ADVERTISEMENT

ಉನ್ನತ ಶಿಕ್ಷಣದಲ್ಲಿ ‘ಉನ್ನತ’ ಹಾಗೂ ‘ಜ್ಞಾನ’ ಎಂದರೇನು?

ಜ್ಞಾನವೆಂದರೆ ಕೇವಲ ಮಾಹಿತಿ ಅಲ್ಲ. ಕಲಿಯುವ ಶಕ್ತಿಯನ್ನು ಹೊಂದುವುದು...

ಡಾ.ಎನ್.ಎಸ್.ಗುಂಡೂರ
Published 23 ಅಕ್ಟೋಬರ್ 2018, 19:45 IST
Last Updated 23 ಅಕ್ಟೋಬರ್ 2018, 19:45 IST
Gundura
Gundura   

ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟವನ್ನು ಬ್ರಿಟನ್‌ನ ಸಂಸ್ಥೆಯೊಂದು ಇದೇ ಮೊದಲ ಬಾರಿಗೆ ಮೌಲ್ಯಮಾಪನ ಮಾಡಿದೆ. ದೇಶದ 10 ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಐಐಟಿಗಳದ್ದೇ ಸಿಂಹಪಾಲು. ಈ ಪಟ್ಟಿಯಲ್ಲಿರುವ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳೆಂದರೆ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ದೆಹಲಿ ವಿಶ್ವವಿದ್ಯಾಲಯ. ಅವು ಕೂಡಾ 7 ಮತ್ತು 8ನೇ ಸ್ಥಾನದಲ್ಲಿ ಇವೆ (ಪ್ರ.ವಾ., ಅ. 17).

‘ಉನ್ನತ ಕಲಿಕೆ’ ಎಂಬ ಪರಿಕಲ್ಪನೆಗಿರುವ ಪರಂಪರೆಯನ್ನು ನೋಡಿದಾಗ ಐಐಟಿಗಳು ತೊಡಗಿಸಿಕೊಂಡಿರುವ ಜ್ಞಾನ ವ್ಯವಹಾರ- ತಂತ್ರಜ್ಞಾನವನ್ನು ‘ಉನ್ನತ’ ಜ್ಞಾನವೆಂದು ಪರಿಗಣಿಸುವುದು ಸೂಕ್ತವೇ ಅಥವಾ ಅಲ್ಲವೇ ಎನ್ನುವ ಚರ್ಚೆ ಮಾಡಬಹುದು. ಅದು ಬೇರೆ ವಿಷಯ. ಆದರೆ ತಾಂತ್ರಿಕ ಶಿಕ್ಷಣದ ಗುಣಮಟ್ಟ ಮತ್ತು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ಸೃಷ್ಟಿಸುವ ಜ್ಞಾನಗಳ ಗುಣಮಟ್ಟಗಳನ್ನು ಅಳೆಯುವ ಪ್ರಮಾಣಗಳು ಬೇರೆ ಬೇರೆಯಾಗಿರಬೇಕೆಂಬುದರಲ್ಲಿ ಯಾವ ಅನುಮಾನವೂ ಇಲ್ಲ.

ಸದ್ಯ ಐಐಟಿಗಳ ತಾಂತ್ರಿಕ ಶಿಕ್ಷಣದ ಸ್ವರೂಪವನ್ನು ಬಿಟ್ಟು ನೋಡುವುದಾದರೆ, ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಸಂದರ್ಭದಲ್ಲಿ ಜ್ಞಾನವೆಂದರೇನು? ಯಾವ ಜ್ಞಾನವನ್ನು ಈ ಸಂಸ್ಥೆಗಳು ಏಕೆ ಮತ್ತು ಹೇಗೆ ಸೃಷ್ಟಿ ಮಾಡಬೇಕು, ಅದರ ಉಪಯೋಗವೇನು ಇತ್ಯಾದಿ ಪ್ರಶ್ನೆಗಳಿಗೆ ಸ್ಪಷ್ಟವಾದ ತಿಳಿವಳಿಕೆ ನಮಗೆ ಇರಬೇಕಾದುದು ಉಚಿತ. ಹಾಗೆಯೇ ಈ ವ್ಯವಸ್ಥೆಯನ್ನು ‘ಉನ್ನತ ಶಿಕ್ಷಣ’ವೆಂದು ಕರೆಯುವುದು ಏಕೆ? ‘ಉನ್ನತ’ ಎನ್ನುವುದರ ಅರ್ಥವೇನು ಎಂಬುದನ್ನು ತಿಳಿಯುವ ಜರೂರು ನಮಗಿದೆ. ಹಾಗಾಗಿ ಈ ಲೇಖನದಲ್ಲಿ ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ‘ಜ್ಞಾನ’ ಮತ್ತು ‘ಉನ್ನತ’ ಎಂಬ ಈ ಎರಡು ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಇದೆ.

ADVERTISEMENT

ಜ್ಞಾನವೆಂದರೆ ಕೇವಲ ಮಾಹಿತಿ ಅಲ್ಲ. ಇದು ಅರ್ಜಿಸಿಕೊಳ್ಳಬೇಕಾದ ವಿಷಯ; ಒಂದು ಬಗೆಯ ಸಾಮರ್ಥ್ಯವನ್ನು, ಕಲಿಯುವ ಶಕ್ತಿಯನ್ನು ಹೊಂದುವುದು. ಈ ಅರ್ಥದಲ್ಲಿ ಜ್ಞಾನವು ಮನುಷ್ಯ ಜೀವಿಗೆ ಬದುಕಲು ಅತ್ಯಂತ ಅನಿವಾರ್ಯವಾದುದು. ತಿಳಿವಳಿಕೆ, ಕಲಿಕೆ ಇಲ್ಲದೇ ಮನುಷ್ಯ ಬದುಕನ್ನು ಊಹಿಸಲೂ ಸಾಧ್ಯವಿಲ್ಲ. ನಾವು ಹುಟ್ಟಿದಾರಭ್ಯ ಜೀವನದುದ್ದಕ್ಕೂ ಜ್ಞಾನವನ್ನು ಅವಲಂಬಿಸಿರುತ್ತೇವೆ. ನಡೆ
ದಾಡುವುದು, ಭಾಷೆ ಬಳಸುವುದು, ಗಿಡ ಹತ್ತುವುದು, ವಾಹನ ಚಾಲನೆ ಮಾಡುವುದು, ಸಮಾಜದಲ್ಲಿ ಬದುಕುವುದು ಮುಂತಾದವುಗಳಿಂದ ಹಿಡಿದು ಇನ್ನೂ ಅತ್ಯಂತ ಸಂಕೀರ್ಣ ಕ್ರಿಯೆಗಳಲ್ಲಿ ತೊಡಗಿಕೊಳ್ಳುವುದೆಂದರೆ ಜ್ಞಾನ ಹೊಂದುವುದು ಎಂದೇ ಅರ್ಥ. ಹೀಗೆ ದಿನನಿತ್ಯದ ಜೀವನಕ್ಕೆ ಉಪಯೋಗಕ್ಕೆ ಬರುವ ಕೆಲಸಗಳನ್ನು ಹೇಗೆ ಮಾಡಬೇಕೆಂಬ ಸಾಮರ್ಥ್ಯವನ್ನು ಔಪಯೋಗಿಕ ಜ್ಞಾನ (ನೊ-ಹೌ ನಾಲೆಜ್) ಎಂದು ಕರೆಯಬಹುದು. ಇದು ಸಾಮಾಜಿಕ ಬದುಕಿನಲ್ಲಿ ಪಡೆದುಕೊಳ್ಳುವ ಜ್ಞಾನ. ಈ ಮಾದರಿಯ ಜ್ಞಾನವನ್ನು ಕಲಿಸುವುದು ಉನ್ನತ ವಿದ್ಯಾಸಂಸ್ಥೆಗಳ ಗುರಿ ಅಲ್ಲ.

ಎಲ್ಲ ಮನುಷ್ಯ ಸಂಸ್ಕೃತಿಗಳೂ ತಮಗೆ ಬೇಕಾದ ಸಾಂಸ್ಕೃತಿಕ ಜ್ಞಾನಗಳನ್ನು ಸೃಷ್ಟಿಸಿಕೊಳ್ಳುತ್ತವೆ. ಉದಾಹರಣೆಗೆ ನಾಟಕ, ನೃತ್ಯ, ಸಂಗೀತ, ಸಾಹಿತ್ಯದ ಪ್ರಕಾರಗಳು, ಜನಪದ ಆಚರಣೆ ಇತ್ಯಾದಿಗಳೆಲ್ಲವೂ ಜ್ಞಾನದ ಪರಿಧಿಯಲ್ಲೇ ಬರುತ್ತವೆ. ಆದರೆ ಉನ್ನತ ಶಿಕ್ಷಣದಲ್ಲಿ ನಾವು ಈ ಬಗೆಯ ಕಲಾ ಜ್ಞಾನಗಳ ಜೊತೆ ನಮ್ಮನ್ನು ತೊಡಗಿಸಿಕೊಳ್ಳದೇ, ಬೇರೆ ಸ್ವರೂಪದ ಜ್ಞಾನದಲ್ಲಿ ತೊಡಗಿಸಿಕೊಳ್ಳುತ್ತೇವೆ. ಅದನ್ನು ‘ಪ್ರತಿಪಾದನಾ ಜ್ಞಾನ’ (ಪ್ರಪೊಸಿಶನಲ್ ನಾಲೆಜ್); ವೈಚಾರಿಕ, ಸೈದ್ಧಾಂತಿಕ ಜ್ಞಾನ ಎಂದು ಕರೆಯಬಹುದು. ಈ ಪ್ರಭೇದದ ಜ್ಞಾನದ ಸ್ವರೂಪ ಹಾಗೂ ಮೌಲ್ಯವನ್ನು ಕೊಂಚ ಚರ್ಚಿಸೋಣ.

ಅರಿಸ್ಟಾಟಲ್ ತನ್ನ ‘ಮೆಟಾಫಿಸಿಕ್ಸ್’ ಗ್ರಂಥದಲ್ಲಿ ಮನುಷ್ಯ ಜೀವಿಯ ಕುರಿತು ಒಂದು ಮಾತನ್ನು ಹೇಳುತ್ತಾನೆ: ಮನುಷ್ಯರು ಸ್ವಭಾವತಃ ಈ ಜಗತ್ತಿನ ಅರಿವನ್ನು ಬಯಸುತ್ತಾರೆ. ಇಲ್ಲಿ ತಿಳಿವಳಿಕೆಯನ್ನು ಹೊಂದುವುದು ಮಾನವನ ಸಹಜ ಸ್ವಭಾವ. ಅರಿಸ್ಟಾಟಲ್ ಪ್ರಕಾರ ಮೊದಲು ಮನುಷ್ಯನು ಔಪಯೋಗಿಕ ಜ್ಞಾನದ ಮೂಲಕ ತನ್ನ ದಿನನಿತ್ಯದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾನೆ. ತದನಂತರ, ತನ್ನ ಸುತ್ತಮುತ್ತಲಿನ ಜಗತ್ತು ಹೀಗೇಕಿದೆ ಎಂದು ಆಶ್ಚರ್ಯಪಡುತ್ತಾನೆ ಮತ್ತು ಅದನ್ನು ಅರಿಯಲು ಪ್ರಯತ್ನಿಸುತ್ತಾನೆ. ಈ ಜಗತ್ತು ಹೀಗೇಕೆ, ಈ ಭೂಮಿ ಹೇಗೆ ತಿರುಗುತ್ತದೆ, ಈ ಸಮಾಜ ಹೇಗೆ ರಚನೆಗೊಂಡಿದೆ, ಮನುಷ್ಯ ಜೀವನದ ಅರ್ಥವೇನು ಇತ್ಯಾದಿ ಕುತೂಹಲದ ಪ್ರಶ್ನೆಗಳು ಅವನನ್ನು ಕಾಡುತ್ತವೆ. ತನ್ನ ಕುತೂಹಲ ಕೆರಳಿಸಿದ ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಅವನು ಅನ್ವೇಷಣೆ ಕೈಗೊಂಡಾಗ ಉಂಟಾಗುವ ಜ್ಞಾನವೇ ‘ಪ್ರತಿಪಾದನೆಯ ಜ್ಞಾನ’.

ಈ ಜ್ಞಾನದ ಹಿಂದೆ ಇರುವ ತುಡಿತವೆಂದರೆ ‘ತಿಳಿಯುವುದು’ (ಅಂಡರ್‌ಸ್ಟ್ಯಾಂಡಿಗ್). ಏನನ್ನು ತಿಳಿಯುವುದು? ಈ ಜಗತ್ತಿನ ಸತ್ಯವನ್ನು, ವಾಸ್ತವವನ್ನು ತಿಳಿಯುವುದು. ಹೀಗೆ ತನ್ನ ಸುತ್ತಮುತ್ತಲಿನ ಹಕೀಕತ್‌ ಅನ್ನು ತಿಳಿಯಲು ಹೊರಟ ಮನುಷ್ಯ ತನಗೆ ದಕ್ಕಿದ ಉತ್ತರಗಳನ್ನು ಜಗತ್ತಿಗೆ ವಿವರಿಸುವ ಪ್ರಯತ್ನ ಮಾಡುವುದರಿಂದ ಇದನ್ನು ‘ಪ್ರತಿಪಾದನಾ ಜ್ಞಾನ’ವೆಂದು ಕರೆಯಬಹುದು. ಇದು ಲೋಕ ವಿವರಣೆಯ ಜ್ಞಾನ.

ಕೋಪರ್ನಿಕಸ್‌ನ ‘ಸೂರ್ಯ ಭೂಮಿಯ ಸುತ್ತ ತಿರುಗುತ್ತದೆಯೋ ಅಥವಾ ಭೂಮಿಯೇ ಸೂರ್ಯನ ಸುತ್ತ ತಿರುಗುತ್ತದೆಯೋ’ ಎನ್ನುವ ಕುತೂಹಲದ ಹಿಂದೆ ಸತ್ಯಾಸತ್ಯತೆಯನ್ನು ತಿಳಿಯುವ ಹಂಬಲವಿದೆ. ಈ ಕುರಿತು ಅವನು ಆಲೋಚನೆ ಮಾಡಿ ಪ್ರತಿಪಾದಿಸಿದ ಲೋಕಜ್ಞಾನವೇ ಈ ಜ್ಞಾನ ಪ್ರಭೇದ. ಗೆಲಿಲಿಯೊ, ನ್ಯೂಟನ್‌ನ ಭೌತವಿಜ್ಞಾನದ ಸಿದ್ಧಾಂತಗಳು, ಡಾರ್ವಿನ್‌ನ ವಿಕಸನವಾದ, ಕಾರ್ಲ್ ಮಾರ್ಕ್ಸ್, ಮ್ಯಾಕ್ಸ್ ವೆಬರ್ ಮುಂತಾದವರು ಸಮಾಜದ ಕುರಿತು ಮಾಡಿದ ಚಿಂತನೆಗಳು ಈ ಜ್ಞಾನ ಪ್ರಭೇದಕ್ಕೆ ಸೇರುತ್ತವೆ. ಬುದ್ಧಿಮತ್ತೆ, ತರ್ಕ, ವೈಚಾರಿಕತೆ ಹಾಗೂ ಆಲೋಚನೆಗಳಿಂದ ಮನುಷ್ಯ ಈ ಜ್ಞಾನವನ್ನು ಸೃಷ್ಟಿಸುತ್ತಾನೆ. ಇದು ಪರಿಪೂರ್ಣವೂ ಅಲ್ಲ, ಅಂತಿಮ ಸತ್ಯವೂ ಅಲ್ಲ. ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಬೆಳೆಯುತ್ತ, ರೂಪಾಂತರವಾಗುವ ಪ್ರಕ್ರಿಯೆ ಇದಾಗಿದೆ. ಅದಕ್ಕಾಗಿಯೇ ಇದು ಕಲಿಸಲು ಯೋಗ್ಯವಾದುದು ಕೂಡಾ.

ಈ ಜ್ಞಾನದ ಹುಟ್ಟು ಸಂಭವಿಸುವುದು ಆಶ್ಚರ್ಯ ಮತ್ತು ಕುತೂಹಲದಲ್ಲಿ. ಮನುಷ್ಯ ಅಜ್ಞಾನದ ಸ್ಥಿತಿಯಲ್ಲಿ ಬದುಕಲು ಇಷ್ಟಪಡುವುದಿಲ್ಲ. ಅವನಿಗೆ ವಾಸ್ತವವನ್ನು ತಿಳಿದುಕೊಳ್ಳಬೇಕೆಂಬ ಹೆಬ್ಬಯಕೆ ಇರುತ್ತದೆ. ಇದನ್ನೇ ಮಾರ್ಟಿನ್ ಹೈಡೆಗರ್ ‘ಕಾಣುವ ಕಾಳಜಿ’ (ಕೇರ್ ಫಾರ್ ಸೀಯಿಂಗ್) ಎಂದು ಕರೆಯುತ್ತಾನೆ. ಈ ಜ್ಞಾನಕ್ಕೆ ಒಂದು ಕಾಳಜಿ ಇದೆ. ಈ ಜಗತ್ತಿನ ಸತ್ಯಾಸತ್ಯತೆಯನ್ನು ತಾನು ಕಂಡು ಇನ್ನಿತರರಿಗೆ ತೋರಿಸುವ ಕಾಳಜಿ. ನಮ್ಮ ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳು ಈ ದಾರಿಯ ಮೂಲಕ ನಡೆದೇ ಜ್ಞಾನಗಳನ್ನು ಸೃಷ್ಟಿಸಿವೆ. ಅಂದರೆ ಜಗತ್ತಿನ ಒಗಟುಗಳನ್ನು ಬಿಡಿಸುವುದು, ವಿಸ್ಮಯಕಾರಿ ಸಂಗತಿಗಳನ್ನು ಅರ್ಥೈಸಿ ಲೋಕ ವಿವರಣೆಯನ್ನು ಭಾಷೆಯ ಮೂಲಕ ಮೂಡಿಸುವುದೇ ಈ ಜ್ಞಾನ.

ಹಾಗಾದರೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಪಾಠ-ಪ್ರವಚನಗಳು, ಸಂಶೋಧನೆಗಳು ವಿದ್ಯಾರ್ಥಿಗಳಲ್ಲಿ ಜ್ಞಾನ ಸೃಷ್ಟಿಸಲು ಬೇಕಾಗುವ ಪೂರ್ವಾಪೇಕ್ಷೆಗಳಾದ ಜಿಜ್ಞಾಸೆ, ತಿಳಿಯುವ ತಹತಹ (ಕೇರ್ ಫಾರ್ ನೋಯಿಂಗ್), ಪ್ರಶ್ನಿಸುವ ಹಾಗೂ ವಾಸ್ತವವನ್ನು ಅರಿಯುವ ಮನೋವೃತ್ತಿಗಳನ್ನು ಬೆಳೆಸಿದರೆ ಉನ್ನತ ಶಿಕ್ಷಣ ಸಂಸ್ಥೆಗಳು ಜ್ಞಾನ ಸೃಷ್ಟಿಸುವ ತಾಣಗಳಾಗಿ ಹೊರಹೊಮ್ಮುತ್ತವೆ. ಇಲ್ಲಿ ಲೋಕವನ್ನು ‘ಅರ್ಥ’ ಮಾಡಿಕೊಳ್ಳುವ ಹಾಗೂ ‘ವಿವರಿಸುವ’ ಧೋರಣೆಗಳು ಮುಖ್ಯ. ಇವುಗಳನ್ನು ಕಡೆಗಣಿಸಿ, ನಮ್ಮ ಜ್ಞಾನಶಿಸ್ತುಗಳು ತಮಗೆ ಬೇಕಾದ ಸತ್ಯವನ್ನು ಸ್ಥಾಪಿಸಲು ಹೊರಟರೆ ಅವು ಐಡಿಯಾಲಜಿಗಳನ್ನು ಸೃಷ್ಟಿಸುತ್ತವೆಯೇ ಹೊರತು ಜ್ಞಾನವನ್ನಲ್ಲ!

ಇನ್ನು ಈ ಶಿಕ್ಷಣಕ್ಕೆ ‘ಉನ್ನತ’ ಎಂಬ ಹಣೆಪಟ್ಟಿ ಏಕೆ? ಎಂಬ ವಿಚಾರ. ಈ ಶಿಕ್ಷಣ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣಗಳ ನಂತರ ಆಗುವುದರಿಂದ ಇದನ್ನು ‘ಉನ್ನತ’ ಎಂದು ಕರೆಯುವುದಲ್ಲ. ಪ್ರಾಥಮಿಕ-ಮಾಧ್ಯಮಿಕಗಳು ಆರಂಭದ ಶೈಕ್ಷಣಿಕ ಹಂತಗಳು, ಅವುಗಳ ನಂತರ ಇದನ್ನು ಅನುಸರಿಸುವುದರಿಂದ ಈ ಶಿಕ್ಷಣ ಮೇಲ್ಮಟ್ಟದ್ದು ಎನ್ನುವ ಅರ್ಥದಲ್ಲೂ ‘ಉನ್ನತ’ ಎನ್ನುವುದಲ್ಲ. ಅದು ಕನಿಷ್ಠ, ಇದು ಶ್ರೇಷ್ಠ ಎನ್ನುವ ಮೌಲ್ಯಮಾಪನದ ಅರ್ಥದಲ್ಲೂ ‘ಉನ್ನತ’ ಎಂಬುದು ಅಲ್ಲ.

ಇಲ್ಲಿ ನಾವು ತೊಡಗಿಕೊಳ್ಳುವ ಜ್ಞಾನದ ಸ್ವರೂಪ ಸಂಕೀರ್ಣವಾದುದು, ಅಮೂರ್ತವಾದುದು, ದಿನನಿತ್ಯದ ಔಪಯೋಗಿಕತೆಯನ್ನು ಮೀರಿದ್ದು, ಯಾವುದೇ ಸಂಕುಚಿತ ಉದ್ದೇಶಗಳನ್ನು ಹೊಂದಿಲ್ಲದೆ, ಯಾವುದಕ್ಕೂ ಉಪಕರಣ ಅಥವಾ ಸಾಧನವಾಗದೇ ಇರುವುದು, ಉದಾತ್ತವಾಗಿರುವುದು, ಗಮನಾರ್ಹವಾಗಿರುವುದು ಮತ್ತು ಅದ್ಭುತವಾಗಿರುವುದು. ಈ ಎಲ್ಲ ಗುಣವಿಶೇಷ ಮೌಲ್ಯಗಳಿಂದ ಇದು ಉನ್ನತವಾದುದು.

ಈ ಜ್ಞಾನ ಪ್ರಭೇದ ದಿನನಿತ್ಯದ ಔಪಯೋಗಿಕ ಜ್ಞಾನದಂತೆ ಲೌಕಿಕ ವ್ಯವಹಾರದ ಆಗು-ಹೋಗುಗಳನ್ನು ಲಕ್ಷ್ಯದಲ್ಲಿಟ್ಟುಕೊಳ್ಳುವುದಿಲ್ಲ; ಅರಿಯುವ ಕುತೂಹಲಕ್ಕೋಸ್ಕರ ಅರಿಯುವ ಪ್ರಯತ್ನ. ಇಲ್ಲಿ ಏನಾದರೊಂದು ಉದ್ದೇಶವಿದ್ದರೆ ಅದು ಅಜ್ಞಾನವನ್ನು ಹೋಗಲಾಡಿಸುವ ಉದ್ದೇಶ ಅಷ್ಟೇ. ಯಾವುದೇ ನಿರ್ದಿಷ್ಟ ಭೌತಿಕ ಉದ್ದೇಶವಿರದ, ಔಪಯೋಗಿಕತೆಗೆ ತಲೆಕೆಡಿಸಿಕೊಳ್ಳದ ಈ ಜ್ಞಾನವನ್ನು ಅರಸುವುದೇ ಉನ್ನತವಾದ ಧ್ಯೇಯವಾಗಿರುವುದರಿಂದ ಇದನ್ನು ‘ಉನ್ನತ’ ಎಂದು ಕರೆಯಲಾಗಿದೆ.

ಯುರೋಪಿನ ಮಾನವತಾವಾದಿ ಶೈಕ್ಷಣಿಕ ಸಿದ್ಧಾಂತದ ಪ್ರಕಾರ ಈ ತರಹದ ಜ್ಞಾನವು ಸತ್ಯವನ್ನು ಕಾಣುವುದರ ಮೂಲಕ ಮನುಷ್ಯರನ್ನು ನಾನಾ ರೀತಿಯ ಬಂಧನಗಳಿಂದ ಮುಕ್ತಗೊಳಿಸುತ್ತದೆ ಎನ್ನುವ ಕಾರಣಕ್ಕಾಗಿ ಅದು ಉನ್ನತವಾದುದು. ಜೊತೆಗೆ ಕ್ರಿಯೆಯನ್ನು ಕೇವಲ ಲೌಕಿಕ ಉಪಯುಕ್ತತೆಗೆ (ಯುಟಿಲಿಟೇರಿಯನ್) ಸಾಧನವಾಗಿ ಬಳಸಿಕೊಳ್ಳದೇ, ಆ ಕ್ರಿಯೆಯನ್ನು ಅದಕ್ಕೋಸ್ಕರ ಮಾಡಲಾಗುವುದೋ ಅದು ಉನ್ನತ ಮೌಲ್ಯದ್ದು.

ಹಾಗಾದರೆ ಇದು ಮನುಷ್ಯರ ಪ್ರಯೋಜನಕ್ಕೆ ಒದಗುವುದೇ ಇಲ್ಲವೇ ಎಂಬ ಪ್ರಶ್ನೆಯನ್ನು ನಾವು ಕೇಳಬಹುದು. ನಾವು ಇತಿಹಾಸವನ್ನು ಅವಲೋಕಿಸಿದಾಗ ಇಂತಹ ಜ್ಞಾನಗಳ ಉಪಯುಕ್ತತೆ ದೃಗ್ಗೋಚರವಾಗಿರುವುದಿಲ್ಲಎಂದು ತಿಳಿದುಬರುತ್ತದೆ. ಇವುಗಳ ಉಪಯೋಗ ಇರುವುದು ಪರೋಕ್ಷವಾಗಿ ಹಾಗೂ ಆಂತರಿಕವಾಗಿ (ಇನ್‌ಟ್ರಿನ್‌ಸಿಕ್). ಕಾಲಾಂತರದಲ್ಲಿ ಈ ಜ್ಞಾನಗಳ ಹೊಳಹುಗಳನ್ನು ಉಪಯೋಗಿಸಿಕೊಂಡು ನಾವು ಸಮಾಜದಲ್ಲಿ ಬದಲಾವಣೆ ತಂದದ್ದಿದೆ, ಸ್ವಾಭಾವಿಕ ಸಂಪನ್ಮೂಲಗಳನ್ನು ಬಳಸಿ ಜೀವನವನ್ನು ಕಟ್ಟಿಕೊಂಡದ್ದಿದೆ. ಆದರೆ ಈ ಮಾದರಿಯ ಜ್ಞಾನವು ಅಂತಹ ಯಾವ ಉದ್ದೇಶವನ್ನೂ ಇಟ್ಟುಕೊಂಡು ಹೊರಡುವುದಿಲ್ಲ. ಆದ್ದರಿಂದಲೇ ಈ ಜ್ಞಾನಕ್ಕೆ ‘ಉನ್ನತ ಜ್ಞಾನ’ ಎಂದು ಕರೆಯುತ್ತಾರೆ.

ಈ ಉನ್ನತ ಜ್ಞಾನದ ವಿಷಯ ಹೆಚ್ಚು ಸಂಕೀರ್ಣವಾಗಿ, ಅಮೂರ್ತವಾಗಿರುವುದರಿಂದ ಈ ಜ್ಞಾನವನ್ನು ಸೃಷ್ಟಿಸಲು ಉನ್ನತಮಟ್ಟದ ಬೌದ್ಧಿಕ ಶ್ರಮ, ಅಮೂರ್ತವಾಗಿ ಚಿಂತಿಸುವ ಸಾಮರ್ಥ್ಯ ಮತ್ತು ಕೌಶಲಗಳು ಬೇಕಾಗುವುದರಿಂದ ಈ ಕಲಿಕೆಯನ್ನು ‘ಉನ್ನತ’ ಕಲಿಕೆಯೆಂದು ಕರೆಯುತ್ತಾರೆ. ಲೌಕಿಕ ಜ್ಞಾನದಂತೆ ಇದನ್ನು ಎಲ್ಲರೂ ಕೈಗೊಳ್ಳುವುದಿಲ್ಲ. ಕೆಲವೇ ಕೆಲವರು ಜಿಜ್ಞಾಸೆ ಉಳ್ಳವರು ನಡೆಯುವ ದಾರಿ ಇದು.

ಈ ಮೇಲೆ ವಿವರಿಸಿದ ಜ್ಞಾನ ಮಾದರಿಯನ್ನು ಆಧುನಿಕೋತ್ತರ ಸಿದ್ಧಾಂತಗಳು ಪ್ರಶ್ನಿಸಿವೆ. ಉನ್ನತ ಶಿಕ್ಷಣದ ಸ್ವರೂಪ ಆಮೂಲಾಗ್ರವಾಗಿ ಬದಲಾದ ಸಂದರ್ಭದಲ್ಲಿ, ಉನ್ನತ ವಿದ್ಯಾ ಸಂಸ್ಥೆಗಳು ಕೇವಲ ಈ ಅಭಿಜಾತ ಮಾದರಿಯ ಜ್ಞಾನವನ್ನಷ್ಟೇ ಸೃಷ್ಟಿ ಮಾಡಬೇಕಂತಲೂ ಇಲ್ಲ. ಇಂತಹ ಸಂಕೀರ್ಣ ವಿಚಾರಗಳ ಕುರಿತು ಚರ್ಚೆ ಮಾಡುವುದು ಬೇರೆ ವಿಷಯ. ಆದರೆ ಭಾರತೀಯ ಉನ್ನತ ಶಿಕ್ಷಣದಲ್ಲಿ ಆಗುತ್ತಿರುವ ಸಮಸ್ಯೆ ಏನೆಂದರೆ, ನಾವು ಈ ಕ್ಷೇತ್ರದಲ್ಲಿ ಬಳಸುವ ಪರಿಕಲ್ಪನೆಗಳು ನಮ್ಮ ತಿಳಿವಿಗೆ ಬಾರದೇ ಇರುವುದು ಮತ್ತು ಅವುಗಳನ್ನು ಅರಿಯುವ ಕಾಳಜಿ ಮಾಡದೆ ಟೇಕನ್ ಫಾರ್ ಗ್ರ್ಯಾಂಟೆಡ್ ಆಗಿರುವುದು.

ನಾವು ಈ ಕ್ಷೇತ್ರವನ್ನು ‘ಅರಿತು’ ಕೃಷಿ ಮಾಡಬೇಕಾಗಿದೆ. ‘ಜ್ಞಾನ’, ‘ಉನ್ನತ’ ಎನ್ನುವ ಪರಿಕಲ್ಪನೆಗಳ ಹಾಗೆಯೇ ‘ಸಂಶೋಧನೆ’, ‘ಸಂಶೋಧನಾ ಕಾರ್ಯಕ್ರಮ’ (ರಿಸರ್ಚ್ ಪ್ರೋಗ್ರಾಮ್), ‘ವಿಜ್ಞಾನ’, ‘ವಿಚಾರಸಂಕಿರಣ’, ‘ಸೆಮಿನಾರ್’, ‘ಪ್ರಗತಿಯಲ್ಲಿರುವ ಬೌದ್ಧಿಕ ಕೆಲಸವನ್ನು ಹಂಚಿಕೊಳ್ಳುವುದು’ (ವರ್ಕ್-ಇನ್-ಪ್ರೊಗ್ರೆಸ್) ಇತ್ಯಾದಿ ಪರಿಕಲ್ಪನೆಗಳು ನಮ್ಮಿಂದ ದೂರ ಉಳಿದುಬಿಟ್ಟಿವೆ. ನಾವು ಇವುಗಳನ್ನು ರೆಫರೆನ್ಸ್‌ಗೆ ಬಳಸುತ್ತೇವೆಯೇ ಹೊರತು ಇವುಗಳ ಸೆನ್ಸ್ ಮಾಡಲು ಆಗುತ್ತಿಲ್ಲ. ಇವುಗಳನ್ನು ಅರಿತು ಅನುಸರಣೆ ಮಾಡಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.