ಪದವಿ ಪೂರ್ವ ಶಿಕ್ಷಣದ ಹಂತದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಂಶೋಧನೆಯ ಪ್ರವೃತ್ತಿ ಬೆಳೆಸುವ ಉದ್ದೇಶ ದಿಂದ ರೂಪಿಸಿದ್ದ ‘ಕಿಶೋರ ವೈಜ್ಞಾನಿಕ ಪ್ರೋತ್ಸಾಹನ್ ಯೋಜನ’ (ಕೆವಿಪಿವೈ) ಎಂಬ ಮಹತ್ವಾಕಾಂಕ್ಷೆಯ ಪರೀಕ್ಷೆ ಯನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಇದೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ರದ್ದು ಗೊಳಿಸಿದೆ. ಮೂಲ ವಿಜ್ಞಾನ ವಿಷಯಗಳ ಕುರಿತು ಎಳೆಯ ಮನಸ್ಸುಗಳಲ್ಲಿ ವಿಶೇಷ ಆಸಕ್ತಿ ಹುಟ್ಟಿಸುವ ಮತ್ತು ಸಂಶೋಧನಾ ಪ್ರವೃತ್ತಿ ಬೆಳೆಸುವ ಕೆಲಸಗಳಿಗೆಇದರಿಂದ ಭಾರಿ ಹಿನ್ನಡೆಯಾಗಿದೆ.
ಪರೀಕ್ಷೆ ರದ್ದಾಗಿರುವ ಕಾರಣ, ಯುವ ಮನಸ್ಸುಗಳಿಗೆ ವಿಜ್ಞಾನದ ಕುರಿತು ಹಸಿವು ಹೆಚ್ಚಿಸಲು ಇದ್ದ ಒಂದು ದೊಡ್ಡ ವೇದಿಕೆಯು ಕಣ್ಮರೆಯಾದಂತಾಗುತ್ತದೆ. ಇದು ದೇಶದ ಸಂಶೋಧನಾ ರಂಗಕ್ಕೆ ಆಗಿರುವ ದೊಡ್ಡ ನಷ್ಟ ಎಂದುಕೆವಿಪಿವೈ ಪರೀಕ್ಷೆಯ ಆಧಾರದ ಮೇಲೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‍ಸಿ) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಆ್ಯಂಡ್ ರಿಸರ್ಚ್ (ಐಐಎಸ್‍ಇಆರ್) ಸಂಸ್ಥೆಗಳಲ್ಲಿ ಓದು ಮುಗಿಸಿರುವ ಅನೇಕರು ವಿಷಾದಿಸಿದ್ದಾರೆ. ವಿಜ್ಞಾನ– ತಂತ್ರಜ್ಞಾನದ ನೆರವಿನಿಂದ ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿ ಉಣ್ಣುತ್ತಿರುವ ವರ್ಷದಲ್ಲಿ ಸಂಶೋಧನಾ ರಂಗದ ಮಹತ್ವದ ಕೊಂಡಿಯೊಂದು ಕಳಚಿಬಿದ್ದಿರುವುದು ವಿಪರ್ಯಾಸವೇ ಸರಿ.
ಕಿಶೋರ ವೈಜ್ಞಾನಿಕ ಪ್ರೋತ್ಸಾಹನ್ ಯೋಜನ ಎಂಬುದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ನಡೆಸುವ ಪರೀಕ್ಷೆಯ ಹೆಸರು. ಪ್ರಥಮ, ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ಪ್ರಥಮ ವರ್ಷದ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯಲು ಅವಕಾಶ ಇತ್ತು. ಉತ್ತಮ ಅಂಕ ಗಳಿಸಿದ ವರನ್ನು ಬೆಂಗಳೂರಿನ ಐಐಎಸ್‌ಸಿ ಮತ್ತು ದೇಶದಾದ್ಯಂತ ಇರುವ ಐಐಎಸ್‍ಇಆರ್ ಸಂಸ್ಥೆಗಳಲ್ಲಿ ಮೂರು ವರ್ಷದ ಬಿಎಸ್ಸಿ ಮತ್ತು ಐದು ವರ್ಷದ ಇಂಟೆಗ್ರೇಟೆಡ್ ಎಂಎಸ್ಸಿ ಕೋರ್ಸ್‌ಗೆ ಸೇರಿಸಿಕೊಂಡು ದೇಶಕ್ಕೆ ಅಗತ್ಯವಿರುವ ಮೂಲ ವಿಜ್ಞಾನದ ವಿಷಯ– ಕ್ಷೇತ್ರಗಳಲ್ಲಿ ಸಂಶೋಧನೆ ಮುಂದುವರಿಸಲು ಶಿಕ್ಷಣ ಹಾಗೂ ಧನಸಹಾಯ
ನೀಡಲಾಗುತ್ತಿತ್ತು.
ಪದವಿ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಕಾಲ ತಿಂಗಳಿಗೆ ₹ 5,000 ಶಿಷ್ಯವೇತನ ಮತ್ತು ₹ 20,000 ವಾರ್ಷಿಕ ಅನುದಾನ ನೀಡಲಾಗುತ್ತಿತ್ತು. ಸ್ನಾತಕೋತ್ತರ ಪದವಿ ಓದುವವರಿಗೆ ಎರಡು ವರ್ಷಗಳ ಕಾಲ ತಿಂಗಳಿಗೆ ₹ 7,000 ಶಿಷ್ಯವೇತನ ಮತ್ತು ವಾರ್ಷಿಕ ಅನುದಾನ ₹ 28,000 ನೀಡಲಾಗುತ್ತಿತ್ತು. ಸ್ನಾತಕೋತ್ತರ ಪದವಿ ನಂತರ ಪಿಎಚ್.ಡಿ ಪದವಿಗಾಗಿ ಅಧ್ಯಯನ ನಡೆಸುವ ಅವಕಾಶವೂ ವಿದ್ಯಾರ್ಥಿಗಳಿಗೆ ಇರುತ್ತಿತ್ತು. ಐಐಎಸ್‌ಸಿ ಮತ್ತುಐಐಎಸ್‍ಇಆರ್‌ಗಳಲ್ಲದೆ ಬೇರೆ ಪದವಿ ಕಾಲೇಜು ಗಳಲ್ಲಿ ಓದುವ ವಿದ್ಯಾರ್ಥಿಗಳಿಗೂ ಈ ಸೌಲಭ್ಯ ಸಿಗುತ್ತಿತ್ತು. ದೇಶದ ಅತ್ಯುನ್ನತ ವಿಜ್ಞಾನ ಸಂಶೋಧನಾ ಸಂಸ್ಥೆಗಳ ಪ್ರಯೋಗಾಲಯ ಮತ್ತು ಗ್ರಂಥಾಲಯಗಳಿಗೆ ಮುಕ್ತ ಪ್ರವೇಶ ಇರುತ್ತಿತ್ತು.
ಪರೀಕ್ಷೆಯನ್ನಷ್ಟೇ ರದ್ದು ಮಾಡಿದ್ದೇವೆ, ‘ಇನ್‍ಸ್ಪೈರ್’ (INSPIRE- Innovation in Science Pursuit for Inspired Research) ಕಾರ್ಯಕ್ರಮದ ಅಡಿ ಕೆವಿಪಿವೈ ಮುಂದುವರಿಯುತ್ತದೆ, ಅಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಫೆಲೊಶಿಪ್ ಮುಂದುವರಿಸುತ್ತೇವೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೇಳಿದೆ. ಕೆವಿಪಿವೈ ಅಡಿ ಪ್ರತಿವರ್ಷ 250ರಿಂದ 300 ಮಂದಿಗೆ ಶಿಷ್ಯವೇತನ ನೀಡಲಾಗುತ್ತಿತ್ತು. ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳು ಆ್ಯಪ್ಟಿಟ್ಯೂಡ್ ಟೆಸ್ಟ್ ಬರೆಯುತ್ತಿದ್ದರು. ಈ ಯೋಜನೆಯು 1999ರಲ್ಲಿ ಶುರುವಾಯಿತು. ಪರೀಕ್ಷೆಯನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನಡೆಸಲಾಗುತ್ತಿತ್ತು. ಪರೀಕ್ಷೆಯ ರದ್ದತಿಗೆ, ಪರೀಕ್ಷೆ ನಡೆಸಲು ಭಾರಿ ಪ್ರಮಾಣದ ವೆಚ್ಚ ತಗಲುತ್ತಿತ್ತು ಮತ್ತು ನೀಡುವ ಫೆಲೊಶಿಪ್‍ಗಿಂತ ಪರೀಕ್ಷೆಯ ಖರ್ಚೇ ಹೆಚ್ಚಾಗುತ್ತಿತ್ತು ಎಂಬ ಕಾರಣ ನೀಡಿರುವ ಇಲಾಖೆಯು ಪರೀಕ್ಷೆಗಾಗಿ ವಿನಿಯೋಗಿಸುತ್ತಿದ್ದ ಹಣವನ್ನು ಉಳಿಸಿ ಅದನ್ನೇ ಹೆಚ್ಚಿನ ವಿದ್ಯಾರ್ಥಿಗಳಿಗೆ ಶಿಷ್ಯವೇತನವಾಗಿ ನೀಡಲಾಗುವುದು ಎಂದಿದೆ.
2007ರಲ್ಲಿ ಪ್ರಾರಂಭವಾದ ‘ಇನ್‍ಸ್ಪೈರ್’ ಸೇರಲು ಕೆವಿಪಿವೈನಂತೆ ಯಾವುದೇ ಪರೀಕ್ಷೆ ಇರುವುದಿಲ್ಲ. ವಿದ್ಯಾರ್ಥಿಗಳು 12ನೇ ತರಗತಿ, ಜೆಇಇ ಮುಖ್ಯ ಪರೀಕ್ಷೆ, ನೀಟ್ ಹಾಗೂ ನ್ಯಾಷನಲ್ ಟ್ಯಾಲೆಂಟ್ ಸರ್ಚ್ ಪರೀಕ್ಷೆ ಗಳಲ್ಲಿ ಪಡೆದ ಅಂಕಗಳನ್ನು ಆಧರಿಸಿ ‘ಇನ್‍ಸ್ಪೈರ್’ಗೆ ಪ್ರವೇಶ ನೀಡಲಾಗುತ್ತದೆ. ಜೆಇಇ ಮತ್ತು ನೀಟ್ ಪರೀಕ್ಷೆಗಳಲ್ಲಿ ಮೊದಲ 10,000 ರ್‍ಯಾಂಕ್ ಗಳಿಸಿದ ವಿದ್ಯಾರ್ಥಿಗಳು ಮತ್ತು ವಿವಿಧ ಪರೀಕ್ಷಾ ಮಂಡಳಿಗಳ ವಾರ್ಷಿಕ ಫಲಿತಾಂಶದಲ್ಲಿ ಗರಿಷ್ಠ ಅಂಕ ಪಡೆದ ಶೇಕಡ 1ರಷ್ಟು ವಿದ್ಯಾರ್ಥಿಗಳು ಇನ್‍ಸ್ಪೈರ್ ಶಿಷ್ಯವೇತನಕ್ಕೆ ಆರ್ಹರಾಗುತ್ತಾರೆ.
ಪರೀಕ್ಷೆ ರದ್ದಾಗಲು ಇನ್ನೊಂದು ಮುಖ್ಯ ಕಾರಣ ಇದೆ. ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ನಡೆಸಲಾಗುತ್ತಿದೆ, ತಮಿಳು ಭಾಷೆಯಲ್ಲೂ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ ಕೆವಿಪಿವೈ ಆಕಾಂಕ್ಷಿಯೊಬ್ಬರು ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠದಲ್ಲಿ ಕಳೆದ ವರ್ಷ ಪ್ರಕರಣ ದಾಖಲಿಸಿದ್ದರು. ಅಭ್ಯರ್ಥಿಯ ಮನವಿಯನ್ನು ಎತ್ತಿಹಿಡಿದಿದ್ದ ಮದುರೈ ಪೀಠವು, ತಮಿಳು ಅಷ್ಟೇ ಅಲ್ಲ, ಸಂವಿಧಾನದ ಎಂಟನೇ ಪರಿಚ್ಛೇದ ದಲ್ಲಿ ಇರುವ ಎಲ್ಲ 22 ಭಾಷೆಗಳಲ್ಲೂ ಪರೀಕ್ಷೆ ನಡೆಸಬೇಕು ಎಂದು ಸಂಬಂಧಿಸಿದ ಇಲಾಖೆಗೆ ಆದೇಶ ನೀಡಿತ್ತು. ಎರಡು ಭಾಷೆಗಳಲ್ಲಿ ಪರೀಕ್ಷೆ ನಡೆಸುವುದಕ್ಕೇ ಭಾರಿ ಮೊತ್ತ ಬೇಕಾಗಿದೆ. ಅದರೊಂದಿಗೆ ಮತ್ತಷ್ಟು ಭಾಷೆಗಳಲ್ಲಿ ಪರೀಕ್ಷೆ ನಡೆಸಬೇಕಾದರೆ ಖರ್ಚು ವಿಪರೀತ ಏರುತ್ತದೆ ಎಂದು ಭಾವಿಸಿದ ಇಲಾಖೆಯು ಕಳೆದ ಸಲ ಪರೀಕ್ಷೆಯನ್ನು ಎರಡು ಬಾರಿ ಮುಂದೂಡಿತ್ತು.
ಹನ್ನೆರಡನೇ ತರಗತಿಯ ಪರೀಕ್ಷೆಗಳುದೇಶದಾದ್ಯಂತ ಒಂದೇ ತೆರನಾಗಿರುವುದಿಲ್ಲ. ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ, ಸಿಬಿಎಸ್‍ಇ ನಡೆಸುವ ಪರೀಕ್ಷಾ ವಿಧಾನಗಳಲ್ಲಿ ಭಾರಿ ವ್ಯತ್ಯಾಸ ಇರುವುದರಿಂದ ಅಲ್ಲಿನ ಅಂಕಗಳನ್ನು ಆಧರಿಸಿ ಇನ್‌ಸ್ಪೈರ್ ಫೆಲೊಶಿಪ್‍ಗೆ ಪ್ರವೇಶ ತೆಗೆದು ಕೊಳ್ಳಲು, ನೀಟ್, ಜೆಇಇ ಮತ್ತು ಎನ್‍ಟಿಎಸ್‍ಇ ಪರೀಕ್ಷೆಗೆ ಬೇಕಾದ ತರಬೇತಿ ಪಡೆದುಕೊಳ್ಳಲು ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಷ್ಟಸಾಧ್ಯ. ಶೇಕಡ 75ರಷ್ಟು ಅಂಕ ಪಡೆದವರು ಕೆವಿಪಿವೈ ಪರೀಕ್ಷೆ ಬರೆಯಬಹುದಿತ್ತು. ಇಂತಹದೊಂದು ಮಹತ್ವದ ಅವಕಾಶವನ್ನು ಏಕಾಏಕಿ ತೆಗೆದುಹಾಕಿರುವುದು ವಿವೇಕಯುತ ನಡೆ ಅಲ್ಲ.
ವಿಜ್ಞಾನ ಮತ್ತು ತಂತ್ರಜ್ಞಾನ ರಂಗದ ಸಂಶೋಧನೆ ಗಳಲ್ಲಿ ಹೆಚ್ಚಿನ ಸಾಧನೆ ಮಾಡುವ ದೇಶವು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವೆನಿಸುತ್ತದೆ ಎಂಬುದನ್ನು ಇತಿಹಾಸ ಹಾಗೂ ವರ್ತಮಾನವು ನಮ್ಮ ಮುಂದೆ ತೆರೆದಿಟ್ಟಿದೆ. ಮಾಹಿತಿ ತಂತ್ರಜ್ಞಾನ ಕ್ರಾಂತಿ ಮತ್ತು ಮೂಲ ವಿಜ್ಞಾನದ ಸಂಶೋಧನೆ ಒಂದಾಗಬೇಕಿದ್ದ ಅಮೃತ ಗಳಿಗೆ ಬಂದೇಬಿಟ್ಟಿತು ಎನ್ನುವಷ್ಟರಲ್ಲಿ ಇಂಥ ಹೊಣೆಗೇಡಿ ಕೆಲಸ ನಡೆದಿದೆ. ಮೂಲ ವಿಜ್ಞಾನದ ಕಡೆ ವಿದ್ಯಾರ್ಥಿಗಳ ಒಲವು ಕಡಿಮೆಯಾಗಿದೆ, ಎಲ್ಲರೂ ಆನ್ವಯಿಕ ಮತ್ತು ಕಂಪ್ಯೂಟರ್ ವಿಜ್ಞಾನದ ಕಡೆ ಮುಖ ಮಾಡುತ್ತಿದ್ದಾರೆ ಎಂಬ ದೂರು ಶೈಕ್ಷಣಿಕ ವಲಯದಲ್ಲಿದೆ. ಈಗ ಅದು ಅನಿವಾರ್ಯ ಎಂದು ಹೇಳುವ ಸಂದರ್ಭವನ್ನು ಸರ್ಕಾರವೇ ಸೃಷ್ಟಿ ಮಾಡಿದೆ.
ಲೇಖಕ: ಪ್ರಾಂಶುಪಾಲ, ವಿಡಿಯಾ ಪೂರ್ಣಪ್ರಜ್ಞ
ಪದವಿ ಪೂರ್ವ ಕಾಲೇಜು, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.