ADVERTISEMENT

ಮಹಾನ್ ಮಾನವತಾವಾದಿಗಳು: ಗುರು ಗೋವಿಂದ ಭಟ್ಟ, ಶಿಷ್ಯ ಸಂತ ಶಿಶುನಾಳ ಶರೀಫ

ಜುಲೈ 3 ಸಂತ ಶಿಶುನಾಳ ಶರೀಫರ ಜನುಮ ದಿನ ಹಾಗೂ ಪುಣ್ಯ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 1:30 IST
Last Updated 3 ಜುಲೈ 2022, 1:30 IST
ಗುರು ಗೋವಿಂದ ಭಟ್ಟರು ಮತ್ತು ಶರೀಫರು
ಗುರು ಗೋವಿಂದ ಭಟ್ಟರು ಮತ್ತು ಶರೀಫರು   

ಕರ್ನಾಟಕವು ಶರಣರು, ದಾಸರು, ತತ್ವಪದಕಾರರು ಹಾಗೂ ಸರ್ವಧರ್ಮಿಯರು ಬದುಕಿ ಬಾಳಿದ ನಾಡು. ಇವರು ತಮ್ಮ ಬದುಕು, ಚಿಂತನೆ, ಸಾಹಿತ್ಯಗಳಿಂದ ಜನರ ಮೇಲೆ ಅಪಾರ ಪ್ರಭಾವ ಬೀರಿದರು. ಇವರಲ್ಲಿ 19ನೆಯ ಶತಮಾನದ ಕಳಸದ ಗುರು ಗೋವಿಂದ ಭಟ್ಟರು ಹಾಗೂ ಶಿಶುನಾಳ ಶರೀಫರು ಪ್ರಮುಖರು. ಇವರಿಬ್ಬರ ಬದುಕು ಹಾಗೂ ಅವರ ತತ್ವಪದಗಳೂ, ಧಾರ್ಮಿಕ ಭಾವೈಕ್ಯತೆ, ಸಾಮರಸ್ಯದ ಸಮಾನತೆಗೆ ಅಪೂರ್ವ ನಿದರ್ಶನಗಳಾಗಿವೆ.

`ಈಶ್ವರ ಅಲ್ಲಾ, ನೀನೇ ಎಲ್ಲಾ' ಎಂದು ಬೋಧಿಸಿದವರು, ಆಚರಣೆಯಲ್ಲಿ ತಂದವರು ಹಾಗೂ ಸಾಧಿಸಿದವರು ಕಳಸದ ಗುರು ಗೋವಿಂದ ಭಟ್ಟರು ಹಾಗೂ ಅವರ ಶಿಷ್ಯರಾದ ಕರ್ನಾಟಕದ ಕಬೀರ ಸಂತ ಶಿಶುನಾಳ ಶರೀಫರು. ಮಂದಿರ-ಮಸೀದಿ, ಪುರಾಣ-ಕುರಾನ, ನಮನ-ನಮಾಜ್, ಅಲ್ಲಮ-ಅಲ್ಲಾ, ಜಂಗಮ-ಫಕೀರ, ಇವೆಲ್ಲಾ ಒಂದೇ, ಭಗವಂತನ ದರ್ಶನಕ್ಕೆ ನಾವು ಹಾಕಿಕೊಂಡ ವಿವಿಧ ಹಾದಿಗಳು ಎಂದು ತೋರಿಸಿದಂತಹ "ದಾರ್ಶನಿಕರು" ಕಳಸದ ಗುರು ಗೋವಿಂದ ಭಟ್ಟರು ಹಾಗೂ ಸಂತ ಶಿಶುನಾಳ ಶರೀಫರು.

ಹಿಂದೂ ಹಾಗೂ ಇಸ್ಲಾಂ ಧರ್ಮಗಳ ಸಮಾನತೆ, ಸಮನ್ವಯ ಹಾಗೂ ಸಮಭಾವನ್ನು, ಸಮಚಿತ್ತ ಹಾಗೂ ಸಮದೃಷ್ಟಿಯಿಂದ ನೋಡಿದ ‘ಸಮಾನತೆಯ ಹರಿಕಾರರು‘ ಕಳಸದ ಗುರು ಗೋವಿಂದಭಟ್ಟರು ಹಾಗೂ ಸಂತ ಶಿಶುನಾಳ ಶರೀಫರು. ಇವರಿಬ್ಬರೂ ದೈವಭಕ್ತರು, ಆತ್ಮಜ್ಞಾನಿಗಳು, ತತ್ವಜ್ಞಾನಿಗಳು, ವಿಚಾರವಾದಿಗಳು, ವಿಮರ್ಶಕರು, ಶಾಂತಿ ಹಾಗೂ ಕ್ರಾಂತಿ ಪುರುಷರು, ಸಮಾಜ ಸುಧಾರಕರು, ನೀತಿ ಬೋಧಕರು ಹಾಗೂ ತ್ರಿಕಾಲ ಜ್ಞಾನಿಗಳು. ಎಲ್ಲಕ್ಕಿಂತ ಹೆಚ್ಚಾಗಿ ಇವರಿಬ್ಬರೂ ಸಮಸಮಾಜದ, ಮಾನವತೆಯ ಎರಡು ಕಣ್ಣುಗಳಾಗಿ 'ಮಹಾನ್ ಮಾನವತಾವಾದಿ'ಗಳಾಗಿ ಸಮಾಜಕ್ಕೆ ಬೆಳಕನ್ನು ಕೊಟ್ಟವರು.

ADVERTISEMENT

ಜಾತಿ, ಧರ್ಮ, ಕುಲ, ಗೋತ್ರ, ಲಿಂಗ, ಪಂಥ, ಮೇಲು-ಕೀಳು, ಉಚ್ಚ-ನೀಚ ಎಂಬ ಮಾನವ ನಿರ್ಮಿತ ಗೋಡೆಗಳನ್ನು ಕೆಡವಿ, 'ಮಾನವ ಧರ್ಮವೇ ಶ್ರೇಷ್ಠ ಧರ್ಮ' ಎಂದು ತೋರಿಸಿ, ಸಾಧಿಸಿ, ಮಾನವೀಯ ಮೌಲ್ಯಗಳಿಗೆ ಕಳಸವಿಟ್ಟಂತಹ ಕಳಸದ ಗುರು ಗೋವಿಂದ ಭಟ್ಟರ ವಂಶಜನಾಗಿ, ಕಳಸದ ಗುರುಗೋವಿಂದ ಭಟ್ಟರ ಶಿಷ್ಯನಾದ ಸಂತ ಶಿಶುನಾಳ ಶರೀಫರ ಜನ್ಮದಿನ ಹಾಗೂ ಪುಣ್ಯಸ್ಮರಣೆಯ ದಿನದಂದು, ಈ ವಿಶೇಷ ಲೇಖನವನ್ನು ನಾನು ಬಹಳ ಹೆಮ್ಮೆಯಿಂದ, ವಿನಯದಿಂದ ಗೌರವದಿಂದ ಬರೆಯುತ್ತಿದ್ದೇನೆ.

ನಾಡೋಜ ಡಾ. ಮಹೇಶ ಜೋಶಿ

ಗುರು ಗೋವಿಂದಭಟ್ಟರ ಶಿಷ್ಯರಾದ ಶರೀಫ ಸಾಹೇಬರು ಅನುಭಾವಿಗಳು. ಅವರು ಜನಿಸಿದ್ದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಒಂದು ಸಣ್ಣ ಹಳ್ಳಿ ಶಿಶುನಾಳ ಗ್ರಾಮದ ದೇವಕಾರ ಮನೆತನದಲ್ಲಿ. ಈ ಸಣ್ಣ ಗ್ರಾಮದ ಹಜರತ ಇಮಾಮ ಸಾಹೇಬರು ಹಾಗೂ ಹಜ್ಜುಮಾ ಎಂಬ ಮುಸ್ಲಿಂ ದಂಪತಿಗೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಹುಲಗೂರಿನ ಸಂತ ಸೈಯದ್ ಹಜರತ್ ಶಾ ಖಾದ್ರಿಯವರ ವರಪ್ರಸಾದವಾಗಿ 1819ನೆಯ ಜುಲೈ 3 ರಂದು ಶರೀಫರು ಜನಿಸಿದರು. ತಂದೆ ಹಜರತ ಇಮಾಮರು ಅಲ್ಲಾನ ಆದರ್ಶ ಭಕ್ತರು. ಸಮಾಜಸೇವೆ, ಸಮಾಜಕಲ್ಯಾಣ ಅವರ ಆದರ್ಶ ಜೀವನವಾಗಿತ್ತು.

ಹುಲಗೂರಿನ ಖಾದ್ರಿಯವರೇ ‘ಮೊಹಮ್ಮದ್ ಶರೀಫ‘ ಎಂದು ಹೆಸರಿಟ್ಟರು. ಮುಂದೆ ಇದೇ ಹೆಸರು ಶಿಶುನಾಳ ಶರೀಫ ಎಂದು ಜನಪ್ರಿಯವಾಯಿತು. `ಶರೀಫ' ಎಂಬ ಪಾರ್ಸಿ ಭಾಷೆಯ ಪದದ ಅರ್ಥ `ಉದಾತ್ತ ಧ್ಯೇಯ'ಗಳ ಅಥವಾ `ಉತ್ತಮ ಶೀಲ ಸ್ವಭಾವ' ಹೊಂದಿ ಇತರರಿಂದ ಗೌರವಿಸಲ್ಪಡುವ ವ್ಯಕ್ತಿ.ಹೆಸರಿಗೆ ಅನ್ವರ್ಥರಾಗಿ ಬಾಳಿದ ಸಂತ ಶರೀಫರು ಇಂದಿಗೂ ಜನಮನದಲ್ಲಿ ನಿಲ್ಲಲು ಕಾರಣ ಅವರು ಏರಿದ ಸಾಧನೆಯ ಶಿಖರ. ಅವರ ಜಾತ್ಯತೀತ ಮನಸ್ಸು, ಜನರ ಸುಂದರ ಬದುಕನ್ನು ನೇಯುವ ತತ್ವದತ್ತ ಹೊರಳುತ್ತ, ತಾನು ಕಂಡ ಸತ್ಯವನ್ನು ಜಗತ್ತಿಗೆ ಸಾರುತ್ತ, ಜಾತಿ ಧರ್ಮಗಳ ಬೇಲಿಯನ್ನು ದಾಟಿ ವಿಹರಿಸಿತ್ತು.

ಇವರ ತತ್ವಪದಗಳು ಸಾಹಿತ್ಯಲೋಕಕ್ಕೆ, ಆಧ್ಯಾತ್ಮಿಕಲೋಕಕ್ಕೆ ಬೆಳಕು ತೋರುವ ಕಿಡಿಗಳಾದವು. ನೇರವಾದ ಪುಟ್ಟಪುಟ್ಟ ನುಡಿಗಳು, ಜನಪದ ಭಾಷೆಯ ಸೊಗಡಿನಿಂದ ‘ತತ್ವರಸಾಯನ‘ವಾಗಿವೆ. ಇವು ಸಾಹಿತ್ಯ ಸೃಷ್ಟಿಗಾಗಿ ಬರೆದ ಗೀತೆಗಳಲ್ಲ. ಓತಪ್ರೋತವಾಗಿ.
ಸಮಯೋಚಿತವಾಗಿ ಹೊಳೆದ ಭಾವಬಿಂದುಗಳು, ಪ್ರಾಸ, ಛಂದಸ್ಸು ಅಲಂಕಾರಗಳು ಇಲ್ಲಿಯ ಸಹಜ ಸುಂದರ ಶಿಲ್ಪಗಳು. ಶರೀಫರ ಕಾವ್ಯಗಂಗೆ ಬೆಟ್ಟಗುಡ್ಡಗಳಲ್ಲಿ ಧುಮುಕಿ, ಕಣಿವೆಗಳಲ್ಲಿ ಇಣುಕಿ, ಬಯಲಿನಲ್ಲಿ ಪ್ರಶಾಂತವಾಗಿ ಹರಿಯುವ ತಿಳಿಜಲದಂತೆ, ಜನಜೀವನವನ್ನು ಧನ್ಯ ಬದುಕಿನತ್ತ ಕರೆದೊಯ್ಯುವ ಪವಿತ್ರ ಜೀವ ಜಲವಾಗಿದೆ. ಇವರ ಕಾವ್ಯ ಸೃಷ್ಟಿಯಲ್ಲಿ ತತ್ವಪದ, ದಂಡಕ, ಕಾಲಜ್ಞಾನ, ಲಾವಣಿ, ಹೋಳಿಹಾಡು, ರಿವಾಯತ್-ಈ ಎಲ್ಲಾ ವೈವಿಧ್ಯತೆಗಳನ್ನು ಕಾಣಬಹುದು.ಶರಣ ಸಾಹಿತ್ಯ ಹಾಗೂ ದಾಸ ಸಾಹಿತ್ಯಗಳ ಪ್ರಭಾವದೊಡನೆ, ಅನುಭಾವ ಸಾಹಿತ್ಯದ ಮಿಂಚಿನಲ್ಲಿ ಶರೀಫರ ಗೀತೆಗಳು ಜನಸಾಮಾನ್ಯರ ಹೃದಯಕ್ಕೆ ಹತ್ತಿರವಾಗಿವೆ.
ಭಕ್ತಿಯಿಂದ ಜ್ಞಾನ-ವಿರಕ್ತಿ-ಮುಕ್ತಿಯ ಮಜಲುಗಳನ್ನು ಸಾಧಿಸುವುದೇ ‘ಶಿವಯೋಗ‘ವೆಂದು ಸಾರಿದ ಶರೀಫರನ್ನು ಭಕ್ತಜನ "ಶರೀಫ ಶಿವಯೋಗಿ" ಎಂದೇ ಕರೆದರು.

ಶಿಶುನಾಳದಲ್ಲಿಯೇ ತಮ್ಮ ಬಾಲ್ಯವನ್ನು ಕಳೆದ ಶರೀಫರ ಪ್ರಾಥಮಿಕ ಶಿಕ್ಷಣದ ವಿದ್ಯಾಭ್ಯಾಸವೂ ಸ್ಥಳೀಯ ಕನ್ನಡ ಕೂಲಿಮಠದಲ್ಲಿ ಪ್ರಾರಂಭವಾಯಿತು. ಮುಲ್ಕಿ ಪರೀಕ್ಷೆಯಲ್ಲಿ(ಮುಲ್ಕಿ ಅಂದರೆ ಇಂದಿನ 7ನೇತರಗತಿ) ಉತ್ತೀರ್ಣರಾಗಿ ಶಿಶುನಾಳದ ಅಕ್ಕಪಕ್ಕದ ಗ್ರಾಮಗಳಾದ ಮಂಡಿಗನಾಳ, ಕ್ಯಾಲಕೊಂಡ, ಪಾಣಿಗಟ್ಟಿ, ಎರೆಬೂದಿಹಾಳ, ಗಂಜಳಗಳಲ್ಲಿ ಶಿಕ್ಷಕರಾಗಿ ಕೆಲವು ಕಾಲ ಕೆಲಸ ಮಾಡಿದರು. ಉರ್ದು ಹಾಗೂ ಮೋಡಿಗಳನ್ನು ಸ್ವಪ್ರಯತ್ನದಿಂದ ಕಲಿತರು ಬಾಲ್ಯದಿಂದಲೂ ತಂದೆ ಅವರಿಗೆ ಬೋಧಿಸುತ್ತಿದ್ದ ರಾಮಾಯಣ, ಮಹಾಭಾರತಗಳೆಂದರೆ ತುಂಬಾ ಪ್ರೀತಿ. ಅಭಿನಯದಲ್ಲೂ ಅಸಕ್ತಿಯಿದ್ದುದರಿಂದ ರಾಮಾಯಣ, ಮಹಾಭಾರತ, ಅಲ್ಲಮಪ್ರಭು ಬಯಲಾಟಗಳಲ್ಲಿ ಪಾತ್ರವಹಿಸಿ ಪ್ರೇಕ್ಷಕರ ಕಣ್ಮನಗಳನ್ನು ತಣಿಸುತ್ತಿದ್ದರು. ಜಾತ್ರೆ, ಉತ್ಸವ ಮೊದಲಾದವುಗಳಲ್ಲಿ ಅನುಭಾವ ಕವಿಗಳಾದ ಸರ್ವಜ್ಞ, ನಿಜಗುಣಯೋಗಿ, ಸರ್ಪಭೂಷಣ ಶಿವಯೋಗಿಗಳ ಕಾವ್ಯವಾಚನ, ಶಾಸ್ತ್ರಪುರಾಣಗಳ ಶ್ರವಣ-ಮನನ, ಮೊಹರಮ್ ಹಬ್ಬಗಳ ರಿವಾಯತ್ ರಚನೆ ಮತ್ತು ಹೆಜ್ಜೆ ಮೇಳ ಕುಣಿತ ಇವುಗಳ ಪ್ರಭಾವದಿಂದಾಗಿ ಆಧ್ಯಾತ್ಮಿಕ ವಿಷಯಗಳಲ್ಲಿ ಸೆಳೆತ, ಸಾಮಾಜಿಕ ಚಿಂತನೆಗಳು, ಜಾತ್ಯತೀತ ಮನೋಭಾವ ಇವೆಲ್ಲ ಶರೀಫರನ್ನು ‘ಸಂತಕವಿ‘ಯನ್ನಾಗಿಸಿದವು. ಇವರು ಸೃಜಿಸಿದ ಕಾವ್ಯ ಜನರ ಹೃದಯದ ಭಾಷೆಯಾಗಿತ್ತು. ಮತ್ತೊಂದೆಡೆ ಇಸ್ಲಾಂ ಹಬ್ಬಗಳಾದ ಮೊಹರಂ ಹಬ್ಬ, ಅಲಾವಿ, ಕರ್ಬಲಾ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದರು. ಸರ್ವಧರ್ಮ ಸಮನ್ವಯತೆಯನ್ನು ಜನಸಾಮಾನ್ಯರಲ್ಲಿ ಸಾರಿದರು.

ಗುರುಗಳಲ್ಲಿ ಭಕ್ತಿ ಭಾವವನ್ನು ತೋರಿ ನಡೆಯುವವರನ್ನು ಗುರುಪಂಥದವರೆಂದು ಕರೆಯುತ್ತಾರೆ. ಕರ್ನಾಟಕದಲ್ಲೂ ಗುರುಗಳಿಗೆ ಅಗ್ರಸ್ಥಾನವಿದೆ. ಶರೀಫರೂ ಗುರುಕೃಪೆಯನ್ನು ಪಡೆಯಲು ಮಠ ಮಾನ್ಯಗಳಿಗೆ ಹೋಗುತ್ತಿದ್ದರು. ಗುರುವಿಗಾಗಿ ಶೋಧಿಸುತ್ತಿದ್ದ ಈ ಭಕ್ತ ಜೀವಕ್ಕೆ ದೇವರು ನೀಡಿದ ಫಲವೇ `ಗುರು ಗೋವಿಂದಭಟ್ಟರು' ಎಂಬ ಆದರ್ಶ ಗುರುಗಳು.ಗೋವಿಂದ ಭಟ್ಟರು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಕಳಸ ಗ್ರಾಮದವರು. ತ್ರಿಕಾಲಜ್ಞಾನಿಗಳು, ವಿದ್ಯಾವಂತರು, ಅವಧೂತರೆಂದು ಖ್ಯಾತಿ ಪಡೆದವರು.
ನಗೆಮೊಗದ ಪ್ರಸಾದ ವಾಣಿಯ ದಿವ್ಯವ್ಯಕ್ತಿಗಳಾಗಿದ್ದರು.ವಾಕ್‌ಸಿದ್ಧಿಯುಳ್ಳವರು, ಮಹಾತಪಸ್ವಿಗಳು, ದೇವಿ ಆರಾಧಕರು, ಧ್ಯಾನ ಮಾಡಲು ಕುಳಿತರೆ ವಾರಗಳಾದರೂ ಸಹಿತ ಏಳುತ್ತಿರಲಿಲ್ಲ. ಪ್ರಾಪಂಚಿಕ ಜೀವನದ ಯಾವುದೇ ಆಗು ಹೋಗುಗಳು ಅವರನ್ನು ಬಾಧಿಸುತ್ತಿರಲಿಲ್ಲ.

ಅಂತೆಯೇ ಮಡಿ, ಮೈಲಿಗೆ ಅಸ್ಪೃಶ್ಯತೆ, ಮೂಢನಂಬಿಕೆ, ಕಂದಾಚಾರಗಳಿಂದ ಅವರು ದೂರವಿದ್ದರು. ಈ ವೈಜ್ಞಾನಿಕ ಮನೋಭಾವ ಶಿಷ್ಯರಾದ ಶರೀಫರ ಮೇಲೂ ಅಗಾಧ ಪ್ರಭಾವ ಬೀರಿತು.

ಗುರುಗೋವಿಂದರು ದೇವಿಯ ಉಪಾಸಕರಾಗಿದ್ದರು. ಉದಾರ ಹೃದಯಿಗಳಾದ ಗೋವಿಂದ ಭಟ್ಟರು ಮಾನವಕುಲ ಒಂದೇ ಎಂಬ ಭಾವನೆಯುಳ್ಳವರಾಗಿದ್ದರು. ಜಾತಿ ಮತಗಳ ಭೇದವೆಂದರೆ ಇವರಿಗಾಗುತ್ತಿರಲಿಲ್ಲ. ಸ್ವಜಾತಿಯನಲ್ಲದ ತಮ್ಮ ಮುಸಲ್ಮಾನ ಶಿಷ್ಯನಿಗೆ ಮುಕ್ತ ಹೃದಯದಿಂದ ವಿದ್ಯಾದಾನ ಮಾಡಿದರು. ಗುರುಶಿಷ್ಯರಿಬ್ಬರೂ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು.

'ನನ್ನೊಳಗೆ ನಾ ತಿಳಕೊಂಡೆ

ಆಜ್ಞಾ ಪ್ರಕಾರ ನಡಕೊಂಡೆ

ಗುರೂಪದೇಶ ಪಡಕೊಂಡೆ

ಗುರುಗೋವಿಂದನ ಪಾದಾ ಹಿಡಕೊಂಡೆ' ಎಂದು ಗುರುಗೋವಿಂದರಿಗೆ ಶರೀಫರು ಸಂಪೂರ್ಣ ಶರಣಾಗತರಾದರು.
ತಮ್ಮ ತತ್ವಪದಗಳುದ್ದಕ್ಕೂ ಅವರು ಗುರು ಗೋವಿಂದಭಟ್ಟರ ಸ್ಮರಣೆ ಮಾಡುವುದನ್ನು ಎಂದೂ ಮರೆಯಲಿಲ್ಲ. ಶರೀಫರು ತಮ್ಮ ಗುರು ಗೋವಿಂದರ ಆಚಾರ-ವಿಚಾರ, ನಡೆ-ನುಡಿ ಹಾಗೂ ಅವರ ದೈವಿಕ ಹಾಗೂ ಆಧ್ಯಾತ್ಮಿಕ ಶಕ್ತಿಗೆ ಮರುಳಾಗಿ 'ಮಾಯಕ್ಕೆ ಮರುಳಾದೆನೋ ಸದ್ಗುರುನಾಥ ಮಾಯಕ್ಕೆ ಮರುಳಾದನೋ ಗುರುವರ ಗೋವಿಂದ ಪರಮಗಾರುಡಿಗ' ಎಂದು ಗುರುಗೋವಿಂದ ಭಟ್ಟರನ್ನು ಸ್ತುತಿಸಿದ್ದಾರೆ. ಗುರು ಶಿಷ್ಯರು ಯಾವಾಗಲೂ ಜೊತೆಯಾಗಿಯೇ ಇರುತ್ತಿದ್ದರು. ಇವರಿಬ್ಬರ ಸಂಬಂಧಕ್ಕೆ ಕೆಲವು ಬ್ರಾಹ್ಮಣರು ಗೋವಿಂದ ಭಟ್ಟರನ್ನು, `ಈ ಮುಸಲ್ಮಾನನು ನಿಮಗೆ ಬ್ರಾಹ್ಮಣನಂತೆ ಕಾಣುತ್ತಾನೆಯೇ? ಇವನಿಗೆ ವೇದಶಾಸ್ತ್ರ ಕಲಿಸಲು ಬ್ರಹ್ಮೋಪದೇಶವಾಗಿದೆಯೇ? ನಿಮಗೆ ಸ್ವಚ್ಛತೆ ಮತ್ತು ಸಾಮಾಜಿಕ ಸ್ಥಾನಮಾನದ ಪ್ರಜ್ಞೆ ಇದೆಯೇ!' ಎಂದು ಪ್ರಶ್ನಿಸಿದಾಗ ಭಟ್ಟರು ನಗುತ್ತಾ ಈ ಹುಡುಗನಿಗಿಂತ ನಿಮ್ಮಲ್ಲಿ ಯಾರೂ ಸ್ವಚ್ಛರಿಲ್ಲ ಹಾಗೂ ದೊಡ್ಡ ಬ್ರಾಹ್ಮಣರಿಲ್ಲ! ಎಂದು ತಮ್ಮ ಪವಿತ್ರ ಜನಿವಾರವನ್ನು ಶಿಷ್ಯನಿಗೆ ಹಾಕಿ ಶರೀಫರನ್ನು ಬಿಗಿದಪ್ಪಿದರು.ಭಾವೋದ್ವೇಗಕ್ಕೆ ಒಳಗಾದ ಶರೀಫರು ಗುರುಗಳ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, 'ಹಾಕಿದ ಜನಿವಾರವ ಸದ್ಗುರುನಾಥ ಹಾಕಿದ ಜನಿವಾರವ' ಎಂದು ಗುರುಗಳನ್ನು ಕೊಂಡಾಡಿದರು.

ಗುರು ಶಿಷ್ಯರಿಬ್ಬರಿಗೂ ಅಂದಿನ ಸಮಾಜ ಬಹಿಷ್ಕಾರ ಹಾಕಿತ್ತು. ಹಾಳು ದೇವಾಲಯ ಮತ್ತು ಸಾರ್ವಜನಿಕ ಗುಡಿ ಗುಂಡಾರಗಳೇ ಅವರ ವಸತಿಸ್ಥಾನಗಳಾಗಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ಗುರು ಗೋವಿಂದ ಭಟ್ಟರೂ ಸಹ ಬ್ರಾಹ್ಮಣರಿಂದ ಹಾಗೂ ಧರ್ಮಬಾಂಧವರಿಂದ ಬಂದ ವಿರೋಧವನ್ನು ಲೆಕ್ಕಿಸದೆ, ತಮಗೆ ಯೋಗ್ಯನಾದ ಶಿಷ್ಯ ದೊರೆತದ್ದಕ್ಕೆ ಆನಂದಿಸಿದರು. ಸ್ಫಟಿಕದಂತಹ ಗುಣ ಹೊಂದಿದ್ದ ಶರೀಫರು ನಿಷ್ಠುರ ಸ್ವಭಾವದವರಾದ್ದರಿಂದ ಯಾವ ದಯಾ ದಾಕ್ಷಿಣ್ಯಗಳಿಗೂ ಒಳಗಾಗುತ್ತಿರಲಿಲ್ಲ. ಸಮಾಜದ ತಪ್ಪು ನಡತೆಗಳನ್ನು ತೀಕ್ಷ್ಣವಾಗಿ ತಿದ್ದಿ ಮಾನವ ಕುಲದ ಹಿತವನ್ನು ಬಯಸುತ್ತಿದ್ದರು. ಶರೀರದ ಮೇಲಿನ ಸ್ಮೃತಿ ಪ್ರಜ್ಞೆಗಳನ್ನು ಕಳೆದುಕೊಂಡು ದೇವೋನ್ಮಾದದಲ್ಲಿ ಲೀನವಾಗುತ್ತಿದ್ದರು. ಸುತ್ತಲಿನ ಗ್ರಾಮಗಳಿಗೆ ಹೋಗಿ ಅಲ್ಲಿಯ ಜನರ ತಿಳಿವಳಿಕೆಯ ಮಟ್ಟದಲ್ಲಿ ಬೆರೆತು ಉಪದೇಶ ಮಾಡುತ್ತಿದ್ದರು.
ಈ ಗುರುಶಿಷ್ಯರ ಜೋಡಿ ಉತ್ತರ ಭಾರತದ ಸಂತ ಕಬೀರ ಹಾಗೂ ಅವರ ಗುರು ರಮಾನಂದರ ಜೋಡಿಯಂತೆ ಇದ್ದುದರಿಂದ ಶರೀಫರನ್ನು 'ಕರ್ನಾಟಕದ ಕಬೀರ' ಎಂದೂ ಕರೆಯುತ್ತಾರೆ.

ಇಬ್ಬರೂ ಮುಸಲ್ಮಾನ ಕುಲದಲ್ಲಿ ಹುಟ್ಟಿದ್ದರೂ, ಬ್ರಾಹ್ಮಣ ಗುರುಗಳಲ್ಲಿ ಶಿಷ್ಯತ್ವ ಪಡೆದವರು. ಜಾತಿ, ಮತ, ಧರ್ಮ ಲೆಕ್ಕಿಸದೆ, ಮಾನವತಾ ಧರ್ಮವನ್ನು ಬೋಧಿಸಿದವರು. ಯಾವುದೇ ಧರ್ಮಾಚರಣೆಯಲ್ಲಿ ನಡೆಯುವ ಕಂದಾಚಾರಗಳನ್ನು, ಮೂಢನಂಬಿಕೆಗಳನ್ನು ಹಾಗೂ ಅವ್ಯವಹಾರಗಳನ್ನು ಧೈರ್ಯದಿಂದ ಟೀಕಿಸಿ, ಸದ್ಧರ್ಮ ಬೋಧಿಸಿ, ಆತ್ಮೋದ್ಧಾರದ ಮಾರ್ಗವನ್ನು ತೋರಿಸಿ ಕೊಟ್ಟವರು.
‘ಭಕ್ತಿಯಿಂದ-ಮುಕ್ತಿ‘ ಎಂದು ಸಾಧಿಸಿ ತೋರಿಸಿ ಕೊಟ್ಟವರು.

ಇಬ್ಬರೂ ಗೃಹಸ್ಥಾಶ್ರಮ ಸ್ವೀಕರಿಸಿ ಸಾಂಸಾರಿಕ ಜೀವನ-ಆಧ್ಯಾತ್ಮಿಕ ಜೀವನ ತಲುಪುವ ಸೇತುವೆ ಎಂದು ತೋರಿಸಿದವರು. ತಮ್ಮ ತತ್ವ ಪ್ರಚಾರಕ್ಕಾಗಿ ತಮ್ಮದೇ ಆದ ವೈಶಿಷ್ಟ್ಯಪೂರ್ಣ ಸಾಹಿತ್ಯವನ್ನು ರಚಿಸಿದವರು.ಕಬೀರರು ದೋಹಾಗಳನ್ನು ರಚನೆ ಮಾಡಿದರೆ, ಶರೀಫರು ತತ್ವಪದಗಳನ್ನು ರಚಿಸಿದರು. ತಮ್ಮ ಸಾಹಿತ್ಯವನ್ನು ಬರೆದಿಡುವ ಗೊಡವೆಗೆ ಇಬ್ಬರೂ ಹೋಗಲಿಲ್ಲ.

ಇವರ ಜೀವಿತ ಕಾಲದಲ್ಲಿ ಇವರ ರಚನೆಗಳು ಮುದ್ರಿತರೂಪದಲ್ಲಿ ಪ್ರಕಟವಾಗಲಿಲ್ಲ. ಆ ಸಮಯದಲ್ಲಿ ಅದಕ್ಕೆ ಅನುಕೂಲತೆಗಳೂ ಇರಲಿಲ್ಲ. ಕವಿಯ ಗೀತೆಗಳನ್ನು ಇತರರು ಬರೆದುಕೊಳ್ಳುವ ಅಥವಾ ಕಂಠಪಾಠ ಮಾಡಿಕೊಳ್ಳುವ ಪದ್ಧತಿಯೊಂದು ಇದ್ದಿರಬಹುದು ಎನ್ನುವುದಕ್ಕೆ ಶರೀಫರ ಕವಿತೆಗಳೆ ಸಾಕ್ಷಿ.

ಅದೃಷ್ಟವಶಾತ್ ಈ ಹಾಡುಗಳನ್ನು ಬರೆದವರು, ಸಂರಕ್ಷಿಸಿದವರು, ಶರೀಫರ ಸಂಗಡಿಗ ಗುಡಗೇರಿಯ ಕುಂಬಾರ ಮುದುಕಪ್ಪ. ಶರೀಫರು ಅನುಭಾವ ಪದಗಳನ್ನು ಆನಂದಲಹರಿಯಲ್ಲಿ ನಾದಬ್ರಹ್ಮನೊಂದಿಗೆ ಒಂದಾಗಿ ಮೈಮರೆತು ಹಾಡುತ್ತಿರುವಾಗ ಆ ಹಾಡುಗಳನ್ನು ಬರೆದುಕೊಳ್ಳುತ್ತಿದ್ದರು. ಹಾಗೂ ಕಬೀರರಿಗೆ ಆಪ್ತ ಶಿಷ್ಯರಾಗಿದ್ದ ಭಾಗೋದಾಸ್ ಹಾಗೂ ಧರ್ಮದಾಸ್ ಇವರು ಹಾಡುಗಳನ್ನು ಬರೆದು ಸಂರಕ್ಷಿಸಿದರು. ಇವರಿಬ್ಬರ ಸಾಹಿತ್ಯ ಎಲ್ಲರ ಬಾಯಲ್ಲಿಯೂ ನಲಿಯುತ್ತಿತ್ತು ಹಾಗೂ ಶ್ರೀಸಾಮಾನ್ಯರಲ್ಲಿಯೂ ಅತ್ಯಂತ ಜನಪ್ರಿಯರಾಗಿದ್ದವು.

ಇಷ್ಟೆಲ್ಲ ಜನಪ್ರಿಯತೆ ಇದ್ದರೂ, ತಮ್ಮದೇ ಆದ ಯಾವುದೇ ಮತ, ಪಂಥಗಳನ್ನು ಹುಟ್ಟು ಹಾಕದೇ, ಸಮಾಜದಲ್ಲಿ ತಲೆದೋರುತ್ತಿದ್ದ ಧಾರ್ಮಿಕ ದೋಷಗಳು. ಅಂಧಶ್ರದ್ಧೆ ಹಾಗೂ ಮೂಢನಂಬಿಕೆಗಳನ್ನು ಕಟುವಾಗಿ ಟೀಕಿಸಿ, ಜನರ ಕಣ್ಣು ತೆರೆಸಿದರು. ಉತ್ತರದಲ್ಲಿ ಕಬೀರರು 'ರಾಮ-ರಹೀಮರು' ಒಂದೇ ಎಂದು ಪ್ರತಿಪಾದಿಸಿದರೆ, ದಕ್ಷಿಣದಲ್ಲಿ ಶರೀಫರು ‘ಹರಿ-ಹರ-ಹಜರತ್‘ ಒಂದೇ ಎಂದು ಪ್ರತಿಪಾದಿಸಿದರು. ಹೀಗೆ ಇಬ್ಬರೂ 'ದೇವನೊಬ್ಬ ನಾಮ ಹಲವು' ಎಂಬ ವಿಶ್ವ ತತ್ವವನ್ನು ಅರಿತು, ಬೋಧಿಸಿ ಸಂಚಾರಿ ಸಂತ ಶರಣರಾಗಿ ಬಾಳಿದರು.

ಸಂಸಾರ ವಿಮುಖರಾಗಿ, ಆಧ್ಯಾತ್ಮದತ್ತ ವಾಲುತ್ತಿದ್ದ ಶರೀಫರನ್ನು ವೈವಾಹಿಕ ಜೀವನಕ್ಕೆ ಸೆಳೆದರು ಶರೀಫರ ತಂದೆ-ತಾಯಿಗಳು. ವಿವಾಹವಾಗಲು ಗುರುಗೋವಿಂದಭಟ್ಟರ ಅನುಮತಿ ಕೇಳಿದಾಗ, 'ನೀ ಎಲ್ಲಿ ಹೋಗ್ತಿಯಾ? ಮತ್ತೆ ಬರ‍್ತೀಯಾ‘ ಎಂದು ಹೇಳಿಯೇಬಿಟ್ಟರು ಆ ತ್ರಿಕಾಲ ಜ್ಞಾನಿಗಳು. ಅವರ ಭವಿಷ್ಯವನ್ನು ಅಂದೇ ನಿರ್ಧರಿಸಿದ್ದರು. ಶರೀಫರ ವಿವಾಹವು ಕುಂದಗೋಳದ ಫಕೀರ ಸಾಹೇಬರ ಜೇಷ್ಠ ಪುತ್ರಿ ಫಾತಿಮಾರೊಂದಿಗೆ ಆಯಿತು.ಶರೀಫರು ಪತ್ನಿ ಫಾತಿಮಳ ಬಗ್ಗೆ ಅಪಾರ ಗೌರವ ಹಾಗೂ ಪ್ರೀತಿಯನ್ನು ಹೊಂದಿದ್ದರು.
‘ನನ್ನ ಹೇಣ್ತಿ ನೀ ನನ್ನ ಹೇಣ್ತಿ ನಿನ್ನ ಹೆಸರೇನ್ಹೇಳಲೆ ಗುಣವಂತೆ‘ಎಂದು ಫಾತೀಮಾಳನ್ನು ಹಾಡಿ ಹೊಗಳಿದರು.

ಅನ್ಯೋನ್ಯ ದಾಂಪತ್ಯದಲ್ಲಿ ಹುಟ್ಟಿದ ಹೆಣ್ಣು ಕೂಸು ಲತೀಮಾ ಸ್ವಲ್ಪ ಕಾಲದ ನಂತರ ವಿಧಿವಶವಾಯಿತು. ಪ್ರೀತಿಯ ಪತ್ನಿ ಫಾತಿಮಾ ತವರೂರಾದ ಕುಂದಗೋಳದಲ್ಲಿ ಮರಣ ಹೊಂದಿದಳು. ಅವಳ ಅಂತ್ಯಕ್ರಿಯೆಗೆ ಮಾವ ಹೇಳಿ ಕಳಿಸಿದಾಗ ಶರೀಫರು ನೀಡಿದ ಉತ್ತರ ಅವರ ನಿರ್ಮೋಹ ಮನಸ್ಸಿಗೆ ಹಿಡಿದ ಕನ್ನಡಿಯಾಗಿದೆ.

‘ಮೋಹದ ಹೆಂಡತಿ ತೀರಿದ ಬಳಿಕ
ಮಾವನಮನೆಯ ಹಂಗಿನ್ಯಾಕೋ‘

ಅಕ್ಕರೆಯ ಮಗಳು, ಪ್ರೀತಿಯ ಮಡದಿ ಸಾವು, ಶರೀಫರನ್ನು ಪಾರಮಾರ್ಥಿಕ ಜೀವನದೆಡೆಗೆ ಕೇಂದ್ರೀಕೃತಗೊಳಿಸಿತು. ಮುಕ್ಕಾ ಮದೀನ ಸ್ವರೂಪರೆಂದೇ ತಿಳಿದಿದ್ದ ತಂದೆ-ತಾಯಿಗಳೂ ಇಹಲೋಕ ತ್ಯಜಿಸಿದಾಗ, ಶರೀಫರಿಗೆ ‘ತಮ್ಮವರು‘ ಎಂದು ಉಳಿದವರು ಒಬ್ಬರೆ- ಅವರೇ ಕಳಸದ ಗುರು ಗೋವಿಂದ ಭಟ್ಟರು. ಶರೀಫರು ಗೋವಿಂದ ಭಟ್ಟರಲ್ಲಿ ಸಂಪೂರ್ಣ ಶರಣಾಗಿ ಉಳಿದ ಜೀವನವನ್ನು ಆಧ್ಯಾತ್ಮಿಕ ಲೋಕಕ್ಕೆ ಸಂಪೂರ್ಣವಾಗಿ ಮುಡಿಪಾಗಿಟ್ಟರು.

ಗುರು ಶಿಷ್ಯರಿಬ್ಬರು ಒಬ್ಬರನೊಬ್ಬರು ಬಿಡದೆ ಶಿಶುನಾಳ-ಕಳಸದ ಸುತ್ತ ಮುತ್ತಲಿನ ಗ್ರಾಮಗಳು, ಅಲ್ಲಿಯ ಗ್ರಾಮದೇವತೆಗಳ ಹಾಗೂ ಇತರೆ ಗುಡಿಗಳ ದರ್ಶನ ಮಾಡುವುದು, ಆಧ್ಯಾತ್ಮಿಕ ಗುಂಗಿನಲ್ಲಿ ಯಾವಾಗಲೂ ಇದ್ದು ದಿನನಿತ್ಯ ನಡೆಯುವ ಘಟನೆಗಳನ್ನು ತಮ್ಮ ತತ್ವಪದಗಳಲ್ಲಿ ವಿವರಿಸಿ ಅದಕ್ಕೆ ಆಧ್ಯಾತ್ಮಿಕ ಹಿನ್ನೆಲೆಯನ್ನು ನೀಡುತ್ತಿದ್ದರು. ಪ್ರಕೃತಿ, ಪಶು-ಪಕ್ಷಿ ಹಾಗೂ ದಿನ ನಿತ್ಯ ಜೀವನದಲ್ಲಿ ನಡೆಯುವ ಸಾಮಾನ್ಯ ಘಟನೆಗಳು ಇವರಿಬ್ಬರ ತತ್ವಪದಗಳ ರೂಪವಾಗಿ ಜನಸಾಮಾನ್ಯರ ಹೃದಯವನ್ನು ನೇರವಾಗಿ ತಟ್ಟುತ್ತಿದ್ದವು. ‘ಕೋಡಗನ ಕೋಳಿ ನುಂಗಿತ್ತಾ, ಬಿದ್ದಿಯಬ್ಬೇ ಮುದುಕಿ, ಹಾವು ತುಳಿದೇನೆ, ಎಂಥ ಮೋಜಿನ ಕುದುರಿ, ಗುಡಿಯ ನೋಡಿರಣ್ಣ, ತರವಲ್ಲ ತಗೀ ನಿನ್ನ ತಂಬೂರಿ, ಏನ್ ಕೊಡ ಏನ್ ಕೊಡವಾ, ಸೋರುತಿಹುದು ಮನೆಯ ಮಾಳಿಗಿ, ಕುಂಬಾರಕೀ ಈಕಿ ಕುಂಬಾರಕೀ, ಗುಡು ಗುಡಿಯ ಸೇದಿ ನೋಡೋ‘ ಮುಂತಾದ ತತ್ವಪದಪದಗಳೂ ಇಂದಿಗೂ ಜನಸಾಮಾನ್ಯರ ಬಾಯಲ್ಲಿ ನಲಿಯುತ್ತಿವೆ. ಹೀಗೆ ತತ್ವಪದ ಹಾಡಿ ಬೋಧನೆ ಮಾಡಿದರು, ದಂಡಕ ಹೇಳಿ ದೇವಿ ದೇವತೆಯರನ್ನು ಸ್ತುತಿಸಿದರು. ಕಾಲಜ್ಞಾನ ನುಡಿದು ಎಲ್ಲರನ್ನೂ ಎಚ್ಚರಿಸಿದರು, ಲಾವಣಿ ಹೇಳಿ ನೀತಿ ಬೋಧಿಸಿದರು, ಹೋಳಿ ಹಾಡು ಹೇಳಿ ಭವ್ಯ ಚರಿತ್ರೆಯನ್ನು ವಿವರಿಸಿದರು ಹಾಗೂ ಮಂಗಳಾರತಿಯನ್ನು ಹಾಡಿ ಸರ್ವರಿಗೂ ಮಂಗಳವನ್ನು ಬಯಸಿದರು. ಆದ್ದರಿಂದಲೇ ಶರೀಫರು ‘ಸರ್ವಜನರ ಸಂತ‘ರಾದರು.

ತ್ರಿಕಾಲ ಜ್ಞಾನಿಯಾಗಿದ್ದ ಗುರು ಗೋವಿಂದ ಭಟ್ಟರು ತಮ್ಮ ಅಂತ್ಯದಿನಗಳು ಸಮೀಪವಾಗುತ್ತಿರುವುದನ್ನು ಅರಿತು ಒಂದು ದಿನ..... ಅಪ್ಪಗಳಾ ನನಗಾ ವಾಂತಿ ಬರೋಂಗ ಆಗ್ತಿದೆ. ಆದ್ರ ನಾ ಮಾಡೋ ವಾಂತಿ ಎಲ್ಲೂ ಚೆಲ್ಲಬಾರದು. ಯಾರೂ ತುಳೀಬಾರದು. ಅಂತ ಜಾಗ ನೋಡ್ರಪ್ಪಾ... ಗೋವಿಂದಭಟ್ಟರು ಹಾಸಿಗೆಯ ಮೇಲೆ ಕುಳಿತು ಮೆಲ್ಲಗೆ ಹೇಳುತ್ತಾರೆ. ಗೋವಿಂದಭಟ್ಟರ ಸುತ್ತ ನೆರೆದ ಶಿಷ್ಯರೆಲ್ಲಾ ಅವಾಕ್ಕಾಗುತ್ತಾರೆ. ಯಾರು ತುಳೀದ ಇರೋ ಜಾಗ ಯಾವುದು ಅಂತ ತಲೆ ಕೆಡಿಸಿಕೊಳ್ತಾರೆ. ಅಷ್ಟು ಹೊತ್ತಿಗೆ ಶರೀಫರು ಅಲ್ಲಿಗೆ ಓಡೋಡಿ ಬರುತ್ತಾರೆ. ಶಿಷ್ಯರ ನಡುವೆ ಜಾಗ ಮಾಡ್ಕೊಂಡು ಗುರುಗಳ ತಲೆದಿಂಬಿನ ಬಳಿ ಬರ್ತಾರೆ, ‘ಗುರುಗಳೇ’ ಎಂದು ಬಿಕ್ಕುತ್ತಾರೆ. ಗೋವಿಂದಭಟ್ಟರು ಹೇಳಿದ್ದನ್ನು ಇತರ ಶಿಷ್ಯರು ಹೇಳುತ್ತಾರೆ. ಶರೀಫರು ಹಿಂದೆ ಮುಂದೆ ನೋಡದೆ ತಮ್ಮ ಬೊಗಸೆಯನ್ನು ಗುರುಗಳ ಮಂದೆ ಒಡ್ಡುತ್ತಾರೆ. ಗುರುಗಳು ಶರೀಫರ ಬೊಗಸೆಯಲ್ಲಿ ವಾಂತಿ ಮಾಡುತ್ತಾರೆ.ತಮ್ಮ ಬೊಗಸೆಯಲ್ಲಿದ್ದ ವಾಂತಿಯನ್ನು ಉಚ್ಛಿಷ್ಟ ಪ್ರಸಾದವೆಂದು ಶರೀಫರು ಕುಡಿದು ಬಿಡುತ್ತಾರೆ. ಗುರು ಗೋವಿಂದಭಟ್ಟರು ತಮ್ಮೊಳಗಿನ ಆಧ್ಯಾತ್ಮ, ತಪಸ್ಸು ಹಾಗೂ ಜ್ಞಾನಶಕ್ತಿಯನ್ನು ವಾಂತಿಯ ಮೂಲಕ ಶರೀಫರಿಗೆ ಧಾರೆಯೆರೆದಿದ್ದರು. ಇದರ ಫಲವಾಗಿ ಶರೀಫರಲ್ಲೂ ತ್ರಿಕಾಲ ಜ್ಞಾನ ಹಾಗೂ ಪವಾಡ ಶಕ್ತಿ ಮೂಡಿ, ತಮ್ಮ ಗುರುಗಳ ದೇಹಾಂತವಾದ ವರ್ಷ 1870 ನಂತರ, 19 ವರ್ಷ ಅನೇಕ ಪವಾಡಗಳನ್ನು ಮಾಡಿ ಇನ್ನಷ್ಟು ಮಹಿಮಾವಂತರಾದರು.

ಮುಂದೆ, ಶರೀಫರು ಇನ್ನಷ್ಟು ಆಧ್ಯಾತ್ಮ ಸಾಧನೆಗಾಗಿ ಸಾಧುಸತ್ಪುರುಷರ, ಪುಣ್ಯಕ್ಷೇತ್ರಗಳ ದರ್ಶನಕ್ಕೆ ಹೊರಟರು. ಮುಂದೆ ಪೂರ್ಣ ಪ್ರಮಾಣದ ಸಂಚಾರಿ ಶರಣರಾದರು. ಹೀಗೆ ಅವರು ಭೇಟಿ ಮಾಡಿದ ಮಹಾಮಹಿಮರ ಬಗ್ಗೆ ಹಾಗೂ ತೀರ್ಥಕ್ಷೇತ್ರಗಳ ಬಗ್ಗೆ ಅವರ ತತ್ವಪದಗಳಿಂದಲೇ ತಿಳಿಯುತ್ತದೆ. ಶಿರಹಟ್ಟಿ ಫಕೀರಸ್ವಾಮಿ, ಮೈಲಾರ ಮಹದೇವ, ಚಿದಂಬರ ದೀಕ್ಷಿತರು, ಬಾಲಲೀಲಾ ಮಹಾಂತ ಶಿವಯೋಗಿಗಳು, ಗುಡಗೇರಿಯ ಕಲ್ಮಠದ ಸಂಗಮೇಶ್ವರರು, ಅಂಕಲಗಿಯ ಅಡವಿಸ್ವಾಮಿಗಳು, ಅಗಡಿಯ ಶೇಷಾಚಲ ಸ್ವಾಮಿಗಳು, ಗದುಗಿನ ಶಿವಾನಂದರು, ಗರಗದ ಮಡಿವಾಳಪ್ಪನವರು, ನವಲಗುಂದ ನಾಗಲಿಂಗಪ್ಪನವರು, ಅವರಾಧಿ ಫಲಹಾರ ಸ್ವಾಮಿಗಳು, ವಿಶ್ವಕರ್ಮದ ಪ್ರಭುಸ್ವಾಮಿಗಳು, ಹುಬ್ಬಳ್ಳಿಯ ಸಿದ್ಧಾರೂಡರು-ಇವರೆಲ್ಲರ ದರ್ಶನ ಒಡನಾಟ- ಶರೀಫರನ್ನು ಇನ್ನಷ್ಟು ವಿಚಾರಶೀಲರನ್ನಾಗಿಸಿತು. ಅವರೊಡನೆ ನಡೆಸಿದ ಚಿಂತನೆ, ಚರ್ಚೆಗಳು ಅವರ ಆತ್ಮೋದ್ಧಾರದ ದಾರಿಗೆ ಸೇತುವಾದವು.

ತೀರ್ಥಕ್ಷೇತ್ರಗಳ ದರ್ಶನ, ಶರೀಫರ ಆಧ್ಯಾತ್ಮಿಕ ಶಕ್ತಿಯನ್ನು ಗಟ್ಟಿಗೊಳಿಸಿತು. ಸವದತ್ತಿಯ ಬಳಿಯಿರುವ ಏಳುಕೊಳ್ಳದ ಎಲ್ಲಮದೇವಿಯ ಕ್ಷೇತ್ರದರ್ಶನ ಮಾಡಿ, ‘ಎಲ್ಲಮ್ಮ ನಂತಾಕಿ ಎಲ್ಲಿ ಕಾಣೆ! ಎಲ್ಲಿ ಕಾಣೇನು ಶಿವನೊಲ್ಲಭಿ ಎನಿಸಿದ ಕಲ್ಲಿನೋಳು ಪುಟ್ಟಿ ಉಗುರುಗೊಳಕ್ಕೆ ಇಳಿದಿ‘ ಎಂದು ಹಾಡಿದರು.

ಮುಂದೆ ಚೆನ್ನಬಸವಣ್ಣನ ಉಳವಿ ಕ್ಷೇತ್ರ ದರ್ಶನ ಮಾಡಿದಾಗ ‘ಉಳವಿ ಜಾತ್ರೆಗೆ ಹೋಗೋಣ ಬನ್ನಿರಮ್ಮಾ ತಿಳಿದು ಬ್ರಹ್ಮನ ಬಯಲೊಳಗಾಡೋಣಮ್ಮಾ‘ ಎಂದು ಎಲ್ಲರನ್ನು ಕರೆದರು. ತಮ್ಮ ಗುರುಗಳಾದ ಗುರು ಗೋವಿಂದ ಭಟ್ಟರಂತೆ ಶರೀಫರು ಕೂಡ ತಮ್ಮ ಅಂತ್ಯಕಾಲ ಸಮೀಪವಾಗುತ್ತಿರುವುದನ್ನು ತಮ್ಮ ತ್ರಿಕಾಲ ಜ್ಞಾನ ಶಕ್ತಿಯಿಂದ ತಿಳಿದು ದಿವ್ಯ ಸ್ಫೂರ್ತಿಯುಂಟಾಗಿ.

‘ಬಿಡತೀನಿ ದೇಹ ಬಿಡತೇನಿ
ಕೊಡತೀನಿ ಭೂಮಿಗೆ..
ಶಿವಲೋಕದೊಳಗೆ ನಾ‘ ಎಂದು ತಿಳಿಸಿ ಬಾಳಿದ ಶರೀಫರು ಶಿಶುನಾಳ ಗ್ರಾಮದಲ್ಲಿ 1889ನೆಯ ಜುಲೈ 3ರಲ್ಲಿ ದೇಹತ್ಯಾಗ ಮಾಡಿದರು. ಆ ದಿನವೇ ಅವರ 70ನೇ ಹುಟ್ಟಿದ ದಿನವೂ ಆಗಿತ್ತು. ಶರೀಫರು ಪ್ರತಿ ಹೆಜ್ಜೆಯಲ್ಲೂ ಗುರು ಗೋವಿಂದಭಟ್ಟರನ್ನು ಅನುಸರಿಸುತ್ತಿದ್ದರು. ಗೋವಿಂದ ಭಟ್ಟರಂತೆ ತಾವು ಸಹ 70 ವರ್ಷ ಜೀವಿಸಿದರು. ಅವರ ಅಂತ್ಯವೂ ಶಾಂತಿಯುತವಾಗಿತ್ತು ತಮ್ಮ ಮರಣಕ್ಕೆ ಮೊದಲು ಗುರುಗೋವಿಂದರನ್ನೂ ಹಿರಿಯರನ್ನೂ ಸ್ಮರಿಸಿದರು. ಶಿಶುನಾಳಧೀಶನಿಗೆ ಖಾದರಲಿಂಗಕ್ಕೆ ನಮೋ ಎಂದರು.

ಅಪೂರ್ವ ಅನುಭಾವ ಜೀವವೊಂದು ಪುರತತ್ವ ಧ್ಯಾನದಲ್ಲಿಯೇ ಶಿವಸಾನ್ನಿಧ್ಯವನ್ನು ಹೊಂದಿತು. `ಶರಣರ ಸಾವು ಮರಣದಲ್ಲಿ ನೋಡು' ಎಂಬಂತೆ ಶರೀಫರು ಬದುಕಿದ್ದಾಗ ಅವರ ಬೆಲೆ ಯಾರಿಗೂ ತಿಳಿಯಲಿಲ್ಲ. ಮರಣಾನಂತರ ಅವರ ಘನತೆ ಲೋಕಕ್ಕೆ ಅರಿವಾಯಿತು.
ಕರ್ನಾಟಕದ ಕಬೀರರೆಂದು ಹೆಸರುವಾಸಿಯಾದ ಶರೀಫರು ಹುಟ್ಟಿದ್ದು ಮುಸಲ್ಮಾನನಾಗಿಯಾದರೂ ಹಿಂದೂ ಧರ್ಮದ ಜೊತೆ ಬದುಕಿದ್ದರು.

ಉಭಯ ಸಮುದಾಯದ ಮುಖಂಡರು ಒಗ್ಗೂಡಿ ಎರಡು ಧರ್ಮದ ಪ್ರಕಾರ ಅಂತಿಮ ಸಂಸ್ಕಾರ ನಡೆಸಲು ತೀರ್ಮಾನಿಸಿ, ಒಂದು ಕಡೆ ಕುರಾನ್ ಪಠಣ, ಮತ್ತೊಂದೆಡೆ ಮಂತ್ರ ಪಠಣ ಮಾಡಿ ಅಂತ್ಯಕ್ರಿಯೆ ನಡೆಸಿದರು. "ಇವ ನಮ್ಮವ ಇವ ನಮ್ಮವ" ಎನ್ನುವ ಅಭಿಮಾನದಿಂದ ಶಿಶುನಾಳದಲ್ಲಿ ಎಲ್ಲರೂ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು. ಮಹಮದೀಯ ಬಂಧುಗಳು ಹೃದಯ ತುಂಬಿ, ‘ಶರೀಫ ನಾನಾ ಕಿ ದೋಸ್ತರಾ‘ ಎಂದು ಘೋಷಿಸಿದರೆ, ಹಿಂದೂಗಳು ‘ಶರೀಫ ಶಿವಯೋಗಿ ಮಹಾರಾಜ್ ಕಿ ಜೈ‘ ಎಂದು ಘೋಷಿಸಿದರು.

ಮುಸಲ್ಮಾನರು ‘ಅಲ್ಲಾ ಹೋ ಅಕ್ಬರ್‘ ಎಂದು ಘೋಷಿಸಿದರೆ ಹಿಂದೂಗಳಿಂದ‘ಹರ ಹರ ಮಹದೇವ‘ ಎಂಬ ಘೋಷಣೆ ಕೇಳಿ ಬರುತ್ತಿತ್ತು. ಅಪಾರ ಜನಸ್ತೋಮ ಪಾಲ್ಗೊಂಡು ದಾರ್ಶನಿಕ ಕವಿಗೆ ಅಶ್ರುತರ್ಪಣ ಮಾಡಿತು. ಶರೀಫರ ಅಂತ್ಯಕ್ರಿಯೆಯು ಸರ್ವಜನರ ಸಮ್ಮುಖದಲ್ಲಿ ಅವರ ಅಂತಿಮ ಇಚ್ಛೆ ಮೇರೆಗೆ ಅವರ ತಂದೆ ತಾಯಿಗಳ ಸಮಾಧಿಯ ಮಗ್ಗುಲಲ್ಲೇ ನೇರವೇರಿಸಲಾಯಿತು. ಹೀಗೆ ಮತೀಯ ಸೌಹಾರ್ಧ ಹಾಗೂ ಭಾವೈಕ್ಯತೆಗೆ ಶರೀಫರು ಬೀರಿದ ಪ್ರಭಾವ ಅವರ ಅಂತ್ಯಕ್ರಿಯೆಯಲ್ಲೂ ಕಾಣಬಹುದು.

ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಈಗ ಗದ್ದುಗೆ ಹಾಗೂ ಶರೀಫರ ಮತ್ತು ಗುರುಗೋವಿಂದಭಟ್ಟರ ಎರಡು ಶಿಲಾಮೂರ್ತಿಗಳಿದ್ದು, ಎರಡೂ ಧರ್ಮದ ಸಂಪ್ರದಾಯದಂತೆ ಪೂಜೆ ಹರಕೆ, ಕಾಯಿಕರ್ಪೂರ ಒಂದೆಡೆಯಾದರೆ, ನಮಾಜು, ಸಕ್ಕರೆ ನೈವೇದ್ಯ ಇನ್ನೊಂದೆಡೆ - ಹೀಗೇ ಎರಡೂ ಧರ್ಮದವರೂ ಭಕ್ತಿಯಿಂದ ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಬರುವ ಭಕ್ತರು ಯಾವುದೇ ಮತೀಯ ಭಾವನೆಗೆ ಒಳಗಾಗದೆ, ಜಾತ್ಯತೀತ ಮನೋಭಾವನೆಗಳನ್ನು ಬೆಳೆಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಯಾವುದೇ ಧರ್ಮದ ಮಾದರಿಯಲ್ಲಿ ಶರೀಫರ ಗದ್ದುಗೆ ಇಲ್ಲದಿರುವುದು ಮತ್ತೊಂದು ವಿಶೇಷ. ಒಂದು ವಿಶಾಲವಾದ ಕಟ್ಟೆ ಮೇಲೆ ನೆರಳು ನೀಡುವ ಬೇವಿನ ಮರ, ಮಲ್ಲಿಗೆ ಬಳ್ಳಿಗಳ ಸುತ್ತುವಿಕೆಯೊಂದಿಗೆ ಗದ್ದುಗೆ ಮೇಲೆ ಯಾವಾಗಲೂ ಪುಷ್ಪವೃಷ್ಟಿ ನಡೆಯುತ್ತಿದ್ದು, ಅತ್ಯಂತ ಶಾಂತ ವಾತಾವರಣ, ನಮ್ಮನ್ನು ಯಾವುದೊ ಲೋಕಕ್ಕೆ ಕರೆದೊಯ್ಯುತ್ತದೆ. ಅಪಾರ ಭಕ್ತಜನ ಪ್ರತಿನಿತ್ಯವು ಗದ್ದುಗೆಯ ದರ್ಶನ ಪಡೆದು ಶರೀಫರ ದಿವ್ಯದರ್ಶನ ಮಾಡುತ್ತಾರೆ.

ಜನಸಾಮಾನ್ಯರ ವರಕವಿ ಶರೀಫರ ಸಾಹಿತ್ಯ ಶ್ರೀಮಂತವಾದುದಾಗಿದೆ. ಈ ಸಂತ ಕವಿಯಿಂದಾಗಿ ಶಿಶುನಾಳ ಗ್ರಾಮಕ್ಕೊಂದು ಬೆಲೆ ಬಂದಿದೆ.ಸಾಹಿತಿಗಳಿಗೆ, ರಸಿಕರಿಗೆ, ಕಲೋಪಾಸಕರಿಗೆ ಭಾವೈಕ್ಯತೆಯ ದಿವ್ಯ ಸಂದೇಶ ನೀಡುವ ಪವಿತ್ರ ಯಾತ್ರಾಸ್ಥಳವಾಗಿದೆ. ಇಂದು ಕರ್ನಾಟಕದ ಭೂಪಟದಲ್ಲಿ ಭಾವೈಕ್ಯತೆಗೆ ಗುರುತಿಸುವಂತಹ ಕೇಂದ್ರ ಸ್ಥಳವಾಗಲು, ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ಪರಿಶ್ರಮ ಮೆಚ್ಚುವಂತಹುದು.

ಶತ ಶತಮಾನಗಳಿಂದ ಬೇರುಬಿಟ್ಟಿರುವ ಮತೀಯ ಭಾವನೆಗಳನ್ನು ಆಚರಣೆಗಳನ್ನು ಕಿತ್ತೊಗೆಯುವುದು ಸುಲಭದ ಮಾತಲ್ಲ. ಅದೂ ಬ್ರಾಹ್ಮಣ ಗುರುವಿನ ಆಶ್ರಯದಲ್ಲಿ ಈ ಶಿಷ್ಯನ ಸಂಬಂಧ ಒಂದು ಹೊಸ ಶಕ್ತಿಯನ್ನೇ ಸಮಾಜಕ್ಕೆ ನೀಡಿದೆ. ಜಾತ್ಯತೀತ ಸಮಾಜ ನಿರ್ಮಾಣವೊಂದೇ ನಮ್ಮನ್ನು ಸುರಕ್ಷಿತವಾಗಿಡಬಲ್ಲದು ಎಂಬುದನ್ನು ಸ್ವಾತಂತ್ರ್ಯಪೂರ್ವದಲ್ಲೇ ಅದೂ ಸ್ವತಂತ್ರ ಭಾರತದ ಸಂವಿಧಾನ ರಚನೆಯ ಪೂರ್ವದಲ್ಲಿಯೇ ಗ್ರಹಿಸಿದ ವಿಚಾರವಂತ ಮಹಿಮರು ಶಿಶುನಾಳ ಶರೀಫರು.

ಅನುಭಾವಿ, ತತ್ವಜ್ಞಾನಿಗಳಾದ ಶರೀಫರು ಮುಂದಿನ ಯುವ ಪೀಳಿಗೆಯ ಹಿತದೃಷ್ಟಿಯನ್ನಿಟ್ಟುಕೊಂಡು ಸಾಂಸಾರಿಕ ನೆಲೆಗಟ್ಟಿನ ಮೇಲೆಯೇ ಆದರ್ಶ ಸಮಾಜದ ಕಲ್ಪನೆಯೊಂದಿಗೆ ಧರ್ಮಪರಿಪಾಲನೆ ಹಾಗೂ ತತ್ವಸೌರಭವನ್ನು ಪ್ರತಿಯೊಬ್ಬರೂ ಸವಿಯಲರ್ಹರೆಂಬುದನ್ನು ಸಾರಿದ್ದಾರೆ. ಅಂತೆಯೇ ಅವರ ತತ್ವಪದಗಳನ್ನು ವೇದಶಾಸ್ತ್ರಗಳನ್ನರಿಯದವರೂ ಗುನುಗುಡುತ್ತಿರುತ್ತಾರೆ. ಸಾಂಸಾರಿಕ ಭವಬಂಧನದಲ್ಲಿದ್ದುಕೊಂಡೆ, ಸಮಾಜದ ಉನ್ನತ ಆದರ್ಶ ಕಟ್ಟುಪಾಡುಗಳನ್ನು ತೊರೆದು ಅಪಾರ ಹಿಂಸೆ, ನಿಂದನೆಗೆ ಗುರಿಯಾಗಿ ತಮ್ಮ ನಿಲುವನ್ನು ಪ್ರಚಾರಪಡಿಸಿದ್ದಾರೆ.

ಭಕ್ತಿ ನೀತಿಗಳನ್ನು ಮೇಳೈಸಿ `ದೇವನೊಬ್ಬ ನಾಮ ಹಲವು' ಎಂದು ತಮ್ಮ ಚಿಂತನೆಗಳಲ್ಲಿ ಬೋಧಿಸಿದ ಶರೀಫರು ಹರಿ-ಹರ, ಹಜರತ, ಮಾರ್ಗಗಳೆಲ್ಲಾ ದೇವನನ್ನು ಸೇರುವ ದಾರಿಗಳೆ ಎಂದು ತಿಳಿಸಿ ಆ ಮೂಲಕ ಹಿಂದೂ-ಮುಸ್ಲಿಂ ಸಂಸ್ಕೃತಿಯ ಐಕ್ಯತೆಗೆ ಕಾರಣ ಪುರುಷರಾಗಿದ್ದಾರೆ. ಕೋಮು ಸೌಹಾರ್ದ ನೆಲೆಗಟ್ಟಿನ ಮೇಲೆ ಸಮಾಜವನ್ನು ತಿದ್ದುವ ಕೆಲಸವನ್ನು ಶರೀಫರು ಮಾಡಿದ್ದಾರೆ.

ಭಾರತ ದೇಶವು ವಿವಿಧ ಧರ್ಮ, ಜಾತಿ, ಭಾಷೆಗಳ ಸಂಗಮ ಕ್ಷೇತ್ರ. ಪರಸ್ಪರ ಬಾಂಧವ್ಯವೊಂದೇ ಈ ದೇಶದ ಪ್ರಗತಿಮಂತ್ರ ಇಲ್ಲವಾದರೆ ದ್ವೇಷಾಗ್ನಿ ಹತ್ತಿ ಉರಿದು ನಾಡು ಕಾಡಾಗುತ್ತದೆ. ಮೃಗೀಯ ಭಾವನೆಗಳು ಹೆಚ್ಚಾಗಿ, ಶಾಂತಿ ಅಲ್ಲೋಲ ಕಲ್ಲೋಲವಾಗಿ, ದೇಶದಲ್ಲೆಲ್ಲಾ ಅರಾಜಕತೆ ಕಾಡುತ್ತದೆ.

ಶಿಶುನಾಳ ಶರೀಫರಂಥ ಸಂತರು ಈ ನಾಡಿಗೆ ಇಂದಿಗೂ ಪ್ರಸ್ತುತವಾಗಿರುವುದು ಅವರು ಸಾರಿದ, ತೋರಿದ, ಬೆಳೆಸಿದ, ಬೆಳಗಿಸಿದ, ಆಶಿಸಿದ ತತ್ವಗಳಿಂದ. ಐಕ್ಯತೆ ಹಾಗೂ ಸೌಹಾರ್ದವನ್ನು ಬೆಳೆಸಿಕೊಳ್ಳಲು ಅವರ ವೈಚಾರಿಕ ತತ್ವಪದಗಳು ನೀಡುವ ಕರೆ ಮಾರ್ದನಿಗೊಳ್ಳಲು ಶರೀಫಜ್ಜ ನಮಗೆ ಸದಾ ಸ್ಮರಣೀಯರಾಗುತ್ತಾರೆ.

ನಾನು ದೂರದರ್ಶನ ಚಂದನದ ನಿರ್ದೇಶಕನಾಗಿದ್ದಾಗ, ಶಿಶುನಾಳ ಶರೀಫರ ಹಾಗೂ ಕಳಸದ ಗುರು ಗೋವಿಂದಭಟ್ಟರ ಜೀವನಾಧಾರಿತ ಧಾರಾವಾಹಿಯನ್ನು ‘ಈಶ್ವರ ಅಲ್ಲಾ ನೀನೇ ಎಲ್ಲಾ‘ ಎಂಬ ಹೆಸರಿನಿಂದ ನಿರ್ಮಿಸಲು ಯಜಮಾನ್ ಎಂಟರ್‌ಪ್ರೈಸಸ್‌ನ ಶ್ರೀ ಹರಿಖೋಡೆಯವರನ್ನು ಪ್ರೇರೇಪಿಸಿ, ಮಾರ್ಗದರ್ಶನ ಮಾಡಿದ್ದನ್ನು ಇಲ್ಲಿ ನೆನೆಯುತ್ತಾ, ಈ ಧಾರಾವಾಹಿಯಲ್ಲಿ ಶರೀಫರ ಹಾಗೂ ಗುರು ಗೋವಿಂದಭಟ್ಟರ ಜೀವನದಲ್ಲಿ ಯಾವ ಯಾವ ಘಟನೆಗಳು ಯಾವ ಯಾವ ಊರು ಮತ್ತು ಸ್ಥಳಗಳಲ್ಲಿ ನಡೆದಿದ್ದವೋ, ಹಾಗೂ ಯಾವ ಘಟನೆಗಳು ಶರೀಫರ ಬಾಯಿಯಿಂದ ತತ್ವಪದಗಳು ಹೊರಹೊಮ್ಮಲು ಕಾರಣವಾದವೋ ಅದೇ ಊರು ಮತ್ತು ಅದೇ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿ ಧಾರಾವಾಹಿಗೆ ನೈಜತೆಯನ್ನು ತಂದದ್ದು ವಿಶೇಷವಾಗಿತ್ತು. ರೇಣುಕಾ ಶರ್ಮಾ ಅವರ ನಿದೇಶನದೊಂದಿಗೆ ಮೂಡಿಬಂದ ಈ ಧಾರಾವಾಹಿ ಎಷ್ಟು ಜನಪ್ರಿಯವಾಗಿತ್ತೆಂದರೇ, ಧಾರಾವಾಹಿಯು ದೂರದರ್ಶನದಲ್ಲಿ ಪ್ರಸಾರವಾಗುವ ಸಮಯದಲ್ಲಿ ಒಬ್ಬರು ರಸ್ತೆಯಲ್ಲಿ ಓಡಾಡುತ್ತಿರಲಿಲ್ಲ ಹಾಗೂ ಒಂದು ವಾಹನವೂ ಸಹ ರಸ್ತೆಯ ಮೇಲೆ ಚಲಿಸುತ್ತಿರಲಿಲ್ಲ.ಕರ್ಪ್ಯೂ ರೀತಿಯಲ್ಲಿ ರಸ್ತೆಗಳು ಕಾಣುತ್ತಿದ್ದವು. ಈ ಧಾರಾವಾಹಿ ಪ್ರಸಾರದಿಂದ ಶರೀಫರನ್ನು ಹಾಗೂ ಗುರು ಗೋವಿಂದ ಭಟ್ಟರನ್ನು ದೇಶ ವಿದೇಶಗಳಲ್ಲಿರುವ ಕನ್ನಡಿಗರು ಬಹಳ ಆಸಕ್ತಿ ಮತ್ತು ಶ್ರದ್ಧೆಯಿಂದ ತಿಳಿಯುವಂತಾಯಿತು ಎಂಬುದನ್ನು ಈ ಸಮಯದಲ್ಲಿ ಸ್ಮರಿಸಿಕೊಳ್ಳುತ್ತೇನೆ.

ನಾಡೋಜ ಡಾ. ಮಹೇಶ ಜೋಶಿ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.