ಅದು 2001ರ ನವೆಂಬರ್ ಮಧ್ಯಭಾಗ. ಪ್ರೀಮಿಯರ್ ಇನ್ಫೊಟೆಕ್ ಎಂಬ ಮಾಹಿತಿ ತಂತ್ರಜ್ಞಾನ ನವೋದ್ಯಮದ (ಐಟಿ ಸ್ಟಾರ್ಟ್ ಅಪ್) ಯುವ ಸ್ಥಾಪಕರು ನನ್ನನ್ನು ಅವರ ಬೆಂಗಳೂರಿನಲ್ಲಿರುವ ಕಚೇರಿಗೆ ಆಮಂತ್ರಿಸಿದ್ದರು. ಗುಜರಾತ್‌ನ ನೂತನ ಮುಖ್ಯಮಂತ್ರಿಗಳು ಕೈಗೊಂಡಿದ್ದ ಇ–ಆಡಳಿತ ಉಪಕ್ರಮದ ಕುರಿತು ನನಗೆ ಮಾಹಿತಿ ನೀಡುವ ಕಾತರ ಅವರಲ್ಲಿತ್ತು.
‘ಮೋದಿ ಅವರು ಕ್ರಿಯಾಶೀಲ ಮುಖ್ಯಮಂತ್ರಿಗಳು, ಆಧುನಿಕ ತಂತ್ರಜ್ಞಾನ ಬಳಕೆ ಕುರಿತು ಜ್ಞಾನವುಳ್ಳವರು. ಎಲ್ಲ ಗುಜರಾತಿಗಳು ಹೆಸರು, ವಿಳಾಸ, ರಕ್ತದ ಗುಂಪು ಇತ್ಯಾದಿ ವಿವರಗಳನ್ನೊಳಗೊಂಡ ಚಿಪ್ ಹೊಂದಿರುವ ಸ್ಮಾರ್ಟ್ ಕಾರ್ಡ್ ಹೊಂದುವಂತಾಗಬೇಕು ಎಂದು ಅವರು ಬಯಸಿದ್ದಾರೆ. ಈ ಯೋಜನೆಯನ್ನು 2 ತಿಂಗಳ ಒಳಗೆ ಪೂರ್ತಿಗೊಳಿಸಬೇಕು ಎಂಬುದು ಅವರ ಬಯಕೆ. ಅದಕ್ಕಾಗಿ ನಾವು ಸತತ ಕೆಲಸ ಮಾಡುತ್ತಿದ್ದೇವೆ. ಗುಜರಾತ್‌ನ ಅಧಿಕಾರಿಗಳು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಕೆಲವರು ಮುಂಜಾವ 2–3 ಗಂಟೆವರೆಗೂ ಕೆಲಸ ಮಾಡುತ್ತಿದ್ದಾರೆ’ ಎಂದು ಆ ಯುವಕರು ಒಂದೇ ಉಸಿರಿಗೆ ನನ್ನಲ್ಲಿ ಉಸುರಿದರು.
ಇ–ಆಡಳಿತ, ಸ್ಮಾರ್ಟ್ ಕಾರ್ಡ್ ಇತ್ಯಾದಿಗಳು ಪ್ರಸಿದ್ಧಿಪಡೆಯುತ್ತಿದ್ದ ದಿನಗಳವು. ಮೋದಿ ಅವರು 2011ರ ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿಯಾದ ಬೆನ್ನಲ್ಲೇ ಸ್ಮಾರ್ಟ್ ಕಾರ್ಡ್ ಯೋಜನೆ ಕೈಗೆತ್ತಿಕೊಂಡರು. ನಾಗರಿಕರ ಎಲ್ಲ ಮಾಹಿತಿಗಳು ಒಂದೇ ಡೇಟಾಬೇಸ್‌ನಲ್ಲಿ ಸರ್ಕಾರದ ಬಳಿ ಇರಬೇಕು. ಎಲ್ಲ ಸೇವೆಗಳು ದಕ್ಷವಾಗಿ ಜನರನ್ನು ತಲುಪುವಂತೆ ಮಾಡುವ ಕನಸನ್ನು ಆಗ ಗುಜರಾತ್ ಇಡೀ ದೇಶಕ್ಕೆ ಬಿತ್ತುತ್ತಿತ್ತು.
ಇದಾದ ಮೂರು ತಿಂಗಳ ಬಳಿಕ ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಘಟನೆ ನಡೆಯಿತು. 2002ರ ಫೆಬ್ರುವರಿ 27ರಂದು ಅಯೋಧ್ಯೆಯಿಂದ ವಾಪಸಾಗುತ್ತಿದ್ದ 54 ಕರಸೇವಕರು ಜೀವಂತ ದಹನವಾದರು. ಮೃತದೇಹಗಳನ್ನು ಅಹಮದಾಬಾದ್‌ನ ಬೀದಿಗಳಲ್ಲಿ ಮೆರವಣಿಗೆ ಮಾಡಲು ಅವಕಾಶ ನೀಡಲಾಯಿತು. ಮರುದಿನವೇ ಗುಜರಾತ್‌ನಲ್ಲಿ ಗಲಭೆ, ಹತ್ಯಾಕಾಂಡ ಆರಂಭವಾಯಿತು. ಇದು ಕೆಲ ದಿನಗಳವರೆಗೆ ಮತ್ತು ಕೆಲವಡೆ ತಿಂಗಳುಗಳವರೆಗೆ ಮುಂದುವರಿಯಿತು. ದಾಳಿ ಮಾಡಬೇಕಾದ ಜನರ ಮತ್ತು ಮನೆಗಳ ಪಟ್ಟಿಯನ್ನು ಹಿಡಿದುಕೊಂಡು ಗಲಭೆಕೋರರ ಗುಂಪುಗಳು ಮುಂದುವರಿದಿದ್ದು ಮಾಧ್ಯಮ ಮತ್ತು ಅಧಿಕಾರಿಗಳ ತನಿಖಾ ವರದಿಯಿಂದ ತಿಳಿದುಬಂದಿತ್ತು. ಮುಸ್ಲಿಮರ ಮನೆಗಳ ಬಾಗಿಲಿನ ಮೇಲೆ ಅಡ್ಡ ಗುರುತನ್ನು ಹಾಕಲಾಗಿತ್ತು. ಅದರ ಮರುದಿನವೇ ಆ ಮನೆಗಳ ಮೇಲೆ ದಾಳಿ ನಡೆದಿತ್ತು. ಜನರನ್ನು ಮನೆಗಳಿಂದ ಹೊರದಬ್ಬಲಾಯಿತು. ಅತ್ಯಾಚಾರ ನಡೆಸಲಾಯಿತು. ರಸ್ತೆಯಲ್ಲಿಯೇ ಹತ್ಯೆ ಮಾಡಲಾಯಿತು. ಕೆಲವೊಂದು ಮನೆಗಳಿಗೆ ಬೆಂಕಿ ಹಚ್ಚಿ ಅದರಲ್ಲಿದ್ದವರನ್ನು ಜೀವಂತ ದಹನ ಮಾಡಲಾಯಿತು. ನಂತರದ ದಿನಗಳಲ್ಲಿ ನರೇಂದ್ರ ಮೋದಿಯವರು ಹಿಂದೂ ಹೃದಯ ಸಾಮ್ರಾಟರಾದರು. ವಿಶ್ವದಾದ್ಯಂತ ಈ ಘಟನೆ ಮತ್ತು ನಂತರದ ಬೆಳವಣಿಗೆಗಳಿಗೆ ವಿರೋಧ ವ್ಯಕ್ತವಾದಾಗ ತಮ್ಮನ್ನು ‘ವಿಕಾಸ ಪುರುಷ’ ಎಂದು ಬಿಂಬಿಸಿಕೊಂಡರು. ಕೊನೆಗೆ ಪ್ರಧಾನಮಂತ್ರಿಯಾದರು.
ಮುಸ್ಲಿಮರನ್ನು ಹುಡುಕಲು ಮತ್ತು ಗುರಿಯಾಗಿಸಲು ಹತ್ಯಾಕಾಂಡದ ಸಂಚುಕೋರರಿಗೆ ಆ ಸ್ಮಾರ್ಟ್‌ಕಾರ್ಡ್‌ಗಳು ನೆರವಾಯಿತೋ ಇಲ್ಲವೋ ಎಂಬುದು ನನಗೆ ತಿಳಿಯದು. ಆದರೆ, ನಿರ್ದಿಷ್ಟ ಧರ್ಮಕ್ಕೆ ಸೇರಿದ ಜನರನ್ನು ಬೇರುಸಹಿತ ನಿರ್ಮೂಲನೆ ಮಾಡಲು ಅಂತಹದ್ದೇ ಸಾಧನ ಬಳಸಿದ ಕುಖ್ಯಾತ ಉದಾಹರಣೆ ನಮ್ಮ ಮುಂದಿದೆ. 1930ರಲ್ಲಿ ಯಹೂದಿಗಳನ್ನು ಪತ್ತೆಹಚ್ಚಲು ಮತ್ತು ನಿರ್ಮೂಲನೆಗೊಳಿಸಲು ಹಿಟ್ಲರ್‌ನ ನಾಜಿ ಪಕ್ಷವು ಐಟಿ ತಂತ್ರಜ್ಞಾನದ ಓಬಿರಾಯನಕಾಲದ ಮಾದರಿ ಎನಿಸಿದ ಹಾಲೆರಿತ್ ಪಂಚ್ ಕಾರ್ಡ್‌ಗಳನ್ನು ಬಳಸಿಕೊಂಡಿತ್ತು.
ನಾಜಿ ಇತಿಹಾಸದಲ್ಲಿಯೂ ಫೆಬ್ರುವರಿ 27 ಮಹತ್ವದ ದಿನ. ಇದು ಜರ್ಮನಿಯ ಅಧಿಕಾರವನ್ನು ಹಿಟ್ಲರ್ ವಶಕ್ಕೆ ತೆಗೆದುಕೊಂಡ ದಿನ. 1933ರಲ್ಲಿ ನಾಜಿಗಳು ಅಧಿಕಾರಕ್ಕೆ ಬಂದು ಹಿಟ್ಲರ್ ಅದರ ನೇತೃತ್ವ ವಹಿಸಿದ್ದ. ಫೆಬ್ರುವರಿ 27ರಂದು ಕೆಲವು ದುಷ್ಕರ್ಮಿಗಳು ಜರ್ಮಿನಿಯ ಸಂಸತ್ ಕಟ್ಟಡಕ್ಕೆ ಬೆಂಕಿ ಹಚ್ಚಿದರು. ಕಟ್ಟಡಕ್ಕೆ ಬೆಂಕಿ ಹಚ್ಚಿದ್ದು ಕಮ್ಯೂನಿಸ್ಟರು ಎಂದು ಹಿಟ್ಲರ್ ತಕ್ಷಣವೇ ಘೋಷಿಸಿದ. ತುರ್ತು ಪರಿಸ್ಥಿತಿ ಘೋಷಿಸಿ ಎಲ್ಲ ಅಧಿಕಾರವನ್ನೂ ತನ್ನ ಕೈಗೆ ತೆಗೆದುಕೊಂಡ. 60 ಲಕ್ಷ ಯಹೂದಿಗಳ ನಿರ್ನಾಮ ಮತ್ತು ಯುರೋಪ್‌ನ ದುರಂತಕ್ಕೆ ಕಾರಣನಾದ ಸರ್ವಾಧಿಕಾರಿಯ ಉಗಮವಾದದ್ದು ಹೀಗೆ.
ನಾನೇಕೆ ಇದನ್ನು ಈಗ ನೆನಪಿಸುತ್ತಿದ್ದೇನೆ? ಇದು ಯಾಕೆ ಈಗ ಮಹತ್ವದ್ದಾಗಿದೆ? ಸ್ವತಂತ್ರ ರಾಷ್ಟ್ರವಾಗಿ ನಾವು ನಮ್ಮ ಇತಿಹಾಸದ ನಿರ್ಣಾಯಕ ಹಂತದಲ್ಲಿದ್ದೇವೆ. ಹೀಗಾಗಿ ಈ ವಿಷಯ ಮಹತ್ವ ಪಡೆದಿದೆ. ದೇಶದ ಇತಿಹಾಸದಲ್ಲೇ ಅತಿ ಮಹತ್ವದ ಚುನಾವಣೆಯನ್ನು ನಾವು ಎದುರಿಸುತ್ತಿದ್ದೇವೆ. ಇದು ಭಾರತದ ಆತ್ಮ ಮತ್ತು ಭವಿಷ್ಯ ನಿರ್ಧರಿಸುವ ಚುನಾವಣೆ. ಜಾತ್ಯತೀತತೆ, ವೈವಿಧ್ಯತೆ, ಸಹನೆ, ಎಲ್ಲ ರೀತಿಯ ಜನರನ್ನು ಸ್ವೀಕರಿಸುವ ದೇಶದ ಪ್ರಮುಖ ಧ್ಯೇಯಗಳನ್ನು ನಾವು ಮಹಾಭಾರತದ ಕರ್ಣನಂತೆ ಮರೆಯುತ್ತಿರುವುದು ದುಃಖದ ಸಂಗತಿ. ಯಾರಿಗೆ ಮತ ನೀಡಬೇಕು ಎಂಬ ಬಗ್ಗೆ ಗೊಂದಲಕ್ಕೊಳಗಾಗಿದ್ದೇವೆ ಎಂದು ಆಧುನಿಕ ಚಿಂತಕರು, ಬುದ್ಧಿಜೀವಿಗಳು ಹಾಗೂ ಜನಸಾಮಾನ್ಯರು ಸೇರಿದಂತೆ ಅನೇಕರು ಹೇಳುತ್ತಿದ್ದಾರೆ. ಅವರು ಮೋದಿ–ಇತರರು, ಮೈತ್ರಿ ಸಾಧ್ಯತೆ, ಕಳೆದ ಐದು ವರ್ಷಗಳಲ್ಲಿ ಈಡೇರದ ಭರವಸೆಗಳು ಮತ್ತು ಅದಕ್ಕಿಂತ ಹಿಂದಿನ ಮೂರು ವರ್ಷಗಳ ನಿರಾಶಾದಾಯಕ ಆಡಳಿತ, ವಂಶಾಡಳಿತ ಪಕ್ಷಗಳು ಹಾಗೂ ಶಿಸ್ತಿನ ಸಿಪಾಯಿಗಳ ಪಕ್ಷ, ಇವೆಲ್ಲದಕ್ಕಿಂತಲೂ ಮುಖ್ಯವಾಗಿ ಭ್ರಷ್ಟಾಚಾರ ಮತ್ತು ಕೋಮುವಾದ ಎಂಬ ವಿಷಯಗಳ ಮಧ್ಯೆ ಸಿಲುಕಿದ್ದಾರೆ. ಆದಾಗ್ಯೂ ನನ್ನ ಆದ್ಯತೆ ಸ್ಪಷ್ಟವಾಗಿದೆ.
ವಂಶಾಡಳಿತ ಇಂದೋ ನಾಳೆಯೋ ಕೊನೆಗೊಳ್ಳಬಹುದು. ಪ್ರಾಮಾಣಿಕ ಪ್ರಯತ್ನ ಮಾಡಿಯೂ ಈಗಿನ ಸರ್ಕಾರ ಅಥವಾ ಹಿಂದಿನ ಸರ್ಕಾರ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾದರೆ ಅದು ಅಪರಾಧವಲ್ಲ. ಭ್ರಷ್ಟಾಚಾರವು ಎಲ್ಲ ಪಕ್ಷಗಳಲ್ಲಿಯೂ ಹಾಸುಹೊಕ್ಕಾಗಿದ್ದು, ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳು ವಿಕಾಸಗೊಳ್ಳುವ ವೇಳೆಗೆ ಕಾಲಕ್ಕೆ ತಕ್ಕಂತೆ ಅದನ್ನು ನಿಭಾಯಿಸಬಹುದು. ವಾಸ್ತವವಾಗಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. 2005ರಲ್ಲಿ ಜಾರಿಗೆ ಬಂದ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಇದಕ್ಕೆ ಉದಾಹರಣೆ. ಕೋಮುವಾದ ಮತ್ತು ದ್ವೇಷವನ್ನು ಒಮ್ಮೆ ಜನರ ಮನಸ್ಸುಗಳನ್ನು ಬಿತ್ತಿದರೆ ನಾಶವಾಗಲಾರದು. ಸರ್ಕಾರ ನಡೆಸುತ್ತಿರುವ ಪಕ್ಷಧಾರ್ಮಿಕ ಬಹುಸಂಖ್ಯಾತ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೋಮುವಾದ ಮತ್ತು ದ್ವೇಷ ಬೆರೆಸಿದರೆ ಅದು ಅಪಾಯಕಾರಿ. ಇದಕ್ಕೆ ನಾನು ಮತ ನೀಡಲಾರೆ.
ಪ್ರತಿಪಕ್ಷಗಳ ಭ್ರಷ್ಟಾಚಾರದ ಬಗ್ಗೆ ಮೋದಿ ವಾಗ್ದಾಳಿ ನಡೆಸಿರುವುದು ಚುನಾವಣಾ ಸಮಯದ ವಾಕ್ಚಾತುರ್ಯ. ಭ್ರಷ್ಟಾಚಾರವು ದೇಶ ಎದುರಿಸುತ್ತಿರುವ ಏಕೈಕ ಸಮಸ್ಯೆ,ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಂಚೂಣಿಯಲ್ಲಿದ್ದು ಅದಕ್ಕೆ ಕೊನೆಗಾಣಿಸಬೇಕಿದೆ ಎಂದು ಬಿಂಬಿಸುವಲ್ಲಿ 2014ರ ಚುನಾವಣೆ ಸಂದರ್ಭ ಮೋದಿ ಯಶಸ್ವಿಯಾದರು.
ಮೊದಲನೆಯದಾಗಿ, ಭ್ರಷ್ಟಾಚಾರವಷ್ಟೇ ಅಲ್ಲ, ಕೋಮುವಾದವೂ ದೇಶಕ್ಕೆ ಅಪಾಯಕಾರಿ. ಸಾಮಾಜಿಕ ಜಾಲತಾಣಗಳ ಮೂಲಕವೂ ಸೇರಿದಂತೆ ಕೋಮುಗಳ ನಡುವೆ ದ್ವೇಷ ಬಿತ್ತುವುದು, ಕಳೆದ 5 ವರ್ಷಗಳಲ್ಲಿ ನಡೆದಿರುವ ಗುಂಪುಹಲ್ಲೆ ಮತ್ತು ಹತ್ಯೆಗಳೂಅಪಾಯಕಾರಿ. ಸರ್ವಾಧಿಕಾರದತ್ತ ಹೊರಳುವುದೂ ಅಪಾಯಕಾರಿಯೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಚಾಣಕ್ಯ ಹೀಗೆ ಬರೆದಿದ್ದರು; ‘ನೀರಿನಲ್ಲೇ ಈಜುವ ಮೀನು ನೀರು ಕುಡಿಯಿತೋ, ಇಲ್ಲವೋ, ತಿಳಿಯುವುದು ಹೇಗೆ? ಹಾಗೆಯೇ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕ ನಿಧಿಯನ್ನು ಕಬಳಿಸುವುದೂ ಗೊತ್ತಾಗದು’. ಭ್ರಷ್ಟಾಚಾರವು ದೇಶ ಅತಿ ದೀರ್ಘ ಅವಧಿಯಿಂದಲೂ ಎದುರಿಸಿಕೊಂಡು ಬಂದಿರುವ ಸಮಸ್ಯೆ. ಪ್ರಾಚೀನ ಭಾರತವೂ ಇದಕ್ಕೆ ಹೊರತಲ್ಲ. ಅದು ಮೋದಿ ಮತ್ತು ಬಿಜೆಪಿ ಬಿಂಬಿಸುವಂತೆ 20ನೇ ಶತಮಾನದಲ್ಲಿ ಕಾಂಗ್ರೆಸ್ ಪಕ್ಷದ ಆಳ್ವಿಕೆಯೊಂದಿಗೆ ಆರಂಭವಾದದ್ದೂ ಅಲ್ಲ. ಆ ಪಕ್ಷವು ನಿರ್ಗಮಿಸಿದಾಗ ನಿರ್ಮೂಲನೆಯಾಗುವುದೂ ಇಲ್ಲ. ಎಲ್ಲ ಪರಿಣಾಮಗಳ ಹೊರತಾಗಿಯೂ ನೂರಾರು ವರ್ಷಗಳಿಂದ ಭ್ರಷ್ಟಾಚಾರವು ದೇಶವನ್ನು ಒಡೆದು ಹೋಳುಗಳನ್ನಾಗಿಸಿಲ್ಲ. ದೇಶವನ್ನು ಒಡೆದದ್ದು ಹಠಾತ್ ಆಗಿ ಸೃಷ್ಟಿಯಾದ ಕೋಮುವಾದ. 19ನೇ ಶತಮಾನದ ಅಂತ್ಯದ ವೇಳೆಗೆ ಸೃಷ್ಟಿಯಾದ ಹಿಂದೂ ಮತ್ತು ಮುಸ್ಲಿಂ ಕೋಮುವಾದ ದೇಶದ ವಿಭಜನೆಗೆ ಕಾರಣವಾಯಿತು. ಭ್ರಷ್ಟಾಚಾರ ಒಂದು ತೆವಳುವ ಬಿಕ್ಕಟ್ಟಾದರೆ ಕೋಮುವಾದ ಆಸ್ಫೋಟಿಸುವ ಬಿಕ್ಕಟ್ಟು. ಕಳೆದ ಐದು ವರ್ಷಗಳಲ್ಲಿ ಅದು ತನ್ನ ಕೊಳಕು ತಲೆಯನ್ನು ಹೊರಹಾಕಿದಾಗ ಪ್ರತಿಕ್ರಿಯಿಸಲೂ ಸಮಯವಿರಲಿಲ್ಲ. ಭಿನ್ನಮತವನ್ನು ಸಹಿಸಿಕೊಳ್ಳದಿದ್ದರೆ ಅದು ಅಂತಃಕಲಹಕ್ಕೆ ಕಾರಣವಾಗಬಹುದು ಎಂಬುದನ್ನು ಗಾಂಧಿ, ನೆಹರು, ಮೌಲಾನಾ ಆಜಾದ್ ಮಾತ್ರವಲ್ಲದೆ ಕಾಂಗ್ರೆಸ್‌ನಲ್ಲಿ ಬಲಪಂಥೀಯರಾಗಿದ್ದ ಸುಭಾಷ್‌ಚಂದ್ರಬೋಸ್, ಸರ್ದಾರ್ ಪಟೇಲರು ಸಹ ತಮ್ಮ ನೀತಿಯಿಂದ ಕಂಡುಕೊಂಡಿದ್ದರು. ಇದು ಇಂದು ನಾವು ಕಲಿಯಬೇಕಿರುವ ಪಾಠವಾಗಿದೆ.
ಹಾಗೆಂದು ಭ್ರಷ್ಟಾಚಾರವನ್ನು ಕ್ಷಮಿಸಬೇಕು ಎಂದಲ್ಲ. ಆದರೆ ಅದಕ್ಕಿಂತಲೂ ಸದ್ಯ ನಾವು ಎದುರಿಸುತ್ತಿರುವ ಸ್ಪಷ್ಟವಾದ ಅಪಾಯಕಾರಿ ವಿಷಯದ ಬಗ್ಗೆ ದೃಷ್ಟಿಹರಿಸಬೇಕಷ್ಟೆ. ಯಾವುದೇ ಪ್ರಕರಣದಲ್ಲಿ ಬಿಜೆಪಿ ಮತ್ತು ಅದರ ನಾಯಕರು ಭ್ರಷ್ಟರಲ್ಲ ಎಂದು ನಾವು ಅಂದುಕೊಳ್ಳಬೇಕೇ? ಅವರೂಬಂಡವಾಳಶಾಹಿಗಳೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡವರಲ್ಲವೇ? ಜಿಎಸ್‌ಪಿಸಿ ಪ್ರಕರಣ (ಗುಜರಾತ್ ರಾಜ್ಯ ಪೆಟ್ರೋಲಿಯಂ ಕಾರ್ಪೊರೇಷನ್), ಸಹರಾ–ಬಿರ್ಲಾ ಡೈರೀಸ್, ರಫೇಲ್ ಹಗರಣ, ದೆಹಲಿ ವಿಮಾನ ನಿಲ್ದಾಣದಲ್ಲಿ ರಾಜತಾಂತ್ರಿಕ ಮಾರ್ಗದ ಮೂಲಕ ವಿಜಯ್ ಮಲ್ಯ ಪರಾರಿಯಾದದ್ದು (ಮಲ್ಯ ವಿರುದ್ಧ ಹೊರಡಿಸಿದ ಲುಕ್ ಔಟ್ ನೊಟೀಸ್ ಬಲಹೀನವಾದ ನಂತರ 300 ಬ್ಯಾಗ್‌ಗಳೊಂದಿಗೆ ಮಲ್ಯ ಪರಾರಿಯಾದರು ಎಂದು ಜಾರಿ ನಿರ್ದೇಶನಾಲಯವೇ ಹೇಳಿದೆ),ಲಲಿತ್ ಮತ್ತು ನೀರವ್ ಮೋದಿ ಪರಾರಿ, ಜನಾರ್ದನ ರೆಡ್ಡಿ ವಿರುದ್ಧದ ಗಣಿಗಾರಿಕೆ ಪ್ರಕರಣಕ್ಕೆ ಸಿಬಿಐ ತೆರೆ ಎಳೆದದ್ದು, ವಿದೇಶಿ ದೇಣಿಗೆ ಕಾಯ್ದೆಗೆ ತಿದ್ದುಪಡಿ ಮಾಡಿ 1976ರ ನಂತರ ಬಿಜೆಪಿ, ಕಾಂಗ್ರೆಸ್, ಎಡಪಕ್ಷಗಳು ಪಡೆದ ವಿದೇಶಿ ದೇಣಿಗೆಯ ತನಿಖೆಗೆ ತಡೆಯೊಡ್ಡಿದ್ದು, ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ನು ದುರ್ಬಲಗೊಳಿಸಿದ್ದು, ವಿದೇಶ ಪ್ರಯಾಣದ ವೇಳೆ ಪ್ರಧಾನಿ ಜತೆಗಿದ್ದ ಉದ್ಯಮಿಗಳ ಕುರಿತು ಆರ್‌ಟಿಐ ಅಡಿ ಮಾಹಿತಿ ನೀಡಲು ನಿರಾಕರಿಸಿದ್ದು ಇತ್ಯಾದಿ... ಬಿಜೆಪಿಯ ಚುನಾವಣಾ ಖರ್ಚಿಗೆ ಅಪಾರ ಪ್ರಮಾಣದಲ್ಲಿ ಎಲ್ಲಿಂದ ಹಣ ಬರುತ್ತದೆ ಎಂಬ ಬಗ್ಗೆ ಅಚ್ಚರಿಪಡದೇ ಇರುವುದು, ಇವೆಲ್ಲವನ್ನೂ ನೋಡಿದ ಯಾರಾದರೂ ‘ಭಕ್ತಿ ಕುರುಡು’ ಎಂದಷ್ಟೇ ಉದ್ಗರಿಸಬಲ್ಲರು.
ನಾವು ಪ್ರಜಾಪ್ರಭುತ್ವದಲ್ಲಿ ಕೆಲಸ ಮಾಡುತ್ತಿರುವವರೆಗೆ ಭ್ರಷ್ಟಾಚಾರ ನಿರ್ಮೂಲನೆ ವಿಷಯದಲ್ಲಿ ಹೆಜ್ಜೆ ಮುಂದಿಡಬಹುದು. ಅದು ಕಾಂಗ್ರೆಸ್ ಆಗಿರಲಿ, ಬಿಜೆಪಿ ಆಗಿರಲಿ ಅಥವಾ ಇತರ ಯಾವುದೇ ಪಕ್ಷವಾಗಿರಲಿ. ಆದರೆ ರಾಜಕಾರಣಿಗಳು ದ್ವೇಷ ಬಿತ್ತಿ ಸಮಾಜವನ್ನು ಧ್ರುವೀಕರಿಸಲು, ಅವರ ಖಾಸಗಿ ಪಡೆ ಹಿಂಸಾಚಾರದಲ್ಲಿ ತೊಡಗಲು, ಕಾನೂನು–ಸುವ್ಯವಸ್ಥೆ ಹದಗಡೆಲು, ಸರ್ಕಾರ ಮತ್ತು ಉದ್ಯಮ ಒಂದಾಗಲು ನಾವು ಅನುವು ಮಾಡಿಕೊಟ್ಟು ಭಾರತ ಸರ್ವಾಧಿಕಾರದತ್ತ ಹೊರಳಲು ಬಿಟ್ಟಲ್ಲಿ ಆಶಾವಾದ ಕೊನೆಯಾಗಲಿದೆ. ಪ್ರಜಾಪ್ರಭುತ್ವವು ಭ್ರಷ್ಟಾಚಾರವನ್ನು ತೊಡೆದುಹಾಕಲು ಸಂಸ್ಥೆಗಳನ್ನು ನಿರ್ಮಿಸಬಲ್ಲದು. ಆದರೆ ಕೋಮು ದ್ವೇಷವನ್ನಲ್ಲ. ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದ ಸಂಸ್ಥೆಗಳು ಉಳಿಯಲಾರವು.
ಹೀಗಾಗಿ ಪ್ರಜಾಪ್ರಭುತ್ವವನ್ನು ರಕ್ಷಿಸುವುದಕ್ಕಾಗಿ ಮತ ನೀಡುವುದು ನನ್ನ ಮೊದಲ ಆದ್ಯತೆ. ಕರ್ಣನಂತೆ, ಈ ನಿರ್ಣಾಯಕ ಸಮಯದಲ್ಲಿ ನಾನು ಮಂತ್ರವನ್ನು ಮರೆಯುವುದಿಲ್ಲ. ನೀವು ಏನು ಹೇಳುತ್ತೀರಿ?
ಮೂಲ:ಡೆಕ್ಕನ್ ಹೆರಾಲ್ಡ್ ಜಾಲತಾಣದಲ್ಲಿ ಮಾರ್ಚ್ 27ರಂದು ಪ್ರಕಟವಾದ Greatest threat to India is communalism, not corruptionಲೇಖನ.ಲೇಖನವನ್ನು ಫೆಬ್ರುವರಿ 27ರಂದೇ ಬರೆಯಲಾಗಿತ್ತು. ಆದರೆ, ಆಗ ಭಾರತ–ಪಾಕಿಸ್ತಾನ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಪ್ರಕಟಿಸಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.