತಿರುವವರು. ಅವರ ಕಾರ್ಯಕ್ಷಮತೆಯನ್ನು ಖಂಡಿತ ಇನ್ನಷ್ಟು ಹೆಚ್ಚಿಸಬಹುದು. ಅದಕ್ಕೆ ಅವರೂ ಈಗ ಸಿದ್ಧರಿದ್ದಾರೆ.

ಸರ್ಕಾರಿ ಶಾಲೆಗಳು ಮುಚ್ಚಲಾರಂಭಿಸಿದ ದಿನದಿಂದ ಈವರೆಗೆ ನಮ್ಮ ಗ್ರಾಮೀಣ ಯುವಕರು ಲಕ್ಷಾಂತರ ಉದ್ಯೋಗಗಳನ್ನು ಕಳೆದುಕೊಂಡರು. ಸಂಕಟದ ಸಂಗತಿ ಎಂದರೆ, ಅವರೆಲ್ಲ ನಮ್ಮ ಗ್ರಾಮೀಣ ಹೆಣ್ಣು ಮಕ್ಕಳು ಮತ್ತು ಗಂಡುಮಕ್ಕಳು. ಅದರಲ್ಲಿಯೂ ಶೇಕಡ ಐವತ್ತರಷ್ಟು ಶಿಕ್ಷಕರ ಸ್ಥಾನಗಳನ್ನು ಹೆಣ್ಣುಮಕ್ಕಳಿಗೇ ಮೀಸಲಿಟ್ಟ ವ್ಯವಸ್ಥೆ ಹೀಗೆ ಹಳಿ ತಪ್ಪಿತು. ಇದರಿಂದ ಹೆಚ್ಚು ಅನ್ಯಾಯವಾದದ್ದು ನಮ್ಮ ಹೆಣ್ಣುಮಕ್ಕಳಿಗೆ. ಒಬ್ಬ ಹೆಣ್ಣುಮಗಳಿಗೆ ಉದ್ಯೋಗ ದೊರೆತರೆ ಅದೊಂದು ರೀತಿಯಲ್ಲಿ ಒಂದು ಕುಟುಂಬಕ್ಕೆ ಉದ್ಯೋಗ ದೊರೆತಂತೆ ಆಗುತ್ತಿತ್ತು. ಖಾಸಗಿ ಶಾಲೆಗಳನ್ನು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಾ ಬಂದ ಸರ್ಕಾರಿ ವ್ಯವಸ್ಥೆಗೆ ಇಂತಹ ಸಂಗತಿಗಳು ಕ್ಷುಲ್ಲಕವಾಗಿ ಕಾಣಿಸುತ್ತವೆ. ಆದರೆ ಸರ್ಕಾರ ನಿಜವಾಗಿ ಜನಪರವಾಗಿ ಇದೆಯೋ ಬಂಡವಾಳಶಾಹಿಗಳ ಪರವಾಗಿ ಇದೆಯೋ ಎಂದು ಸಾಬೀತಾಗುವುದು ಶಿಕ್ಷಣ, ಆರೋಗ್ಯ ಮುಂತಾದ ಸಂಗತಿಗಳಲ್ಲಿ ಎಷ್ಟು ಸಮೂಹ ಪರವಾಗಿದೆ ಎಂಬ ಸಂಗತಿಯನ್ನು ಆಧರಿಸಿರುತ್ತದೆ.

ಈಗ ಒಂದು ಹೊಸ ಭರವಸೆ ಮೂಡಿದೆ. ಮಕ್ಕಳು ಸರ್ಕಾರಿ ಶಾಲೆಗೆ ಬರಲು ಸಿದ್ಧರಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸಲು ಸಿದ್ಧರಿದ್ದಾರೆ. ಸಾಕಷ್ಟು ಅಧ್ಯಾಪಕರು ಇದ್ದು, ಅವರು ಬೋಧಿಸಲು ಸಿದ್ಧರಿದ್ದಾರೆ. ಖಾಸಗಿ ಶಾಲೆ ನಡೆಸುತ್ತಿರುವ ಕುಳಗಳು ಈಗ ಆತಂಕಿತರಾಗಿದ್ದಾರೆ. ಸರ್ಕಾರ ಮತ್ತು ಸರ್ಕಾರಿ ಅಧಿಕಾರಿಗಳನ್ನು ಶಾಮೀಲು ಮಾಡಿಕೊಂಡು, ಸರ್ಕಾರಿ ಶಾಲೆಗಳಲ್ಲಿ ಆಗುತ್ತಿರುವ ಈ ಸ್ವಾಗತಾರ್ಹ ಬದಲಾವಣೆಯನ್ನು ದಿಕ್ಕುತಪ್ಪಿಸಲು ಮುಂದಾಗಿದ್ದಾರೆ. ಎಂದಿನಂತೆ ಸರ್ಕಾರ ತನ್ನ ನಿಧಾನಗತಿಯ ನಡೆಯ ಮೂಲಕ ಖಾಸಗಿಯವರಿಗೆ ಅನುಕೂಲ ಮಾಡಿಕೊಡುತ್ತಿದೆ.

ಇಂಗ್ಲಿಷ್ ಮಾಧ್ಯಮದ ವಿಷಯದಲ್ಲಿ ಮುಖ್ಯಮಂತ್ರಿ ಅವರು ಇಟ್ಟ ದೃಢ ಹೆಜ್ಜೆಯನ್ನು ಸಮೂಹವು ಸ್ವಾಗತಿಸಿದೆ. ಇದರಿಂದ ಸರ್ಕಾರಿ ಶಾಲೆಗಳು ಉಳಿಯುತ್ತವೆ, ಶಿಕ್ಷಕರು ಉಳಿಯುತ್ತಾರೆ, ಗ್ರಾಮೀಣ ಯುವಕ, ಯುವತಿಯರಿಗೆ ಅವಕಾಶಗಳು ಹೆಚ್ಚುತ್ತವೆ, ಪೋಷಕರಿಗೆ ದೊಡ್ಡ ಪ್ರಮಾಣದ ಆರ್ಥಿಕ ಹೊರೆ ತಪ್ಪುತ್ತದೆ, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಮತ್ತು ಆತ್ಮವಿಶ್ವಾಸದ ವಿದ್ಯಾಭ್ಯಾಸ ದೊರಕುತ್ತದೆ, ಸಂವಿಧಾನ ನಿರೀಕ್ಷಿಸುವ ಒಂದು ಪ್ರಮುಖ ಜವಾಬ್ದಾರಿಯನ್ನು ಸರ್ಕಾರ ಈಡೇರಿಸಿದಂತೆ ಆಗುತ್ತದೆ. ಇದರಿಂದ ಸರ್ಕಾರದ ಜವಾಬ್ದಾರಿ ಹೆಚ್ಚಿದೆ. ಇಲಾಖೆಯ ಭ್ರಷ್ಟ ವ್ಯವಸ್ಥೆಯು ಈ ಬದಲಾದ ವ್ಯವಸ್ಥೆಯನ್ನು ಹಾಳುಗೆಡಹುವ ಮುನ್ನ ಕಾರ್ಯೋನ್ಮುಖರಾದರೆ, ಸರ್ಕಾರಿ ಶಾಲಾ ವ್ಯವಸ್ಥೆಯಡಿ ಪ್ರಾಥಮಿಕ ಶಿಕ್ಷಣವನ್ನು ಉಳಿಸಿದಂತೆ ಆಗುತ್ತದೆ.

ಪೋಷಕರು ಕೆಲವು ಜವಾಬ್ದಾರಿಗಳನ್ನು ಹೊರಬೇಕಿದೆ. ಮೊದಲಿಗೆ, ಪ್ರವೇಶ ಬಯಸಿ ಬರುವ ಎಲ್ಲ ಮಕ್ಕಳಿಗೂ ಇಂಗ್ಲಿಷ್ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ನಿರಾಕರಿಸದಂತೆ ನೋಡಿಕೊಳ್ಳಬೇಕಿದೆ. ಇದನ್ನು ಆಯಾ ಕ್ಷೇತ್ರದ ಶಾಸಕರ ತಕ್ಷಣದ ಕರ್ತವ್ಯವನ್ನಾಗಿಸಬೇಕಾಗಿದೆ. ಅವರು ಸರ್ಕಾರದ ಮೇಲೆ ಒತ್ತಡ ಹೇರಿ ಎಲ್ಲರಿಗೂ ಪ್ರವೇಶ ದೊರಕಿಸಿಕೊಡುವವರೆಗೆ ಬಿಡಬಾರದು. ಇದರ ಜೊತೆಗೆ, ಎಲ್ಲ ಆಗುಹೋಗುಗಳನ್ನೂ ಶಾಲಾ ಅಭಿವೃದ್ಧಿ ಸಮಿತಿ ನೋಡಿಕೊಳ್ಳುತ್ತದೆ ಎಂದು ಸುಮ್ಮನೆ ಇದ್ದುಬಿಡಬಾರದು. ತಮ್ಮ ಮಕ್ಕಳಿಗೆ ದೊರಕಬೇಕಾದ ಶಿಕ್ಷಣ ದೊರಕುತ್ತಿದೆಯೇ ಎಂದು ಖಾತರಿಪಡಿಸಿಕೊಳ್ಳಲು ಪೋಷಕರು ಪ್ರತಿ ಶಾಲೆಯಲ್ಲಿ ಸಂಘಗಳನ್ನು ಸ್ಥಾಪಿಸಬೇಕು. ಶಿಕ್ಷಕರ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು.

ಒಂದು ಗ್ರಾಮೀಣ ಶಾಲೆ ಸಮರ್ಥವಾಗಿ ಕೆಲಸ ಮಾಡುತ್ತಿದೆ ಎಂಬುದು ಗಮನಕ್ಕೆ ಬಂದರೆ, ಸಹಾಯ ಹಸ್ತ ಚಾಚುವ ಅನೇಕ ವ್ಯಕ್ತಿಗಳು, ಸಂಸ್ಥೆಗಳು ಈಗ ದೊರಕುವುದು ಕಷ್ಟವಲ್ಲ. ಇದಕ್ಕೆ ತಾಜಾ ಉದಾಹರಣೆಯಾಗಿ, ಕಾಡಶೆಟ್ಟಿಹಳ್ಳಿ ಶಾಲೆ ಕಣ್ಣೆದುರಿಗೆ ಇದೆ. ಕಾಡಶೆಟ್ಟಿಹಳ್ಳಿ ಸತೀಶ್ ಮತ್ತು ಅವರ ಸ್ನೇಹಿತರು ತಮ್ಮ ಊರಿನ ಪ್ರಾಥಮಿಕ ಶಾಲೆಯನ್ನು ಒಂದು ಮಾದರಿ ಪ್ರಯೋಗಶಾಲೆಯನ್ನಾಗಿಸಿದ್ದಾರೆ. ಇಂತಹ ಹತ್ತಾರು ಉದಾಹರಣೆಗಳು ನಾಡಿನ ಎಲ್ಲ ಕಡೆ ಕಾಣಸಿಗುತ್ತವೆ. ಈಗಾಗಲೇ ಉದ್ಯೋಗಾಧಾರಿತ ಉನ್ನತ ಶಿಕ್ಷಣ ಬಡವರಿಂದ ಕೈಜಾರಿ ಹೋಗಿಯಾಗಿದೆ. ಈಗ ಉಳಿದಿರು ವುದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಾತ್ರ. ಅದನ್ನೂ ಕಳೆದುಕೊಂಡರೆ ನಮಗೆ ಶಿಕ್ಷಣ ಕನಸಾಗುತ್ತದೆ. ಪ್ರಾಥಮಿಕ ಶಿಕ್ಷಣ ಸಚಿವರು ತಮ್ಮ ಕಾರ್ಯಯೋಜನೆ ಏನು ಎನ್ನುವುದನ್ನು ಸಾರ್ವಜನಿಕವಾಗಿ ತಿಳಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.